Friday, 29th November 2024

ಹರಿವು ತಪ್ಪುತ್ತಿರುವ ವಾರ್ತಾ ವಾಹಿನಿಗಳು

ಪ್ರಸ್ತುತ

ಅಜಯ್ ಅಂಗಡಿ

ಇತ್ತೀಚಿನ ದಿನಗಳಲ್ಲಿ ವಾರ್ತಾ ವಾಹಿನಿಗಳೆಂದರೆ ಬಹುತೇಕ ಎಲ್ಲರಿಗೂ ಅಸಹ್ಯ ಹುಟ್ಟಿಸುವಂತಾಗಿದೆ. ಈ ಸುದ್ದಿ ಮಾಧ್ಯಮಗಳು ತಮ್ಮ ಮೂಲ ಧ್ಯೇಯೋದ್ದೇಶವನ್ನು ಮರೆತೇ ಬಿಟ್ಟಿವೆಯೇನೋ ಅನ್ನುವಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಜಗತ್ತಿನ ಆಗುಸೋಗುಗಳನ್ನು ಒಂದೆಡೆ ಕ್ರೋಢೀಕರಿಸಿ ಸರಿಯಾದ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿಯೇ ಜನ್ಮತಾಳಿರುವುದು ಮಾಧ್ಯಮ. ಆ
ನಿಟ್ಟಿ ನಲ್ಲಿ ಮುದ್ರಣ ಮಾಧ್ಯಮ ತನ್ನ ಮೂಲ ಆಶಯವನ್ನು ಉಳಿಸಿಕೊಂಡು ಮುನ್ನಡೆಯುತ್ತಿದೆ.

ಆದರೆ ವಿದ್ಯುನ್ಮಾನ ಮಾಧ್ಯಮ ಹಾದಿ ತಪ್ಪಿ ಬಹಳ ದಿನಗಳಾಗಿರುವುದು ಜಾಗತಿಕ ಸತ್ಯ. ಸುದ್ದಿಗಳನ್ನು ಆತುರಾತುರವಾಗಿ ಜನರ ಮುಂದೆ ಇಡಬೇಕೆಂಬ
ಹಪಹಪಿಗೆ ಬಿದ್ದಿರುವ ವಾರ್ತಾ ವಾಹಿನಿಗಳು ಸುದ್ದಿಯ ಸತ್ಯಾಸತ್ಯತೆ ಯನ್ನು ಅರಿಯದೆ ಬಿತ್ತರಿಸಿ ಮುಖಭಂಗಕ್ಕೆ ಒಳಗಾಗುತ್ತಿರುವುದು ಗುಟ್ಟಿನ ವಿಷಯವೇನಲ್ಲ. ಸುಖಾಸುಮ್ಮನೆ ಸಿಕ್ಕಿದ್ದನ್ನೆಲ್ಲ ಸುದ್ದಿಯೆಂದು ಬಿಂಬಿಸುವ, ಖ್ಯಾತನಾಮರ ವೈಯುಕ್ತಿಕ ಬದುಕಿನ ಪುಟಗಳನ್ನು ತಮಗಿಷ್ಟ ಬಂದಂತೆ ಬಿತ್ತರಿಸುವ ಇವರುಗಳಿಗೆ ವೃತ್ತಿಪರತೆ ಎಷ್ಟರಮಟ್ಟಿಗೆ ಇದೆ ಅನ್ನುವುದೇ ಹಾಸ್ಯಾಸ್ಪದ.

ಜನರ ಮುಂದಿಡಲು ಬೇಕಾದಷ್ಟು ಸರಕಿದ್ದರೂ ಮಾಧ್ಯಮಗಳೇಕೆ ಕೇವಲ ಕೆಲವು ವಿಷಯಗಳನ್ನಷ್ಟೇ ತೀವ್ರವಾದ ಆಸಕ್ತಿಯಿಂದ ಪ್ರಸಾರ ಮಾಡುತ್ತಾರೆ ಅನ್ನೋದು ಅದ್ಯಾವ ಮಹತ್ತರ ವಿಷಯವೋ?! ಸದಾ ಅಬ್ಬರಿಸಿಯೇ ಮಾತನಾಡುವ ವಾರ್ತಾ ವಾಚಕರದಂತೂ ವಿಚಿತ್ರ ಮ್ಯಾನರಿಸಂ. ತೀರಾ ವೈಯ ಕ್ತಿಕ ದ್ವೇಷವಿದೆ ಅನ್ನುವಂತೆ ಇರುತ್ತದೆ ಅವರ ಹಾವಭಾವ ಒಮ್ಮೊಮ್ಮೆ. ರಾಜಕಾರಣಿಗಳು ಎಲ್ಲೇ ಹೋದರೂ ಹಿಂಬಾಲಿಸುವ ಮಾಧ್ಯಮಗಳು ಅವರನ್ನು ಮತ್ತು ಅವರ ಸಾರ್ವಜನಿಕ ನಡೆನುಡಿಗಳನ್ನು ಎಚ್ಚರಿಸುವಂತಹ ಕೆಲಸ ಕಡಿಮೆಯಾಗಿ, ಕೇವಲ ಅವರನ್ನು ಧೀರರಂತೆ ಬಿಂಬಿಸುವ ಅಥವಾ
ಕಟುವಾಗಿ ಟೀಕಿಸುವ ಭರದಲ್ಲಿ ಏನು ಹೇಳಬೇಕೋ ಅದನ್ನು ಮರೆಯುತ್ತಿದ್ದಾರಾ ಅನ್ನುವುದು ಯೋಚಿಸಬೇಕಾದ ಸಂಗತಿ.

ಕೆಲವೊಮ್ಮೆ ಸುದ್ದಿ ತಿರುಚುವಿಕೆಯೂ ಯಾವ ಅಡೆತಡೆಯಿಲ್ಲದೆ ನಡೆದಿರಬಹುದಾದ ನಿದರ್ಶನಗಳು ಆಗಾಗ ಸುದ್ದಿಯಾಗಿವೆ. ಇನ್ನು ವಿದ್ಯುನ್ಮಾನ ಮಾಧ್ಯಮಗಳು ಏರ್ಪಡಿಸುವ ಚರ್ಚೆಗಳು ಅಸಲಿಗೆ ಚರ್ಚಾಕೂಟದಂತೆ ಭಾಸವಾಗುವುದು ತೀರಾ ವಿರಳ. ಯಾವುದೋ ಸಂತೆಯಲ್ಲಿನ ಗದ್ದಲದೊಳಗೆ ಇದ್ದೇವೇನೋ ಅನಿಸುವಂಥ ವಿಚಿತ್ರ ಸನ್ನಿವೇಶ ಅದು. ಚರ್ಚೆಯಲ್ಲಿ ವಿಷಯದ ತೀವ್ರತೆ ಮತ್ತು ವಿಷಯದ ಕುರಿತ ಆಳವಾದ ಅಧ್ಯಯನ ನಡೆಸಿರು ವವರನ್ನು ಕರೆಸದೆ ಅರ್ಧಂಬರ್ಧ ತಿಳಿದುಕೊಂಡ ತಜ್ಞರನ್ನು ಒಳಗೊಳ್ಳುವಂತೆ ಮಾಡಿ ಚರ್ಚೆಯ ಅರ್ಥವನ್ನು ಹಾಳುಗೆಡವುವಂಥ ಅವಸರವೇಕೆ?
ಎಲ್ಲೂ ಈ ಮಾಧ್ಯಮಗಳದೇ ಹಾವಳಿ. ಜಾಲತಾಣಗಳಲ್ಲಿ ಇವರುಗಳು ನ್ಯೂಸ್‌ಗೆ ಕೊಡುವ ಥಂಬ್ನೇಲ್‌ಗಳೇ ನೋಡುಗರನ್ನು ಬೆಚ್ಚಿಬೀಳಿಸುವಂತೆ ಇರುತ್ತವೆ.

ಮಾಧ್ಯಮಗಳು ಅನುಭವಿ ಪತ್ರಕರ್ತರ ಅಧೀನದಲ್ಲಿ ಕಾರ್ಯ ಪ್ರವೃತ್ತವಾದಲ್ಲಿ ಅವುಗಳಿಗೊಂದು ರೂಪುರೇಷೆ ಮತ್ತು ವೈವಿಧ್ಯತೆ ಸಿಗಬಹುದೇನೋ? ಆದರೆ ಪ್ರಸ್ತುತ ವಾತಾವರಣ ಹಾಗಿಲ್ಲ. ಒಂದರ್ಥದಲ್ಲಿ ಈಗ ವಾರ್ತಾ ವಾಹಿನಿಗಳು ಮನರಂಜನಾ ವಾಹಿನಿ ಗಳಾಗಿ ಬದಲಾಗುತ್ತಿರುವುದು ವಿಪರ್ಯಾಸ. ದಶಕಗಳ ಹಿಂದೆ ‘ದೂರದರ್ಶನ’ದ ಉಪಯುಕ್ತ ಮಾಹಿತಿ ಸಿಗುತ್ತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ‘ಸಮೀಪದರ್ಶನ’ವಿದ್ದರೂ ಸತ್ಯ ಮತ್ತು ಮಿಥ್ಯ ಗಳ ನಡುವಿನ ಸೂಕ್ಷ್ಮ ಅಂತರವನ್ನು ಸಹ ನಮಗೆ ಗುರುತಿಸಲಾಗುತ್ತಿಲ್ಲ. ಆದರೂ ಅಂದು ಇಂದು ಮೂಲಗಳಿಂದ ಉಪಯುಕ್ತ ಮಾಹಿತಿ ದೊರಕು ತ್ತಿರುವುದು ಸಮಾಧಾನಕರ.

ಇತ್ತೀಚೆಗೆ ವಿಶ್ವೇಶ್ವರ ಭಟ್ಟರು ‘ವಿಶ್ವವಾಣಿ ಟಿವಿ’ಯನ್ನು ಆರಂಭಿಸುತ್ತಿzರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಸ್ತುತ ‘ವಿಶ್ವವಾಣಿ ಟಿವಿ’ ತನ್ನ ಕಾರ್ಯಾರಂಭ ಮಾಡಿದ್ದು ಮುಂದಿನ ದಿನಗಳಲ್ಲಿ ಸ್ಯಾಟಲೈಟ್ ಟಿವಿಯಾಗಿ ಜನಮನ್ನಣೆ ಗಳಿಸಬಹುದು. ಈ ಮುಖೇನ ವಿಶ್ವೇಶ್ವರ ಭಟ್ಟರಲ್ಲಿ ಒಂದು ವಿನಂತಿ. ನಿಮ್ಮ
ಸಾರಥ್ಯದಲ್ಲಿ ಪತ್ರಿಕೋದ್ಯಮ ಹೊಸದೊಂದು ಮನ್ವಂತರಕ್ಕೆ ತೆರೆದುಕೊಂಡಿದ್ದನ್ನು ನಾವು ನೋಡಿದ್ದೇವೆ. ‘ವಿಶ್ವವಾಣಿ ಟಿವಿ’ ಹತ್ತರಲ್ಲಿ ಹನ್ನೊಂದಾಗದೆ ವಿಭಿನ್ನತೆಯಿಂದ ಕೂಡಿರಲಿ. ಈ ಮುಖಾಂತರವಾದರೂ ವಾರ್ತಾ ವಾಹಿನಿಗಳು ನಿಖರ ಸುದ್ದಿಗಳನ್ನು ಪ್ರವಹಿಸಲಿ.

(ಲೇಖಕರು: ಹವ್ಯಾಸಿ ಬರಹಗಾರರು)