Thursday, 28th November 2024

Prasad G M Column: ಸಂವಿಧಾನವನ್ನು ಅರಿಯೋಣ

ತನ್ನಿಮಿತ್ತ

ಪ್ರಸಾದ್‌ ಜಿ.ಎಂ.

ಭಾರತದ ನಾಗರಿಕರಿಗೆ ಸಂವಿಧಾನವು ಅರ್ಪಣೆಗೊಂಡು ನವೆಂಬರ್ 26ಕ್ಕೆ 75 ವರ್ಷಗಳಾದವು. ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅಸಂಖ್ಯ ಮಹನೀಯರು ಮಾಡಿರುವ ತ್ಯಾಗ-ಬಲಿದಾನಗಳನ್ನು ನಾವೆಂದಿಗೂ ಮರೆಯಬಾರದು.

‘ಭಾರತ ಸ್ವಾತಂತ್ರ್ಯ ಕಾಯ್ದೆ 1947’ ಅನ್ನು ಬ್ರಿಟಿಷ್ ಸಂಸತ್ತಿನಲ್ಲಿ 4 ಜೂನ್ 1947ರಂದು ಮಂಡಿಸಿ, ಜುಲೈ 18ರಂದು ಒಪ್ಪಿಗೆ ಪಡೆಯಲಾ ಯಿತು. ಈ ಕಾಯ್ದೆಯು ಆಗಸ್ಟ್ 15ರಂದು ಜಾರಿಯಾಗಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತೆಂಬುದನ್ನು ನಾವೆಲ್ಲರೂ ತಿಳಿಯಬೇಕು. ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶ ಮುಂದೆ ಸಾಗಲು ‘ಆಳುಗ ವ್ಯವಸ್ಥೆ’ಯೊಂದರ ಅಗತ್ಯವಿತ್ತು. ನಾವು ಅಪ್ಪಿಕೊಂಡ ಆ ವ್ಯವಸ್ಥೆಯೇ ‘ಪ್ರಜಾಪ್ರಭುತ್ವ’. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಹೇಳಿದ ಹಾಗೆ, ಪ್ರಜಾಪ್ರಭುತ್ವ ಎಂದರೆ ‘ಪ್ರಜೆ ಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಡಳಿತ ನಡೆಸುವ’ ಒಂದು ವಿಶಿಷ್ಟ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಂವಿಧಾನವೇ
ಸಾರ್ವಭೌಮ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಸಾಗಬೇಕೆಂಬುದನ್ನು ಸಂವಿಧಾನವು ಸ್ಪಷ್ಟವಾಗಿ ಹೇಳಿದೆ. ಸಂವಿಧಾನವು ನಮ್ಮ ದೇಶದ ಆತ್ಮವಿದ್ದ ಹಾಗೆ. ಆದರೆ, ಇತಿಹಾಸದ ಪುಟಗಳಲ್ಲಿ ನಾವು ನೋಡಿರುವಂತೆ, ಭೌಗೋಳಿಕವಾಗಿ ಬಹಳ ವಿಸ್ತಾರವಾಗಿದ್ದ ನಮ್ಮ
ದೇಶಕ್ಕೆ ಸಂವಿಧಾನವನ್ನು ರಚಿಸುವುದು ಸುಲಭದ ಮಾತಾಗಿರಲಿಲ್ಲ.

ಈ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದು ‘ಸಂವಿಧಾನಶಿಲ್ಪಿ’ ಎಂದೇ ಹೆಸರಾದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿ. ಅಂಬೇಡ್ಕರ್ ಸೇರಿದಂತೆ ಈ ಸಮಿತಿಯಲ್ಲಿ ಏಳು ಮಂದಿ ಇದ್ದರು. ಈ ಸಮಿತಿಯು ಸಂವಿಧಾನದ ಮೊದಲ
ಕರಡನ್ನು 1948ರ ಫೆಬ್ರವರಿಯಲ್ಲಿ ಪ್ರಕಟಿಸಿತು. ಇದರ ರಚನೆಗೆ ಒಟ್ಟಾರೆಯಾಗಿ ತೆಗೆದುಕೊಂಡ ಅವಧಿ ಬಹಳ ಸುದೀರ್ಘವಾಯಿತು ಎಂದು ಕೆಲ ಸಂವಿಧಾನ ತಜ್ಞರು ಟೀಕಿಸಿದ್ದೂ ಇದೆ.

ಅಂಬೇಡ್ಕರ್ ಅವರು 1948ರ ನವೆಂಬರ್ 4ರಂದು ಅಂತಿಮ ಕರಡನ್ನು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಇದಾದ ನಂತರ
ಜರುಗಿದ ಹಲವು ಸಭೆಗಳಲ್ಲಿ ಅದಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲಾಯಿತು. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿ ಮಾರ್ಪಾಡುಗಳಾದ ನಂತರ 1949ರ ನವೆಂಬರ್ 14ರಂದು ಪೂರ್ವಪೀಠಿಕೆ, 395 ವಿಧಿಗಳು, 8 ಅನುಸೂಚಿಗಳನ್ನು ಒಳಗೊಂಡ ಸಂವಿ ಧಾನವನ್ನು ಅಂತಿಮವಾಗಿ ಸಿದ್ಧಪಡಿಸಲಾಯಿತು ಹಾಗೂ ನವೆಂಬರ್ 26 ರಂದು ಭಾರತೀಯರಿಗೆ ಅರ್ಪಿಸಲಾಯಿತು. ನಂತರ 1950ರ ಜನವರಿ 26 ರಂದು ಸಂವಿಧಾನವು ಜಾರಿ ಯಾಯಿತು.

ಭಾರತದ ಸಂವಿಧಾನವು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಬಹುಮುಖ್ಯವಾಗಿ, 1935ರ ಭಾರತ ಸರಕಾರ ಕಾಯ್ದೆ’ಯು ಬ್ರಿಟನ್, ಅಮೆರಿಕ, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ರಷ್ಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಜಪಾನ್ ಸೇರಿದಂತೆ ವಿಶ್ವದ ಇನ್ನಿತರ ದೇಶಗಳ ಸಂವಿಧಾನ ಗಳಿಂದ ಸಾಕಷ್ಟು ಪ್ರಮುಖಾಂಶಗಳನ್ನು ಎರವಲು ಪಡೆದಿದೆ. ಹೀಗೆ ಎರವಲು ಪಡೆವ ವಿಚಾರವಾಗಿ ಸಂವಿಧಾನ ತಜ್ಞರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಆರಂಭದಲ್ಲಿ ಬರುವ ಪೂರ್ವ ಪೀಠಿಕೆಯು ಬಹುಮುಖ್ಯವಾಗಿದ್ದು, ಸಂವಿಧಾನದ ಆದರ್ಶಗಳು, ಉದ್ದೇಶಗಳು ಮತ್ತು
ಮೂಲತತ್ತ್ವ ಗಳನ್ನು ಇದು ಒಳಗೊಂಡಿದೆ. ವಿಸ್ತೃತವಾಗಿ ರುವ ಸಂವಿಧಾನದ ಮಿಕ್ಕೆಲ್ಲ ಅಂಶಗಳಿಗಿಂತಲೂ ಪ್ರಜ್ಞೆಗಳಾದ ನಮಗೆ ‘ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು’ ಬಹಳ ಮುಖ್ಯ. ಕಾರಣ ಇವು ಶ್ರೀಸಾಮಾನ್ಯರ ಮೇಲೆ ಪರಿಣಾಮವನ್ನು ಬೀರು ತ್ತವೆ. ಇಂದು ಹಲವು ಸಂದರ್ಭಗಳಲ್ಲಿ ‘ಹಕ್ಕು’ಗಳ ಬಗ್ಗೆಯಷ್ಟೇ ಸಾಕಷ್ಟು ಮಾತಾಡುವ ಜನರು, ‘ಮೂಲಭೂತ ಕರ್ತವ್ಯ’ಗಳನ್ನು ಮರೆಯುವುದಿದೆ. ಹೀಗಾಗಬಾರದು,
ಕರ್ತವ್ಯಗಳನ್ನೂ ಚಾಚೂತಪ್ಪದೆ ಪಾಲಿಸಬೇಕು.

ಕಳೆದ ಸೆಪ್ಟೆಂಬರ್ 15ರಂದು, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಕರ್ನಾಟಕ ಸರಕಾರವು ‘ಸಂವಿಧಾನ ಪೀಠಿಕೆ ಓದುವಿಕೆ’ಯ ವಿಶೇಷ ಅಭಿಯಾನವನ್ನು ಆಯೋಜಿಸಿತ್ತು. ವಿದ್ಯಾ ರ್ಥಿಗಳು, ಸರಕಾರಿ ನೌಕರರು ಸೇರಿದಂತೆ ಗಣನೀಯ ಸಂಖ್ಯೆಯ ಜನರು ಭಾಗಿಯಾಗಿದ್ದ ಈ ಅಭಿಯಾನವು ದಾಖಲೆ ಸೃಷ್ಟಿಸಿತು. ಇಂಥ ಅಭಿಯಾನಗಳು ನಿಯತ ವಾಗಿ ನಡೆಯಬೇಕಾದ್ದು ರಾಷ್ಟ್ರೀಯ ಅಗತ್ಯ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿದಲ್ಲಿ, ಅವರು ಮುಂದೆ ಉತ್ತಮ ನಾಗರಿಕ ರಾಗುತ್ತಾರೆ ಹಾಗೂ ಸಂವಿಧಾನದ ಮೌಲ್ಯಗಳು ಮುಂದಿನ ತಲೆಮಾರಿಗೂ ಮುಂದುವರಿಯುತ್ತವೆ.

ಸಂವಿಧಾನ ಜಾರಿಯಾಗಿ ಇಷ್ಟೊಂದು ವರ್ಷಗಳಾಗಿರುವ ಈ ಸಂದರ್ಭದಲ್ಲಿ, ಅದರಲ್ಲಿ ಅಡಕವಾಗಿ ರುವ ಆಶಯಗಳು ನಿಜಾರ್ಥದಲ್ಲಿ ನೆರವೇರಿವೆಯೇ ಎಂಬು ದನ್ನು ಭಾರತೀಯರಾದ ನಾವು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ
ಭಾರತದ ಸಂವಿಧಾನವು ದಿಕ್ಸೂಚಿ ಇದ್ದ ಹಾಗೆ. ಆದರೆ ಇಂದು ಹಲವಾರು ಕಾರಣಗಳಿಂದ ನಾವು ಸಂವಿಧಾನದ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ, ಸವಿಸ್ತಾರವಾಗಿ ಹೇಳಿದ್ದರೂ ಅರಿವಿನ ಕೊರತೆಯಿಂದಾಗಿ ಜನರು ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಮಹಿಳೆಯರು ಮತ್ತು ದಲಿತರ ವಿರುದ್ಧ ಶೋಷಣೆ ನಡೆಯುತ್ತಲೇ ಇದೆ, ಧಾರ್ಮಿಕ ಸ್ವಾತಂತ್ರ್ಯ ಇಂದಿಗೂ ಹೆಚ್ಚು ಚರ್ಚಿತ ವಿಷಯವಾಗಿದೆ. ಮತ್ತೊಂದೆಡೆ ಜನಪ್ರತಿನಿಧಿಗಳೂ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿದ್ದಾರೆ. ಈ ಎಲ್ಲ ಅಪಸವ್ಯಗಳ ನಿವಾರಣೆಯಾಗಿ ಉತ್ತಮ
ಸಮಾಜದ ನಿರ್ಮಾಣವಾದಾಗಲೇ ನಾವೊಂದು ಉತ್ತಮ ಸಂವಿಧಾನವನ್ನು ಹೊಂದಿದ್ದಕ್ಕೂ ಸಾರ್ಥಕವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)