Saturday, 27th April 2024

ಭಾರತದಲ್ಲಿ ಕೋವಿಡ್‌ ಲಸಿಕೆಗೆ ಅಂತಹ ತುರ್ತೇನಿಲ್ಲ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಹನ್ನೆರಡು ವರ್ಷಗಳ ಹಿಂದೆ, ಮೈಸೂರಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂಗೆ ಭೇಟಿ ನೀಡಿದ್ದೆ. ಅಂದು ಅದ್ಭುತ ಕಾದಿತ್ತು. ಮಲಬಾರಿನ ಗಿಡಮೂಲಿಕೆಗಳ ಕುರಿತಾದ ಹನ್ನೆರಡು ಸಂಪುಟಗಳ ಉದ್ಗ್ರಂಥ.

ಇದ್ದ ಅಲ್ಪಾವಧಿಯ ಆಸಕ್ತಿಯಿಂದ ಅವುಗಳ ಪುಟಗಳನ್ನು ತಿರುವಿ ಹಾಕಿದೆ. ಕ್ಯಾಲಿಕಟ್ ವಿಶ್ವವಿದ್ಯಾಲಯದ ಎಮೆರಿಟಸ್ ಪ್ರೊಫೆಸರ್ ಕಟ್ಟುನ್ಗಲ್ ಸುಬ್ರಮಣಿಯಂ ಮಣಿಲಾಲ್ ಅವರಿಂದ ರಚಿಸಲ್ಪಟ್ಟದ್ದು. ವಿಷಯದ ಬಗ್ಗೆ ಇದ್ದ ಕುತೂಹಲ ವ್ಯಕ್ತಿಯ
ಬಗ್ಗೆಯೂ ಹರಿಯಿತು. ಐವತ್ತು ವರ್ಷಗಳಷ್ಟು ಸುದೀರ್ಘ ಸಮಯವನ್ನು ಮನುಕುಲದ ಇತಿಹಾಸವನ್ನು ಸಂಶೋಧಿಸಿ,
ಅತ್ಯಭೂತವಾಗಿ ದಾಖಲಿಸುವುದಕ್ಕೆ ಮೀಸಲಾಗಿಟ್ಟ ವಿಲ್ ಡ್ಯುರಾಂಟ್ ಮತ್ತು ಅವರ ಪತ್ನಿ ಅರಿಯಲ್ ಡ್ಯುರಾಂಟ್ ಅವರ ಹನ್ನೊಂದು ಸಂಪುಟಗಳನ್ನು ನೆನಪಿಸುವಂಥ ಕಾರ್ಯವನ್ನು ಮಣಿಲಾಲ್ ಸಾಧಿಸಿದ್ದಾರೆ.

ಸೀದಾ ಕೇಂದ್ರೀಯ ಆಹಾರ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ.ವಿ.ಪ್ರಕಾಶನನ್ನು ಕಂಡು
ಮಣಿಲಾಲರ ಹನ್ನೆರಡೂ ಸಂಪುಟಗಳನ್ನು ತಂದಿರಿಸಿಕೊಳ್ಳಲು ಸಲಹೆ ನೀಡಿದೆ. ಅಷ್ಟು ಹೊತ್ತಿಗಾಗಲೇ ಬಾಸ್ಮತಿ ಭತ್ತದ ತಳಿ
ಮತ್ತು ಅರಿಶಿನದ ಪೇಟೆಂಟ್ ಪಡೆಯುವ ಯತ್ನವನ್ನು ಭಾರತ ವಿರೋಧಿಸಿಯಾಗಿತ್ತು. ಮುಂದೆ ಎದುರಿಸಬಹುದಾದ ಅಂತ ಹದ್ದೇ ಪೇಟೆಂಟ್ ಸಮರಕ್ಕೆ ಸಜ್ಜಾಗಲು ಈ ವಿದ್ವತ್ಪೂರ್ಣ ಗ್ರಂಥ ಸಹಾಯಕ ಎಂದೆ.

ಮಣಿಲಾಲರ ಸಾಧನೆ ಅಷ್ಟಿಷ್ಟಲ್ಲ. ಎಪ್ಪತ್ತರ ದಶಕದಲ್ಲಿ, ಜೀವ – ವೈವಿಧ್ಯ ಸಂಪತ್ತಿಗೆ ಹೆಸರಾದ ಸೈಲೆಂಟ್ ವ್ಯಾಲಿಯಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಕೈಹಾಕಿದ್ದ ಕೇರಳ ಸರಕಾರದ ಕ್ರಮ ವಿವಾದಕ್ಕೊಳಗಾಗಿ ನುರಿತವರೂ ಆ ಯೋಜನೆಗೆ ಮತಿಗೆಟ್ಟು ಒಪ್ಪಿಗೆ ನೀಡಿದ್ದರು. ಆಗ ನೇಮಿಸಲ್ಪಟ್ಟ ಮಣಿಲಾಲ್ ನೇತೃತ್ವದ ಪರಿಣಿತ ಸಮಿತಿ ಆ ಯೋಜನೆಯನ್ನು ಕೈಬಿಡಲು ಸಲಹೆ ನೀಡಿತ್ತು. ಸಸ್ಯ ಶಾಸ್ತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ ಎಂದೋ ನೀಡಬೇಕಿದ್ದ ಮನ್ನಣೆಯನ್ನು ಇಂದಿನ ಸರಕಾರ ಇದೇ ಜನವರಿ ಯಲ್ಲಿ ಪದ್ಮಶ್ರೀ ನೀಡಿ ಪುರಸ್ಕರಿಸಿತು.

ಎಂಭತ್ತೆರಡು ವಯಸ್ಸಿನ ಮಣಿಲಾಲರ 2400 ಪುಟಗಳನ್ನೊಳಗೊಂಡ ಅಮೋಘ ಕೃತಿಯ ಹಿಂದೆ ಅಷ್ಟೇ ಗಾತ್ರದ ರೋಚಕ ಗ್ರಂಥ ರಚಿಸಬಹುದಾದಂಥ ಯಶೋಗಾಥೆಯಿದೆ. ಭಾರತದ ಕಣ್ಣುಕೋರೈಸುವ ಪಾರಂಪರಿಕ ಜ್ಞಾನ ಸಂಪತ್ತಿನ ಪರಿಚಯ ವನ್ನು ಮಾಡಿಕೊಡುವುದರ ಜತೆಗೆ ಮೂರು ಶತಮಾನಗಳ ಹಿಂದಿನ ಜೀವನ ಶೈಲಿ, ಭಾಷೆ, ಸಂಸ್ಕೃತಿ, ಮತ್ತು ವಿಜ್ಞಾನಗಳನ್ನು ಅರ್ಥ ಮಾಡಿಸುವ ಬೃಹತ್ ಗ್ರಂಥ. ಮುಖ್ಯವಾಗಿ, 741 ಅತ್ಯಪರೂಪ ಸಸ್ಯಗಳ ಬಗ್ಗೆ ಮಾಹಿತಿ ಇದೆ.

ಹೆಂಡ್ರಿಕ್ ಆಡ್ರಿಯಾನ್ ವಾನ್ ರೀಡ್ ಎಂಬ ಡಚ್ ಈಸ್ಟ್ ಇಂಡಿಯಾ ಕಂಪನಿಯ ಪ್ರತಿನಿಧಿ ಕೊಚ್ಚಿಯ ಗವರ್ನರ್ ಆಗಿ ನೇಮಕ ವಾಗುತ್ತಾನೆ. ಶ್ರೀಮಂತ ಮನೆತನದ ರೀಡ್ ಲತಃ ಯೋಧ. ಬಲು ಬೇಗ ಬಡ್ತಿ ಪಡೆದು ಆ ಸ್ಥಾನವನ್ನು ಪಡೆಯುತ್ತಾನೆ. ಅದಕ್ಕೆ ಬಹಳಷ್ಟು ಮುನ್ನವೇ ಕೊಚ್ಚಿ ಪ್ರವೇಶಿಸಿದ್ದ ಅರಬ್ಬರು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಾಂಬಾರ್ ಪದಾರ್ಥಗಳನ್ನಷ್ಟೇ ಅಲ್ಲದೆ ಕೊಚ್ಚಿಯ ಮರ ಮತ್ತು ಗಿಡಮೂಲಿಕೆಗಳನ್ನೂ ರಫ್ತು ಮಾಡುತ್ತಿರುತ್ತಾರೆ.

ಆಮದು ಮಾಡಿಕೊಳ್ಳುವುದು ದುಬಾರಿಯೆಂದರಿತ ರೀಡ್ ತನ್ನ ದೇಶದ ಸೈನಿಕರ ಆರೋಗ್ಯ ರಕ್ಷಣೆಗಾಗಿ ರೀಡ್, ವೈದ್ಯಕೀಯ ಮೂಲಿಕೆಗಳನ್ನು ಬೆಳೆಯಲು ಮುಂದಾಗುತ್ತಾನೆ. ಪ್ರತಿ ಬಾರಿ ಕೇರಳದ ಒಳನಾಡಿನಲ್ಲಿ ಸಂಚರಿಸುವಾಗ ಇನ್ನೂರು ಜನರನ್ನು ಮೂಲಿಕೆಗಳ ಸಂಗ್ರಹಕ್ಕೆ ಬಿಟ್ಟು ಮಲಬಾರಿನ ಸಸ್ಯ ಸಂಪತ್ತನ್ನು ಲೂಟಿ ಮಾಡಿ ಯುದ್ಧನೌಕೆಗೆ ತುಂಬುತ್ತಿರುತ್ತಾನೆ. ಆ ಸಂಪತ್ತಿನ ಅಗಾಧತೆಯನ್ನೂ, ವಿಸ್ತಾರವನ್ನೂ ಅರ್ಥ ಮಾಡಿಕೊಳ್ಳಲು ಇದೊಂದು ನಿದರ್ಶನ ಸಾಕು: ಒಂದೇ ಜಾತಿಯ ಎರಡನೇ ಮರ ಆ
ದಟ್ಟಕಾಡಿನಲ್ಲಿ ಹುಡುಕಿದರೂ ಸಿಗದು.

ಒಂದೇ ಮರದ ರೆಂಬೆಯ ಮೇಲೆ ಹತ್ತೋ – ಹನ್ನೆರಡೋ ವಿಭಿನ್ನ ರೀತಿಯ ಹೂವು ಎಲೆಗಳನ್ನು ಹಬ್ಬಿಸಿದ್ದ ಬಳ್ಳಿ ಪ್ರಭೇದಗಳು. ರೀಡ್ ಕೊಳ್ಳೆ ಹೊಡೆದಿದ್ದು ಇಂತಹ ವೈವಿಧ್ಯಮಯ ನೈಸರ್ಗಿಕ ನಿಧಿಯನ್ನು. ಆ ಲೂಟಿಗೆ ಅವನಿಗೊಂದು ನೆಪವಿರುತ್ತೆ. ಅವನ ಮೇಲಧಿಕಾರಿ ಪೂರ್ವದಲ್ಲಿ ಜಕಾರ್ತಾ ನಂತರ ಡಚ್ಚರ ಎರಡನೇ ರಾಜಧಾನಿಯಾಗಿ ಸಿಲೋನನ್ನು ಬಿಟ್ಟು ಕೊಚ್ಚಿಯನ್ನೇ ಆಯ್ಕೆ ಮಾಡಲೆಂದು ಲೆಕ್ಕಾಚಾರ ಹಾಕಿರುತ್ತಾನೆ. ಆ ಸಸ್ಯರಾಶಿಯನ್ನು ಸಂಗ್ರಹಿಸಿದರೆ ಸಾಲದೇ? ಅವುಗಳ ಬಗ್ಗೆ ಮಾಹಿತಿಯನ್ನೂ ಕೆದಕಬೇಕಲ್ಲವೇ? ಆ ಕಾರ್ಯ ಸಾಧನೆಗಾಗಿ ಆತನಿಗೆ ನೆರವಾದವರಲ್ಲಿ ಮೂರು ಕೊಂಕಣಿ ಬ್ರಾಹ್ಮಣರು ಪ್ರಮುಖರು.

ಕೊಚ್ಚಿಯ ರಾಜ ಕೇರಳ ವರ್ಮನ್ ಇಟ್ಟಿ ಅಚ್ಯುದನ್ ಎಂಬ ಎಳವ ಸಮುದಾಯದ ಪಾರಂಪರಿಕ ವೈದ್ಯ ಪ್ರಮುಖನನ್ನೂ ಪತ್ತೆಮಾಡಿಕೊಡುತ್ತಾನೆ. ನೂರು ಮಂದಿ ಪರಿಣತರು ಹೊರ್ಟಸ್ ಮಲಬಾರಿಕಸ್ ಎಂಬ ಗ್ರಂಥವನ್ನು ಕಲೆಹಾಕುತ್ತಾರೆ. ಮೇಲೆ ಹೆಸರಿಸಿದವರು ಎರಡು ವರ್ಷಗಳ ಕಾಲ ಹಗಲು ರಾತ್ರಿಯೆನ್ನದೆ ಶ್ರಮಿಸಿದ ಫಲದಿಂದ ಪಶ್ಚಿಮ ಘಟ್ಟದಾದ್ಯಂತ ಇರುವ ಗಿಡ ಮೂಲಿಕೆಗಳ ಸಾರ ಈ ಬೃಹತ್ ಕೋಶದ ರೂಪದಲ್ಲಿ ಪ್ರಪ್ರಥಮ ಬಾರಿಗೆ ಹೊರ ಜಗತ್ತಿಗೆ ಪರಿಚಯವಾಗುತ್ತದೆ.

ದ ವೈರ್ ಎಂಬ ಎಡಪಂಥೀಯ ವೆಬ್ಸೈಟ್ ಎಂದಿನಂತೆ ಇಂತಹ ಘನವಾದ ವಿಚಾರ ಕುರಿತ ಲೇಖನದಲ್ಲೂ ದುರ್ವಾಸನೆ ಮೂಗಿಗೆ ಅಡರುವಂತೆ ಬ್ರಾಹ್ಮಣರನ್ನು ಹೀಗಳೆಯುತ್ತದೆ. (ಸಮಾಜದ) ಕೆಳಸ್ತರಕ್ಕೆ (ಈ ಶಬ್ದದ ಬಳಕೆ ನನ್ನದಲ್ಲ, ವೆಬ್ಸೆ ಟಿನದ್ದು) ಸೇರಿದ ಅಚ್ಯುದನ್ ಆ ಮೂವರು ಬ್ರಾಹ್ಮಣರಿಗಿಂತ ಹೆಚ್ಚು ಬಲ್ಲವನಾಗಿದ್ದನೆಂದು ಅಪಹಾಸ್ಯ ಮಾಡುತ್ತದೆ. ತಳ ಸಮುದಾಯಕ್ಕೆ ಸೇರಿದವನು ಬ್ರಾಹ್ಮಣರಿಗಿಂತ ಹೆಚ್ಚು ತಿಳಿದಿರಬಾರದೇ? ಹೆಚ್ಚು ಜ್ಞಾನಿಯಾದವನು ತಳ ಸಮುದಾಯಕ್ಕೆ ಸೇರಿದನಾದರೂ ಹೇಗೆ? ಕೊಚ್ಚಿ ರಾಜನೇ ವಿದ್ವತ್ಪೂರ್ವಕ ಯೋಜನೆಗಾಗಿ ತಳ ಸಮುದಾಯದ ವ್ಯಕ್ತಿಯನ್ನು ನೇಮಕ ಮಾಡುವ ವಾತಾವರಣವಿತ್ತೆಂದು ಅರ್ಥವಲ್ಲವೇ? ಸ್ವಯಂ ಮಣಿಲಾಲರೇ ಹೊರ್ಟಸ್ ಸಂಯೋಜನೆಯ ಕಾರ್ಯದಲ್ಲಿ ಜಾತಿಗಿಂತ ಜ್ಞಾನ ಹೇಗೆ ಮೇಲುಗೈ ಪಡೆಯಿತೆಂಬುದನ್ನು ಹೆಮ್ಮೆಯಿಂದ ಸ್ಮರಿಸಿದ್ದೂ ಕಮ್ಯುನಿಸ್ಟ್ ಕುತಂತ್ರಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಅಚ್ಯುದನ್ ಸೇರಿದಂತೆ ಮೂವರು ಬ್ರಾಹ್ಮಣರಿಗೆ ಅವರ ಘನಕಾರ್ಯವನ್ನು ಘನಕಾರ್ಯವನ್ನು ಗುರುತಿಸಿ ಕೊಚ್ಚಿಯಲ್ಲಿ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಇಂದಿನ ಕಲುಷಿತ ವ್ಯವಸ್ಥೆಯಲ್ಲಿ ಆ ಮೂವರ ಸ್ಮಾರಕಗಳನ್ನು ಕೆಡಿಸದಿರುವುದು ಕಮ್ಯುನಿಸ್ಟ್
ಕೇರಳದ ಸಾಧನೆಯೇ ಸರಿ. ಹೊರ್ಟಸ್ ಮಲಬಾರಿಕಸ್ ಸಸ್ಯಶಾಸದ ಅಪ್ರತಿಮ ಗ್ರಂಥವೆಂದು ವಿಶ್ವಾದ್ಯಂತ ಪರಿಗಣಿಸಲಾಗಿದೆ. ಅದರ ರಚನೆಗೂ ಸುಮಾರು ಮೂರು ದಶಕಗಳೇ ಸಂದವು. ಅದರ ಕೊನೆಯ ಸಂಪುಟ ಪ್ರಕಟವಾಗಿದ್ದು 1693ರಲ್ಲಿ.

ಮೊದಲು ಪೋರ್ಚುಗೀಸ್ ಭಾಷೆಗೂ, ನಂತರ ಡಚ್, ತದನಂತರದಲ್ಲಿ ಲ್ಯಾಟಿನ್ ಭಾಷೆಗೆ ತರ್ಜುಮೆಗೊಂಡ ಈ ಗ್ರಂಥ
ಮಣಿಲಾಲರ ಕಣ್ಣಿಗೆ ಬಿದ್ದಿದ್ದು ಅವರು ಡೆಹ್ರಾಡೂನಿನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಯಾಗಿದ್ದ ಸಮಯದಲ್ಲಿ. ಮೂಲಿಕೆಯೊಂದನ್ನು ಎಡಪಾದಕ್ಕೆ ಹಚ್ಚಿದರೆ ಬಲಗಣ್ಣಿನ ದೃಷ್ಟಿ ವೃದ್ಧಿಸುವುದೆಂಬ ಗ್ರಂಥದಲ್ಲಿ ನಮೂದಿಸಲಾದ ಪುಟ್ಟ ಕೌತುಕ ಅವರ ಕಣ್ಣಿಗೆ ಬಿದ್ದದ್ದೇ ಅವರು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಲು ಪ್ರೇರೇಪಿಸುತ್ತದೆ.

ಹಿಂದಿ ಪ್ರೇಕ್ಷಕರಿಂದ ತಿರಸ್ಕೃತನಾಗಿದ್ದಕ್ಕೋ ಏನೊ ಇದೀಗ ರಾಜಕೀಯಕ್ಕಿಳಿದಿರುವ ತಮಿಳು ನಟ ಕಮಲ್ ಹಾಸನ್ ಹಿಂದಿ – ವಿರೋಧಿ ನಿಲುವು ತೆಗೆದುಕೊಳ್ಳುವುದು ಸಹಜವೇ. (ಆತ ನಟಿಸಿದ ಸಕಲ ಕಲಾ ವಲ್ಲವನ್ ಚಿತ್ರದಲ್ಲಿ ನಾಯಕ ಪಾತ್ರಧಾರಿ ತಾನು ಕಲಿತ ಸಕಲ ಕಲೆಗಳ ಪಟ್ಟಿಯನ್ನು ಟೈಟಲ್ ಹಾಡಿನಲ್ಲಿ ಹೇಳುತ್ತಾನೆ. ಆ ಕಲೆಗಳಲ್ಲಿ, ಇಂದ್ರನನ್ನು ಹೋಲುವ ರಸಿಕತೆಯ ಜತೆಗೆ
ಹಿಂದಿಯಲ್ಲಿ ಹಾಡುವುದೂ ತನಗೆ ಗೊತ್ತೆಂದು ಕೊಚ್ಚಿಕೊಳ್ಳುತ್ತಾನೆ. ಒಂದೇ ಚಿತ್ರದಲ್ಲಿ ಹತ್ತು ದಿರಿಸನ್ನು ಧರಿಸಬಲ್ಲವನಿಗೆ ಹಿಂದಿ ಕುರಿತ ಇಬ್ಬಂದಿ ನೀತಿಯೇನೂ ಹೊರೆಯಲ್ಲ ಬಿಡಿ).

ಆದರೆ ಸತ್ತ ಭಾಷೆಯಾದ ಸಂಸ್ಕೃತವನ್ನು ಮತ್ತೆ ಬದುಕಿಸಬೇಕೇ ಎಂದು ಮೊನ್ನೆ ತಾನೇ ಕೇಳಿರುವ ಕಮಲ್‌ನ ಮನೋರೋಗಕ್ಕೆ ಹೊರ್ಟಸ್ ಮಲಬಾರಿಕಸ್‌ನಲ್ಲಿ ಮದ್ದಿರುವ ಸಾಧ್ಯತೆ ಇದೆ. ಇದೆ ಇರಬಹುದೇ? ಔಷಧಿ ದೊರಕಿದಲ್ಲಿ ಅದರ ಪ್ರಯೋಗ ಮಣ್ಣಿನ ಮಗನ ಕುಲ ಪುರೋಹಿತ ವೈಎಸ್‌ವಿ ದತ್ತರ ಮೇಲೂ ನಡೆಯಬಹುದು. ಕೋವಿಡ್ ವ್ಯಾಕ್ಸೀನ್‌ಗಿಂತಲೂ ಹೆಚ್ಚಿನ ತುರ್ತು ಈ
ಔಷಧಿಗಿದೆ.

Leave a Reply

Your email address will not be published. Required fields are marked *

error: Content is protected !!