Saturday, 23rd November 2024

ಸಸ್ಯಶಾಸ್ತ್ರಜ್ಞರಿಗೆ ಬಳ್ಳಿಗಳೆಂದರೆ ಇಂದಿಗೂ ನಿಗೂಢ

ಶಿಶಿರ ಕಾಲ

shishirh@gmail.com

ನಮ್ಮ ಊರಿನ ತೋಟಗಳಲ್ಲಿ ಅಡಕೆ, ತೆಂಗು ಮತ್ತು ಬಾಳೆ ಬಿಟ್ಟು ಬೆಳೆಸುವ ಇನ್ನೆರಡು ಗಿಡಗಳಿವೆ. ಅವು ಗಿಡ ಎನ್ನುವುದಕ್ಕಿಂತ ಬಳ್ಳಿಗಳು. ವೀಳ್ಯದೆಲೆ ಬಳ್ಳಿ ಮತ್ತು ಕಾಳುಮೆಣಸಿನ ಬಳ್ಳಿ. ಅಡುಗೆಗೆ ಕಾಳುಮೆಣಸು ಬೇಕು ಮತ್ತು ತಾಂಬೂಲಕ್ಕೆ ವೀಳ್ಯದೆಲೆ. ಇವು ನಮ್ಮ ಕೃಷಿಯ ಉಪೋತ್ಪನ್ನಗಳು. ಇಲ್ಲಿ ಸ್ವಂತ ಬಳಕೆಗೆ ಪ್ರಾಧಾನ್ಯ, ಹೆಚ್ಚುವರಿಯಿದ್ದರೆ ಮಾರಾಟ, ಲಾಭ ಇತ್ಯಾದಿ.

ಇವೆರಡೂ ಸಸ್ಯಗಳು ತೀರಾ ಹತ್ತಿರದ ಸಂಬಂಧಿ. ವೈಜ್ಞಾನಿಕವಾಗಿ ಒಂದೇ ತಾಯಿಯ ಮಕ್ಕಳು, ಪೈಪರ್ ಕುಲಕ್ಕೆ ಸೇರಿದವು. ವೀಳ್ಯದೆಲೆಯ ಬಯೋ ನೋಮಿಯಲ್ ಹೆಸರು ಪೈಪರ್ ಬೀಟ್ಲೆ. ಕಾಳುಮೆಣಸಿನದು ಪೈಪರ್ ನಿಗ್ರಮ. ವೀಳ್ಯದೆಲೆಗೆ ಮತ್ತು ಕಾಳುಮೆಣಸಿನ ಬಳ್ಳಿಯ ಎಲೆಯ ಆಕಾರದಲ್ಲಿನ ಹೋಲಿಕೆ, ಮೇಲ್ನೋಟಕ್ಕೆ ಇದರ ಪರಿಚಯವಿಲ್ಲದವರಿಗೆ ಒಂದೇ ಎಂಬಂತೆ ಕಂಡರೂ ಸೂಕ್ಷ್ಮದಲ್ಲಿ ಅಜಗಜಾಂತರವಿದೆ. ವೀಳ್ಯದೆಲೆ ಕಾಯಿ ಬಿಡುವುದಿಲ್ಲ, ಆದರೆ ಕಾಳುಮೆಣಸಿನ ಬಳ್ಳಿಯ ಕಾಯಿ – ಬ್ಲ್ಯಾಕ್ ಪೆಪ್ಪರ್.

ವೀಳ್ಯದೆಲೆಯ ಬಳ್ಳಿ ಬೆಳೆಸುವುದು ಸುಲಭವಲ್ಲ, ತೀರಾ ನಾಜೂಕು. ಬುಡ ಸದಾ ತಂಪಾಗಿರ ಬೇಕು. ಪ್ರತೀ ವರ್ಷ ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಕೊಡಬೇಕು. ನೆಲ ಸ್ವಲ್ಪವೇ ಒಣಗಿದರೂ ಬಳ್ಳಿ ಬಾಡಿಹೋಗುತ್ತದೆ. ನಂತರ ಅದನ್ನು ಬದುಕಿಸಿ ಕೊಳ್ಳುವುದು ಕೂಡ ಕಷ್ಟ. ಅಲ್ಲದೆ ಹಬ್ಬುವ ಮರವನ್ನು ಅಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುವ ತಾಕತ್ತು ವೀಳ್ಯದೆಲೆಗೆ ಇಲ್ಲ. ಹಾಗಾಗಿ ಪ್ರತೀ ವರ್ಷ ಎಲೆಬಳ್ಳಿ ಬೆಳೆದಂತೆ ಮರಕ್ಕೊಂದು ಸುತ್ತು ಅಡಕೆಯ ಎಲೆಯನ್ನು ಒಣಗಿಸಿ ಮಾಡಿದ ತೆಳ್ಳನೆಯ ಹಗ್ಗದಿಂದ ಕಟ್ಟಿ ಕೊಡಬೇಕು.

ಇಲ್ಲದಿದ್ದರೆ ಗಟ್ಟಿ ಮಳೆಗೆ ಮರಕ್ಕೆ ಹಬ್ಬಿದ ಉದ್ದನೆಯ ಬಳ್ಳಿ ನೆಲಕ್ಕೆ ಬಿದ್ದು ಬಿಡುತ್ತದೆ. ಅಲ್ಲಿಗೆ ಅದರ ಕಥೆ ಮುಗಿದಂತೆ. ಆದರೆ ಕಾಳುಮೆಣಸಿನ ಬಳ್ಳಿ ಹಾಗಲ್ಲ, ಗಟ್ಟಿ ಕುಳ. ಇದಕ್ಕೆ ವಿಶೇಷ ವಾಗತಿ, ಅರ್ಚನೆ ಬೇಕಾಗುವುದಿಲ್ಲ. ಆಗೀಗ ಬುಡಕ್ಕೆ ನೀರು ಬಿದ್ದರೆ ಸಾಕು. ಹಬ್ಬುವ ಮರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತವೆ. ವೀಳ್ಯದೆಲೆ ಬಳ್ಳಿಗಿಂತ ಇದರ ಬೆಳವಣಿಗೆಯ ವೇಗ ಜಾಸ್ತಿ. ಇಷ್ಟು ಹತ್ತಿರದ ಎರಡು ಲತೆಗಳ ಉತ್ಪನ್ನ ಬೇರೆ ಬೇರೆ.

ಒಂದರದು ಎಲೆಯೇ ಉತ್ಪನ್ನ, ಇನ್ನೊಂದರದು ಕಾಳು. ಕಾಳುಮೆಣಸಿನ ಎಲೆಯನ್ನು ತಿನ್ನಲಿಕ್ಕೆ ಸಾಧ್ಯವಿಲ್ಲ. ನಮ್ಮಲ್ಲಿ ತಾಂಬೂಲದ ಬಟ್ಟಲು ಇಡುವುದು ಖಡ್ಡಾಯ. ಈ ವೀಳ್ಯದೆಲೆಯ ನಾಜೂಕಿನಿಂದಾಗಿ ಅದನ್ನು ಒಳ್ಳೆಯದಾಗಿ ಬೆಳೆಸುತ್ತಾನೆ ಎಂದರೆ ಆತ ಉತ್ತಮ ಕೃಷಿಕ ಎನ್ನುವ ಒಂದು ನಂಬಿಕೆ ಎಲ್ಲರಲ್ಲೂ ಇದೆ. ಮನೆಯಲ್ಲಿ ವಿಶೇಷವಿದ್ದು ಅಕ್ಕ ಪಕ್ಕದ ಮನೆಯವರು ಬರುವವರಿದ್ದರೆ ಆ ದಿನ ವಿಶೇಷವಾಗಿ ತಾಂಬೂಲದ ಬಟ್ಟಲು ತಯಾರಾಗಿರುತ್ತದೆ. ವೀಳ್ಯದೆಲೆ ಒಳ್ಳೆಯ ಕೃಷಿಕನ ದ್ಯೋತಕವೆಂಬ ಕಾರಣಕ್ಕೆ ಅತ್ಯಂತ ಒಳ್ಳೆಯ ಎಲೆಯನ್ನೇ ಕೊಯ್ದು ತಂದು ಬಟ್ಟಲಲ್ಲಿ ಹರವಿ ಇಡುವುದು ರೂಢಿ.

ಅವರ ಮನೆಯ ವೀಳ್ಯದೆಲೆಯ ವಿಶೇಷವನ್ನು ತಾಂಬೂಲ ಸವಿಯುತ್ತ ಹೊಗಳುವುದು ತೀರಾ ಸಾಮಾನ್ಯ ಸೀನ್ ಆಗಿತ್ತು. ಮನೆಯಲ್ಲಿ ವಿಶೇಷವಿದ್ದಾಗ ಆ ತಾಂಬೂಲ ಬಟ್ಟಲ ತಯಾರಿಯ ಕೆಲಸ ನನಗೆ ಬರುತ್ತಿತ್ತು. ಆಗ ತುಂಟಾಟಿಕೆಗೆ ಎಲೆ ಅಡಕೆಯ ಬಟ್ಟಲಿನ ವೀಳ್ಯದೆಲೆಯ ಮಧ್ಯೆ ಕಾಳು ಮೆಣಸಿನ ಎಲೆಯನ್ನು ಇಡುವುದು ಆಗಿನ ಒಂದು ಕುಚೇಷ್ಟೆ. ಕಾಯಂ ಎಲೆ ಅಡಿಕೆ ಅಗಿಯುವವರಿಗೆ ಮಧ್ಯ ದಲ್ಲಿಟ್ಟ ಕಾಳುಮೆಣಸಿನ ಎಲೆ ಕಂಡಾಕ್ಷಣ, ಮುಟ್ಟಿದಾಕ್ಷಣ ತಿಳಿದುಬಿಡುತ್ತಿತ್ತು.

ಆದರೆ ಕೆಲವು ಅಪರೂಪಕ್ಕೆ ಎಲೆ ಅಡಿಕೆ ತಿನ್ನುತ್ತಿದ್ದವರ ಕೈಗೆ ಅದು ಸಿಕ್ಕರೆ ಅವರು ವೀಳ್ಯದೆಲೆಯೆಂದು ತಿಂದು, ಕೂಡಲೆ ವ್ಯಾಕ್ ಎಂದು ಉಗಿಯುತ್ತಿದ್ದರು. ಈ ರೀತಿ ತುಂಟತನ ಮಾಡಿ ನೋಡುವುದು ಒಂದು ಮಜಾ. ಎರಡು ಒಂದೇ ರೀತಿಯಿರುವ, ಒಂದೇ ಜಾತಿಯ ಆದರೆ ಉಪಪ್ರಭೇದ ಮಾತ್ರ ಬೇರೆಯಾಗಿರುವ ಈ ಎರಡು ಬಳ್ಳಿಗಳಲ್ಲಿ ಅದೆಷ್ಟು ವ್ಯತ್ಯಾಸ. ಇದು ಒಂದು ವಿಚಾರ ವಾಯಿತು.

ಮನೆಯ ಹಿಂದಿನ ಕಾಡಿನಲ್ಲಿ ಇನ್ನು ಕೆಲವು ಜೋಡಿ ಬಳ್ಳಿಗಳಿದ್ದವು. ಅವು ನೋಡಲು ಒಂದೇ ರೀತಿ ಎಲೆಯನ್ನು ಹೊಂದಿ
ರುತ್ತಿದ್ದವು. ಆದರೆ ಅವುಗಳ ಕಾಂಡವನ್ನು, ಹೂವನ್ನು ಅಥವಾ ಕಾಯಿಯನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ ಅವು ಸಂಪೂರ್ಣ
ಬೇರೆ ಎಂದು ತಿಳಿಯುತ್ತಿತ್ತು. ಅವು ಒಂದೇ ಪ್ರಭೇದ, ಸಸ್ಯಕುಲಕ್ಕೂ ಸೇರಿದವಾಗಿರುತ್ತಿರಲಿಲ್ಲ! ಕಾಡಿನಲ್ಲಿ ಇರುವ ಪ್ರತ್ಯೇಕ
ಕುಲದ ಎರಡು ಬಳ್ಳಿಗಳು ಒಂದೇ ತೆರನಾದ ಎಲೆಯನ್ನು, ಆಕಾರವನ್ನು ಹೊಂದುವುದು ಹೇಗೆ ಎಂದು ಆಗೆಲ್ಲ ಬಹಳ ಆಶ್ಚರ್ಯ ವಾಗುತ್ತಿತ್ತು.

ಪೃಕೃತಿಯನ್ನು ಸ್ವಲ್ಪವೇ ಸೂಕ್ಷ್ಮವಾಗಿ ನೋಡಿದರೂ ಇಂತಹ ಸಂಬಂಧವೇ ಇಲ್ಲದ ಎರಡು ಸಸ್ಯಗಳ, ಜೀವಿಗಳ ನಡುವೆ ಒಂದಿಷ್ಟು ಹೋಲಿಕೆಗಳು ಬಹಳಷ್ಟು ಬಾರಿ ಎದುರಾಗುತ್ತವೆ ಮತ್ತು ಅಚ್ಚರಿ ಹುಟ್ಟಿ ಹಾಕುತ್ತವೆ. ಅದರಲ್ಲಿಯೂ ಬೇರೆ ಕುಲದ ಸಸ್ಯಗಳು ಹೋಲಿಕೆ ಯಾಗುವಂತೆ ಇನ್ನೊಂದು ಬೆಳೆಯುವುದು. ಪ್ರಾಣಿಗಳಿಗಾದರೆ ಕಣ್ಣಾರೆ ಕಂಡು ವಿಕಾಸನವಾದವು ಎನ್ನಬಹುದು. ವಿಕಾಸವಾದ ವನ್ನು ಒಪ್ಪುವುದೇ ಆದರೆ ಪ್ರಾಣಿಗಳಲ್ಲಿ ಅದು ಸುಲಭ, ಏಕೆಂದರೆ ಗ್ರಹಿಸಲು ಇಂದ್ರೀಯಗಳಿವೆ.

ಆದರೆ ಹೀಗೆ ಇನ್ನೊಂದರ ಆಕಾರವನ್ನು ಯಥಾವತ್ತು ನಕಲು ಹೊಡೆಯುವ ಸಸ್ಯ ಇನ್ನೊಂದು ಸಸ್ಯದ ಆಕಾರವನ್ನು ಗ್ರಹಿಸುವು ದಾದರೂ ಹೇಗೆ? ಅವಕ್ಕೇನು ಕಣ್ಣು ಉಂಟೆ, ಅವೇನು ಕಾಡಿನ ಸುತ್ತ ಓಡಾಡಿಕೊಂಡು ನೋಡಿ ಬರಲು ಸಾಧ್ಯವೇ? ಹೀಗೊಂದಿ ಷ್ಟು ಪ್ರಶ್ನೆಗಳು ಉದ್ಭವವಾಗಿ ಹೋಲಿಕೆಗೆ ಸಮಂಜಸವಾದ ಉತ್ತರ ಸಿಗುವುದಿಲ್ಲ. ಪ್ರಾಣಿಗಳು ಮಿಮಿಕ್ರಿ ಮಾಡಬಹುದು, ಆದರೆ ಸಸ್ಯಗಳು ಈ ಮಿಮಿಕ್ರಿ ಕಲಿತದ್ದು, ಹೊಂದಿಸಿಕೊಂಡದ್ದು, ಬದಲಾದದ್ದು ಹೇಗೆ? ಇದು ವಿಕಾಸ ದದ ಯಾವ ಆಯಾಮ ದಲ್ಲಿಯೂ ಹೊಂದಿಕೆಯಾಗುವುದಿಲ್ಲ.

ಪ್ರೊ.ಅರ್ನೆಸ್ಟೊ ಜಿಯನೊಲಿ ಚಿಲಿ ದೇಶದ ಪರಿಸರ ತಜ್ಞ ಮತ್ತು ಪ್ರಾಧ್ಯಾಪಕ. ಆತ ಕಲಿಸುತ್ತಿದ್ದುದು ಸಸ್ಯಶಾಸ್ತ್ರ. ಪಾಠಮಾಡಲು ಶಿಷ್ಯರನ್ನು ಕಾಡಿನಲ್ಲಿ ಓಡಾಡಿಸುವುದು ಸಾಮಾನ್ಯವಾಗಿತ್ತು. ಕಾಡಿಗೆ ಹೋದಾಗ ನಿಗದಿತ, ಪಠ್ಯಕ್ಕೆ ಸಂಬಂಧಿಸಿದ ಗಿಡದತ್ತ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಒಂದು ದಿನ ಇನ್ನು ಮುಂದೆ ನಾನು ಪ್ರತೀ ದಿನ ಸಸ್ಯಗಳನ್ನು ನೋಡಲೆಂದೇ ಕಾಡಿಗೆ ಒಬ್ಬನೇ ಹೋಗುವುದು ಎಂದು ನಿರ್ಧರಿಸಿದ. ಕಾಡನ್ನು ಅನುಭವಿಸಬೇಕೆಂದರೆ ಒಬ್ಬರೇ ಹೋಗಬೇಕೇ ಹೊರತು, ಗುಂಪಿನಲ್ಲಿ ಕೂಗುತ್ತ ಹೋದರೆ ಕಾಡು ಗ್ರಾಹ್ಯವಾಗುವುದಿಲ್ಲ, ದಕ್ಕುವುದಿಲ್ಲ.

ಪ್ರೊ. ಅರ್ನೆಸ್ಟೊ ದಶಕದ ಹಿಂದೆ ಹೀಗೆ ಒಂದು ದಿನ ಚಿಲಿಯ ಮಳೆಕಾಡಿನಲ್ಲಿ ಒಬ್ಬನೇ ಓಡಾಡುತ್ತಿದ್ದ. ಆಗ ‘ಅರಾಯನ್’ ಎನ್ನುವ ಪೊದೆಯಂಥ ಗಿಡ ಆತನ ಕಣ್ಣಿಗೆ ಬಿತ್ತು. ಅದು ಪರಿಚಿತ ಗಿಡ. ಎಂದರಲ್ಲಿ, ಊರಲ್ಲೂ ಕಾಣುವ ಗಿಡ. ಆದರೆ ಆತ ನೋಡಿದ ಕಾಡಿನ ಗಿಡದ ಕಾಂಡ ವಿಭಿನ್ನವಾಗಿತ್ತು. ಕಾಂಡವೇನೋ ಅರಾಯನ್‌ನದೆ ಇತ್ತು ಆದರೆ ಆ ಕಾಂಡದ ಸುತ್ತ ಬೇರೆ ಒಂದು ಬಳ್ಳಿ ಸುತ್ತಿಕೊಂಡಿತ್ತು. ಆದರೆ ವಿಶೇಷವೇನೆಂದರೆ ಹಾಗೆ ಸುತ್ತಿಕೊಂಡ ಬಳ್ಳಿ ಆ ಅರಾಯನ್ ಗಿಡದ ಎಲೆಯನ್ನು ಬಣ್ಣ, ಗಾತ್ರ ಮತ್ತು ಆಕಾರದಲ್ಲಿ ನೂರು ಪ್ರತಿಶತ ಹೊಂದುತ್ತಿತ್ತು.

ಇದು ಸಸ್ಯಶಾಸ್ತ್ರದ ಒಂದು ದೊಡ್ಡ ಗ್ರಹಿಕೆ ಎಂದೇ ಹೇಳಬಹುದು. ಇಲ್ಲಿ ಅರಾಯನ್ ಗಿಡಕ್ಕೆ ಸುತ್ತಿಕೊಂಡದ್ದು ಬೊಕ್ಯುಲಾ ಟ್ರೈ-ಲಿಯೇಟ್ ಎನ್ನುವ ವಿಪರೀತ ಬೇರೆಯದೇ ಸಸ್ಯಕುಲಕ್ಕೆ ಸೇರಿದ್ದ ಗಿಡ. ಅದು ಹೇಗೋ ಬೊಕ್ಯುಲಾ ಗಿಡ ತಾನು ಆಶ್ರಯಿಸಿದ್ದ ಅರಾಯನ್ ಗಿಡವನ್ನು ಯಥಾವತ್ತು ನಕಲು ಮಾಡುತ್ತಿತ್ತು. ಇದು ಸಸ್ಯ ಅಧ್ಯಯನದ ದಿಶೆಯನ್ನೇ ಬದಲಿಸಿತು. ಅಲ್ಲಿಯವರೆಗೆ ಈ ರೀತಿ ತಾನು ಆಶ್ರಯಿಸಿದ ಗಿಡವನ್ನೇ ನಕಲು ಮಾಡುವ ಇನ್ನೊಂದು ಬಳ್ಳಿಯ ಪತ್ತೆಯಾದ ವರದಿಯಾಗಿರಲಿಲ್ಲ.

ಈ ವರದಿಯ ನಂತರ ಸಹಜವಾಗಿ ಕುತೂಹಲ ಹೆಚ್ಚಿ, ಈ ರೀತಿ ನಕಲು ಮಾಡುವ ಹಲವು ಬಳ್ಳಿಗಳನ್ನು ಪತ್ತೆಹಚ್ಚಲಾಯಿತು. ಆದರೆ ವಿಜ್ಞಾನಿಗಳಿಗೆ ಇಂದಿಗೂ ಇದರ ಕಾರಣ ಮತ್ತು ಹೇಗೆ ಸಾಧ್ಯವಾಯಿತು ಎನ್ನುವುದು ಬಗೆಹರಿದಿಲ್ಲ. ಏಕೆ ಈ ಬಳ್ಳಿಗಳು ಇನ್ನೊಂದು ಗಿಡವನ್ನು, ತಾನೇ ಆಶ್ರಯ ಪಡೆಯುವ ಗಿಡದ ಎಲೆಯನ್ನು ನಕಲು ಮಾಡುತ್ತವೆ ಎಂದು. ಬಹುಶಃ ಇದು ಆಶ್ರಯ ಕೊಟ್ಟ ಗಿಡವನ್ನು ತಿನ್ನದ ಸಸ್ಯಾಹಾರಿ ಪ್ರಾಣಿಗಳು ತನ್ನನ್ನಷ್ಟೇ ತಿನ್ನದಿರಲಿ, ತಿನ್ನುವುದೇ ಆದರೆ, ಇಬ್ಬರನ್ನೂ ತಿನ್ನಲಿ ಎಂದಿರ ಬೇಕು. ಹಾಗೊಂದು ವಾದವನ್ನು ನಂಬುವುದೇ ಆದರೆ, ಒಪ್ಪುವುದೇ ಆದರೆ ಆಗ ಮತ್ತೆ ಏಳುವ ಪ್ರಶ್ನೆ, ಈ ಬಳ್ಳಿಗಳು ಇನ್ನೊಂದು ಆಶ್ರಯಿಸುವ ಗಿಡದ ಎಲೆಯ ಆಕಾರವನ್ನು ಗ್ರಹಿಸಿzದರೂ ಹೇಗೆ ಎಂದು.

ನಮ್ಮ ಊರಿನಲ್ಲಿ ಚಂದರಕಲು ಎನ್ನುವ ಗಿಡ ಎಡೆ ಇದೆ. ಅದರ ಕಾಂಡಕ್ಕೆ ಗಾಯ ಮಾಡಿದರೆ ಕೆಂಪು ಜೆಲ್ಲಿಯಂತಹ ದ್ರವ
ಹೊರಬರುತ್ತದೆ ಮತ್ತು ಆ ಗಾಯವನ್ನು ಸುತ್ತಿಕೊಳ್ಳುತ್ತವೆ. ಇದು ಆ ಸಸ್ಯ ತನ ಗಾದ ಗಾಯದಿಂದ ಸೋಂಕು ತಗುಲದಿರಲಿ
ಎಂದು ಮಾಡಿಕೊಂಡ ವ್ಯವಸ್ಥೆ. ಈ ಗಿಡದ ಸುತ್ತ ಬೆಳೆಯುತ್ತಿದ್ದ ಬಳ್ಳಿಗಳು ಯಾವತ್ತೂ ಆ ಗಿಡವನ್ನು ಆವರಿಸುವುದಿಲ್ಲ. ಅದಕ್ಕೆ
ಕಾರಣವಿದೆ.

ಚಂದರಕಲಿನ ಗಿಡದ ಎಲೆಯ ಅಗಲ ಒಂದು ಚಿಕ್ಕ ಬಟ್ಟಲಿನಷ್ಟು. ಈ ಗಿಡದ ಎಲೆಗಳು ಅಷ್ಟು ದಟ್ಟ ಮತ್ತು ದೊಡ್ಡವಿರು ತ್ತಿದ್ದರಿಂದ ಅದರ ಕೆಳಗೆ ಸೂರ್ಯನ ರಶ್ಮಿ ಮುಟ್ಟುವುದಿಲ್ಲ. ಹಾಗಾಗಿ ಅಲ್ಲಿ ಹುಟ್ಟುವ ಯಾವೊಂದು ಗಿಡವೂ ಬದುಕುವುದಿಲ್ಲ. ಆದರೆ ಕೆಲವು ಬಳ್ಳಿಗಳು ಅವುಗಳ ಸುತ್ತ ನೆಲಕ್ಕೆ ಹರಡಿಕೊಳ್ಳುತ್ತವೆ. ಅವು ಇನ್ನೊಂದು ಗಿಡಕ್ಕೆ ಹಬ್ಬುವ ಬಳ್ಳಿಗಳೇ. ಆದರೆ ಚಂದರಕಲಿನ ಗಿಡದ ತಂಟೆಗೆ ಹೋಗುವುದಿಲ್ಲ. ಅದಕ್ಕೆ ಕಾರಣವಿದೆ. ಈ ಚಂದರಕಲಿನ ಗಿಡದ ಕಾಂಡ ಮತ್ತು ಎಲೆಯ
ಮೇಲೆ ಅತ್ಯಂತ ನಯವಾದ, ಬಾಗುವ, ನಾವು ಮುಟ್ಟಿದರೆ ಗಾಯವಾಗದಷ್ಟು ಸೂಕ್ಷ್ಮದ ಮುಳ್ಳುಗಳಿರುತ್ತವೆ.

ಅವನ್ನು ಮುಳ್ಳು ಎನ್ನುವುದಕ್ಕಿಂತ ರೋಮದ ರೀತಿಯ ರಚನೆ ಎಂದರೆ ಹೆಚ್ಚು ಸಮಂಜಸ. ಅವು ಯಾವುದೇ ಬಳ್ಳಿಯ ಟೆಂಡ್ರಿಲ್ಸ
ಗಳನ್ನು ಅಂಟಿಕೊಳ್ಳಲು ಬಿಡುವುದಿಲ್ಲ. ಒಮ್ಮೆ ಒಂದು ಹಾಗಲಬಳ್ಳಿಯನ್ನು ಚಂದರ ಕಲಿನ ಗಿಡಕ್ಕೆ ಹಬ್ಬಿಸಲು ಪ್ರಯತ್ನಿಸಿದಾಗ
ಅವು ಅಂಟಿಕೊಳ್ಳಲೇ ಇಲ್ಲ. ಹಾಗಲ ಬಳ್ಳಿ ಈ ಗಿಡದ ಮೇಲೆಯೇ ಬೆಳೆಯಲು ಪ್ರಯತ್ನಿಸುತ್ತಿತು, ಆದರೆ ಸೋತು ಮತ್ತೆ ನೆಲಕ್ಕೆ ಬೀಳುತ್ತಿತ್ತು. ಆದರೆ ಹೆಸರು ಗೊತ್ತಿಲ್ಲದ ಇನ್ನೊಂದು ಕಾಡು ಬಳ್ಳಿ ಮಾತ್ರ ಈ ಚಂದರಕಲಿನ ಗಿಡವನ್ನು ಬಳಸುವುದು ಹೇಗೆಂದು ಕಲಿತಿತ್ತು. ಅದು ಕಾಂಡದ ಶುರುವಿನಿಂದಲೇ ಒಂದೆರಡು ಸುತ್ತು ಹಾಕಿ ಸ್ವಲ್ಪ ಮೇಲಕ್ಕೆ ಬೆಳೆಯುತ್ತಿತ್ತು ಮತ್ತು ಇನ್ನೊಂದಿಷ್ಟು ಸುತ್ತು ಹಾಕುತ್ತಿತ್ತು. ಈ ಒಂದು ಬಳ್ಳಿ ಮಾತ್ರ ಈ ಸ್ಪರ್ಧೆಯಲ್ಲಿ ಗೆದ್ದದ್ದು. ಅದು ಹೇಗೆ ಹೀಗೆಯೇ ಈ ಗಿಡದ ಮೇಲೆ ಹಬ್ಬಬೇಕೆಂದು ಆ ಬಳ್ಳಿ ಕಲಿಯಿತೋ, ಗೊತ್ತಿಲ್ಲ.

ಬಳ್ಳಿಯೆಂದರೆ ನಾಜೂಕು ಎನ್ನುವ ಸಹಜ ಭಾವವಿದೆ. ಬಳ್ಳಿಗೆ ಆಧಾರಕ್ಕೆ ಏನಾದರೂ ಬೇಕು. ಅದು ಚಪ್ಪರ, ಅದಿಲ್ಲದಿದ್ದರೆ ನೆಲಕ್ಕೆ ಅಥವಾ ಏರಿಗೆ, ಗೋಡೆಗೆ ಹಬ್ಬಿಕೊಂಡುಬಿಡುತ್ತವೆಯಲ್ಲ. ಆದರೆ ಹದವಾದ ಮರದಷ್ಟೇ ದಪ್ಪವಾಗಿ, ಗಟ್ಟಿಯಾಗಿ ಬೆಳೆಯುವ ಬಳ್ಳಿಗಳೂ ಇವೆ. ಕರಾವಳಿ, ಮಲೆನಾಡಿನ ಕಾಡುಗಳಲ್ಲಿ ನೀರ್ಬಳ್ಳಿ ಎಂಬ ಒಂದು ಬಳ್ಳಿಯಿದೆ. ಅದರ ಗಾತ್ರ ಸುಮಾರಾಗಿ ಎರಡು ಕೈ ಸೇರಿಸಿದಷ್ಟು. ಇದು ಮರದಿಂದ ಮರಕ್ಕೆ ಹಬ್ಬುವ ಬಳ್ಳಿ. ಮಂಗಗಳು ಕಾಡಿನಲ್ಲಿ ಓಡಾಡುವಾಗ ಈ ಬಳ್ಳಿಯನ್ನು ಬಳಸಿ ಹೋಗುತ್ತವೆ.

ಇವು ಕೆಲವೊಮ್ಮೆ ಕೆಲವು ಗಿಡಗಳ ಸುತ್ತ ಹಬ್ಬಿ ಬೆಳೆಯುತ್ತವೆ. ಅವುಗಳ ಅಪ್ಪುಗೆಯ ಗಟ್ಟಿತನ ಎಷ್ಟಿರುತ್ತದೆಯೆಂದರೆ ಅವು ಹಬ್ಬಿದ ಗಿಡ ಗಾತ್ರದಲ್ಲಿ ಅಗಲವಾಗಲು ಬಿಡುವುದೇ ಇಲ್ಲ. ಇದಕ್ಕೆ ನೀರ್ಬಳ್ಳಿ ಎಂದು ಹೆಸರು ಬರಲು ಕಾರಣ ಅದನ್ನು ಕಡಿದರೆ ಬಾಟಲಿಯಲನ್ನು ಸೋರಿದಷ್ಟು ನೀರು ಸರಾಗವಾಗಿ ಸುರಿಯುತ್ತದೆ. ನಮ್ಮಲ್ಲಿ ಶಿಕಾರಿಗೆ, ಕಾಡಿಗೆ ಹೋದಾಗ ಬಾಯಾರಿಕೆಯಾದರೆ ಈ ಬಳ್ಳಿಯನ್ನು ಕಡಿದು ಅದರಿಂದ ಬರುವ ನೀರನ್ನು ಕುಡಿಯುವುದಿದೆ. ಈ ರೀತಿ ನೀರು ಕೊಡುವ ಕೆಲವು ಬಳ್ಳಿಗಳು ಪಶ್ಚಿಮ ಘಟ್ಟದಲ್ಲಿವೆ.

ಕೆಲವು ಬಳ್ಳಿಗಳಿಗೆ ತಾನು ಹಬ್ಬುವ ಮರದ ಉಪಕಾರದ ಅರಿವಿದ್ದಂತಿದೆ. ಅವು ಎಂದೂ ಆಶ್ರಿತ ಮರವನ್ನು ಮೀರಿ ಬೆಳೆಯುವು ದಿಲ್ಲ. ಅವುಗಳದು ಸಹಬಾಳ್ವೆ ಎಂದು ಮೇಲ್ನೋಟಕ್ಕೆ ಕಂಡರೂ ಗಿಡ ಮತ್ತು ಬಳ್ಳಿ ಪರಸ್ಪರ ಜೀವನದ ಸ್ಪರ್ಧೆ ನಡೆಸುತ್ತಿರುತ್ತವೆ. ಇನ್ನು ಕೆಲವು ಬಳ್ಳಿಗಳು ಇಡೀ ಕಾಡನ್ನೇ ಸರ್ವನಾಶಮಾಡುವ ಮಟ್ಟಿಗೆ ಬೆಳೆಯುವುದೂ ಇದೆ. ಫ್ಲೋರಿಡಾದ ಉಪ ನಗರಗಳ ಪಕ್ಕದಲ್ಲಿ ಚಿಕ್ಕ ಚಿಕ್ಕ, ನೂರು ಐನೂರು ಎಕರೆಯ ಕಾಡುಗಳಿವೆ. ನಾನು ಅಲ್ಲಿ ಈಗೆರಡು ವರ್ಷದ ಹಿಂದೆ ಹೋಗಿದ್ದಾಗ ಈ ಕಾಡುಗಳನ್ನು ಒಂದಿಷ್ಟು ಬಲಿತ ಬಳ್ಳಿಗಳು ಸಂಪೂರ್ಣ ವಶಪಡಿಸಿಕೊಂಡದ್ದನ್ನು ಗ್ರಹಿಸಿದ್ದೆ.

ಅವು ಹೇಗೆಂದರೆ ಆ ಕಾನನದ ಚಪ್ಪರದಂತೆ ಕಾಣುತ್ತಿದ್ದವು. ಅವು ಬಹುತೇಕ ಮರಗಳ ಸುತ್ತ ಗಟ್ಟಿಯಾಗಿ ಅಂಟಿ ಆವರಿಸಿದ್ದವು. ಅದು ಕುಡ್ಜು ಎನ್ನುವ ಬಳ್ಳಿ. ೧೮೭೬ ರಲ್ಲಿ ಅಮೆ ರಿಕದಲ್ಲಿ ಸುಂದರ ವಿದೇಶಿ ಬಳ್ಳಿ- ಗಿಡಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಅಲ್ಲಿ ಕುಡ್ಜು ಬಳ್ಳಿ ಬಹಳಷ್ಟು ಜನರನ್ನು ಆಕರ್ಷಿಸಿತ್ತು. ಈ ಬಳ್ಳಿಯನ್ನು ಸುಲಭದಲ್ಲಿ ಮನೆಯೊಳಗೆ ಬೆಳೆಸಬಹುದು ಎಂದು ಸಸಿಗಳು ಯಥೇಚ್ಛ ಮಾರಾಟವಾದವು. ಹೀಗೆ ಈ ಬಳ್ಳಿ ಯುರೋಪಿ ನಿಂದ ಅಮೆರಿಕಾಕ್ಕೆ ವಲಸೆ ಬಂದು ನೆಲೆಸಿತು.

ಕ್ರಮೇಣ ಇದು ಮನೆಯ ಪಕ್ಕದ ಕಾಡನ್ನು ಸೇರಿತು. ಇಂದು ಈ ಬಳ್ಳಿ ಅಮೆರಿಕದ ಹಲವು ರಾಜ್ಯಗಳ ಕಾಡನ್ನು ಹೊಕ್ಕಿ ಆಗಿದೆ.
ಕುಡ್ಜು ಮೂಲತಃ ಆಫ್ರಿಕಾದ ಮಳೆಕಾಡಿನ ಬಳ್ಳಿ. ಅಲ್ಲಿನ ಮಳೆಯಿಂದಾಗಿ ಗಿಡಗಳು ವೇಗವಾಗಿ ಬೆಳೆಯುತ್ತವೆ. ಅಂತೆಯೇ ಕುಡ್ಜು ಕೂಡ ದಿನಕ್ಕೆ ಒಂದು ಫೂಟ್ ಬೆಳೆಯುತ್ತದೆ. ಅಮೆರಿಕ ಉತ್ತರಾರ್ಧದಲ್ಲಿರುವುದರಿಂದ ಇಲ್ಲಿ ಕುರುಚಲು ಅಥವಾ ಅಷ್ಟು ವೇಗವಾಗಿ ಬೆಳೆಯದ ಗಿಡಗಳು. ಕುಡ್ಜು ಅಷ್ಟು ವೇಗವಾಗಿ ಬೆಳೆಯುವುದರಿಂದ ಇಂದು ಅಮೆರಿಕದ ಕಾಡು ಗಳನ್ನೇ ನುಂಗಲಾರಂಭಿಸಿವೆ.

ಇನ್ನೊಂದು ವಿಷಯ ಏನು ಗೊತ್ತಾ, ಈ ಕುಡ್ಜು ಬಳ್ಳಿಯ ಬೆಳವಣಿಗೆಯ ವೇಗ ಅಮೆರಿಕದಲ್ಲಿ ಪ್ರತೀ ವರ್ಷ ಕ್ಷೀಣಿಸುತ್ತಿದೆ. ಇದಕ್ಕೆ ವಾತಾವರಣದ ಬದಲಾವಣೆ ಕಾರಣವಲ್ಲ, ಏಕೆಂದರೆ ಈ ಬೆಳವಣಿಗೆಯ ವೇಗ ಕ್ಷೀಣಿಸಲು ಶುರುವಾದದ್ದು ಈಗ ಇಪ್ಪತ್ತು ವರ್ಷದಿಂದ. ಅತ್ತ ಅದರ ಮೂಲ ನೆಲದಲ್ಲಿ ಅದರ ವೇಗ ಇನ್ನಷ್ಟು ಹೆಚ್ಚದೆ. ಸಸ್ಯಶಾಸ್ತ್ರಜ್ಞರ ಪ್ರಕಾರ ಈ ಕುಡ್ಜು ಎಂಬ ಬಳ್ಳಿ ಅಷ್ಟೇ ವೇಗವಾಗಿ ಬೆಳೆಯುವ ಅವಶ್ಯಕತೆಯಿಲ್ಲ ಎಂದು ಇಂದು ಗ್ರಹಿಸಿದೆಯಂತೆ. ಏಕೆಂದರೆ ಅದರ ಸುತ್ತಲಿನ ಮರಗಳು ಅಮೆರಿಕದಲ್ಲಿ ಅಷ್ಟು ವೇಗವಾಗಿ ಬೆಳೆಯುತ್ತಿಲ್ಲ.

ತೋಟದಲ್ಲಿ, ಮನೆಯ ಹಿತ್ತಲಲ್ಲಿ, ಟೆರೇಸಿನಲ್ಲಿ ಹಣ್ಣು, ತರಕಾರಿ ಕೊಡುವ ಬಳ್ಳಿಯನ್ನು ಬೆಳೆಯುವುದು ನೋಡಿಯೇ
ಇರುತ್ತೀರಿ. ಇವುಗಳಲ್ಲಿ ಬಹುತೇಕ ಬಳ್ಳಿಗಳನ್ನು ಸೂಕ್ಷ್ಮವಾಗಿ ನೋಡಿದಾಗ ನಿಮಗೆ ಇನ್ನೊಂದಿಷ್ಟು ಅಚ್ಚರಿ ಖಂಡಿತ. ಅವುಗಳ
ತುದಿಯ ಭಾಗ ದಿನದ ಸಮಯ ಕಳೆದಂತೆ ತಮ್ಮ ದಿಕ್ಕನ್ನು ಬದಲಿಸುವುದು ಗ್ರಹಿಸಿರಬಹುದು. ಅವುಗಳ ತುದಿ ಕೆಲ ಹೊತ್ತಿನಲ್ಲಿ ಗಾಳಿಯಲ್ಲಿ ಒಂದು ಸುತ್ತು ಬಂದಿರುತ್ತವೆ. ಬಳ್ಳಿಯ ತುದಿ ಎಲ್ಲಿ ಆಸರೆ ಪಡೆಯಬೇಕು ಎಂದು ಅನ್ವೇಷಿ ಸುವ ರೀತಿ ಅದು. ಬಳ್ಳಿಗಳಲ್ಲಿ ಮರಗಳಿಗಿಂತ ಸ್ಪರ್ಶ ಜ್ಞಾನ ಜಾಸ್ತಿ. ಬಳ್ಳಿಗಳ ತುದಿಗೆ ಪೆಟ್ಟು ಮಾಡಿದರೆ ಅವು ಆ ದಿಕ್ಕಿನಲ್ಲಿ ಬೆಳೆಯುವುದೇ
ನಿಲ್ಲಿಸಿಬಿಡುತ್ತವೆ. ಅವು ತಮ್ಮ ಸುತ್ತಲಿನ ಅಪಾಯವನ್ನು ಕೂಡ ಗ್ರಹಿಸಬಲ್ಲವು ಮತ್ತು ನೆನಪಿಟ್ಟು ಕೊಳ್ಳಬಲ್ಲವು.

ಇನ್ನು ಕೆಲವು ಬಳ್ಳಿಗಳು ಆಸರೆ ಸಿಕ್ಕರೆ ಮರಕ್ಕೆ ಹತ್ತುತ್ತವೆ, ಆಸರೆ ಇಲ್ಲದಿದ್ದರೆ ನೆಲದಲ್ಲಿಯೇ ಬಿದ್ದು ಬೆಳೆದು ಆವರಿಸಿಕೊಳ್ಳುತ್ತವೆ. ಇದಕ್ಕೆ ಉದಾಹರಣೆ ಮಧ್ಯ ಅಮೇರಿಕಾದ ವಿಂರ್ಟ ಕ್ರೀರ್ಪ ಬಳ್ಳಿಗಳು. ಇವು ನೆಲದಲ್ಲಿ ಬಿದ್ದ ಭಾಗದಲ್ಲಿ ಇಲ್ಲಿನ ಜಿಂಕೆಗೆ
ವಿಷವಾಗುವ ರಾಸಾಯನಿಕವನ್ನು ತನ್ನಲ್ಲಿ ಉತ್ಪಾದಿಸಿಕೊಂಡಿರುತ್ತವೆ. ಆಸರೆ ಸಿಕ್ಕು ಮರ ಹತ್ತಿದ ಬಳ್ಳಿಗಳಲ್ಲಿ ಆ ವಿಷವಿರುವು ದಿಲ್ಲ, ಅವು ಮಾತ್ರ ಹೂವು, ಸಿಹಿಯಾದ ಕಾಯಿ ಬಿಡುತ್ತವೆ.

ಒಟ್ಟಾರೆ ಸಸ್ಯಶಾಸಜ್ಞರಿಗೆ ಸಸ್ಯಪ್ರಭೇದದಲ್ಲಿ ಬಳ್ಳಿಗಳೆಂದರೆ ಇಂದಿಗೂ ನಿಗೂಢ, ಬಗೆಹರಿಯದ ಅಚ್ಚರಿ. ಅದರ ಜೊತೆ
ಅದೇನೋ ಒಂದು ತಾತ್ಸಾರ. ಹಾಗಾಗಿ ಬಳ್ಳಿಗಳ ಮೇಲಿನ ಅಧ್ಯಯನದ ಪ್ರಗತಿ ತೀರಾ ಮಂದ. ಅವುಗಳ ಬುದ್ಧಿವಂತಿಕೆ,
ಜೀವ ವಿಶೇಷ, ನೆನಪಿನ ಶಕ್ತಿ, ಬುದ್ಧಿವಂತಿಕೆಯ ಅಧ್ಯಯನ ಇನ್ನಷ್ಟು ಆಗಬೇಕಿದೆ.