Friday, 20th September 2024

ಶಾಲೆಯನ್ನು ತೆರೆದು ಮಕ್ಕಳ, ಶಿಕ್ಷಕರ ಭವಿಷ್ಯ ಉಳಿಸಿ

ಅಭಿವ್ಯಕ್ತಿ

ಟಿ.ದೇವಿದಾಸ್

ದೇಶವ್ಯಾಪಿ ಒಂದು ಮೈಂಡ್ ಸೆಟ್ ಬೆಳೆಯತೊಡಗಿದೆಯೆಂದು ಅನಿಸುತ್ತಿದೆ. ಶಾಲೆಯೂ ಬೇಡ, ಶಿಕ್ಷಕರೂ ಬೇಡ, ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಟೀಚಿಂಗ್ ನಡೆಸುತ್ತ ಬೇಕಾದಷ್ಟು ಫೀಸನ್ನು ಕಲೆಕ್ಟ್‌ ಮಾಡುತ್ತಾ ಟೀಚರ್ಸ್‌ಗೆ ಸಂಬಳವನ್ನು ಅಷ್ಟೋ ಇಷ್ಟೋ ನೀಡುತ್ತಾ ಅನ್ಯ ಖರ್ಚುಗಳನ್ನೆಲ್ಲ ಉಳಿಸುತ್ತ, ಶಾಲೆಯೆಂಬುದು ಕೇವಲ ಸಾಂಸ್ಥಿಕ ರೂಪದಲ್ಲಿ ಇಟ್ಟುಕೊಂಡೇ ಮಕ್ಕಳ ವ್ಯಾಸಂಗವನ್ನು ಸಾಗಿಸಬಹುದು ಎಂಬ ಚಿಂತನೆ ಬೆಳೆಯತೊಡಗಿದೆ.

ಶಿಕ್ಷಕರು ಶಾಲೆಗೆ ಬರುವ ಅಗತ್ಯವಿಲ್ಲ. ಅಲ್ಲಿಗೆ ಅವರ ಓಡಾಟ ಖರ್ಚು ಉಳಿಯಿತು. ಬಟ್ಟೆೆಬರೆಗಳ ಖರ್ಚು ಕಡಿಮೆಯಾದಂತೆ ಯೇ. ಇನ್ನು ಮಕ್ಕಳ ಸ್ಕೂಲ್ ಫೀಸನ್ನು ಬಿಟ್ಟರೆ ಪೋಷಕರಿಗೆ ಇತರ ಖರ್ಚುಗಳೇನೂ ಇರಲಾರದು. ಅಥವಾ ಅಂಥ ಪರಿಯ ಖರ್ಚು ಮಾಡುವ ಅಗತ್ಯವಾಗಲೀ ಇರುವುದಿಲ್ಲ. ಮಕ್ಕಳ ಶೂ, ಸಾಕ್ಸ್ , ಪೆನ್ನು, ಪೆನ್ಸಿಲ್, ನೋಟ್ ಬುಕ್, ಬ್ಯಾಗ್, ಯೂನಿ ಫಾರ್ಮ್, ವಾಹನದ ಓಡಾಟದ ಖರ್ಚು ಸೇರಿ ಸಾವಿರಗಟ್ಟಲೆ ಹಣ ಉಳಿತಾಯವಾಗುತ್ತದೆ.

ನಿವ್ವಳ ಆದಾಯದ ಖರ್ಚು ಮತ್ತು ಲಾಭವನ್ನು ಬಜೆಟ್ ಮೂಲಕ ಸುಲಭವಾಗಿ ಮಾಡಿ ಮುಗಿಸಿದರೆ ಬದುಕನ್ನು ಈಗಿರುವ ಸ್ಥಿತಿಗಿಂತ ಚೆನ್ನಾಗಿಯೇ ಬ್ಯಾಲೆನ್ಸ್ ಮಾಡಬಹುದು. ಅಬ್ಬಬ್ಬಾ ಅಂದರೆ ಏನು ಖರ್ಚಾಗಬಹುದು ಅಂದರೆ, ಒಂದು ಹೊಸ ಮೊಬೈಲ್, ಅಥವಾ ಲ್ಯಾಪ್ಟಾಪ್ ಕೊಡಿಸಬೇಕಾಗಬಹುದು. ಮೊದಲೇ ಇವೆಲ್ಲ ಇದ್ದರಂತೂ ನೋ ಪ್ರಾಬ್ಲಮ್. ನೆಟ್ ಪ್ಯಾಕ್ ಹಾಕಿಸಿದರಾಯಿತು. ಅಂತೂ ಹಣ ಉಳಿಸುವ ಆಲೋಚನೆಯ ಮಾರ್ಗವನ್ನು ಇದರಲ್ಲಿ ಕಂಡುಕೊಂಡಂತಿದೆ.

Of course ಹೀಗೆ ಆಲೋಚಿಸುವುದು ತಪ್ಪಂತೂ ಅಲ್ಲವೇ ಅಲ್ಲ. ಆದರೆ ಯಾವ ಪ್ರಮಾಣದ ಶಿಕ್ಷಣ ತಮ್ಮ ಮಕ್ಕಳಿಗೆ ಆಗುತ್ತದೆ, ಮತ್ತು ದೊರೆಯುವ ಈ ಬಗೆಯದ್ದಾದ ಶಿಕ್ಷಣದಿಂದ ಏನು ಸಾರ್ಥಕತೆಯಾಗುತ್ತದೆ ಎಂಬ ಪ್ರಜ್ಞೆ ಪೋಷಕರಲ್ಲಿ ಈಗ ಹುಟ್ಟ ಲಾರದು. ಎಲ್ಲ ಪೋಷಕರು ಹೀಗೆಯೇ ಆಲೋಚಿಸುತ್ತಾರೆಂಬುದು ನನ್ನ ಮಾತಿನ ಧಾಟಿಯಲ್ಲ. ಆದರೆ ಹೀಗೊಂದು ಮೈಂಡ್ ಸೆಟ್ ಹುಟ್ಟಿ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿದೆಂಬುದೂ ಸುಳ್ಳಲ್ಲ.

ಮಜಾ ಏನೆಂದರೆ, ಬಾರು, ರೆಸ್ಟೋರೆಂಟ್ ಓಪನ್ ಆಗಿವೆ. ಟಾಕೀಸ್‌ಗಳು ಎಂದಿನಂತೆ ಪ್ರೇಕ್ಷಕರನ್ನು ಕರೆಯುತ್ತಿವೆ. ಸಿನಿಮಾ, ಸೀರಿಯಲ್‌ಗಳು ಯಥಾ ಪ್ರಕಾರ ಶೂಟಿಂಗ್, ಶೋ ಅಂಥ ಬ್ಯುಸಿಯಾಗಿವೆ. ದೇವಸ್ಥಾನಗಳು ಭಕ್ತರಿಗಾಗಿ ಕಾಯುತ್ತಿವೆ. ಹಬ್ಬ – ಹರಿದಿನಗಳು ನಿಯಮಗಳಡಿ ಆಚರಣೆಯಾಗುತ್ತಿವೆ. ಮದುವೆ ಮುಂತಾದ ಶುಭಕಾರ್ಯಗಳು ನಡೆಯುತ್ತಿವೆ. ನೀತಿಸಂಹಿತೆ ಯನ್ನೂ ಅನುಸರಿಸದೆ ಎರಡು ಉಪ ಚುನಾವಣೆ ಅದ್ಧೂರಿಯಾಗಿ ನಡೆದು ಈಗ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯವೇ ಭರದಲ್ಲಿ ಸಿದ್ಧವಾಗುತ್ತಿದೆ.

ಸಾಮಾಜಿಕ ಅಂತರ, ಮಾಸ್ಕ್‌ ಕಡ್ಡಾಯದಂಥ ನಿಯಮಗಳೂ ಉಪ ಚುನಾವಣೆಯ ಪ್ರಚಾರದ ಭರಾಟೆಯಲ್ಲಿ ಎಲ್ಲಿ ಅಡಗಿತ್ತೋ? ದೇವರೇ ಬಲ್ಲ! ಒಟ್ಟಾರೆ, ಹೆಚ್ಚು ಕಡಿಮೆ ಎಲ್ಲವೂ ಮೊದಲಿನಂತಲ್ಲದಿದ್ದರೂ ಮತ್ತೆ ಹಳಿಯನ್ನು ಕಂಡುಕೊಳ್ಳುತ್ತಿದೆ; ಶಾಲೆ ಗಳನ್ನು ಹೊರತುಪಡಿಸಿ! ಶಾಲೆಗಳನ್ನು ತೆರೆದರೆ ಮಾತ್ರ ಆಗಬಾರದ ಅನಾಹುತಗಳು ಆಗಿಯೇ ಬಿಡುತ್ತದೆ! ಇದೆಂಥಾ ವಿಪರ್ಯಾಸ ನೋಡಿ! ಒಂಬತ್ತು ತಿಂಗಳಾಗುತ್ತ ಬಂದವು.

ಶಾಲೆಗಳು ಮಕ್ಕಳಿಲ್ಲದೆ ಬಿಕೋ ಅನ್ನುತ್ತಿವೆ. ಕೊನೆಯ ಪಕ್ಷ ಒಂಬತ್ತನೇ ತರಗತಿಯಿಂದ ಪಿಯು ಹಂತದವರೆಗಿನ ತರಗತಿಗಳನ್ನು
ಓಪನ್ ಮಾಡಲು ಅಡ್ಡಿಯೇನಿದೆಯೆಂಬುದು ಅರ್ಥವಾಗುವುದಿಲ್ಲ? ಗಮನಿಸಿ: ಯಾವ ರಾಜ್ಯವೂ ಮಾಡಲು ಅಸಾಧ್ಯವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಮೌಲ್ಯಮಾಪನವನ್ನು ಬಹಳ ಜತನದಲ್ಲಿ ಮಾಡಿ ಮುಗಿಸಿದ ನಮ್ಮ ರಾಜ್ಯ ಸರಕಾರಕ್ಕೆ ಅದೇ ರೀತಿ ಕಠಿಣ ನಿಯಮಗಳನ್ನು ಅನುಸರಿಸಿ ಶಾಲೆಗಳನ್ನು ತೆರೆಯಲು ಯಾಕೆ ಧೈರ್ಯ ಮಾಡುತ್ತಿಲ್ಲವೆಂಬುದು ಅರ್ಥವಾಗುತ್ತಿಲ್ಲ!

ಯಾರ ಯಾವ ಪ್ರಭಾವ ಅಥವಾ ಯಾವ ಅಜೆಂಡಾದ ಹಾವು ಬುಸುಗುಟ್ಟುತ್ತಿದೆಯೋ ದೇವರೇ ಬಲ್ಲ! ಕರೋನಾ ನೆಪದಲ್ಲಿ ಏನೇನೆಲ್ಲ ನಡೆಸಬಹುದು ಎಂಬುದಕ್ಕೆ ನಿದರ್ಶನವಾಗಿ ಉಳಿಯುವ ನಮ್ಮ ದೊಡ್ಡ ಸಾಧನೆಯೇನೆಂದರೆ, ಆನ್‌ಲೈನ್ ತರಗತಿಗಳಿಗೆ ಪರ್ಯಾಯವಾಗಿ ಸರಕಾರಿ ಶಾಲೆಗಳಲ್ಲಿ ರಚನೆಯಾದ ‘ವಿದ್ಯಾಗಮ’ವನ್ನು ನಿಲ್ಲಿಸಿದ್ದು! ಈಗ ಚಂದನದಲ್ಲಿ ಪಾಠ
ಶುರುವಾಗಿದೆ. ಅದು ಎಷ್ಟರಮಟ್ಟಿಗೆ ಮಕ್ಕಳಿಗೆ ಉಪಯೋಗ ಆಗುತ್ತದೆಂಬುದನ್ನು ಯಾರು ಗಮನಿಸುತ್ತಾರೆ? ಪೋಷಕರು
ನಿರ್ವಹಿಸಬೇಕಾದ ಕ್ರಮಗಳೇನು? ಕಲಿಕೆ ಹೇಗೆ ನಡೆಯುತ್ತದೆಯೆಂಬುದನ್ನು ಅವಲೋಕಿಸುವುದು ಹೇಗೆ? ಯಾರು? ಕಲಿಕೆಯ ಹಂತದಲ್ಲಿ ಬೀಳಬಹುದಾದ ಯಾವ ಜವಾಬ್ದಾರಿಯೂ ಇಲ್ಲದೆ ಮಕ್ಕಳ ಮೇಲಿನ ಮನಸಿನ ಬೀರುವ ಪರಿಣಾಮದ ಬಗ್ಗೆ ಚಿಂತಿಸುವುದು ಬೇಡವೆ? ಮೊಬೈಲ್, ಟಿವಿ, ಲ್ಯಾಪ್ ಟಾಪ್ ಕೊಟ್ಟು ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟರೆ ಏನಾದೀತು ಪರಿಸ್ಥಿತಿ? ಆಲೋಚಿಸಬೇಕಾದ ವಿಷಯವಿದು. ಈಗಾಗಲೇ ಆಗುತ್ತಿರುವ ಅನಾಹುತವನ್ನು ತಪ್ಪಿಸುವುದಕ್ಕೆ ಶಾಲೆಗಳನ್ನು
ತೆರೆಯುವುದನ್ನು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ.

ಅತೀ ಗಹನವಾದ ವಿಚಾರವೇನೆಂದರೆ, ರಾಜ್ಯದೆಲ್ಲೆಡೆಯಲ್ಲಿರುವ ಖಾಸಗಿ ಶಾಲೆಗಳಲ್ಲಿ ದುಡಿಯುವ ಶಿಕ್ಷಕರ ಗೋಳಿಗೆ ಸರಕಾರ ಸ್ಪಂದಿಸುತ್ತಿಲ್ಲವೆಂಬುದು! ಅದು ಸತ್ಯವೂ ಹೌದು. ಸರಕಾರ ಇದಕ್ಕೆ ಯಾವ ಪರಿಹಾರವನ್ನು ಕಂಡುಕೊಂಡಿದೆ? ಖಾಸಗಿ ಶಾಲಾ ಪರಿಹಾರ ರೂಪದಲ್ಲಿ ಗೌರವಧನ ನೀಡಿದೆಯೇ? ನೀಡುತ್ತದೆಯೇ? ಶಿಕ್ಷಕರಿಗೆ ಸಂಬಳವನ್ನು ಕೊಡುವಷ್ಟಾದರೂ ಫೀಸನ್ನು ಈ ಶೈಕ್ಷಣಿಕ ವರ್ಷದಲ್ಲಿ ತೆಗೆದುಕೊಳ್ಳಲು ಅನುಮತಿಯನ್ನು ಆದೇಶ ರೂಪದಲ್ಲಿ ಅಧಿಕೃತವಾಗಿ ಕೊಡಬೇಕಿತ್ತು.

ಕೇಜಿಯಿಂದ ಎಂಟನೆಯ ತರಗತಿಯವರೆಗೆ ಶಾಲೆಯನ್ನು ತೆರೆಯದೆ ಏಕಾಏಕಿ ಎಲ್ಲರನ್ನೂ ಪಾಸುಮಾಡುವುದಕ್ಕೆ ಮುಂದಾದರೆ
ಶಿಕ್ಷಕರಿಗೆ ಸಂಬಳವನ್ನು ಕೊಡುವುದಾದರೂ ಹೇಗೆ? ಹಾಗೆ ಮಾಡುವುದಾದರೂ ಸಂಬಳಕ್ಕೆ ಬೇಕಾಗುವಷ್ಟು ಫೀಸನ್ನು ತೆಗೆದು ಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಆದೇಶವನ್ನು ಹೊರಡಿಸಬೇಕಾಗಿದೆ. ಇನ್ನೂ ತಡವಾಗಿಯಾದರೂ ಅಡ್ಡಿಯಿಲ್ಲ, ಈ ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಅಥವಾ ಆಫ್‌ಲೈನ್ ಬೋಧನೆಯನ್ನೇ ಮಾಡಿ ಕೊನೆಯಲ್ಲಿ ಒಂದು ತಿಂಗಳಾದರೂ ಮಕ್ಕಳನ್ನು ಶಾಲೆಗೆ ಕರೆಸಿ ಬೋಧನೆಯನ್ನು ಮಾಡಿ ಕೇಜಿಯಿಂದ ಐದನೆಯ ತರಗತಿಯ ವರೆಗೆ ವಾರ್ಷಿಕ ಪರೀಕ್ಷೆಯನ್ನು ಮಾಡಿ ಆಮೇಲೆ ಎಲ್ಲರನ್ನೂ ಪಾಸು ಮಾಡಿದರೆ ಸರಿಯಾದೀತೇ ಹೊರತು, ಸುಖಾಸುಮ್ಮನೆ ಯಾವ ಕನಿಷ್ಠ ಜ್ಞಾನಾರ್ಹತೆಯೂ ಇಲ್ಲದೆ ಮುಂದಿನ ತರಗತಿಗೆ ಪಾಸು ಮಾಡುವುದು ಸರಿಯಲ್ಲ.

ಆರರಿಂದ ಎಂಟನೆಯ ತರಗತಿಯವರೆಗೆ ಕೊನೆಯ ಎರಡು ತಿಂಗಳಾದರೂ ತರಗತಿ ಬೋಧನೆಯನ್ನು ಮಾಡಿ ವಾರ್ಷಿಕ
ಪರೀಕ್ಷೆಯನ್ನು ಮಾಡಿ ಎಲ್ಲರನ್ನೂ ಪಾಸು ಮಾಡಿದರೆ ಮುಂದಿನ ತರಗತಿಗೆ ಬೇಕಾದಂಥ ಸಾಧಾರಣ ಜ್ಞಾನಾರ್ಹತೆಯಾದರೂ ಮಕ್ಕಳಲ್ಲಿ ಹೆಚ್ಚಿಸಲು ಸಹಕಾರಿಯಾದೀತು. ಎಲ್ಲಕ್ಕಿಂತ ಮುಖ್ಯವಾಗಿ ಜನವರಿಯಿಂದಲಾದರೂ 9ರಿಂದ 12ನೆಯ ತರಗತಿಯನ್ನು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಟಿಿಯಿಂದ ಅಗತ್ಯ ಕ್ರಮಗಳೊಂದಿಗೆ ಆರಂಭಿಸುವುದೊಳಿತು, ಅಷ್ಟೆ.