ವಿಶ್ಲೇಷಣೆ
ಎಸ್.ಜಿ.ಹೆಗಡೆ
ಸದ್ಯದ ಸ್ಥಿತಿಯಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನಿನ ಕಡಿವಾಣ ಬಳಸುವುದು ಲಾಭದಾಯಕವಲ್ಲವೆಂದು ತೋರಿದರೂ, ಆರೆಸ್ಸೆಸ್ ಪಾಳಯದಿಂದ ಹೊಮ್ಮಿರುವ ಅಭಿಪ್ರಾಯವನ್ನು ಇಲ್ಲಿ ಸೂಕ್ಷ್ಮವಾಗಿ ಪರಿಗಣಿಸ ಬೇಕಿದೆ. ಒಟ್ಟಾರೆ ನಿಯಂತ್ರಣದ ಜತೆಗೆ, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವನ್ನು ತಡೆಗಟ್ಟುವ ಕುರಿತೂ ಇಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನೊಂದು ತಿಂಗಳಲ್ಲಿ ಭೂಮಿಯು 800 ಕೋಟಿ ಜನರನ್ನು ಹೊರಲಿದೆ! ಈ ವರ್ಷಾಂತ್ಯದ ವೇಳೆಗೆ ಭಾರತದ ಜನಸಂಖ್ಯೆ 141.2 ಕೋಟಿಗೆ ಮುಟ್ಟುವುದರೊಂದಿಗೆ ಚೀನಾದ ಜನಸಂಖ್ಯೆಗೆ (142.6 ಕೋಟಿ) ನಿಕಟವಾಗಲಿದೆ ಮತ್ತು 2023ರ ವೇಳೆಗೆ
ಚೀನಾವನ್ನು ಹಿಂದಕ್ಕೆ ತಳ್ಳಿ ಪ್ರಥಮ ಸ್ಥಾನಕ್ಕೆ ಏರಲಿದೆ.
2050ರ ವೇಳೆಗೆ ಭಾರತದ ಜನಸಂಖ್ಯೆ 166.8 ಕೋಟಿಯಷ್ಟಾಗಿ, ಚೀನಾದ್ದು 131.7 ಕೋಟಿಗೆ ಕುಗ್ಗಲಿದೆ. ಈ ಮುನ್ನಂದಾ ಜನ್ನು ನೀಡಿರುವುದು ವಿಶ್ವಸಂಸ್ಥೆ. ಅಂದರೆ ಮುಂದಿನ ವರ್ಷ ಜಗತ್ತಿನ ಅತಿಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮುವ ಭಾರತವು ಬಹಳ ಕಾಲದವರೆಗೆ ಈ ಸ್ಥಾನದಲ್ಲೇ ಇರಲಿದೆ. ಏಕೆಂದರೆ ಚೀನಾದ ಜನಸಂಖ್ಯೆಯು ನಿಧಾನಗತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಹೆಚ್ಚುತ್ತಿ ರುವ ಜನಸಂಖ್ಯೆಯು ಭಾರತದ ಹಿತದೃಷ್ಟಿಯಿಂಧ ಒಳ್ಳೆಯದೇ ಅಥವಾ ಕೆಟ್ಟದೇ ಎಂಬ ಕುರಿತಾದ ವಿಚಾರ ವಿನಿಮಯಗಳು ನಡೆಯುತ್ತಿವೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಸಂಘದ ಸಂಸ್ಥಾಪನಾ ದಿನದಂದು ಮಾಡಿದ ಭಾಷಣದ ನಂತರ ಜನಸಂಖ್ಯಾ ನಿಯಂತ್ರಣದ ವಿಚಾರವು ಮತ್ತೆ ಮುಂಚೂಣಿಗೆ ಬಂತು ಎನ್ನಬೇಕು. ಇತ್ತೀಚೆಗೆ ಪ್ರಯಾಗರಾಜ್‌ನಲ್ಲಿ ಮುಕ್ತಾಯವಾದ ಆರೆಸ್ಸೆಸ್‌ನ 4 ದಿನಗಳ ಅಖಿಲ ಭಾರತೀಯ ಕಾರ್ಯಕಾರಿ ಮಂಡಳದ ಸಮಾವೇಶದ ಕೊನೆಯಲ್ಲೂ ಇದೇ ವಿಚಾರವನ್ನು ಒತ್ತಿ ಹೇಳಲಾಯಿತು. ಅಂದರೆ, ‘ನಮ್ಮ ದೇಶಕ್ಕೆ ಸರ್ವಧರ್ಮ ಸಮಾನ ಜನಸಂಖ್ಯಾ ನಿಯಂತ್ರಣ ನೀತಿ ಬೇಕು, ಜನಸಂಖ್ಯಾ ಹೆಚ್ಚಳದಲ್ಲಿನ ಧರ್ಮಾಧಾರಿತ ಅಸಮತೋಲನವು ಅನೇಕ ರಾಷ್ಟ್ರಗಳ ವಿಭಜನೆಗೆ ಕಾರಣವಾಗಿದೆ, ಗಡಿಯ ಮಾರ್ಪಾಡಿಗೆ ಕಾರಣವಾಗಿದೆ.
ಜನಸಂಖ್ಯಾಸೋಟವನ್ನು ತಡೆಯದಿದ್ದರೆ ಲಭ್ಯವಿರುವ ಸಂಪನ್ಮೂಲಗಳ ಕೊರತೆ ಎದುರಾಗಲಿದೆ. ಮಿತಿಮೀರಿದ ಜನಸಂಖ್ಯೆಗೆ ಯಾವ ಮಟ್ಟದ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಲಾದೀತು?’ ಎಂಬ ವಿಚಾರಗಳ ಕುರಿತು ಈ ವೇಳೆ ಒತ್ತಿಹೇಳಲಾಯಿತು. ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಅಂಗಸಂಸ್ಥೆಯಾಗಿರುವುದರಿಂದ ಆರೆಸ್ಸೆಸ್‌ನ ಇಂಥ ಅಭಿಪ್ರಾಯಕ್ಕೆ
ಮಹತ್ವ ದಕ್ಕಿದೆ.
ಇದು ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ಪ್ರಾಮುಖ್ಯ ದಕ್ಕಿಸಿಕೊಳ್ಳಬಹುದು ಎಂಬುದನ್ನು ಮತ್ತೆ ಹೇಳಬೇಕಿಲ್ಲ.
ಜನಸಂಖ್ಯಾ ನಿಯಂತ್ರಣದ ನೀತಿಯ ವಿಚಾರ ಬಂದಾಗ ನಮ್ಮ ಮುಂದಿರುವ ಸಹಜ ಮಾದರಿಯೆಂದರೆ ಚೀನಾ. ಏಕೆಂದರೆ, ಅಲ್ಲಿ ಬಹುಕಾಲ ಜಾರಿಯಲ್ಲಿದ್ದ ಸಂಬಂಧಿತ ಕಾಯ್ದೆ ಮತ್ತು ಅದು ತಂದ ದೂರದರ್ಶಿ ಪರಿಣಾಮ. ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ಕಾಯ್ದೆ ಚೀನಾದಲ್ಲಿ ಬಹುಕಾಲ ಜಾರಿಯಲ್ಲಿತ್ತು.
1980ರಲ್ಲಿ ಅನುಷ್ಠಾನಕ್ಕೆ ಬಂದ ಈ ಕಾನೂನಿನ ಕಡಿವಾಣವನ್ನು 36 ವರ್ಷಗಳ ನಂತರ ಸಡಿಲಿಸಲಾಯಿತು. ಈ ಕಾನೂನು ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಸಣ್ಣಕುಟುಂಬದ ವ್ಯವಸ್ಥೆಗೇ ಅಲ್ಲಿನವರ ಚಿತ್ತಸ್ಥಿತಿ ಒಗ್ಗಿಹೋಗಿದೆ. ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಆಯ್ಕೆಗೆ ಸಂಬಂಧಿಸಿ 2016ರ ನಂತರ ಕಾನೂನಿನಲ್ಲಿ ಮಾರ್ಪಾಡು ಆಯಿತಾದರೂ, ಒಂದೇ
ಮಗುವನ್ನು ಹೊಂದುವಲ್ಲಿಯೇ ಅಲ್ಲಿನ ಜನತೆ ಸಂತೃಪ್ತಿ ಪಡೆಯುತ್ತಿದೆ.
ಹೀಗಾಗಿ ಜನಸಂಕಲ್ಪಿತ ಜನಸಂಖ್ಯಾ ನಿಯಂತ್ರಣ ಪ್ರಸ್ತುತ ಚೀನಾದಲ್ಲಿ ಜಾರಿಯಲ್ಲಿದೆ ಎನ್ನಬಹುದು. ಚೀನಾ ಮಾದರಿಯಲ್ಲೇ
ಜನಸಂಖ್ಯೆಗೆ ಕಡಿವಾಣ ಹಾಕುವ ಪ್ರಯತ್ನ ಭಾರತದಲ್ಲೂ ಹಲವುಸಲ ಆಗಿದೆ. ಲೋಕಸಭೆಯಲ್ಲಿ ಈ ಕುರಿತು ಇದುವರೆಗೂ ೩೫
ಬಾರಿ ಮಸೂದೆಯನ್ನು ಮಂಡಿಸಲಾಗಿದೆ. 2019ರಲ್ಲಿ ರಾಕೇಶ್ ಸಿನ್ಹಾ ಮತ್ತು ಇತ್ತೀಚೆಗೆ ರವಿಕಿಶನ್ ಕೂಡ ಖಾಸಗಿ ಮಸೂದೆ ಮಂಡಿಸಿದ್ದರು. ಆದರೆ ಇಂಥ ಯಾವ ಯತ್ನಗಳೂ ಯಶಸ್ಸು ಕಂಡಿಲ್ಲ. 2020ರಲ್ಲಿ ಕೇಂದ್ರ ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ‘ಮಕ್ಕಳನ್ನು ಪಡೆಯುವ ಸಂಖ್ಯೆಯ ನಿಟ್ಟಿನಲ್ಲಿ ಜನರನ್ನು ಬಲವಂತಪಡಿಸಲಾಗದು’ ಎಂದು ಹೇಳಿರುವುದರಿಂದ ಜನಸಂಖ್ಯಾ ನಿಯಂತ್ರಣದ ಕುರಿತಾದ ಸರಕಾರದ ನಿಲುವು ತನ್ನದೇ ದಾರಿಯಲ್ಲಿದೆ ಎನ್ನಲಡ್ಡಿಯಿಲ್ಲ.
ಜನಸಂಖ್ಯಾ ನಿಯಂತ್ರಣದ ವಿಚಾರವನ್ನು ಸ್ವಾತಂತ್ರ್ಯಾ ನಂತರದ ಸ್ಥಿತಿಯಿಂದ ನೋಡಿದಾಗ, ಕಾನೂನು ಕಡಿವಾಣ ಇಲ್ಲದಿದ್ದರೂ ಜನಸಂಖ್ಯಾ ನಿಯಂತ್ರಣದಲ್ಲಾಗಿರುವ ಪ್ರಗತಿಯನ್ನು ತಿಳಿದುಕೊಳ್ಳಬಹುದು. ೬೦ರ ದಶಕದ ನಂತರ ನಾನೇ ನೋಡಿದಂತೆ ಹಳ್ಳಿಯು ಜನಭರಿತವಾಗಿತ್ತು. ಬಹುತೇಕ ಮನೆಗಳಲ್ಲಿ ಅರ್ಧಡಜನ್ನಿಗೂ ಹೆಚ್ಚು ಮಕ್ಕಳಿದ್ದರು. ಬಡತನವಿದ್ದರೂ ಜನನ ನಿಯಂತ್ರಣ ಹೇಗೆಂಬ ಅರಿವು ಸಮಾಜದಲ್ಲಿ ಸಾಕಷ್ಟಿರಲಿಲ್ಲ. ಈ ಅರಿವು ಮೂಡಿಸುವ ನಿಟ್ಟಿನಲ್ಲಿ ಕುಟುಂಬ ಯೋಜನೆಯ ವಿಭಾಗವು ಸರಿಯಾಗಿ ಸಕ್ರಿಯವಾಗಿದ್ದು ೭೦ರ ದಶಕದಲ್ಲಿಂದಲೇ ಎನ್ನಬೇಕು.
ಆಗ ಕೇಳಿದ ‘ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು’ ಘೋಷಣೆ ಕ್ರಮೇಣ ಜನಪ್ರಿಯವಾಗಿ, ಜನಸಂಖ್ಯಾ ನಿಯಂತ್ರಣದ ವಿಚಾರವು ಜನರಿಗೆ ತಿಳಿಯಲಾರಂಭಿಸಿತು. ಆದರೆ ಈ ಸಂಬಂಧದ ಸಶಕ್ತ ಕಾನೂನಿನ ಕಡಿವಾಣವು ಚೀನಾ ಮಾದರಿಯಲ್ಲಿ ೭೦ರ ದಶಕದಲ್ಲೇ ಅನುಷ್ಠಾನವಾಗಿದ್ದಿದ್ದರೆ, ಭಾರತದ ಇಂದಿನ ಜನಸಂಖ್ಯೆಯಲ್ಲಿ ೨೦ ಕೋಟಿಯಷ್ಟಾದರೂ ಕಡಿಮೆಯಾಗಬಹುದಿತ್ತು. ಜನಸಂಖ್ಯಾ ಉತ್ಪನ್ನವು ನಶಿಸುವ ಅನುಪಾತದ ಹತ್ತಿರ ತಲುಪಿರುವ ಈಗಿನ ಸ್ಥಿತಿಯಲ್ಲಿ, ಜನಸಂಖ್ಯಾ ನಿಯಂತ್ರಣದ ನೀತಿಯನ್ನು ಕಾಯ್ದೆಯಾಗಿ ಅಳವಡಿಸುವ ವಿಚಾರ ಎಷ್ಟು ಸರಿ ಎಂಬುದು ಪ್ರಶ್ನೆ.
ನಿಯಂತ್ರಣದ ಪರವಿರುವವರ ವಾದವೆಂದರೆ, ನಮ್ಮಲ್ಲಿ ಪ್ರತಿ ಮನುಷ್ಯನಿಗೆ ಸುಮಾರು ೧.೪ ಹೆಕ್ಟೇರ್ ಭೂಮಿ ಲಭ್ಯವಿದ್ದು ಸಂಪನ್ಮೂಲ ಉತ್ಪನ್ನವು ೦.೪೩ರಷ್ಟಿದೆ. ಜೀವಾವರಣದ ದೃಷ್ಟಿಯಿಂದ ನಾವು ಋಣಾತ್ಮಕ ಸ್ಥಾನದಲ್ಲಿದ್ದು, ಬಳಕೆ ಮತ್ತು
ಉತ್ಪನ್ನದ ನಡುವಿನ ವ್ಯತ್ಯಾಸ ೧.೮೭ರಷ್ಟಿದೆ. ಅಂದರೆ, ಇನ್ನೂ ಸುಮಾರು ೩೦ ವರ್ಷಗಳವರೆಗೆ ಉತ್ಪನ್ನದ ತೀವ್ರ ಖೋತಾ ದಿಂದಾಗಿ ಗೌರವಯುತ ಬಾಳುವೆ ಜನರಿಗೆ ಸಾಧ್ಯವಾಗಲಾರದು.
ಆದರೆ, ಈಗಾಗಲೇ ನಿಯಂತ್ರಣಾ ಅನುಪಾತವು ಸರಿಯಾದ ಮಟ್ಟ ತಲುಪಿದ್ದು, ಇನ್ನು ಕಾಯ್ದೆ ತರವುದರಲ್ಲಿ ಪ್ರಯೋಜನವೇನು ಎಂಬುದು ನಿಯಂತ್ರಣದ ವಿರೋಧವಿರುವವರ ವಾದ. ಕೈಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅವಶ್ಯಕ; ಅದನ್ನು ಸರಿಯಾಗಿ ಬಳಸಿಕೊಳ್ಳಲೆಂದು ಕೌಶಲಾಭಿವೃದ್ಧಿ ಮತ್ತು ಆರೋಗ್ಯ ವ್ಯವಸ್ಥೆಯ ಸುಧಾರಣೆ ಅಗತ್ಯವೆಂಬುದು
ಇವರ ಅಭಿಮತ.
ಸದ್ಯದ ಸ್ಥಿತಿಯಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನಿನ ಕಡಿವಾಣ ಬಳಸುವುದು ಅಷ್ಟೇನೂ ಲಾಭದಾಯಕವಲ್ಲವೆಂದು ಮೇಲ್ನೋಟಕ್ಕೆ ತೋರಿದರೂ, ಆರೆಸ್ಸೆಸ್ ಪಾಳಯದಿಂದ ಹೊಮ್ಮಿರುವ ಅಭಿಪ್ರಾಯವನ್ನು ಇಲ್ಲಿ ಸೂಕ್ಷ್ಮವಾಗಿ ಪರಿಗಣಿಸಬೇಕಿದೆ. ಒಟ್ಟಾರೆ ನಿಯಂತ್ರಣದ ಜತೆಗೆ, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವನ್ನು ತಡೆಗಟ್ಟುವ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ.
2019ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ಮೋದಿಯವರು, ‘ಜನಸಂಖ್ಯಾ ಸ್ಫೋಟವು ದೇಶಕ್ಕೆ ಮಾರಕವಾಗಿ ಪರಿಣ ಮಿಸಲಿದೆ. ಸಮಾಜದ ಒಂದು ವರ್ಗವು ಮಗುವನ್ನು ಭೂಮಿಗೆ ತರುವಾಗ ಅದಕ್ಕೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ನೀಡುವುದು ಸಾಧ್ಯವೇ ಎಂದು ಯೋಚಿಸುವುದೂ ಇಲ್ಲ. ಎಲ್ಲಿ ಸಣ್ಣ ಸಂಸಾರವಿರುತ್ತದೋ ಅಲ್ಲಿ ದೇಶಪ್ರೇಮ ಮತ್ತು ನೆಮ್ಮದಿ ಇರುತ್ತವೆ’ ಎನ್ನುವ ಮೂಲಕ ಜನಸಂಖ್ಯಾ ನಿಯಂತ್ರಣದ ಕುರಿತು ಎಲ್ಲರ ಗಮನ ಸೆಳೆದಿದ್ದರು. ಅಧಿಕೃತ ಮಾಹಿತಿಯ ಪ್ರಕಾರ,
1951ರಿಂದ 2011ರವರೆಗಿನ ಅವಧಿಯಲ್ಲಿ, ಹಿಂದೂ ಮಹಿಳೆಯರ ಫಲವಂತಿಕೆಯ ಪ್ರಮಾಣ ಶೇ. ೧.೯೪ರಷ್ಟಿದ್ದರೆ, ಮುಸ್ಲಿಮರಲ್ಲಿ ೨.೩೬, ಕ್ರೈಸ್ತರಲ್ಲಿ ೧.೮೮, ಸಿಖ್ಖರಲ್ಲಿ ೧.೬೧ರಷ್ಟಿತ್ತು. ಇತ್ತೀಚಿನ ಜನಗಣತಿಯನ್ನು ಪರಿಗಣಿಸಿದರೆ, ಧರ್ಮಾಧಾರಿತ ಅಸಮ ತೋಲನವು ಇನ್ನೂ ಜಾಸ್ತಿ ಕಾಣಿಸಲಿದೆ ಎನ್ನುತ್ತಾರೆ ಕೆಲ ತಜ್ಞರು.
ಜನಸಂಖ್ಯಾ ನಿಯಂತ್ರಣದಂಥ ಮಹತ್ವದ ವಿಚಾರವು ದೇಶದ ಹಿತದಲ್ಲಿರಬೇಕು, ಪಕ್ಷಾತೀತವೂ ಧರ್ಮಾತೀತವೂ ಆಗಿರಬೇಕು ಎಂಬುದು ಇಬ್ಬಗೆಯ ವಿಚಾರವಾಗಿದೆ ಎನಿಸುತ್ತದೆ. ಇಂಥ ಮಹತ್ವದ ವಿಷಯದಲ್ಲಿ ಧರ್ಮಾಧಾರಿತ ತಡೆ ಒದಗಬಾರದು. ಚೀನಾದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ತಂದ ಪರಿಣಾಮವು ಜನಸಂಕಲ್ಪಿತ ನಿಯಂತ್ರಣವನ್ನು ಕಲ್ಪಿಸಿದೆ. ಈ ನೀತಿಯನ್ನು ರಾಷ್ಟ್ರೀಯ ನೀತಿಯ ನಿಟ್ಟಿನಲ್ಲಿಯೇ ಅಲ್ಲಿ ನಿರ್ಧರಿಸಲಾಗಿತ್ತು. ಜಗತ್ತಿನ ಎಲ್ಲ ದೇಶಗಳಲ್ಲಿಯೂ ಹಾಗೆಯೇ, ಇಂಥ
ಮಹತ್ವದ ವಿಚಾರದಲ್ಲಿ ಏಕತಾನ ನೀತಿಯನ್ನು ಸರಕಾರವು ನಿರ್ಧರಿಸುತ್ತಿದೆ.
ಹಾಗೆಯೇ ನಮ್ಮ ದೇಶದಲ್ಲಿಯೂ ರಾಷ್ಟ್ರಹಿತದ ನೀತಿಯನ್ನು ರೂಪಿಸುವಾಗ ಅದು ಎಲ್ಲರಿಗೂ ಸಮನ್ವಯವಾಗುವಂತಿರಬೇಕು. ಎಲ್ಲ ಧರ್ಮದ ಜನರು ಸಮಾನ ತತ್ತ್ವದಡಿ ಶಾಂತಿಯಿಂದ ಸಹಬಾಳ್ವೆ ನಡೆಸುವುದೇ ಸರ್ವರ ಉದ್ದೇಶವಾದಾಗ ಸೂಕ್ತ, ಸಮನ್ವಯ ಜನಸಂಖ್ಯಾ ನೀತಿಯ ನಿರ್ಮಾಣದ ವಿಚಾರದಲ್ಲಿ ಅನಿಶ್ಚಿತತೆ ಅಥವಾ ಸಾರ್ವಜನಿಕ ವಾಗ್ವಾದವೇಕೆ ಎಂಬುದು ತಿಳಿಯದಾಗಿದೆ.