Tuesday, 22nd October 2024

ರಾಜಕೀಯದಲ್ಲಿ ಟೈಮಿಂಗ್ ಮುಖ್ಯ !

ಅಶ್ವತ್ಥಕಟ್ಟೆ

‘ಕಬ್ಬಿಣ ಕಾದಾಗ ತಟ್ಟಬೇಕು’ ಎನ್ನುವ ಗಾದೆ ಮಾತಿದೆ. ಇದು ಎಲ್ಲ ಕಾಲ ಹಾಗೂ ಕ್ಷೇತ್ರಕ್ಕೂ ಪ್ರಸ್ತುತ. ಸರಿಯಾದ ಸಮಯಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಹಾಗೂ ಅದರಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಸ್ಪಷ್ಟ. ಹಲವೊಮ್ಮೆ ತಪ್ಪು ಸಮಯದಲ್ಲಿ ತೀರ್ಮಾನ ತೆಗೆದುಕೊಂಡರೆ, ತಿರುಗುಬಾಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲಿಯೂ, ರಾಜಕೀಯದಲ್ಲಿ ಪ್ರತಿಹೆಜ್ಜೆ ಇಡುವಾಗಲೂ ‘ಟೈಮಿಂಗ್’ ಎನ್ನುವುದು ಮುಖ್ಯವಾಗುತ್ತದೆ.

ಚೆಸ್‌ನಲ್ಲಿ ಹೇಗೆ ಒಂದು ತಪ್ಪುಹೆಜ್ಜೆ ಇಡೀ ಪಂದ್ಯದ ಸೋಲಿಗೆ ಕಾರಣವಾಗುವುದೋ, ಅದೇ ರೀತಿ ರಾಜಕೀಯದಲ್ಲಿಯೂ ಒಂದು ಸಣ್ಣ ತಪ್ಪುಹೆಜ್ಜೆ ಇಡೀ ತಂತ್ರಗಾರಿಕೆಯನ್ನೇ ತಲೆಕೆಳಗೆ
ಮಾಡುವ ಸಾಧ್ಯತೆಯಿರುತ್ತದೆ. ರಾಜಕೀಯದಲ್ಲಿನ ಟೈಮಿಂಗ್ ಬಗ್ಗೆ ವಿಶ್ಲೇಷಿಸುವುದಕ್ಕೆ, ರಾಜ್ಯ ರಾಜಕೀಯದ ವಿಷಯ ಅತ್ಯುತ್ತಮ ಉದಾಹರಣೆಯಾಗಿದೆ. ಹೌದು, ಕಳೆದೊಂದು ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ತೀವ್ರಚರ್ಚೆ, ಪಾದಯಾತ್ರೆ, ಜನಾಂದೋಲನ, ವಾಕ್ಸಮರಗಳಿಗೆಲ್ಲ ಕಾರಣವಾಗಿದ್ದ ಮುಡಾ ಹಗರಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ‘ಪ್ರಾಸಿಕ್ಯೂಷನ್’ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿಸಿದ್ದಾರೆ. ಈ ತೀರ್ಮಾನದ ವಿರುದ್ಧ ರಾಜ್ಯಾದ್ಯಂತ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ರಾಜಕೀಯ ಹೋರಾಟದೊಂದಿಗೆ ಕಾನೂನಾತ್ಮಕವಾಗಿಯೂ ಮುಖ್ಯಮಂತ್ರಿಗಳು ಹೋರಾಟ ಆರಂಭಿಸಿದ್ದು, ಪ್ರಾಸಿಕ್ಯೂಷನ್ ವಿರುದ್ಧ ಸಿಎಂ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂದಿನದ್ದನ್ನು ನ್ಯಾಯಾಲಯ ತೀರ್ಮಾನಿಸಲಿದೆ. ಆದರೆ ಅಭಿಯೋಜನೆಗೆ ಅವಕಾಶ ನೀಡಿ ೩ ದಿನ ಕಳೆದ ಬಳಿಕ ಪರಿಸ್ಥಿತಿಯನ್ನು ಗಮನಿಸಿದರೆ, ರಾಜ್ಯಪಾಲರು ‘ರಾಂಗ್ ಟೈಮ್’ನಲ್ಲಿ ಅನುಮತಿ ನೀಡಿದರೇ ಎನ್ನುವ ಅನುಮಾನ ಕಾಡದೇ ಇರುವುದಿಲ್ಲ. ಸಾಮಾನ್ಯವಾಗಿ ಇಂಥ ಆರೋಪಗಳು ಬಂದಾಗ, ನ್ಯಾಯಾಲಯದಲ್ಲಿನ ಹೋರಾಟ ಒಂದು ಭಾಗ, ರಾಜಕೀಯ ಹೋರಾಟ ಮತ್ತೊಂದು ಭಾಗವಾಗುತ್ತವೆ.

ಸದ್ಯ ನ್ಯಾಯಾಂಗದ ಭಾಗದ ಬಗ್ಗೆ ಗಮನಿಸುವುದಕ್ಕಿಂತ ರಾಜಕೀಯವಾಗಿ ಈ ಪ್ರಕರಣವನ್ನು ನೋಡಿದರೆ, ರಾಜ್ಯ ಸರಕಾರ ಅಥವಾ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ‘ಒಡಕು’ ಇಲ್ಲದೇ ಒಮ್ಮತದಿಂದ ಸಿದ್ದರಾಮಯ್ಯ ಪರವಾಗಿ ಇಡೀ ಪಕ್ಷ ನಿಂತಿರುವುದರಿಂದ ಈ ಅಭಿಯೋಜನೆಯಿಂದ ’ರಾಜಕೀಯ’ವಾಗಿ ಯಾರಿಗೆ ಲಾಭವಾಗುತ್ತಿದೆ ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಏರಿದ ರಾಜ್ಯ ಕಾಂಗ್ರೆಸ್ ‘ಅಲೆಯಿಲ್ಲದ ಪ್ರಶಾಂತ ಸಮುದ್ರ’ದಂತಿದೆ. ಡಿಸಿಎಂ ಹುದ್ದೆ ಸೃಷ್ಟಿ ವಿಷಯದಲ್ಲಿ ಒಂದಷ್ಟು ಒಡಕಿದ್ದರೂ, ಸಿದ್ದರಾಮಯ್ಯ ವಿಷಯದಲ್ಲಿ ಬಹುತೇಕ ಶಾಸಕರಿಗೆ ಭಿನ್ನಾಭಿಪ್ರಾಯವಿಲ್ಲ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ‘ಸಮಯಕ್ಕಾಗಿ ಕಾಯುತ್ತಿದ್ದಾರೆ’. ಇನ್ನು ಹೈಕಮಾಂಡ್, ಸ್ಥಿರ ಸರಕಾರ ಹೊಂದಿರುವ ಕರ್ನಾಟಕದ ತಂಟೆಗೆ ಹೋಗುವುದು ಬೇಡ ಎನ್ನುವ ಮನಸ್ಥಿತಿಯಲ್ಲಿದೆ.

ಹೀಗಿರುವಾಗ ಪ್ರಾಸಿಕ್ಯೂಷನ್‌ಗೆ ಅನುಮತಿಸುವುದರಿಂದ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಎನ್ನುವುದೇ ಬಹುದೊಡ್ಡ ‘ತಪ್ಪು ಲೆಕ್ಕಾಚಾರ’ ಎನ್ನುತ್ತಾರೆ ರಾಜಕೀಯ
ಪರಿಣತರು. ಅಭಿಯೋಜನೆಗೆ ಅವಕಾಶ ನೀಡಿದರೂ, ಸಿದ್ದರಾಮಯ್ಯ ಅವರು ವಿಶ್ವಾಸದಲ್ಲಿರುವುದಕ್ಕೂ ಕಾರಣವಿದೆ. ಅದೇನೆಂದರೆ, ಸಾಂವಿಧಾನಿಕ ಪೀಠದಲ್ಲಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಕ್ಕೆ ಪ್ರಾಸಿಕ್ಯೂಷನ್ ಕಡ್ಡಾಯ. ಈ ಪ್ರಾಸಿಕ್ಯೂಷನ್ ಅನ್ನು ಉನ್ನತ ಅಽಕಾರಿಗಳು ಕೇಳಬೇಕು ಎನ್ನುವ ಕಾನೂನನ್ನು ಕೇಂದ್ರ ಸರಕಾರ ಮಾಡಿದೆ. ಆದರೆ ಸಿದ್ದರಾಮಯ್ಯರ ವಿಷಯದಲ್ಲಿ, ಖಾಸಗಿ ವ್ಯಕ್ತಿಗಳು ರಾಜ್ಯಪಾಲರಿಗೆ ನೀಡಿರುವ ದೂರಿಗೆ ಅಭಿಯೋಜನೆಗೆ ಅವಕಾಶ ನೀಡಿದ್ದಾರೆ. ಈ ನಡೆಯನ್ನು ನ್ಯಾಯಾಲಯಗಳು ಪುರಸ್ಕರಿಸುವುದೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಸಿದ್ದರಾಮಯ್ಯರ ವಿರುದ್ಧ ಅಭಿಯೋ ಜನೆಗೆ ನೀಡಿರುವ ನಡೆಯನ್ನು ಬಿಜೆಪಿಗರು ಯಡಿಯೂರಪ್ಪ ಅವರ ಪ್ರಕರಣಕ್ಕೆ ಹೋಲಿಸುತ್ತಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಯಡಿಯೂರಪ್ಪ ಪ್ರಕರಣಕ್ಕೂ, ಸಿದ್ದ ರಾಮಯ್ಯ ಪ್ರಕರಣಕ್ಕೂ ರಾಜಕೀಯ ಹಾಗೂ ಕಾನೂನಾತ್ಮಕ ವಾಗಿ ಭಾರಿ ವ್ಯತ್ಯಾಸಗಳಿವೆ.

ಮೊದಲಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಾಸಿಕ್ಯೂಷನ್‌ಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿಸಿದ ಸಮಯದಲ್ಲಿ, ಯಡಿಯೂರಪ್ಪರ ವಿರುದ್ಧ ಅದಾಗಲೇ ದೂರು ದಾಖಲಾಗಿ, ಲೋಕಾಯುಕ್ತದಲ್ಲಿ ವರದಿಯೂ ಸಿದ್ಧವಾಗಿತ್ತು. ಆದರೆ ಸಿದ್ದರಾಮಯ್ಯರ ಮುಡಾ ಪ್ರಕರಣದಲ್ಲಿ ಈವರೆಗೆ ಯಾವುದೇ ವರದಿಗಳು ಸಜ್ಜಾಗಿಲ್ಲ. ಆದ್ದರಿಂದ
ನ್ಯಾಯಾಲಯದಲ್ಲಿ ಅಭಿಯೋಜನೆಗೆ ಅವಕಾಶ ಸಿಕ್ಕರೂ, ಕನಿಷ್ಠ ಒಂದೆರಡು ವರ್ಷ ‘ತನಿಖೆ’ ಯಾಗುವುದು ನಿಶ್ಚಿತ. ಇನ್ನು ರಾಜಕೀಯವಾಗಿ ಈ ೨ ಪ್ರಕರಣವನ್ನು ತಾಳೆ ಹಾಕಿ
ದರೂ, ಅಜಗಜಾಂತರವಿರುವುದು ಸ್ಪಷ್ಟ. ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿದಾಗ, ಅವರ ಸರಕಾರಕ್ಕೆ ಸರಳ ಬಹುಮತವಿತ್ತೇ ಹೊರತು ಸದ್ಯ ಕಾಂಗ್ರೆಸ್
ಸರಕಾರಕ್ಕೆ ಇರುವಂತೆ ೧೩೬ ಶಾಸಕರ ಸಂಖ್ಯಾ ಬಲವಿರಲಿಲ್ಲ.

ಎರಡನೆಯದಾಗಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎನ್ನುವ ಚರ್ಚೆ ಬಿಜೆಪಿ ಯೊಳಗೆ ದೊಡ್ಡ ಮಟ್ಟದಲ್ಲಿ ಆ ವೇಳೆ ನಡೆಯುತ್ತಿತ್ತು. ವರಿಷ್ಠರ ಬಳಿಯೂ
ದೂರುಗಳು ಹೋಗಿದ್ದವು. ಒಂದು ವೇಳೆ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯ ದಿದ್ದರೆ, ಸರಕಾರವೇ ಬೀಳುವ ಆತಂಕವೂ ಅಂದಿತ್ತು. ಇದ ರೊಂದಿಗೆ ಯಡಿಯೂರಪ್ಪ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪ ಬಿಜೆಪಿ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿ ಸಿತ್ತು. ಆದ್ದರಿಂದ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯುವ ರಿಸ್ಕ್‌ಗೆ ವರಿಷ್ಠರು ಮುಂದಾದರು.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ವಪಕ್ಷದ ಆಂತರಿಕ ವೇದಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ. ಇದ್ದರೂ ಅದು ಆಡಳಿತಾತ್ಮಕ ವಿಷಯದಲ್ಲಿದೆಯೇ ಹೊರತು, ಸಿದ್ದ ರಾಮಯ್ಯರನ್ನು ಕೆಳಗಿಳಿಸಬೇಕು ಎನ್ನುವ ಆಲೋಚನೆ ಬಹುತೇಕ ಶಾಸಕರಿಗಿಲ್ಲ.

೧೩೬ ಶಾಸಕರ ಸಂಖ್ಯಾಬಲವಿರುವ ಕಾಂಗ್ರೆಸ್‌ನಲ್ಲಿ ೭೦ಕ್ಕೂ ಹೆಚ್ಚು ಸಿದ್ದರಾಮಯ್ಯ ಆಪ್ತರಿರು ವುದರಿಂದ ಈ ಹಂತದಲ್ಲಿ ಮುಖ್ಯಮಂತ್ರಿಯನ್ನು ಬದಲಾ ಯಿಸಿದರೆ, ಪಕ್ಷದ ನಾಯಕರು ವಾಗ್ದಾಳಿ ನಡೆಸುತ್ತಾರೆ ಎನ್ನುವುದು ಹೈಕಮಾಂಡ್‌ಗೆ ಗೊತ್ತಿದೆ. ಈ ಎಲ್ಲವನ್ನು ಮೀರಿ, ಪಕ್ಷದ ಹೈಕಮಾಂಡ್‌ಗೆ ಸದ್ಯ ಕರ್ನಾ ಟಕದಲ್ಲಿರುವ ‘ಸುಭದ್ರ’ ಸರಕಾರವನ್ನು ಅಲುಗಾಡಿಸುವ ಮನಸ್ಥಿತಿಯಿಲ್ಲ. ಆದ್ದರಿಂದ ಈ ಸಮಯದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿಸಿರುವುದ ರಿಂದ ಸಿದ್ದರಾಮಯ್ಯರಿಗೆ ನೆಗೆಟಿವ್ ಆಗುವುದಕ್ಕಿಂತ ಪಾಸಿಟಿವ್ ಆಗುವ ಸಾಧ್ಯತೆಯಿರುವುದು ರಾಜ್ಯಪಾಲರಿಗೆ ಗೊತ್ತಿದ್ದರೂ, ಅವಕಾಶ ನೀಡಿ ಇದೀಗ ಮುಂದೇನು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಯಾವುದೇ ಸರಕಾರ ಅಽಕಾರದಲ್ಲಿದ್ದರೂ ಇಂಥ ರಾಜಕೀಯ ಮೇಲಾಟಗಳಾಗುವುದು
ಸರ್ವೇಸಾಮಾನ್ಯ. ಆದರೆ ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ‘ಉಸಿರಾಡಲು’ ರಾಜ್ಯಪಾಲರು ಅವಕಾಶ ನೀಡಿದರು ಎಂದರೆ ತಪ್ಪಾಗುವುದಿಲ್ಲ.

ಏಕೆಂದರೆ, ಶೋಕಾಸ್ ನೋಟಿಸ್‌ಗೆ ಉತ್ತರಿಸಲು ೧ ವಾರ ಕಾಲಾವಕಾಶ ನೀಡಿದ ರಾಜ್ಯಪಾಲರು, ಕಾಲಾವಕಾಶ ಮುಗಿದ ಬಳಿಕವೂ ೨ ವಾರ ಯಾವುದೇ ಪ್ರಕ್ರಿಯೆ ನಡೆಸದೇ ಮೌನವಾಗಿದ್ದರು. ರಾಜ್ಯಪಾಲರ ಈ ನಡೆಯಿಂದ, ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡುವುದಿಲ್ಲವೇನೋ ಎಂದು ಅನೇಕರು ಭಾವಿಸಿದ್ದರೆ, ಸಿದ್ದರಾಮಯ್ಯ ಆಂಡ್ ಟೀಂಗೆ ಈ ಪ್ರಕರಣದಲ್ಲಿ ಅಭಿ
ಯೋಜನೆಗೆ ಅವಕಾಶ ನೀಡಿದರೆ ಯಾವ ರೀತಿ ಹೋರಾಡ ಬೇಕು ಎನ್ನುವುದಕ್ಕೆ ತಯಾರಿ ನಡೆಸಲು ಸಮಯಾವಕಾಶ ಸಿಕ್ಕಂತಾಯಿತು. ೩ ದಿನದ ಹಿಂದೆ ನೀಡಿರುವ ಪ್ರಾಸಿಕ್ಯೂಷನ್
ಅನ್ನು ೧೦ ದಿನಗಳ ಹಿಂದೆ ನೀಡಿದ್ದರೆ, ಒಂದು ಹಂತಕ್ಕೆ ಕಾಂಗ್ರೆಸ್ ನಾಯಕರು ‘ಇಕ್ಕಟ್ಟಿಗೆ’ ಸಿಲುಕುತ್ತಿದ್ದರು.

ಸರಿಯಾದ ಸಮಯಕ್ಕೆ ಅಸ ಪ್ರಯೋಗಿಸದೇ, ವಿರೋಽಗಳು ಯುದ್ಧಕ್ಕೆ ಸನ್ನದ್ಧರಾದ ಬಳಿಕ ಪ್ರಯೋಗಿಸಿದರೆ ಪ್ರಯೋಜನ ವಾಗುವುದಿಲ್ಲ ಎನ್ನುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ
ಗೋಚರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಮಟ್ಟಿಗೆ ಯೋಚಿಸುವುದಾದರೆ ಯಾವುದೇ ಸಮುದಾಯವನ್ನು ಎದುರುಹಾಕಿ ಕೊಳ್ಳುವ ಪರಿಸ್ಥಿತಿಯಲ್ಲಿ ಪಕ್ಷವಿಲ್ಲ. ೧೯೯೦ರಲ್ಲಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ್ದರಿಂದ, ಕಾಂಗ್ರೆಸ್ ವಿರುದ್ಧ ಲಿಂಗಾಯತ ಸಮುದಾಯ ತಿರುಗಿಬಿತ್ತು. ಆ ಒಂದು ಘಟನೆಯಿಂದ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡ ಲಿಂಗಾಯತರು, ಬಿಜೆಪಿಯತ್ತ ವಾಲಿದರು. ಇದಾಗಿ ೩ ದಶಕ ಕಳೆಯುತ್ತಾ ಬಂದಿದ್ದರೂ, ಲಿಂಗಾಯತರನ್ನು ‘ಪೂರ್ಣ ಪ್ರಮಾಣ’ದಲ್ಲಿ ಸೆಳೆಯಲು ಕಾಂಗ್ರೆಸ್‌ಗೆ ಈಗಲೂ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಈ
ಒಂದು ತಪ್ಪುನಡೆ, ಬಿಜೆಪಿಗೆ ಕರ್ನಾಟಕದಲ್ಲಿ ನೆಲೆ ಕಂಡು ಕೊಳ್ಳಲು ನೆರವಾಗಿತ್ತು.

ಇದೀಗ ಕಾಂಗ್ರೆಸ್ ಇಂಥ ಮತ್ತೊಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಸಿದ್ದರಾಯಯ್ಯ ಅವರೊಂದಿಗೆ ಕುರುಬ ಸಮುದಾಯ ಮಾತ್ರವಲ್ಲದೆ, ಇಡೀ ಅಹಿಂದ ಸಮುದಾಯ ನಿಂತಿದೆ. ಅಂಕಿ-ಅಂಶದ ಪ್ರಕಾರ ಸುಮಾರು ೮೦ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕುರುಬರ ಮತಗಳು ‘ನಿರ್ಣಾಯಕ’ ಪಾತ್ರ ವಹಿಸಿದರೆ, ಅಹಿಂದ ಸಮುದಾಯದ ಮತಗಳು ನೂರಕ್ಕೂ ಹೆಚ್ಚು ಕ್ಷೇತ್ರದಲ್ಲಿವೆ. ಸಿದ್ದರಾಮಯ್ಯ
ಅವರೊಂದಿಗೆ ಈ ಸಮುದಾಯದ ಬಹುತೇಕ ಮತಗಳು ಸೇರಿರುವುದರಿಂದ, ಹೆಚ್ಚುಕಡಿಮೆಯಾದರೆ ಕಾಂಗ್ರೆಸ್‌ನ ಬಹುದೊಡ್ಡ ಮತಬ್ಯಾಂಕ್ ‘ತಟಸ್ಥ’ವಾಗುವ ಸಾಧ್ಯತೆಯಿದೆ. ಇತ್ತ ಲಿಂಗಾಯತ ಪೂರ್ಣಬಲವಿಲ್ಲದೆ, ಅತ್ತ ಅಹಿಂದದ ಬಲವೂ ಇಲ್ಲದೇ ಮುಂದಿನ ಚುನಾವಣೆ ಎದುರಿಸುವುದು ಎಷ್ಟು ಕಷ್ಟ ಎನ್ನುವ ಅರಿವು ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಬಹುತೇಕ ನಾಯಕರಿಗಿದೆ. ಆದ್ದರಿಂದಲೇ ಸಿದ್ದರಾಮಯ್ಯ ಪರವಾಗಿ ಅವರ ಆಪ್ತರಿಗಿಂತ ಹೆಚ್ಚಾಗಿ ಶಿವಕುಮಾರ್ ಬ್ಯಾಟ್ ಬೀಸುತ್ತಿದ್ದಾರೆ.

ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಶಿವ ಕುಮಾರ್ ಅವರು ಸಿದ್ದರಾಮಯ್ಯ ಪರವಾಗಿ ಈ ಪ್ರಮಾಣ ದಲ್ಲಿ ಬ್ಯಾಟ್ ಬೀಸುತ್ತಿರುವುದೇಕೆ ಎನ್ನುವ ಗೊಂದಲ ಅನೇಕರಲ್ಲಿದೆ. ಸಿದ್ದ
ರಾಮಯ್ಯರಿಗೆ ‘ಬಂಡೆ’ ಯಾಗಿ ನಿಲ್ಲುವ ವಿಷಯದಲ್ಲಿ ಡಿಕೆಶಿ ಸಹ ಅಳೆದು ತೂಗಿಯೇ ತೀರ್ಮಾನಿಸಿ ದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸದ್ಯದ ಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್‌ಗೆ
ಸಿದ್ದರಾಮಯ್ಯರಿಂದ ರಾಜೀನಾಮೆ ಪಡೆಯಬೇಕೆಂಬ ಆಲೋಚನೆಯಿಲ್ಲ. ಪಕ್ಷದ ಹಲವು ಶಾಸಕರು, ಅಹಿಂದ ಸಮುದಾಯದ ನಾಯಕ ಸಿದ್ದ ರಾಮಯ್ಯರ ಪರವಾಗಿದ್ದಾರೆ. ಈ ಹಂತದಲ್ಲಿ ಸರ್ಕಸ್ ಮಾಡುವುದಕ್ಕಿಂತ ಮೌನವಾಗಿರುವುದು ಲೇಸು. ಈಗಾಗಲೇ ಹೇಳಿರುವಂತೆ ಸಿದ್ದರಾಮ ಯ್ಯರಿಗೆ ಇದೇ ಕೊನೆ ಚುನಾವಣೆ. ಆದ್ದರಿಂದ ಈ ಅವಽಯಲ್ಲಿ ಅವರೊಂದಿಗೆ ‘ಸಂಘರ್ಷ’ಕ್ಕೆ ಇಳಿದರೆ ಭವಿಷ್ಯದಲ್ಲಿ ತಮಗೇ ಸಮಸ್ಯೆ. ಆದ್ದರಿಂದ ಈಗ ಅವರ ಪರವಾಗಿಯೇ ಬ್ಯಾಟ್ ಮಾಡಿ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಮುಂದಿಟ್ಟುಕೊಂಡು ಹೋದರೆ ಪಕ್ಷಕ್ಕೆ ಅನು
ಕೂಲ.

ಪಕ್ಷಕ್ಕೆ ಅನುಕೂಲವಾದರೆ, ಸದ್ಯದ ಪರಿಸ್ಥಿತಿಯಲ್ಲಿ ಅದರ ನೇರ ‘ಲಾಭ’ ತಮಗೆ ಎನ್ನುವುದು ಶಿವಕುಮಾರ್‌ರಿಗೆ ಗೊತ್ತಿದೆ. ಸೂಕ್ತ ಸಮಯಕ್ಕೆ ಕಾಯದೇ, ದುಡುಕಿ ಕೈಸುಟ್ಟುಕೊಳ್ಳುವುದಕ್ಕಿಂತ ಸುಮ್ಮನಿರುವುದು ಲೇಸು ಎನ್ನುವುದು ಡಿಕೆಶಿ ಲೆಕ್ಕಾಚಾರ. ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿರುವುದರ ಪರ-ವಿರುದ್ಧ ರಾಜಕೀಯ ವಾಗಿ, ಬೀದಿಯಲ್ಲಿ ನಿಂತು ಏನೇ ಘೋಷಣೆ ಕೂಗಿದರೂ ತಾರ್ತಿಕ ಅಂತ್ಯ ಸಿಗುವುದಿಲ್ಲ. ಅದು ಸಿಗಬೇಕಿರುವುದು ನ್ಯಾಯಾಲಯದಲ್ಲಿ. ಆದ್ದರಿಂದ ಮುಡಾ ನಿವೇಶನ ಹಂಚಿಕೆ ಯಲ್ಲಿ ಸಿದ್ದ ರಾಮಯ್ಯರ ಪಾತ್ರವಿತ್ತೇ? ಸ್ವಜನ ಪಕ್ಷಪಾತದ ಆರೋಪಕ್ಕೆ ದಾಖಲೆಗಳಿವೆಯೇ? ಸಿದ್ದರಾಮಯ್ಯರೇ ಹೇಳುತ್ತಿರುವಂತೆ ‘ಅವರೇನೂ ತಪ್ಪು ಮಾಡಿಲ್ಲವೇ?’ ಎನ್ನುವ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಅಲ್ಲಿಯ
ವರೆಗೆ ಈ ರಾಜಕೀಯ ಮೇಲಾಟಕ್ಕೆ ಕೊನೆಯಿಲ್ಲ.