Friday, 20th September 2024

ಜನಪ್ರಿಯರು ಜನ ತಿಳಿದುಕೊಂಡಷ್ಟು ಸುಖಿಗಳಿರಲ್ಲ !

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

‘ದೂರದ ಬೆಟ್ಟ ನುಣ್ಣಗೆ ’ ಎಂಬ ಗಾದೆ, ಬೆಟ್ಟವನ್ನು ಏರಿದವರಿಗೆ, ಬೆಟ್ಟವನ್ನು ಕಡಿದು ರಸ್ತೆ , ದಾರಿ ಮಾಡಿದವರಿಗೆ, ಬೆಟ್ಟ ಕಡಿದು ಸಮತಟ್ಟು ಮಾಡಿದವರಿಗೆ ಗೊತ್ತೇ ಇರುತ್ತದೆ.

ಬದುಕಿನಲ್ಲೂ ಹಾಗೆಯೇ, ‘ನಮಗೆ ಮಾತ್ರ ಆ ದೇವರು ಕಷ್ಟ ಕೊಟ್ಟಿದ್ದಾನೆ. ಉಳಿದವರೆಲ್ಲ ಚೆನ್ನಾಗಿದ್ದಾರೆ. ಅವರಿಗೇನು ಕಮ್ಮಿ? ಎಲ್ಲಾ ಇದೆ. ನಾಟಕವಾಡುತ್ತಿದ್ದಾರೆ ’ ಎಂದೆಲ್ಲ ಮಾತಾಡುವವರನ್ನು ನಿತ್ಯ ನೋಡುತ್ತಿರುತ್ತೇವೆ ಅಥವಾ ನಾವೇ ಒಮ್ಮೊಮ್ಮೆ ಬೇರೆಯವರ ಕುರಿತಾಗಿಯೂ ಹೀಗೆ ಆಡಿಕೊಂಡಿರುತ್ತೇವೆ ಅಲ್ಲವೇ?
ಆದರೆ ಆನೆ ಕಷ್ಟ ಆನೆಗೆ, ಇರುವೆ ಕಷ್ಟ ಇರುವೆಗೆ, ಹುಲಿ ಕಷ್ಟ ಹುಲಿಗೆ, ಇಲಿ ಕಷ್ಟ ಇಲಿಗೆ ಗೊತ್ತೇ ಇರುತ್ತದೆ. ಆ ಭಗವಂತ, ಆ ದೇವರು ಎಂಬ ಸರ್ವಶ್ರೇಷ್ಠ, ಸರ್ವ ರಕ್ಷಕ, ಸರ್ವ ಸಂಹಾರಕನು ಕಿರೀಟವನ್ನು ಕೊಟ್ಟು ಸಿಂಹಾಸನದಲ್ಲಿ ಕೂರಿಸುವ ರಾಜನ ಕಿರೀಟದಲ್ಲೂ ಚೇಳನ್ನು ಇಟ್ಟಿರುತ್ತಾನೆ.

ಕಾಲಿಗೆ ಚಪ್ಪಲಿಗಳನ್ನು ಕೊಟ್ಟು, ಮುಳ್ಳಿರುವ ಹಾದಿಯಲ್ಲೇ ನಡೆಯುವ ಅನಿವಾರ್ಯತೆಯನ್ನು ತಂದಿರುತ್ತಾನೆ. ದಯೆ, ದಾನಗಳ ಧರ್ಮ ಬುದ್ಧಿಯನ್ನು ಕೊಟ್ಟು ಸುತ್ತಲೂ ಅಪಾತ್ರರನ್ನು ನಿಲ್ಲಿಸಿಬಿಟ್ಟಿರುತ್ತಾನೆ. ಕೊಟ್ಟವನು ಕೋಡಂಗಿ, ಇಸ್ಕೊಂಡೋನು ವೀರಭದ್ರ ಎಂಬ ಗಾದೆ ಮಾತೇ ಇದೆ. ಇದು ಎಂಥ ಯುಗವೆಂದರೆ, ಅಯ್ಯೋ ಪಾಪ ಎಂದರೆ ನಮ್ಮ ಆಯುಷ್ಯವನ್ನೇ ಅರ್ಧ ಕಸಿಯುವ ಪಾಪಿಗಳಿದ್ದಾರೆ. ಬೆಂಗಳೂರು, ವಿಜಯಪುರ, ಕಲಬುರಗಿಗಳಂಥ ಊರಲ್ಲಿ ಮನೆ ಮುಟ್ಟಿಸ ಬೇಕಾದ ಆಟೋದವರೇ ನಮ್ಮ ದಾರಿ ತಪ್ಪಿಸಿ, ಮನೆ ಮುಟ್ಟಿಸದೇ ನಮ್ಮ ಲಗೇಜುಗಳನ್ನೇ ತಮ್ಮ ಮನೆಗೆ ಮುಟ್ಟಿಸಲು ನಮ್ಮ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ನಿಲ್ಲಿಸಿ ಹೋಗುವವ ರಿದ್ದಾರೆ.

ಹಾಸ್ಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಉತ್ತರ ಕರ್ನಾಟಕದ ಇಂದುಮತಿ ಸಾಲಿಮಠ ಮೇಡಂ ಅವರು ಕೆಲವು ತಿಂಗಳ ಹಿಂದೆ ಕಲಬುರಗಿ ಬಸ್ ಸ್ಟ್ಯಾಂಡ್‌ ನಲ್ಲಿ ಇಳಿದಾಗ ಆಟೋದವನೊಬ್ಬ ಓಡಿಬಂದು ನೀವು ಟಿ.ವಿಯೊಳಗೆ ಬರೋ ಹಾಡು, ಹಾಸ್ಯ ಹೇಳೋ ಮೇಡಂ ಅಲ್ವೇನ್ರಿ? ಎಂದು ಗುರುತಿಸಿ ತಾನೇ ಇವರ
ಕೈಯಲ್ಲಿನ ಚೀಲ ತೆಗೆದುಕೊಂಡು ನಮ್ಮ ಆಟೋದಾಗ ಬರ್ರಿ ಮೇಡಂ, ನಾನು ನಿಮ್ಮ ಅಭಿಮಾನಿ ಎಂದು ಆಟೋದಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾನೆ. ಅರ್ಧ ದಾರಿಯಲ್ಲಿ ಸಾಲಿಮಠ ಮೇಡಂ ಅವರು ತಾವು ಹೋಗಬೇಕಾಗಿರುವ ಮನೆಯವರಿಗೆ ನೀಡಲು ಹೂವು, ಹಣ್ಣು ತೆಗೆದುಕೊಳ್ಳಲು ಮಧ್ಯೆ ಒಂದು ಹೂ-ಹಣ್ಣಿನ ಅಂಗಡಿ ಮುಂದೆ ಇಳಿದು, ಹೂ-ಹಣ್ಣು, ಸ್ವೀಟ್ಸ್ ತೆಗೆದುಕೊಂಡು ಬರುವಷ್ಟರಲ್ಲಿ ಇವರ ಲಗೇಜ್‌ನೊಂದಿಗೆ ಆ ಅಭಿಮಾನಿ ದೇವರು ದೆವ್ವವಾಗಿ ಪಾರಾಗಿದ್ದಾನೆ.

ಆ ಲಗೇಜುಗಳಲ್ಲಿ ಕಾರ್ಯಕ್ರಮದ ಬಟ್ಟೆಬರೆ, ಕಾರ್ಯಕ್ರಮದ ಹಾರ, ಶಾಲು, ನೆನಪಿನ ಕಾಣಿಕೆ, ಅಲ್ಲದೇ ಮೂವತ್ತು ಸಾವಿರ ರುಪಾಯಿ ನಗದು, ರೇಷ್ಮೆ ಸೀರೆ ಗಳು ಇದ್ದು, ಅವನ್ನೆಲ್ಲ ಈ ಅಭಿಮಾನಿ ದೆವ್ವದ ಬಾಯಿಗೆಇಂದುಮತಿ ಮೇಡಂ ಭೂತ ಬಲಿ ಕೊಟ್ಟಂತೆ ಆಯಿತು. ಅವರಿಗೆ ಸಾಮಾನುಗಳು ಹೋದ ದುಃಖಕ್ಕಿಂತ, ಅಭಿಮಾನಿ ಎಂದು ಬೊಗಳಿ, ನಂಬಿಸಿ ನಡುರಸ್ತೆಯಲ್ಲಿ ನಿಲ್ಲಿಸಿ ಹೋದ ಈ ನಾಯಿಗಿಂತ ಕಡೆಯಾದ ಆಟೋ ಡ್ರೈವರ್‌ನ ನಂಬಿಕೆ ದ್ರೋಹಕ್ಕೆ ಬೇಜಾರಾಯಿತಂತೆ. ನಾವು ಸುಖಿಗಳು ಎಂದು ತಿಳಿದು ನಮ್ಮನ್ನು ರೇಗಿಸುವ, ಹಿಂಸಿಸುವ ಇಂಥ ಜನರನ್ನು ನಾವು ನಗಿಸಿಬರುತ್ತೇವಲ್ಲ ಎಂಬ ದುಃಖ ಹೆಚ್ಚಿನದು. ಇನ್ನು ನನ್ನ ಜನಪ್ರಿಯತೆ ಹಿಂದಿರುವ ಗೋಳು, ರಗಳೆಗಳನ್ನು ಸಾಕಷ್ಟು ಸಾರಿ ಬರೆದುಕೊಂಡಿದ್ದೇನೆ, ಹೇಳಿಕೊಂಡಿದ್ದೇನೆ.

ಟಿ.ವಿ ಗಳಲ್ಲಿ ಸದಾ ಕಾಣಿಸಿಕೊಂಡ ಮಾತ್ರಕ್ಕೆ ನಾವು ಭಾರಿ ಶ್ರೀಮಂತರು, ಪ್ರಭಾವಿ ಗಣ್ಯರು ಎಂದೇ ಬಂಧು-ಬಳಗದವರಿಂದ ಹಿಡಿದು, ಅಭಿಮಾನಿಗಳು,
ಇತರರು ತಿಳಿದುಕೊಂಡುಬಿಡುತ್ತಾರೆ. ಎಲ್ಲಾ ಟಿ.ವಿ ಚಾನೆಲ್ ಗಳಲ್ಲಿ ನನ್ನ ಕಾರ್ಯಕ್ರಮಗಳನ್ನು ಗಂಟೆಗಟ್ಟಲೇ ತೋರಿಸುತ್ತಾರೆ. ಆದರೆ ನನಗೆ ಅವರಿಂದ ಒಂದು ಚಿಕ್ಕಾಸೂ ಬರುವುದಿಲ್ಲ, ಬಂದಿಲ್ಲ. ಆದರೆ ನನ್ನ ಕಾರ್ಯಕ್ರಮ ಹಾಕುವ ಒಂದು ಗಂಟೆ, ಮಧ್ಯೆ ಮಧ್ಯೆ ಅವರು ಜಾಹೀರಾತು ತೋರಿಸುತ್ತಾ ಅವರಿಂದ ಹಣ ಪಡೆದಿರುತ್ತಾರೆ. ಸೆಕೆಂಡಿಗೆ ಇಷ್ಟು ಅಂತ ಪೀಕಿರುತ್ತಾರೆ. ಆದರೆ ಈ ಪ್ರಾಣೇಶನೆಂಬ ಪಾಪಿಗೆ ಪಾವಲಿ, ನಾಕಾಣೆ ಕೂಡಾ ಕೊಡುವ ಕೃತಜ್ಞತೆಯು ಅವರಲ್ಲಿ ಇಲ್ಲ. (ಟಿ.ವಿ-9 ನವರ ಜತೆ ಮಾತ್ರ ಒಪ್ಪಂದವಾಗಿ ಅವರು ಟೆಲಿಕಾಸ್ಟ್ ಮಾಡಿದಾಗ ಮಾತ್ರ ಕೊಡುತ್ತಿದ್ದಾರೆ).

ಉಳಿದ ಚಾನಲ್‌ಗಳು, ಕೆಲವು ಕಂಪನಿಗಳು ನನ್ನ ಹಳೆಯ ಸಿ.ಡಿ (ಅಡಕ ಮುದ್ರಿಕೆ)ಗಳನ್ನೇ ಯುಟ್ಯೂಬ್‌ಗೆ ಹಾಕಿಕೊಂಡು ಮಿಲಿಯನ್‌ಗಟ್ಟಲೇ ಚಂದಾದಾರರನ್ನು
ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರೂ, ನನಗೆ ಮಾತ್ರ ಇದರಲ್ಲಿ ಅಷ್ಟು ಲಾಭ ಇರಲ್ಲ ಸಾರ್, ನಿಮಗೆ ಗೊತ್ತಿಲ್ಲ ಎಂದು ನಾನೇ ಕೇಳಿದಾಗ ನನ್ನ ಮೇಲೆ ರೇಗು ತ್ತಿರುತ್ತಾರೆ. ಹೆಸರು ಮಾಡಿ ಹಣಗಳಿಸುವ ತಂತ್ರಗಾರಿಕೆ ಯುಗ ಇದು. ಕೆಲವರು ಹೆಸರು ಮಾಡಿ ತೀರಾ ದುರಾಸೆಗೆ ಬಿದ್ದು, ಮತ್ತೆ ಹೆಸರು, ಹಣ ಎರಡೂ ಕಳೆದುಕೊಂಡು ಸೂಳೆ ಮುಪ್ಪಾಗಿ ಜೋಗಿತಿಯಾದಳು ಎನ್ನುವಂತೆ ಯಾವುಯಾವುದೋ ಟಿ.ವಿ ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ, ಆಂಕರ್‌ಗಳಾಗಿಯೂ ಜೀವನ ನಡೆಸುತ್ತಿದ್ದಾರೆ.

ಈ ಜಗತ್ತು ಯಾರನ್ನೂ ಬಿಡುವುದಿಲ್ಲ. ಕಾಲಕ್ಕೆ ಮೆರೆಸುವುದೂ ಗೊತ್ತು, ಮರೆಸುವುದೂ ಗೊತ್ತು. ಮಹಾಭಾರತ, ಭಾಗವತ, ಭಗವದ್ಗೀತೆಗಳನ್ನು ನಾವು
ಜಾತಿ-ಧರ್ಮ, ಉಚ್ಛ-ನೀಚ, ಜೇಷ್ಠ-ಕನಿಷ್ಠ, ಸನ್ಯಾಸಿ-ಗೃಹಸ್ಥ, ಬಡವ – ಶ್ರೀಮಂತ ಭೇದ ಮರೆತು ಏಕೆ ಓದಬೇಕೆಂದರೆ ಅದರಲ್ಲಿರುವುದು ಕೇವಲ ರಾಮಕೃಷ್ಣ,
ರಾವಣ, ಕೀಚಕ ಎಂಬ ವ್ಯಕ್ತಿಗಳ ಕತೆಯಲ್ಲ, ಆ ಹೆಸರಿನ ಒಂದೊಂದು ತತ್ವದ ಕತೆ, ನಮ್ಮ ಚಿಂತನೆ, ನಡೆ, ನುಡಿ, ಜೀವನ ಕ್ರಮಗಳನ್ನು ತಿದ್ದಿಕೊಳ್ಳದಿದ್ದರೆ ನಮಗೊದಗುವ ದುಃಸ್ಥಿತಿಗಳ ವರ್ಣನೆಯೇ ಅದರಲ್ಲಿನ ಕಥಾವಸ್ತು.

ಕಂಡದ್ದನ್ನು ಬಾಚಿಕೊಂಡು, ಸಿಕ್ಕಿದ್ದನ್ನು ದೋಚಿಕೊಂಡು, ಹಣ ಬಂಗಾರವಿದ್ದರೆ ಮಾತ್ರ ಎಲ್ಲವನ್ನೂ ಪಡೆಯಬಹುದೆಂದು ತಿಳಿದಿರುವ ಇಂದಿನ ರಾಜಕಾರಣಿಗಳು,
ಅಽಕಾರಿಗಳು, ಯಾವಾಗಲಾದರೂ ಒಂದು ದಿನ ಕುಳಿತು, ರಾವಣನ ಬಂಗಾರದ ಲಂಕೆ, ಕೃಷ್ಣನ ದ್ವಾರಕೆ, ಮಥುರೆ, ಅಲೆಕ್ಸಾಂಡರ್, ಖಿಲ್ಜಿ, ಅಕ್ಬರ್, ಬಾಬರ್ ಹೋಗಲಿ, ಶ್ರೀ ಕೃಷ್ಣದೇವರಾಯನ ವಿಜಯನಗರ, ರಸ್ತೆ, ಬೀದಿಬದಿಯಲ್ಲಿದ್ದ ಮುತ್ತುರತ್ನಗಳ ರಾಶಿ, ಅವರ ಆ ದಂತದ ಅರಮನೆಗಳು ಎಲ್ಲಿ ಹೋದವು? ಅವರ ಮಕ್ಕಳು, ಮೊಮ್ಮಕ್ಕಳು, ರಾಣಿಯರು ಯಾರ ಪಾಲಾದರು? ಅವರು ಕೂತು ಮೆರೆದ ಆ ರತ್ನ ಖಚಿತ ಸಿಂಹಾಸನ, ನಡೆದಾಡಿದ ರತ್ನಗಂಬಳಿಗಳು ಎಲ್ಲಿ
ತುಕ್ಕುಹಿಡಿದು, ಉದುರಿ, ಉದುರಿ ಮರಳಲ್ಲಿ ಬೆರೆತು, ಗಾಳಿಯೊಂದಿಗೆ ಸೇರಿ ಹಾರಾಡುತ್ತಿವೆ ಬಲ್ಲವರಾರು? ಇಂದು ಹಣ ಮಾಡುತ್ತಿರುವವರು ನಮ್ಮ ಸೇವಕ ರೆಂದು ಹೇಳಿಕೊಳ್ಳುತ್ತಾ, ನಮ್ಮನ್ನು ತುಳಿದು, ಗಿಡಗಳಂತೆ ಸವರಿ, ಅಧಿಕಾರ ಹಿಡಿದು ನಮ್ಮನ್ನು ಆಳುತ್ತಿರುವ ರಾಜಕಾರಣಿಗಳು ಮಾತ್ರ, ಯಾವ ಪಕ್ಷ ಗೆದ್ದರೆ, ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದರೆ ಸಾಕು, ಹಿಂದೆ ತಮ್ಮನ್ನು ಪೋಷಿಸಿದ, ಬೆಳೆಸಿದ ಪಕ್ಷವನ್ನೇ ಕಾಲಿಂದ ಒದ್ದು, ಮತ್ತೆ ಅಧಿಕಾರ, ಹಣವಿರುವ
ಖಾತೆಗೆ ಹಠ ಹಿಡಿದು, ಪಡೆದು ಮತ್ತೆ ಗಳಿಕೆಗೆ ಆರಂಭ, ಇದೊಂದು ದುಃಶ್ಚಕ್ರವಾಗಿ ತಿರುಗುತ್ತಲೇ ಇದೆ.

ಈ ಚಕ್ರ ತಿರುಗುವುದನ್ನೇ ನೋಡುತ್ತಾ ನಿಲ್ಲುವ ಎಕ್ಸಿಬಿಷನ್‌ನಲ್ಲಿನ ಮಕ್ಕಳಂತೆ ನಾವು ಮತದಾರರಾಗಿದ್ದಾರೆ. ಇದನ್ನು ಹಾಸ್ಯ, ವ್ಯಂಗ್ಯವಾಗಿ ಬರೆಸಿ ಸಭೆಗಳಲ್ಲಿ ಹೇಳುವ ಜನರನ್ನು ನಗಿಸುವ ನಮಗೂ ಜನ ‘ರಾಜಕಾರಣಿಗಳನ್ನು ಬೈಯ್ಯುತ್ತಾ ಹಾಸ್ಯ ಮಾಡುವ ನೀವು, ಅವರಿಗೂ ಸ್ವಲ್ಪ ಬುದ್ಧಿ ಹೇಳ್ರಿ’ ಎಂದು ತಾವು ಮಾಡ ಬೇಕಾದ ಕೆಲಸವನ್ನು ನಮಗೆ ಹೇಳುತ್ತಾರೆ. ನಮ್ಮ ಕಾರ್ಯಕ್ರಮಗಳಿಗೆ ಬರುವ ರಾಜಕಾರಣಿ, ಮಂತ್ರಿಗಳ ಪಕ್ಕದಲ್ಲಿ ಕುಳಿತ ನಮ್ಮನ್ನು ನೋಡಿ, ಸಭೆಯಲ್ಲಿ ಕುಳಿತಲ್ಲಿಂದಲೇ ‘ಅವರಿಗೆ ನಮ್ಮ ಬಗ್ಗೆ ಸ್ವಲ್ಪ ಹೇಳಿ’ ಎಂದು ಸನ್ನೆ ಮಾಡುತ್ತಿರುತ್ತಾರೆ.

ಒಮ್ಮೊಮ್ಮೆ ಮನೆಗೆ ಬಂದು ಅವರಿಗೆ ನಮ್ಮ ಬಗ್ಗೆ ಫೋನ್ ಮಾಡಿ ಹೇಳಿ ಸಾರ್ ಎಂದು ಪೀಡಿಸುತ್ತಿರುತ್ತಾರೆ. ಈ ಹಿಂಸೆ ವೈರಿಗೂ ಬೇಡ ಎನಿಸುತ್ತಿರುತ್ತದೆ.
ಇತ್ತೀಚೆಗೆ ನಮ್ಮ ಜನ ಸರಕಾರದ ಸೌಲಭ್ಯಗಳಿಂದಾಗಿ ಸೋಮಾರಿಗಳಾಗಿದ್ದಾರೆ. ತಮಗೆ ಮೋಸ ಮಾಡಿದ ರಾಜಕಾರಣಿಗಳ ದಾರಿಯಲ್ಲೆ ತಾವೂ ಸಾಗಿ ಮೋಸ, ವಂಚನೆ ಮಾಡಿ ಬದುಕುವುದೇ ಜಾಣತನ ಎಂದುಕೊಳ್ಳಲಾರಂಭಿಸಿದ್ದಾರೆ. ಎಲ್ಲರಿಗೂ ಒಂದೊಂದು ನೋಟು ಪ್ರಿಂಟು ಮಾಡಿಕೊಳ್ಳುವ ಮಷೀನುಗಳನ್ನು
ಕೊಡಿಸಿಕೊಟ್ಟು ಬಿಟ್ಟರೆ ನಮ್ಮ ಜನ ತಮ್ಮನ್ನು ಮತ್ತೆ ಮೊಘಲರು, ಬ್ರಿಟಿಷರು ಏಕೆ, ರಾಕ್ಷಸರನ್ನೂ ತಮ್ಮ ಪ್ರಧಾನಮಂತ್ರಿ, ರಾಷ್ಟ್ರಾಧ್ಯಕ್ಷರನ್ನಾಗಿ ಕಣ್ಣು ಮುಚ್ಚಿ
ಆರಿಸಿಬಿಡುತ್ತಾರೆ. ಪ್ರತಿದಿನ ಸಂಜೆ ಬಾರ್‌ಗಳಲ್ಲಿ ಉಚಿತ ಮದ್ಯ, ಅನುಚಿತ ವರ್ತನೆಗೆ ಅಂಥ ಹೆಣ್ಣುಗಳನ್ನು ನೀಡಿದರಂತೂ ಆ ನಾಯಕನು ಸಾಯುವವರೆಗೂ ಇವರನ್ನು ಆಳಬಹುದು.

ಇನ್ನು ನಮ್ಮ ಕಲಾವಿದರ ಉದ್ಯೋಗ ಈಗ ಹೇಗಾಗಿದೆಯೆಂದರೆ ‘ಪ್ರಚಾರ ಹೆಚ್ಚು, ಪಗಾರ ಕಮ್ಮಿ’ ಎಂಬ ಯೋಜನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಹೀಗಿರುವಾಗ
ರಾಜಕಾರಣಿಗಳು, ಮೋಸಗಾರರು, ಕಳ್ಳಕಾಕರ ಜತೆಗೆ ನಮ್ಮನ್ನೂ ಟಿ.ವಿಯಲ್ಲಿ ದಿನವೂ ತೋರಿಸುವುದರಿಂದ ಜನ ನಮ್ಮ ಬಳಿಯೂ ಹಣ ಅಧಿಕಾರವಿದೆಯೆಂದೇ
ಭಾವಿಸಿಬಿಟ್ಟಿದ್ದಾರೆ. ಬಿಳಿ ಬಟ್ಟೆ ತೊಟ್ಟ ಮಾತ್ರಕ್ಕೆ ಹಣ ಬರುವುದಿಲ್ಲ ಎಂಬ ಸತ್ಯವನ್ನು ಅವರಿಗೆ ತಿಳಿಸುವವರು ಯಾರೆಂದು ಯೋಚಿಸುತ್ತಿದ್ದೇವೆ. ಟಿ.ವಿ ಯವರು ನಮಗೆ ಒಂದು ಉಪಕಾರ ಮಾಡಬೇಕೆಂಬುದು ನನ್ನ ಒಂದು ಮನವಿ, ಏಕೆಂದರೆ ನಮ್ಮ ಶೋ ಟಿ.ವಿ ಯಲ್ಲಿ ನಡೆದದ್ದು ತೋರಿಸುತ್ತಿದ್ದಾಗ ಕೆಳಗೆ ಸ್ಕ್ರೋಲ್‌ನಲ್ಲಿ ಇವರಿಗೆ, ‘ನಾವು ಹಣ ಕೊಟ್ಟಿಲ್ಲ, ನ್ಯೂಸ್ ಇಲ್ಲದ್ದಕ್ಕೆ ಬಳಸಿಕೊಳ್ಳುತ್ತಿದ್ದೇವೆ, ಇವರ ಪ್ರತಿಭೆಗೆ ಏನುಕೊಟ್ಟರೂ ಕಮ್ಮಿನೇ, ಅದಕ್ಕೆ ನಾವು ಏನೂ ಕೊಟ್ಟಿಲ್ಲ’ ಎಂದು ಬರುವಂತೆ ಮಾಡಿದರೆ ನಾವು ಬದುಕುತ್ತೇವೆ.

ಇಲ್ಲದಿದ್ದರೆ, ಗಣೇಶ ಪಟ್ಟಿ ಕೇಳುವುದರಿಂದ ಹಿಡಿದು, ಮೆಡಿಕಲ್, ಎಂಜಿನಿಯರಿಂಗ್ ಓದುವವರೂ ನಮ್ಮಗಳ ಮನೆ ಮುಂದೆ ಸಹಾಯಕ್ಕಾಗಿ ನಿಲ್ಲುತ್ತಾರೆ.
ಕೆಲವರಂತೂ ‘ನಿಮಗೇನ್ ಕಡಿಮೆಯಾಗಿದೆ ಕೊಡಿ ಸಾರ್’ ಎಂದೇ ಬೆನ್ನುಬಿದ್ದಿರುತ್ತಾರೆ. ಕಮ್ಮಿ ಇದೆ ಎಂದು ಹೇಗೆ ತೋರಿಸುವುದು ಎಂಬುದೇ ತಿಳಿಯುವುದಿಲ್ಲ. ಕೇಳುವವರಿಗೆ ಬುದ್ಧಿ ಕಮ್ಮಿಯಿದೆ ಎಂದು ತಿಳಿದಿರುವುದು ಬಿಟ್ಟರೆ, ಬೇರೇನೂ ನಮಗೆ ಕಮ್ಮಿಯಿಲ್ಲ, ಜನಪ್ರಿಯತೆ ಎಂಬುದು ಮುಳ್ಳಿನ ಸಿಂಹಾಸನ, ಜನ ಕೂರಿಸಿ ಬಿಟ್ಟಿದ್ದಾರೆ. ಕೂತಲ್ಲಿಂದ ಎದ್ದುಬಿಟ್ಟರೆ ಅಸಹನೀಯವಾದ ಇದಕ್ಕಿಂತ ಹೆಚ್ಚಿನ ನೋವಿದೆ, ಆದರೆ ಏತಕ್ಕೆ ಕೂತಿದ್ದೇವೆ ಗೊತ್ತೆ? ಆ ಮುಳ್ಳು ತೆಗೆದರೆ ಚಿಲ್ಲೆಂದು ರಕ್ತ ಚಿಮ್ಮುತ್ತದೆ. ಮುಳ್ಳು ಒಳಗಿರುವವರೆಗೂ ನಮ್ಮ ರಕ್ತವಾದರೂ ನಮ್ಮ ಬಳಿಯೇ ಇರಲಿ ಎಂಬುದೇ ಅಳಿವು ಉಳಿವಿನ ಪ್ರಶ್ನೆಯಾಗಿದೆ!