Saturday, 14th December 2024

ಒಂದು ದೇಶಕ್ಕೆ ಒಂದೇ ಮತ: ಅದುವೇ ನಮ್ಮ ದೇಶ ಭಾರತ!

– ಎಂ.ಜಿ.ಅಕ್ಬರ್

ಅಪವಾದಗಳು ಹಾಗಿರಲಿ. ಭಾರತದ ಇತಿಹಾಸದಲ್ಲಿ ಒಂದೇ ದಿನ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದಾಗ ಅಧಿಕಾರದಲ್ಲಿದ್ದುದು ಇಬ್ಬರೇ ಪ್ರಧಾನ ಮಂತ್ರಿಗಳು- ೧೯೫೨, ೧೯೫೭ ಮತ್ತು
೧೯೬೨ರಲ್ಲಿ ಜವಾಹರಲಾಲ್ ನೆಹರು, ೧೯೬೭ರಲ್ಲಿ ಅವರ ಪುತ್ರಿ ಇಂದಿರಾ ಗಾಂಧಿ. ಇದಕ್ಕೆ ಅಪವಾದವಾಗಿದ್ದು ಕೇರಳ. ೧೯೫೯ರ ಜುಲೈ ೩೧ರಂದು ನೆಹರು ಕೇರಳದ ಬಲಿಷ್ಠ ಮುಖ್ಯಮಂತ್ರಿ ಇಎಂಎಸ್ ನಂಬೂದರಿ
ಪಾಡ್ ಅವರ ಕಮ್ಯುನಿಸ್ಟ್ ಮೈತ್ರಿ ಸರಕಾರವನ್ನು ವಜಾಗೊಳಿಸಿದರು. ಅದಕ್ಕೆ ಸಲಹೆ ನೀಡಿದ್ದು ಅವರದೇ ಪುತ್ರಿ ಇಂದಿರಾ. ಆಕೆ ಆಗ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ. ಸರಕಾರವನ್ನು ವಜಾಗೊಳಿಸುವ ಆಕೆಯ ಸಲಹೆ ರಾಜಕೀಯವಾಗಿ ಸರಿಯಾಗಿತ್ತು, ಆದರೆ ಕಾನೂನಿನಡಿ ದುರ್ಬಲವಾಗಿತ್ತು. ನಂತರ ೧೯೬೦ರ ಆರಂಭದಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ೬೩, ಸಿಪಿಐ ೨೯ ಸೀಟು ಗೆದ್ದವು. ಅದರೊಂದಿಗೆ ಕಾಂಗ್ರೆಸ್ ಸರಕಾರ ರಚಿಸಿತು. ಹೀಗಾಗಿ ೧೯೬೦ರ -ಬ್ರವರಿ ೨೨ರಂದು ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು. ತನ್ಮೂಲಕ ಕೇರಳ ವಿಧಾನಸಭೆ ಚುನಾವಣೆ ತನ್ನದೇ ಆದ ಅಡ್ಡದಾರಿಯೊಂದನ್ನು ಹಿಡಿಯಿತು.
ಅಡಚಣೆಯ ವೈರಸ್ ಜೀವ ತಳೆದಿದ್ದೇ ಅಲ್ಲಿಂದ. ೧೯೬೭ರ ಬಳಿಕ ಇದೊಂದು ಸಾಂಕ್ರಾಮಿಕ ರೋಗದಂತೆ ಹರಡಿತು. ಭ್ರಮೆಯಿಂದ ಹೊರಬಂದ ಮತದಾರರು ಕಾಂಗ್ರೆಸ್ಸನ್ನು ಅಮೃತಸರದಿಂದ ಹಿಡಿದು, ಕಲ್ಕತ್ತಾ, ತಮಿಳುನಾಡಿನವರೆಗೆ ಅಧಿಕಾರದಿಂದ ಕಿತ್ತೊಗೆದರು. ತಮಿಳುನಾಡಿನಲ್ಲಿ ಡಿಎಂಕೆ ಚಳವಳಿಯು ಒಳ್ಳೆಯ ಆಡಳಿತದೊಂದಿಗೆ ಸೇರಿ ಜನಪ್ರಿಯವಾಯಿತು. ಉತ್ತರ ಭಾರತದಲ್ಲೂ ಈ ಜೋಕರ್‌ಗಳನ್ನು ಜನರು ಮೈಕೆರೆತದ ಹುಣ್ಣಿನಂತೆ ನೋಡತೊಡಗಿದರು.

ಆದರೆ ಕಾಂಗ್ರೆಸ್ಸನ್ನು ಕೆಳಗಿಳಿಸಿ ರಚನೆಯಾದ ಬಹುಪಕ್ಷೀಯ ಮೈತ್ರಿ ಸರಕಾರಗಳೂ ಕ್ಷುಲ್ಲಕ ಹಿತಾಸಕ್ತಿ, ವೈಯಕ್ತಿಕ ಪ್ರತಿಷ್ಠೆಯಲ್ಲಿ ಮುಳುಗಿಹೋದವು. ಹೀಗಾಗಿ ಭಾರತ ಕಷ್ಟ ಅನುಭವಿಸಿತು, ಆದರೆ ಅಷ್ಟೇ ವೇಗವಾಗಿ ಚೇತರಿಸಿಕೊಂಡಿತು ಕೂಡ. ಆದರೆ ದೇಶದ ಚುನಾವಣಾ ವ್ಯವಸ್ಥೆ ಮಾತ್ರ ಚೇತರಿಸಿಕೊಳ್ಳಲೇ ಇಲ್ಲ. ಒಬ್ಬ ನಾಯಕ ಮಾತ್ರ ತನ್ನ ಕ್ಯಾಲೆಂಡರನ್ನು ಈ ಅಪಸವ್ಯದಿಂದ ಸರಿಪಡಿಸಿಕೊಂಡರು. ಅವರು ನವೀನ್ ಪಟ್ನಾಯಕ್. ಚುನಾವಣೆಗೆ ಒಂದು ಬಾರಿಯ ಪ್ರಚಾರ ಸಾಕಿರುವಾಗ ೨ ಬಾರಿ ಏಕೆ ಅನವಶ್ಯಕವಾಗಿ ಪ್ರಚಾರಕ್ಕೆ ಹಣ, ಶ್ರಮ, ಸಮಯ ವ್ಯರ್ಥಮಾಡಬೇಕು ಎಂದು ಅವರು ಯೋಚಿಸಿದರು. ಹೀಗಾಗಿ ಇವತ್ತಿಗೂ
ಸಂಸತ್ ಮತ್ತು ಒಡಿಶಾದ ವಿಧಾನಸಭೆ ಚುನಾವಣೆಗಳು ಒಂದೇ ದಿನ ನಡೆಯುತ್ತವೆ. ಕೇಂದ್ರ ಹಾಗೂ ಒಡಿಶಾದ ಮಟ್ಟಿಗೆ ‘ಒಂದು ದೇಶ, ಒಂದು ರಾಜ್ಯ, ಒಂದು ಚುನಾವಣೆ’. ಹಾಗೆಯೇ, ಒಡಿಶಾದ ಮಟ್ಟಿಗೆ ಒಬ್ಬನೇ ವಿಜಯಶಾಲಿ. ಅವರು, ಒನ್ಸ್ ಅಗೇನ್, ನವೀನ್ ಪಟ್ನಾಯಕ್. ಕೇಂದ್ರದಲ್ಲಿ ಯಾರಾದರೂ ಅಧಿಕಾರಕ್ಕೆ ಬರಲಿ, ದೇಶಾದ್ಯಂತ ಯಾವ ನಾಯಕನೇ ಧೂಳೆಬ್ಬಿಸಲಿ, ಒಡಿಶಾದಲ್ಲಿ ಮಾತ್ರ ನವೀನ್ ಪ್ರತಿ ಚುನಾವಣೆಯನ್ನೂ ಗೆಲ್ಲುತ್ತಾ ಬಂದಿದ್ದಾರೆ. ಏಕೆಂದರೆ ಅವರಲ್ಲಿ ಅದಮ್ಯ ಆತ್ಮವಿಶ್ವಾಸವಿದೆ.

‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ಒಕ್ಕೂಟ ವ್ಯವಸ್ಥೆಗೆ ವಿರೋಧಿ ಎಂಬ ರಾಹುಲ್ ಗಾಂಧಿಯವರ ವಾದಕ್ಕೆ ತಲೆಬುಡವಿಲ್ಲ. ರಾಹುಲ್ ಮಾತೇ ನಿಜವಾಗಿದ್ದರೆ ಇಂದಿರಾ ಮತ್ತು ನೆಹರು ಕೂಡ ಒಕ್ಕೂಟ ವ್ಯವಸ್ಥೆಯ ವಿರೋಧಿಗಳಾಗಿದ್ದರೇ? ಅವರೂ ಒಂದೇ ದಿನ ಚುನಾವಣೆಗಳನ್ನು ನಡೆಸಲಿಲ್ಲವೇ? ದೇಶಾದ್ಯಂತ ಒಂದೇ ದಿನ ಚುನಾವಣೆ ನಡೆಸುವುದು ಕಷ್ಟ, ಭಾರತ ಬೃಹತ್ ದೇಶ, ಇಲ್ಲಿನ ಜನಸಂಖ್ಯೆಯೂ ಅಗಾಧ, ನಮ್ಮಲ್ಲಿರುವ ಸಂಪನ್ಮೂಲಗಳು ಬಹಳ ಸೀಮಿತ… ಹೀಗೆ ಅವರೂ ಬೇಕಾದಷ್ಟು ಕಾರಣ ನೀಡಿ ಕೇಂದ್ರ ಮತ್ತು ರಾಜ್ಯಗಳಿಗೆ ಬೇರೆ ಬೇರೆ ದಿನ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಏಕೆ? ಭಾರತದ ಮತದಾರರಿಗೆ ‘ದೊಡ್ಡ’ ಮತ್ತು ‘ಸಣ್ಣ’ ಚುನಾವಣೆಯ ನಡುವಿನ ವ್ಯತ್ಯಾಸ ಗೊತ್ತಿದೆ. ಹಾಗೆ ನೋಡಿದರೆ ೨೦೦೪ರಲ್ಲಿ ಬಿಜೆಪಿಗೇ ಈ ವ್ಯತ್ಯಾಸ ಗೊತ್ತಿರಲಿಲ್ಲ. ೨೦೦೩ರಲ್ಲಿ ನಡೆದ ಕೆಲ ರಾಜ್ಯಗಳ ಚುನಾವಣೆಯಲ್ಲಿ ಗೆದ್ದಾಕ್ಷಣ ಬಿಜೆಪಿ ನಾಯಕರು ಈಗ ಕೇಂದ್ರಕ್ಕೂ ಚುನಾವಣೆ ನಡೆಸಿದರೆ ನಮ್ಮದೇ ಗೆಲುವು ಎಂಬ ಭ್ರಮೆಯಲ್ಲಿ ಮೂರೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಸಿದರು. ಆ ಲೆಕ್ಕಾಚಾರ ಉಲ್ಟಾ ಆಯಿತು. ಮತದಾರರು ಅದೇ ಸ್ಪಷ್ಟ ನಿಲುವನ್ನು ಮುಂದಿನ ಚುನಾವಣೆಗಳಲ್ಲೂ ಮುಂದುವರಿಸಿಕೊಂಡು ಬಂದಿದ್ದಾರೆ.

***
ನಿಮ್ಮನ್ನು ಹುಚ್ಚಾಪಟ್ಟೆ ನಗಿಸುವ ಅಸ ಯಾವುದು? ಬೂಮರಾಂಗ್. ಅರ್ಥಾತ್ ತಿರುಗುಬಾಣ. ಅದು ಗುರಿ ತಪ್ಪಿದರೆ ಸೊಂಯ್ಯನೆ ತಿರುಗಿ ಮರಳಿ ಬಂದು ಬಾಣ ಬಿಟ್ಟವನನ್ನೇ ಕೋಮಾಕ್ಕೆ ಕಳಿಸುತ್ತದೆ. ವಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯ’ ಎಂದು ಹೆಸರಿಡುವ ಐಡಿಯಾ ಯಾರದೋ ಗೊತ್ತಿಲ್ಲ. ಆದರೆ ಸರಿಯಾದ ಲೆಕ್ಕಿಸಿ ಹೆಸರು ಆಯ್ಕೆ ಮಾಡುವ ಬದಲು, ‘ನೋಡು, ನಾನೆಂಥಾ ಬುದ್ಧಿವಂತ’ ಎಂದು ತೋರಿಸಲು ಯಾರೋ ಆ ಹೆಸರು ಆರಿಸಿದಂತಿದೆ. ಇಂಡಿಯ ಮತ್ತು ಇಂಡಿಯನ್ ಎಂಬುದರ ನಡುವೆ ಅಗಾಧ ವ್ಯತ್ಯಾಸವಿದೆ. ರಾಜಕೀಯ ಪಕ್ಷಗಳು ಇಂಡಿಯನ್. ಅದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಇರಲಿ, ಕಮ್ಯುನಿಸ್ಟ್ ಪಾರ್ಟಿ ಆ- ಇಂಡಿಯ ಇರಲಿ ಅಥವಾ ಭಾರತೀಯ ಜನತಾ ಪಾರ್ಟಿಯಿರಲಿ, ಅವೆಲ್ಲವೂ ಭಾರತದ ರಾಜಕೀಯ ಪಕ್ಷಗಳು. ಅದಕ್ಕೆ ವ್ಯತಿರಿಕ್ತವಾಗಿ ನಮ್ಮದೊಂದೇ ಪಕ್ಷ ‘ಇಂಡಿಯ’ ಎಂದು ಹೇಳಿಕೊಳ್ಳುವುದು ಎಷ್ಟು ಸರಿ? ೧೯೭೭ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಸೋತಿದ್ದಕ್ಕೆ ಅವರ ಕಟ್ಟರ್ ಬೆಂಬಲಿಗ ದೇವಕಾಂತ್ ಬರುವಾ ‘ಇಂದಿರಾ ಅಂದರೆ ಇಂಡಿಯ’ ಎಂದು ಪ್ರಚಾರ ಮಾಡಿದ್ದು ಕೂಡ ಒಂದು ಕಾರಣವಾಗಿತ್ತು. ಹಾಗೆಲ್ಲ ಒಬ್ಬ ವ್ಯಕ್ತಿಯನ್ನೋ, ಒಂದು ಪಕ್ಷವನ್ನೋ ದೇಶಕ್ಕೆ ಹೋಲಿಸುವುದನ್ನು ಭಾರತದ ಮತದಾರರು ಒಪ್ಪುವುದಿಲ್ಲ ಎಂಬ ಸಂದೇಶ ಆ ಫಲಿತಾಂಶದೊಂದಿಗೇ ರವಾನೆಯಾಗಿತ್ತು.

ಪ್ರಧಾನಿ ಮೋದಿ ಈ ಚರ್ಚೆಯನ್ನೇ ಸಣ್ಣದೊಂದು ಝಟಕಾ ನೀಡಿ ತಲೆಕೆಳಗು ಮಾಡಿಬಿಟ್ಟರು. ಅವರು ದೇಶದ ಹೆಸರನ್ನೇನೂ ಬದಲಿಸಲಿಲ್ಲ. ಬಿಜೆಪಿ ಸರಕಾರ ದೇಶದ ಹೆಸರು ಬದಲಿಸಲು ಹೊರಟಿದೆ ಎನ್ನುವವರ ಅಜ್ಞಾನಕ್ಕೆ ಮರುಕ ವ್ಯಕ್ತಪಡಿಸದೆ ಇನ್ನೇನು ಮಾಡಲಾದೀತು? ಬಿಡಿ. ನಮ್ಮ ದೇಶದ ಸಂವಿಧಾನದಲ್ಲಿ ಬರೆದಿರುವ ಮೊದಲ ವಾಕ್ಯ: ‘ಇಂಡಿಯ, ಅಂದರೆ ಭಾರತ…’ ಎಂದು. ಆ ವಾಕ್ಯವೇ ನಮ್ಮ ದೇಶಕ್ಕಿರುವ ಎರಡೂ ಹೆಸರನ್ನು ಅಧಿಕೃತಗೊಳಿಸಿದೆ. ಇಂಡಿಯ ಅಂದರೂ, ಭಾರತ ಅಂದರೂ ಅದೇ ತೂಕ. ಆದರೆ ಇಂಡಿಯ ಎಂಬ ಹೆಸರಿನ ಇತಿಹಾಸ ಇತ್ತೀಚಿನದು. ಇಂಡಸ್ ನದಿ ಅಥವಾ ಇಂಡಸ್‌ಸ್ತಾನ್ ಅಥವಾ ಹಿಂದುಸ್ತಾನದಿಂದ ಬಂದಿದ್ದು ಇಂಡಿಯ. ಆದರೆ ಭಾರತ ಎಂಬ ಹೆಸರಿಗೆ ಸುದೀರ್ಘ ಇತಿಹಾಸವಿದೆ. ಅದು ಈ ನೆಲದ ಭೌಗೋಳಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯೊಂದಿಗೆ ಬೆಸೆದುಕೊಂಡಿದೆ. ೧೯೪೯ರಲ್ಲೇ ಖ್ಯಾತ ಚಿಂತಕ ಎಚ್.ವಿ.ಕಾಮತ್ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಮಂಡಿಸಿದ್ದ ಪ್ರಸ್ತಾವನೆಯೇನಾದರೂ ಅಂಗೀಕಾರಗೊಂಡಿದ್ದರೆ ೨೦೨೩ರಲ್ಲಿ ಅದರ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುತ್ತಿತ್ತು. ಅವರು ಸಂವಿಧಾನದಲ್ಲಿ ‘ಭಾರತ, ಅಥವಾ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯ…’ ಎಂದು ಬರೆಯಬೇಕೆಂದು ತಿದ್ದುಪಡಿ ಸೂಚಿಸಿದ್ದರು.

ಅದು ಪಾಸಾಗಲಿಲ್ಲ. ನನ್ನ ಬೆಂಬಲವಿರುವುದು ಅಂಬೇಡ್ಕರ್ ಅವರಿಗೆ. ಅವರೇ ನಮ್ಮ ಸಂವಿಧಾನದಲ್ಲಿ ‘ಇಂಡಿಯ, ಅಂದರೆ ಭಾರತ…’ ಎಂದು ಬರೆಯಬೇಕೆಂದು ಸೂಚಿಸಿದರು. ಅದು ಪ್ರಬುದ್ಧವಾದ ಚಿಂತನೆ.
ಅವೆರಡೂ ಹೆಸರುಗಳು ಸಮಾನ ಎಂಬುದನ್ನು ಅದು ಸೂಚಿಸುತ್ತದೆ. ‘ಭಾರತ ಅಥವಾ ಇಂಗ್ಲಿಷ್‌ನಲ್ಲಿ ಇಂಡಿಯ’ ಎಂದೇನಾದರೂ ಬರೆದಿದ್ದರೆ ಅದರಲ್ಲೊಂದು ವಿರೋಧಾಭಾಸವಿರುತ್ತಿತ್ತು. ನಿಮಗೆ ನೆನಪಿರಲಿ, ರವೀಂದ್ರನಾಥ್ ಟ್ಯಾಗೋರರು ರಾಷ್ಟ್ರಗೀತೆಯಲ್ಲಿ ‘ಇಂಡಿಯ ಭಾಗ್ಯ ವಿಧಾತ’ ಎಂದು ಬರೆಯಲಿಲ್ಲ, ‘ಭಾರತ ಭಾಗ್ಯ ವಿಧಾತ’ ಎಂದು ಬರೆದರು (ಇದಕ್ಕೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪ್ರತಿಕ್ರಿಯೆಯನ್ನು ಎದುರುನೋಡುತ್ತಿದ್ದೇವೆ). ಈ ದೇಶದ ಪ್ರತಿಯೊಬ್ಬ ಪ್ರಧಾನಿಯೂ ಭಾರತ ಎಂಬ ಹೆಸರನ್ನು ಪ್ರೀತಿಯಿಂದ, ಅಷ್ಟೇ ಸಹಜ ಮತ್ತು ಮುಕ್ತವಾಗಿ ಬಳಸಿದ್ದಾರೆ. ೬ನೇ ಪ್ರಧಾನಿ ಚರಣ್ ಸಿಂಗ್, ಇಂಡಿಯ ಮತ್ತು ಭಾರತ ಎಂಬ ಹೆಸರುಗಳನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದರು. ಅವರ ಪ್ರಕಾರ ಇಂಡಿಯ ಅಂದರೆ ಶ್ರೀಮಂತರ ದೇಶ, ಭಾರತ ಅಂದರೆ ಕೃಷಿಕರ ದೇಶವಾಗಿತ್ತು. ಇಂಥ ಚರ್ಚೆಗೆ ಬಹಳ ಆಯಾಮಗಳಿವೆ. ಮೋದಿಯವರು ದಕ್ಷಿಣ ಆಫ್ರಿಕಾಕ್ಕೆ ಭೇಟಿಯಿತ್ತಾಗ ‘ಭಾರತದ’ ಪ್ರಧಾನಿಯೇ ಆಗಿದ್ದರು. ಅದನ್ನು ಯಾರೂ ಗಮನಿಸಲಿಲ್ಲ. ಬಹುಶಃ ಸೋಷಿಯಲ್ ಮೀಡಿಯಾಗಳಲ್ಲಿ ಗುಲ್ಲೆಬ್ಬಿಸುವವರೆಗೆ ನಮಗೆ ಎಚ್ಚರವಾಗುವುದಿಲ್ಲ. ಕೆಲ ರಾಜಕೀಯ ಪ್ರತಿಕ್ರಿಯೆಗಳಂತೂ ಮಜವಾಗಿವೆ. ವಿಪಕ್ಷಗಳ ಮೈತ್ರಿಕೂಟವು ತನ್ನ ಹೆಸರನ್ನು ‘ಭಾರತ’ ಎಂದು ಬದಲಿಸಿಕೊಂಡರೆ ಕೇಂದ್ರ ಸರಕಾರ ಈ ದೇಶದ ಹೆಸರನ್ನು ‘ಬಿಜೆಪಿ’ ಎಂದು ಬದಲಿಸುತ್ತದೆಯೇ ಎಂದೊಬ್ಬರು ಕೇಳಿದ್ದರು. ಇದಕ್ಕಿಂತ ಕೆಟ್ಟತರ್ಕ ಮತ್ತೆಲ್ಲಾದರೂ ಸಿಕ್ಕೀತೇ! ಇನ್ನೊಬ್ಬ ನಾಯಕರು ‘ವಿಪಕ್ಷಗಳ ಮೈತ್ರಿಕೂಟದ ಹೆಸರು ಇಂಡಿಯ ಮಾತ್ರವಲ್ಲ, ಭಾರತ ಎಂದು ಕೂಡ ಹೌದು. ಅದರ ಪೂರ್ಣ ಹೆಸರು ‘ಬ್ರಿಂಗ್ ಹಾರ್ಮೊನಿ, ಎಮಿಟಿ, ರಿಕನ್ಸಿಲಿಯೇಷನ್ ಅಂಡ್ ಟ್ರಸ್ಟ್ (ಭಾರತ್)’ ಎಂದು ಹೇಳಿದರು. ಇಬ್ಬಂದಿತನದ ಮನುಷ್ಯನೊಬ್ಬ ರೊಚ್ಚಿಗೆದ್ದು ಕಿರುಚಿಕೊಂಡ ವಾಕ್ಯದಂತೆ ಇದು ಕೇಳಿಸುತ್ತದೆಯಲ್ಲವೇ?! ‘ಇಂಡಿಯ, ದಟ್ ಈಸ್ ಭಾರತ್…’ ಎಂಬ ವಾಕ್ಯ ಈ ದೇಶದ ವೈಭವವನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ. ಯಾವುದೋ ರಾಜಕೀಯ ಹೊಂದಾಣಿಕೆಯ ಅಪಸ್ವರವನ್ನು ಇಂಥ
ಅದ್ಭುತ ವಾಕ್ಯದೊಂದಿಗೆ ಹೋಲಿಸುವುದಕ್ಕೆ ಸಾಧ್ಯವಿಲ್ಲ ಬಿಡಿ.

***

ಪ್ರಾಕ್ಟಿಕಲ್ ಆಗಿ ನೋಡಿದರೆ ಪ್ರಜಾಪ್ರಭುತ್ವಕ್ಕೆ ಅದರದೇ ಆದ ಬೇಡಿಕೆಗಳಿವೆ. ಅಮೆರಿಕದಲ್ಲಿ ೨ ವರ್ಷಕ್ಕೊಮ್ಮೆ ದೇಶಾದ್ಯಂತ ಬೇರೆ ಬೇರೆ ಸರಕಾರಗಳಿಗೆ ಪೂರ್ವನಿಗದಿತ ದಿನಾಂಕದಂದು ಚುನಾವಣೆಗಳು ನಡೆಯುತ್ತವೆ. ಯುರೋಪ್‌ನಲ್ಲಿನ ಪ್ರಜಾ ಪ್ರಭುತ್ವ ಇನ್ನೂ ಫ್ಲೆಕ್ಸಿಬಲ್, ಆದರೆ ಐರೋಪ್ಯ ದೇಶಗಳಲ್ಲಿ ಕೆಲ ಪ್ರಾಂತಗಳೇ ಒಂದೊಂದು ದೇಶದಷ್ಟು ದೊಡ್ಡದಾಗಿವೆ. ಕೆಲ ವಂಚಕ ಪ್ರಜಾಪ್ರಭುತ್ವಗಳ ಒಳಗೆ ಅಪಾಯ ಕೂಡ ಅಡಗಿದೆ.
ಅಲ್ಲಿ ಒಂದು ದೇಶ, ಒಂದು ಚುನಾವಣೆ, ಒಂದೇ ಫಲಿತಾಂಶ. ಆಫ್ರಿಕಾ ಖಂಡದಲ್ಲಿರುವ ಗಾಬೋನ್ ದೇಶದಲ್ಲಿ ಇತ್ತೀಚೆಗೆ ಅಲಿ ಬೊಂಗೋ ಒಂಡಿಂಬಾ ರಾಜಾಳ್ವಿಕೆಯನ್ನು ಜನರು ಕಿತ್ತೊಗೆದಿದ್ದಾರೆ. ಅನಾಮತ್ತು ೫೩ ವರ್ಷಗಳಿಂದ ಇದೇ ರಾಜಮನೆತನ ಪ್ರತಿ ಚುನಾವಣೆಯಲ್ಲೂ ‘ಗೆಲ್ಲುತ್ತಾ’ ಬಂದಿತ್ತು. ಗೆದ್ದು ಮಾಡಿದ್ದೇನು ಗೊತ್ತೇ? ದೇಶದ ಸಂಪತ್ತನ್ನು ಕೊಳ್ಳೆಹೊಡೆದು ತನ್ನ ಮಾಲೀಕ ದೇಶವಾದ ಫ್ರಾನ್ಸ್ ಜತೆ ಹಂಚಿಕೊಳ್ಳುತ್ತಿತ್ತು. ಇನ್ನು, ಚೀನಾದಂಥ ಸರ್ವಾಧಿಕಾರ ವ್ಯವಸ್ಥೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮತ್ತು ಹಲವು ನಿಗೂಢ ಕಣ್ಮರೆಗಳು ಅಡಗಿವೆ. ನಾನಿದನ್ನು ಢಾಕಾದಲ್ಲಿ ಕುಳಿತು ಬರೆಯುತ್ತಿದ್ದೇನೆ. ಇಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ಆಡಳಿತ ವ್ಯವಸ್ಥೆಗೆ ಒಂದಷ್ಟು ಸ್ಥಿರತೆ ತಂದುಕೊಡುವವರೆಗೂ ‘ಒಂದು ದೇಶ, ಮಿಲಿಟರಿ ಆಳ್ವಿಕೆ ಇಲ್ಲದಿರುವಾಗ ಅಪರೂಪಕ್ಕೊಮ್ಮೆ ಚುನಾವಣೆ’ ಎಂಬ ವ್ಯವಸ್ಥೆಯಿತ್ತು. ಇವುಗಳಿಗೆ ಹೋಲಿಸಿದರೆ ಭಾರತದ ಪ್ರಜಾಪ್ರಭುತ್ವ ಅನುಪಮ, ಅದ್ವಿತೀಯ. ಆದರೆ ಇದಕ್ಕೆ ತುಂಬಾ ಹಸಿವು ಮತ್ತು ಆಗಾಗ ಸುಸ್ತಾಗಿಬಿಡುತ್ತದೆ. ಆಡಳಿತಕ್ಕೆ ಬೇಕಾದ ಸಮಯವನ್ನು ಇದು ನುಂಗಿಹಾಕುತ್ತದೆ. ಮತದಾರರು ಆಗಾಗ ರೋಲರ್ ಕೋಸ್ಟರ್‌ನಲ್ಲಿ ರಾಜಕೀಯ ಪಕ್ಷಗಳನ್ನು ಹಾಕಿ ರುಬ್ಬುತ್ತಾರೆ. ಇಲ್ಲಿ ದಯವಿಟ್ಟು ಒಂದು ದೇಶ, ಒಂದು ಚುನಾವಣೆ, ಮತ್ತು ಕೇವಲ ಒಂದೇ ಒಂದು ಚುನಾವಣಾ ಪೂರ್ವ ಸಮೀಕ್ಷೆಯನ್ನು ಜಾರಿಗೆ ತನ್ನಿ, ಪ್ಲೀಸ್!

***
ಮಹಾತ್ಮ ಗಾಂಧಿ ತಮ್ಮ ಜೀವಮಾನದಲ್ಲಿ ಭೇಟಿಯಾಗಿದ್ದು ಒಬ್ಬನೇ ಒಬ್ಬ ಚೀನಿ ನಾಯಕನನ್ನು. ಆತ ಜನರಲಾಲಿಸ್ಸಿಮೋ ಚಿಯಾಂಗ್ ಕಾಯ್-ಶೇಕ್. ೧೯೪೨ರ ಆರಂಭದಲ್ಲಿ ಆತ ಹೇಳದೆ ಕೇಳದೆ ಭಾರತಕ್ಕೆ ಬಂದುಬಿಟ್ಟಿದ್ದ. ಕಾರಣ, ಬ್ರಿಟಿಷರು ವಿಶ್ವ ಮಹಾಯುದ್ಧವನ್ನು ಗೆಲ್ಲುವವರೆಗೂ ನಿಮ್ಮ ಸ್ವಾತಂತ್ರ್ಯ ಹೋರಾಟವನ್ನು ನಿಲ್ಲಿಸಿ ಎಂದು ಗಾಂಧಿಜಿಯ ಮನವೊಲಿಸಲು. ಆತನ ಭೇಟಿಗೆ ಗಾಂಧಿಜಿ ಸಿದ್ಧರಿರಲಿಲ್ಲ. ಆದರೆ ಒಂದೇ ಒಂದು ಸಲ ಮಾತನಾಡಿ ಎಂದು ನೆಹರು ಒತ್ತಡ ಹಾಕಿದ್ದರಿಂದ ಭೇಟಿಗೆ ಒಪ್ಪಿದ್ದರು. ಗಾಂಧಿಜಿಗೆ ಚೀನಾದ ಈ ಸ್ವಾರ್ಥತಂತ್ರ ಮೊದಲೇ ಗೊತ್ತಿತ್ತು. ಅದನ್ನೇ ನೇರವಾಗಿ ಚಿಯಾಂಗ್‌ಗೂ ತಿಳಿಸಿದರು. ‘ನಿಮ್ಮದು ಎಲ್ಲರ ಹಿತಾಸಕ್ತಿಗೆ ಪೂರಕವಾದ ಚಿಂತನೆ ಅಲ್ಲ ಸ್ವಾಮಿ, ಇದು ಬರೀ ಸ್ವಾರ್ಥಚಿಂತನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಆ ಭೇಟಿಗಾಗಿ ಗಾಂಧಿಜಿ ಕಲ್ಕತ್ತಾಗೆ ಹೋಗಿದ್ದರು. ಒಂದು ದಿನದ ಮಟ್ಟಿಗೆ ಚೀನಿ ಅತಿಥಿಯನ್ನು ಭೇಟಿಯಾಗುವುದಕ್ಕೆಂದೇ ಅಲ್ಲಿಗೆ ಪ್ರಯಾಣಿಸಿದ್ದರು. ನಿಖರವಾಗಿ ಹೇಳುವುದಾದರೆ, ಕೇವಲ ಒಂದು ಹಗಲಿನ ಭೇಟಿಗಾಗಿ ಹೋಗಿದ್ದರು. ನಂತರ ಅದೇ ವರ್ಷದ ಆಗಸ್ಟ್‌ನಲ್ಲಿ ಗೋವಾಲಿಯಾ ತಂಕ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಆ ಭೇಟಿಯ ಕುರಿತು ತಮ್ಮ ಅಭಿಪ್ರಾಯವನ್ನು ಗಾಂಧಿಜಿ ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದರು. ಆ ಅಧಿವೇಶನದಲ್ಲೇ ‘ಕ್ವಿಟ್ ಇಂಡಿಯಾ’ ಗೊತ್ತುವಳಿ ಅಂಗೀಕಾರವಾದದ್ದು. ಚಿಯಾಂಗ್ ಶೇಕ್‌ನನ್ನು ಗಾಂಧಿಜಿ ನಡೆಸಿಕೊಂಡ ರೀತಿ ಬಹಳ ಕಹಿಯಾಗಿತ್ತು. ಆದರೆ ಅವನ ಬಗ್ಗೆ ಅವರಾಡಿದ ಮಾತು ಡಿಪ್ಲೊಮ್ಯಾಟಿಕ್ ಆಗಿತ್ತು. ‘ಚಿಯಾಂಗ್ ಕಾಯ್-ಶೇಕ್‌ನನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಅವನನ್ನು ಎಂಥಾ ಅಧ್ಯಯನದಿಂದಲೂ ತಿಳಿದುಕೊಳ್ಳಲು ಅಸಾಧ್ಯ’ ಎಂದಿದ್ದರು ಗಾಂಧಿಜಿ. ಆದರೆ ಚೀನಾದ ಬಗ್ಗೆ ನೆಹರುರಿಗೆ ಬೇರೆ ಬೇರೆ ಚಿಂತನೆಗಳಿದ್ದವು. ಅವುಗಳ ಪರಿಣಾಮಗಳೂ ಬೇರೆಯೇ
ಆಗಿದ್ದವು.

***
ಢಾಕಾದಲ್ಲಿ ಟ್ರಾಫಿಕ್ ಎಂಬುದು ಜಾಮ್ (ಹಣ್ಣಿನ ಪಾಕ) ಅಲ್ಲ. ಅಲ್ಲಿನ ವಾಹನ ದಟ್ಟಣೆಯನ್ನು ಟ್ರಾಫಿಕ್ ಜಾಮ್‌ಗಿಂತ ಭೀಕರವಾದ ಶಬ್ದದಲ್ಲೇ ಕರೆಯಬೇಕು. ವಿಮಾನ ನಿಲ್ದಾಣದಿಂದ ಜನದಟ್ಟಣೆಯ ನಗರದ ಇನ್ನೊಂದು ಬದಿಗಿರುವ ಢಾಕಾ ಕ್ಲಬ್‌ಗೆ ಹೋಗಲು ೨ ತಾಸಿಗಿಂತ ಹೆಚ್ಚು ಸಮಯ ಬೇಕು. ಅಷ್ಟೊತ್ತಿಗೆ ನಿಮ್ಮ ಮೂತ್ರಕೋಶದ ಸುತ್ತ ನೋವು ಬಂದಿರುತ್ತದೆ. ಆ ವಾಹನ ದಟ್ಟಣೆಯಲ್ಲಿ ದಿನನಿತ್ಯ ಬಸ್ ಓಡಿಸುವ ಡ್ರೈವರ್‌ಗಳು ಬಹುಶಃ ಮೂತ್ರಕೋಶವನ್ನು ಉಕ್ಕಿನಿಂದ ಮಾಡಿಸಿಕೊಂಡಿರಬೇಕು. ಆ ಊರಿನಲ್ಲಿ ಲೇಟಾಗಿ ಬರುವುದಕ್ಕೆ ಎಲ್ಲರಿಗೂ ಪ್ರಶ್ನಾತೀತ ಕಾರಣವೊಂದಿರುತ್ತದೆ. ಅದು ಟ್ರಾಫಿಕ್. ಆದ್ದರಿಂದಲೇ ಅಲ್ಲಿನ
ಹೋಟೆಲ್‌ಗಳು ಗ್ರಾಹಕರಿಗೆ ‘ವಿಮಾನದ ಸಮಯಕ್ಕಿಂತ ಮೂರುವರೆ ತಾಸು ಮೊದಲೇ ಇಲ್ಲಿಂದ ಹೊರಡಿ’ ಎಂಬ ಸಲಹೆಯನ್ನು ತಪ್ಪದೇ ನೀಡುತ್ತವೆ: ಇದ್ದಕ್ಕಿದ್ದಂತೆ ಕಳೆದ ಶನಿವಾರ ಈ ಪರಿಸ್ಥಿತಿ ಭೂತಕಾಲಕ್ಕೆ
ಸೇರಿಬಿಟ್ಟಿದೆ. ಪ್ರಧಾನಿ ಶೇಖ್ ಹಸೀನಾ ಢಾಕಾದ ಹೃದಯ ಭಾಗದಿಂದ ಎಕ್ಸ್‌ಪ್ರೆಸ್ ಮೇಲ್ಸೇತುವೆಯೊಂದನ್ನು ಉದ್ಘಾಟಿಸಿದ್ದಾರೆ. ಅದರಲ್ಲಿ ಹೋದರೆ ವಿಮಾನ ನಿಲ್ದಾಣಕ್ಕೆ ೧೨ ನಿಮಿಷದಲ್ಲಿ ಹೋಗಬಹುದು! ಇದೇನು ಮ್ಯಾಜಿಕ್ಕೇ, ಕ್ರಾಂತಿಯೇ? ನಿಜವಾಗಿಯೂ ಕ್ರಾಂತಿಯೇ. ಪವಾಡ ಎಂದರೆ ದೈವಿಕವಾಗುತ್ತದೆ. ಈ ಕ್ರಾಂತಿ ಮಾಡಿದ್ದು ಒಬ್ಬ ಮಹಿಳಾ ಪ್ರಧಾನಿ ಶೇಖ್ ಹಸೀನಾ. ವಿಮಾನ ನಿಲ್ದಾಣಕ್ಕೆ ಶರವೇಗದಲ್ಲಿ ಹೋಗುತ್ತಿದ್ದಾಗ ಕಾರಿನ ಡ್ರೈವರ್ ಬಳಿ ‘ನಿಮ್ಮ ಜೀವಮಾನದಲ್ಲಿ ಯಾವತ್ತಾದರೂ ಇಂಥ ಬದಲಾವಣೆ ಆಗಬಹುದು ಎಂದುಕೊಂಡಿದ್ದಿರಾ?’ ಎಂದು ಕೇಳಿದೆ. ಆತನಿಗೂ ಇದೊಂದು ಪವಾಡವೇ ಆಗಿತ್ತು.

***
ಮನುಷ್ಯ ಬಹಳ ನಿಗೂಢ ಆಸಾಮಿ. ಸ್ಟೀವ್ ಜಾಬ್ಸ್ ಕೌಂಪೌನೋ-ಬಿಯಾದಿಂದ ಬಳಲುತ್ತಿದ್ದರಂತೆ. ಅಂದರೆ ಅವರಿಗೆ ಬಟನ್‌ಗಳನ್ನು ನೋಡಿದರೆ ಹೆದರಿಕೆ. ಅದರಲ್ಲೂ ಸಿಂಗಲ್ ಬಟನ್ ನೋಡಿದರೆ ಇನ್ನೂ ಹೆಚ್ಚು ಹೆದರಿಕೆಯಾಗುತ್ತಿತ್ತು. ಹಾಗಾಗಿ ಆ ಮನುಷ್ಯನನ್ನು ಶೇರ್ವಾನಿಗಳಿಂದ ತುಂಬಿದ ಭಾರತೀಯ ಮದುವೆಗಳಿಗೆ ಕರೆಯಲೇಬಾರದು. ಈಗ ಅವರೇ ಇಲ್ಲ ಬಿಡಿ. ಅದೃಷ್ಟವಶಾತ್, ಸ್ಟೀವ್ ಜಾಬ್ಸ್ ತನ್ನ ಸೃಷ್ಟಿಗೆ ತಾನೇ ಬಲಿಪಶುವಾಗಿದ್ದರು! ಏನದು ಸೃಷ್ಟಿ? ಆಪಲ್ ಐಫೋನ್. ಅದಕ್ಕಿದ್ದುದು ಒಂದೇ ಬಟನ್. ನಾನಿದನ್ನು ಓದಿದ್ದು ಇಂಟರ್‌ನೆಟ್‌ನಲ್ಲಿ. ಫೇಕ್ ಇರಲಾರದು ಅಂದುಕೊಂಡಿದ್ದೇನೆ.
(ಲೇಖಕರು ಹಿರಿಯ ಪತ್ರಕರ್ತರು)