ಬೇಟೆ
ಜಯವೀರ ವಿಕ್ರಮ್ ಸಂಪತ್ ಗೌಡ, ಅಂಕಣಗಾರರು
ಕರೋನಾ ಯಾರನ್ನೂ ಬಿಡಲಿಲ್ಲ. ಅದಕ್ಕೆ ಕನ್ನಡ ಪತ್ರಿಕೆಗಳೂ ಹೊರತಲ್ಲ. ಪ್ರತಿದಿನ ಪುರವಣಿ ಮತ್ತು ಜಾಹೀರಾತುಗಳಿಂದ ಕೊಬ್ಬಿದ್ದ ಕನ್ನಡ ಪತ್ರಿಕೆಗಳು, ಬರಗಾಲದ ಜಾನುವಾರುಗಳಂತಾದವು. ಹೊಟ್ಟೆ ಎಂಬುದು ಹಪ್ಪಳವಾಯಿತು. ರಾಜ್ಯಮಟ್ಟದ ಪತ್ರಿಕೆಗಳಂತೂ ಕೆಲವು ದಿನ ಎಂಟು ಪುಟಕ್ಕಿಳಿದವು. ಇದ್ದಕ್ಕಿದ್ದಂತೆ ಪತ್ರಿಕೆಗಳು ಬಡವಾಗಿ ಹೋದವು. ದಿನ ಬೆಳಗಾದರೆ ಎದೆಗೆ ಪತ್ರಿಕೆಯನ್ನು ಅಪ್ಪಿಕೊಳ್ಳುತ್ತಿದ್ದವರೆಲ್ಲ ಕರೋನಾ ಸೋಂಕು ಹರಡುತ್ತದೆ ಎಂಬ ಭೀತಿಯಿಂದ, ಪತ್ರಿಕೆ ಓಡುವುದಿರಲಿ, ಮನೆಗೆ
ತರಿಸುವುದನ್ನೇ ಬಿಟ್ಟರು. ಹೀಗಾಗಿ ಓದುಗರು ಕೈಬಿಟ್ಟರು.
ಮತ್ತೊಂದೆಡೆ ಜಾಹೀರಾತುಗಳೆಲ್ಲಾ ನಿಂತು ವರಮಾನಕ್ಕೆ ಹೊಡೆತ ಬಿದ್ದಿತು. ಪತ್ರಿಕೆಗಳು ಇಂಥ ವಿಷಮ ಮತ್ತು ಸಂಕಷ್ಟದ ಸ್ಥಿತಿಯನ್ನು ಹಿಂದೆಂದೂ ಅನುಭವಿಸಿರಲಿಕ್ಕಿಲ್ಲ. ಇದ್ದಕ್ಕಿದ್ದಂತೆ ಪತ್ರಿಕೆಗಳ ಪ್ರಸಾರವೂ ಜರ‌್ರನೆ ಕುಸಿದು ಹೋಯಿತು. ನಾವೇ ನಂಬರ್ ಒಂದು ಎಂದು ಹೇಳಿಕೊಳ್ಳುತ್ತಿದ್ದವರೆಲ್ಲ ಗಪ್ ಚುಪ್!
ಹಲವು ಪತ್ರಿಕೆಗಳು ತಮ್ಮ ಆವೃತ್ತಿಗಳನ್ನು ಬಂದ್ ಮಾಡಿದವು. ಜಿಲ್ಲಾ ಕೇಂದ್ರಗಳ ಕಚೇರಿಗಳಿಗೆ ಬೀಗ ಹಾಕಿದವು. ಸಂಪಾದ ಕೀಯ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದವು. ಇನ್ನು ಕೆಲವು ಪತ್ರಿಕೆಗಳು ಸಿಬ್ಬಂದಿ ಸಂಬಳ ಕಡಿತಗೊಳಿಸಿ ದವು. ಇನ್ನು ಎರಡು ವರ್ಷಗಳ ಕಾಲ ವೇತನ ಹೆಚ್ಚಳ ಮಾಡುವುದಿಲ್ಲ ಎಂದು ಘೋಷಿಸಿದವು. ಪತ್ರಕರ್ತರಿಗೆ ಕೆಲಸ ಉಳಿಸಿ ಕೊಳ್ಳುವುದೇ ದೊಡ್ಡ ಸವಾಲಾಯಿತು.
ಒಂದೆರಡು ತಿಂಗಳು ಸಂಬಳ ಕೊಡದಿದ್ದರೂ ಪರವಾಗಿಲ್ಲ, ಕೆಲಸದಿಂದ ತೆಗೆದುಹಾಕದಿದ್ದರೆ ಸಾಕು ಎಂಬ ಸ್ಥಿತಿಗೆ ಬಂದರು. ಪ್ರತಿ ವರ್ಷ ಸಾವಿರಾರು ಕೋಟಿ ರುಪಾಯಿ ಲಾಭ ಗಳಿಸುವ ಸಂಸ್ಥೆಗಳೂ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದವು. ಖರ್ಚು ಕಡಿಮೆಗೊಳಿಸಲು ಐಟಿ ಕಂಪೆನಿಗಳಂತೆ ‘ವರ್ಕ್ ಫ್ರಾಮ್ ಹೋಮ್’ ಪದ್ಧತಿ ಆರಂಭಿಸಿದವು. ಪತ್ರಿಕೆಗಳಿಗೆ ‘ವರ್ಕ್ ಫ್ರಾಮ್ ಹೋಮ್’ ಪದ್ಧತಿ ಜಾರಿ ಸಾಧ್ಯವೇ ಇಲ್ಲ ಎಂದು ವಾದಿಸುತ್ತಿದ್ದವರೆಲ್ಲ, ಅದನ್ನು ಮುಲಾಜಿಲ್ಲದೆ ಜಾರಿಗೆ ತಂದರು. ಪ್ರತಿದಿನ
ನಲವತ್ತು-ಐವತ್ತು ಪುಟಗಳನ್ನು ಕೊಡುತ್ತಿದ್ದ ಇಂಗ್ಲಿಷ್ ಪತ್ರಿಕೆಗಳು ಹನ್ನೆರಡು ಪುಟಗಳಿಗೆ ಬಂದವು. ಕರೋನಾ ಇಡೀ ಮಾಧ್ಯಮ ಲೋಕದ ಮೇಲೆ ಚಪ್ಪಡಿ ಕಲ್ಲನ್ನು ಎಳೆದದ್ದಂತೂ ನಿಜ. ಇವೆಲ್ಲವುಗಳ ಪರಿಣಾಮವಾಗಿ, ಹಲವು ಪತ್ರಿಕೆಗಳು ಪ್ರಕಟಣೆಯನ್ನು ಸ್ಥಗಿತಗೊಳಿಸಿದವು.
ಒಂದು ದಿನ ಪತ್ರಿಕೆ ಬರದಿದ್ದರೆ ಚಡಪಡಿಸುತ್ತಿದ್ದವರು, ಪತ್ರಿಕೆಗಳಿಂದ ದೂರವಾದರು. ಯಾರದ್ದೋ ಮಾತು ಕೇಳಿ, ಹೆಂಡತಿ ಯನ್ನು ಬಿಟ್ಟ ಶ್ರೀರಾಮನಂತೆ, ಪತ್ರಿಕೆಗಳಿಂದ ಕರೋನಾ ಸೋಂಕು ಹರಡುವುದೆಂದು ಓದುಗರೂ ಪತ್ರಿಕೆ ಓದುವುದನ್ನು
ಕೈಬಿಟ್ಟರು. ಪತ್ರಿಕೆಗಳ ಪ್ರಸಾರ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಎಷ್ಟಿತ್ತೋ ಅಷ್ಟಕ್ಕೇ ಇಳಿಯಿತು. ಇಂಥದ್ದೊಂದು ಕಾಲ ಬರಬಹುದೆಂದು ಯಾರೂ ಊಹಿಸಿರಲಿಲ್ಲ. ಜನ, ಪತ್ರಿಕೆಗಳಿಲ್ಲದೇ ಮೂರು ತಿಂಗಳು ಕಳೆದರು. ಪತ್ರಿಕೆಗಳಿಂದ ಕರೋನಾ ವೈರಸ್ ಸೋಂಕು ಹರಡುವುದಿಲ್ಲ ಎಂಬುದು ಅವರಿಗೇ ಮನದಟ್ಟಾಗುತ್ತಿದ್ದಂತೆ ನಿಧಾನವಾಗಿ ಪತ್ರಿಕೆಗಳನ್ನು ಎದೆಗಪ್ಪಿಕೊಳ್ಳಲಾ ರಂಭಿಸಿದರು.
ಕಳೆದ ಒಂದು ತಿಂಗಳಿನಿಂದ ಪತ್ರಿಕೆಗಳು ಮತ್ತೆ ಸಹಜ ಸ್ಥಿತಿಗೆ ಮರಳಬಹುದು ಎಂಬ ವಿಶ್ವಾಸ ಚಿಗುರಿಸಿದೆ. ಹಾಗೆ ನೋಡಿದರೆ, ಒಂದು ದೃಷ್ಟಿಯಲ್ಲಿ ಕರೋನಾ ಕನ್ನಡ ಪತ್ರಿಕಾ ಲೋಕದ ಕಣ್ಣು ತೆರೆಯಿಸಿತು ಎನ್ನಬಹುದು. ಮೊದಲ ಬಾರಿಗೆ, ಪತ್ರಿಕೆಗಳಿಗೆ ಅಸ್ತಿತ್ವದ ಭಯ, ಆತಂಕ ಕಾಡಿತು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಓದುಗರು ಪತ್ರಿಕೆಗಳನ್ನು ಏಕಾಏಕಿ ಕೈಬಿಟ್ಟ ನಿದರ್ಶನ ಗಳಿರಲಿಲ್ಲ. ಇಂಥ ಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಪತ್ರಿಕೆಗಳಿಗೆ ಅನುಭವವಿರಲಿಲ್ಲ. ಮನೆಯಿಂದಲೂ ಪತ್ರಿಕೆಗಳನ್ನು ಹೊರತರಬಹುದು ಎಂಬುದನ್ನು ಊಹಿಸಿರಲೂ ಇಲ್ಲ.
ಇವೆಲ್ಲಾ ಪತ್ರಿಕೆಗಳಿಗೆ ಹೊಸ ಅನುಭವವೇ. ಏಕಾಏಕಿ ವರಮಾನದ ಒಳಹರಿವು ನಿಂತು ಬಿಟ್ಟರೆ, ಯಾವ ರೀತಿಯಲ್ಲಿ ಪರಿಸ್ಥಿತಿ ಯನ್ನು ನಿಭಾಯಿಸಬೇಕು ಎಂಬುದು ಸಹ ಹೊಸ ಪಾಠವೇ. ಈ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಕಾಯಂ ಪತ್ರಿಕಾ ಓದುಗರೂ ಸುದ್ದಿಗಾಗಿ ಬೇರೆ ಬೇರೆ ಮೂಲಗಳನ್ನು ಅರಸಿದ್ದು ಸುಳ್ಳಲ್ಲ. ಆದರೆ ಈ ಎಲ್ಲವುಗಳಿಂದ ಒಂದು ಸಂಗತಿ ಸ್ಪಷ್ಟವಾಗಿ ದ್ದೇನೆಂದರೆ, ಪತ್ರಿಕೆಗಳೇ ಸುದ್ದಿಯ ವಿಶ್ವಾಸಾರ್ಹ ಮೂಲ ಎಂಬುದು ಸಾಬೀತಾಗಿದ್ದು. ಪಾಟೀಲ ಪುಟ್ಟಪ್ಪನವರು ‘ಸತ್ಯವೇ ಶೀಲ’ ಎಂದು ಕರೆದಿದ್ದರು. ಪತ್ರಿಕೆಗಳಿಗೆ ವಿಶ್ವಾಸಾರ್ಹತೆಗಿಂತ ಮಿಗಿಲಾದುದು ಯಾವುದೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬರುವ ಮಾಹಿತಿಯನ್ನು ಓದಿ ಓದಿ, ಈ ವಿಶ್ವಾಸಾರ್ಹತೆ ಅದೆಷ್ಟು ಅಮೂಲ್ಯ ಎಂಬುದು ಜನರಿಗೆ ಮನವರಿಕೆಯಾಯಿತು. ಯಾರು ಯಾವ ಮಾಹಿತಿಯನ್ನಾದರೂ ಹರಿದು ಬಿಡುವ, ಅದು ಕಾಳ್ಗಿಚ್ಚಿನಂತೆ ಹರಡಲು ಅನುವಾಗುವ ಸಾಮಾಜಿಕ ಜಾಲತಾಣ ಗಳಿಗೆ, ಹೊಣೆಗಾರರು ಅಥವಾ ಕಾವಲುಗಾರರು ಎಂಬುವವರು ಯಾರೂ ಇಲ್ಲ.
ಅಲ್ಲಿ ಪ್ರತಿಯೊಬ್ಬನೂ ವರದಿಗಾರ, ಸಂಪಾದಕ, ವಿಮರ್ಶಕ ಅದು ಒಂಥರಾ ಟ್ರಾಫಿಕ್ ರೂಲುಗಳಿಲ್ಲದ ರಸ್ತೆಯಲ್ಲಿ ಸಂಚರಿಸಿ ದಂತೆ. ರಸ್ತೆಯಿಂದ ಹೊರಗಿದ್ದವರು ಮಾತ್ರ ಬಚಾವ್ ಆಗಬಹುದು. ಆ ರಸ್ತೆಯಲ್ಲಿ ಸಂಚರಿಸುವವರು ಅಪಘಾತ ವಿಲ್ಲದೇ ಬಚಾವ್ ಆಗುವುದು ಪವಾಡವೇ. ಕಾರಣ ಯಾರು ಹೇಗೆ ಬೇಕಾದರೂ ವಾಹನ ಚಲಾಯಿಸಬಹುದು. ಯಾರು ಯಾರನ್ನಾದರೂ ಟೀಕಿಸಬಹುದು, ಬೈಯಬಹುದು, ಸುಳ್ಳು ಸುದ್ದಿ ಹರಡಬಹುದು, ನಿಖರವಲ್ಲದ ಮಾಹಿತಿ ಹರಿಯ ಬಿಡಬಹುದು. ಅದೊಂದು ರೀತಿಯ ಹುಚ್ಚಾಸ್ಪತ್ರೆ!
ಅಲ್ಲದೇ ಸಾಮಾಜಿಕ ಜಾಲತಾಣ ನಮ್ಮ ವೃಷಭಾವತಿ ನದಿಯಿದ್ದಂತೆ. ಸತ್ಯವಿರಲಿ, ಸುಳ್ಳಿರಲಿ, ಅಲ್ಲಿ ಮಾಹಿತಿ ಬರುತ್ತಲೇ ಇರುತ್ತವೆ. ಯಾರೂ ಅದರ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ಸುಳ್ಳು ಸುದ್ದಿಯನ್ನು ಹರಡಲು ಸಾಮಾಜಿಕ ಜಾಲತಾಣದಂಥ ಎಂಜಿನ್ ಮತ್ತೊಂದಿಲ್ಲ. ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಗೆ ಪೆಟ್ರೋಲ್ ಸುರಿದಿದ್ದೇ ಸಾಮಾಜಿಕ ಜಾಲತಾಣಗಳು.
ಇದೊಂದು ರೀತಿಯಲ್ಲಿ ದ್ವೇಷ ಉತ್ಪಾದಿಸುವ ಕಾರ್ಖಾನೆಗಳಾಗಿವೆ. ಯಾವುದು ನಂಬಲರ್ಹ ಮಾಹಿತಿ, ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ವದಂತಿ ಎಂಬುದನ್ನು ಜನ ಗುರುತಿಸಲಾಗದಂಥ , ಪ್ರತ್ಯೇಕಿಸಲಾಗದಂಥ ಸ್ಥಿತಿ ತಲುಪಿದ್ದಾರೆ. ಮಾಹಿತಿ ಹರಿದು ಬರುವ ಪ್ರಮಾಣ ಮತ್ತು ಪ್ರವಾಹದಲ್ಲಿ ಜನ ಕೊಚ್ಚಿ ಹೋಗುತ್ತಿದ್ದಾರೆ. ಯಾವ ಸುದ್ದಿ, ಮಾಹಿತಿಯನ್ನು ಎಷ್ಟು
ನೀಡಬೇಕು ಎಂಬುದಕ್ಕೆ ಕಡಿವಾಣ ಹಾಕುವುದಕ್ಕೆ ಯಾವ ದೊಣ್ಣೆ ನಾಯಕನೂ ಇಲ್ಲ. ‘ಆಡಿದ್ದೇ ಆಟ, ಒದರಿದ್ದೇ ಹಾಡು’ ಎಂಬಂತಾಗಿದೆ.
ಒಂದೆಡೆ ಸಾಮಾಜಿಕ ಜಾಲತಾಣಗಳ ಭರಾಟೆ. ಮತ್ತೊಂದೆಡೆ ನ್ಯೂಸ್ ಚಾನೆಲ್ಲುಗಳ ಅಬ್ಬರ. ಕೆಲವೊಮ್ಮೆ ನ್ಯೂಸ್ ಚಾನೆಲ್ಲು ಗಳಿಗೂ ಸಾಮಾಜಿಕ ಜಾಲತಾಣಗಳೇ ಸುದ್ದಿ ಮೂಲ. ಎರಡು ಸೇರಿದರೆ ಬೆಂಕಿ-ಗಾಳಿ ವಾಕಿಂಗ್ ಹೊರಟಂತೆ. ಮಂಗನಿಗೆ ಕಳ್ಳು ಕುಡಿಸಿದಂತೆ. ನ್ಯೂಸ್ ಚಾನೆಲ್ಲುಗಳ ಬ್ರೇಕಿಂಗ್ ನ್ಯೂಸ್ ಆಕಾಶದಿಂದ ಉಲ್ಕೆ, ಧೂಮಕೇತುಗಳು ಉದುರಿದಂತೆ. ಏನು ಬೇಕಾದರೂ ಆಗಬಹುದು. ಟಿಆರ್‌ಪಿ ಪೈಪೋಟಿಯಲ್ಲಿ ಅದು ಸಹ ಒಂಥರಾ ಟ್ರಾಫಿಕ್ ನಿಯಮವಿಲ್ಲದ ರಸ್ತೆ ಪಯಣವೇ.
ಕರೋನಾವನ್ನಾದರೂ ಸಹಿಸಿಕೊಳ್ಳಬಹುದು, ಆದರೆ ನ್ಯೂಸ್ ಚಾನೆಲ್ಲುಗಳ ಕರೋನಾ ವರದಿಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಾಗಿದ್ದು ಸುಳ್ಳಲ್ಲ.
ಪರಿಣಾಮ, ಕೆಲವರಂತೂ ಟಿವಿ ಚಾನೆಲ್ ನೋಡುವುದನ್ನೇ ಬಿಟ್ಟರು. ಲಾಕ್ ಡೌನ್ ಕಾಲದಲ್ಲಿ ಜನರಿಗೆ ಸಾಮಾಜಿಕ ಜಾಲತಾಣ ಗಳಿಗೂ ಟಿವಿ ಚಾನೆಲ್ಲುಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬುದು ಅನುಭವಕ್ಕೆ ಬಂದಿತು. ಟಿವಿ ಚಾನೆಲ್ಲುಗಳ ಟಿಆರ್‌ಪಿಯೇನೋ ಹೆಚ್ಚಾಯಿತು. ಆದರೆ ಅವುಗಳ ವಿಶ್ವಾಸಾರ್ಹತೆಗೆ ಭಾರಿ ಪೆಟ್ಟು ಬಿದ್ದಿತು. ಜನ ಟಿವಿ ಸಂಪರ್ಕ ಕಿತ್ತಾಕುವ ಹಂತಕ್ಕೆೆ ಹೋಗಿದ್ದೂ ಉಂಟು.
ಕರೋನಾ ಸಂದರ್ಭದಲ್ಲಿ ಜನ ಇವೆಲ್ಲವನ್ನೂ ಸಾಕ್ಷಾತ್ ಅನುಭವಿಸಿದರು. ಈ ಎಲ್ಲಾ ಸಂಗತಿಗಳಿಂದ ರೋಸಿಹೋದ ಮಹಾ ಜನತೆ ಮತ್ತೆ ಪತ್ರಿಕೆಗಳತ್ತ ಮುಖ ಮಾಡತೊಡಗಿದ್ದಾರೆ. ಇಷ್ಟು ದಿನ ಪತ್ರಿಕೆ ಓದುವುದನ್ನು ಬಿಟ್ಟಿದ್ದಕ್ಕೆ ಒಳಗೊಳಗೇ ಪರಿತಪಿಸು ತ್ತಿದ್ದಾರೆ. ತಾವೇನು ಕಳೆದುಕೊಂಡಿದ್ದೇವೆ ಎಂಬುದು ಅವರಿಗೆ ಮನವರಿಕೆಯಾಗಲಾರಂಭಿಸಿದೆ. ಲಾಕ್ ಡೌನ್ ಕಾಲದಲ್ಲಿ ಓದುಗರು ಮುದ್ರಿತ ಪತ್ರಿಕೆಗಳನ್ನು ಓದುವುದನ್ನು ಬಿಟ್ಟಿರಬಹುದು, ಆದರೆ ಅಂತರ್ಜಾಲದಲ್ಲಿ ಇ-ಪೇಪರ್ ಓದುವ ಹೊಸ ಹವ್ಯಾಸ ಬೆಳೆಸಿಕೊಂಡಿದ್ದರು. ಆದರೂ ಮುದ್ರಿತ ಅಕ್ಷರಗಳು ಹೊರಸೂಸುವ, ಶಾಯಿಯ ವಾಸನೆ ಕುಡಿಯುತ್ತಾ, ಕಾಫಿ ಹೀರುತ್ತಾ, ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಒಮ್ಮೆ ಜಾಡಿಸಿ ಓದುವ ಅನುಭವಕ್ಕೆ ಮಿಗಿಲಾದುದು ಯಾವುದೂ ಇಲ್ಲ ಎಂಬುದು ಖಾತ್ರಿಯಾಗಿ ಹೋಯಿತು.
ಇದು ಓದುಗರಿಗೆ ಕಳೆದುದು ಸಿಕ್ಕಿದಂತೆ. ಅದೇ ರೀತಿ ಪತ್ರಿಕೆಗಳಿಗೂ ಓದುಗರ ವಿಶ್ವಾಸವನ್ನು ಮರಳಿ ಗಳಿಸಿದಂತೆ. ಇಬ್ಬರಿಗೂ ತಾವು ಕಳೆದುಕೊಂಡಿದ್ದೇನು- ಗಳಿಸಿದ್ದೇನು ಎಂಬುದು ಗೊತ್ತಾಗಿವೆ. ಸಾಮಾಜಿಕ ಜಾಲತಾಣಗಳಿಗೆ ಹೋದವರು ಮತ್ತೆ ಪತ್ರಿಕೆ ಗಳಿಗೆ ಮರಳುತ್ತಿದ್ದಾರೆ. ಗರ್ಲ್ ಫ್ರೆಂಡ್ ಸಹವಾಸದಿಂದ ಹೆಂಡತಿಯಿಂದ ದೂರವಾದವರು, ಜ್ಞಾನೋದಯವಾದವರಂತೆ, ಗರ್ಲ್
ಫ್ರೆಂಡ್ ಬಿಟ್ಟು ಪುನಃ ಮನೆ ಕಡೆಗೆ ಮುಖ ಮಾಡಿದ್ದಾರೆ.
ಇಷ್ಟೆಲ್ಲಾ ಸ್ಥಿತ್ಯಂತರಗಳಾಗುತ್ತಿರುವಾಗ, ಪ್ರಿಂಟ್ ಪತ್ರಕರ್ತರಿಗೆ ಈಗ ಹೊಸ ಕಾಯಿಲೆ ಅಂಟುಕೊಂಡಿದೆ. ಯಾರಿಗೆ ತಮ್ಮ ವಿದ್ಯೆಯ ಮಹತ್ವ, ಸಾಮರ್ಥ್ಯ ಮತ್ತು ತಾಕತ್ತು ಗೊತ್ತಿಲ್ಲದಿದ್ದಾಗ ಇಂಥ ಅಪಸವ್ಯಗಳಾಗುತ್ತವೆ. ಪ್ರಿಂಟ್ ಪತ್ರಕರ್ತರು ಈ ಸಂದರ್ಭದಲ್ಲಿ ಮಾಡಬೇಕಾದುದು ಹೆಚ್ಚು ಹೆಚ್ಚು ಅಕ್ಷರಗಳಿಗೆ ಮೊರೆ ಹೋಗಬೇಕು. ಮುದ್ರಿತ ಅಕ್ಷರಗಳು ಪವಿತ್ರ ( Printed words are sacrosanct) ಎಂಬುದನ್ನು ಮತ್ತೊಮ್ಮೆ ಓದುಗರಿಗೆ ಮನನ ಮಾಡಿಕೊಡಬೇಕು. ಪತ್ರಿಕೆ ಓದುವವರ ಸಂಖ್ಯೆ
ಕಡಿಮೆಯಾಗುತ್ತಿದೆ, ಜನ ಹೆಚ್ಚು ಹೆಚ್ಚು ಡಿಜಿಟಲ್ ಮಾಧ್ಯಮದತ್ತ ಹೊರಳುತ್ತಿದ್ದಾರೆ ಎಂದು ನಾವೂ ಸಂತೆಯಲ್ಲಿ ಅಂಗಡಿ ಕಿತ್ತುಕೊಂಡು ಜನಸಂದಣಿ ಇರುವ ಕಡೆ ಟೆಂಟು ಹೂಡುವ ಪ್ರಮಾದ ಮಾಡಬಾರದು. ಇದು ಪ್ರಿಂಟ್ ಪತ್ರಕರ್ತರ ಕೀಳರಿಮೆಯ ದ್ಯೋತಕ.
ಇಂಥ ಪತ್ರಕರ್ತರು ಹಠಾತ್ತನೆ ಫೇಸ್ ಬುಕ್ ಲೈವ್ ನಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡುತ್ತಿದ್ದಾರೆ. ಪಾಡ್ ಕಾಸ್ಟ್ ಆರಂಭಿಸಿದ್ದಾರೆ. ತಾವು ಜನಮಾನಸದಿಂದ ದೂರವಾಗುತ್ತಿದ್ದೇವಾ ಎಂಬ ಕೀಳರಿಮೆ ಮತ್ತು ಕೆಟ್ಟ ಅರಿಮೆ ಅವರನ್ನು ಕಾಡುತ್ತಿದೆ. attention seeking ಗಾಗಿ ಹಪಹಪಿಸುತ್ತಿದ್ದಾರೆ. ಫೇಸ್ ಬುಕ್ ವ್ಯೂಸ್, ಲೈಕ್ಸ್ ಅವರನ್ನು ವಿಮುಖ ರನ್ನಾಗಿ ಮಾಡುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಪತ್ರಕರ್ತರು ವಾಚಾಳಿಗಳಾಗುತ್ತಿದ್ದಾರೆ. ವಿಪರೀತ ಮಾತಾಡುತ್ತಿದ್ದಾರೆ. ಅಂತರ್ಮುಖಿತ್ವ ಕಳೆದುಕೊಂಡು ಡಾಂಭಿಕರಾಗುತ್ತಿದ್ದಾರೆ, ಕೂಗುಮಾರಿಗಳಾಗುತ್ತಿದ್ದಾರೆ. ಇದಕ್ಕೆ ಪತ್ರಿಕಾ ಸಂಪಾದ ಕರೂ ಹೊರತಾಗಿಲ್ಲ. ಎಲ್ಲರಿಗೂ ಅರ್ನಾಬ್ ಗೋಸ್ವಾಮಿ ಸಿಂಡ್ರೋಮ್ ಹೊಡೆದಂತಿದೆ. ಕಿರುಚಿದರೆ, ಅಬ್ಬರಿಸಿದರೆ, ಕರಾಳ- ವಿಕರಾಳ ಮಾತಾಡಿದರೆ, ಜನರ ಗಮನ ಸೆಳೆಯಬಹುದು ಎಂದು ಭಾವಿಸಿದ್ದಾರೆ.
ಹೀಗಾಗಿ ತಮಗೊಪ್ಪದ ಪೋಷಾಕು ಧರಿಸಿ ಕೋಡಂಗಿಗಳಾಗುತ್ತಿದ್ದಾರೆ. ಮಾತು ಅವರನ್ನು ನುಂಗುತ್ತಿದೆ. ಬರವಣಿಗೆಗೆ ಬೇಕಾದ ಶ್ರದ್ಧೆ, ಶಿಸ್ತನ್ನು ಅವರು ಮಾತಿನಲ್ಲಿ ಉಲ್ಲಂಘಿಸುತ್ತಿದ್ದಾರೆ. ಒಮ್ಮೆ ವಾಚಾಳಿತನ ಅಮರಿಕೊಂಡಿತೆಂದರೆ, ಬರಹಕ್ಕೆ ಬೇಕಾದ ಅಧ್ಯಯನ, ಅಂತರಮುಖಿತ್ವ, ಆಂತರಿಕ ಅನುಸಂಧಾನಗಳೆಲ್ಲ ಗಾಳಿಯಲ್ಲಿ ತೇಲಿಹೋಗುತ್ತವೆ. ಇವೆಲ್ಲಾ ಬರಹಕ್ಕೆ ಬೇಡವಾದ ಸಲಕರಣೆಗಳು. ಅಷ್ಟಕ್ಕೂ ಬರಹದ ವಿರುದ್ಧಾರ್ಥವೇ ಮಾತು. ವಿಚಾರಗಳು ಕ್ಷೀಣವಾದಾಗ ಮಾತಿನ ಧಾಟಿ ಏರಲಾರಂಭಿಸುತ್ತದೆ. ಅಬ್ಬರವೇ ಅಂತರ ಶಿಸ್ತೀಯ ಗುಣವಾಗಿ ಮಾರ್ಪಡುತ್ತದೆ.
ಗುಣಗ್ರಾಹಿತ್ವದ ಖಾನೇಷುಮಾರಿತನ ಮಂದವಾಗುತ್ತದೆ. ಆಗ ಅಕ್ಷರಗಳನ್ನು ನೆಚ್ಚಿಕೊಂಡ ಪತ್ರಕರ್ತ ತನ್ನದಲ್ಲದ ಗುಣಗಳನ್ನು
ಮೈಗೂಡಿಸಿಕೊಳ್ಳುತ್ತಾನೆ, ತನ್ನದಲ್ಲದ ಪೋಷಾಕು ಧರಿಸುತ್ತಾನೆ. ಆಗ ಕೋಡಂಗಿಯಂತೆ ಕಾಣುತ್ತಾನೆ. ಪ್ರಿಂಟ್ ಪತ್ರಕರ್ತ ಸುಖ, ಸಮಾಧಾನ ಕಾಣಬೇಕಾದುದು ಅಕ್ಷರಗಳಲ್ಲಿಯೇ ಹೊರತು ಅಬ್ಬರಗಳಲ್ಲಿ ಅಲ್ಲ. ಮಾತು ಅವನ ಸಂಗಾತಿಯೂ ಅಲ್ಲ, ಸಲಕರಣೆಯೂ ಅಲ್ಲ. ಮಾತು ಅವನ ಮೌನವನ್ನು ಮುರಿಯುತ್ತದೆ. ಆತನ ಅಂತರಂಗದಲ್ಲಿ ಧೂಳೆಬ್ಬಿಸುತ್ತದೆ. ನಿಶ್ಯಬ್ದವನ್ನು ಘಾಸಿಗೊಳಿಸುತ್ತದೆ. ಮುದ್ರಿತ ಅಕ್ಷರಗಳ ಉಪಾಸನೆ ಮಾಡುವವರು, ಧ್ಯಾನಕ್ಕೆ ಕುಳಿತ ಮೌನಿ ಬಾಬಾಗಳು. ಅವರಿಗೆ ವಿಚಾರಗಳು ಅಕ್ಷರವಾಗಿ ಪರಿವರ್ತನೆಯಾಗಲು ಈ ಮೌನ, ಸಾವಧಾನ ಅತ್ಯಗತ್ಯ. ಮಾತು ಕರ್ಕಶ. ಅಕ್ಷರ ಮೌನ.
ಹೀಗಾಗಿ ಪತ್ರಿಕಾ ಸಂಪಾದಕರು, ಪ್ರಿಂಟ್ ಪತ್ರಕರ್ತರು ಅಕ್ಷರಗಳ ಗಮ್ಯ, ಸ್ವಾಮ್ಯ ಮತ್ತು ಪಾರಮ್ಯವನ್ನು ಮತ್ತೊಮ್ಮೆ ಮೆರೆಯ ಬೇಕಾಗಿದೆ. ಈ ಕೆಲಸವನ್ನು ಸಾಹಿತಿಗಳೂ ಮಾಡಬೇಕು. ಆದರೆ ಅವರ ದನಿ ಮಂಕಾಗಿದೆ. ಅವರು ಇನ್ನೂ ಕೆಲಕಾಲ ವಿಶ್ರಮಿಸಲಿ. ಆದ್ದರಿಂದ ಇದನ್ನು ಮಾಡಬೇಕಾದವರು ಪ್ರಿಂಟ್ ಪತ್ರಕರ್ತರು. ಅವರು ಹೋಗಿ ಹೋಗಿ ಕೆಮರಾ ಮುಂದೆ ನಿಂತು ಸ್ಟಾಂಡ್ ಅಪ್ ಕಾಮಿಡಿಯನ್ ಆಗಬಾರದು. ಆ ಕೆಲಸವನ್ನು ಬೇರೆಯವರಿಗೇ ಬಿಟ್ಟುಕೊಡಬೇಕು. ತಾನೂ ಪಬ್ಲಿಕ್ ಟಿವಿ ರಂಗಣ್ಣನಂತಾಗ ಬೇಕು ಎಂದು ಹಪಹಪಿಸಬಾರದು. ಆ ರೋಲ್ ಒಬ್ಬರಿಗಷ್ಟೇ ಮೀಸಲು ಎಂಬುದನ್ನು ಪತ್ರಕರ್ತರು ತಿಳಿದುಕೊಳ್ಳಬೇಕು. ಅದರ ಬದಲು ಪ್ರಿಂಟ್ ಪತ್ರಕರ್ತರು ಹೆಚ್ಚು ಬರೆಯಬೇಕು, ಬರೆಯಿಸಬೇಕು.
ಓದಬೇಕು, ಓದಿಸಬೇಕು. ಹೊಸ ಓದುಗರನ್ನು ಹುಟ್ಟುಹಾಕಬೇಕು. ಹುಟ್ಟಾ ಬರೆಯದವರಿಂದ ಬರೆಯಿಸಬೇಕು. ಅಕ್ಷರಗಳು ಹುಲುಸಾಗಿ ಬೆಳೆಯಲು, ಹೊಸ ಪೈರು ಕೊಯ್ಯಲು ಹವಣಿಸಬೇಕು. ಅಕ್ಷರಗಳ ಅನುಸಂಧಾನ ಮಾಡಬೇಕು. ಫೇಸ್ ಬುಕ್ ಲೈವ್, ಯೂ ಟ್ಯೂಬ್ ಪತ್ರಿಕಾವಿರೋಧಿ ಮಾಧ್ಯಮ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ ಅಕ್ಷರಗಳಿಂದ
ವಿಮುಖರಾಗಬಾರದು. ಅದು ವೃತ್ತಿಗೆ ಬಗೆಯುವ ಅಪಚಾರ. ಇದು ಮತ್ತೊಮ್ಮೆ ಪತ್ರಿಕೆಗಳನ್ನೂ ಕಟ್ಟುವ ಕಾಲ, ಮಾತಿನಿಂದ ಅಲ್ಲ, ಮಾಂತ್ರಿಕ ಅಕ್ಷರಗಳಿಂದ!