Friday, 20th September 2024

ಒಂಬತ್ತು ಪ್ರಾಣಿಗಳಿಂದಾದ ಭಯಂಕರ ನವಗುಂಜರ!

ತಿಳಿರುತೋರಣ

ಶ್ರೀವತ್ಸಜೋಶಿ

‘ಅ ಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ॥’ – ಇದು ಭಗವದ್ಗೀ ತೆಯ ಹತ್ತನೆಯ ಅಧ್ಯಾಯದ ಇಪ್ಪತ್ತನೆಯ ಶ್ಲೋಕ. ಅರ್ಜುನನಿಗೆ ಕೃಷ್ಣಪರಮಾತ್ಮನು ತನ್ನ ವಿಶ್ವರೂಪವನ್ನು ತೋರಿಸುವು ದಕ್ಕೆ ಮುನ್ನ ಹೇಳುವ ಮಾತು.

ಈ ಶ್ಲೋಕದ ಅರ್ಥ: ‘ಎಲೈ ಗುಡಾಕೇಶನೇ (ಅರ್ಜುನನಿಗೆ ಗುಡಾಕೇಶ ಎಂದು ಅನ್ವರ್ಥ ನಾಮ; ನಿದ್ದೆಯನ್ನು ಗೆದ್ದವನು ಎಂಬ ಅರ್ಥ) ಎಲ್ಲ ಜೀವಿಗಳಲ್ಲೂ ನೆಲೆಸಿರುವ ಆತ್ಮ ನಾನು. ಎಲ್ಲ ಜೀವಿಗಳಿಗೂ ಆದಿಯಾದ ಉತ್ಪತ್ತಿ, ಮಧ್ಯದ ಸ್ಥಿತಿ, ಅಂತ್ಯದ ಪ್ರಳಯವೂ ನಾನೇ ಆಗಿದ್ದೇನೆ!’ ಎಂದು. ಅದಾದಮೇಲೆ ಭಗವಂತನು ತನ್ನ ಮಹಿಮೆಯನ್ನು ಅರ್ಜುನ ನೆದುರು ಬಣ್ಣಿಸ ತೊಡಗುತ್ತಾನೆ: ‘ದ್ವಾದಶಾದಿತ್ಯರಲ್ಲಿ ನಾನು ವಿಷ್ಣುವೆಂಬ ಆದಿತ್ಯ. ಬೆಳಗುವ ಜ್ಯೋತಿಗಳ ಪೈಕಿ ನಾನು ಸೂರ್ಯ. ಮರುತ್ತುಗಳ ಪೈಕಿ ಮರೀಚಿ.

ನಕ್ಷತ್ರಗಳಿಗೆ ಪತಿಯಾದ ಚಂದ್ರ ನಾನು…’ ಎಂದು ಆರಂಭವಾಗುವ ಯಾದಿಯು ‘ಯಕ್ಷರಲ್ಲಿ ನಾನು ಕುಬೇರ, ಅಷ್ಟವಸುಗಳಲ್ಲಿ ಅನಲ, ರಾಜಪುರೋಹಿತರಲ್ಲಿ ಬೃಹಸ್ಪತಿ, ಸೇನಾಪತಿ ಗಳಲ್ಲಿ ಷಣ್ಮುಖ, ಮರ್ಹಷಿಗಳಲ್ಲಿ ಭೃಗು, ದೇವರ್ಷಿ ಗಳಲ್ಲಿ ನಾರದ, ಗಂಧರ್ವರಲ್ಲಿ ಚಿತ್ರ ರಥ…’ ಇತ್ಯಾದಿಯಾಗಿ ಮುಂದುವರಿದು ‘ಸ್ಥಾವರಗಳಲ್ಲಿ ಹಿಮಾಲಯ, ಶಿಖರಗಳಲ್ಲಿ ಮೇರು, ವೃಕ್ಷಗಳಲ್ಲಿ ಅಶ್ವತ್ಥ, ಕುದುರೆಗಳಲ್ಲಿ ಉಚ್ಚೈಃಶ್ರವಸ್, ಆನೆಗಳಲ್ಲಿ ಐರಾವತ, ಗೋವುಗಳಲ್ಲಿ ಕಾಮಧೇನು, ಸರ್ಪಗಳಲ್ಲಿ ವಾಸುಕಿ…’ ಹೀಗೆ ಬೆಳೆಯುತ್ತ ಹೋಗಿ ‘ಅಕ್ಷರಗಳ ಪೈಕಿ ಅ, ಛಂದಸ್ಸುಗಳ ಪೈಕಿ ಗಾಯತ್ರಿ, ಸಮಾಸಗಳ ಪೈಕಿ ದ್ವಂದ್ವ, ಮಾಸಗಳ ಪೈಕಿ ಮಾರ್ಗ ಶೀರ್ಷ, ಋತುಗಳಲ್ಲಿ ವಸಂತ ಋತು…’ ವರೆಗೂ ತಲುಪುತ್ತದೆ.

ಒಳ್ಳೆಯದರಲ್ಲಷ್ಟೇ ಅಲ್ಲ, ಕೆಟ್ಟದ್ದರಲ್ಲೂ- ‘ವಂಚನೆಗಳ ಪೈಕಿ ನಾನು ಜೂಜು; ದಮನ ಮಾಡುವುದರಲ್ಲಿ ನಾನು ಕೋಲು (ದಂಡ)!’ ಭಗವದ್ಗೀತೆಯ ಹತ್ತನೆಯ ಅಧ್ಯಾಯಕ್ಕೆ ಭೂತಿಯೋಗ ಎಂಬ ಹೆಸರು. ಅದರಲ್ಲಿ ಭಗವಂತನಿಂದ ತನ್ನ ಬಗ್ಗೆಯೇ ಇಷ್ಟೆಲ್ಲ ಬಣ್ಣನೆ. ಹನ್ನೊಂದನೆಯ ಅಧ್ಯಾಯದ ಹೆಸರೇ ವಿಶ್ವರೂಪ ದರ್ಶನಯೋಗ.

ಅದರಲ್ಲಿ ವಿಶ್ವರೂಪ ಅಥವಾ ಭಗವಂತನ ವಿರಾಟ್ ಸ್ವರೂಪ ಹೇಗಿತ್ತೆಂದು ಸಂಜಯನಿಂದ ಬಣ್ಣನೆ: ‘ಅನೇಕ ಮುಖಗಳಿಂದಲೂ
ನಯನಗಳಿಂದಲೂ ಯುಕ್ತವಾಗಿ ಆಶ್ಚರ್ಯಕರವಾದ ಅನೇಕ ನೋಟಗಳಿಂದ ಕೂಡಿತ್ತು. ಅನೇಕ ದಿವ್ಯಾಭರಣಗಳನ್ನು ತೊಟ್ಟು
ನಾನಾ ಬಗೆಯ ದಿವ್ಯಾಯುಧಗಳನ್ನು ಎತ್ತಿ ಹಿಡಿದಿತ್ತು. ವಿಶ್ವರೂಪಧಾರಿ ದೇವನು ದಿವ್ಯವಾದ ಹೂಗಳನ್ನೂ ವಸ್ತ್ರಗಳನ್ನೂ
ಧರಿಸಿದ್ದನು. ದಿವ್ಯಗಂಧವನ್ನು ಲೇಪಿಸಿಕೊಂಡು ಸರ್ವಾಶ್ಚರ್ಯಗಳಿಗೆ ನೆಲೆಯಾಗಿದ್ದನು. ಒಂದು ವೇಳೆ ಸಾವಿರ ಸೂರ್ಯರು ಒಮ್ಮೆಗೇ ಉದಿಸಿದರೆ ಎಷ್ಟು ಪ್ರಕಾಶ ಉಂಟಾದೀತೋ ಆ ಪ್ರಕಾಶವು ಮಹಾತ್ಮನಾದ ಆ ಭಗವಂತನ ಪ್ರಕಾಶಕ್ಕೆ ಸಮವಾದೀತೋ ಏನೋ!’ ಎಂದು.

ಟಿವಿ ಮಹಾಭಾರತದಲ್ಲಿ, ಪೌರಾಣಿಕ ಸಿನೆಮಾಗಳಲ್ಲಿ, ಅಮರಚಿತ್ರಕಥೆ ಪುಸ್ತಕಗಳಲ್ಲಿ, ವರ್ಣರಂಜಿತ ಕ್ಯಾಲೆಂಡರ್‌ಗಳಲ್ಲೂ
ನಾವು ಈ ವಿಶ್ವರೂಪದ ಕಲ್ಪನೆಯನ್ನು ನೋಡಿದ್ದೇವೆ. ಭಗವಂತನ ಬೃಹದಾಕಾರ, ಎದುರಿಗೆ ಮಂಡಿಯೂರಿ ಕೈಮುಗಿದು ಕುಳಿತ
ಅರ್ಜುನ – ಈ ಚಿತ್ರಣವನ್ನು ನೋಡಿರದ ಭಾರತೀಯರಿರಲಿಕ್ಕಿಲ್ಲ.

ಮಹಾಭಾರತದಲ್ಲೇ, ಅರ್ಜುನನೆದುರೇ, ಕೃಷ್ಣ ಪರಮಾತ್ಮನು ಮತ್ತೊಂದು ಸಂದರ್ಭದಲ್ಲಿಯೂ ವಿರಾಟ್ ರೂಪ ತೋರಿಸಿದ್ದಿದೆ ಯಂತೆ. ಆ ಪ್ರಸಂಗ ಮಾತ್ರ ಬಹುತೇಕ ಯಾರಿಗೂ ಗೊತ್ತೇ ಇಲ್ಲ! ನನಗಂತೂ ಖಂಡಿತ ಗೊತ್ತಿರಲಿಲ್ಲ. ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ನಾನು ಅದರ ಬಗ್ಗೆೆ ತಿಳಿದುಕೊಂಡದ್ದು. ನನ್ನೊಬ್ಬ ಸನ್ಮಿತ್ರ ಸಿಂಧನೂರಿನ ಭಾವುರಾವ್ ಕುಲಕರ್ಣಿಯವರು
ವಾಟ್ಸಪ್‌ನಲ್ಲಿ ಕಳುಹಿಸಿದ ಚಿತ್ರದಿಂದ; ಅಲ್ಲ ವಿಚಿತ್ರದಿಂದ.

‘ವಾಟ್ಸಪ್‌ನಲ್ಲಿ ಬಂದದ್ದನ್ನೆಲ್ಲ ನಂಬಬೇಡಿ ಮಾರಾಯ್ರೇ!’ ಎಂದು ನೀವೀಗ ತಿರಸ್ಕರಿಸಿದಿರೋ ಈ ಒಂದು ಅತ್ಯಂತ ಕುತೂಹಲ ಕರ ಮತ್ತು ಸ್ವಾರಸ್ಯಕರ ಮಾಹಿತಿಯಿಂದ ನಿಮ್ಮನ್ನು ನೀವೇ ವಂಚಿತರನ್ನಾಗಿಸಿಕೊಳ್ಳುತ್ತೀರಿ. ಆದ್ದರಿಂದ ಸ್ವಲ್ಪ ತಾಳ್ಮೆ ಇರಲಿ.
ಕುಲಕರ್ಣಿಯವರು ಕಳುಸಿದ್ದ ಚಿತ್ರವನ್ನೂ ಇಲ್ಲಿ ಅಂಟಿಸಿದ್ದೇನೆ ಒಮ್ಮೆ ನೋಡಿ. ಅಜಿತಾಂಶು ರೇ ಎಂಬ ಕಲಾವಿದ ಬಿಡಿಸಿರುವ ತೈಲಚಿತ್ರ. ಇದರ ಹೆಸರು ‘ನವಗುಂಜರ’ ಎಂದು. ಒಂಬತ್ತು ಪ್ರಾಣಿಗಳಿಂದಾದ ಒಂದು ಭಯಂಕರ ಆಕಾರ. ಕೋಳಿಯ ಮುಖ, ನವಿಲಿನ ಕತ್ತು, ಎತ್ತಿನ ಭುಜ, ಸಿಂಹದ ನಡುವು, ಹಿಂದಿನ ಎಡಗಾಲು ಹುಲಿಯದು, ಹಿಂದಿನ ಬಲಗಾಲು ಕುದುರೆಯದು, ಹಾವಿನಿಂದಾದ ಬಾಲ, ಮುಂದಿನ ಎಡಗಾಲು ಆನೆಯದು, ಮುಂದಿನ ಬಲಗಾಲು (ಬೇಕಿದ್ದರೆ ಬಲಗೈ ಎನ್ನೋಣ) ಮನುಷ್ಯ ನದು! ಅಂದರೆ, ಬರೀ ಮುಖವನ್ನಷ್ಟೇ ನೋಡಿ ಹೆಸರಿಸುವುದಾದರೆ ‘ವಿರಾಟ್ ಕೋಳಿ’!

ನಾನು ನವಗುಂಜರ ಎಂಬ ಹೆಸರನ್ನು ಕೇಳಿದ್ದೂ, ಅಂಥದೊಂದು ಚಿತ್ರವನ್ನು ನೋಡಿದ್ದೂ ಅದೇ ಮೊದಲು. ಕುಲಕರ್ಣಿ ಯವರು ನನಗೆ ಕಳಿಸಿದ್ದು ಅಷ್ಟನ್ನು ಮಾತ್ರ – ಚಿತ್ರ ಮತ್ತು ಹೆಸರು. ಆಮೇಲೆ ನಾನೇ ಅವರಿಗೊಂದು ಮೆಸೇಜು ಬರೆದು ‘ಇದಕ್ಕೆ ಪೌರಾಣಿಕ ಹಿನ್ನೆಲೆಯೇನಾದರೂ ಇದೆಯೇ?’ ಎಂದು ಕೇಳಿದೆ. ‘ಇದೂವಿಷ್ಣುವಿನ ಒಂದು ಅವತಾರ. ಶ್ರೀಕೃಷ್ಣನ ಅವತಾರ ಎಂದರೆ ಹೆಚ್ಚು ಸರಿ. ಮಹಾಭಾರತದಲ್ಲಿ ಬರುತ್ತದೆ. ಕಾಡಿನಲ್ಲಿರುವ ಅರ್ಜುನನನ್ನು ಕಾಣಲು ಬರುವ ಶ್ರೀಕೃಷ್ಣ ಈ ರೀತಿಯ ವೇಷದಲ್ಲಿ ಬರುತ್ತಾನೆ. ಆ ಭಯಾನಕ ರೂಪವನ್ನು ಕಂಡು ಹೆದರಿದ ಅರ್ಜುನ ಅದನ್ನು ಕೊಲ್ಲಲು ಬಾಣ ಹೂಡುತ್ತಾನೆ.

ಒಂದು ಕ್ಷಣ ಯೋಚಿಸಿದ ಮೇಲೆ ಅದು ಶ್ರೀಕೃಷ್ಣನ ವಿರಾಟ್ ರೂಪ ಎಂದು ತಿಳಿದುಕೊಳ್ಳುತ್ತಾನೆ. ಶರಣಾಗತನಾಗಿ ನಮಿಸುತ್ತಾನೆ. ನವಗುಂಜರವನ್ನು ಒಡಿಶಾದಲ್ಲಿ  ಪುರಿ ಜಗನ್ನಾಥ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ನಮ್ಮ ಪೂರ್ವಜರು ಕಟ್ಟಿರುವ ಇಂತಹ ವಿಶಿಷ್ಟವಾದ ಕಲ್ಪನೆಗಳ ಕಥೆಗಳನ್ನು ಮಕ್ಕಳಿಗೆ ಹೇಳಿ ಅವರಲ್ಲಿ ಕುತೂಹಲವನ್ನೂ ಭಾರತೀಯ ಪುರಾಣಗಳ ಬಗ್ಗೆ ಆಸಕ್ತಿಯನ್ನೂ ಬೆಳೆಸಬೇಕು.’ ಎಂಬ ಸಂಕ್ಷಿಪ್ತ ಮಾಹಿತಿಯನ್ನು ಅವರು ನನಗೆ ಕಳುಹಿಸಿದರು.

ಮಹಾಭಾರತದಲ್ಲಿ ಬರುತ್ತದೆಯಾದರೆ ಹೇಗೆ ಇದು ‘ಕಂಡಿಲ್ಲ ಕೇಳಿಲ್ಲ’ ಎಂಬಂತಾಗಿರುವುದು? ಅಲ್ಲೇ ಇರುವುದು ಸ್ವಾರಸ್ಯ!
ವೇದವ್ಯಾಸ ಮಹರ್ಷಿಗಳು ಬರೆದ (ಗಣೇಶನಿಂದ ಬರೆಸಿದ) ಮೂಲ ಮಹಾಭಾರತದಲ್ಲಿ ಈ ನವಗುಂಜರವೆಂಬ ಚಿತ್ರ ಪ್ರಾಣಿಯ ದಾಗಲೀ, ಅರ್ಜುನನಿಗೆ ಶ್ರೀಕೃಷ್ಣ ಮತ್ತೊಮ್ಮೆ ವಿರಾಟ್ ಸ್ವರೂಪ ತೋರಿಸಿದನೆಂದಾಗಲೀ ಪ್ರಸ್ತಾವವೇ ಇಲ್ಲ. ಹಾಗಾಗಿ,
‘ವ್ಯಾಸೋಚ್ಛಿಷ್ಟಂ ಜಗತ್ಸರ್ವಂ’ ಎಂಬ ನುಡಿಗಟ್ಟಿಗೆ, ‘ಇಲ್ಲಿರುವುದು ಬೇರೆಲ್ಲ ಕಡೆಯೂ ಇದೆ, ಇಲ್ಲಿ ಇಲ್ಲದಿರುವುದು ಬೇರೆಲ್ಲೂ ಇಲ್ಲ’ ಎಂಬ ವ್ಯಾಸಭಾರತದ ಹಿರಿಮೆಗೆ ಇದೊಂದು ಅಪವಾದ.

ವ್ಯಾಸಭಾರತವಷ್ಟೇ ಅಲ್ಲ, ಒಡಿಶಾದಲ್ಲಿ ಹದಿನೈದನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ಸರಲದಾಸ ಎಂಬ ಮಹಾಕವಿ
(ಒಡಿಯಾ ಭಾಷೆಯ ಆದಿಕವಿ) ಬರೆದ ‘ಸರಲ ಭಾರತ’ ಎಂಬ ಕೃತಿಯನ್ನು ಹೊರತುಪಡಿಸಿ ಮಹಾಭಾರತದ ಬೇರಾವ ಆವೃತ್ತಿ ಗಳಲ್ಲೂ ಇದು ಬರುವುದಿಲ್ಲವಂತೆ. ಆದರೆ, ಸರಲದಾಸನ ಕೃತಿಯಲ್ಲಿ ನವಗುಂಜರದ ಕಥೆ ಇರುವುದು ಹೌದು, ಪುರಿ ಜಗನ್ನಾಥ ದೇವಾಲಯದ ಉತ್ತರದಿಕ್ಕಿನ ಗೋಡೆಯ ಮೇಲೆ ನವಗುಂಜರ – ಅರ್ಜುನ ಮುಖಾಮುಖಿಯ ಚಿತ್ರ ಇರುವುದು ಹೌದು.

ಜಗನ್ನಾಥ ದೇವಾಲಯದ ಗರ್ಭಗುಡಿಯ ಗೋಪುರದ ತುದಿಯಲ್ಲಿರುವ ಲೋಹದ ‘ನೀಲ’ಚಕ್ರದ ಪರಿಧಿಯಗುಂಟ ಎಂಟು ನವಗುಂಜರಗಳ ಕೆತ್ತನೆ ಇರುವುದೂ ಹೌದು. – ಇದಿಷ್ಟು, ನವಗುಂಜರದ ಬಗ್ಗೆ ನಾನು ತೀವ್ರ ಕುತೂಹಲದಿಂದ ಗೂಗಲ್ ಮಥನ ಮಾಡಿದಾಗ ದೊರಕಿದ ಪ್ರಾಥಮಿಕ ಮಾಹಿತಿ. ಕನ್ನಡದಲ್ಲಿ ‘ನವಗುಂಜರ’ ಎಂದು ಟೈಪ್ ಮಾಡಿ ಹುಡುಕಿದರೆ ಸಿಕ್ಕಿದ್ದು ಮೂರು
ಮತ್ತೊಂದು ಫಲಿತಾಂಶಗಳು; ಅವುಗಳಲ್ಲಿರುವುದು ಮೇಲೆ ಕುಲಕರ್ಣಿಯವರು ಒದಗಿಸಿರುವಷ್ಟೇ ಮಾಹಿತಿ. ಆದರೆ ಇಂಗ್ಲಿಷ್
ನಲ್ಲಿ ಟೈಪ್ ಮಾಡಿ ಹುಡುಕಿದಾಗ ಬಂತು ನೋಡಿ ಹತ್ತಿರ ಹತ್ತಿರ ಹತ್ತುಸಾವಿರ ವೆಬ್ ತಾಣಗಳ ಪಟ್ಟಿ!

ಸರಲದಾಸನ ಮಹಾಭಾರತ ಕೃತಿಯಲ್ಲಷ್ಟೇ ಆಗಿದ್ದರೆ ಈ ನವಗುಂಜರದ ವಿಚಾರವು ಹೆಚ್ಚೆಂದರೆ ಒಡಿಶಾದ ಜನರಿಗಷ್ಟೇ
ತಿಳಿದಿರುತ್ತಿತ್ತು. ಆದರೆ ಜಗನ್ನಾಥ ದೇವಾಲಯದ ಭಿತ್ತಿಚಿತ್ರಕಲೆಯಿಂದ, ಮತ್ತು ಒಡಿಶಾದ ಅತಿಪ್ರಸಿದ್ಧ ‘ಪಟಚಿತ್ರ’ ಪೇಂಟಿಂಗ್
ಗಳಿಂದಾಗಿ ನವಗುಂಜರ ಒಡಿಶಾದ ಗಡಿ ದಾಟಿ ಜಗತ್ತಿನ ಗಮನ ಸೆಳೆದಿರುವುದು ಗೊತ್ತಾಗುತ್ತದೆ. ಒಡಿಶಾ ಮೂಲದ್ದೇ ‘ಗಂಜೀಫಾ
ಕಲೆ’ಯಲ್ಲೂ- ನವಗುಂಜರ ಚಿತ್ರರುವ ಕಾರ್ಡ್ ರಾಜನೆಂದೂ, ಅರ್ಜುನನ ಚಿತ್ರರುವ ಕಾರ್ಡ್ ಮಂತ್ರಿಯೆಂದೂ ಪರಿಗಣನೆ
ಇದೆಯಂತೆ. ಚಿತ್ರಕಲೆಯ ಹಿರಿಮೆ ಅದೇ ತಾನೆ? ಚಿತ್ರಕಲೆಗೆ ಭಾಷೆಯ ಹಂಗಿಲ್ಲ. ಸಾವಿರ ಪದಗಳು ಹೇಳುವಂಥದ್ದನ್ನು, ಅಥವಾ
ಸಾವಿರ ಪದಗಳಲ್ಲೂ ಹೇಳಲಿಕ್ಕಾಗದ್ದನ್ನು, ಒಂದು ಚಿತ್ರ ಹೇಳಬಲ್ಲದು ಎನ್ನುವುದು ಸುಮ್ಮನೆ ಅಲ್ಲ. ಅಮೆರಿಕದ ಅತಿ ದೊಡ್ಡ ಆರ್ಟ್ ಮ್ಯೂಸಿಯಂ ಎಂಬ ಖ್ಯಾತಿಯ, ನ್ಯೂಯಾರ್ಕ್‌ನಲ್ಲಿರುವ ಮೆಟ್ರೊಪೊಲಿಟನ್ ಮ್ಯೂಸಿಯಂ ಆಫ್ ಆರ್ಟ್(ಈ ಸಂಗ್ರಹಾ ಲಯವು ‘ದ ಮೆಟ್’ ಎಂದು ಪ್ರಸಿದ್ಧ) ಇಲ್ಲಿ ನವಗುಂಜರದ ಜಲವರ್ಣಚಿತ್ರವೊಂದು ಪ್ರದರ್ಶನಕ್ಕಿದೆ ಎಂದು ಮ್ಯೂಸಿಯಂನ ವೆಬ್ ಕ್ಯಾಟಲಾಗ್ ಹೇಳುತ್ತದೆ.

ಅದು ಸುಮಾರು 1835ರಲ್ಲಿ ರಾಜಸ್ಥಾನದ ಜೋಧಪುರದ ಕಲಾವಿದನೊಬ್ಬ ಬಿಡಿಸಿರುವ ಚಿತ್ರ. ಎವೆಲಿನ್ ಕ್ರೇನ್ಸ್ ಕೊಸ್ಸಾಕ್ ಎಂಬಾತನಿಗೆ ಉಡುಗೊರೆಯಾಗಿ ಬಂದದ್ದನ್ನು ಆತ 2006ರಲ್ಲಿ ಮ್ಯೂಸಿಯಮ್‌ಗೆ ಮಾರಿದನೆಂಬ ಮಾಹಿತಿ ಆ ಕ್ಯಾಟಲಾಗ್ ‌ನಲ್ಲಿದೆ. ಚಿತ್ರದಲ್ಲಿ ಆನೆಯ ಕಾಲಿನ ಪಕ್ಕದಲ್ಲಿ (ಅಂದರೆ ನವಗುಂಜರದ ಎಡ ಮುಂಗಾಲಿನ ಪಕ್ಕದಲ್ಲಿ) ‘ನವಕೂಂಜರ’ ಎಂದು ದೇವನಾಗರಿ ಲಿಪಿಯಲ್ಲಿ ಬರೆದದ್ದಿದೆ.

2014ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ‘ಯುರೋಪಿಯನ್ ಎಸೋಸಿಯೇಷನ್ ಫಾರ್ ಸೌತ್ ಏಷ್ಯನ್ ಆರ್ಕಿಯಾ ಲಜಿ ಏಂಡ್ ಆರ್ಟ್’ ಸಂಸ್ಥೆಯ 22ನೆಯ ಅಧಿವೇಶನದಲ್ಲಿ ‘ಫ್ರಮ್ ದ ಹರಪ್ಪನ್ ಶಿಮೇರಾಸ್ ಟು ನವಗುಂಜರ’ ಎಂಬ ವಿಷಯದ ಬಗ್ಗೆ ವಿಚಾರಸಂಕಿರಣ ನಡೆದಿತ್ತು ಎಂಬ ಅಂಶವೂ ಅಂತರಜಾಲದಲ್ಲಿ ದಾಖಲಾಗಿದೆ. ಹೆ ಮೆಟಲ್ ಸಂಗೀತಪ್ರಕಾರದ ಪಾಶ್ಚಾತ್ಯ ಸಂಗೀತಗಾರನೊಬ್ಬ ‘ಸಿಕ್ಸ್‌ ಸಿಂಪಲ್ ಮಶಿನ್ಸ್‌ : ದ ಲಿವರ್’ ಎಂಬ ಆಲ್ಬಂನಲ್ಲಿ ಒಂದು ಟ್ರ್ಯಾಕ್‌ಗೆ ನವಗುಂಜರ ಎಂದೇ ಹೆಸರನ್ನಿ ಟ್ಟಿದ್ದಾನೆ.

ಅವರಿಗೆಲ್ಲ ಗೊತ್ತಿರುವ ನವಗುಂಜರ ನಮಗೆ ಗೊತ್ತಿಲ್ಲ! ಎಂಥ ಮುಜುಗರ! ಮತ್ತೆ ಒಡಿಶಾದ ಸರಲದಾಸ ಮಹಾಕವಿಯ ವಿಷಯಕ್ಕೆ ಬರೋಣ. ಮಹಾಭಾರತದ ಯಾವ ಭಾಗದಲ್ಲಿ ಆತ ನವಗುಂಜರವನ್ನು ಸೃಷ್ಟಿಸಿದ್ದಾನೆ? ಬಭ್ರುವಾಹನನ ಕಥೆ ಹೇಗೆ
ಆರಂಭವಾಗುವುದು ಎಂದು ನಮಗೆಲ್ಲ ಗೊತ್ತು ತಾನೆ? ಒಮ್ಮೆ ಅದನ್ನು ನೆನಪಿಸಿಕೊಂಡರೆ ಒಳ್ಳೆಯದು. ದ್ರೌಪದಿಯು ಪಂಚ ಪಾಂಡವರ ಪತ್ನಿಯಾದ್ದರಿಂದ ಆಕೆಯ ಜೊತೆ ಏಕಾಂತದಲ್ಲಿರುವ ಯಾವನೇ ಒಬ್ಬ ಪಾಂಡವನನ್ನು ಉಳಿದ ನಾಲ್ವರು
ಆ ಸಮಯದಲ್ಲಿ ನೋಡಬಾರದು ಮಾತನಾಡಿಸಬಾರದು ಎಂಬ ಷರತ್ತು. ಆದರೆ ಒಮ್ಮೆ ಯುಧಿಷ್ಠಿರನೊಂದಿಗೆ ದ್ರೌಪದಿ ಇದ್ದಾಗ ಅವರಿಬ್ಬರ ಏಕಾಂತವನ್ನು ಅರ್ಜುನ ಅನಿವಾರ್ಯ ಕಾರಣದಿಂದಾಗಿ ಭಂಗಪಡಿಸುವ ಸಂದರ್ಭ ಬರುತ್ತದೆ.

ಪ್ರಾಯಶ್ಚಿತ್ತವಾಗಿ ಅರ್ಜುನ ತಪಸ್ಸು ಮಾಡಲಿಕ್ಕೆ ಕಾಡಿಗೆ ತೆರಳುತ್ತಾನೆ. ಮಣಿಭದ್ರ ಎಂಬ ಪರ್ವತಪ್ರದೇಶವನ್ನೇರಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಆಗ ಅರ್ಜುನನನ್ನು ಪರೀಕ್ಷಿಸಲಿಕ್ಕೆೆಂದೇ ಶ್ರೀಕೃಷ್ಣ ಈ ನವಗುಂಜರ ವೇಷ ಧರಿಸಿ ಪ್ರತ್ಯಕ್ಷನಾಗುತ್ತಾನೆ. ಒಂದು ಕ್ಷಣ ಅರ್ಜುನನಿಗೆ ಹೆದರಿಕೆಯಾಗಿ ಪ್ರಾಣರಕ್ಷಣೆಗೆಂದು ಅದರತ್ತ ಬಾಣ ಹೂಡುತ್ತಾನೆ.

ಆದರೆ ಹೆದರಿಕೆ ಮಾತ್ರವಲ್ಲ ಆತನಿಗೆ ದಿಗ್ಭ್ರಮೆಯೂ ಆಗುತ್ತದೆ. ಇಂಥದೊಂದು ಆಕಾರವನ್ನು ತಾನು ಇದುವರೆಗೂ ನೋಡಿಲ್ಲ ವಲ್ಲ, ಏನಿದು, ಪ್ರಾಣಿಯೇ, ಮನುಷ್ಯನೇ, ಅಥವಾ ದೈವಾಂಶಸಂಭೂತವಾದದ್ದೇನಾದರೂ ತನ್ನ ಮುಂದೆ ಬಂದು ನಿಂತಿತೇ? ಅರ್ಜುನನ ಸಂದೇಹ ನಿಜವಾಗುತ್ತದೆ. ಆಗಲೇ ಮೊಳಗಿದ ಅಶರೀರವಾಣಿಯಿಂದಾಗಿ ಅದು ಶ್ರೀಕೃಷ್ಣನದೇ ಲೀಲೆಯೆಂದು ಗೊತ್ತಾಗುತ್ತದೆ. ಅರ್ಜುನ ಬಿಲ್ಲುಬಾಣ ಕೆಳಗಿಟ್ಟು ಶರಣಾಗುತ್ತಾನೆ.

ನವಗುಂಜರಕ್ಕೆೆ ಶಿರಬಾಗಿ ನಮಿಸುತ್ತಾನೆ. ಗ್ರೀಕ್ ಪುರಾಣಗಳಲ್ಲೂ ಬೇರೆ ಕೆಲವು ಸಂಸ್ಕೃತಿಗಳಲ್ಲೂ ಈ ರೀತಿಯ ವಿಚಿತ್ರ ಪ್ರಾಣಿಗಳ ಉಲ್ಲೇಖ ಇರುತ್ತದೆ. ಆದರೆ ಅವು ಹೆಚ್ಚಾಗಿ ಅಪಾಯಕಾರಿ ಮತ್ತು ಅಶುಭದ ಸಂಕೇತ ಆಗಿರುತ್ತವೆ. ಗ್ರೀಕ್ ಪುರಾಣಕಥೆಗಳಲ್ಲಿ ಬರುವ ಏಳು ಹೆಡೆಗಳ ಹಾವು ‘ಹೈಡ್ರಾ’ ಆಗಲೀ, ಸಿಂಹ-ಆಡು-ಸರ್ಪದ ಸಂಯುಕ್ತರೂಪ ‘ಶಿಮೆರಾ’ ಆಗಲೀ ದೈವತ್ವವುಳ್ಳವು ಅಲ್ಲ; ಅವು ದುಷ್ಟಜಂತುಗಳು, ಕೊಲ್ಲಲ್ಪಡಬೇಕಾದುವು. ಆದ್ದರಿಂದಲೇ ವೀರ ಹರ್ಕ್ಯುಲಸ್ ಹೈಡ್ರಾವನ್ನು ಕೊಲ್ಲುತ್ತಾನೆ,  ಲೆರೊ ಫೋನನು ಶಿಮೆರಾವನ್ನು ಕೊಲ್ಲುತ್ತಾನೆ.

ನವಗುಂಜರ ಅಂಥದ್ದಲ್ಲ. ಅದು ಶ್ರೀಕೃಷ್ಣನ ಅವತಾರ. ಶಿಷ್ಟರಕ್ಷಣೆಗೆಂದು ಬಂದದ್ದು. ಆದ್ದರಿಂದ ಅರ್ಜುನ ಅದನ್ನು ಕೊಲ್ಲುವ ಪ್ರಶ್ನೆಯೇ ಇಲ್ಲ. ಶ್ರೀಕೃಷ್ಣ ಪರಮಾತ್ಮ ಅರ್ಜುನನ ತಪಸ್ಸನ್ನು ಪರೀಕ್ಷಿಸಿ ಮೆಚ್ಚಲಿಕ್ಕಾಗಿಯಷ್ಟೇ ಅಂತಾದರೆ ಆ ರೀತಿಯ ವಿಚಿತ್ರ ರೂಪ ತಾಳಬೇಕಿತ್ತೇ? ಅದಕ್ಕೆೆ ಬೇರೊಂದು ಹಿನ್ನೆೆಲೆಯಿದೆ ಎನ್ನುತ್ತಾರೆ ಒಡಿಶಾದ ವಿದ್ವಾಂಸರು. ಅದು ಖಾಂಡವವನ ದಹನದ ಸಂದರ್ಭ.

ಅಗ್ನಿಯ ಅಜೀರ್ಣಬಾಧೆ ನೀಗಿಸಲು ಖಾಂಡವವನದಲ್ಲಿದ್ದ ಗಿಡಮೂಲಿಕೆಗಳು ಒಳ್ಳೆಯ ಔಷಧ, ಆದ್ದರಿಂದ ಅಗ್ನಿಯು ಆ
ವನವನ್ನು ಮೇಯಬೇಕು ಎಂದು ನಿರ್ಧಾರ ವಾಯಿತು. ಗಿಡಮೂಲಿಕೆಗಳೊಂದಿಗೆ ವೃಕ್ಷಸಂಪತ್ತು, ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಅಗ್ನಿಗೆ ಆಹುತಿಯಾಗ ತೊಡಗಿದವು. ಅಗ್ನಿ ಆರೀತಿ ಮಾಡುವುದಕ್ಕೆ ಕೃಷ್ಣಾರ್ಜುನರಿಬ್ಬರ ಅನುಮತಿ ಇದ್ದೇ ಇತ್ತು. ಅಲ್ಲದೇ ಅರ್ಜುನ ಅಗ್ನಿಗೆ ಖಾಂಡವವನ ಭಕ್ಷಣಕ್ಕೆ ಎಲ್ಲ ರೀತಿಯ ಸಹಾಯವನ್ನೂ ಮಾಡುತ್ತಿದ್ದ. ಎಲ್ಲಿಯವರೆಗೆಂದರೆ ಇಂದ್ರ ಮಳೆ ಸುರಿಸಿದರೆ ಅರ್ಜುನ ಅದಕ್ಕೆ ಅಡ್ಡವಾಗಿ ಬಾಣಗಳ ಚಪ್ಪರ ನಿರ್ಮಿಸಿ ಅಗ್ನಿಯು ಖಾಂಡವವನವನ್ನು ಮೇಯಲು ಅನು ಕೂಲ ಮಾಡಿಕೊಟ್ಟಿದ್ದ!

ಹೀಗಿರಲು ಅಲ್ಲಿದ್ದ ಪ್ರಾಣಿಪಕ್ಷಿಗಳೆಲ್ಲ ಪ್ರಾಣರಕ್ಷಣೆಗಾಗಿ ಶ್ರೀಕೃಷ್ಣನ ಮರೆಹೊಕ್ಕವು. ಕೇವಲ ಒಬ್ಬ ವ್ಯಕ್ತಿಯ ಒಳಿತಿಗಾಗಿ ತಮ್ಮೆಲ್ಲರ ಪ್ರಾಣಕ್ಕೆ ಸಂಚಕಾರ ಬಂದದ್ದು ಅವುಗಳಿಗೆ ತುಂಬ ನೋವೆನಿಸಿತ್ತು. ಅವುಗಳ ಆರ್ತನಾದಕ್ಕೆ ಮನ ಕರಗಿದ ಶ್ರೀಕೃಷ್ಣ ಅವುಗಳ ಪ್ರತಿನಿಧಿಯೆಂಬಂತೆ ನವಗುಂಜರ ರೂಪವನ್ನು ಧರಿಸಿದ. ಅದರಿಂದಾಗಿಯೇ ನವಗುಂಜರದ ಮನುಷ್ಯಕೈಯಲ್ಲಿ ಸುದರ್ಶನ ಚಕ್ರ ಅಥವಾ ಕಮಲದ ಹೂವನ್ನು ಹಿಡಿದಿರುವಂತೆ ತೋರಿಸುವುದು. ನವಗುಂಜರವನ್ನು ನೋಡಿದ ಅರ್ಜುನ ಖಾಂಡವವನ ದಹನದಲ್ಲಿ ಅಗ್ನಿಗೆ ಕೊಡುತ್ತಿದ್ದ ನೆರವನ್ನು ತತ್‌ಕ್ಷಣವೇ ನಿಲ್ಲಿಸುತ್ತಾನೆ.

ಅಷ್ಟು ಹೊತ್ತಿಗೆ ಅಗ್ನಿಯ ಅಜೀರ್ಣ ಬಾಧೆಯೂ ವಾಸಿಯಾಗುತ್ತದೆ. ಪ್ರಾಣಿಪಕ್ಷಿಗಳೆಲ್ಲ ಮರುಜೀವ ಪಡೆದೆವೆಂದು ಸಂತಸ ಪಡುತ್ತವೆ. ಲೋಕಾಃ ಸಮಸ್ತಾಃ ಸುಖಿನೊ ಭವಂತು ಎಂಬಂತೆ ಅಲ್ಲವೂ ಮಂಗಲಕರವಾಗಿ ಸುಖಾಂತ್ಯ ಕಾಣುತ್ತದೆ. ಈಗ, ನವಗುಂಜರದ ಕಥೆಯನ್ನು ಒಮ್ಮೆ ಸಮಕಾಲೀನ ಪ್ರಪಂಚಕ್ಕೆ ಅನ್ವಯಿಸಿ ನೋಡೋಣ. ಪ್ರಕೃತಿಯ ಮೇಲೆ ಮನುಷ್ಯನ ದಬ್ಬಾಳಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆಸ್ಟ್ರೇಲಿಯಾದಲ್ಲಿ ಅಭೂತಪೂರ್ವ ಕಾಳ್ಗಿಚ್ಚು ಸಂಭಸಿತು. ಆಮೇಲೆ ಅಮೆಝಾನ್
ಅರಣ್ಯಪ್ರದೇಶಕ್ಕೂ ಬೆಂಕಿ ಬಿತ್ತು. ಅಮೆರಿಕದ ಪಶ್ಚಿಮ ಕರಾವಳಿಯು ಹಿಂದೆಂದೂ ಆಗಿರದಷ್ಟು ಹೊತ್ತಿ ಉರಿಯಿತು. ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಿಮಪರ್ವತಗಳು ಕರಗುತ್ತಿವೆ.

ಜೇನುನೊಣಗಳೂ, ಅನೇಕ ಜಾತಿಯ ಚಿಟ್ಟೆೆಗಳೂ ಪತಂಗಗಳೂ ಪಕ್ಷಿಗಳೂ ನಿರ್ನಾಮವಾಗುತ್ತಿವೆ. ನೆಟ್‌ಫ್ಲಿಕ್ಸ್‌‌ನಲ್ಲಿ ಇತ್ತೀಚೆಗೆ
ಬಂದಿರುವ ಸಾಕ್ಷ್ಯಚಿತ್ರ ಡೇಡ್ ಆಟೆನ್‌ಬರೋನ ‘ಎ ಲೈಫ್ ಆನ್ ಅವರ್ ಪ್ಲಾನೆಟ್’ಅನ್ನು ನೀವು ನೋಡಿದ್ದೀರಾದರೆ ವಿಷಯ ನಾವು ಊಹಿಸುವುದಕ್ಕಿಂತ ಬಲು ಗಂಭೀರವಾಗಿಯೇ ಇದೆ. ತನ್ನ ಬಾಲ್ಯದಿಂದ ಇದುವರೆಗೆ ಪ್ರತಿ ದಶಕದಲ್ಲೂ ಅರಣ್ಯ ಸಂಪತ್ತು ಮತ್ತು ಪ್ರಾಣಿಪಕ್ಷಿಗಳ ಸಂಖ್ಯೆ ಹೇಗೆ ಕ್ಷೀಣಿಸುತ್ತ ಬಂದಿದೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನೊಂದು ಐವತ್ತರುವತ್ತು
ವರ್ಷಗಳಲ್ಲಿ ಈ ಭೂಮಿ ಹೇಗಿರುತ್ತದೆ ಎಂದು ಆ ಸಾಕ್ಷ್ಯಚಿತ್ರದಲ್ಲಿ ತೋರಿಸಿರುವುದನ್ನು ನೋಡಿದರೆ ಮನಸ್ಸು ವಿಹ್ವಲಗೊಳ್ಳು ತ್ತದೆ.

ವಿಪರ್ಯಾಸವೆಂದರೆ, ಕಳೆದವರ್ಷ ಮೇ ತಿಂಗಳಲ್ಲಿ ಬೀಸಿದ ‘ಫಣಿ’ ಚಂಡಮಾರುತ ಒಡಿಶಾವನ್ನು ಅಪ್ಪಳಿಸಿದಾಗ ರಘುರಾಜಪುರ
ಮತ್ತಿತರ ಪ್ರದೇಶಗಳಲ್ಲಿನ ಪಟಚಿತ್ರ ಕಲಾವಿದರು ತಲೆಮಾರುಗಳಿಂದ ಕಾಪಿಟ್ಟುಕೊಂಡು ಬಂದಿದ್ದ ನವಗುಂಜರ ಪಟಚಿತ್ರ ಗಳನ್ನೂ ‘ಫಣಿ’ ನುಂಗಿನೊಣೆದಿದೆಯಂತೆ. ಯಾರದೋ ತಪ್ಪು, ಇನ್ನ್ಯಾರಿಗೋ ಶಿಕ್ಷೆ. ಸ್ವಾರ್ಥಿ ಮನುಷ್ಯನ ಅತ್ಯಾಚಾರ ಅಟಾ ಟೋಪಗಳಿಗೆ ಪ್ರಕೃತಿಯ ಮುನಿಸು. ಇದಕ್ಕೆಲ್ಲ ಮುಕ್ತಾಯ ಕಾಣಬೇಕಿದ್ದರೆ ಬಹುಶಃ ಇನ್ನೊಮ್ಮೆ ನವಗುಂಜರವೇ ಅವತಾರ ವೆತ್ತ ಬೇಕೇನೋ.