Monday, 30th December 2024

ಐಪಿ ಡ್ಯೂಟಿಯಲ್ಲಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಪ್ರಸಂಗ

ಇದೇ ಆಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಕಳೆದ ವಾರ ಮೈಸೂರಿನ ‘ಆಂದೋಲನ’ ಪತ್ರಿಕೆಯಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ತಮ್ಮ ಅಂಕಣದಲ್ಲಿ ಪ್ರಸ್ತಾಪಿಸಿದ ಒಂದು ಪ್ರಸಂಗ ಗಮನ ಸೆಳೆಯಿತು. ರಂಗಸ್ವಾಮಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಅಲ್ಲಿ ಬರೆದಿದ್ದರು. ಎಂಬತ್ತರ ದಶಕದ ಒಂದು ದಿನ. ಪ್ರಧಾನಿ ಇಂದಿರಾ ಗಾಂಧಿ ಮೈಸೂರಿಗೆ ಭೇಟಿ ನೀಡಿದ್ದರು. ಅವರ ವಾಸ್ತವ್ಯದ ವ್ಯವಸ್ಥೆಯನ್ನು ಲಲಿತ್ ಮಹಲ್ ಪ್ಯಾಲೇಸ್ ಹೊಟೇಲಿನಲ್ಲಿ ಏರ್ಪಡಿಸಲಾಗಿತ್ತು.

ಇಂದಿರಾ ಉಳಿದುಕೊಳ್ಳುವ ವ್ಯವಸ್ಥೆಯಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನೆ ಹಿರಿಯ ಅಧಿಕಾರಿಗಳು ತಪಾಸಣೆ ಮಾಡಿ, ಯೋಚನೆ ಮಾಡಿ ವ್ಯವಸ್ಥೆ  ಗೊಳಿಸಿದ್ದರು. ಅಂದಿನ ಜಿಲ್ಲಾ ವರಿಷ್ಠಾಧಿಕಾರಿ ರೇವಣಸಿದ್ದಯ್ಯ ನವರು, ’ಇಂದಿರಾಜೀ ಅವರಿಗೆ ಓದುವ ಹವ್ಯಾಸವಿದೆ. ಒಂದೆರಡು ಉತ್ತಮ ಪುಸ್ತಕಗಳನ್ನು ತಂದು ರೂಮಿನ ಮೇಜಿನ ಮೇಲಿಡಿ’ ಎಂದು ಹೇಳಿದ್ದರಂತೆ. ತಕ್ಷಣ ರಂಗಸ್ವಾಮಿ ಅವರು, ಲಲಿತ ಮಹಲ್ ಹೊಟೇಲಿನ ಲೈಬ್ರರಿಗೆ ಹೋಗಿ ಹುಡುಕಿದರಂತೆ. ಆದರೆ ಅಲ್ಲಿ ಅಗ್ಗದ ಜನಪ್ರಿಯ ಇಂಗ್ಲಿಷ್ ಕಾದಂಬರಿಗಳಿದ್ದವಂತೆ.

ಸಾಮಾನ್ಯವಾಗಿ ಹೊಟೇಲ್ ಲೈಬ್ರರಿಗಳಲ್ಲಿ ಗಂಭೀರ ಅಥವಾ ಮಹತ್ವದ ಓದಿಗೆ ಇಂಬು ನೀಡುವ ಪುಸ್ತಕ ಗಳಿರುವುದಿಲ್ಲ. ಅಲ್ಲಿನ ಪುಸ್ತಕಗಳಾವವೂ ಪ್ರಧಾನಿ ಅವರಿಗೆ ಇಷ್ಟವಾಗಲಿಕ್ಕಿಲ್ಲ ಎಂದು ರಂಗಸ್ವಾಮಿ ಅವರಿಗೆ ಅನಿಸಿತಂತೆ. ಮೂಲತಃ ಇಂಗ್ಲಿಷ್ ಸಾಹಿತ್ಯ ಓದಿಕೊಂಡಿದ್ದ ಅವರು, ಗೀತಾ ಬುಕ್ ಹೌಸಿಗೆ ಹೋಗಿ
Norton Anthology of English Literature ಸೇರಿದಂತೆ ನಾಲ್ಕು ಪುಸ್ತಕಗಳನ್ನು ತಂದಿಟ್ಟರಂತೆ. ಅದೇ ಕೋಣೆಯ ಉಸ್ತುವಾರಿಯಲ್ಲಿದ್ದ ರೆವೆನ್ಯೂ ಅಧಿಕಾರಿಯೊಬ್ಬರು, ತಮ್ಮದೂ ಇರಲೆಂದು ಒಂದೆರಡು ಪುಸ್ತಕಗಳನ್ನು ತಂದಿಟ್ಟರಂತೆ. ಅದು ನೆಹರು ಅವರು ಇಂದಿರಾಗೆ ಬರೆದಿದ್ದ Letter From a Father To His Daughter  ಪುಸ್ತಕ. ಆ ಪುಸ್ತಕವನ್ನಿಟ್ಟರೆ, ಇಂದಿರಾ ಸಂಪ್ರೀತ ರಾಗಬಹುದು ಎಂಬುದು ಆ ಅಧಿಕಾರಿಯ ಎಣಿಕೆಯಾಗಿದ್ದಿರಲು ಸಾಕು. ಮರುದಿನ ಇಂದಿರಾ ಆ ಹೊಟೇಲಿನಿಂದ ನಿರ್ಗಮಿಸಿದ ಬಳಿಕ, ರಂಗಸ್ವಾಮಿ ಅವರು ಆ ರೂಮಿಗೆ ಹೋದರಂತೆ. ಅಲ್ಲಿಟ್ಟಿದ್ದ ಪುಸ್ತಕಗಳನ್ನು ತೆಗೆದುಕೊಳ್ಳಲು ಹೋದಾಗ, ಮೇಜಿನ ಮೇಲೆ ಇಂದಿರಾ ಒಂದು ಚೀಟಿ ಬರೆದಿಟ್ಟಿದ್ದು ಕಾಣಿಸಿತಂತೆ. ಅದರ ಮೇಲೆ ಬರೆದಿದ್ದರಂತೆ – Thanks for this marvelous book – IG ಈ ಚೀಟಿಯನ್ನು ರಂಗಸ್ವಾಮಿ ಬಹಳ ವರ್ಷಗಳವರೆಗೆ ತಮ್ಮಲ್ಲಿ ಜತನವಾಗಿ ಕಾಪಿಟ್ಟುಕೊಂಡಿದ್ದರಂತೆ. ಅದೇ ಅಂಕಣದಲ್ಲಿ ರಂಗಸ್ವಾಮಿ ಅವರು ಇನ್ನೊಂದು ಪ್ರಸಂಗವನ್ನು ಬರೆದಿದ್ದರು.

ಇಂದಿರಾ ಮೈಸೂರಿಗೆ ಆಗಮಿಸುವ ದಿನ, ಲಲಿತ್ ಮಹಲ್ ಹೊಟೇಲಿನ ಮುಂಭಾಗದಲ್ಲಿ ಸುಮಾರು ಇನ್ನೂರು ಜನ ಜಮಾಯಿಸಿದ್ದರಂತೆ. ಅವರೆಲ್ಲ ಇಂದಿರಾ ಅವರನ್ನು ನೋಡಲು ಬಂದಿದ್ದರು. ಆ ಜನರನ್ನು ನಿಯಂತ್ರಿಸುವ ಮತ್ತು ಸುತ್ತ ಮುತ್ತಲ ಶಾಂತಿ – ಸುವ್ಯವಸ್ಥೆ ಕಾಪಾಡುವ ಹೊಣೆಯನ್ನು ರಂಗಸ್ವಾಮಿ ಅವರಿಗೆ ವಹಿಸಲಾಗಿತ್ತು. ಗೇಟಿನ ಹೊರಗಡೆ ವಯಸ್ಸಾದ ಮಹಿಳೆಯೊಬ್ಬರು ನಿಂತಿದ್ದರಂತೆ. ನೋಡಿದರೆ ಗೌರವಾನ್ವಿತರಂತೆ ಕಾಣುವ ವರ್ಚಸ್ಸು. ಅವರು ಪದೇ ಪದೆ
ತಮ್ಮ ಕೈಯಲ್ಲಿರುವ ಕವರನ್ನು ತೋರಿಸುತ್ತಾ ಇದ್ದರಂತೆ.

ಪ್ರಾಯಶಃ ಮನವಿ ಪತ್ರ ಹಿಡಿದು ತಂದಿರಬಹುದು ಎಂದು ರಂಗಸ್ವಾಮಿ ಭಾವಿಸಿದರಂತೆ. ‘Will this be handed over to Madam Prime Minister please? ಎಂದು ಆ ಮಹಿಳೆ ಕೇಳಿದರಂತೆ. ಆ ಲಕೋಟೆಯನ್ನು ರಂಗಸ್ವಾಮಿ ತೆರೆದು ನೋಡಿದರಂತೆ. ಅದರಲ್ಲಿ Dear Indu, Please call me ಎಂದು ಬರೆದಿತ್ತಂತೆ. ಕೆಳಗೆ ಫೋನ್ ನಂಬರ್ ಬರೆದಿದ್ದರಂತೆ. ಇಂದಿರಾ ಗಾಂಧಿ ಅವರಿಗೇ ಫೋನ್ ಮಾಡಿ ಎಂದು ಬರೆದಿದ್ದಾಳಲ್ಲ, ಇವಳು ಒಂದೋ ಗಣ್ಯ ವ್ಯಕ್ತಿಯಿರ ಬೇಕು ಅಥವಾ ತಲೆಕೆಟ್ಟವಳಿರಬೇಕು ಎಂದು ಭಾವಿಸಿದರಂತೆ ರಂಗಸ್ವಾಮಿ.

ಆ ಲಕೋಟೆಯನ್ನು ಅವರು ತಮ್ಮ ಮೇಲಾಧಿಕಾರಿಯವರಿಗೆ ತೋರಿಸಿದರಂತೆ. ’ಅದನ್ನು ಪ್ರಧಾನಿಯವರ ಆಪ್ತ ಕಾರ್ಯದರ್ಶಿಯವರಿಗೆ ಕೊಡಿ. ಅವರು ಯಾವ
ನಿರ್ಧಾರವನ್ನಾದರೂ ತೆಗೆದುಕೊಳ್ಳಲಿ, ಅವರಿಗೆ ಬಿಟ್ಟಿದ್ದು’ ಎಂದು ಹೇಳಿದಾಗ, ಆ ಲಕೋಟೆಯನ್ನು ಇಂದಿರಾ ಅವರ ಆಪ್ತ ಕಾರ್ಯದರ್ಶಿಗೆ ಹಸ್ತಾಂತರಿಸಿದರಂತೆ.
ಮುಂದೇನಾಯಿತೋ ಗೊತ್ತಿಲ್ಲ. ಮಾರನೇ ದಿನ ಬೆಳಗ್ಗೆ ರೇಸ್ ಕೋರ್ಸಿನಲ್ಲಿರುವ ಹೆಲಿಪ್ಯಾಡಿಗೆ ಪ್ರಧಾನಿ ಹೊರಟರಂತೆ. ಕುರುಬಾರಹಳ್ಳಿ ಸರ್ಕಲ್ ಹತ್ತಿರ ಬರುತ್ತಿದ್ದಂತೆ ಇಂದಿರಾ ಕುಳಿತಿದ್ದ ಕಾರು ನಿಂತಿತು. ಅಲ್ಲಿಯೇ ಸನಿಹದಲ್ಲಿರುವ ಮನೆಯತ್ತ ಇಂದಿರಾ ಹೆಜ್ಜೆ ಹಾಕಿದರಂತೆ.

ಅದು ಶ್ರೀಮತಿ ಮೆನನ್ ಅವರ ಮನೆಯಾಗಿತ್ತು. ಅವರ ಪತಿ ಹೈಕಮಿಷನರ್ ಆಗಿದ್ದರು. ಆ ಮನೆಗೆ ಹತ್ತಾರು ವರ್ಷಗಳ ಹಿಂದೆ, ಇಂದಿರಾ ಆಗಮಿಸಿದ್ದರಂತೆ. ಆ ಮಹಿಳೆ ಲಕೋಟೆಯಲ್ಲಿ ಇಂದಿರಾ ಅವರಿಗೆ ತಮ್ಮ ಫೋನ್ ನಂಬರ್ ನೀಡಿದ್ದರಲ್ಲ, ಅದನ್ನು ರಂಗಸ್ವಾಮಿ ಬರೆದಿಟ್ಟುಕೊಂಡಿದ್ದರಂತೆ. ಇಂದಿರಾ ನಿರ್ಗಮಿಸಿದ ನಂತರ ರಂಗಸ್ವಾಮಿ ಹೋಟೆಲಿಗೆ ಹೋಗಿ ವಿಚಾರಿಸಿದಾಗ, ಇಂದಿರಾ ಗಾಂಧಿಯವರು ರಾತ್ರಿ ಹೊಟೇಲ್ ನಿಂದ ಆ ಮಹಿಳೆಗೆ (ಮೆನನ್ ಪತ್ನಿ) ಫೋನ್ ಮಾಡಿದ್ದರಂತೆ!

ವಿಐಪಿ ಡ್ಯೂಟಿಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಮಾತಾಡಿಸಬೇಕು, ಯಾರಿಗೂ ಗೊತ್ತಿರದ ಅನೇಕ ಕುತೂಹಲದ ಸಂಗತಿಗಳು ಗೊತ್ತಾಗುತ್ತವೆ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಬೆಂಗಳೂರಿಗೆ ಭೇಟಿ ನೀಡಿದಾಗ, ಅವರ ರಕ್ಷಣೆ ಹೊಣೆ ಹೊತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಪ್ರಸಂಗಗಳನ್ನು ನಿಮಗೆ ಹೇಳಬೇಕು.

ಯೂಜಿ ಬಗ್ಗೆ ನಂತರ ಅರ್ಥವಾಗಿದ್ದು

ಒಮ್ಮೆ ಯೂಜಿ ಭೇಟಿಯಾದಾಗ, ’ಯೂಜಿ, ನೀವು ಆನಂದ ಮತ್ತು ನೋವು ಎರಡೂ ಒಂದೇ ಎಂದು ಹೇಳಿದ್ದನ್ನು ಕೇಳಿದ್ದೇನೆ. ಅದು ಹೇಗೆ ಸಾಧ್ಯ?’ ಎಂದು ಯಾರೋ ಅವರನ್ನು ಕೇಳಿದರು.

ಅದಕ್ಕೆ ಯೂಜಿ, ಏನು ಉತ್ತರ ಕೊಡಬಹುದು ಎಂದು ನಾನು ಕತ್ತು ಮುಂದೆ ಮಾಡಿ, ಕಿವಿಗಳನ್ನರಳಿಸಿಕೊಂಡೆ. ’ನಾನು ಉತ್ತರ ಕೊಟ್ಟರೆ ನಿಮಗೆ ಆನಂದ, ಕೊಡದಿದ್ದರೆ ನೋವು. ಇಷ್ಟೇ. ಯಾವುದರ ಬಗ್ಗೆಯೂ ಬಹಳ ಯೋಚಿಸಬೇಡಿ. ಅದು ನಿಮಗೇ ಗೊತ್ತಾಗುತ್ತದೆ. ಅಲ್ಲಿ ತನಕ ಸುಮ್ಮನಿರಿ. ಬದುಕನ್ನು ಒಳಗಿಂದ
ಅನುಭವಿಸಿ. ಪ್ರಶ್ನೆಗಳಿಲ್ಲದೇ ಬದುಕುವುದನ್ನು ರೂಢಿಸಿಕೊಳ್ಳಿ. ಪ್ರಶ್ನೆಗಳೇ ನಿಮ್ಮ ಶತ್ರು’ ಎಂದರು ಯೂಜಿ. ನನಗೆ ಬೌನ್ಸರ್ ಎಸೆದಂತಾಗಿತ್ತು. ಆಕೆ ಅಷ್ಟಕ್ಕೇ ಸುಮ್ಮನಾಗದೇ, ಯೂಜಿ, ನಾವು ದೇವಸ್ಥಾನಗಳಿಗೆ ಹೋಗುವುದು ಏಕೆ? ನಮ್ಮ ಸಮಸ್ಯೆಗಳಿಗೆ ಅಲ್ಲಿ ಪರಿಹಾರ ಸಿಗುವುದ?’ ಎಂದು ಕೇಳಿದಳು.

ಅದಕ್ಕೆ ಯೂಜಿ ಹೇಳಿದರು – ’ದೇವಸ್ಥಾನಕ್ಕೆ ಯಾಕೆ ಹೋಗಬೇಕು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಬೇರೆಯವರು ಹೋಗುತ್ತಾರೆಂದು ತಾವೂ ಹೋಗುತ್ತಾರೆ. ಮಸೀದಿ, ಚರ್ಚು , ದೇವಸ್ಥಾನಕ್ಕೆ ಹೋಗುವುದರಿಂದ ಏನೂ ಸಿಗುವುದಿಲ್ಲ. ಅವೆಲ್ಲ ಭ್ರಮೆ. ಅಲ್ಲಿ ಏನಾದರೂ ಇದ್ದರೆ ತಾನೇ ಸಿಗಲು? ಆದರೆ
ಜನರಿಗೆ ಅಲ್ಲಿ ಹೋದ ಮಾತ್ರಕ್ಕೆ ಸಮಾಧಾನ ಸಿಕ್ಕಿತು ಎಂದು ಭಾವಿಸುತ್ತಾರೆ. ಪಬ್‌ಗೆ ಹೋದರೂ ದಿಢೀರ್ ಪರಿಹಾರ ಸಿಗುತ್ತದೆ. ದೇವಸ್ಥಾನಕ್ಕೆ ಮತ್ತು ಪಬ್ ಗೆ ಹೋಗುವುದರ ಉದ್ದೇಶ ಒಂದೇ, ತತ್ ಕ್ಷಣದ ಪರಿಹಾರ.’ ’ಯೂಜಿ, ನೀವು ಏನನ್ನು ಹೇಳಲು ಪ್ರಯತ್ನಿಸುತ್ತೀರಿ ಎಂಬುದೇ ತಿಳಿಯುವುದಿಲ್ಲವಲ್ಲ?’ ಎಂದು ಯಾರೋ ಒಮ್ಮೆ ಅವರನ್ನು ಕೇಳಿದ್ದರು.

ಅದಕ್ಕೆ ಅವರು, ’ಅದು ನಿಮಗೆ ಬಿಟ್ಟ ವಿಚಾರ. ಅದು ನನಗೆ ಸಂಬಂಽಸಿದ್ದಲ್ಲ. ನೀವು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ನಿಮಗೆ ತಿಳಿಯುವುದಿಲ್ಲ.  You are the only medium through which I can express myself. ಅದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಅಷ್ಟಕ್ಕೂ ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳಬೇಡಿ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಯಾರೂ ಹೊಸ ವಿಷಯಗಳನ್ನು ಹೇಳುವುದಿಲ್ಲ. ಯಾರಲ್ಲೂ ಉತ್ತರಗಳಿಲ್ಲ. ತಾವು ಹೇಳಿದ್ದೇ ಉತ್ತರ ಎಂದು ಭಾವಿಸುವವರಂಥ ಮೂರ್ಖರು ಮತ್ಯಾರೂ ಇಲ್ಲ’ ಎಂದು ಹೇಳಿದ್ದರು. ಯೂಜಿ ಬಗ್ಗೆ ಮಾತು ಬಂದಾಗಲೆ ’ಅವರು ಎಲ್ಲಾ ತತ್ತ್ವ, ಸಿದ್ಧಾಂತಗಳ ಬುಲ್ಡೋಜರ್, ಮಹಾ ಅಪಾಯಕಾರಿ ವ್ಯಕ್ತಿ’ ಎಂದು ವೈಎನ್‌ಕೆ ಪ್ರೀತಿಯಿಂದ ಹೇಳುತ್ತಿದ್ದರು. ವೈಎನ್‌ಕೆ ಯಾಕೆ ಹಾಗೆ ಹೇಳುತ್ತಿದ್ದರು ಎಂದು ಆಗ ಸ್ವಲ್ಪ ಸ್ವಲ್ಪ ತಿಳಿಯುತ್ತಿತ್ತು. ಯೂಜಿ ಬಗ್ಗೆ ಮತ್ತಷ್ಟು ಓದಿಕೊಂಡ ನಂತರ ಆ ಮಾತು ಎಷ್ಟು ಸೂಕ್ತ ಎಂದೆನಿಸುತ್ತಿದೆ.

ಹೀಗೊಬ್ಬ ಅಂಕಣಕಾರನ ಕುರಿತು

ಅಂಕಣಕಾರರೆಲ್ಲರಿಗೆ ಪ್ರಾತಃಸ್ಮರಣೀಯನೆಂದರೆ ಆರ್ಟ್ ಬುಕವಾಲ್ಡ್. ಆತ ವಾರಕ್ಕೆ ಮೂರು ಅಂಕಣ ಬರೆಯುತ್ತಿದ್ದ. ಕೆಲವು ಪತ್ರಿಕೆಗಳಿಗೆ ದೈನಿಕ ಅಂಕಣವನ್ನೂ ಬರೆಯುತ್ತಿದ್ದ. ಒಂದು ಸಂದರ್ಭದಲ್ಲಿ ಆತನ ದೈನಿಕ ಅಂಕಣ ಜಗತ್ತಿನ ಮುನ್ನೂರಕ್ಕೂ ಅಧಿಕ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಅದು ’ದಿ ಹಿಂದೂ’ ಪತ್ರಿಕೆಯಲ್ಲೂ ಸೋಮವಾರ ಪ್ರಕಟವಾಗುತ್ತಿತ್ತು. ಆತ ಎಂದೂ ಬತ್ತದ ಅಂತರಗಂಗೆ!

ಆತ ಸುಮಾರು ಐವತ್ತೆರಡು ವರ್ಷಗಳ ಕಾಲ ಸುಮಾರು ಹತ್ತು ಸಾವಿರ ಅಂಕಣಗಳನ್ನು ಬರೆದ. ಆತ ಬರೆದಿದ್ದನ್ನೆ ಸೇರಿಸಿದರೆ ಸುಮಾರು ಐನೂರು ಪುಸ್ತಕ ಗಳಾಗಬಹುದು! ಕೊನೆಗಾಲದಲ್ಲಿ ಐದು ತಿಂಗಳು ಆಸ್ಪತ್ರೆಯಲ್ಲಿದ್ದ. ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡಬೇಕಿತ್ತು. ಗ್ಯಾಂಗ್ರಿನ್‌ನಿಂದ ಪಾದವನ್ನು
ಕತ್ತರಿಸಲಾಗಿತ್ತು. ಆದರೂ ಬುಕವಾಲ್ಡ್ ಅಂಕಣ ನಿಲ್ಲಲಿಲ್ಲ. ಆತನ ಉಸಿರಾಟ ನಿಂತಾಗಲೇ ಅದೂ ನಿಂತಿತು! ಅಂಕಣದ ಜತೆಗೆ ಮೂವತ್ತು ಪುಸ್ತಕಗಳನ್ನೂ ಬರೆದ. ಹಾಗಂತ ಅವನೇನು ಬಹಳ ಓದಿಕೊಂಡವನಲ್ಲ. ಆತ ಹೈಸ್ಕೂಲನ್ನು ಸಹ ಮುಗಿಸಿರಲಿಲ್ಲ. ಆದರೆ ಕೈಗೆ ಸಿಕ್ಕ ಪುಸ್ತಕಗಳನ್ನೆ ಓದಿ ಓದಿ ಬರೆಯುವುದನ್ನು ರೂಢಿಸಿ ಕೊಂಡ, ಬರಹವನ್ನು ಬದುಕಾಗಿಸಿಕೊಂಡ. ಆತನ ಅಂಕಣಗಳಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯೂ ಬಂತು.

ಹೊಸ ಮಾರ್ಗ ತೆರೆದುಕೊಳ್ಳುವ ಬಗೆ 
ನೀವು ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಮತ್ತು ಬ್ರಿಟನ್ ಸಂಸತ್ತಿನ ಮೇಲ್ಮನೆ ಸದಸ್ಯ ಲಾರ್ಡ್ ಜೆಫ್ರಿ ಆರ್ಚರ್ ಹೆಸರನ್ನು ಕೇಳಿರುತ್ತೀರಿ. ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಅವರು ಆತ್ಮಹತ್ಯೆಗೆ ಯೋಚಿಸಿದ್ದರು. ತಾವು ಜೈಲಿಗೆ ಹೋದರೆ, ಜಗತ್ತು ತನ್ನನ್ನು ಹೇಗೆ ನೋಡಬಹುದು, ತನ್ನ ಓದುಗರು ತನ್ನನ್ನು ತಿರಸ್ಕರಿಸಬಹುದು, ತಾನು ತಲೆ ಎತ್ತಿ ಬದುಕುವುದು ಹೇಗೆ ಈ ಯೋಚನೆ ಅವರನ್ನು ಕಿತ್ತು ತಿನ್ನಲಾರಂಭಿಸಿತು. ಆದರೆ ಅನ್ಯ ಮಾರ್ಗವಿರಲಿಲ್ಲ. ಗಟ್ಟಿ ಮನಸ್ಸು ಮಾಡಿ ಜೈಲು ಶಿಕ್ಷೆ ಅನುಭವಿಸಲು ನಿರ್ಧರಿಸಿದರು.

ಆರಂಭದ ಎರಡು ವಾರಗಳ ಜೈಲು ವಾಸ ಅವರಲ್ಲಿ ತೀವ್ರ ಹತಾಶೆ, ಜುಗುಪ್ಸೆ, ಖಿನ್ನತೆಯನ್ನು ಮೂಡಿಸಿದವು. ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕು ಸವೆಸುವುದು ಸಾಧ್ಯವೇ ಇಲ್ಲ ಎಂದು ಅಂದುಕೊಂಡರು. ಆದರೆ ಆ ಪರಿಸರಕ್ಕೆ ಒಗ್ಗಿಕೊಳ್ಳದೇ ಬೇರೆ ದಾರಿಯೇ ಇಲ್ಲ ಎಂದು ಅವರಿಗೆ ಅನಿಸಲಾರಂಭಿಸಿತು. ನಿಧಾನವಾಗಿ ಅವರು ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾರಂಭಿಸಿದರು.

ಅಲ್ಲಿನ ಖೈದಿಗಳ ಜತೆ ಬೆರೆಯಲಾರಂಭಿಸಿದರು. ಅವರ ಕಥೆಗಳಿಗೆ ಕಿವಿಯಾಗಲಾರಂಭಿಸಿದರು. ಬರಬರುತ್ತಾ ತಮ್ಮ ಕೋಣೆ, ಅಲ್ಲಿನ ಪರಿಸರ, ತಮ್ಮ ಜತೆಗಿನ
ಸಹ ಖೈದಿಗಳು, ಜನ ಅವರಿಗೆ ಸಹ್ಯವಾಗಲಾರಂಭಿಸಿದರು. ಒಬ್ಬ ಲೇಖಕ ಅಥವಾ ಕಾದಂಬರಿಕಾರನಿಗೆ ಜೈಲಿನ ಅನುಭವಗಳನ್ನು ಖುದ್ದಾಗಿ ಅನುಭವಿಸುವುದು ಎಷ್ಟು ಮುಖ್ಯ ಎಂಬುದು ಅವರಿಗೆ ಅನಿಸಲಾರಂಭಿಸಿದವು. ಜೈಲಿನ ದಿನಚರಿ ಬರೆಯಲಾರಂಭಿಸಿದರು. ಜೈಲಿನ ಪರಿಸರ ಅವರನ್ನು ಬಲವಾಗಿ ಕಾಡಲಾರಂ
ಭಿಸಿತು. ಜೈಲಿನಲ್ಲಿರುವವರ ಅಸಹಾಯಕತೆ, ಅವರನ್ನು ಅಲ್ಲಿಗೆ ಬರುವಂತೆ ಮಾಡಿದ ಪ್ರಸಂಗ, ಬದುಕಿನ ಅನಿವಾರ್ಯತೆ, ಅವರನ್ನು ಗಾಢವಾಗಿ ಕಲಕಿತು.

ತಮ್ಮ ಪ್ರತಿದಿನದ ಕಾರ್ಯ ಚಟುವಟಿಕೆ, ಅನಿಸಿಕೆ, ಮನಸ್ಸಿನಲ್ಲಿ ಹಾದು ಹೋದ ಯೋಚನೆ, ಭಾವನೆಗಳನ್ನೆ ದಾಖಲಿಸಲಾರಂಭಿಸಿದರು. ಒಂದು ವೇಳೆ ತಾವು ಜೈಲು ಶಿಕ್ಷೆ ಅನುಭವಿಸದೇ ಹೋಗಿದ್ದರೆ, ಒಬ್ಬ ಕಾದಂಬರಿಕಾರನಾಗಿ ಕೆಲವೊಂದು ಅದ್ಭುತ ಅನುಭವಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು
ಅವರಿಗೆ ಅನಿಸಲಾರಂಭಿಸಿತು. ತಮ್ಮ ಬದುಕು ಈ ದೃಷ್ಟಿಯಿಂದ ಅಪೂರ್ಣ ಎಂದು ಅವರಿಗೆ ಮನವರಿಕೆಯಾಯಿತು. ಜೈಲು ವಾಸ ಅನುಭವಿಸಬೇಕಾಗಿ ಬಂದುದಕೆ ಅವರಲ್ಲಿ ಯಾವ ವಿಷಾದ ಅಥವಾ ಪಶ್ಚಾತ್ತಾಪ ಇರಲಿಲ್ಲ. ಒಂದು ರೀತಿಯಲ್ಲಿ ಅದೊಂದು ಭಿನ್ನ ಅನುಭವಕ್ಕೆ ಕಾರಣವಾದ ಅವಕಾಶ ಎಂದು
ಅಂದುಕೊಂಡರು.ಜೈಲುವಾಸ ಅವರಲ್ಲಿ ಅಗಾಧ ಪರಿವರ್ತನೆಗೆ ಕಾರಣವಾಗಿತ್ತು. ಅವರೊಳಗೆ ಹೊಸ ಜೆಫ್ರಿ ಆರ್ಚರ್ ಹುಟ್ಟಿಕೊಂಡಿದ್ದ.

ಜೈಲಿನಿಂದ ಹೊರ ಬರುತ್ತಿದ್ದಂತೆ, ಅವರು ಅಪರಿಮಿತ ಜೀವನಾನುಭವ ಹೊತ್ತು ಬಂದಿದ್ದರು. ಮೂರು ಪುಸ್ತಕಗಳನ್ನು (A Prison Diary Series & Hell, Purgatory, Heaven)) ಬರೆದರು. ಈ ಮೂರೂ ಕೃತಿಗಳು ಬಿಸಿಬಿಸಿ ದೋಸೆಗಳಂತೆ ಖರ್ಚಾದವು. ಜಗತ್ತಿನಾದ್ಯಂತ ಈ ಕೃತಿಗಳ ಹತ್ತಾರು ಲಕ್ಷ ಪ್ರತಿಗಳು ಮಾರಾಟವಾದವು. ’ಜೆಫ್ರಿಯನ್ನು ಮತ್ತೊಮ್ಮೆ ಜೈಲಿಗೆ ಕಳಿಸಿ, ಇನ್ನೂ ಒಳ್ಳೆಯ ಕಾದಂಬರಿ ಅವರಿಂದ ಹೊರಬರಬಹುದು’ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟರು. ಆತ್ಮಹತ್ಯೆಗೆ ಯೋಚಿಸಿದ್ದ ಜೆಫ್ರಿ ಮುಂದೆ ಹೊಸ ಬದುಕು ತೆರೆದುಕೊಂಡಿತ್ತು.

ಯಾವುದು ಅಸಾಧ್ಯ ಎಂದು ಭಾವಿಸಿದ್ದರೋ ಅದನ್ನು ಅವರು ಪ್ರೀತಿಸಲಾರಂಭಿಸಿದರು. ಹೊಸ ಬದುಕಿಗೆ ಒಗ್ಗಿಕೊಂಡಿದ್ದರ ಪರಿಣಾಮ ಅವರಲ್ಲಿ ಹೊಸ ಅವಕಾಶ, ಸಾಧ್ಯತೆಗಳು ಹುಟ್ಟಿಕೊಂಡವು. ಎಲ್ಲಿ ಎಲ್ಲ ದಾರಿಗಳು ಬಂದ್ ಆದವು ಎಂದು ಅಂದುಕೊಂಡಿದ್ದರೋ, ಅಲ್ಲಿಯೇ ಅನೇಕ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಾ ಹೋದವು.