Friday, 3rd January 2025

Prof R G Hegde Column: ದೇಶದ ಚರಿತ್ರೆ ಅವರನ್ನು ಆದರದಿಂದ ಕಾಣಲಿದೆ

ಮೆಲುಕು

ಪ್ರೊ.ಆರ್‌.ಜಿ.ಹೆಗಡೆ

ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಅಥವಾ ನರೇಂದ್ರ ಮೋದಿ ಅವರ ಗ್ಲಾಮರ್, ನಿರ್ಣಯ ತೆಗೆದು ಕೊಳ್ಳುವ ಶಕ್ತಿ ಅಥವಾ ಪ್ರಚಂಡ ವ್ಯಕ್ತಿತ್ವ ಯಾವುದೂ ಇಲ್ಲದೆ ಪ್ರಧಾನಿಯಾಗಿ ದೇಶವನ್ನು 10 ವರ್ಷಗಳ
ಕಾಲ ಆಳಿದವರು ಮನಮೋಹನ್ ಸಿಂಗ್. ಅವರನ್ನು, ದೇಶಕ್ಕೆ ಅವರಿತ್ತ ಕೊಡುಗೆಯನ್ನು ಇತಿಹಾಸ ಹೇಗೆ ಗಮನಿಸಬೇಕು ಎಂಬುದು ಗಹನವಾದ, ಸಂಕೀರ್ಣವಾದ ಪ್ರಶ್ನೆ. ದೇಶದ ಆರ್ಥಿಕತೆಗೆ ಮಹತ್ತರ ತಿರುವು ನೀಡಿದ ಅವರನ್ನು ವಿಶ್ಲೇಷಿಸಬೇಕಾದರೆ ಹಲವು ವೈರುಧ್ಯಗಳನ್ನು ದಾಟಿಹೋಗಬೇಕು.

ದೇಶದ ಚರಿತ್ರೆಯ ಒಂದು ಘಟ್ಟದಲ್ಲಿ ‘ಉದ್ಭವಮೂರ್ತಿ’ಯಂತೆ ಬಂದು ಪ್ರಜ್ವಲಿಸಿದವರು ಮನಮೋಹನ್.
ಎಲ್ಲರಿಗೂ ಗೊತ್ತಿರುವಂತೆ ಆ ಘಟ್ಟದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ಸಮಾಜವಾದಿ ಆರ್ಥಿಕ ನೀತಿಯ ಭಾರದಲ್ಲಿ ಕುಸಿದುಬೀಳುವ ಹಂತದಲ್ಲಿತ್ತು. ಕೆಲ ದಿನಗಳಿಗಷ್ಟೇ ಸಾಲುವಷ್ಟು ವಿದೇಶಿ ವಿನಿಮಯ ಉಳಿದಿತ್ತು, ದೇಶದ ಬಂಗಾರವನ್ನು ಅಡವಿಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ದೇಶವನ್ನು ವಿದೇಶಿ ಬಂಡವಾಳ, ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಕಿಟಕಿಗಳಿಗೆ ತೆರೆದಿದ್ದು, ಭಾರತವನ್ನು
ಮಾರುಕಟ್ಟೆಯ ಆರ್ಥಿಕತೆಗೆ ಜೋಡಿಸಿದ್ದು, ತನ್ಮೂಲಕ ದೇಶದ ಆರ್ಥಿಕತೆಯು ಏರುಗತಿ ಕಾಣುವಂತೆ ಮಾಡಿದ್ದು ಅವರೇ.

ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ದೇಶದ ಹೊಸ ಆರ್ಥಿಕತೆಯ ಶಿಲ್ಪಿಗಳು; ಆದರೆ ಮನಮೋಹನ್‌ರು ದೇಶದ ಸೋಷಲಿಸ್ಟ್ ಆರ್ಥಿಕ ವ್ಯವಸ್ಥೆಯನ್ನು ಕಟ್ಟಿದವರು ಕೂಡ ಆಗಿದ್ದರು ಎಂಬುದನ್ನು ನೆನಪಿಡಬೇಕು. ಏಕೆಂದರೆ, ಹಣಕಾಸು ಸಚಿವರಾಗುವ ಮೊದಲು ಅವರು ಯೋಜನಾ ಆಯೋಗದ ಉಪಾಧ್ಯಕ್ಷ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಇಂಥ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದರು.

ಇಲ್ಲಿ ಮತ್ತೊಂದು ಸಂಗತಿಯನ್ನು ಗಮನಿಸಬೇಕು. ಮಧ್ಯಮ ವರ್ಗದವರಲ್ಲಿ ತಮಗಿದ್ದ ಅಪಾರ ಜನಪ್ರಿಯತೆಯ ನಡುವೆಯೂ ಮನಮೋಹನ್ ಸಿಂಗ್ ಅವರು ಇತರ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ, ವಾಜಪೇಯಿ, ನರೇಂದ್ರ ಮೋದಿಯವರಂತೆ ‘ಮಾಸ್ ಲೀಡರ್’ ಆಗಿ ಪರಿವರ್ತನೆಗೊಳ್ಳಲೇ ಇಲ್ಲ. ತಾವಿದ್ದ ಪಕ್ಷವನ್ನು ಗೆಲ್ಲಿಸಿ ಕೊಂಡು ಬಂದು ಪ್ರಧಾನಿಯಾದವರಲ್ಲ ಅವರು. ಎರಡನೆಯ ಅವಧಿಯಲ್ಲೂ ಅವರು ತಮ್ಮ ‘ಗವರ್ನರ್’ ರೀತಿಯ ವ್ಯಕ್ತಿತ್ವದಿಂದ ಹೊರಬರಲೇ ಇಲ್ಲ, ‘ಮಾಸ್ ಲೀಡರ್’ ಆಗುವೆಡೆಗೂ ಚಿತ್ತ ಹರಿಸಲಿಲ್ಲ. ‘ರಾಜಕೀಯ ವ್ಯಕ್ತಿತ್ವ’ ಬೆಳೆಸಿಕೊಳ್ಳುವ ಕುರಿತು ಅವರಿಗೆ ಆಸಕ್ತಿಯೇ ಇರಲಿಲ್ಲ ಎಂಬ ಮಾತು ಸತ್ಯವೆನಿಸುತ್ತದೆ.

ಹೆಚ್ಚು ಕಡಿಮೆ ‘ಪಕ್ಷ ರಾಜಕೀಯ’ದಿಂದ ದೂರವೇ ಉಳಿದಿದ್ದ ಅವರು, ಪ್ರಧಾನಿಯಾಗಿದ್ದರೂ ಪಕ್ಷದ ಯಾವುದೇ ಹುದ್ದೆಯನ್ನು ಹೊಂದಿರಲೇ ಇಲ್ಲ. 1991ರಲ್ಲಿ ಅಸ್ಸಾಂ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆ ಯಾದ ಮನಮೋಹನ್, 1995, 2001, 2007 ಮತ್ತು 2013ರಲ್ಲೂ ಪುನರಾಯ್ಕೆಗೊಂಡರು ಹಾಗೂ 1998-2004ರ ಅವಧಿಯಲ್ಲಿ, ಕೇಂದ್ರದಲ್ಲಿ ಬಿಜೆಪಿಯು ಅಧಿಕಾರದಲ್ಲಿದ್ದಾಗ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು.

ಈ ಮಧ್ಯೆ, 1999ರಲ್ಲಿ ದಕ್ಷಿಣ ದೆಹಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರಾದರೂ, ಗೆಲುವು ದಕ್ಕಲಿಲ್ಲ. ಅಂದರೆ, ಜನರಿಂದ ನೇರವಾಗಿ ಆಯ್ಕೆಯಾಗದೆಯೇ 10 ವರ್ಷಗಳಷ್ಟು ಸುದೀರ್ಘ ಕಾಲ ಭಾರತದಂಥ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿಯಾದ ಏಕೈಕ ವ್ಯಕ್ತಿ ಮನಮೋಹನ್ ಸಿಂಗ್. ಹಾಗೆಂದು, ಅವರಿಗೆ ದೇಶದಲ್ಲಿ ಜನಪ್ರಿಯತೆ ಇರಲಿಲ್ಲವೆಂದೇನೂ ಅಲ್ಲ, ಆದರೆ ಅದು ‘ರಾಜಕೀಯ ಸ್ವರೂಪ’ದ್ದಾಗಿರಲಿಲ್ಲವಷ್ಟೇ.

‘ರಾಜಕೀಯೇತರ ವ್ಯಕ್ತಿತ್ವ’ದ ಅವರು ಪ್ರಧಾನಿ ಗಾದಿಗೇರಿದಾಗ ಶುರುವಿನಲ್ಲಿ ಒಂದಷ್ಟು ಇರಿಸು-ಮುರಿಸು, ಟೀಕೆ ಗಳನ್ನು ಎದುರಿಸಬೇಕಾಗಿ ಬಂತು. ಆದರೆ ಇವೆಲ್ಲದರ ನಡುವೆಯೂ ಸಮತೋಲನ ಕಾಯ್ದುಕೊಂಡು, ತಮ್ಮ ಹೆಗಲೇರಿದ್ದ ಹೊಣೆಯನ್ನು ಸಾಕಷ್ಟು ಉತ್ತಮವಾಗಿ ಮತ್ತು ವೈಯಕ್ತಿಕ ಘನತೆಯನ್ನು ಕಳೆದುಕೊಳ್ಳದೆ ಅವರು ನಿರ್ವಹಿಸಿದರೆನ್ನಬೇಕು.

ಸಿಂಗ್ ಅವರು ರಾಜಕೀಯ ವಲಯವನ್ನು ಪ್ರವೇಶಿಸಿದ ಸಂದರ್ಭವೂ ಗಮನಾರ್ಹ. 1991ರಲ್ಲಿ ಪ್ರಧಾನಿಯಾಗಿ ಬಂದ ಪಿ.ವಿ.ನರಸಿಂಹರಾವ್, ಭಾರತದ ಆರ್ಥಿಕತೆಯು ದಿವಾಳಿಯ ಅಂಚಿನಲ್ಲಿದ್ದುದನ್ನು ಗಮನಿಸಿದ್ದರು. ಆರ್ಥಿಕತೆಗೆ ಸ್ಥಿರತೆ ನೀಡಿ ಭಾರತವನ್ನು ಸದೃಢ ದೇಶವಾಗಿ ಕಟ್ಟಲೆಂದು ಮನಮೋಹನ್ ಸಿಂಗ್‌ರನ್ನು ರಾವ್ ಆಮಂತ್ರಿಸಿದರು. ಈ ಆಹ್ವಾನವನ್ನು ಮೊದಲಿಗೆ ಸಿಂಗ್ ಒಪ್ಪಿರಲಿಲ್ಲ, ಆದರೆ ನರಸಿಂಹರಾಯರ ಆಗ್ರಹ
ತೀವ್ರವಾದಾಗ ಒಪ್ಪಬೇಕಾಗಿ ಬಂತು. ಹಾಗೆ ಅವರು ನಿರ್ವಹಿಸಬೇಕಾಗಿ ಬಂದುದು ಹಣಕಾಸು ಸಚಿವರ ಹುದ್ದೆಯನ್ನು. ಈ ನಿಟ್ಟಿನಲ್ಲಿ ಅವರು ನೀಡಿದ ಕೊಡುಗೆ ಅಮೋಘ ಎನ್ನಬೇಕು, ಅವರ ರಾಜಕೀಯ ವಿರೋಧಿ ಗಳದ್ದು ಕೂಡ ಈ ವಿಷಯದಲ್ಲಿ ಅಪಸ್ವರವಿರಲಿಲ್ಲ.

ಮನಮೋಹನ್ ಸಿಂಗ್‌ರ ಈ ಸಾಮರ್ಥ್ಯದಲ್ಲಿ ವಿಶ್ವಾಸವಿಟ್ಟೇ ಸೋನಿಯಾ ಗಾಂಧಿಯವರು ಅವರನ್ನು ಪ್ರಧಾನಿ
ಗದ್ದುಗೆಯಲ್ಲಿ ಕೂರಿಸಿದ್ದು. 2004ರಲ್ಲಿ ಮೈತ್ರಿಕೂಟದ ಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಸಹಜವಾಗಿಯೇ ಸೋನಿಯಾರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರೂ, ಅವರು ಕೈಗೊಂಡ ಅಚ್ಚರಿಯ ನಿರ್ಧಾರವು ಸಿಂಗ್‌ರನ್ನು ಪ್ರಧಾನಿಯನ್ನಾಗಿಸಿತು. ಅವರಿಗೆ ವಿತ್ತ ಸಚಿವ ಅಥವಾ ಪ್ರಧಾನಿಯಾಗುವ ಅರ್ಹತೆ ನಿಜಕ್ಕೂ ಇತ್ತು; ಆದರೂ ಭಾರತದಂಥ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟುಮಾತಾಡಿ ಯಾರನ್ನೂ ನೋಯಿಸದ, ಅಕಾಡೆಮಿಕ್ ಹಿನ್ನೆಲೆ ಮತ್ತು ಶೈಲಿಯ ಸಿಂಗ್‌ರಂಥ ವ್ಯಕ್ತಿ ಈ ಹುದ್ದೆಗಳನ್ನು ಅಲಂಕರಿಸಿದ್ದು, ದೇಶದ
ರಾಜಕೀಯ ಇತಿಹಾಸದ ಸಾಂಪ್ರದಾಯಿಕತೆಗೆ ಹೊರತಾದದ್ದು ಮತ್ತು ವಿಭಿನ್ನವಾಗಿ ನಿಲ್ಲುವಂಥದ್ದು ಎನ್ನಲಡ್ಡಿ ಯಿಲ್ಲ.

ಮತ್ತೊಂದು ವಿಶೇಷವೆಂದರೆ, ಬಹುಸಂಖ್ಯಾತರೇನೂ ಅಲ್ಲದ ಸಿಖ್ ಸಮುದಾಯಕ್ಕೆ ಸೇರಿದ್ದವರು ಸಿಂಗ್; ಇದು ಕೂಡ ದೇಶದ ರಾಜಕೀಯದ ಅಚ್ಚರಿ, ನಮ್ಮ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು ಎಂಬುದರ ದ್ಯೋತಕ. “ತಮ್ಮ ಮೊದಲ ಅಽಕಾರಾವಽಯಲ್ಲಿ ಸಿಂಗ್ ದೇಶವನ್ನು ಜಾಗತೀಕರಣದ ಹಳಿಯ ಮೇಲೆ ಸ್ಥಿರವಾಗಿ ನಿಲ್ಲಿಸಿದ್ದು ಹೌದು. ಈ ಪರಿಕಲ್ಪನೆಯು ದೇಶಕ್ಕೆ ಒಳ್ಳೆಯದು ಮಾಡಿದರು ಕೂಡ, ವಿಶೇಷವಾಗಿ ಪಕ್ಷದ ಪರಂಪರಾ ನುಗತ ಮತಬ್ಯಾಂಕುಗಳನ್ನು ಅಲುಗಾಡಿಸಿಬಿಟ್ಟಿತು ಮತ್ತು ಚುನಾವಣಾ ರಾಜಕೀಯದಲ್ಲಿ ಪಕ್ಷಕ್ಕೆ ಹೊಡೆತ ನೀಡಿಬಿಟ್ಟಿತು; ಈ ಕಾರಣದಿಂದಾಗಿಯೇ ಅವರು ತಮ್ಮ ಎರಡನೇ ಅವಧಿಯಲ್ಲಿ, ಮಾರುಕಟ್ಟೆ ಆರ್ಥಿಕತೆಯನ್ನು ಮುಂದೊಯ್ಯುವ ವೇಗವನ್ನು ಕಡಿಮೆ ಮಾಡಿದರು” ಎಂಬ ಅಭಿಪ್ರಾಯವಿದೆ.

ಕೆಲ ಸಂದರ್ಭಗಳಲ್ಲಿ ಮನಮೋಹನ್ ಸಿಂಗ್ ವಿಪಕ್ಷಗಳಿಗಿಂತ ಹೆಚ್ಚಾಗಿ ಸ್ವಪಕ್ಷದೊಳಗಿಂದಲೇ ಹೆಚ್ಚಿನ ಒತ್ತಡ ವನ್ನು ಎದುರಿಸುತ್ತಿದ್ದಂತಿತ್ತು ಎನ್ನುವ ಮಾತುಗಳಿವೆ. ಹಾಗೆಯೇ, ಸ್ವತಃ ಅಕಳಂಕಿತ ವ್ಯಕ್ತಿತ್ವದವರಾಗಿದ್ದ ಅವರ ಅವಧಿಯಲ್ಲಿ ಹಲವು ದೊಡ್ಡ ಹಗರಣಗಳು ಹೊರ ಬಂದುಬಿಟ್ಟವು ಎಂಬುದೂ ಸತ್ಯವೇ. ಆದರೆ, ಸಿಂಗ್‌ರ ಕೊಡುಗೆ ಯನ್ನು, ಈ ವೈರುಧ್ಯಗಳ ಆಚೆ ನಿಂತು ನೋಡಬೇಕು; ಆಗ ಮಾತ್ರವೇ ದೇಶಕ್ಕೆ ಅವರು ನೀಡಿದ ಅಪೂರ್ವ ಕೊಡುಗೆ ಗಳು ಕಾಣಿಸಿಯಾವು. ಅವುಗಳ ಪೈಕಿ ಎದ್ದು ಕಾಣುವಂಥದ್ದು, ನಂದನ್ ನಿಲೇಕಣಿ ನೇತೃತ್ವದಲ್ಲಿ ಆರಂಭಿಸ
ಲಾದ ‘ವಿಶಿಷ್ಟ ಗುರುತಿನ ಚೀಟಿ’ (ಆಧಾರ್) ಯೋಜನೆ. ಅಗಾಧ ಸವಾಲು-ಸಂಕೀರ್ಣತೆಯನ್ನು ಒಳಗೊಂಡಿದ್ದ ಈ ಯೋಜನೆ ಇಂದು ಜನರಿಗೆ ಮತ್ತು ಸರಕಾರಕ್ಕೆ ಹಲವು ನೆಲೆಯಲ್ಲಿ ಸಹಕಾರಿಯಾಗಿದೆ. ಜನರನ್ನು ಗುರುತಿಸುವುದಕ್ಕೆ, ಸರಕಾರದ ಯೋಜನೆಗಳು ಅವರನ್ನು ತಲುಪುವಂತಾಗುವುದಕ್ಕೆ ಇದು ಮಾರ್ಗೋಪಾಯವಾಗಿದೆ. ಬ್ಯಾಂಕಿಂಗ್ ಸವಲತ್ತು ಸೇರಿದಂತೆ ಅನೇಕ ಪ್ರಯೋಜನಗಳು ಬಡವರಿಗೆ ನೇರವಾಗಿ ತಲುಪುವಂತಾಗುವುದಕ್ಕೆ ನಾಂದಿ ಹಾಡಿದ ಯೋಜನೆಯಿದು.

ಹಾಗೆಯೇ, ಅವರು ಜಾರಿಗೆ ತಂದ ‘ಮಾಹಿತಿ ಹಕ್ಕು ಕಾಯ್ದೆ’ಯನ್ನು ಮರೆಯಲಾದೀತೇ? ವ್ಯಂಗ್ಯವೆಂದರೆ, ಅವರ
ಅಧಿಕಾರಾವಧಿಯ ಹಲವು ಹಗರಣಗಳನ್ನು ಬಯಲು ಮಾಡಿದ್ದು ಈ ಕಾಯ್ದೆಯಲ್ಲಿದ್ದ ಅವಕಾಶಗಳೇ. ಮಾಹಿತಿ ಹಕ್ಕು ಕಾಯ್ದೆಯು ದೇಶದಲ್ಲಿನ ಭ್ರಷ್ಟಾಚಾರವನ್ನು ಮತ್ತು ಕಾನೂನುಬಾಹಿರ ಕೃತ್ಯಗಳನ್ನು ಹೊರಗೆಳೆವಲ್ಲಿ ನೆರವಾಗಿ ಪ್ರಜಾಪ್ರಭುತ್ವಕ್ಕೆ ಒಂದು ನಿಜವಾದ ಅರ್ಥನೀಡಿದೆ ಎಂಬುದರಲ್ಲಿ ಸಂಶಯವಿಲ್ಲ. ರಾಷ್ಟ್ರೀಯ ಗ್ರಾಮೀಣ ಸ್ವಾಸ್ಥ್ಯ ಮಿಷನ್, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂಥ ಮಹತ್ವದ ಉಪಕ್ರಮಗಳನ್ನು ಜಾರಿಗೆ ತಂದಿದ್ದು ಸಿಂಗ್ ಅವರೇ.

ಬಹುಶಃ, ಇವೆಲ್ಲಕ್ಕಿಂತಲೂ ಮಹತ್ವದ್ದು ಮನಮೋಹನ್ ಸಿಂಗ್ ಅವರ ಸರಳ, ಸಜ್ಜನಿಕೆಯ, ನಿರಾಡಂಬರದ ವ್ಯಕ್ತಿತ್ವ. ದಕ್ಷಿಣ ದೆಹಲಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧಿಸಿದಾಗ ಖ್ಯಾತ ಪತ್ರಕರ್ತ ಖುಷ್ವಂತ್ ಸಿಂಗ್‌ರಿಂದ ಸಾಲ ಪಡೆದಿದ್ದರಂತೆ, ನಂತರ ಪೈಸೆ ಬಿಡದಂತೆ ಅದನ್ನು ಹಿಂದಿರುಗಿಸಿದರಂತೆ. ಈ ಪ್ರಸಂಗವನ್ನು ‘ಆಬ್ಸಲ್ಯೂಟ್ ಖುಷ್ವಂತ್’ ಎಂಬ ತಮ್ಮ ಪುಸ್ತಕದಲ್ಲಿ ಖುಷ್ವಂತ್ ಸಿಂಗ್ ಹೇಳಿಕೊಂಡಿದ್ದಾರೆ.

ಮನಮೋಹನ್ ಸಿಂಗ್‌ರನ್ನು ‘ನ್ಯೂಸ್‌ವೀಕ್’ ಪತ್ರಿಕೆಯು ‘ನಾಯಕರು ಪ್ರೀತಿಸುವ ನಾಯಕ’ ಎಂದು ವರ್ಣಿಸಿದರೆ,
‘ಟೈಮ್’ ಪತ್ರಿಕೆಯು ‘ಜಗತ್ತಿನ ಸೂಪರ್ ಪವರ್ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಿದ ನಾಯಕ’ ಎಂದು ಹಾಡಿಹೊಗಳಿದೆ. ‘ಮನಮೋಹನ್ ಸಿಂಗ್‌ರನ್ನು ಇಡೀ ಜಗತ್ತು ಗೌರವದಿಂದ ಸ್ಮರಿಸಿಕೊಳ್ಳುತ್ತದೆ’ ಎಂದು ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದೂ ಇಲ್ಲಿ ಉಲ್ಲೇಖನೀಯ.

ಪ್ರಧಾನಿ ಹುದ್ದೆಯನ್ನು ನಿಜಕ್ಕೂ ಒಂದು ‘ಸೇವಾಮಾಧ್ಯಮ’ವಾಗಿ ನೋಡಿದವರು ಮನಮೋಹನ್ ಸಿಂಗ್. ಅವರಿಗೆ
ವೈಯಕ್ತಿಕವಾದ ಯಾವುದೇ ಆಸೆ-ಆಕಾಂಕ್ಷೆಗಳಿರಲಿಲ್ಲ. ವೈಯಕ್ತಿಕ ಅವಮಾನ, ಟೀಕೆ-ಟಿಪ್ಪಣಿಗಳನ್ನು ಕೂಡ ನುಂಗಿಕೊಂಡು ದೇಶಕ್ಕಾಗಿ ಮನಃಪೂರ್ವಕವಾಗಿ ದುಡಿದವರು ಅವರು. ಬಹುಶಃ ಈ ಕಾರಣಕ್ಕಾಗಿಯೇ ಅವರಿಗೆ ಪಕ್ಷಾತೀತವಾಗಿ ಪ್ರೀತಿ-ಗೌರವ ಲಭಿಸಿದ್ದು. ದೇಶದ ಚರಿತ್ರೆಯು ಅವರನ್ನು ಆದರದಿಂದ ಕಾಣಲಿದೆ ಎಂಬುದಂತೂ ಸತ್ಯ.

(ಲೇಖಕರು ನಿವೃತ್ತ ಪ್ರಾಂಶುಪಾಲರು ಮತ್ತು ಸಂವಹನ ಸಲಹೆಗಾರರು)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ