Sunday, 8th September 2024

ಆನ್’ಲೈನ್ ಎಂಬ ಅಗ್ನಿಪರೀಕ್ಷೆ

ಪ್ರಾಸ್ತಾವಿಕ

ಕೀರ್ತನಾ ಎನ್.ಎಂ

ಕೋವಿಡ್ ಪೀಡೆ ಮನುಕುಲಕ್ಕೆ ಮೃತ್ಯುಪಾಶದಂತೆ ಒಕ್ಕರಿಸಿ ನಾಳೆಗೆ (ಸೆ.25) ಬರೋಬರಿ ಆರು ತಿಂಗಳು. ಕೇಂದ್ರ ಸಚಿವರೂ ಎನ್ನದೆ, ಶ್ರೀಸಾಮಾನ್ಯನನ್ನೂ ಬಿಡದೆ ಕಾಡಿದ ಇಂತಹದ್ದೊಂದು ವ್ಯಾದಿ ಇತ್ತೀಚಿನ ಶತಮಾನಗಳಲ್ಲಿ ಕಂಡುಕೇಳಿರಲಿಲ್ಲ. ಒಂದು ರೀತಿಯಲ್ಲಿ ಸಾಮಾಜಿಕ ಸಮಾನತೆಯನ್ನು ಅರಿವಿಗೆ ತಂದಿಟ್ಟ ಕೋವಿಡ್, ಬೇಕಾದವರಿಗೆ ಅವರಿಗೆ ಬೇಕಾದಂತೆ ವಿತರಣೆಗೆ ಒಳಪಟ್ಟಿದೆ.

ಒಂದು ರೀತಿಯಲ್ಲಿ ಜಗತ್ತಿಗೆ ಸಾವಿನ ಮುಸುಖನ್ನು ಹಾಕಿ, ಕಣ್ಣಮುಚ್ಚಾಲೆ ಆಡುತ್ತಿದೆ. ಇದೆಲ್ಲ ಒಂದು ಕಡೆ ಇರಲಿ. ವಿದ್ಯಾರ್ಥಿ ಗಳಾದ ನಮಗೆ ಬಾಲ್ಯದಿಂದಲೂ ಪರೀಕ್ಷೆ ಎಂದರೆ ಒಂದು ರೀತಿಯ ಸಹಜ ಆತಂಕ ಮತ್ತು ಉದ್ವೇಗ. 6ನೇ ವರ್ಷದಿಂದ 23ನೇ ವಯಸ್ಸಿನವರೆಗೂ ಜೀವನದಲ್ಲಿ ಬಿಡದೆ ಕಾಡುತ್ತಿದ್ದ ಒಂದು ರೀತಿಯ ದುಸ್ವಪ್ನ ಎಂದರೆ ಅದು ಪರೀಕ್ಷೆ. ಪರೀಕ್ಷೆ, ಒಂದು ರೀತಿಯಲ್ಲಿ ಹಿತಶತ್ರುವೆಂದರೆ ತಪ್ಪಾಗಲಾರದು. ಆದರೆ ಈ ವರ್ಷ ಕೋವಿಡ್ ಎಂಬ ಮಾರುವೇಷದಾರಿಯೊಂದಿಗೆ ಕೊಂಚ ವೇಷ ಬದಲಿಸಿಕೊಂಡು ನಮ್ಮನ್ನು ಕಾಡಿದ್ದು ಆನ್‌ಲೈನ್ ಪರೀಕ್ಷೆ ಎಂಬ ಹೊಸ ವಿಧಾನ.

ಕಾಲೇಜು ವಿದ್ಯಾರ್ಥಿ ಜೀವನದ ಕೊನೆಯ ಘಟ್ಟದಲ್ಲಿದ್ದ ನನ್ನಂತಹ ಹಲವಾರು ವಿದ್ಯಾರ್ಥಿಗಳಿಗೆ ಬೇಡದ ವರವೂ ಹಾಗು ನುಂಗಲಾರದ ತುಪ್ಪವೂ ಆದದ್ದು ಈ ಆನ್ ಲೈನ್ ತರಗತಿ ಮತ್ತು ಪರೀಕ್ಷೆ. ಜವಾಬ್ದಾರಿಯನ್ನು  ಅರಿಯದ, ಜೀವನದ ಸಂತಸದ ಕೊನೆಯ ಚೇತೋಹಾರಿ ದಿನಗಳನ್ನು ಸವಿಯುವ ಹೊತ್ತಿನಲ್ಲೇ ಕಾಲೇಜು ಪರಿಸರದಿಂದ ನಮ್ಮನ್ನು ದೊರವಿರಿಸಿ, ಕಾಲೇಜು ದಿನಗಳ ಒಂದು ಸುಂದರ ಅಧ್ಯಾಯವನ್ನು ಅಪೂರ್ಣ ಗೊಳಿಸಿದ ಈ ಕೋವಿಡ್ ಮಹಾಮಾರಿ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ನೋವು.

ಶಾಲೆಯ ಶಿಸ್ತು, ಅಲ್ಪ ಸ್ವಲ್ಪ ಸ್ವಚ್ಛಂದ, ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ಬೆರೆತು ಕಲಿಯುತ್ತಲೇ ಬಂದಿದ್ದ ನಮ್ಮಗಳಿಗೆ ಮನೆಯ ನಾಲ್ಕು ಗೋಡೆಯ ಒಂದು ಕೊಠಡಿಯಲ್ಲಿ ಕಂಪ್ಯೂಟರ್ ಇಲ್ಲವೆ ಫೋನಿನ ಪರದೆಯಲ್ಲಿ ಕಲಿಯುವುದು ಸಹಿಸಲ ಸಾಧ್ಯವಾಯಿತು. ಪೋಷಕರಿಂದ ದೂರವಿದ್ದು ಯಾವುದೊ ಕಾಣದ ಊರಿನಲ್ಲಿ ಹಾಸ್ಟೆಲ್‌ನಲ್ಲೋ ಇಲ್ಲವೇ ಪೀಜಿಯಲ್ಲೋ ಕಲಿತಂತಹ ಅನುಭವ. ಶಿಕ್ಷಣ ವ್ಯವಸ್ಥೆಗೇ ಆನಲೈನ್ ಕಲಿಕೆ ಹೊಸ ಪ್ರಯೋಗವಾಗಿದ್ದರಿಂದ ಕಲಿಸುವವರಿಗೂ ಮತ್ತು ಕಲಿಯುವವರಿಗೂ ಹೊಂದಾಣಿಕೆ ಕಷ್ಟಸಾಧ್ಯವಾಯಿತು. ಈ ಸಾಮೂಹಿಕ ಸಮಸ್ಯೆಯನ್ನು ಕಾಲೇಜಿನ ಆಡಳಿತ ಮಂಡಳಿಗೆ
ತಿಳಿಸಿದೆವು. ಜೂನ್ ತಿಂಗಳಿನಿಂದ ಕಾಲೇಜು ಪ್ರಾರಂಭವಾಗುತ್ತದೆ ಎಂದು ಅವರಿಂದ ಸಮಾಧಾನಕರ ಉತ್ತರ ಬಂತು. ಎರಡು ತಿಂಗಳು ಕ್ರ್ಯಾಶ್ ಕೋರ್ಸ್ ನಡೆಸಿಯೇ ಪರೀಕ್ಷೆ ನೀಡಲಾಗುತ್ತದೆ ಎಂಬ ಭರವಸೆ ಮರುಭೂಮಿಯಲ್ಲಿ ಮರೀಚಿಕೆ ಕಂಡಷ್ಟು ಸಂತಸ ವಿಧ್ಯಾರ್ಥಿಗಳಿಗೆ ನೀಡಿತು.

ಕಾಲೇಜಿಗೆ ಮರಳಿ ಹೋಗಬಹುದು ಎಂದು ಜೂನ್ ತಿಂಗಳಿಗಾಗಿ ಕಾದುಕುಳಿತ್ತಿದ್ದ ನಮಗೆ ನಿರಾಸೆ ಕಾದಿತ್ತು. ವ್ಯಾಾಪಕವಾಗಿ ಹರಡುತ್ತಿದ್ದ ಕೋವಿಡ್ ಸೊಂಕು ಆನ್‌ಲೈನ್ ಪರೀಕ್ಷೆಗೆ ನಮ್ಮನ್ನು ಕಟ್ಟು ಬಿಗಿದು ಕೂರಿಸಿತು. ಇದರಿಂದಾಗಿ ಕೊನೆಯ ಸೆಮಿಸ್ಟರ್
ಬೋಧನೆ ಫೋನಿನ ಪರದೆಯಲ್ಲಿಯೇ ಮುಗಿದುಹೋಯಿತು. ಇ-ಕಲಿಕೆ ಮತ್ತು ಬೋಧನೆ ಅಷ್ಟೇನು ಸುಲಭವಾಗಿರಲಿಲ್ಲ. ನೆಟ್ವರ್ಕ್ ಮತ್ತು ತಾಂತ್ರಿಕ ದೋಷಗಳಿಂದಾಗಿ ಹಲವಾರು ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿರ ಲಿಲ್ಲ.

ಇನ್ನು ಮತ್ತು ಕೆಲವರಿಗೆ ಬೋಧನೆ ಅರ್ಥವಾಗುತ್ತಿರಲಿಲ್ಲ. ಹಾಗೆಂಬುದರ ಅರ್ಥ ಬೋಧನೆಯಲ್ಲಿ ದೋಷವಿತ್ತು ಎಂದಲ್ಲ. ನೂತನ ಬೋಧನಾ ವಿಧಿಗೆ ಮನಸ್ಸು ಒಗ್ಗಿಕೊಳ್ಳಲು ತಯಾರಾಗಿರಲಿಲ್ಲ ಅಷ್ಟೆ. ಇದೆಲ್ಲಾ ಜಿಜ್ಞಾಸೆಗಳ ಮಧ್ಯದಲೂ ಜೂಲೈ ಅಂತ್ಯದಲಿ ಬೋಧನೆಯ ಶಾಸ್ತ್ರ ಮುಗಿದುಹೋಯಿತು. ಮುಂದೊಂದು ದಿನ ಕಾಲೇಜಿಗೆ ಹೋಗುವ ಕನಸು ನುಚ್ಚುನೂರಾ ಯಿತು. ಇವೆಲ್ಲದರ ನಡುವೆ ಪರೀಕ್ಷೆ ಕುರಿತಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿತ್ತು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡಿಯೇ ಉತೀರ್ಣಗೊಳಿಸಬೇಕು ಎಂದು ಅದು ತೀರ್ಪಿನಲ್ಲಿ ಹೇಳಿತ್ತು. ಪರೀಕ್ಷೆ ನಡೆಸುವ ವಿಧಾನ ಆಯಾಯ ವಿಶ್ವವಿದ್ಯಾಲಯಕ್ಕೆ ಬಿಟ್ಟಿದ್ದು ಎಂದು ರಾಜ್ಯಸರಕಾರ ತೀರ್ಮಾನ ತಳೆಯಿತು.

ಆದರೆ ತಮ್ಮ ಮಕ್ಕಳನ್ನು ಸಾವು ಬದುಕಿನ ಹೋರಾಟದ ನಡುವೆ ಹೇಗೆ ಕಾಲೇಜಿಗೆ ಕಳಿಸುವುದು? ಇದು ಅಪಾಯಕಾರಿ ಎಂದು ಕೆಲ ಪೋಷಕರು ತಮ್ಮ ಕಳವಳ ವ್ಯಕ್ತಪಡಿಸಿದರು. ಪರೀಕ್ಷಾ ವಿಧಾನದ ಆಯ್ಕೆ ಕುರಿತು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿ ಗಳೊಂದಿಗೆ ಸಮೀಕ್ಷೆ ನಡೆಸಿದರು. ಬಹುಪಾಲು ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆಗೆ ಒಮ್ಮತ ನೀಡಿದರು. ಎಲ್ಲಾರೀತಿಯಲ್ಲು ಒಳಿತು ಎಂದು ನಮಗೂ ಅನ್ನಿಸಿತು. ಇದಾದ ಕೇಲವೇ ದಿನಗಳಲ್ಲಿ ಕಾಲೇಜಿನವರು ಪ್ರಮಾಣಿತ ಕಾರ್ಯಾಚರಣಾ ವಿಧನ (ಎಸ್‌ಓಪಿ) ಯನ್ನು ವಿದ್ಯಾರ್ಥಿಗಳಿಗೆ ನೀಡಿ ಪರೀಕ್ಷ ದಿನಾಂಕವನ್ನು ಪ್ರಕಟ್ಟಿಸಿಯೇ ಬಿಟ್ಟರು. ಎಸ್‌ಓಪಿ ಯಲ್ಲಿದ್ದ ಹಲವು ನಿಯಮ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ವಿರೋಧಿಸಿ ನಾವುಗಳು ಕಾಲೇಜು ಆಡಳಿತಮಂಡಳಿಗೆ ದೂರು ಸಲ್ಲಿಸಿದೆವು. ಒಂದುಕಡೆ ಮಾನಸಿಕ ಒತ್ತಡ, ಮತ್ತೊಂದೆಡೆ ತಾಂತ್ರಿಕ ದೋಷದಿಂದ ಪರೀಕ್ಷಾ ಸಮಯದಲ್ಲಿ ತೊಂದರೆಯಾದರೆ? ಅದು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವುದೆಂಬ ಭಯ ನಮ್ಮಗಳನ್ನು ಕಾಡಲಾರಂಬಿಸಿತು. ಓದಿನೆಡೆಗೆ ಗಮನ
ನೀಡುವುದೆ ಕಷ್ಟವಾಯಿತು.

ನಮ್ಮೆಲ್ಲರ ಈ ಆಕ್ರಂದನ ಕಾಲೇಜು ಆಡಳಿತ ಮಂಡಳಿಯ ಕಿವಿ ಮುಟ್ಟಲೇ ಇಲ್ಲ. ಆನ್‌ಲೈನ್ ಮಾದರಿಯ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡದ್ದೂ ನೀವುಗಳೆ. ಈಗ ನಾವು ಏನು ಮಾಡುವ ಪರಿಸ್ಥಿತಿಯಲಿಲ್ಲ ಎಂದು ನಮಗೆಲ್ಲರಿಗೂ ಸಾಂತ್ವನದ ನುಡಿಗಳ ನ್ನಾಡಿ ಆನ್‌ಲೈನ್ ಪರೀಕ್ಷೆ ಎಂಬ ಹೊಸ ವ್ಯವಸ್ಥೆಯನ್ನು ಧೈರ್ಯವಾಗಿ ಎದರಿಸುವಂತೆ ಪ್ರೇರಣೆ ನೀಡಿದರು. ಪಾಪ ನಮ್ಮಂತೆಯೇ ಅವರಿಗೂ ಇದು ಹೊಸ ಪ್ರಯೋಗವಾಗಿತ್ತು. ನೂರಾರು ಅಡ್ಡಿ-  ಆತಂಕ , ಒಂದು ಕಡೆ ವಿಶ್ವವಿದ್ಯಾನಿಲಯದ ನಿಯಮ ಗಳು, ಮತೊಂದೆಡೆ ಮಕ್ಕಳ ಭವಿಷ್ಯ ಕುರಿತು ಕಾಳಜಿ ಇವೆಲ್ಲದರ ನಡುವೆ ಅವರೂ ಕೂಡ ಹೆಣಗಾಡುತ್ತಿದ್ದರು. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೇ? ಎಂಬಂತೆ ಪರೀಕ್ಷೆಯ ದಿನಾಂಕ ಹತ್ತಿರವಾಯಿತು. ವಿದ್ಯಾಾರ್ಥಿಗಳಾದ ನಮ್ಮಗಳ ತೊಂದರೆ ಹೆಚ್ಚಾಗುತ್ತಾ ಹೋದವು.

ತಾಂತ್ರಿಕತೆ ಅದೆಷ್ಟೇ ಮುಂದುವರೆದಿದ್ದರೂ ಸಮಯ ಬಂದಾಗ ಅದರ ಸದುಪಯೋಗ ಎಷ್ಟರಮಟ್ಟಿಗೆ ಕೈಕೊಡಬಹುದು
ಎಂಬ ಹೊಸ ಪಾಠ ಅರಿವಿಗೆ ಬಂತು. ಹಲವು ವಿದ್ಯಾರ್ಥಿಗಳಿಗೆ ಅವರಿದ್ದ ಊರು ಮತ್ತು ಗ್ರಾಮಗಳಲ್ಲಿ ಇಂಟರ್ನೆಟ್ ಮತ್ತು ನಿರಂತರ ವಿದ್ಯುತ್ ಸಂಪರ್ಕ ಕಷ್ಟರವಾಗಿತ್ತು ಅದರಲ್ಲೂ ನಿರಂತರ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯ ನನ್ನ ಸ್ನೇಹಿತೆಯರ
ಪಾಡು ಶೋಚನೀಯವಾಗಿತ್ತು. ಕಾಲೇಜಿನ ಆಡಳಿತ ಮಂಡಳಿ ಎಲ್ಲಾ ಸವಲತ್ತು ಇರುವ ಸ್ಥಳಕ್ಕೆ ಹೋಗಿ ಪರೀಕ್ಷೆ ಬರಿಯಬೇಕು ಎಂದು ಆದೇಶಿಸಿತ್ತಾದರೂ ಕೋವಿಡ್‌ನ ಸಂಕಷ್ಟ ಪರಿಸ್ಥಿತಿಯಲ್ಲಿ ಯಾರು? ಎಲ್ಲಿಗೆತಾನೆ ಹೋಗಿಯಾರು? ಕಾಲೇಜಿನವರ ಅಸಹಾಯಕತೆಯಿಂದ ಈ ನಿಯಮದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಯಿತು. ಮೈಸೂರಿನಲ್ಲಿದ್ದ ನನಗೆ ವರುಣನ ಬಿಸಿ ಅಷ್ಟಾಾಗಿ ತಟ್ಟದೆಯಿದ್ದರೂ ಮಡಿಕೇರಿಯಲ್ಲಿದ್ದ ನನ್ನ ಸ್ನೇಹಿತೆಯರಿಗೆ ಇದುವೇ ಶಾಪವಾಯಿತು.

ಬೈಲುಕುಪ್ಪೆ ನಿವಾಸಿಯಾದ ನನ್ನ ಸ್ನೇಹಿತೆ ಮೊನಿಷಾಳ ಪರಿಸ್ಥಿತಿ ಕೇಳಿ ಮನಸ್ಸು ಮರುಗುತಿತ್ತು. ಪರೀಕ್ಷೆಯ ದಿನದಂದು ವಿದ್ಯುತ್ ಅಥವ ಇಂಟರ್ನೆಟ್ ಸಂಪರ್ಕ ಕಡಿತಗೊಂಡು ಏಲ್ಲಿ-ಏನು ತೊಂದರೆಯಾಗುತ್ತದೆಯೋ ಎಂಬ ಭಯ ನಮ್ಮಗಳನ್ನು ಕಾಡುತಿತ್ತು. ನನ್ನ ಮತ್ತು ನನ್ನ ಸ್ನೇಹಿತೆಯರ ನೋವು, ಆತಂಕವನ್ನು ನನ್ನ ತಂದೆಯೊಂದಿಗೆ ತೋಡಿಕೊಂಡೆ. ಕೋವಿಡ್ ಗಂಭೀರ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು, ಪರೀಕ್ಷೆ ಎಂದು ಕಾಡುವುದನ್ನು ದೊಡ್ಡ ದೌರ್ಜನ್ಯವೆಂದೇ ಹರಿಹಾಯು ತ್ತಿದ್ದ ನನ್ನ ತಂದೆ ಏನೆಂದರು ಗೊತ್ತೆೆ? ಪವರ್ ಕಟ್ ಆದರೆ ಹೆದರಬೇಡಿ, ಕಂಪ್ಯೂಟರ್ ಕೈಕೊಟ್ಟರೆ ಮರುಗಬೇಡಿ. ಚಪ್ಪಾಳೆ ತಟ್ಟಿ ಊಟ ಮಾಡಿ, ಬೆಚ್ಚಗೆ ಹೊದ್ದಿ ಮಲಗಿ. ಯಾಕೆಂದರೆ ಇವುಗಳು ನಿರೀಕ್ಷಿಸದ ಸಮಸ್ಯೆಗಳಲ್ಲ. ಜೊತೆಗೆ ನಿಯಂತ್ರಿಸಲಾಗದ ಸಮಸ್ಯೆಗಳು. ಇದಕ್ಕಾಗಿ ಯಾರನ್ನು ದೂಷಿಸಲಾಗದು. ತಂದೆ ತಾಯಿಗಳಾದ ನಮಗೆ ಪರೀಕ್ಷೆಗಿಂತ ಮಕ್ಕಳಾದ ನೀವು ಮುಖ್ಯ ಎಂದು ಕಡ್ಡಿ ಮುರಿದಂತೆ ಹೇಳಿ ವಿಷಯಕ್ಕೆ ಅಂತಿಮ ಹಾಡಿದರು. ಒಂದು ಕ್ಷಣಕ್ಕೆ ಅವರ ಮಾತು ತಮಾಷೆ ಎನಿಸಿದರು ಮತ್ತೊಂದು ರೀತಿಯಲ್ಲಿ ಧೈರ್ಯ ತುಂಬಿತು.

ಇಷ್ಟೆೆಲ್ಲಾ ಆಗುವಷ್ಟರಲ್ಲಿ ಆನ್‌ಲೈನ್ ಅಗ್ನಿ ಪರೀಕ್ಷೆ ಮನೆಯ ಬಾಗಿಲಿಗೆ ಬಂದು ನಿಂತಿತ್ತು. ಭಯದಲ್ಲಿ ಓದಿದ್ದೆಲ್ಲವೂ ಅಯೋ ಮಯ. ಪರಿಸ್ಥಿತಿಯನ್ನು ಎದುರಿಸಲೇಬೇಕು ಎಂಬುದರ ಅರಿವಿತ್ತು. ದೇವರ ಕೃಪೆಯಿಂದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆೆ ಎದುರಾದರೂ ಅಷ್ಟಾಗಿ ಯಾರಿಗೂ ತೊಂದರೆಯಾಗದೆ ಆನ್ ಲೈನ್ ಪರೀಕ್ಷೆ ಎಂಬ ಭೂತ ತನ್ನ ಮೂರು ವಾರಗಳ ಭೂತ ಚೇಷ್ಟೆಯೊಂದಿಗೆ ಉಚ್ಛಾಟನೆಗೊಂಡಿತು. ಮನಸ್ಸು ಹಗುರಾಯಿತು. ಇಂಥಹ ಸಂಕಷ್ಟ ಸಮಯದಲ್ಲಿ ನಮ್ಮೊಂದಿಗೆ ಇದ್ದ  ಕಾಲೇಜಿನ ಉಪನ್ಯಾಸಕರು, ಇಲಾಖೆಯ ಮುಖ್ಯಸ್ಥರನ್ನು ನೆನಪಿಸಿಕೊಳ್ಳಲೇಬೇಕು. ಒಮ್ಮೊಮ್ಮೆ ನಮ್ಮೊಂದಿಗೆ ಮಾತಿನಲ್ಲಿ ಕಠಿಣ
ವಾಗಿ ನಡೆದುಕೊಂಡರೂ ಯಾರಿಗೂ ತೊಂದರೆಯಾಗದಂತೆ ಅವರ ಕರ್ತವ್ಯವನ್ನು ನಿಭಾಯಿಸಿದರು.

ಕೋವಿಡ್ ಮಹಾಮಾರಿಯೊಂದಿಗೆ ಯುದ್ಧ ಸಾರಿ ಮಾನಸಿಕ ಒತ್ತಡ ಮತ್ತು ಹೊಸ ಬೋಧನೆ ಮತ್ತು ಪರೀಕ್ಷಾ ಪ್ರಯೋಗಕ್ಕೆ ನಮ್ಮನ್ನು ತೊಡಗಿಸಿಕೊಂಡು ನಾವುಗಳು ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ  ಹೂವಿನಂತೆ ಹೊರಬಂದೆವು. ಎಸ್‌ಜೆಸಿಇ ಸಂಸ್ಥೆಯ 2020ನೇ ಎಂಬಿಎ ಬ್ಯಾಚಿನ ನಮ್ಮಗಳ ಈ ಸಾಹಸ- ಸಾಧನೆಯಲ್ಲಿ ಜೊತೆಯಾಗಿ ನಿಂತ ಉಪನ್ಯಾಸಕ ವೃಂದ ಮತ್ತು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳಾದ ನಮ್ಮೆಲ್ಲರ ಶಿರ ಸಾಷ್ಟಾಂಗ ನಮಸ್ಕಾರಗಳು.

ಕಾಲೇಜಿನ ಕೊನೆಯ ಕೆಲವು ದಿನಗಳನ್ನು ಆ ಸರಸ್ವತಿಯ ಮಡಿಲಲ್ಲಿ ಕಳೆಯಲಾಗಲ್ಲಿಲ್ಲ ಎಂಬ ನೋವು ಕೊನೆತನಕ ಕಾಡುವು ದಂತೂ ಸತ್ಯ. ಬೀಳ್ಕೊಡುಗೆಯ ದಿನದಂದು ನನ್ನ ಕಾಲೇಜನ್ನು ಕುರಿತು ವಾಚಿಸಬೇಕೆಂದು ಬರೆದಿಟ್ಟಿದ್ದ ಒಂದು ಕವನವನ್ನು ವಿಶ್ವವಾಣಿಯ ಮುಖೇನ ಎಲ್ಲರನ್ನು ತಲುಪಿಸಲಿಚ್ಚಿಸುತ್ತೇನೆ…

ಹುಚ್ಚುಕೋಡಿ ಮನಸಲಿ, ಅಚ್ಚಳಿಯದ ನೆನಪಾದೆ ಜೀವನದ ಪುಟದಲಿ ಅಳಿಸಲಾಗದ ಸ್ಮತಿಯಾದೆ ಹರಯದ ಪ್ರತಿ ಹಾಡಿಗೂ, ನೀ ಮುನ್ನುಡಿಯಾದೆ ಕಾಣದ ಗುರಿ ತಲುಪಲು, ನೀ ದಾರಿ ದೀಪವಾದೆ. ನೋವಿನಲಿ, ನಲಿವಿನಲಿ ನೆಮ್ಮದಿಯ ತಾಣವಾಗಿ ಬೇಸರ ತೋರಿದಷ್ಟೂ, ಪ್ರೀತಿ ನೀಡಿ ಪೋಷಿಸಿದೆ ವಿದ್ಯಾರ್ಥಿ ಜೀವನದ, ವಿಸ್ಮಯವು ನೀನಾಗಿ… ನಮ್ಮೆಲ್ಲರ ತುಂಟತನ ಸಹಿಸುವ ತಾಯಾದೆ. ಜ್ಞಾನವೆಂಬ ಸಾಗರದಲಿ ನೀನೊಂದು ನದಿಯು, ವಾರಿಧಿಯ ವಿಸ್ತಾರ ಹೆಚ್ಚಿಸುವ ಜ್ಞಾನಸುಧೆಯು ಭೇದವಿಲ್ಲದೆ ಹರಿವ ಜ್ಞಾನ ಸಾಗರದ ಅಲೆಯಲ್ಲಿ ರೂಪಿಸಿದೆ ನಮ್ಮಗಳ ಬದುಕನು ನಿನ್ನೊಡಲ ಶಿಲೆಯಲ್ಲಿ.

ಜೀವನವ ತೋರಿದ, ಗುರುಗಳ ಕರುಣಿಸಿದ

ಓ ಸಂಸ್ಥೆಯೇ
ಬೆಲೆಕಟ್ಟಲಾಗದ ಸ್ನೇಹಸುಧೆಯನ್ನು ನೀಡಿದ
ಓ ವಿದ್ಯಾಪೀಠವೇ…
ಬರಿಯ ಕಲ್ಲಿನ ಕಟ್ಟಡವಲ್ಲ, ನೀ ಎನ್ನ
ಮನದೇಗುಲ
ನಿನ್ನನ್ನು ಅಗಲಲು ನೋಡೆಷ್ಟು ತಳಮಳ.

Leave a Reply

Your email address will not be published. Required fields are marked *

error: Content is protected !!