Sunday, 22nd December 2024

ಶಿಕ್ಷಣ, ಆರೋಗ್ಯ, ವಸತಿಗೆ ಪ್ರಾಶಸ್ತ್ಯ ನೀಡಲಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

adarsh.shetty207@gmail.com

ಸಮಾಜವು ಇಂದು ವಿವಿಧ ಜಾತಿ ವರ್ಗ ವರ್ಣದಿಂದ ಒಡೆದು ಹಂಚಿಹೋಗಿದೆ. ಒಬ್ಬ ಪ್ರಜೆ ಇಂದು ಆರೋಗ್ಯ ಶಿಕ್ಷಣ, ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ವ್ಯವಸ್ಥೆಗಳನ್ನು ಚುನಾಯಿತ ಜನಪ್ರತಿನಿಧಿಗಳಿಂದ ಅಥವಾ ಸರಕಾರದಿಂದ ಸಹಜವಾಗಿ ಅಪೇಕ್ಷೆ ಪಡುತ್ತಾನೆ.

ದೂರದ ಬೆಟ್ಟ ನುಣ್ಣಗೆ ಅಂದಹಾಗೆ ನಾವು ಕಂಡಂತೆ ಇಂದು ಮನುಷ್ಯನ ಬದುಕಿಲ್ಲ. ಇಂದು ಆರೋಗ್ಯ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುವ ಅದೆಷ್ಟೋ ಕುಟುಂಬಗಳಿವೆ. ಮಧ್ಯಮ ವರ್ಗದ ಕುಟುಂಬ ಗಳು ತಮ್ಮ ಮಕ್ಕಳ, ಮಡದಿಯ, ಗಂಡನ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಸಮಾಜದ ಮುಂದೆ ಹಸ್ತ ಚಾಚುವ ನೂರಾರು ನಿದರ್ಶನಗಳನ್ನು ದಿನನಿತ್ಯದ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಕಾಣುತ್ತೇವೆ. ಒಂದಷ್ಟು ಸಮಾಜಮುಖಿ ಸಂಸ್ಥೆಗಳು ಸ್ಪಂದಿಸುವ ಕಾರ್ಯಗಳೂ ನಡೆಯುತ್ತವೆ.

ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆಗಳು ಕೂಡ ಕೆಲವು ಸಮಸ್ಯೆಗಳಿಗೆ ಪೂರಕವಾಗಿ ಇತ್ತೀಚೆಗೆ ಉಪಯೋಗಕ್ಕೆ ಬರುತ್ತಿದೆ. ಆದರೆ ಬಹುದೊಡ್ಡ ಮೊತ್ತದ ಆಸ್ಪತ್ರೆಯ ವೆಚ್ಚಗಳಿಗೆ ರಾಜ್ಯ ಸರಕಾರವು ಬಿಪಿಎಲ್ ಕಾರ್ಡ್‌ದಾರರಿಗೆ ೫ ಲಕ್ಷದವರೆಗಿನ ಚಿಕಿತ್ಸಾ ವೆಚ್ಚಕ್ಕೆ ಯೋಜನೆಗಳನ್ನು ಜಾರಿಗೊಳಿಸಬೇಕಾದ ಅಗತ್ಯತೆ ಗಳಿದೆ. ಇನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಒಬ್ಬ ಬಡ ವಿದ್ಯಾರ್ಥಿಯೂ ಆರ್ಥಿಕ ತೊಂದರೆಗಳಿಂದ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತನಾಗಬಾರದು.

ಜತೆಗೆ ಒಬ್ಬ ವ್ಯಕ್ತಿಗೆ ಸಮರ್ಪಕ ಸೂರಿನ ವ್ಯವಸ್ಥೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಬಸವ ವಸತಿ ಯೋಜನೆಯಲ್ಲಿ ಪ್ರಸ್ತುತ ದೊರಕುವ ಒಂದುವರೆ ಲಕ್ಷದ ಬದಲಾಗಿ ಕನಿಷ್ಠ ಮೂರು ಲಕ್ಷದವರೆಗೆ ಸಹಾಯಧನ ದೊರಕಿದ್ದೆ ಆದಲ್ಲಿ ಆತ ತಕ್ಕಮಟ್ಟಿಗೆ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಿಸಲು ಸಹಕಾರವಾಗಬಹುದು.

ಇನ್ನು ಕುಡಿಯುವ ನೀರು, ರಸ್ತೆ, ಸೇತುವೆ, ವಿದ್ಯುತ್, ಫೋನ್ ಸಂಪರ್ಕ ಗಳ ಕೊರತೆಯಿರುವ ನೂರಾರು ಹಳ್ಳಿಗಳನ್ನು ಇಂದಿಗೂ ಕಾಣಬಹುದು. ನಮ್ಮ ದೇಶವು ಹಳ್ಳಿಗಳಿಂದ ಕೂಡಿದೆ. ಹಳ್ಳಿಗಳು ಉದ್ಧಾರವಾದಾಗ, ಹಳ್ಳಿಗಳಿಗೆ ಮೂಲ ಭೂತ ಸೌಕರ್ಯಗಳು ಒದಗಿದಾಗ ದೇಶವು ರಾಮರಾಜ್ಯವಾದಂತೆಯೇ ಸರಿ.

ಮಳೆಗಾಲದಲ್ಲಿ ಹೊಳೆದಾಟಿ ಅಪಾಯದ ಸ್ಥಿತಿಯಲ್ಲಿ ಶಾಲೆಗೆ ತೆರಳುವ ಪುಟ್ಟಮಕ್ಕಳು ಒಂದೆಡೆಯಾದರೆ, ಅನಾರೋಗ್ಯ ಪೀಡಿತರಾದಾಗ ಕಿಲೋಮೀಟರ್‌ಗಟ್ಟಲೆ
ರೋಗಿಗಳನ್ನು ಹೊತ್ತುಕೊಂಡು ಹೋಗುವ, ವಿದ್ಯುತ್ ಬೆಳಕಿಲ್ಲದೆ ಕತ್ತಲೆಯಲ್ಲಿ ಶಿಕ್ಷಣ ಪಡೆಯುವ ನತದೃಷ್ಟ ವಿದ್ಯಾರ್ಥಿಗಳು, ಇವೆಲ್ಲವೂ ನಮ್ಮ ಗ್ರಾಮಗಳ ಯಶೋಗಾಥೆಯನ್ನು ಎತ್ತಿ ತೋರಿಸಿದಂತೆಯೇ ಸರಿ.

ಸರಕಾರಗಳು ಪ್ರತಿ ವರ್ಷವೂ ಮುಂಗಡ ಪತ್ರಗಳನ್ನು ಮಂಡಿಸುವ ಸಂದರ್ಭದಲ್ಲಿ ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ, ರಸ್ತೆ, ಸೇತುವೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ, ಆರೋಗ್ಯ, ಶಿಕ್ಷಣ  ಮತ್ತು ವಸತಿಗೆ ಮೊತ್ತಮೊದಲ ಪ್ರಾಶಸ್ತ್ಯ ನೀಡಿದಾಗ ಬಡತನ ತೊಲಗುವುದಲ್ಲದೆ, ಸಮಾಜದ ಅಸ್ವಸ್ಥತೆಗೂ ಕಡಿವಾಣ ಬಿದ್ದಂತೆಯೇ ಸರಿ. ಇಲ್ಲಿ ಪ್ರಮುಖವಾಗಿ ಸರಕಾರ ಇವಕ್ಕೆ ಪ್ರಾಶಸ್ತ್ಯ ನೀಡಿದರೂ ತಳಮಟ್ಟಕ್ಕೆ ತಲುಪುವ ಹೊತ್ತಿಗೆ ಮಧ್ಯವರ್ತಿಗಳಿಗೆ, ಅಧಿಕಾರಿಗಳಿಗೆ, ಗುತ್ತಿಗೆದಾರರ ಜೇಬಿಗಿಳಿದು ಭ್ರಷ್ಟಾಚಾರವು ನುಸುಳಿ -ಲಾನುಭವಿಗಳಿಗೆ ತಲುಪುವ ಹೊತ್ತಿಗೆ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆ ಸರಕಾರದ ಅನುದಾನಗಳು