Friday, 20th September 2024

ಗರ್ಭಸ್ಥ ಶಿಶುವಿನಲ್ಲಿ ವಿಷಕಣಗಳು !

ವೈದ್ಯ ವೈವಿಧ್ಯ

drhsmohan@gmail.com

ವಾತಾವರಣದ ಮಲಿನತೆಗೆ ಒಡ್ಡಿಕೊಂಡವರಲ್ಲಿ ಮುಖ್ಯವಾಗಿ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಆರೋಗ್ಯಪೂರ್ಣ ಹವೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ನಾವು ವಾತಾವರಣದ ಮಲಿನತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

ಶಿಶುವು ತಾಯಿಯ ಗರ್ಭದಲ್ಲಿರುವಾಗ ಹಲವು ರೋಗಗಳು ಬರುವುದು ಈಗಾಗಲೇ ಗೊತ್ತಿರುವ ವಿಚಾರ. ಹಾಗೆಯೇ ಕಲುಷಿತ ವಾತಾವರಣದಿಂದ ಬರುವ ಕೆಲವು ರೋಗಗಳನ್ನು ಸಂಶೋಧಕರು ಈಗಾಗಲೇ ಕಂಡು ಹಿಡಿದಿದ್ದಾರೆ, ಅವುಗಳ ಬಗೆಗಿನ ಮಾಹಿತಿಯನ್ನು ಪ್ರಕಟಿಸಿದ್ದಾರೆ ಕೂಡ.

ಉದಾಹರಣೆಗೆ, ಮಹಿಳೆ ಪರೋಕ್ಷ ಧೂಮಪಾನಕ್ಕೆ ಒಳಗಾದರೆ ಭವಿಷ್ಯದಲ್ಲಿ ಹುಟ್ಟಬಹುದಾದ ಮಗುವಿನಲ್ಲಿ ಜನ್ಮಜಾತ ಊನಗಳು ಶೇ. ೧೩ರಷ್ಟು ಜಾಸ್ತಿಯಾದರೆ, ಶಿಶುವು ತಾಯಿಯ ಗರ್ಭದಲ್ಲೇ ಮರಣಹೊಂದಿ ಜನಿಸುವ ಸಾಧ್ಯತೆ ಶೇ. ೨೩ರಷ್ಟು ಜಾಸ್ತಿ ಎನ್ನಲಾಗಿದೆ.

ಹಾಗೆಯೇ, ಸೀಸ, ಕೀಟನಾಶಕಗಳು, ವಾತಾವರಣದ ಮಲಿನತೆಗಳು ಕೂಡ ಗರ್ಭಸ್ಥ ಶಿಶುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಗೊತ್ತಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಸ್ಲಾಟ್ಲೆಂಡಿನ ಅಬೆರ್ಡೀನ್ ವಿಶ್ವವಿದ್ಯಾಲಯ ಮತ್ತು ಬೆಲ್ಜಿಯಂನ ಹಾಸ್ಸೆಲ್ಟ್ ವಿಶ್ವವಿದ್ಯಾ ಲಯದ ವಿಜ್ಞಾನಿಗಳು ಇತ್ತೀಚೆಗೆ ಒಂದು ಸಂಶೋಧನೆಯ ವಿವರಗಳನ್ನು ಪ್ರಕಟಿಸಿದ್ದು ಅವು ತೀರಾ ಆಘಾತಕಾರಿಯಾಗಿವೆ.

ವಾತಾವರಣದಲ್ಲಿನ ಮಲಿನ ಅಂಶಗಳ ಸಣ್ಣಸಣ್ಣ ಕಣಗಳು ಗರ್ಭಸ್ಥ ಶಿಶುವಿನ ಶ್ವಾಸಕೋಶ, ಯಕೃತ್ತು (ಲಿವರ್) ಮತ್ತು ಮಿದುಳಿನಲ್ಲಿ ಇರುವ ಬಗ್ಗೆ ಅವರು ಕಂಡುಕೊಂಡಿದ್ದಾರೆ; ಶಿಶುವು ತಾಯಿಯ ಉದರದಲ್ಲಿರುವಾಗಿನ ಮೊದಲ 3 ತಿಂಗಳೊ ಳಗೇ ಈ ಮಲಿನ ಕಣಗಳು ಪ್ಲಾಸೆಂಟಾದ ಮೂಲಕ ಪ್ರವೇಶಿಸಿ ಇನ್ನೂ ಹುಟ್ಟದಿರುವ ಆ ಮಗುವಿನಲ್ಲಿ ಕಂಡುಬರುತ್ತವೆ ಎಂಬುದು ಈ ವಿಜ್ಞಾನಿಗಳ ಅಭಿಪ್ರಾಯ. ಇತ್ತೀಚಿನ ಲ್ಯಾನ್ಸೆಟ್ ಪ್ಲಾನೆಟರಿ ಜರ್ನಲ್‌ನಲ್ಲಿ ಈ ಸಂಶೋಧನೆ ಪ್ರಕಟವಾಗಿದೆ.

ಕಪ್ಪು ಇಂಗಾಲ ಎಂದರೇನು?
ನಮ್ಮ ಹೊರಗಿನ ವಾತಾವರಣದ ಮಲಿನತೆಯು ಇನ್ನೂ ಹುಟ್ಟದಿರುವ ಗರ್ಭಸ್ಥ ಶಿಶುವನ್ನು ತಲುಪಲು ಸಾಧ್ಯವೇ? ಎಂಬುದನ್ನು ತಿಳಿಯಲೆಂದೇ ತಾವು ಈ ಅಧ್ಯಯನ ಕೈಗೊಂಡಿರುವುದಾಗಿ ಹಾಸ್ಸೆಲ್ಟ್ ವಿಶ್ವವಿದ್ಯಾಲಯದ ಎನ್ವಿರಾನ್ಮೆಂಟಲ್
ಎಪಿಡಿಮಿಯಾಲಜಿಯ ಪ್ರೊಫೆಸರ್ ಹಾಗೂ ಈ ಅಧ್ಯಯನದ ಮುಖ್ಯ ವಿಜ್ಞಾನಿ ಡಾ. ಟಿಮ್ ನೌರೋಟ್ ನುಡಿಯುತ್ತಾರೆ. ‘ಇದಕ್ಕೂ ಮೊದಲು ಇಂಥ ಸಣ್ಣಸಣ್ಣ ವಿಷಕಣಗಳು ತಾಯಿಯ ಶ್ವಾಸಕೋಶದಿಂದ ಪ್ಲಾಸೆಂಟಾ (ಮಾಸು)ವನ್ನು ಸೇರುವುದು ನಮಗೆ ಗೊತ್ತಿತ್ತು.

ಹಾಗೆ ಶ್ವಾಸಕೋಶದಿಂದ ರಕ್ತಕ್ಕೆ ಅವು ಸೇರುವುದಾದರೆ ತುಂಬ ಮೈಕ್ರೋ ಮಟ್ಟದಲ್ಲಿ ಇರುವುದರಿಂದ ಅವು ಮುಂದಿನ ಪೀಳಿಗೆ ಅಂದರೆ ಗರ್ಭಸ್ಥ ಶಿಶುವಿನ ಎಲ್ಲ ಅಂಗಗಳನ್ನು ತಲುಪಬಹುದು ಎಂದು ನಾವು ಎಣಿಸಿದೆವು’ ಎಂಬುದು ಅವರ ಅಂಬೋಣ. ಈ ಅಧ್ಯಯನಕ್ಕಾಗಿ ಸಂಶೋಧಕರು, ಕಪ್ಪು ಇಂಗಾಲ (Black Carbon) ಎಂಬ, ವಾತಾವರಣವನ್ನು
ಮಲಿನ ಗೊಳಿಸುವ ನ್ಯಾನೋ ಕಣಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಈ ಕಣಗಳನ್ನು ಕಪ್ಪುಕಾಡಿಗೆ (soot) ರೀತಿಯ ಕಣಗಳೆಂದೂ ಕರೆಯುತ್ತಾರೆ.

ಕಲ್ಲಿದ್ದಲು, ಡೀಸೆಲ್ ಮತ್ತಿತರ ಜೈವಿಕ ಅನಿಲಗಳನ್ನು ಸುಟ್ಟಾಗ ದೊರೆಯುವ ಕಣಗಳೇ ಈ ಕಪ್ಪು ಇಂಗಾಲದ ಕಣಗಳು. ಕಪ್ಪು
ಇಂಗಾಲದ ಒಟ್ಟೂ ಪ್ರಮಾಣದ ಅರ್ಧಕ್ಕಿಂತ ಜಾಸ್ತಿ ಪ್ರಮಾಣವು, ಮನೆಗಳಲ್ಲಿ ನಾವು ಸುಡುವ ಶಕ್ತಿಮೂಲಗಳಿಂದ ಬರುತ್ತದೆ. ಪ್ರಯಾಣಕ್ಕಾಗಿ ಉಪಯೋಗಿಸುವ ಪೆಟ್ರೋಲ್, ಡೀಸೆಲ್, ಗ್ಯಾಸ್ ನಂಥ ವಿವಿಧ ಇಂಧನಗಳು ಶೇ.26ರಷ್ಟು ಕಪ್ಪು ಇಂಗಾಲದ ಉತ್ಪಾದನೆಗೆ ಕಾರಣವಾಗುತ್ತವೆ. ಈ ಎಲ್ಲ ಅನಿಲಗಳಿಂದ ಬರುವ ಕಪ್ಪು ಇಂಗಾಲವು ವಾತಾವರಣದ ಮಲಿನ ತೆಗೆ ಕಾರಣವಾಗುವುದೇ ಅಲ್ಲದೆ, ವ್ಯಕ್ತಿಯ ಆರೋಗ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಬೀರಬಲ್ಲದು.

ಮುಖ್ಯವಾಗಿ, ಹೃದಯಸಂಬಂಧಿ ಕಾಯಿಲೆಗಳು, ಅಸ್ತಮಾ ರೀತಿಯ ಕಾಯಿಲೆಗಳಿಗೆ ಅದು ಕಾರಣವಾಗುವುದಲ್ಲದೆ, ವ್ಯಕ್ತಿಗೆ ಅವಧಿಪೂರ್ವ ಮರಣವನ್ನೂ ತರಬಲ್ಲದು ಎಂದು ಹಿಂದಿನ ಸಂಶೋಧನೆಗಳು ಈಗಾಗಲೇ ತಿಳಿಸಿವೆ.

ಮಲಿನತೆ ಗರ್ಭಸ್ಥ ಶಿಶುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಈ ಅಧ್ಯಯನಕ್ಕೆ ಸಂಶೋಧಕರು ಬೆಲ್ಜಿಯಂ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಹಲವಾರು ತಾಯಂದಿರ ಪ್ರಸವಪೂರ್ವ ಮತ್ತು ಭ್ರೂಣದ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದರು.

‘ಫೆಮ್ಟೋಸೆಕೆಂಡ್ ಪಲ್ಸ್‌ಡ್ ಇಲ್ಯುಮಿನೇಷನ್’ ಎಂಬ ಹೊಸ ತಂತ್ರಜ್ಞಾನವನ್ನು ಉಪಯೋಗಿಸಿ, ಈ ಸ್ಯಾಂಪಲ್‌ಗಳಲ್ಲಿ ಕಪ್ಪು ಇಂಗಾಲವಿದೆಯೇ ಎಂದು ಪರೀಕ್ಷಿಸಿದರು. ‘ನಮ್ಮ ಈ ಅಧ್ಯಯನದ ಮೊದಲು ಈ ಕಪ್ಪು ಇಂಗಾಲದ ನ್ಯಾನೋ ಕಣಗಳು
ಭ್ರೂಣವನ್ನು ತಲುಪಬಲ್ಲವೇ ಎಂಬ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿಯಿರಲಿಲ್ಲ’ ಎಂದು ಈ ಅಧ್ಯಯನದ ಇನ್ನೋರ್ವ ಮುಖ್ಯ ಸಂಶೋಧಕ, ಅಬರಡೀನ್ ವಿಶ್ವವಿದ್ಯಾಲಯದ ಟ್ರಾನ್ಸ್‌ಲೇಷನ್ ಮೆಡಿಕಲ್ ಸೈನ್ಸ್‌ನ ಪ್ರೊ. ಪಾಲ್ ಪೌಲರ್ ಅಭಿಪ್ರಾಯಪಡುತ್ತಾರೆ.

ಗರ್ಭಿಣಿಯ ಮೊದಲ ಮತ್ತು ಎರಡನೆಯ ತ್ರೈಮಾಸಿಕಗಳಲ್ಲಿ (ಅಂದರೆ 3ನೇ ಮತ್ತು 6ನೇ ತಿಂಗಳುಗಳು) ವಾತಾವರಣದ ಮಲಿನ ಕಣಗಳು ಗರ್ಭದಲ್ಲಿನ ಭ್ರೂಣ ಮತ್ತು ಪ್ಲಾಸೆಂಟಾವನ್ನು ಸೇರುತ್ತವೆ. ಹಾಗೆಯೇ ಗರ್ಭಸ್ಥ ಶಿಶುವಿನ ಅಂಗಗಳಾದ
ಯಕೃತ್ತು, ಶ್ವಾಸಕೋಶ, ಮಿದುಳಿನಲ್ಲಿ ಈ ಕಣಗಳು ಕಂಡುಬರುತ್ತವೆ ಎಂಬ ಅಂಶವನ್ನು ತಮ್ಮ ಈ ಅಧ್ಯಯನ ಮೊಟ್ಟಮೊದಲ ಬಾರಿಗೆ ಸಾಬೀತು ಪಡಿಸಿದೆ ಎಂದು ಅವರು ನುಡಿಯುತ್ತಾರೆ.

ಮಾನವ ಭ್ರೂಣ ಮತ್ತು ತಾಯಿಯಲ್ಲಿನ ಪ್ಲಾಸೆಂಟಾ ಇವೆರಡರಲ್ಲೂ ಕಂಡುಬಂದ ಕಪ್ಪು ಇಂಗಾಲದ ನ್ಯಾನೋ ಕಣಗಳ ಮಟ್ಟ ಒಂದೇ ಸ್ತರದಲ್ಲಿದ್ದದ್ದು ತಮ್ಮ ತಂಡಕ್ಕೆ ತುಂಬ ಆಶ್ಚರ್ಯ ಉಂಟುಮಾಡಿತು ಎಂದು ಪ್ರೊ. ಪೌಲರ್ ನುಡಿಯುತ್ತಾರೆ. ‘ಈ
ಭ್ರೂಣಕ್ಕೆ ಸ್ವಲ್ಪವಾದರೂ ರಕ್ಷಣೆಯಿದೆ ಎಂದು ನಾವು ಮೊದಲು ಭಾವಿಸಿದ್ದೆವು. ಆದರೆ ಭ್ರೂಣಕ್ಕೆ ಅಂಥ ರಕ್ಷಣೆಯಿಲ್ಲ ಎಂಬುದು ಈ ಅಧ್ಯಯನದಲ್ಲಿ ಗೊತ್ತಾಗಿದ್ದು ಸ್ವಲ್ಪ ಚಿಂತಿಸಬೇಕಾದ ವಿಚಾರ.

ಏಕೆಂದರೆ, ಇನ್ನೂ ಎಷ್ಟೆಷ್ಟೋ ಮೈಕ್ರೋ ಮತ್ತು ನ್ಯಾನೋ ಕಣಗಳು ಭ್ರೂಣವನ್ನು ಸೇರಬಹುದು ಎಂಬುದು ಇದರರ್ಥ. ಅಲ್ಲದೆ, ಈ ಕಪ್ಪು ಇಂಗಾಲದ ನ್ಯಾನೋ ಕಣಗಳು, ಹಲವು ಲೋಹಗಳು ಮತ್ತು ಜೈವಿಕ ಲೋಹಗಳಿಂದ ಲೇಪಿತವಾಗಿವೆ. ಉದಾಹರಣೆಗೆ, ಹಲವು ಅನಗತ್ಯ ಪದಾರ್ಥಗಳ ದಹನದಿಂದ ಈ ಲೋಹಗಳು, ಜೈವಿಕ ಕಣಗಳು ಉತ್ಪನ್ನಗೊಳ್ಳುತ್ತವೆ. ಹಾಗಾಗಿ ಈ ಎಲ್ಲ ವಿಷಕಾರಿ ಕಣಗಳು ಕಪ್ಪು ಇಂಗಾಲದ ಮೂಲಕ ಭ್ರೂಣದ ವಿವಿಧ ಅಂಗಗಳನ್ನು ತಲಪುತ್ತವೆ. ಈ ಎಲ್ಲ ಅಂಶಗಳ ಕಾರಣದಿಂದ ನಾವು ವಾತಾವರಣ ಅಥವಾ ಗಾಳಿಯ ಮಲಿನತೆ ಮತ್ತು ಸ್ವಚ್ಛತೆ ಬಗ್ಗೆ ತುಂಬ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾದ ಅನಿವಾರ್ಯತೆಯಿದೆ’ ಎಂದು ಡಾ.ನೌರೋಟ್ ಅಭಿಪ್ರಾಯಪಡುತ್ತಾರೆ.

ವಾತಾವರಣದಲ್ಲಿ ಬಹಳ ಕಡಿಮೆ ಮಲಿನತೆ ಇರುವ ಪ್ರದೇಶಗಳಲ್ಲಿ ಅಧ್ಯಯನ ಕೈಗೊಂಡಿರುವ ನಮಗೆ ಇಂಥ ಪ್ರದೇಶ ಗಳಲ್ಲೇ ಇಷ್ಟು ಜಾಸ್ತಿ ಪ್ರಮಾಣದ ಇಂಗಾಲದ ಕಣಗಳಿರುವುದು ಕಂಡುಬರುತ್ತಿದೆ. ಉದಾಹರಣೆಗೆ, ಒಂದು ಘನ ಮಿ.ಮೀ. ಇರುವ ಭ್ರೂಣದ ಶ್ವಾಸಕೋಶ ಅಥವಾ ಮಿದುಳಿನಂಥ ಅಂಗಗಳಲ್ಲಿ ಸುಮಾರು ೬,೦೦೦ದಷ್ಟು ಕಪ್ಪು ಇಂಗಾಲದ ಕಣಗಳು! ವಾತಾವರಣ ಬಹಳ ಮಲಿನವಾಗಿರುವ ಪ್ರದೇಶಗಳಲ್ಲಿ ಈ ಪ್ರಮಾಣ ಇನ್ನೂ ಜಾಸ್ತಿಯಾಗಿರುತ್ತದೆ.

ಆರೋಗ್ಯಪೂರ್ಣ ಹವೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ನಾವು ವಾತಾವರಣದ ಮಲಿನತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಉತ್ತಮ ಆರೋಗ್ಯ ಮತ್ತು ಹವೆ ಇರುವಂತೆ ನೋಡಿಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂಬುದು ಅವರ ಅನಿಸಿಕೆ. ಮೇಲೆ ಉಲ್ಲೇಖಿಸಿರುವ ಮಾಹಿತಿಯ ಆಧಾರದ ಮೇಲೆ, ಸಂಶೋಧನೆಯ ಮುಂದಿನ ಅಂಗವಾಗಿ ಆರೋಗ್ಯದ ಮೇಲಿನ ಪರಿಣಾಮಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ಡಾ. ನೌರೋಟ್ ನುಡಿಯುತ್ತಾರೆ.

ವಾತಾವರಣದ ಮಲಿನತೆಯು ಆರೋಗ್ಯದ ಮೇಲೆ ಹಲವು ಕೆಟ್ಟ ಪರಿಣಾಮ ಬೀರುವ ಬಗ್ಗೆ ನಮಗೆ ಗೊತ್ತಿದೆ. ಮುಖ್ಯವಾಗಿ
ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಹಾಗೂ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳು ಇಂಥವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಹಾಗೆಯೇ ಮಕ್ಕಳ ಮಿದುಳಿನಲ್ಲಿ ಉಂಟಾಗುವ ಸೂಕ್ಷ್ಮಜ್ಞಾನದ ಅಂಶಗಳೂ ತೊಂದರೆಗೆ ಒಳಗಾಗ ಬಹುದೇನೋ ಎಂಬ ಸಂದೇಹವಿದೆ.

ಹಾಗೆಯೇ ಈ ಕಪ್ಪು ಅನಿಲವು ಭ್ರೂಣದ ಯಾವ್ಯಾವ ಅಂಗವನ್ನು ಹೊಕ್ಕು ಎಷ್ಟು ಹಾನಿಯುಂಟುಮಾಡುತ್ತದೆ ಎಂಬುದನ್ನು ಮುಂದಿನ ಹಂತದಲ್ಲಿ ನಿಖರವಾಗಿ ‘ಮ್ಯಾಪ್’ ಮಾಡಲು ಸಂಶೋಧಕರು ಸಜ್ಜಾಗಿದ್ದಾರೆ. ಹಾಗೆಯೇ ಈ ಕಪ್ಪು ಇಂಗಾಲದ ಕಣಗಳು ಅಥವಾ ಅದರಲ್ಲಿನ ರಾಸಾಯನಿಕಗಳು ಗರ್ಭಸ್ಥ ಶಿಶುವಿನಲ್ಲಿನ ಅಂಗಗಳು ಮತ್ತು ಜೀವಕೋಶಗಳ ಮೇಲೆ ನೇರ
ಪರಿಣಾಮವನ್ನು ಹೊಂದಿವೆಯೇ ಎಂಬ ಬಗ್ಗೆಯೂ ಮುಂದಿನ ಹಂತದಲ್ಲಿ ಅಧ್ಯಯನ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ.

ಈ ರೀತಿಯ ಪರಿಣಾಮಗಳು ತುಂಬ ಮಲಿನ ವಾತಾವರಣದಲ್ಲಿನ ಗರ್ಭಿಣಿಯರ ಮೇಲೆ ಪ್ರಭಾವ ಬೀರಿ, ಹೆರಿಗೆಯ ಸಮಯದಲ್ಲಿ ಅವರಿಗೆ ತೊಂದರೆಯಾಗುವುದೇ? ಈ ಎಲ್ಲ ಅಂಶಗಳು ಮೊದಲೇ ನಿಖರವಾಗಿ ತಿಳಿದರೆ ಅಂಥ ಪ್ರದೇಶಗಳ ಮಹಿಳೆಯರ ಹೆರಿಗೆಯ ಸಂದರ್ಭದಲ್ಲಿ ಸೂಕ್ತಕ್ರಮ ಕೈಗೊಳ್ಳಬಹುದು. ಈ ಅಧ್ಯಯನದ ಬಗ್ಗೆ ಜಗತ್ತಿನ ಇತರ ತಜ್ಞರು
ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಮುಖ್ಯವಾಗಿ, ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದ ಸೇಂಟ್ ಜಾನ್ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞೆ ಡಾ. ಡಾನೆಲ್ ಫಿಶರ್ ಮುಕ್ತ ಅಭಿಪ್ರಾಯವನ್ನು ಪ್ರಕಟಿಸಿದ್ದು, ‘ಒಬ್ಬ ಮಕ್ಕಳ
ತಜ್ಞೆಯಾಗಿ ಮತ್ತು ಒಬ್ಬ ತಾಯಿಯಾಗಿ ನನಗೆ ಈ ಅಧ್ಯಯನ ಹೆದರಿಕೆ ಉಂಟುಮಾಡುತ್ತದೆ’ ಎಂದಿದ್ದಾರೆ ಅವರು.

ತಾಯಗರ್ಭದಲ್ಲಿ ಇನ್ನೂ ಬೆಳವಣಿಗೆ ಹೊಂದುತ್ತಿರುವ, ಹುಟ್ಟದೇ ಇರುವ ಈ ತರಹದ ಮಕ್ಕಳ ಮೇಲೆ ವಾತಾವರಣದ ಮಾಲಿನ್ಯ ಉಂಟುಮಾಡಿ, ನಮ್ಮ ತರಹವೇ ಆ ಕಂದಮ್ಮ ಗಳಿಗೂ ಆಗುವುದನ್ನು ನಾವು ನೋಡುತ್ತಿದ್ದೇವೆಯೇ? ಇದು ನಿಜವಾಗಿಯೂ ಭಯ ಉಂಟುಮಾಡುತ್ತದೆ. ಅವರ ಮುಂದಿನ ಪ್ರಶ್ನೆಗಳು- ಮುಂದೆ ನಾವು ಇನ್ನೂ ಕೆಟ್ಟರೀತಿಯ ಕಾಯಿಲೆ ಗಳನ್ನು ನೋಡಲಿದ್ದೇವೆಯೇ? ಇದಕ್ಕೆ ನಾವು ಚಿಕಿತ್ಸೆ ಮಾಡಬೇಕೇ? ಮಾಡಲೇಬೇಕಾದರೆ ಹೇಗೆ? ಈ ಅಧ್ಯಯನ ವನ್ನು ಅವಲೋಕಿಸಿದಾಗ ನನಗೆ ಉತ್ತರಗಳಿಗಿಂತ ಪ್ರಶ್ನೆಗಳೇ ಜಾಸ್ತಿ ಹುಟ್ಟುತ್ತಿವೆ.

ಹೌದು, ಯಾವುದೇ ಒಳ್ಳೆಯ ಅಧ್ಯಯನ ಈ ತರಹದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅದು ನಮ್ಮನ್ನೂ ‘ಈ ದಿಸೆಯಲ್ಲಿ ಏನು ಮಾಡಬಹುದು?’ ಎಂಬ ಯೋಚನೆಗೆ ಹಚ್ಚುತ್ತಿದೆ. ಮುಂದೆ ಯಾವ ರೀತಿ ಈ ಅಧ್ಯಯನ ಮುಂದುವರಿಸಿ ಪರಿಹಾರ
ಹುಡುಕಬೇಕು ಎಂಬುದಕ್ಕೆ ಪ್ರಯತ್ನಿಸಬೇಕು. ಹಾಗೆಯೇ, ಗರ್ಭಿಣಿಯು ತನ್ನ ಉದರದಲ್ಲಿನ ಮಗುವನ್ನು ಈ ತರಹದ ಹಾವಳಿಗಳಿಂದ ತಪ್ಪಿಸಲು ಏನು ಮಾಡಬಹುದು ಎಂಬ ಯೋಚನೆಯನ್ನು ಈ ಅಧ್ಯಯನವು ತಮ್ಮಲ್ಲಿ ಉಂಟುಮಾಡಿತು
ಎನ್ನುತ್ತಾರೆ ಡಾ. ಫಿಶರ್. ಗರ್ಭಿಣಿಯು ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಮನೆಯಲ್ಲಿರಬೇಕಾದರೆ ಗಾಳಿ ಶುದ್ಧೀಕರಿಸುವ ಯಂತ್ರವನ್ನು ಉಪಯೋಗಿಸಬೇಕು. ಗರ್ಭಿಣಿಗೆ ದಿನ ತುಂಬಿದ ಸಮಯದಲ್ಲಿ, ಈ ಕಪ್ಪು ಇಂಗಾಲದ ಈ ತರಹದ ವಿಷಕಣಗಳ ಬಗ್ಗೆ ಪರೀಕ್ಷಿಸಬೇಕು. ಏಕೆಂದರೆ, ನಮಗೆ ಬೇಡವಾದ ವಸ್ತು ದೇಹದಲ್ಲಿ
ಸೇರಿಕೊಂಡಾಗ, ಅದನ್ನು ತನ್ನಿಂದ ತಾನೇ ಹೊರಹಾಕುವ ನೈಸರ್ಗಿಕ ವ್ಯವಸ್ಥೆಯನ್ನು ನಮ್ಮ ದೇಹ ಹೊಂದಿದೆ. ಹಾಗಾಗಿ, ಪೂರ್ಣಗರ್ಭಿಣಿಯ ಗರ್ಭಸ್ಥ ಶಿಶುವಿನಲ್ಲಿ ಈ ಕಣಗಳು ಹೆಚ್ಚಾಗುತ್ತ ವೆಯೋ ಕಡಿಮೆಯಾಗುತ್ತವೆಯೋ ಎಂದು ಪರೀಕ್ಷಿಸುವುದು ತುಂಬ ಅಗತ್ಯ ಎಂದು ಡಾ. ಫಿಶರ್ ನುಡಿಯುತ್ತಾರೆ.

ವಾತಾವರಣದಲ್ಲಿನ ಮಲಿನತೆಯನ್ನು ಕಡಿಮೆ ಮಾಡುವುದು ಹೇಗೆ? ಗರ್ಭಿಣಿಯರು ಇಂಥ ಮಲಿನತೆಗೆ ಒಳಗಾಗದಂತೆ
ಏನು ಮಾಡಬೇಕು? ಎಂಬ ವಿಚಾರದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಈ ಅಧ್ಯಯನ ಮಾಡಿದೆ.