Wednesday, 30th October 2024

Prakash Shesharaghavachar Column: ಏಕಕಾಲಿಕ ಚುನಾವಣೆಯ ಸಾಧಕ- ಬಾಧಕಗಳು

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್‌

ಬಿಜೆಪಿಯ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ, ಚುನಾವಣಾ ವ್ಯವಸ್ಥೆಯ ಸುಧಾರಣೆಯ ಭಾಗ ವಾಗಿದ್ದ ‘ಒಂದು ದೇಶ, ಒಂದು ಚುನಾವಣೆ’ ಎಂಬ ಆಶ್ವಾಸನೆಯನ್ನು ನೀಡಲಾಗಿತ್ತು. ಇದನ್ನು ಕಾರ್ಯ ಗತಗೊಳಿಸಲು ರಚಿಸಲಾದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ರವರ ನೇತೃತ್ವದ ಎಂಟು ಸದಸ್ಯರ ಉನ್ನತ ಮಟ್ಟದ ಸಮಿತಿಯು ಸಲ್ಲಿ ಸಿದ ವರದಿಯನ್ನು ಕೇಂದ್ರ ಸಂಪುಟವು ಒಪ್ಪಿಕೊಂಡಿತು. ತತ್ಪರಿಣಾಮವಾಗಿ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆಯ ಅನುಷ್ಠಾನಕ್ಕೆ ಎನ್‌ಡಿಎ ಸರಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಕಳೆದ 10 ವರ್ಷಗಳಲ್ಲಿ ಮೋದಿ ಸರಕಾರವು ದೇಶಾದ್ಯಂತ ಹಲವಾರು ಏಕೀಕೃತ ಸೇವೆಗಳಿಗೆ ಚಾಲನೆ ನೀಡಿದೆ. ಪ್ರಮುಖವಾಗಿ ಸೇನೆಯಲ್ಲಿ ‘ಒಂದು ಶ್ರೇಣಿ, ಒಂದು ಪಿಂಚಣಿ’ ಉಪಕ್ರಮವನ್ನು ಜಾರಿಗೊಳಿಸಿ, ಸೇನೆಯ ದಶಕಗಳ ಬೇಡಿಕೆಯನ್ನು ಅದು ನೆರವೇರಿಸಿತು. ಇನ್ನು, ಜಿಎಸ್‌ಟಿ ಪದ್ಧತಿಯನ್ನು ಜಾರಿಗೆ ತಂದು ‘ಒಂದು ದೇಶ, ಒಂದು ತೆರಿಗೆ’ ಪರಿಕಲ್ಪನೆಗೆ ಚಾಲನೆ ನೀಡಿರುವುದು ಗೊತ್ತಿ ರುವಂಥದ್ದೇ. ಇದೇ ರೀತಿಯಲ್ಲಿ, ಆಪತ್ಕಾಲ ಮತ್ತು ಅವಘಡದ ವೇಳೆ ತುರ್ತುಸೇವೆಗಾಗಿ 112 ಸಹಾಯವಾಣಿ ಸಂಖ್ಯೆ ಜಾರಿಗೆ ಬಂದಿದೆ; ವಲಸೆ ಕಾರ್ಮಿಕರ ಹಿತದೃಷ್ಟಿಯಿಟ್ಟುಕೊಂಡು ‘ಒಂದು ದೇಶ, ಒಂದು ಪಡಿತರ ಚೀಟಿ’ ವ್ಯವಸ್ಥೆ ಜಾರಿಯಾಗಿದೆ. ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆಂದು ದೇಶಾದ್ಯಂತ ‘ನೀಟ್’ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

‘ಆಯುಷ್ಮಾನ್ ಭಾರತ’ ಮೂಲಕ ದೇಶಾದ್ಯಂತ ಆರೋಗ್ಯ ವಿಮೆ ಚಾಲ್ತಿಯಲ್ಲಿದೆ. ಹೀಗೆ ಹತ್ತು ಹಲವು ಏಕೀಕೃತ
ಸೇವೆಗಳನ್ನು ಒದಗಿಸುವ ಮೂಲಕ ದೇಶವನ್ನು ಜೋಡಿಸುವ ಕೆಲಸವೂ ನಡೆದಿದೆ. ‘ಒಂದು ದೇಶ, ಒಂದು ಚುನಾವಣೆ’ ಅನುಷ್ಠಾನಕ್ಕೆ ಕೋವಿಂದ್ ನೇತೃತ್ವದ ಸಮಿತಿಯು 11 ಶಿಫಾರಸುಗಳನ್ನು ಮಾಡಿದೆ.

ಇವುಗಳಲ್ಲಿ- ಲೋಕಸಭೆ ಮತ್ತು ವಿಧಾನಸಭೆ ಗಳಿಗೆ ಒಟ್ಟಿಗೆ ಮತದಾನ, ಅದಾಗಿ 100 ದಿನದ ತರುವಾಯ ಸ್ಥಳೀಯ ಸಂಸ್ಥೆ ಮತ್ತು ಪಂಚಾಯ್ತಿಗಳಿಗೆ ಚುನಾವಣೆ ನಡೆಸುವುದು; ಏಕಕಾಲಿಕ ಚುನಾವಣೆಗಾಗಿ ಸಂವಿಧಾನದ ೮೩ನೇ ವಿಧಿ (ಸಂಸತ್ತಿನ ಸದನಗಳ ಅವಧಿ) ಮತ್ತು 172ನೇ ವಿಧಿ (ರಾಜ್ಯ ಶಾಸಕಾಂಗಗಳ ಅವಧಿ) ಮತ್ತು ‘ಅನುಚ್ಛೇದ 324-ಎ’ಗೆ ಸಂಸತ್ತಿನಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಡಿಸುವುದು; ಒಂದೇ ಮತದಾರರ ಪಟ್ಟಿ ಮತ್ತು ಫೋಟೋ ಗುರುತಿನ ಚೀಟಿ ಯನ್ನು ಸಕ್ರಿಯಗೊಳಿಸಲು 325ನೇ ವಿಧಿಗೆ ತಿದ್ದುಪಡಿ; ದೆಹಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ರಾಜಧಾನಿ ಕಾಯ್ದೆಯ ಸೆಕ್ಷನ್ 5ಕ್ಕೆ ಮತ್ತು ಪುದುಚೇರಿಗೆ ಸಂಬಂಧಿಸಿದಂತೆ ‘ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ, 1963’ಕ್ಕೆ ತಿದ್ದುಪಡಿ- ಇವು ಪ್ರಮುಖವಾಗಿವೆ.

ರಾಜೀವ್ ಗಾಂಧಿಯವರು 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ತರುವಾಯ, ‘ಒಂದು ದೇಶ, ಒಂದು ಚುನಾವಣೆ’ ಅತಿದೊಡ್ಡ ಚುನಾವಣಾ ಸುಧಾರಣೆ ಯಾಗಿದೆ. ಇದಕ್ಕಿರುವ ಲಾಭವನ್ನು ಪರಿಗಣಿಸಿದರೆ,
ಈ ಉಪಕ್ರಮವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವುದರಲ್ಲಿ ಸಂದೇಹ ವಿಲ್ಲ. 1952ರಿಂದ 1967ರ ತನಕ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತಿದ್ದವು. ನಂತರ ಆರಂಭವಾದ ಮಧ್ಯಂತರ ಚುನಾವಣೆಗಳ ಹಾವಳಿ ಯಿಂದಾಗಿ ಈ ಸರಪಳಿಯು ಮುರಿದು ಹೋಯಿತು. ಹೀಗೆ ಒಂದು ಕಾಲಕ್ಕೆ 20 ರಾಜ್ಯಗಳಲ್ಲಿ ಒಟ್ಟಿಗೆ ಚುನಾವಣೆ ನಡೆಯುತ್ತಿತ್ತು; ಈ ಸಂಖ್ಯೆಯು 2024ರಲ್ಲಿ 7 ರಾಜ್ಯಗಳಿಗೆ ಕುಸಿದಿದೆ. ಈ ಕುಸಿತವು ರಾಜ್ಯಮಟ್ಟದಲ್ಲಿ ರಾಜಕೀಯ ಅಸ್ಥಿರತೆಗೂ ಕಾರಣವಾಗುತ್ತದೆ.

ದೇಶದಲ್ಲಿ ಸದಾ ಒಂದಿಲ್ಲೊಂದು ಚುನಾವಣೆ ನಡೆಯುತ್ತಲೇ ಇರುವುದು ಸಾಮಾನ್ಯವಾಗಿಬಿಟ್ಟಿದೆ. ಇಂಥ ಪ್ರತಿ
ಸಂದರ್ಭದಲ್ಲೂ ಚುನಾವಣಾ ನೀತಿ ಸಂಹಿತೆಯ ಜಾರಿಯಾಗಿ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತ ವಾದರೆ, ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲು ಕೇಂದ್ರವು ಹಿಂಜರಿಯುವಂತಾಗುತ್ತದೆ. ಇದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. 2009 ರಿಂದ 2024ರ ನಡುವಿನ ಅವಧಿಯಲ್ಲಿ ಒಂದು ಲೋಕ ಸಭಾ ಚುನಾವಣೆ ಮತ್ತು ವಿವಿಧ ಕಾಲಘಟ್ಟಗಳಲ್ಲಿ 30 ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆದಿದ್ದವು ಎಂಬುದಿಲ್ಲಿ ಗಮನಾರ್ಹ.

1951-52ರಲ್ಲಿ 68 ಹಂತಗಳಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಆದ ವೆಚ್ಚವು 10.5 ಕೋಟಿ ರುಪಾಯಿಯಷ್ಟಿದ್ದರೆ, 2019ರಲ್ಲಿ ಈ ವೆಚ್ಚವು 500000 ಕೋಟಿಗೆ ತಲುಪಿತು. 2024ರ ಚುನಾವಣಾ ವೆಚ್ಚವು 1 ಲಕ್ಷ ಕೋಟಿಯನ್ನು ದಾಟಿದೆ ಎನ್ನ ಲಾಗಿದೆ. ಆನಂತರ ನಡೆಯುವ ವಿಧಾನಸಭಾ ಚುನಾವಣೆ ಗಳಿಗೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 202 ಕೋಟಿ ರು. ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ.

ಒಂದು ಅಂದಾಜಿನ ಪ್ರಕಾರ, 2024ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಿಂದಾಗಿರುವ ಒಟ್ಟು ವೆಚ್ಚ 1.35 ಲಕ್ಷ ಕೋಟಿಯಷ್ಟಿದ್ದರೆ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಅವು ಮಾಡಿರುವ ವೆಚ್ಚ 500 ಕೋಟಿಯನ್ನು ದಾಟಿದೆಯಂತೆ (224 ಅಭ್ಯರ್ಥಿಗಳ ವೈಯಕ್ತಿಕ ವೆಚ್ಚವು ಸೇರ್ಪಡೆಯಾದರೆ ಈ ಮೊತ್ತವು ಕನಿಷ್ಠ 3000 ಕೋಟಿ ಯನ್ನು ದಾಟುತ್ತದೆ). ಯಥಾಪ್ರಕಾರ, ಸುಧಾರಣೆಯನ್ನು ವಿರೋಧಿಸುವುದನ್ನೇ ಹವ್ಯಾಸ ಮಾಡಿ ಕೊಂಡಿರುವ ‘ಇಂಡಿಯ’ ಮೈತ್ರಿ ಕೂಟದ ಪಕ್ಷಗಳು ಹಾಗೂ ಸುಧಾರಣಾ ವಿರೋಧಿಗಳು, ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಗೆ ಅಪಸ್ವರ ತೆಗೆದಿದ್ದಾರೆ.

‘ಎರಡೂ ಚುನಾವಣೆಗಳು ಒಟ್ಟಿಗೆ ನಡೆದರೆ ಕೇಂದ್ರದ ಆಡಳಿತ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತದೆ ಮತ್ತು ಪ್ರಾದೇಶಿಕ ಹಿತಾಸಕ್ತಿಗೆ ಹಿನ್ನಡೆಯಾಗುತ್ತದೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ’ ಎಂಬುದು ಇವರ ತಕರಾರು. ‘ಈ ಪರಿಕಲ್ಪನೆಯು ಸಂವಿಧಾನ-ವಿರೋಧಿ, ಇದರಿಂದ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆಯಾಗುತ್ತದೆ’ ಎಂಬುದು ಇನ್ನು ಕೆಲವರ ವಾದ. ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಲೇಖನವೊಂದರಲ್ಲಿ, ‘ಈ ಪ್ರಸ್ತಾ ವನೆಯು ಸಂವಿಧಾನದ ಮೂಲಸ್ವರೂಪಕ್ಕೆ ವಿರುದ್ಧವಾಗಿದೆ. ಇದ ರಿಂದಾಗಿ ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚು ಮತ ಹರಿಯುತ್ತದೆ. ಹಾಗಿಲ್ಲವಾದರೆ 2024ರಲ್ಲಿ ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆದರೆ, ಒಡಿಶಾದಲ್ಲಿ 2004ರಿಂದ ಲೋಕಸಭೆಯ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದ್ದು, ಪ್ರತಿ ಬಾರಿಯೂ ರಾಜ್ಯದಲ್ಲಿ ಬಿಜೆಡಿ ಅಧಿಕಾರಕ್ಕೆ ಬರುತ್ತಿತ್ತು ಎಂಬ ಸತ್ಯವನ್ನು ಅವರು ಮರೆಮಾಚಿದ್ದಾರೆ. ಈ ಬಾರಿಯೂ 7 ವಿಧಾನಸಭೆಗಳು ಒಟ್ಟಿಗೆ ಚುನಾವಣೆಗೆ ಹೋಗಿದ್ದವು, ಆಗ ಎಲ್ಲಿಯೂ ‘ಇದು ಸಂವಿಧಾನ ವಿರೋಧಿ’ ಎಂಬ ದನಿಯೇ ಬರಲಿಲ್ಲ.

ಚುನಾವಣೆಗಳು ಪ್ರತ್ಯೇಕವಾಗಿದ್ದು ವಿಧಾನಸಭೆಗಳ ವಿಸರ್ಜನೆಯಿಂದ. ಜತೆಗೆ, 1998 ಮತ್ತು 99ರಲ್ಲಿ ಲೋಕಸಭೆಗೆ ಸತತ ವಾಗಿ 2 ಬಾರಿ ಚುನಾವಣೆ ನಡೆದು ಎಲ್ಲವನ್ನೂ ಅಸ್ತವ್ಯಸ್ತ ಗೊಳಿಸಿತು. ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಪ್ರಶ್ನಿಸು ವವರು ಕರ್ನಾಟಕದಲ್ಲಿ 1999 ಮತ್ತು 2004ರಲ್ಲಿ ಎರಡೂ ಚುನಾವಣೆಗಳು ಒಟ್ಟಿಗೆ ನಡೆದಿದ್ದನ್ನು ಮರೆಯುತ್ತಾರೆ; ಆಗ ಯಾವ ಅಸ್ಮಿತೆಗೂ ಧಕ್ಕೆಯಾಗಿರಲಿಲ್ಲ. ಏಕಕಾಲಿಕ ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ, ಇರುವ ಸರಕಾರ ವನ್ನು ಬೀಳಿಸಿ ಮತ್ತೆ ಚುನಾವಣೆಗೆ ಹೋಗುವುದು ಕಷ್ಟಕರವಾದದ್ದು. ಯಾಕೆಂದರೆ, ಹೊಸ ಪದ್ಧತಿಯಲ್ಲಿ ಮಧ್ಯಂತರ ಚುನಾವಣೆ ನಡೆದ ಸರಕಾರದ ಅವಧಿಯು ಬಾಕಿ ಉಳಿದ ಅವಧಿವರೆಗೆ ಮಾತ್ರವಿರು ವುದು, ಈಗಿನ ಹಾಗೆ ಮತ್ತೆ ಪೂರ್ಣಾವಧಿ ದೊರೆಯುವುದಿಲ್ಲ. ಸರಕಾರದ ನೀತಿ-ನಿರ್ಧಾರಗಳಲ್ಲಿ ಸ್ಥಿರತೆ ಕಾಯ್ದು ಕೊಳ್ಳಬಹುದು, ಇದರಿಂದ ಪ್ರಗತಿಗೆ ವೇಗ ದೊರೆಯುತ್ತದೆ.

ಬಹುಮುಖ್ಯವಾಗಿ, ಏಕಕಾಲಿಕ ಚುನಾವಣೆ ನಡೆಸುವುದರಿಂದ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರುಪಾಯಿ ಹಣದ ಉಳಿತಾಯವಾಗುತ್ತದೆ. ಪದೇಪದೆ ಚುನಾವಣಾ ಪ್ರಚಾರ ಕೈಗೊಳ್ಳಲು ಹಾಕಬೇಕಾದ ಶ್ರಮ ಕಡಿಮೆಯಾಗಿ, ರಾಜಕೀಯ ನಾಯಕರ/ಕಾರ್ಯಕರ್ತರ ಆರೋಗ್ಯವು ಸುಧಾರಿಸುತ್ತದೆ. ಪದೇಪದೆ ಚುನಾವಣೆ ನಡೆಯ ದಿದ್ದರೆ, ಉದ್ಯಮಿಗಳಿಂದ ಹಣ ಸಂಗ್ರಹಿಸ ಬೇಕಾದ ಒತ್ತಡವು ತಗ್ಗುವ ಸಾಧ್ಯತೆಯುಂಟು, ಕಪ್ಪುಹಣದ ಚಲಾವಣೆಯಲ್ಲೂ ಇಳಿಕೆಯಾಗುವುದುಂಟು. ಏಕಕಾಲಿಕ ಚುನಾವಣೆಯಿಂದ ಬಿಜೆಪಿಗೆ ಅನುಕೂಲವಾಗು
ವುದು ಎಂಬ ಟೀಕೆಯು ಅಸಂಬದ್ಧವಷ್ಟೇ. ಮತದಾರನು ತನ್ನ ಆಯ್ಕೆಯನ್ನು ಜಾಣ್ಮೆಯಿಂದ ಮಾಡುವಷ್ಟು ಪ್ರಬುದ್ಧನಿದ್ದಾನೆ.

ಆತ ಬದಲಾವಣೆಯನ್ನು ಬಯಸಿದರೆ ಯಾವ ಅಲೆಯಾಗಲೀ ನಾಯಕತ್ವವಾಗಲೀ ನೆರವಿಗೆ ಬರುವುದಿಲ್ಲ ಎಂಬು ದಕ್ಕೆ ಇತ್ತೀಚಿನ ಲೋಕಸಭಾ ಚುನಾ ವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಏಕೆಂದರೆ, ಸ್ವಂತ ಬಲದ ಮೇಲೆ ಸರಕಾರವನ್ನು ರಚಿಸುವ ವಿಶ್ವಾಸದಲ್ಲಿದ್ದ ಬಿಜೆಪಿಯನ್ನು ಮತದಾರ ನಿರಾಸೆ ಗೊಳಿಸಿದ್ದು ನಿಮಗೆ ಗೊತ್ತೇ ಇದೆ.

ಏಕಕಾಲಿಕ ಚುನಾವಣೆಯನ್ನು ವಿರೋಧಿಸಲು ‘ಪ್ರಾದೇಶಿಕತೆಯ ಕಾರ್ಡ್’ ಬಳಸುವುದಾಗಲೀ, ‘ರಾಜ್ಯಗಳ ಸಮಸ್ಯೆಯು ಹಿನ್ನೆಲೆಗೆ ಸರಿಯುತ್ತದೆ’ ಎಂಬ ವಾದ ಮಂಡಿಸುವುದಾಗಲೀ ಅರ್ಥಹೀನ. ಬದಲಿಗೆ, ಏಕ ಕಾಲಿಕ ಚುನಾವಣೆಯ ಪದ್ಧತಿ ಜಾರಿಗೆ ಬಂದರೆ ರಾಜ್ಯಗಳ ಸಮಸ್ಯೆಗೆ ಹೆಚ್ಚು ಒತ್ತು ದೊರಕಿ, ರಾಷ್ಟ್ರೀಯ ವಿಚಾರಗಳು ಹಿಂದೆ ಸರಿಯುವ ಸಾಧ್ಯತೆಗಳೇ ಅಧಿಕವಾಗಿವೆ. ನೂರು ಕೋಟಿ ಮತದಾರರಿರುವ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಚುನಾವಣಾ ಸುಧಾರಣೆ ನಡೆಯಬೇಕಾದ್ದು ಅಪೇಕ್ಷಣೀಯ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚುನಾವಣಾ ವೆಚ್ಚದಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಚುನಾವಣಾ ಸ್ಪರ್ಧೆಯ ಬಾಗಿಲು ಮುಚ್ಚಿದಂತಾಗಿದೆ. ಏಕಕಾಲಿಕ ಚುನಾವಣೆ ನಡೆದರೆ, ಲೋಕಸಭೆ ಮತ್ತು ವಿಧಾನಸಭೆಯ ಅಭ್ಯರ್ಥಿಗಳು ಪೂರಕವಾಗಿ ಕೆಲಸ ಮಾಡುವುದರಿಂದ ಬದಲಾವಣೆಯನ್ನು ಕಾಣಬಹುದಾಗಿದೆ.

ಕಳೆದ 40 ವರ್ಷದಿಂದ ಚುನಾವಣಾ ಸುಧಾರಣೆಯು ನಿಂತ ನೀರಾಗಿದೆ. ಬಲ ಹೆಚ್ಚಿಸಿಕೊಳ್ಳಲೆಂದು ರಾಜಕೀಯ ಪಕ್ಷಗಳು ಕಂಡುಕೊಂಡಿರುವ ‘ರಾಜೀನಾಮೆ ತಂತ್ರ’ವು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹಲ್ಲು ಕಿತ್ತ ಹಾವಂತೆ ಮಾಡಿದೆ. ಚುನಾವಣಾ ವೆಚ್ಚಕ್ಕೆ ಅಂಕುಶ ಹಾಕುವಲ್ಲಿನ ಚುನಾವಣಾ ಆಯೋಗದ ಕ್ರಮಗಳು ಫಲಕಾರಿಯಾಗಿಲ್ಲ. ಈಗ ‘ಯುಪಿಐ’ ಮಾರ್ಗೋಪಾಯದ ಮೂಲಕ ಹಣ ವರ್ಗಾವಣೆ ಸಾಧ್ಯವಿರುವುದರಿಂದ, ಮುಂಬರುವ ದಿನಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಣದ ಭೌತಿಕ ಸಾಗಣೆ ನಿಂತು, ಹಣದ ಹಂಚಿಕೆ ನಿರಾತಂಕವಾಗಿ ಸಾಗುತ್ತದೆ. ಈ ಹಿನ್ನೆಲೆಯಲ್ಲಿ ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಯು ಅತ್ಯಂತ ಮಹತ್ವಪೂರ್ಣ ಸುಧಾರಣೆಯಾಗಿದ್ದು, ಇದು ಜಾರಿಗೆ ಬರುವಂತಾಗಲು ವಿಪಕ್ಷಗಳು ಸಕಾರಾತ್ಮಕ ನಿಲುವನ್ನು ತಳೆಯಬೇಕಾಗಿದೆ.

ಒಂದೊಮ್ಮೆ ವಿಧೇಯಕದಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಲು ಅವು ಸಲಹೆ ನೀಡಬೇಕು; ಆದರೆ ಕೇವಲ ವಿರೋಧಕ್ಕಾಗಿ ವಿರೋಧಿಸುವ ಚಾಳಿ ಸಲ್ಲ. ಪೂರ್ಣ ಬಹುಮತವಿಲ್ಲದ ಕೇಂದ್ರ ಸರಕಾರವು ಈ ವಿಧೇಯಕವನ್ನು ಜಾರಿಗೆ ತರಲು ಹಗ್ಗದ ಮೇಲಿನ ನಡಿಗೆಗೆ ಒಡ್ಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮೋದಿ ಸರಕಾರವು ಮಸೂದೆಯ ವಿರೋಧಿಗಳೊಂದಿಗೆ ಮುಕ್ತವಾಗಿ ಮಾತನಾಡಿ, ಏಕಕಾಲಿಕ ಚುನಾವಣೆಯ ಪರಿಕಲ್ಪನೆಯನ್ನು ಸಾಕಾರಗೊಳಿ ಸುವುದು ಅನಿವಾರ್ಯವಾಗಿದೆ.

(ಲೇಖಕರು ಬಿಜೆಪಿ ವಕ್ತಾರರು)

ಇದನ್ನೂ ಓದಿ: Prakash Shesharaghavachar Column: ಏರು- ತಗ್ಗುಗಳ ಹಾದಿಯಲ್ಲಿ ಸರಕಾರದ ನೂರು ದಿನ