Friday, 20th September 2024

ಕರ್ನಾಟಕ ಸರಕಾರಕ್ಕೆ ಬೇಕಾಗಿದೆ ಅಭಿಯೋಜನಾ ನೀತಿ

ಅವಲೋಕನ 

ಉಮಾ ಮಹೇಶ್ ವೈದ್ಯ

ಪ್ರಜಾ ಕಲ್ಯಾಣದ ಬುನಾದಿಯ ಮೇಲೆ ಕಟ್ಟಿಕೊಂಡಿರುವ ಗಣರಾಜ್ಯಗಳ ರಾಜಧರ್ಮ ಶಿಷ್ಟರಿಗೆ ರಕ್ಷೆ, ದುಷ್ಟರಿಗೆ ಶಿಕ್ಷೆ. ಸಂವಿಧಾನದಲ್ಲಿ ನ್ಯಾಯಾಂಗವನ್ನು ಸ್ವತಂತ್ರ ಅಂಗವಾಗಿಸಿ ಬೇರ್ಪಡಿಸಿದ ನಂತರ, ಕೇವಲ ನ್ಯಾಯಾಲಯ ಕಲಾಪಗಳನ್ನು
ನಿರ್ವಹಿಸಿ, ಪ್ರಕರಣಗಳ ವಿಚಾರಣೆಗಳನ್ನು ನಡೆಸಿ ತೀರ್ಪು ಅಥವಾ ಆದೇಶ ನೀಡುವ ಕಾರ್ಯ ಕರ್ತವ್ಯಗಳಿಗೆ ಮಾತ್ರ ನ್ಯಾಯಾಂಗ ಸೀಮಿತ.

ಆದರೆ, ಸಮಾಜದಲ್ಲಿ ಘಟಿಸುವ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಿ, ತನಿಖೆ ಮಾಡಿ, ದೋಷಾರೋಪಣ ವರದಿಗಳನ್ನು ಸಲ್ಲಿಸಿ,
ಆಪಾದಿತರ ವಿರುದ್ಧ ನ್ಯಾಯಾಂಗ ವಿಚಾರಣೆಗೆ ಒಳಪಡಿಸಿ ಕೊನೆಗೆ ಶಿಕ್ಷೆ ವಿಧಿಸುವಂತೆ ಪರಿಣಾಮಕಾರಿ ಅಭಿಯೋಜನೆಯ  ಕರ್ತವ್ಯಗಳನ್ನು ನಿರ್ವಹಿಸುವ ಗುರುತರವಾದ ಜವಾಬ್ದಾರಿ ಸರಕಾರದ್ದು. ಈ ಜವಾಬ್ದಾರಿಯನ್ನು ನಿರ್ವಹಿಸಲು, ಪ್ರತಿಯೊಂದು ರಾಜ್ಯದಲ್ಲಿ ಪ್ರತ್ಯೇಕ ಪೊಲೀಸ್ ಇಲಾಖೆ ಇದೆ. ಇದರಡಿ ವಿಶೇಷ ತನಿಖಾ ಸಂಸ್ಥೆಗಳು ಇವೆ.

ಇದೇ ರೀತಿ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ತನಿಖಾ ವಿಭಾಗವೇ ಇದೆ. ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಸಲ್ಲಿಸುವ ದೋಷಾ ರೋಪಣ ವರದಿಗಳನುಸಾರ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಅಭಿಯೋಜನೆಗೊಳಿಸಲು ಪ್ರತ್ಯೇಕವಾದ ಅಭಿಯೋ ಜನಾ ನಿರ್ದೇಶನಾಲಯಗಳು ಇವೆ. ಇದೇ ರೀತಿ ನಮ್ಮ ಕರ್ನಾಟಕದಲ್ಲಿಯೂ ಸಹ, ಒಳಾಡಳಿತ ಇಲಾಖೆಗೆ ಒಳಪಡುವ ಪ್ರತ್ಯೇಕ ವಾದ ಅಭಿಯೋಗ ಹಾಗೂ ಸರಕಾರಿ ವ್ಯಾಜ್ಯಗಳ ನಿರ್ದೇಶನಾಲಯವಿದೆ.

ಕರ್ನಾಟಕ ಸರಕಾರವು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಕರ್ನಾಟಕ ಪೊಲೀಸ್ ಅಧಿನಿಯಮ 1963, ಜಾರಿಗೆ
ತಂದಿದ್ದು ಅದರಡಿ, ಪೊಲೀಸ್ ಇಲಾಖೆಯ ರಚನೆ, ಅಧಿಕಾರಗಳು, ಕರ್ತವ್ಯಗಳು ಕಾರ್ಯ ವ್ಯಾಪ್ತಿ, ಶಿಸ್ತು ನಡವಳಿಕೆಗಳು, ನಿಯಂತ್ರಣಗಳು ಇತ್ಯಾದಿಗಳನ್ನು ಸ್ಪಷ್ಟಪಡಿಸಿದೆ. ಇದರ ಜತೆಗೆ ಪೊಲೀಸ್ ತನಿಖಾ ನೀತಿಯಾಗಿ ಪ್ರತ್ಯೇಕವಾದ ಪೊಲೀಸ್ ಕೈಪಿಡಿ (ಪೊಲೀಸ್ ಮ್ಯಾನುಯಲ್) ಜಾರಿಯಲ್ಲಿದೆ. ಈ ಎರಡು ಹೊತ್ತಿಗೆಗಳಿಂದ ನಮ್ಮ ರಾಜ್ಯದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಪೊಲೀಸ್ ಅಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಯಾವ ರೀತಿಯ ಹೊಣೆ ಗಾರಿಕೆಗಳನ್ನು, ಕಾರ್ಯ ನಿರ್ವಹಣೆಗಳನ್ನು ಹೊಂದಿದ್ದಾರೆ ಎಂಬುದನ್ನು ನಾವು ಕಾಣಬಹುದಾಗಿದೆ.

ಆದರೆ ಇದೇ ರೀತಿಯಲ್ಲಿಯೇ ಕರ್ನಾಟಕ ಸರಕಾರ ಅಭಿಯೋಗ ಹಾಗೂ ಸರಕಾರಿ ವ್ಯಾಜ್ಯಗಳ ನೀತಿಯನ್ನು ಅಥವಾ ಪ್ರತ್ಯೇಕ ವಾದ ಕಾನೂನನ್ನು ಹೊಂದಿದೆಯೇ ಎಂದು ಪರಿಶೀಲಿಸಿದರೆ ನಿಜಕ್ಕೂ ನಿರಾಶೆಯಾಗುತ್ತದೆ. ನಮ್ಮ ದೇಶ ಸ್ವತಂತ್ರವಾದ ದಿನ ದಿಂದ ಹಿಡಿದು ಇಲ್ಲಿಯವರೆಗೂ ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರಗಳಾಗಲಿ ತಮ್ಮ ಮಹತ್ತರವಾದ ಅಭಿ ಯೋಜನಾ ಕರ್ತವ್ಯವನ್ನು ನಿರ್ವಹಿಸುವ ಬಗ್ಗೆ ಯಾವುದೇ ಅಭಿಯೋಜನಾ ನೀತಿಯನ್ನು ಹೊಂದದೇ ಇರುವುದು ನಿಜಕ್ಕೂ ವಿಷಾದನೀಯ. ಇಲ್ಲಿಯವರೆಗೂ ಯಾವುದೇ ನಿರ್ದಿಷ್ಟ ಅಭಿಯೋಜನಾ ನೀತಿಯನ್ನು ಹೊಂದದೇ ಕೋಟಿಗಳ ಸಂಖ್ಯೆಯ
ಪ್ರಕರಣಗಳನ್ನು ಅಭಿಯೋಜಿಸಿ ವಿಲೇವಾರಿ ಮಾಡಿದ್ದು ನಿಜಕ್ಕೂ ಅಚ್ಚರಿ.

ದಂಡ ಪ್ರಕ್ರಿಯೆ ಸಂಹಿತೆ(ಕ್ರಿಮಿನಲ್ ಪ್ರೊಸಿಜರ್ ಕೋಡ್) ಕಲಂ 24, 25 ಹಾಗೂ 25ಎ ಇವುಗಳಲ್ಲಿ ಸಾರ್ವಜನಿಕ ಅಭಿಯೋಜನಾ ಧಿಕಾರಿಗಳು, ಸಹಾಯಕ ಸಾರ್ವಜನಿಕ ಅಭಿಯೋಜನಾಧಿಕಾರಿಗಳು ಹಾಗೂ ಪ್ರತ್ಯೇಕ ನಿರ್ದೇಶನಾಲಯಕ್ಕೆ ನಿರ್ದೇಶಕರು
ಹಾಗೂ ಉಪ ನಿರ್ದೇಶಕರುಗಳ ನೇಮಕಾತಿ, ರಚನೆ ಬಗ್ಗೆ ಕಾಣಬಹುದೇ ಹೊರತು ಈ ಅಧಿಕಾರಿಗಳ ಅಧಿಕಾರ, ಕರ್ತವ್ಯ, ಹೊಣೆ ಗಾರಿಕೆ, ಕಾರ್ಯವ್ಯಾಪ್ತಿ ಇತ್ಯಾದಿಗಳ ಉಲ್ಲೇಖವಿಲ್ಲ. ಈ ಕುರಿತಂತೆ ವಿವರಣೆ ನೀಡುವ ಪ್ರತ್ಯೇಕವಾದ ಅಭಿಯೋಜನಾ ಕೈಪಿಡಿ ಯೂ ಇಲ್ಲ. ಆದರೆ ಎಷ್ಟೋ ವರ್ಷಗಳ ಹಿಂದೆ ಹೊರಡಿಸಿದ ಇಲಾಖಾ ಸುತ್ತೋಲೆಗಳು ಹಾಗೂ ಆದೇಶಗಳನ್ನು ಹೊರತು ಪಡಿಸಿದರೆ ಪ್ರತ್ಯೇಕವಾದ ಅಭಿಯೋಜನಾ ನೀತಿಯನ್ನೇ ಹೊಂದಿಲ್ಲ.

ಒಂದು ವೇಳೆ ಅಭಿಯೋಜನಾ ನೀತಿ ಇಲ್ಲದಿದ್ದರೆ ಏನಾಗುತ್ತದೆ? ಇಲ್ಲಿಯವರೆಗೂ ಸುಸೂತ್ರವಾಗಿ ಕೆಲಸ ಮಾಡಿಕೊಂಡು ಬರುತ್ತಿಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ಅಭಿಯೋಜನೆ ಇದು ಸರಕಾರದ ಆದ್ಯ ಕರ್ತವ್ಯಗಳಲ್ಲೊಂದು. ಇಂಥ ಗುರುತರ ವಾದ ಜವಾಬ್ದಾರಿಯನ್ನು ಯಾವ ಅಭಿಯೋಜನಾಧಿಕಾರಿಗಳು ಯಾವ ರೀತಿಯಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಲು ಕಾಲ ಕಾಲಕ್ಕೆ ಸೂಚನೆಗಳು, ನಿರ್ದೇಶನಗಳು, ಅವುಗಳ ಪಾಲನೆ, ಅಭಿಯೋಜನಾಧಿಕಾರಿಗಳ ಕಾರ್ಯಕ್ಷಮತೆ, ವೃತ್ತಿ ನಿಪುಣತೆ ಹೆಚ್ಚಿಸಲು ತರಬೇತಿಗಳು, ಹಾಗೂ ಅಭಿಯೋಜನಾಧಿಕಾರಿಗಳ ಕಾರ್ಯ ಕ್ಷಮತೆಯನ್ನು ಕಾಲ ಕಾಲಕ್ಕೆೆ ಪರೀಕ್ಷಿಸುವ ಇತ್ಯಾದಿಗಳ ಬಗ್ಗೆ ಯೋಜನಾಬದ್ಧ ಕ್ರಮಗಳು ಅಗತ್ಯ.

ಇಲ್ಲದಿದ್ದಲ್ಲಿ, ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕವಾದ ನಂತರ, ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿದ ಅಭಿಯೋಜನಾಧಿಕಾರಿಗಳಿಗೆ ಮುಂಬಡ್ತಿ ನಂತರದ ತರಬೇತಿಗಳಿಲ್ಲ ವೆಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಈ  ಅಭಿಯೋಜನಾ ನೀತಿಯನ್ನು ಹೊಂದುವುದರಿಂದ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಇದು ಹೇಗೆ ಸಾಧ್ಯವೆಂದು ಕೇಳಬಹುದು. ಉತ್ತರ ಬಹಳ ಸರಳ. ನೀವು ರಾಜ್ಯದ ಯಾವುದೇ ನ್ಯಾಯಾಲಯಕ್ಕೆ ಹೋಗಿ, ಅಲ್ಲಿನ ಅಭಿಯೋಜನಾಧಿಕಾರಿಗಳನ್ನು ಕೇಳಿ ನೋಡಿ, ನೀವು ಯಾವ ಪ್ರಕರಣಗಳನ್ನು ನಡೆಸುವಲ್ಲಿ ನಿಷ್ಣಾತರು? ಯಾವ  ಪ್ರಕರಣ ಗಳಲ್ಲಿ ವಿಶೇಷವಾದ ಅನುಭವ ಹಾಗೂ ಅಭಿಯೋಜಿಸುವ ಕೌಶಲ್ಯವನ್ನು ಹೊಂದಿದ್ದೀರಿ? ಎಂದು. ನಿಜಕ್ಕೂ ನಿಮಗಲ್ಲಿ ನಿರಾಸೆಯಾಗುವದಂತು ಸಹಜ.

ಏಕೆಂದರೆ, ಅಭಿಯೋಜನಾಧಿಕಾರಿಗಳು ತಮ್ಮ ನ್ಯಾಯಾಲಯಕ್ಕೆ ವಿಚಾರಣೆಗೆ ಒಳಪಡುವ ಎಲ್ಲ ರೀತಿಯಪ್ರಕರಣಗಳನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ. ಒಂದು ವಿಶಿಷ್ಟ ಸ್ವರೂಪದ ಪ್ರಕರಣಗಳನ್ನು ಮುನ್ನಡೆಸಲು,  ಕೌಶಲ್ಯವನ್ನು ಬೆಳೆಸಿಕೊಳ್ಳಲು ಅವರಿಗೆ ಸಮಯಾವಕಾಶವೇ ಇಲ್ಲ. ಅತೀ ಸಾಧಾರಣ ಪ್ರಕರಣಗಳಿಂದ ಹಿಡಿದು, ಅತೀ ಗಂಭೀರವಾದ
ಪ್ರಕರಣಗಳನ್ನು ಅವರು ಮುನ್ನಡೆಸಬೇಕು. ಈ ಒತ್ತಡದ ಕರ್ತವ್ಯ ನಿರ್ವಹಣೆಯಲ್ಲಿ ಎಲ್ಲಾ ಪ್ರಕರಣಗಳಿಗೆ ಒಂದೇ ರೀತಿಯ ಏಕಾಗ್ರತೆ ಹಾಗೂ ಮುನ್ನಡೆಸುವಿಕೆ ಅನಿವಾರ್ಯ. ಪ್ರಕ್ರಿಯೆಯಲ್ಲಿ ಪ್ರತಿಭಾವಂತ ಅಭಿಯೋಜನಾಧಿಕಾರಿಗಳು ತಮ್ಮ ನೈಜ ಕೌಶಲ್ಯಗಳನ್ನೂ ಸಹ ಮರೆತು ಯಾಂತ್ರಿಕವಾಗಿ ಕಾರ್ಯ ನಿರ್ವಹಿಸುವಂತಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇಂಥ ಸನ್ನಿವೇಶಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಹೇಗೆ ಸಾಧ್ಯ. ಇದನ್ನೇ ಅಭಿಯೋಜನಾ ನೀತಿ ಹೊಂದಿದಲ್ಲಿ,
ಅಭಿಯೋಜನಾಧಿಕಾರಿಗಳ ಕೌಶಲ್ಯವನ್ನು ಗುರುತಿಸಿ ಅವರ ಪ್ರತಿಭೆಗೆ ತಕ್ಕಂತೆ, ಗಂಭೀರ ಪ್ರಕರಣಗಳಲ್ಲಿ ಅವರನ್ನು ವಿಶೇಷ ಅಭಿಯೋಜನಾಧಿಕಾರಿಗಳನ್ನಾಗಿ ನೇಮಿಸಿ ಅವರ ಮೂಲಕ ಪ್ರಕರಣಗಳನ್ನು ಮುನ್ನಡೆಸಿದರೆ ಅಂಥ ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಯನ್ನು ಪಡೆದುಕೊಳ್ಳಲು ಸಾಧ್ಯ.

ಇಲಾಖೆಯ ಅಭಿಯೋಜನಾಧಿಕಾರಿಗಳು ಎಲ್ಲಾ ರೀತಿಯ ಪ್ರಕರಣಗಳನ್ನು ಮುನ್ನಡೆಸುವುದರಿಂದ ಅವರಿಗೆ ಒಂದೇ ವಿಷಯದ
ಮೇಲೆ ಸಂಪೂರ್ಣವಾದ ವಿಶಿಷ್ಟವಾದ ಕೌಶಲ್ಯ ಇರುವುದಿಲ್ಲ. ಆ ಕಾರಣಕ್ಕೆ ಮಹತ್ತರ ಪ್ರಕರಣಗಳಿಗೆ ನಿವೃತ್ತ ನ್ಯಾಯಾಧೀಶ ರನ್ನೋ ಅಥವಾ ನ್ಯಾಯವಾದಿಗಳನ್ನೋ ವಿಶೇಷ ಅಭಿಯೋಜನಾಧಿಕಾರಿಗಳನ್ನಾಗಿ ನೇಮಿಸುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಈ ವಿಶೇಷ ಅಭಿಯೋಜನಾಧಿಕಾರಿಗಳು ತಾವು ನಿರ್ವಹಿಸುವ ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯನ್ನು ಕೊಡಿಸಿದ್ದಾರೆ  ಎಂಬುದು ಚರ್ಚಿಸುವ ವಿಷಯ. ಆದರೆ ಇತ್ತೀಚಿಗೆ ಹಿರಿಯ ಸಾರ್ವಜನಿಕ ಅಭಿಯೋಜನಾಧಿಕಾರಿಗಳೊಂದಿಗೆ ಮಾತನಾಡು ತ್ತಿದ್ದಾಗ, ಈ ನ್ಯಾಯವಾದಿಗಳನ್ನು ವಿಶೇಷ ಅಭಿಯೋಜನಾಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ ಒಂದು ಕುತೂಹಲಕಾರಿಯಾದ ಸಂಗತಿ ಕಂಡು ಬಂದಿತು.

ಅದೆಂದರೆ, ಒಂದು ಪೊಲೀಸ್ ಠಾಣೆಯಲ್ಲಿ ಒಂದು ಬಾಂಬ್ ಬ್ಲಾಸ್ಟ್‌ ಪ್ರಕರಣ ದಾಖಲಾಯಿತು ಅಂದುಕೊಳ್ಳೋಣ, ಆ ನ್ಯಾಯಾ ಲಯದಲ್ಲಿ ಸರಕಾರದ ಪರವಾಗಿ ಅಭಿಯೋಜನಾಧಿಕಾರಿಗಳಿದ್ದರೂ ಸಹ, ಒಬ್ಬ ನ್ಯಾಯವಾದಿಯನ್ನು ಆ ಪ್ರಕರಣಕ್ಕೆ ವಿಶೇಷ ಅಭಿಯೋಜನಾಧಿಕಾರಿಯಾಗಿ ಮೊದಲ ಹಂತದಲ್ಲಿಯೇ ನೇಮಿಸಲಾಗುತ್ತದೆ. ಆ ವಿಶೇಷ ಅಭಿಯೋಜನಾಧಿಕಾರಿ ತನಿಖೆ ಸಮಯ ದಿಂದ ಕಾರ್ಯ ನಿರ್ವಹಿಸುತ್ತ ಆರೋಪಿತರ ವಿರುದ್ಧ ದೋಷಾರೋಪಣ ವರದಿಯನ್ನು ಸಲ್ಲಿಸಿದ ನಂತರ, ವಿಚಾರಣೆ ಪ್ರಾರಂಭ ವಾಗುವ ಸಮಯದಲ್ಲಿ ತನ್ನ ವೈಯಕ್ತಿಕ ಕಾರಣ ನೀಡಿ ತನ್ನನ್ನು ಈ ವಿಶೇಷ ಅಭಿಯೋಜನಾಧಿಕಾರಿಯ ಜವಾಬ್ದಾರಿ ಯಿಂದ ಮುಕ್ತನನ್ನಾಗಿಸಲು ಕೋರಿ ತನ್ನ ಸಂಭಾವನೆಯಾಗಿ ಹಲವು ಲಕ್ಷ ರು. ಪಡೆದು ಜವಾಬ್ದಾರಿಯಿಂದ ಮುಕ್ತನಾಗುತ್ತಾನೆ.

ಆದರೆ ನಂತರ ಆ ಪ್ರಕರಣದ ವಿಚಾರಣೆ ಮಾಡುವ ಹಾಗೂ ಮುನ್ನಡೆಸುವ ಜವಾಬ್ದಾರಿ ಇಲಾಖೆಯ ಅಭಿಯೋಜನಾಧಿಕಾರಿಯ ಹೆಗಲಿಗೇರುತ್ತದೆ. ಪ್ರಕರಣದ ಬಗ್ಗೆ ಮೊದಲಿನಿಂದಲೂ ಮಾಹಿತಿ ಇರುವ ನ್ಯಾಯವಾದಿ ತನ್ನ ಹೊಣೆಗಾರಿಕೆಯಿಂದ ನುಣಿಚಿ ಕೊಂಡಿದ್ದರ ಫಲವಾಗಿ ಆ ಪ್ರಕರಣದಲ್ಲಿ ಆರೋಪಿತರಿಗೆ ಬಿಡುಗಡೆಯಾದರೆ, ಇಲಾಖೆಯ ಅಭಿಯೋಜನಾಧಿಕಾರಿಯು ಸರಿಯಾಗಿ ಪ್ರಕರಣವನ್ನು ಮುನ್ನಡೆಸಿಲ್ಲವೆಂಬ ಅಪವಾದ ಅನುಭವಿಸಬೇಕಾಗುತ್ತದೆ. ಆದರೆ ಇದೇ ಅಭಿಯೋಜನಾ ನೀತಿ
ಇದ್ದಲ್ಲಿ, ಯಾವ ಅಭಿಯೋಜನಾ ಅಧಿಕಾರಿಯು ಈ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಮುನ್ನಡೆಸಬೇಕು ಎಂಬ ಸ್ಪಷ್ಟ ನೀತಿಗಳು, ಸೂಚನೆಗಳ ಹಿನ್ನಲೆಯಲ್ಲಿ ಇಲಾಖೆಯ ಅಭಿಯೋಜನಾ ಧಿಕಾರಿಗಳನ್ನು ಗುರುತಿಸಿ, ಅವರಿಗೆ ಸೂಕ್ತವಾದ ತರಬೇತಿ ಗಳನ್ನು ನೀಡಿ ತನಿಖೆಯ ಹಂತದಿಂದ ಹಿಡಿದು ಪ್ರಕರಣದ ವಿಚಾರಣೆ ಮುಗಿಯುವವರೆಗೂ ಅಭಿಯೋಜನಾ ಹೊಣೆಗಾರಿಕೆ ನೀಡಿದಾಗ, ಆ ಅಭಿಯೋಜನಾಧಿಕಾರಿಯು ತನ್ನ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಫಲವಾಗಿ ಅಂಥ ಗಂಭೀರ ಪ್ರಕರಣಗಳು ಶಿಕ್ಷೆಯಲ್ಲಿ ಕೊನೆಗೊಳ್ಳಲು ಸಾಧ್ಯ.

ಈ ಅಭಿಯೋಜನಾ ನೀತಿ ಇಲ್ಲದಿರುವುದರಿಂದಲೇ ನಮ್ಮ ರಾಜ್ಯದಲ್ಲಿ ನ್ಯಾಯವಾದಿ ವಿಶೇಷ ಅಭಿಯೋಜನಾಧಿಕಾರಿಗಳು
ಪಡೆಯುವ ಸಂಭಾವನೆ ಅನೇಕ ಕೋಟಿಗಳಲ್ಲಿದೆ. ಒಂದು ಪ್ರತ್ಯೇಕವಾದ ಅಭಿಯೋಜನಾ ಇಲಾಖೆಯೇ ಇರುವಾಗ ಹೊರಗಿನ ವರಿಗೆ ಕೋಟಿಗಳ ಪ್ರಮಾಣದಲ್ಲಿ ಸಂಭಾವನೆ ನೀಡುವುದು ನಮ್ಮ ಬೊಕ್ಕಸಕ್ಕೆ ಭಾರ ಹೊರಿಸಿದಂತಲ್ಲವೇ? ಅಭಿಯೋಜನಾ ನೀತಿಯಿಂದ ಅಗತ್ಯ ಕಾನೂನುಗಳ ಪುನರಾವಲೋಕನ, ತಿದ್ದುಪಡಿ ಹಾಗೂ ಹೊಸ ಕಾನೂನುಗಳನ್ನು ಜಾರಿಗೆ ತರಲು ಅನುಕೂಲವಾಗುತ್ತದೆ.

ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು, ಉನ್ನತ ಮಟ್ಟದಲ್ಲಿನ ಅಭಿಯೋಜನಾಧಿಕಾರಿಗಳು ತಮ್ಮ ಹಂತದಲ್ಲಿನ ನೊಂದ ವರ ನೋವುಗಳು, ಕಾನೂನಿನಲ್ಲಿ ಅವರಿಗೆ ದೊರಕಬೇಕಾದ ನ್ಯಾಯ, ನ್ಯಾಯ ದೊರಕದಂತಿರಲು ಇರುವ ಅಡತಡೆ ಗಳು, ಇತ್ಯಾದಿಗಳನ್ನು ಕಣ್ಣಾರೆ ಕಂಡು ಅನುಭವಿಸಿದ ಜವಾಬ್ದಾರಿಯುತ ಅಧಿಕಾರಿಗಳಾಗಿರುತ್ತಾರೆ. ತಮ್ಮ ಅನುಭವ ಹಾಗೂ ಪರಿಣಾಮಕಾರಿಯಾದ ಮಾತಿಗಳನ್ನು ಸಮಯಾನುಸಾರ ಪಡೆದು ಸದ್ಯ ಇರುವ ಕಾನೂನುಗಳ ಪುನರಾವಲೋಕನ, ತಿದ್ದುಪಡೆ
ಹಾಗೂ ಅಗತ್ಯ ಕಾನೂನುಗಳ ಬಗ್ಗೆೆ ಕ್ರಮ ಕೈಗೊಳ್ಳಲು ಸಾಧ್ಯ.

ಆದರೆ ಅಭಿಯೋಜನಾಧಿಕಾರಿಗಳನ್ನು ಸಕ್ರೀಯವಾಗಿ ಈ ಮಹತ್ತರವಾದ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು
ಯಾವುದೇ ಸ್ಪಷ್ಟವಾದ ನೀತಿಯಿಂದ, ಜಾರಿಯಲ್ಲಿರುವ ಕಾನೂನುಗಳಲ್ಲಿಯೂ ಸಹ ಅನೇಕ ಕೊರತೆಗಳನ್ನು ನೀಗಿಸಿ ಮತ್ತಷ್ಟು
ಪರಿಣಾಮಕಾರಿಯಾಗಿಸಿ ನ್ಯಾಯಾಲಯದಿಂದ ನ್ಯಾಯದ ನಿರೀಕ್ಷೆಯಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ಸಹ ಈ ಅಭಿಯೋಜನಾ
ನೀತಿಯ ಲಾಭವನ್ನು ಪಡೆಯುವಂತೆ ಮಾಡಲು ಸಾಧ್ಯ