- ನಾರಾಯಣ ಯಾಜಿ
ಮೊನ್ನೆ ಮೊನ್ನೆಯಷ್ಟೇ ಮುಗಿದ ವಿಶ್ವ ಹವ್ಯಕ ಸಮ್ಮೇಳನದಲ್ಲಿ (Vishwa Havyaka Sammelana) ಎಲ್ಲಕ್ಕಿಂತ ಎಲ್ಲಕ್ಕಿಂತ ಮಿಗಿಲಾಗಿ ರಾಘವೇಶ್ವರ ಭಾರತಿ ಸ್ವಾಮಿಗಳು ಮತ್ತು ಸ್ವರ್ಣವಲ್ಲಿ ಶ್ರೀಗಳು ಆಡಿದ ಮಾತುಗಳು ಒಮ್ಮಿಂದೊಮ್ಮೆಲೆ ಭುಗಿಲೆದ್ದು ಬಿಟ್ಟಿತು. ಇಬ್ಬರೂ ಸ್ವಾಮಿಗಳು ಆಡಿದ ಮಾತುಗಳಲ್ಲಿ ಮುಖ್ಯವಾಗಿರುವುದು ರಾಘವೇಶ್ವರ ಭಾರತಿ ಸ್ವಾಮಿಗಳು, ಹವ್ಯಕರು ಕನಿಷ್ಟ ಮೂರು ಮಕ್ಕಳನ್ನಾದರೂ ಹೆರಬೇಕು ಮತ್ತು ಹವ್ಯಕರಲ್ಲಿ ಡಿಂಕ್ (DINK – Double Income no Kids) ಎನ್ನುವುದು ಬರಕೂಡದು ಮತ್ತು ಸ್ವರ್ಣವಲ್ಲಿ ಶ್ರೀಗಳಾಡಿದ ಪ್ರಾಪ್ತವಯಸ್ಸಿಗೆ ಬಂದ ತಕ್ಷಣ ಮದುವೆಯಾಗಿ ಎನ್ನುವ ಮಾತುಗಳು ಇಂದು ವಿವಾದಕ್ಕೆ ಕಾರಣವಾಗಿವೆ. ಇಬ್ಬರೂ ಶ್ರೀಗಳು ಮಕ್ಕಳ ಭಾರವನ್ನು ಮಠ ಹೊರುತ್ತದೆ ಎಂದಿರುವುದೂ ಸಹ ಅನೇಕರಿಗೆ ಕಣ್ಣು ಕಿಸಿರಿಗೆ ಕಾರಣವಾಯಿತು. ಎರಡೂ ಶ್ರೀಗಳು ಇವ್ಯಾವದೂ ಮಾತುಗಳನ್ನು ತಾವುಗಳು ಬಾಯಿತಪ್ಪಿಯಾಡಿದ್ದಲ್ಲ. ತಾವು ಹೀಗೆ ಮಾತನಾಡಿದರೆ ಅದು ವಿವಾದಕ್ಕೆ ಕಾರಣವಾಗುತ್ತದೆ, ಆದರೂ ಸಮಾಜದ ಉಳಿವಿಗಾಗಿ ಈ ಸಂದೇಶವನ್ನು ಕೊಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿಯೂ ಇದ್ದರು. ಅವರ ಮಾತುಗಳನ್ನು ಅನುಮೋದಿಸುವಂತೆ ಸಚಿವರಾದ ದಿನೇಶ ಗುಂಡೂರಾವ್ ಸಹ ಎರಡನೆಯ ದಿನ ಮಾತನ್ನಾಡುತ್ತಾ “ಫಲವಂತಿಕೆಯ ಇಳಿಕೆಯ ಪ್ರಮಾಣ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕಡಿಮೆಯಾಗುತ್ತಿದೆ” ಎನ್ನುವ ಕಳವಳವನ್ನು ವ್ಯಕ್ತಪಡಿಸಿದರು. ಅಲ್ಲಿ ಬಂದ ಯಾವ ರಾಜಕಾರಣಿಗಳಿಗೂ ಇಲ್ಲದ ಚಿಂತೆ ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ “ಹಾಗಡ, ಹೀಗಡ” ಎನ್ನುತ್ತಾ ಪಸರಿಸತೊಡಗಿತು.
ಮುಖ್ಯವಾಗಿ ಈ Fertility rete ಎನ್ನುವುದು ಕೇವಲ ಹವ್ಯಕರನ್ನು ಮಾತ್ರ ಕಾಡುವ ಪ್ರಶ್ನೆಯಲ್ಲ. ಇಂದು ಜಾಗತಿಕವಾಗಿ ಜನಸಂಖ್ಯೆ ಕೆಲವು ಕಡೆ ಹೆಚ್ಚಾದರೆ ಇನ್ನು ಕೆಲವು ಕಡೆ ತೀವ್ರವಾಗಿ ಇಳಿಯತೊಡಗಿದೆ. ಇತ್ತೀಚೆಗೆ Institute for Security and Development Policy (ISDP) ಎನ್ನುವ ಸಂಸ್ಥೆ 2050ರ ವೇಳೆಗೆ ಜಪಾನ ದೇಶದ ಜನಸಂಖ್ಯೆ ಈಗಿನ 122 ಮಿಲಿಯನ್ನಿನಿಂದ 100 ಮಿಲಿಯನ್ನಿಗೆ ಮತ್ತು ದಕ್ಷಿಣ ಕೋರಿಯಾದ ಜನಸಂಖ್ಯೆ ಈಗಿನ 51.6 ಮಿ. ನಿಂದ 40 ಮಿಲಿಯನ್ನಿಗೆ ಇಳಿಯಬಹುದೆಂದು ಎಚ್ಚರಿಸಿದೆ. ಯುರೋಪ್, ರಶಿಯಾ ಮೊದಲಾದ ದೇಶಗಳಾನ್ನು ಕಾಡುವ ಸಮಸ್ಯೆ ಇದೇ ಆಗಿದೆ. ತಳಿಶಾಸ್ತ್ರಜ್ಞರು ಇನ್ನು ಕೆಲವು ವರ್ಷಗಳಲ್ಲಿ ದಕ್ಷಿಣ ಕೋರಿಯಾ ಈ ಪ್ರಪಂಚದಿಂದಲೇ ಅಳಿಸಿಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 1962 ರಲ್ಲಿ ಜಾಗತಿಕವಾಗಿ ಜನಸಂಖ್ಯಾ ವೃದ್ಧಿಯ ಪ್ರಮಾಣ 5.38% ಇದ್ದರೆ 2021 ಈ ಪ್ರಮಾಣ 2.3% ಕ್ಕೆ ಇಳಿದಿದೆ. ಒಂದು ಕಾಲಕ್ಕೆ ಜನಸಂಖ್ಯಾ ಸ್ಪೋಟ ಎನ್ನುವು ಮಾತು ಸಾಮಾನ್ಯವಾಗಿತ್ತು. ಜಾಗತಿಕವಾಗಿ ಒಟ್ಟೂ ಜನಸಂಖ್ಯೆ ಕಳೇದೆರಡು ವರ್ಷಗಳಿಂದ 800 ಕೋಟಿಯ ಆಸುಪಾಸಿನಲ್ಲಿಯೇ ಇದ್ದು ಇನ್ನು ಐವತ್ತು ವರ್ಷಗಳಲ್ಲಿ ಇಳಿಮುಖವಾಗಬಹುದೆನ್ನುವ ಆತಂಕವೂ ಕಾಡುತ್ತಿದೆ. ವಿಶ್ವಸಂಸ್ಥೆ 2021 ರಲ್ಲಿ ಪ್ರಕಟಿಸಿದ World Population Policies 2021 – policies related to fertility ಯಲ್ಲಿ ಈ ವಿಚಾರವಾಗಿ ಗಂಭೀರವಾಗಿ ಅಲ್ಲದಿದ್ದರೂ ಜಾಗರೂಕವಾಗಿರಲು ಉಪಕ್ರಮಿಸಿದೆ.
ಇಳಿಕೆಗೆ ಕಾರಣಗಳು
ಮನೆ ತುಂಬಾ ಮಕ್ಕಳಿದ್ದ ಕಾಲದ ಸುಖದ ಕುರಿತು ಏನೇ ಬಣ್ಣಿಸಿಕೊಂಡರೂ ನಮ್ಮ ಬಾಲ್ಯದಲ್ಲಿ ಕಂಡ ವಸ್ತುಗಳನ್ನು ಕೊಡಿಸಲು ಸಾಧ್ಯವಾಗದೇ ಜಾತ್ರೆಗಳಲ್ಲಿ ಬೇಕೆಂದು ಹಟಮಾಡಿ ಹೊರಳಾಡುವ ಮಗುವಿಗೆ ಪೆಟ್ಟುಕೊಟ್ಟು ಮನೆಗೆ ತಂದು ಕೂಡಿಹಾಕಿದ ಅಮ್ಮನ ಕಣ್ಣಿನಿಂದ ಹರಿದ ನೀರನ್ನು ಕಂಡ ತಲೆಮಾರಿನವರು ತನ್ನ ಮಗುವಿಗೆ ಈ ತೊಂದರೆ ಬರಬಾರದೆಂದು ಮೊದಲು ಉಪಕ್ರಮಿಸಿದ್ದೇ ಮಿತಕುಟುಂಬದತ್ತ. ಒಂದೇ ಮಗುವಾಗಲಿ, ಕೇಳಿದ್ದನ್ನು ಕೊಡಿಸೋಣ ಎಂದು ಭೋಗದ ಬದುಕಿಗೆ ನಾಂದಿ ಹಾಡಿದ ತಲೆಮಾರನ್ನು 1980ರಿಂದೀಚೆಗೆ ವ್ಯಾಪಕವಾಗಿ ಕಾಣುತ್ತಿದ್ದೇವೆ. ಅಣ್ಣ ತಮ್ಮ ಬಂಧು ಬಳಗ ಎಲ್ಲಾ ಮರೆಯಾಗಿ ಸ್ವಂತ ಸಹೋದರರನ್ನು ಬಿಟ್ಟು ಉಳಿದವರನ್ನು ಇವರು ನಮ್ಮ ಕಸಿನ್ಸ್ ಎಂದು ಪರಿಚಯಿಸುವ ಮಟ್ಟಕ್ಕೆ ಸಂಬಂಧ ಇಳಿದುಬಿಟ್ಟಿತು. ಸೈಕಲ್ ತುಟ್ಟಿಯಾಗಿ ನಡದೇ ಹೋಗಬೇಕಾಗಿದ್ದ ಕಾಲದಿಂದ ತಲೆಗೊಂದು ಕಾರು, ಬೆಂಗಳೂರಿನಲ್ಲಿ ಒಂದು ಸೂರು ಸಿಕ್ಕಾಗ ಪ್ರಪಂಚದಲ್ಲಿ ತಾವು ಸುಖಿಗಳು ಎನ್ನುವ ಭಾವದಲ್ಲಿ ತೇಲಾಡುತ್ತಿದ್ದಾರೆ. ಯಾವ ಎಂಭತ್ತರ ಯುವ ಸಮಾಜ ಮಿತ ಸಂಸಾರಕ್ಕೆ ಮನಸ್ಸು ಮಾಡಿತ್ತೋ ಅವರೆಲ್ಲಿ ಹೆಚ್ಚಿನವರು ಇಂದು ವೃದ್ಧರಾಗಿ ನೋಡಿಕೊಳ್ಳುವವರು ಇಲ್ಲದೇ ಆಶ್ರಮವನ್ನು ಸೇರಿಯೋ ಇಲ್ಲ ಮನೆಯಲ್ಲಿಯೇ ಅಸಹಾಯಕರಾಗಿರುವುದನ್ನು ಗಮನಿಸಬಹುದಾಗಿದೆ. ಅದನ್ನು ಗಮನಿಸುತ್ತಾ ಬೆಳೆದ ಇಪ್ಪತ್ತೊಂದನೆಯ ಶತಮಾನದ ತಲೆಮಾರು ತಮ್ಮ ಅಜ್ಜ ಅಜ್ಜಿಯರಲ್ಲಿ ಸಹಜವಾಗಿ ಇರಬೇಕಾದ ಮೋಹ, ಪ್ರೀತಿಗಳೆಲ್ಲವೂ ಕ್ಷೀಣವಾಗಿದೆ. ಪಾಶ್ವಿಮಾತ್ಯ ಪ್ರಪಂಚದಲ್ಲಿನ ಆಕರ್ಷಣೆ ಮತ್ತು ಕೌಟುಂಬಿಕ ಸಂಬಂಧಗಳ ಶಿಥಿಲತೆಗಳ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಈ ವ್ಯಾವಹಾರಿಕ ನಡವಳಿಕೆಯ ಪರಿಣಾಮವೇ ಪೂಜ್ಯ ರಾಘವೇಶ್ವರ ಶ್ರೀಗಳು ಹೇಳಿದ ಡಿಂಕ್ ಎನ್ನುವ ಮನೋವ್ಯಾದ್ಯ ಕುರಿತಾಗಿ
ಡಿಂಕ್ ಎನ್ನುವ ನವತಲೆಮಾರು
“Double Income No Kids” ಎನ್ನುವುದರ ಸಂಕ್ಷಿಪ್ತ ರೂಪವೇ ’ಡಿಂಕ್’. ಬದುಕು ಕೇವಲ ಸುಖಕ್ಕಾಗಿ, ದುಡಿ, ಮಜಾ ಮಾಡು, ತಿರುಗಾಡು, ಮಕ್ಕಳು ಇದಕ್ಕೆಲ್ಲ ಅಡ್ಡಿಯಾಗಬಹುದಾದ ಕಾರಣ ಜೊತೆಗಿರೋಣ. ಮದುವೆ ಆಗಲೇ ಬೇಕೆಂದೇನೂ ಇಲ್ಲ; ಲಿವ್ ಇನ್ ಸಂಬಂಧವಾದರೆ ಸುಲಭ. ಸಾಮಾಜಿಕವಾಗಿ ಈ ವ್ಯಾಧಿಯನ್ನು ಗಮನಿಸಿಯೇ ಇಂದು ಸಮಾಜ ಶಾಸ್ತ್ರಜ್ಞರು ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಜಾಗತಿಕವಾಗಿ ಬದುಕುವ ವಯಸ್ಸು (Life expectency age) 72.6 (ಭಾರತದಲ್ಲಿ ಇದು 70.4) ಇದ್ದರೆ ಮುಂದುವರಿದ ದೇಶಗಳಾದ ಆಸ್ಟ್ರೇಲಿಯಾ, ಸ್ವೀಡನ್ ಗಳಲ್ಲಿ ಈ ಪ್ರಮಾಣ 80ನ್ನು ದಾಟಿದೆ. ಪರಿಣಾಮವಾಗಿ ಜಗತ್ತು ಇಂದು ವೃದ್ಧಾಶ್ರಮವಾಗುತ್ತಿದೆ. ಸರಕಾರಗಳಿಗೆ ವೃದ್ಧರನ್ನು ನೋಡಿಕೊಳ್ಳುವುದು ಹೊರೆಯಾಗುತ್ತಿದೆ. ಜಾಗತಿಕವಾಗಿ ಭಾರತ ತರುಣರ ದೇಶವಾಗಿ ಸದ್ಯ ಗುರುತಿಸಿಕೊಳ್ಳುತ್ತಿದೆ. ಆದರೆ ಇನ್ನೊಂದು ಹದಿನೈದು ವರ್ಷಕ್ಕೆ ಈ ದೇಶವೂ ಸಹ ವೃದ್ಧರ ಸಾಲಿಗೆ ಸೇರುವುದರಲ್ಲಿ ಸಂಶಯವಿಲ್ಲ.
ಫಲವಂತಿಕೆಯ ದರ ಮತ್ತು ಪರಿಣಾಮಗಳು
ಇರುವ ಜನಸಂಖ್ಯೆಯನ್ನು ಉಳಿಸಿಕೊಳ್ಳಬೇಕಾದರೆ ಪ್ರತೀ ಮಹಿಳೆಯರ ಫಲವಂತಿಕೆಯ ದರ 2.1 ಇರಬೇಕು. ಉತ್ತರ ಭಾರತದಲ್ಲಿ ಈ ಸಂಖ್ಯೆ 2.5 ದಿಂದ ಬಿಹಾರದಲ್ಲಿ 3+ ವರೆಗೂ ಇದ್ದರೆ ದಕ್ಷಿಣ ಭಾರತದಲ್ಲಿ 1.9 ಅದರಲ್ಲಿಯೂ ಕೇರಳದಲ್ಲಿ 1.7 ಕ್ಕೆ ಕುಸಿಯುತ್ತಿದೆ. ಇದರಿಂದಾಗುವ ಸಾಮಾಜಿಕ ಅಸಮತೋಲನತ್ವದ ಕುರಿತು ಈಗಲೇ ಜಾಗ್ರತಿಯನ್ನು ಮೂಡಿಸುವ ಪ್ರಯತ್ನಗಳನ್ನು ತೆಗೆದುಕೊಳ್ಳದಿದ್ದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಮುಖ್ಯವಾಗಿ ವೃದ್ಧರ ಸಂಖ್ಯೆ ಹೆಚ್ಚಾಗಿ ಆರೋಗ್ಯ ಮತ್ತು ಸಾಮಾಜಿಕ ಸಂರಕ್ಷಣೆ ದೇಶದ ಆರ್ಥಿಕತೆಗೆ ದೊಡ್ಡ ಹೊರೆಯಾಗಬಹುದು. ಅವರನ್ನು ಅವಲಂಬಿಸುವವರು ಇಲ್ಲದಿರುವ ಕಾರಣ ಸರಕಾರಗಳಿಗೆ ಅವರನ್ನು ನೋಡಿಕೊಳ್ಳುವ ಸಮಸ್ಯೆಯನ್ನು ಈಗಾಗಲೇ ಯುರೋಪು, ಇಸ್ರೇಲ್ ಮತ್ತು ಕೆನಡಾಗಳು ಎದುರಿಸುತ್ತಿವೆ. ಪರಿಣಾಮವಾಗಿ ಬೇರೆ ದೇಶದಿಂದ ಕೂಲಿಗಳನ್ನು ಕರೆಸಿಕೊಂಡು ಅದರ ಉಪಪರಿಣಾಮಗಳಾದ ಸಾಮಾಜಿಕ ಸ್ವಾಸ್ಥ್ಯ ಕೆಡುತ್ತಿದೆ. ಕುಶಲ ಕಾರ್ಮಿಕರ ಕೊರತೆಯ ಕಾರಣ ಅಭಿವೃದ್ಧಿಕಾರ್ಯ ಕುಂಠಿತಗೊಂಡಿದೆ. ಕೌಟುಂಬಿಕವಾಗಿ ನೋಡಿಕೊಳ್ಳುವವರು ಇಲ್ಲದೇ ಏಕಾಂಗಿತನ ಬಾಧಿಸುತ್ತಿದೆ. ಒಂದು ಸಮಾಜದ ಅಳಿವು ಎಂದರೆ ಒಂದು ಸಂಸ್ಕೃತಿಯ ಅಳಿವಾಗಿದೆ. ಹೊಟ್ಟೇಗೆ ಆಹಾರವನ್ನು ಬೆಳೆಯುವವರೇ ಇಲ್ಲದ ಕಾರಣ ಆಹಾರೋತ್ಪಾದನೆ ಕುಂಠಿತಗೊಳ್ಳುತ್ತದೆ. ಇನ್ನಷ್ಟು ನಗರೀಕರಣದಿಂದಾಗಿ ನಗರನಿರ್ವಹಣೆ ಸರಕಾರಕ್ಕೆ ದೊಡ್ಡ ತೊಂದರೆಯಾಗುತ್ತದೆ. ಎಲ್ಲಕಿಂತ ಮುಖ್ಯವಾಗಿ ವೃದ್ಧರ ಸಂಖ್ಯೆಯಿರುವ ದೇಶಗಳು ಇಂದು ರಕ್ಷಣೆಗೆ ಬೇಕಾದ ಸೈನ್ಯಕ್ಕೆ ಯೋಗ್ಯವಾದ ಯುವಕರು ಸಿಗದೇ ಪರಿದಾಡುತ್ತಿವೆ. ಸೈನ್ಯ ಪೋಲಿಸ್ ಮೊದಲಾದವುಗಳಿಗೆ ಜನ ಸಿಗದಿದ್ದರೆ ಸಾಮಾಜಿಕವಾಗಿ ಅಶಾಂತಿ ಹೆಚ್ಚಾಗುತ್ತದೆ.
ಹವ್ಯಕ ಸಮಾಜಕ್ಕೆ ಅನ್ವಯಿಸುವುದಾದರೆ ಈ ದೇಶದಲ್ಲಿ ಹವ್ಯಕರ ಜನಸಂಖ್ಯೆ ಕೇವಲ ನಾಲ್ಕುವರೆಯ ಲಕ್ಷದ ಆಸುಪಾಸಿನಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ. ಸಾಮಾಜಿಕವಾಗಿ ಅನೇಕ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸಿ ಬದುಕಿದ ಪುಟ್ಟ ಸಮಾಜ(Microscopic minorities) ಇದು. ಭೂಸುಧಾರಣೆಯ ಕಾನೂನಿಂದಾಗಿ ಜಮೀನನ್ನು ಕಳೆದುಕೊಂಡು ತನ್ನ ಅಸ್ಮಿತೆಗಾಗಿ ವಲಸೆಯನ್ನು ನೆಚ್ಚಿಕೊಂಡವರು ಇವರು. ಅಹಿಚ್ಚತ್ರದಿಂದ ಬಂದ 32 ಕುಟುಂಬ ಮಯೂರವರ್ಮನ ಕಾಲದಿಂದಲೂ ಆಕ್ರಮಣವನ್ನು ಸಹಿಸಿ ಗುಡ್ಡಗಾಡುಗಳಲ್ಲಿ ಕೃಷಿ ಮತ್ತು ಋಷಿಯ ಬದುಕನ್ನು ಸವೆಸಿದವರು. ಯಾರನ್ನೂ ದೂಷಿಸದಯೇ ಬದುಕಿದ ಈ ಸಮಾಜ ಸಮಸ್ಯೆಗಳು ಎದುರಾದಾಗ ಅಲ್ಲಿಂದ ದೂರ ಸರಿದು ಬೇರೆಡೆ ನೆಲೆ ನಿಂತವೇ ಹೊರತೂ ದ್ವೇಷಿಸಲಿಲ್ಲ. ಗಮನಿಸಬೇಕಾದ ವಿಷಯ ಎಂದರೆ ಬ್ರಾಹ್ಮಣ ಎನ್ನುವುದು ಜಾತಿ ಸೂಚಕೆ; ಹವ್ಯಕ ಎನ್ನುವುದು ಸಂಸ್ಕೃತಿ. ತಾನು ಹವ್ಯಕ ಎಂದು ಕರೆಸಿಕೊಳುತ್ತಾನೆಯೇ ಹೊರತು ಬ್ರಾಹ್ಮಣ ಎನ್ನುವುದಾಗಿ ಆಲ್ಲ ಎನ್ನುವುದಕ್ಕೆ ಆತ ಅನುಸರಿಸುತ್ತಿರುವ ಸರಳ ಬದುಕು, ತನ್ನದೇ ಆದ ಆಹಾರ ವೈವಿಧ್ಯ, ಅತಿಥಿಸತ್ಕಾರ, ಕಲೆ ಮತ್ತು ಸಾಹಿತ್ಯದಲ್ಲಿನ ಅಪಾರ ಒಲವು ಇವುಗಳನ್ನು ಉದಾಹರಿಸಬಹುದಾಗಿದೆ. ಸುಧಾರಣೆಗೆ ಮೊದಲು ಧುಮುಕಿದ ಹವ್ಯಕರಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ವಿಧವಾ ವಿವಾಹವನ್ನು ಮೌನವಾಗಿ ಒಪ್ಪಿಕೊಂಡಿದೆ. ಇಂದು ಅನೇಕ ಬುಡಕಟ್ಟು ಜನಾಂಗಗಳು ತಮ್ಮ ಆಡುಭಾಷೆಯನ್ನು ಬಿಟ್ಟು ಪಠ್ಯ ಕನ್ನಡವನ್ನು ಅಪ್ಪಿಕೊಂಡಿವೆ. ಉತ್ತರಕನ್ನಡದಲ್ಲಿ ಹವ್ಯಕರು ಮತ್ತು ನಾಡವರು ಮನೆಮಾತನ್ನು ಎಲ್ಲಿಹೋದರೂ ಹೆಚ್ಚಾಗಿ ಬಿಡಲಿಲ್ಲ. ಅನೇಕರು ಅಹಿಚ್ಚತ್ರದಿಂದ ಹವ್ಯಕರ ಆಗಮನದ ಕಥೆಯನ್ನು ಕಟ್ಟುಕತೆ ಎನ್ನುತ್ತಾರೆ. ಅದಕ್ಕೆ ಕೊಡುವ ಉದಾಹರಣೆ ಹವ್ಯಕರ ಮಾತಿನಲ್ಲಿ ಉತ್ತರ ಭಾರತದ ಯಾವ ಶಬ್ದವೂ ಇಲ್ಲದಿರುವುದು ಮತ್ತು ಕೇವಲ ಹಳೆಗನ್ನಡವನ್ನು ಆಡುವುದು. ಇಲ್ಲಿ ಗಮನಿಸಬೇಕಾದ ವಿಷಯವೆಂದೆರೆ ಹವ್ಯಕರ ಆಗಮನ ಆಗಿರುವುದು 3ನೆಯ ಶತಮಾನದಲ್ಲಿ. ಆಗ ಉತ್ತರ ಭಾರತದಲ್ಲಿ ಹಿಂದಿ ಇರಲಿಲ್ಲ. ಪಾಣಿನಿಯನ್ನು ಆಧರಿಸಿದ ಸಂಸ್ಕೃತ ರೂಢಿಗೆ ಬಂದಿರುವುದು ನಾಲ್ಕನೆಯ ಶತಮಾನದಲ್ಲಿ. ಪ್ರಾಕೃತ ಆಗ ಹೆಚ್ಚಾಗಿ ರೂಢಿಯಲ್ಲಿತ್ತು. ಇಂದಿಗೆ ಸುಮಾರು ಎರಡುಸಾವಿರ ವರ್ಷಗಳ ಹಿಂದೆ ಬಂದ ಕೇವಲ ಮೂವತ್ತೆರಡು ಕುಟುಂಬಗಳು ಆಗಿನ ಭಾಷೆಗಳನ್ನು ಮಾತಾಡುತ್ತಲೇ ಇರಬೇಕೆನ್ನುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹನ್ನರಡನೆಯ ಶತಮಾನದ ವಚನ ಸಾಹಿತ್ಯ ಸರಳಗನ್ನಡದಲ್ಲಿದೆ. ಇಂದು ಉತ್ತರ ಕರ್ನಾಟಕದ ಅಡುಭಾಷೆಗೂ ವಚನಸಾಹಿತ್ಯದ್ದಲ್ಲಿರುವ ಕನ್ನಡವಾಗಲೀ, ನಂತರ ಬಂದ ದಾಸ ಸಾಹಿತ್ಯಭಾಷ್ಯಾಗಲೀ ಇವತ್ತಿನ ಉತ್ತರಕರ್ನಾಟಕದವರು ಆಡುವ ಕನ್ನಡ ಭಾಷೆಗಳಿಗೂ ಬಹಳ ಅಂತರವಿದೆ. ಹಾಗಂತ ವಚನ ಸಾಹಿತ್ಯದ ನೆಲೆ ಉತ್ತರಕರ್ನಾಟಕ ಅಲ್ಲವೆನ್ನಲಾದೀತೇ.
ಶಂಕರಾಚಾರ್ಯರ ಅದ್ವೈತ ಪರಂಪರೆಯನ್ನು ಹವ್ಯಕರು ಸ್ವೀಕರಿಸಿದ ಮೇಲೆ ಮಾರ್ಗದರ್ಶನಕ್ಕಾಗಿ ಆರಾಧಿಸುತ್ತಿರುವುದು ರಾಮಚಂದಾಪುರ, ಸ್ವರ್ಣವಲ್ಲಿ ಮತ್ತು ನೆಲೆಮಾವು ಮಠಗಳನ್ನು. ಶಂಕರಾಚಾರ್ಯರು ಆಮ್ನಾಯ ಪೀಠಗಳನ್ನು ಸ್ಥಾಪಿಸುವಾಗಲೇ ಪೀಠದ ಯತಿಗಳಿಗೆ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿದ್ದರು. ಏಕೆಂದರೆ ಆ ಕಾಲದಲ್ಲಿ ಸನಾತನ ಧರ್ಮಕ್ಕೆ ರಾಜ್ಯಾಶ್ರಯ ಇಲ್ಲವಾಗಿತ್ತು. ಅದಕ್ಕೆ ಶಾಂಕರ ಪರಂಪರೆಯ ಗುರುಗಳಿಗೆ ಪರಮಹಂಸ ಪದವಿಯಿದೆ. ಹಾಗಾಗಿ ಇವರು ಆತ್ಮೋನ್ನತಿಗಾಗಿ ಸಂನ್ಯಾಸವನ್ನೂ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡಲು ಧರ್ಮಸಭೆಯನ್ನೂ ನಡೇಸುತ್ತಾರೆ. ಕಿರೀಟ ಬಿರುದಾವಳಿ ಪಲ್ಲಕ್ಕಿ ಉತ್ಸವ ಎಲ್ಲವೂ ಈ ಮಠಗಳಿದೆ. ಹಾಗಾಗಿ ಈ ಮಠಗಳನ್ನು ರಾಜಪೀಠವೆನ್ನುತ್ತಾರೆ.
ಫಲವಂತಿಕೆ ಕುಸಿದ ದೇಶಗಳಲ್ಲಿ ಸರಕಾರಗಳು ಹೆಚ್ಚು ಹಡೆಯಲು ಸಲಹೆಮಾಡುವಂತೆ ಕುಸಿಯುತ್ತಿರುವ ಹವ್ಯಕ ಸಮಾಜವನ್ನು ಗಮನದಲ್ಲಿರಿಸಿ ಯತಿಗಳು ಸಲಹೆಯನ್ನು ನೀಡಿದ್ದಾರೆ. ಪುರೋಹಿತರು ಆಶೀರ್ವಚನ ಮಾಡುವಾಗ “ಬಹುಪುತ್ರಲಾಭಂ” ಎನ್ನುವದನ್ನೂ ಆಕ್ಷೇಪಿಸಬಹುದು. ಅನುಸರಿಸದಿದ್ದರೆ ಮಠದಿಂದ ಹೊರಹಾಕುತ್ತೇವೆಂದು ಹೇಳಿಲ್ಲ. ಮಕ್ಕಳನ್ನು ಮಠಕ್ಕೆ ನೀಡಿ ಎನ್ನುವುದೂ ಸಹ ಈ ಹಿನ್ನೆಲೆಯಲ್ಲಿ. ಯಾರೂ ಸುಲಭಕ್ಕೆ ಮಕ್ಕಳನ್ನು ಕೊಡುವುದಿಲ್ಲ ಎನ್ನುವ ಅರಿವಿದೆ.
ಹರಿಹಂಚಾಗಿ ಹೋಗಿದ್ದ ಹವ್ಯಕರನ್ನು ಒಂದುಗೂಡಿಸಿ ಜಾಗ್ರತಿ ಮೂಡಿಸಿರುವ, ಸುಮಾರು ಎರಡು ಲಕ್ಷಕ್ಕೂ ಮೀರಿ ಸೇರಿದರೂ ಓರ್ವನೇ ಓರ್ವ ಪೋಲಿಸನಿಲ್ಲದೇ ಯಶಸ್ವಿಯಾಗಿ ಮುಗಿಸಿದ ತೃತೀಯ ಹವ್ಯಕ ಸಮ್ಮೇಳನವನ್ನು ಮೆಚ್ಚಿಕೊಳ್ಳಬೇಕಾಗಿದೆ. ಗಿರಿಧರ ಕಜೆ ಮತ್ತು ಸಂಗಡಿಗರ ಶ್ರಮ ಸಾರ್ಥಕವಾಗಿದೆ.