ಪ್ರಭು ಪ್ರವರ
ಪ್ರಭು ಚಾವ್ಲಾ
ನೀವು ಅಬ್ದುಲ್ಲಾಗಳಿಂದ ಕಾಶ್ಮೀರವನ್ನು ಬೇರ್ಪಡಿಸಬಹುದು, ಆದರೆ ಕಾಶ್ಮೀರದಿಂದ ಅಬ್ದುಲ್ಲಾಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಹೊಸ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ‘ಐಯಾಮ್ ಬ್ಯಾಕ್’ (ನಾನು ಮರಳಿ ಬಂದಿದ್ದೇನೆ) ಎಂದು ಟ್ವೀಟ್ ಮಾಡಿದ್ದರು. ಒಮರ್ ಅಬ್ದುಲ್ಲಾ ಸಾಮಾನ್ಯ ವ್ಯಕ್ತಿಯಲ್ಲ. ಅವರು ಕಾಶ್ಮೀರದ ಶ್ವಾರ್ಜೆನೆಗ್ಗರ್ ಇದ್ದಂತೆ. ತಮ್ಮ ರಾಜಕೀಯ ವೈರಿಗಳನ್ನು ಟರ್ಮಿನೇಟರ್‌ನಂತೆ ನಿರ್ನಾಮ ಮಾಡಿದ ಖ್ಯಾತಿ ಅವರಿಗಿದೆ.
ಬ್ರಿಟನ್ ಸಂಜಾತ, 54 ವರ್ಷದ ಒಮರ್ ಅಬ್ದುಲ್ಲಾಗೆ ‘ಎಕ್ಸ್’ ಮಾಧ್ಯಮದಲ್ಲಿ 32 ಲಕ್ಷ ಫಾಲೋವರ್‌ಗಳಿದ್ದಾರೆ.
ಕಾಶ್ಮೀರವನ್ನು ಆಳಿದ ಅಬ್ದುಲ್ಲಾ ವಂಶಸ್ಥರ ಮೂರನೇ ತಲೆಮಾರಿನ ವ್ಯಕ್ತಿಯೀತ. ‘ಐಯಾಮ್ ಬ್ಯಾಕ್’ ಎಂಬ ಅವರ ಟ್ವೀಟ್ ಸಾಕಷ್ಟು ಸದ್ದುಮಾಡಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅವರು ಕುಟುಂಬದ ಸಂಪ್ರದಾಯದಂತೆ ಶೇರ್ವಾನಿ-ಪೈಜಾಮ ಧರಿಸಿದ್ದರು. ಅವರು ಅಪ್ಪಟ ಕಾಶ್ಮೀರಿ ಎಂಬುದರ ಜತೆಗೆ ಅವರ ವಂಶದ ಉತ್ತರಾಽಕಾರತ್ವ ಮತ್ತು ನಿರಂತರತೆಯ ಸಂದೇಶವೂ ಅದರಲ್ಲಿತ್ತು.
ಅವರೇ ಈ ಹಿಂದೆ ಹೇಳಿರುವಂತೆ ಜಮ್ಮು-ಕಾಶ್ಮೀರವೆಂಬ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ಪಡೆಯುವ ಮೂಲಕ ಹೆಚ್ಚಿನ ಅಧಿಕಾರ ಕೊಡಿಸುವುದು ಅವರ ರಾಜಕೀಯ ಗುರಿಗಳಲ್ಲೊಂದು. ಪಾಕಿಸ್ತಾನದ ಜತೆಗೆ ಮಾತುಕತೆ ನಡೆಸುವುದು ಮತ್ತು ಜಮ್ಮು-ಕಾಶ್ಮೀರವನ್ನು ಭಾರತದ ಇನ್ನಿತರ ರಾಜ್ಯಗಳಿಗಿಂತ ವಿಭಿನ್ನವಾಗಿ ಉಳಿಸಿಕೊಳ್ಳುವುದು ಕೂಡ ಅವರ ಉದ್ದೇಶ. ಈ ಉದ್ದೇಶದೊಂದಿಗೇ ಸ್ವತಃ ಒಮರ್ ಕೂಡ ಈಗ ಬದಲಾಗಿದ್ದಾರೆ. ಅವರು ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪ್ರಮಾಣವಚನ ಸ್ವೀಕರಿಸಿದ ಜಮ್ಮು-ಕಾಶ್ಮೀರದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಸಂವಿಧಾನದ ೩೭೦ ನೇ ವಿಧಿ ಅಸ್ತಿತ್ವದಲ್ಲಿದ್ದಾಗ ಅಲ್ಲಿನ ಮುಖ್ಯಮಂತ್ರಿಗಳು ಅವರದೇ ಆದ ಸಂವಿಧಾನದ ಮೇಲೆ ಪ್ರಮಾಣ ಮಾಡುತ್ತಿದ್ದರು.
ಬಹುಶಃ ಅಧಿಕಾರದಿಂದ ದೂರವುಳಿಯಬೇಕಾಗಿ ಬಂದ ಈವರೆಗಿನ ನೋವಿನ ವರ್ಷಗಳಿಂದ ಒಮರ್ ಪಾಠ ಕಲಿತಿರಬಹುದು. ತಾವು ಮತ್ತು ತಮ್ಮ ನ್ಯಾಷನಲ್ ಕಾನರೆನ್ಸ್ ಪಕ್ಷವು ಹೊಸ ರಾಜಕೀಯ ವಾಸ್ತವದೊಂದಿಗೆ ಬದುಕುವುದು ಅನಿವಾರ್ಯ ಎಂಬುದು ಅವರಿಗೆ ಮನವರಿಕೆಯಾಗಿರಬಹುದು. ನಯಾ ಕಾಶ್ಮೀರದಲ್ಲಿ ನಿಜವಾದ ಜಾತ್ಯತೀತತೆ ಹಾಗೂ ಕಾಶ್ಮೀರಿಯತ್ತನ್ನು ಮರುಸ್ಥಾಪನೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಇನ್ನು, ಅಬ್ದುಲ್ಲಾಗಳು ಯಾವಾಗಲೂ ಕಾಶ್ಮೀರಕ್ಕೆ ಹೆಚ್ಚು ಸ್ವಾಯತ್ತತೆಯನ್ನು ಕೇಳುತ್ತಲೇ ಬಂದಿರುವುದು ಇತಿಹಾಸ
ದಲ್ಲಿದೆ. ಆದರೆ ಆ ದೋಣಿಯೀಗ ದಾಲ್ ಸರೋವರದಲ್ಲಿ ತೇಲಿ ಹೋಗಿದೆ. ಈ ಹಿಂದೆ ಅಬ್ದುಲ್ಲಾಗಳು ಒಂದು ರೀತಿಯಲ್ಲಿ ಕಣಿವೆ ನಾಡಿನ ಅಘೋಷಿತ ರಾಜರಂತೆ ಇದ್ದವರು. ಅವರು ಕಾಶ್ಮೀರದಲ್ಲಿ ಡೋಗ್ರಾ ರಾಜಮನೆತನದ ಕೈಯಲ್ಲಿದ್ದ ಅಧಿಕಾರ ವನ್ನು ಪ್ರಜಾಸತ್ತಾತ್ಮಕವಾಗಿ ಪಡೆದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿದ ಮೊದಲಿಗರು.
ಆದರೂ, ಜಮ್ಮುವಿನಲ್ಲಿ ಇವತ್ತಿಗೂ ಕೇಸರಿ ಸಿದ್ಧಾಂತವೇ ಮೇಲುಗೈ ಸಾಧಿಸುತ್ತಿದೆಯೇ ಹೊರತು ಅಬ್ದುಲ್ಲಾಗಳಲ್ಲ.
ಜಮ್ಮು-ಕಾಶ್ಮೀರದ ಅಭಿವೃದ್ಧಿ ಹಾಗೂ ಕಣಿವೆಯಲ್ಲಿ ರಾಜಕೀಯ ಶಾಂತಿ ಸ್ಥಾಪನೆಗಾಗಿ ಒಮರ್ ಮಾಡಬೇಕಿರು ವುದು ಸಾಕಷ್ಟಿದೆ. ಈ ಕಾರ್ಯಕ್ಕೆ ಅವರೇ ಹೆಗಲು ಕೊಟ್ಟು ಮುನ್ನಡೆಯಬೇಕಿದೆ. ಕಾಶ್ಮೀರದಲ್ಲಿ 1990ರ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರು ಹಾಗೂ ಸಶಸ ಪಡೆಗಳ ಯೋಧರು ಹತರಾಗಿದ್ದಾರೆ. ಆ ರಕ್ತಪಾತ ಮುಂದು ವರಿಯಬಾರದೆಂದೇ ೨೦೨೪ರಲ್ಲಿ ಅಭಿವೃದ್ಧಿ ಮತ್ತು ಆತ್ಮಗೌರವಕ್ಕಾಗಿ ಮತದಾರರು ಒಮರ್‌ಗೆ ಅಧಿಕಾರ ನೀಡಿದ್ದಾರೆ.
ಆಧುನಿಕ ವ್ಯಕ್ತಿಯಾಗಿದ್ದರೂ, ಎಲ್ಲರನ್ನೂ ಜತೆಗೆ ಕೊಂಡೊಯ್ಯುವ ಇಮೇಜ್ ಹೊಂದಿದ್ದರೂ ಒಮರ್ ಅವರ ಸಿಂಹಾಸನದಲ್ಲಿ ಕಿತ್ತೊಗೆಯಬೇಕಾದ ಮುಳ್ಳುಗಳು ಸಾಕಷ್ಟು ಅಂಟಿಕೊಂಡಿವೆ. ಅವು ಚುಚ್ಚದಂತೆ ನೋಡಿ ಕೊಳ್ಳುತ್ತಾ ಕಾಶ್ಮೀರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅವರು ವಾಸ್ತವವಾದಿ ದೃಷ್ಟಿಕೋನ ಬೆಳೆಸಿಕೊಂಡು, ಕಾರ್ಯಕ್ರಮ ಆಧರಿತ ಆಡಳಿತ ನೀಡಲು ಶ್ರಮಿಸುವ ಅಗತ್ಯವಿದೆ. ಇಂಥ ಆಡಳಿತ ಈವರೆಗೆ ಕಾಶ್ಮೀರದಲ್ಲಿ ‘ಐಸಿಯು’ನಲ್ಲಿತ್ತು.
ಅಭಿವೃದ್ಧಿ ಸಾಧ್ಯವಾಗಬೇಕು ಅಂದರೆ ಜಮ್ಮು-ಕಾಶ್ಮೀರಕ್ಕೆ ಬೇರೆಲ್ಲಕ್ಕಿಂತಲೂ ಹೆಚ್ಚಾಗಿ ರಾಜಕೀಯ ಹಾಗೂ ಆರ್ಥಿಕ ಸ್ಥಿರತೆ ಬೇಕು. ಬಹುಶಃ 1951ರ ಬಳಿಕ 11 ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ಹಾಗೂ ಕೇವಲ 8 ಮುಖ್ಯಮಂತ್ರಿ ಗಳನ್ನು ಕಂಡಿರುವ ಭಾರತದ ಏಕೈಕ ರಾಜ್ಯವಿದು. ಇಲ್ಲಿ ಅತ್ಯಂತ ದೀರ್ಘಾವಧಿಗೆ ಕೇಂದ್ರ ಸರಕಾರ ಅಧಿಕಾರ ಚಲಾಯಿಸಿದೆ. ಮೊದಲಿಗೆ 1990ರಿಂದ 1996ರವರೆಗೆ 6 ವರ್ಷ, ನಂತರ 2019ರಿಂದ 2024ರವರೆಗೆ 5 ವರ್ಷ ಕೇಂದ್ರಾಡಳಿತ ಪ್ರದೇಶದ ರೂಪದಲ್ಲಿ ಜಮ್ಮು-ಕಾಶ್ಮೀರದಲ್ಲಿ ಕೇಂದ್ರದ ಅಧಿಕಾರವಿತ್ತು.
ಒಮರ್ ಅವರ ತಾತ ಶೇಖ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿ ಅಜಮಾಸು 5 ವರ್ಷ ಅಧಿಕಾರ ನಡೆಸಿದ್ದರು. ನಂತರ ನೆಹರು ಆದೇಶದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಇಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಬಕ್ಷಿ ಗುಲಾಮ್ ಮೊಹಮ್ಮದ್ ಹಾಗೂ ಗುಲಾಮ್ ಮೊಹಮ್ಮದ್ ಸಾದಿಕ್ 6 ರಿಂದ 10 ವರ್ಷಗಳ ಕಾಲ ಆಳಿದ್ದರು. ಆದರೆ, ಮೂವರು ಅಬ್ದುಲ್ಲಾಗಳೇ ಕಣಿವೆ ರಾಜ್ಯವನ್ನು ಬೇರೆಲ್ಲರಿಗಿಂತ ಸುದೀರ್ಘ ಅವಧಿಗೆ, ಅಂದರೆ ಒಟ್ಟು 34 ವರ್ಷ ಆಳಿದ ದಾಖಲೆ ಹೊಂದಿದ್ದಾರೆ.
ಶೇಖ್ ಅಬ್ದುಲ್ಲಾ ಮೊದಲಿಗೆ ಕಾಶ್ಮೀರದ ಪ್ರಧಾನಿಯಾಗಿದ್ದರು. ನಂತರ 17 ವರ್ಷಗಳ ಕಾಲ 4 ವಿಭಿನ್ನ ಅವಧಿಯಲ್ಲಿ ಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಹೀಗಾಗಿ ಅಬ್ದುಲ್ಲಾಗಳ ಜೀನ್ಸ್‌ನಲ್ಲೇ ಅಧಿಕಾರದ ಕಲೆ ಅಡಗಿದೆ. ಅವರ ಕುಟುಂಬಕ್ಕೆ ಅಧಿಕಾರದ ಗ್ರಾಮರ್ -ಗ್ಲಾಮರ್ ಎರಡೂ ಗೊತ್ತು. ಒಮರ್ ತಮ್ಮ ಎರಡನೇ ಅವಧಿಯನ್ನು ಕೆಲ ಅನುಕೂಲಗಳನ್ನೂ, ಅದಕ್ಕಿಂತ ಕಡಿಮೆ ಅನನುಕೂಲಗಳನ್ನೂ ಜೋಳಿಗೆ ಯಲ್ಲಿರಿಸಿಕೊಂಡು ಆರಂಭಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಅವರ ಪಕ್ಷ ಹೆಚ್ಚುಕಮ್ಮಿ ತನ್ನದೇ ಆದ ಸ್ವಂತ ಬಹುಮತ ಹೊಂದಿದೆ. ಹೀಗಾಗಿ ಪ್ರತ್ಯೇಕತಾ ವಾದಿಗಳ ಒತ್ತಡವನ್ನು ಅವರು ಕಡೆಗಣಿಸಬಹುದು.
ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುತ್ತಿದ್ದ ಬಹುತೇಕ ಎಲ್ಲಾ ಸಣ್ಣಪುಟ್ಟ ಪಕ್ಷಗಳೂ ಈ ಬಾರಿ ಸೋತಿವೆ. ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸೋತು ಸುಣ್ಣವಾಗಿದೆ. ಅದಕ್ಕೀಗ ಕಣಿವೆಯಲ್ಲಿ ಪ್ರತಿನಿಧಿಯೇ ಇಲ್ಲ. ಕಾಶ್ಮೀರದಲ್ಲಿ ಅಬ್ದುಲ್ಲಾಗಳೇ ನಾಲ್ಕನೇ ಮೂರರಷ್ಟು ಸೀಟುಗಳನ್ನು ಗೆದ್ದಿದ್ದಾರೆ, ಜಮ್ಮುವಿನಲ್ಲೂ ಅರ್ಧ ಡಜನ್ ಸೀಟು ಗಳಿಸಿದ್ದಾರೆ. ಅಲ್ಲೇ ಅಡಗಿರುವುದು ಸಂಘರ್ಷ.
ಜಮ್ಮು ಪ್ರದೇಶವನ್ನು ಒಮರ್ ಅವರ ಕಟ್ಟರ್ ವಿರೋಧಿ ಬಿಜೆಪಿ ಹೆಚ್ಚುಕಮ್ಮಿ ಸ್ವೀಪ್ ಮಾಡಿದೆ. ಅಲ್ಲಿ ಬಿಜೆಪಿ ೨೯ ಸೀಟುಗಳನ್ನು ಗೆದ್ದಿದೆ. ಹಾಗೆಯೇ ಅಲ್ಲಿ ಶೇ.25.69ರಷ್ಟು ಮತಗಳನ್ನೂ ಬಿಜೆಪಿ ಗಳಿಸುವ ಮೂಲಕ ಅತಿಹೆಚ್ಚು ಮತ ಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಎನ್‌ಸಿ ಗಳಿಸಿರುವುದು ಶೇ.23.47 ಮತಗಳನ್ನು. ಹಲವು ದಶಕಗಳ ಕಾಲ ಅಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು ಗೆಲ್ಲುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಕೇವಲ ಆರು ಸೀಟು ಗೆಲ್ಲುವ ಮೂಲಕ ಶೇ.12ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಒಮರ್ ತಮ್ಮ ಎರಡನೇ ಅವಧಿಯನ್ನು ಸರಿಯಾದ ಗದ್ದಲ ದೊಂದಿಗೆ ಹಾಗೂ ಸರಿಯಾದ ಧ್ವನಿಯನ್ನೇ ಎತ್ತುವುದರೊಂದಿಗೆ ಆರಂಭಿಸಿದ್ದಾರೆ. ತಾತ ಹಾಗೂ ತಂದೆಯ ಹೆಜ್ಜೆಯನ್ನೇ ಅನುಸರಿಸುತ್ತಾ ಜಮ್ಮು ಪ್ರದೇಶದಿಂದ ಬುಡಕಟ್ಟು ಹಿಂದೂ ಸಮುದಾಯದ ವ್ಯಕ್ತಿಯನ್ನು ಉಪಮುಖ್ಯಮಂತ್ರಿ ಮಾಡುವ ಮೂಲಕ ಆ ಪ್ರದೇಶಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿದ್ದಾರೆ. ಶೇಖ್ ಅಬ್ದುಲ್ಲಾರ ಸಚಿವ ಸಂಪುಟ ಮೂರನೇ ಒಂದರಷ್ಟು ಕಾಶ್ಮೀರಿ ಪಂಡಿತರು ಹಾಗೂ ಇತರ ಹಿಂದೂಗಳನ್ನು ಹೊಂದಿತ್ತು. ಹೀಗಾಗಿ ಜಮ್ಮು ಪ್ರದೇಶದಲ್ಲೂ ಎನ್‌ಸಿ ಗಣನೀಯ ಸ್ಥಾನಗಳನ್ನು ಗಳಿಸುತ್ತಿತ್ತು.
ಈ ಬಾರಿ ರಾಜ್ಯದ ಭೌಗೋಳಿಕ ಹಾಗೂ ಆಡಳಿತಾತ್ಮಕ ವಿನ್ಯಾಸವನ್ನು ಬದಲಾಯಿಸುವ ಕೇಂದ್ರ ಸರಕಾರದ ಪ್ರಯತ್ನಕ್ಕೆ ಜಮ್ಮು ಜನರು ಮತ ಹಾಕಿದ್ದಾರೆ. ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸುವ ವಾಗ್ದಾನ ನೀಡಿದ್ದರೂ, ಸಂವಿಧಾನದ ೩೭೦ನೇ ವಿಧಿ ಮತ್ತೆ ಜಾರಿಗೆ ಬರುವ ಯಾವುದೇ ಸಾಧ್ಯತೆ ಗಳಿಲ್ಲ ಎಂಬುದು ಅಬ್ದುಲ್ಲಾಗಳಿಗೆ ಮನವರಿಕೆಯಾಗಿದೆ.
ಮುಖ್ಯಮಂತ್ರಿಯಾದ ಬಳಿಕ ನೀಡಿದ ಸಂದರ್ಶನದಲ್ಲೇ ಒಮರ್ ಇದನ್ನು ಹೇಳಿದ್ದಾರೆ. “370ನೇ ವಿಧಿ ಮರೆತುಬಿಡಿ.
ಬೇರೆ ರಾಜ್ಯಗಳಿಗೆ ಇರುವಂತೆ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯದ ಸ್ಥಾನಮಾನ ಪಡೆಯಲು ಪ್ರಯತ್ನ ಮಾಡೋಣ. ಈಗಿನ ಮೋದಿ ಸರಕಾರ 370ನೇ ವಿಧಿಯಡಿ ಮತ್ತೆ ವಿಶೇಷ ಸ್ಥಾನಮಾನ ನೀಡುತ್ತದೆ ಎಂದು ನಂಬಲು ನಾವ್ಯಾರೂ ಮೂರ್ಖರಲ್ಲ. ಹಾಗೆಯೇ 370ನೇ ವಿಧಿ ನಮ್ಮ ಅಜೆಂಡಾದಲ್ಲಿದೆ ಎಂದು ನಾವು ಮತದಾರರಿಗೆ ಹೇಳಿಯೂ ಇಲ್ಲ. ಯಾವ ಸರಕಾರ ಇದನ್ನು ಕಿತ್ತುಕೊಂಡಿದೆಯೋ ಆ ಸರಕಾರವೇ ಅದನ್ನು ಖಂಡಿತ ಮರಳಿ ಕೊಡುವುದಿಲ್ಲ. ಹೀಗಾಗಿ ವಿಶೇಷ ಸ್ಥಾನಮಾನದ ಯೋಚನೆಯನ್ನು ಸದ್ಯಕ್ಕೆ ಪಕ್ಕಕ್ಕಿಡೋಣ” ಎಂದು
ಒಮರ್ ಹೇಳಿದ್ದಾರೆ.
ಹೀಗಾಗಿ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮತ್ತು ಅಧಿಕಾರವನ್ನು ಮರಳಿಸುವ ಮೂಲಕ ಹೃದಯ ವೈಶಾಲ್ಯ ತೋರಬೇಕಾದ ಹೊಣೆಯೀಗ ಮೋದಿ ಮೇಲಿದೆ. 2019ರಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆಡಳಿತಾತ್ಮಕ ಆದೇಶಗಳ ಮೂಲಕ ಕೇಂದ್ರ ಸರಕಾರ ಹಿಂಪಡೆದಿತ್ತು. ಹಿಂಸೆಯಿಂದ ನಲುಗಿರುವ ರಾಜ್ಯಕ್ಕೆ ಉತ್ತಮ ನಾಯಕತ್ವ ನೀಡುವುದು ಒಮರ್ ಮನಸ್ಸಿನಲ್ಲಿರುವ ಮೊದಲ ಯೋಚನೆ ಯಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಮೋದಿ ಸರಕಾರದ ಜತೆಗೆ ಸಂಘರ್ಷಕ್ಕಿಳಿದರೆ ಅದು ಸಾಧ್ಯವಿಲ್ಲ. ಕಾಶ್ಮೀರದ ರಾಜಕಾರಣದ ಸಂಕೀರ್ಣ ವ್ಯವಸ್ಥೆಯಲ್ಲಿದ್ದುಕೊಂಡೇ ಅವರೀಗ ಕೇಂದ್ರದ ಬಳಿ ತಮ್ಮ ನಾಡಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ಹಾಗೂ ದೇಶದ ಬೇರೆ ರಾಜ್ಯಗಳಿಗೆ ಇರುವ ಶಾಸನಾತ್ಮಕ ಅಧಿಕಾರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕಿದೆ.
ಮೋದಿ ಜತೆಗೆ ನೇರವಾಗಿ ಘರ್ಷಣೆಗಿಳಿದ ದೆಹಲಿಯ ಅರವಿಂದ ಕೇಜ್ರಿವಾಲ್ ಸ್ಥಿತಿ ಏನಾಯಿತು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂಬ ಸಲಹೆಯೂ ಅವರಿಗೆ ಈಗಾಗಲೇ ಲಭಿಸಿದೆ. ತಾತ್ವಿಕ ಸಂಘರ್ಷಗಳು ಉತ್ತಮ ಆಡಳಿತದ ಭವಿಷ್ಯವನ್ನು ನಿರ್ಧರಿಸುವಂತಾಗಬಾರದು. ಅದಕ್ಕಿಂತ ಹೆಚ್ಚಾಗಿ, ವಿರೋಧ ಪಕ್ಷಗಳಲ್ಲಿರುವ ಅನೇಕ ಮುಖ್ಯಮಂತ್ರಿಗಳು ಹಾಗೂ ನಾಯಕರು ವಿಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿರುವಂತೆ ಒಮರ್‌ಗೆ ಭ್ರಮಾತ್ಮಕ ಮಹತ್ವಾಕಾಂಕ್ಷೆಗಳೇನೂ ಇಲ್ಲ.
ಕೇಂದ್ರದ ಅಧಿಕಾರವಿದ್ದಾಗ ಜಮ್ಮು-ಕಾಶ್ಮೀರಕ್ಕೆ ಆದ ಅನುಕೂಲದ ಫಲ ಪಡೆಯಲು ಇನ್ನಷ್ಟು ಶ್ರಮ ಹಾಕಿ ಕೆಲಸ ಮಾಡಿದರೆ ಅವರು ಜಾಣತನ ತೋರಿದಂತಾಗುತ್ತದೆ. ಐದಾರು ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿರುವುದರಿಂದ ಕಣಿವೆಗೆ ಹೆಚ್ಚು ಪ್ರವಾಸಿಗರು ಬರತೊಡಗಿದ್ದಾರೆ. ಜಮ್ಮು-ಕಾಶ್ಮೀರದ ಅನೇಕ ಮೂಲಸೌಕರ್ಯ ಸಂಬಂಧಿ ಯೋಜನೆಗಳಿಗೆ ಕೇಂದ್ರವು ಕೈಬಿಚ್ಚಿ ಅನುದಾನ ಬಿಡುಗಡೆ ಮಾಡಿದೆ. ಪ್ರಸ್ತುತ ೨೮ ಬಿಲಿಯನ್ ಡಾಲರ್ ಎಸ್‌ಡಿಜಿಪಿಯೊಂದಿಗೆ ಜಮ್ಮು-ಕಾಶ್ಮೀರವು ದೇಶದಲ್ಲಿ ೨೧ನೇ ಸ್ಥಾನದಲ್ಲಿದೆ.
ಕೇಂದ್ರದಿಂದ ಇನ್ನಷ್ಟು ಅನುದಾನ ತರುವುದು, ಬಂಡವಾಳ ಹೂಡಿಕೆಯಾಗುವಂತೆ ನೋಡಿಕೊಳ್ಳುವುದು, ಕರಕುಶಲ ಕೈಗಾರಿಕೆ ಹಾಗೂ ಪ್ರವಾಸೋದ್ಯಮವನ್ನು ಬೆಳೆಸುವುದು ಮತ್ತು ಧರ್ಮಗಳ ನಡುವೆ ಸೌಹಾರ್ದತೆ
ಬೆಳೆಸುವುದು ಒಮರ್ ಅವರ ಆದ್ಯತೆಯಾಗಬೇಕು. ಕಾಶ್ಮೀರಿ ಪಂಡಿತರು ಮರಳಿ ಕಣಿವೆಗೆ ಬರುವಂತೆ ಮಾಡುತ್ತೇ ನೆಂದು ಅವರು ಭರವಸೆ ನೀಡಿದ್ದಾರೆ. ವಯಸ್ಸು ಒಮರ್ ಪರವಾಗಿದೆ. ಹಿಂದೆ ಕಾಶ್ಮೀರವನ್ನು ಭಾರತದ ಸ್ವಿಜರ್‌ಲೆಂಡ್ ಎನ್ನಲಾಗು ತ್ತಿತ್ತು. ಆ ವೈಭವವನ್ನು ಅವರು ಮರುಸ್ಥಾಪಿಸಬೇಕಿದೆ.
1982 ರಲ್ಲಿ ಶೇಖ್ ಅಬ್ದುಲ್ಲಾರು “ನಾವು ಕೇವಲ ಕಾಶ್ಮೀರದ 80 ಲಕ್ಷ ಮುಸ್ಲಿಮರಿಗಾಗಿ ಜವಾಬ್ದಾರಿಯುತ ಸರಕಾರ ವನ್ನು ಕೇಳುತ್ತಿಲ್ಲ, ಬದಲಿಗೆ ರಾಜ್ಯದ ಶೇ.100ರಷ್ಟು ಪ್ರಜೆಗಳಿಗಾಗಿ ಕೇಳುತ್ತಿದ್ದೇವೆ” ಎಂದಿದ್ದರು. ಆದರೆ ಕ್ರಮೇಣ ಅವರ ಗುರಿಯಿಂದ ಶೇರ್ -ಎ-ಕಾಶ್ಮೀರ್ ಕಣ್ಮರೆಯಾಗಿತ್ತು. ಅವರ ಮೊಮ್ಮಗ ಈಗ ಒಳ್ಳೆಯ ದಾರಿಯಲ್ಲಿ ಹೋದರೆ ಜಮ್ಮು-ಕಾಶ್ಮೀರಕ್ಕೆ ಸುವರ್ಣ ಯುಗದ ಬಾಗಿಲು ತೆರೆಯಲು ಸಾಧ್ಯವಿದೆ. ಹೇಗೆ ಕಾಶ್ಮೀರಿಗಳಿಗೆ ಇಡೀ ಭಾರತ ಸೇರಿದೆಯೋ ಹಾಗೆಯೇ ಎಲ್ಲಾ ಭಾರತೀಯರಿಗೂ ಕಾಶ್ಮೀರ ಸೇರಿದ್ದಾಗಿದೆ. “ಗರ್ ಫಿರ್ದೌಸ್ ಬರ್-ರೂ
ಜಮೀನ್ ಅಸ್ತ್, ಹಮೀ ಅಸ್ತೋ, ಹಮೀ ಅಸ್ತ್” (ಭೂಮಿಯ ಮೇಲೆ ಸ್ವರ್ಗ ಇರುವುದೇ ನಿಜವಾಗಿದ್ದರೆ ಅದು ಇಲ್ಲಿದೆ ಅದು ಇಲ್ಲಿದೆ ಅದು ಇಲ್ಲಿದೆ) ಎಂದು ಹೇಳಿದ್ದು ಜಹಾಂಗೀರನೋ ಅಥವಾ ಅಮೀರ್ ಖುಸ್ರೋನೋ ಎಂಬುದು ಮುಖ್ಯವಲ್ಲ.
ಅಸಂಖ್ಯ ಮುಗ್ಧ ಜನರ ರಕ್ತದಿಂದ ತೋಯ್ದಿರುವ ನೆಲದಲ್ಲಿ ಪ್ರಜಾಸತ್ತಾತ್ಮಕವಾಗಿ ಸ್ವರ್ಗವೊಂದನ್ನು ಮರುಸೃಷ್ಟಿ ಮಾಡಲು ಒಮರ್ ಕೈಯಲ್ಲಿ ಸಾಧ್ಯವಿದೆಯೇ ಎಂಬುದಷ್ಟೇ ಮುಖ್ಯ.
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ: Prabhu Chawla Column: ಬಿಜೆಪಿಯಲ್ಲೀಗ ಹೊಸ ಅಧ್ಯಕ್ಷನ ಹುಡುಕಾಟದ ಭರಾಟೆ