ಅಭಿಮತ
ಶಂಕರನಾರಾಯಣ ಭಟ್
ಇಂದು ನಮ್ಮ ದೇಶ ಅಭಿವೃದ್ಧಿಯ ಕಡೆಗೆ ದಾಪುಗಾಲು ಹಾಕುತ್ತಿದೆ. ಹತ್ತನೇ ಕ್ರಮಾಂಕದಲ್ಲಿದ್ದ ದೇಶ ಐದನೇ ಸ್ಥಾನಕ್ಕೆ ತಲುಪಿದೆ. ಇನ್ನು ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಳ್ಳಲಿದೆ. ನಮ್ಮದು ಐದು ಟ್ರಿಲಿಯನ್ ಆರ್ಥಿಕತೆ ಆಗಲಿದೆ ಎಂದೆಲ್ಲ ಬೊಬ್ಬೆ ಹೊಡೆಯುವವರು ಈಗ ನಡೆಯುತ್ತಿರುವ ಒಲಿಂಪಿಕ್ಸ್ ಪಂದ್ಯದ ಫಲಕಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ನಾವು ಇಷ್ಟೊಂದು ಕೆಳಮಟ್ಟದಲ್ಲಿದ್ದೇವೆಯೇ ಅಂತ ಅನಿಸದೇ ಇರದು.
ಇಲ್ಲಿಯತನಕ ನಮ್ಮ ಪಾಲಿಗೆ ದೊರಕಿದ್ದು ಕೇವಲ ಒಂದು ಬೆಳ್ಳಿ ಮತ್ತು ೫ ಕಂಚು! ಈಗ ಪಡೆದ ಪದಕಗಳಿಂದ ನಾವೆಲ್ಲ ಎಷ್ಟು ಬೀಗುತ್ತಿದ್ದೇವೆಂದರೆ, ಕಂಚಿನ ಪದಕ ಗೆದ್ದು ಮರಳಿದವರಿಗೆ ಕೋಟಿ ಕೋಟಿ ಹಣ ಕೊಡುವುದಾಗಿ ಗೆದ್ದ ವ್ಯಕ್ತಿಯ ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ. ಆದರೆ ಇಷ್ಟಕ್ಕೇ ನಾವು ಸಂತೃಪ್ತರಾಗಿ ಉಳಿಯಬೇಕೇ? ನಮ್ಮಲ್ಲಿ ಇದಕ್ಕಿಂತ ಮುಂದೆ ಹೋಗುವ ಕ್ಷಮತೆಯೇ ಇಲ್ಲವೇ? ಮೇಲ್ನೋಟಕ್ಕೆ ಕಾಣುವ ಕಾರಣವೆಂದರೆ, ನಮ್ಮ ದೇಶದ ಅಽಕಾರಸ್ಥರಿಗೆ ಕ್ರೀಡೆಯ ಮೇಲೆ ವಿಶೇಷ ಆಸಕ್ತಿ ಅಥವಾ ಒತ್ತು ಇಲ್ಲದಿರುವುದು. ೧೪೦ ಕೋಟಿ ಜನಸಂಖ್ಯೆ ಯಲ್ಲಿ ಒಬ್ಬರೂ ‘ಬಂಗಾರದ ಮನುಷ್ಯ’ರಿಲ್ಲ ಅಂದರೆ ನಮ್ಮನ್ನಾಳುವವರಲ್ಲಿ ಅದೇನೋ ಅಗಾಧವಾದ ಕೊರತೆ ಇದೆ ಅಂತಲೇ ಲೆಕ್ಕ.
ಅಲ್ಲಿ ಇಲ್ಲಿ ಕಂಚು ಪಡೆದಾಗ ಸಂಭ್ರಮಿಸುವುದನ್ನು ಬಿಟ್ಟರೆ ನಾವು ಕ್ರೀಡೆಯನ್ನು ಎಂದೂ ಅಷ್ಟು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆಯನ್ನೇ ನಾವು ಸಂಭ್ರಮಿಸುತ್ತೇವೆಯೇ ಹೊರತು, ಮುಂದೇನೆಂಬುದರ ಬಗ್ಗೆ ಅಲ್ಲವೇ ಅಲ್ಲ. ಇದು ಭಾರತದ ಭೌಗೋಳಿಕ ಅವಗುಣ ಎನ್ನಬಹುದೇ? ಹಾಗಿರಲೂ ಸಾಧ್ಯವಿಲ್ಲ. ಕೇವಲ ಹವಾಮಾನ ಒಂದನ್ನೇ ನೆಪವಾಗಿಟ್ಟುಕೊಂಡು ಹಾರಿಕೆಯ ಉತ್ತರ ಬಂದರೆ ಅದನ್ನು ಒಪ್ಪಿಕೊಳ್ಳಲಾದೀತೇ? ನಮ್ಮ ದೇಶದಲ್ಲಿ ಕ್ರೀಡೆ ಅಂದರೆ ಕ್ರಿಕೆಟ್! ಅದನ್ನು ಹೊರತುಪಡಿಸಿ ಉಳಿದಾವ ಕ್ರೀಡೆಯೂ ಇಲ್ಲ ಎಂಬ ಧೋರಣೆ.
ಕ್ರಿಕೆಟ್ಟಿಗೆ ಸಿಗುವ ಮಾನ, ಸಮ್ಮಾನ, ಬಹುಮಾನ ಇನ್ನಾ ಕ್ರೀಡೆಗೂ ಸಿಗುತ್ತಿಲ್ಲ. ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಒಂದು ಬಂಗಾರ
ಗೆಲ್ಲುವುದೂ ಅಸಾಧ್ಯವಾಗುತ್ತಿದೆ ಅಂದರೆ ನಾವು ಉಳಿದ ಕ್ರೀಡೆಗಳ ಬಗ್ಗೆ ಎಷ್ಟೊಂದು ನಿರಾಸಕ್ತರಾಗಿದ್ದೇವೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಬಾರಿಯ ಬಜೆಟ್ಟಿನಲ್ಲೂ, ಕೆಂಪುಕೋಟೆ ಭಾಷಣದಲ್ಲೂ ನಾವು ಕ್ರೀಡೆಯ ಪ್ರಸ್ತಾಪ ಮಾಡೇಮಾಡುತ್ತೇವೆ. ಆದರೆ ಅವೆಲ್ಲ ಕೇವಲ ಕಾಗದಗಳಲ್ಲಿಯೇ ಉಳಿದು ಕೊಳ್ಳುವ ಅಥವಾ ಭಾಷಣದಲ್ಲೇ ಪರಿಸಮಾಪ್ತಿಗೊಳ್ಳುವ ಬಾಬತ್ತಿನಂತೆ ಕಾಣುತ್ತಿವೆ.
ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಗುಂಪಿನಿಂದ ಈ ದಿಸೆಯಲ್ಲಿ ಬದಲಾವಣೆ ಅಸಾಧ್ಯ; ಬದಲಾವಣೆ ಆಗಬೇಕಿರುವುದು ನಮ್ಮ ಸರಕಾರದಿಂದ, ಅಭಿ
ವೃದ್ಧಿಯ ಜಪ ಮಾಡುತ್ತಿರುವವರಿಂದ, ಜಗತ್ತಿನ ಭೂಪಟದಲ್ಲಿ ಭಾರತದ ಹೆಸರು ಎದ್ದು ಕಾಣಬೇಕೆಂದು ಬಯಸುವವರಿಂದ. ಕಂಚು ಗೆದ್ದು ಹೆಂಚು ಹಾರುವಂತೆ ಕೂಗುವುದರಿಂದ ಏನೂ ಲಾಭವಿಲ್ಲ. ಈಗ ನಮಗುಳಿದಿರುವ ಒಂದೇ ಮಾರ್ಗ ಅಂದರೆ, ನಮ್ಮವರಿಗೆ ಇಷ್ಟಾದರೂ ದಕ್ಕಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವುದು! ಇಷ್ಟೊಂದು ದೊಡ್ಡ ದೇಶಕ್ಕೆ ಇಷ್ಟು ಕಡಿಮೆ ಪದಕ ದೊರಕುತ್ತಿದೆ ಅಂದರೆ ಹೆಮ್ಮೆ ಪಡಬೇಕೋ ಅಥವಾ ನಮ್ಮನ್ನೇ ನಾವು ಶಪಿಸಿಕೊಳ್ಳಬೇಕೋ? ಪ್ರಾರಂಭದಲ್ಲಿ ಏನೇನೋ ಭರವಸೆ ಮೂಡಿಸಿ, ನಂತರ ಎಲ್ಲವೂ ಠುಸ್! ಒಂದಂತೂ ಒಪ್ಪಿಕೊಳ್ಳಲೇಬೇಕು.
ನಮ್ಮ ದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಯಾವೊಂದು ವಾತಾವರಣ ಇನ್ನೂ ಸೃಷ್ಟಿಯಾಗಿಯೇ ಇಲ್ಲ. ಅದಕ್ಕೆ ಪೂರಕ ಪ್ರೋತ್ಸಾಹಗಳೂ ಸಿಗುತ್ತಿಲ್ಲ. ಇದ್ದುದರಲ್ಲೇ ಸಂತುಷ್ಟರಾಗಿ, ನಮ್ಮ ಬೆನ್ನನ್ನು ನಾವೇ ಚಪ್ಪರಿಸಿಕೊಳ್ಳುತ್ತ, ಪಡೆದ ಕಂಚಿನ ಹಾರವನ್ನೇ ಲೆಕ್ಕ ಮಾಡುತ್ತ, ಮುಂದಿನ ಕ್ರೀಡೆಗಾಗಿ ‘ತಯಾರಿ’ ನಡೆಸುವುದು!
(ಲೇಖಕರು ಹವ್ಯಾಸಿ ಬರಹಗಾರರು)