Wednesday, 27th November 2024

Prof R G Hegde Column: ವಿದ್ಯಾರ್ಥಿಗಳಿಗೆ ಸಾಫ್ಟ್‌ ಸ್ಕಿಲ್‌ ಏಕೆ ಅಗತ್ಯ ?

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ಹಲವು ಕೌಶಲಗಳನ್ನು ಒಳಗೊಂಡಿರುವಂಥದ್ದು ‘ಸಾಫ್ಟ್ ಸ್ಕಿಲ್ಸ್’ ಅಥವಾ ‘ಲೈಫಗ ಸ್ಕಿಲ್ಸ್’ ಎಂಬ ಪಠ್ಯಕ್ರಮ. ಈ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಏಕೆ ಕಲಿಸಬೇಕು ಎಂಬುದನ್ನು ಹೇಳುವುದಕ್ಕೂ ಮುನ್ನ, ನಮ್ಮ ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿನ ಕೆಲವು ನ್ಯೂನತೆಗಳನ್ನು ವಿವರಿಸಬೇಕು. ಏಕೆಂದರೆ ಇಂಥ ನ್ಯೂನತೆಗಳನ್ನು ನಿವಾರಿಸ ಲೆಂದೇ ಹುಟ್ಟಿಕೊಂಡಿರುವಂಥದ್ದು ‘ಸಾಫ್ಟ್ ಸ್ಕಿಲ್ಸ್’ ಪಠ್ಯಕ್ರಮ.

ಈಗ ಒಂದೊಂದೇ ನ್ಯೂನತೆಯನ್ನು ಅವಲೋಕಿಸೋಣ. ತಾಂತ್ರಿಕ ಶಿಕ್ಷಣವನ್ನು ಬಿಟ್ಟು ಇಡೀ ಶಿಕ್ಷಣ ವ್ಯವಸ್ಥೆ
ಮುಖ್ಯವಾಗಿ ತೊಡಗಿಸಿಕೊಂಡಿರುವುದು ಮಾಹಿತಿಯ ನೀಡುವಿಕೆಯಲ್ಲಿ (ಈ ಮಾಹಿತಿಯನ್ನೇ ಸ್ಪೂರ್ತಿದಾಯಕ ವಾಗಿಸುವ ಶಿಕ್ಷಕರು ಇಲ್ಲವೆಂದೇನಲ್ಲ, ಆದರೆ ಅಂಥವರ ಸಂಖ್ಯೆ ಕಡಿಮೆ). ವಿಶೇಷವೆಂದರೆ, ಈ ಮಾಹಿತಿಯದ್ದು ‘ಏಕಮುಖ ಸಂಚಾರ’. ಅಂದರೆ, ಮಾಹಿತಿಯು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಹರಿಯುತ್ತದೆ; ಆದರೆ ಮಾಹಿತಿಯು ಹರಿಯುವ ವಿಧಾನವನ್ನು, ಅದರ ವಸ್ತುನಿಷ್ಠತೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸುವಂತಿಲ್ಲ ಮತ್ತು ಮಾಹಿತಿ ಶೇಖರ ವಾದ ಅಳತೆ ಆಧರಿಸಿ ವಿದ್ಯಾರ್ಥಿಗೆ ಅಂಕಗಳು ಸಿಗುತ್ತವೆ! ವಿಷಾದವೆಂದರೆ, ಇದು ತುಂಬ ಸಾರ್ವತ್ರಿಕ ವಾದ, ಫೋಕಸ್ ಇಲ್ಲದ, ಪರೀಕ್ಷೆ ಮುಗಿಯುತ್ತಿದ್ದಂತೆ ಅಪ್ರಸ್ತುತವಾಗಿ ಹೋಗುವ ಮಾಹಿತಿಯಾಗಿರುತ್ತದೆ.

ಉದಾಹರಣೆಗೆ, ಇತಿಹಾಸದ ಕಲಿಕೆಯಲ್ಲಿ, ಒಂದು ಕಾಲದಲ್ಲಿದ್ದ ಬಟ್ಟೆ ನೇಯುವಿಕೆ, ನೀರು ಬಳಸಿಕೊಳ್ಳುವಿಕೆ, ಬಣ್ಣಗಾರಿಕೆ, ಲೋಹ ತಯಾರಿಕೆ, ಕಟ್ಟಡ ನಿರ್ಮಾಣ, ಆಹಾರ ಪದ್ಧತಿ, ಗಿಡಮೂಲಿಕೆ ಔಷಧಿಗಳ ತಯಾರಿಕೆ ಇತ್ಯಾದಿ ವಿಷಯಗಳು ಯಾವ ಹಂತದಲ್ಲೂ ಬರುವುದಿಲ್ಲ. ಬರೀ ಒಂದು ಕಥೆ ಹೇಳುವಿಕೆಯೇ ಬಹುತೇಕವಾಗಿ ಇತಿಹಾಸದ ಬೋಧನೆಯಾಗಿಬಿಟ್ಟಿದೆ.

ಮಾತ್ರವಲ್ಲ, ವಿಜ್ಞಾನ ಮತ್ತು ವಾಣಿಜ್ಯ ಶಾಸ್ತ್ರಗಳು, ಭಾಷೆಗಳನ್ನು ಅವನ್ನು ಹೇಳುವಿಕೆಯ ವಿಧಾನದಲ್ಲಿ
ಕಥೆಗಳನ್ನಾಗಿಸಿಬಿಟ್ಟಿದ್ದೇವೆ. ಅಂದರೆ, ಕೇಳಿಸಿಕೊಂಡ ನಂತರ ವಿದ್ಯಾರ್ಥಿಯು ಆ ಜ್ಞಾನವನ್ನು ಎಲ್ಲಿ ಬಳಸಿಕೊಳ್ಳ ಬಹುದು ಎಂಬ ಪ್ರಶ್ನೆ ಅಲ್ಲಿ ಮೂಡುವುದೇ ಇಲ್ಲ. ಕ್ರಿಟಿಕಲ್ ಥಿಂಕಿಂಗ್, ಕ್ರಿಯೇಟಿವ್ ಥಿಂಕಿಂಗ್, ಅನಲಿಟಿಕಿಲ್ ಥಿಂಕಿಂಗ್ ಮತ್ತು ‘ಔಟ್ ಆಫ್ ದಿ ಬಾಕ್ಸ್’ ಥಿಂಕಿಂಗ್ ಪ್ರಕ್ರಿಯೆಗಳು ಅಲ್ಲಿ ನಡೆಯುವುದೇ ಇಲ್ಲ. ಅಂಥ ಆಲೋಚನಾ ತಂತ್ರಗಳನ್ನೂ ಅಲ್ಲಿ ಕಲಿಸಲಾಗುವುದಿಲ್ಲ.‌

ಅಂದರೆ, ನಿರ್ದಿಷ್ಟ ಮಾಹಿತಿಯನ್ನು ಜ್ಞಾನವನ್ನಾಗಿ, ಕೌಶಲವನ್ನಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳುವುದೇ ಇಲ್ಲ. ಈ ಪರಿಪಾಠವು ವಿದ್ಯಾರ್ಥಿಗಳ ಸಹಜ ಕುತೂಹಲ, ಪ್ರಶ್ನಿಸುವ ಗುಣ, ಸೃಜನಶೀಲ ಹುಡುಗಾಟಿಕೆ
ಮತ್ತು ಚಟುವಟಿಕೆಗಳನ್ನು ನಾಶಮಾಡಿ, ಅವರನ್ನು ‘ನಿಷ್ಕ್ರಿಯ’ ವ್ಯಕ್ತಿಗಳನ್ನಾಗಿಸಿಬಿಡುತ್ತದೆ. ವಿದ್ಯಾರ್ಥಿಗಳ
ಮನಸ್ಸನ್ನು ಹತ್ತಿಕ್ಕಿಬಿಡುತ್ತದೆ. ಏಕೆಂದರೆ ಅವರು ಪ್ರಶ್ನೆ ಕೇಳುವಂತಿಲ್ಲ, ಶಿಕ್ಷಕರು ಹೇಳಿದ್ದನ್ನು ಸುಮ್ಮನೆ ಕೇಳಿಸಿ ಕೊಂಡು ಅದನ್ನೇ ಬರೆಯಬೇಕು. ಹೀಗೆ ಶಿಕ್ಷಣವು ವಿದ್ಯಾರ್ಥಿಗಳ ಮನಸ್ಸನ್ನು ಒಂದು ರೀತಿಯಲ್ಲಿ ದಾಸ್ಯಕ್ಕೆ
ದೂಡುತ್ತದೆ, ಆತ್ಮವಿಶ್ವಾಸವನ್ನು ನಾಶಮಾಡಿಬಿಡುತ್ತದೆ.

ಮುಖ್ಯವಾಗಿ, ಜನರಲ್ ಪದವಿ ಮುಗಿಸಿದ ನಮ್ಮ ವಿದ್ಯಾರ್ಥಿಗಳಲ್ಲಿ ಹಲವರಿಗೆ ಸೃಜನಶೀಲತೆ ಮತ್ತು ಆತ್ಮ ವಿಶ್ವಾಸವೇ ಇಲ್ಲದಿರುವುದರ ಕಾರಣವಿದು. ನಮ್ಮ ವ್ಯವಸ್ಥೆಗೆ ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ
ಸಶಕ್ತರನ್ನಾಗಿಸುವ ಗುರಿ ಇಲ್ಲವೇ ವಿಲ್ಲ. ಉದಾಹರಣೆಗೆ, ಮಕ್ಕಳ ಹೃದಯದ ಆಳಕ್ಕಿಳಿದು ಅವರಲ್ಲಿ ಸ್ಪೂರ್ತಿ,
ಧೈರ್ಯ, ಚೈತನ್ಯ, ಸಕಾರಾತ್ಮಕತೆ, ಸಂತೋಷ, ಮೌಲ್ಯಗಳನ್ನು ತುಂಬಿ ಹುರಿದುಂಬಿಸಿ, ವೈಯಕ್ತಿಕ ಸವಾಲು ಗಳನ್ನು ಎದುರಿಸಬಲ್ಲ, ಸುಸ್ಥಿರ ಸಮಾಜವೊಂದನ್ನು ಕಟ್ಟಬಲ್ಲ ನಾಗರಿಕರನ್ನಾಗಿ ಅವರನ್ನು ಗಟ್ಟಿಗೊಳಿಸುವುದು, ತಂತಮ್ಮ ‘ಕಂಫರ್ಟ್ ಝೋನ್’ನಿಂದ ಹೊರಬಂದು ಬದುಕನ್ನು ವಿಸ್ತರಿಸಿಕೊಳ್ಳುವುದನ್ನು ಅವರಿಗೆ ಕಲಿಸುವುದು ಇತ್ಯಾದಿಗಳು ನಮ್ಮ ವ್ಯವಸ್ಥೆಯಲ್ಲಿಲ್ಲ.

ಹಾಗೆಯೇ ಅದು ವಿದ್ಯಾರ್ಥಿಗಳನ್ನು ಬಿಡಿಬಿಡಿಯಾಗಿ ಮಾನವ ಸಂಪನ್ಮೂಲಗಳಂತೆ ನೋಡುವುದೇ ಇಲ್ಲ; ಬದಲಾಗಿ ‘ಮಾಸ್ ಸ್ಕೇಲ್’ನಲ್ಲಿ ತಯಾರಿಸಿದ ಇಟ್ಟಿಗೆಗಳಂತೆ ಅವರನ್ನು ಒಂದೇ ಅಳತೆಯಲ್ಲಿ ನೋಡುತ್ತದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಅವರ ಆತ್ಮವಿಶ್ವಾಸ, ಹಾಸ್ಯಪ್ರಜ್ಞೆ, ಚೇತನ, ಉತ್ಸಾಹ ಎಲ್ಲವೂ ಬತ್ತಿಹೋಗುತ್ತವೆ.

ಇತ್ತೀಚೆಗಂತೂ ಶಾಲೆಗಳು ಕೇವಲ ಕೋಚಿಂಗ್ ಸೆಂಟರ್ ಗಳಾಗಿಬಿಟ್ಟಿವೆ. ವಿದ್ಯಾರ್ಥಿಗಳಿಂದ ಪರೀಕ್ಷೆಯಲ್ಲಿ ಭರ್ಜರಿ ಅಂಕಗಳನ್ನು ತೆಗೆಸುವುದಷ್ಟೇ ಅವುಗಳ ಗುರಿ. ಉತ್ತಮ ಅಂಕಗಳೂ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಮಕ್ಕಳ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯ ಇಲ್ಲಿ ಮುಖ್ಯ ವಿಷಯವಾಗಬೇಕು. ಇದನ್ನು ನಮ್ಮ ವ್ಯವಸ್ಥೆ ಗಮನಿಸುವುದೇ ಇಲ್ಲ. ಇಡೀ ದಿನ ತರಗತಿಗಳು. ಪಿಯುಸಿ ವಿಜ್ಞಾನ ವಿಭಾಗದ ೨ನೇ ವರ್ಷದವರ ಗೋಳನ್ನಂತೂ ಕೇಳುವುದೇ ಬೇಡ- ಬೆಳಗ್ಗೆ ೭ ಗಂಟೆಯಿಂದ ಸಾಯಂಕಾಲ ೭ರವರೆಗೂ ತರಗತಿಗಳೇ! ಅವರ ಧಾರಣ ಸಾಮರ್ಥ್ಯ ಏನು, ಎಷ್ಟು ಎನ್ನುವ ಕಲ್ಪನೆ ಈ ತರಗತಿಗಳಿಗೆ ಇಲ್ಲ. ಇದೇ ನಮ್ಮ ವ್ಯವಸ್ಥೆಯಾಗಿರುವುದರಿಂದ ಮಕ್ಕಳು ಮತ್ತು ಪಾಲಕರು ಅನಿವಾರ್ಯವಾಗಿ ಅದಕ್ಕೆ ಹೊಂದಿಕೊಳ್ಳಲೇಬೇಕು. ಇಂಥ ಶಿಕ್ಷಣವು ಮಕ್ಕಳಲ್ಲಿನ ‘ಮುಂದಾಳುತನ’, ‘ತೊಡಗಿಸಿಕೊಳ್ಳುವಿಕೆ’, ‘ಉಪಕ್ರಮಶಕ್ತಿ’ ಇತ್ಯಾದಿಗಳನ್ನು ನುಂಗಿಹಾಕಿಬಿಡುತ್ತದೆ.

I was born intelligent; But schools ruined me! ಎಂಬ ಬರ್ನಾರ್ಡ್ ಶಾ ಅವರ ಮಾತು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ. ಮತ್ತೊಂದು ವಿಷಯವೆಂದರೆ, ಇಂದು ಬಹುತೇಕ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ, ಮಕ್ಕಳೂ ಕಡಿಮೆ. ಅವರನ್ನು ಮುದ್ದು ಮಾಡಿ ಬೆಳೆಸಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಅವರಿಗೆ ಮನೆಗೆಲಸವನ್ನು ಹೇಳುವುದೇ ಇಲ್ಲ ಮತ್ತು ಹೊರಜಗತ್ತಿನ ಕಷ್ಟಗಳು-ಕಿರಿಕಿರಿಗಳಿಂದ ಅವರನ್ನು ಸಂಪೂರ್ಣವಾಗಿ ರಕ್ಷಿಸಿ ಬೆಳೆಸಲಾಗುತ್ತದೆ. ಮಕ್ಕಳನ್ನು ಬಿಸಿಲಲ್ಲಿ-ಮಣ್ಣಲ್ಲಿ ಆಡುವುದಕ್ಕೆ, ಮಳೆಯಲ್ಲಿ ನೆನೆಯುವುದಕ್ಕೆ, ಬಸ್ಸುಗಳಲ್ಲಿ ಅಡ್ಡಾಡುವುದಕ್ಕೆ ಬಿಡುವುದಿಲ್ಲ, ಮಾರುಕಟ್ಟೆಗೆ ಕಳಿಸುವುದಿಲ್ಲ. ಮಕ್ಕಳ ಪ್ರತಿ ಯೊಂದು ಕೆಲಸವನ್ನೂ ಹೆತ್ತವರೇ ಮಾಡಿಕೊಡುತ್ತಾರೆ.

ಬ್ಯಾಗ್ ಭಾರವಾದರೆ ಹೊರುತ್ತಾರೆ, ಹೋಂವರ್ಕ್ ಮಾಡಿಕೊಡುತ್ತಾರೆ. ಮನೆಗೆ ಬಂದ ಅತಿಥಿಗಳ ಜತೆ ಉಭಯ ಕುಶಲೋಪರಿ ಮಾತಿಗಿಳಿಯುವ ಸಂಸ್ಕಾರವನ್ನೂ ಮಕ್ಕಳಿಗೆ ಕಲಿಸುವುದಿಲ್ಲ. ಹೀಗಾಗಿ ಮಕ್ಕಳು ಪಂಜರದ ಗಿಳಿ ಗಳಂತೆ, ಸಾಕಿದ ಚಿಗರೆ ಮರಿಗಳಂತೆ ಬೆಳೆಯುತ್ತಾರೆ. ಅವರಿಗೆ ಓಡುವುದು, ಹಾರುವುದು, ಜಿಗಿಯುವುದು, ಮುಗ್ಗರಿಸಿ ಬಿದ್ದು ಪೆಟ್ಟು ಮಾಡಿಕೊಳ್ಳುವುದು ತಿಳಿದಿರುವುದಿಲ್ಲ, ಮರಕೋತಿ ಆಟ ಗೊತ್ತಿರುವುದಿಲ್ಲ. ಹಿಂದೆಲ್ಲಾ ಹೆತ್ತವರು ಮಕ್ಕಳನ್ನು ತೋಟಗಳಿಗೆ ಕಳಿಸುತ್ತಿದ್ದರು, ಗದ್ದೆಗಳಲ್ಲಿ ಕೆಲಸ ಮಾಡಿಸುತ್ತಿದ್ದರು, ಸ್ವಂತ ಉದ್ದಿಮೆಯಿದ್ದರೆ ಮಕ್ಕಳನ್ನು ಗಲ್ಲಾಪೆಟ್ಟಿಗೆಯ ಮೇಲೆ ಕೂರಿಸುತ್ತಿದ್ದರು, ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಿಸುತ್ತಿದ್ದರು. ಈಗ ಅದೆಲ್ಲಾ ಇಲ್ಲ!

ಇಂಥ ಸಾಮಾಜಿಕ ಸ್ಥಿತಿಯಿಂದಾಗಿ ಮಕ್ಕಳು ಕೇವಲ ಪುಸ್ತಕದ ಹುಳುಗಳಾಗಿ, ಏಕಾಂಗಿಗಳಾಗಿ, ಅಂತರ್ಮುಖಿಗಳಾಗಿ ಬೆಳೆಯುತ್ತಿದ್ದಾರೆ. ಅವರು ಗುಂಪುಗಳಲ್ಲಿ ಬೆರೆಯುವುದಿಲ್ಲ-ಬೆಳೆಯುವುದಿಲ್ಲ. ಮನೆಯಿಂದ ಹೊರಗೆ ಹೆಜ್ಜೆಯಿಟ್ಟು ಜನರ ಜತೆ ಸೇರಿ ಮಾತಾಡುವುದು, ವ್ಯವಹಾರ ಮಾಡುವುದು ಇತ್ಯಾದಿ ತಿಳಿವಳಿಕೆಯಿಂದ ಅವರು ವಂಚಿತರು. ಒಟ್ಟಾರೆಯಾಗಿ ಹೇಳುವುದಾದರೆ, ಸಮಾಜದೊಂದಿಗೆ ಹೇಗೆ ಬದುಕಬೇಕು ಎಂಬ ಪರಿಕಲ್ಪನೆ ಇಂಥ ಮಕ್ಕಳಲ್ಲಿ ಕಡಿಮೆ. ಸಹಜವಾಗಿಯೇ ಅವರಲ್ಲಿ ಹೊಂದಾಣಿಕೆಯ ಸ್ವಭಾವವೂ ಕಾಣದಂತಾಗುತ್ತದೆ.

ಸ್ಮಾರ್ಟ್ ಫೋನ್ ಮತ್ತು ಇಂಟರ್‌ನೆಟ್ ಇಂಥವರ ಸಂಗಾತಿಗಳಾಗುತ್ತವೆ. ಹೀಗಾಗಿ ಚಿಕ್ಕ ತಪ್ಪು ಅಥವಾ ದುರ್ಘಟನೆ ಯಾದರೂ ಆತ್ಮಹತ್ಯೆಯ ತನಕ ಹೋಗುವವರೆಗಿನ ಮಾನಸಿಕ ದೌರ್ಬಲ್ಯ ಇಂಥ ಮಕ್ಕಳಲ್ಲಿ ಕಂಡುಬರುವುದು ಸಾಮಾನ್ಯವಾಗುತ್ತಿದೆ. ಸೋಲು ಸ್ವೀಕರಿಸುವ, ಮತ್ತೆ ಎದ್ದುನಿಲ್ಲುವ ಮಾನಸಿಕ ಗಟ್ಟಿತನ, ಚಾಲಾಕಿತನ ಅವರಲ್ಲಿ ಕಡಿಮೆಯಾಗುತ್ತಿದೆ. ಕಾರಣ ವರ್ಷಗಟ್ಟಲೆ ಮಾನಸಿಕವಾಗಿ ಕಟ್ಟಿಹಾಕಲ್ಪಟ್ಟ ಅವರಿಗೆ ಹಳೆಯ ಬಂಧನಗಳಿಂದ ಬಿಡಿಸಿಕೊಳ್ಳಲು ಬರುವುದೇ ಇಲ್ಲ. ‌

ಸಾಫ್ಟ್ ಸ್ಕಿಲ್ ಅಂದರೇನು ಎಂದು ಈಗ ಹೇಳಬೇಕು. ಮೇಲೆ ಉಲ್ಲೇಖಿಸಲಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ
ಕೊರತೆಗಳನ್ನು ತುಂಬುವುದು ಸಾಫ್ಟ್ಸ್ಕಿಲ್‌ನ ಉದ್ದೇಶ.‌ ನ್ಯೂನತೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವುಮೂಡಿಸಿ,
ನಂತರ ಅವರನ್ನು ಆ ಮನಸ್ಥಿತಿಯಿಂದ ಕ್ರಮೇಣವಾಗಿ ಹೊರತಂದು, ಜೀವನ್ಮುಖಿ ಗುಣ-ವೈಶಿಷ್ಟ್ಯಗಳನ್ನು
ತುಂಬುವ ಗುರಿಹೊಂದಿರುವ ಪಠ್ಯಕ್ರಮವೇ ಸಾಫ್ಟ್ ಸ್ಕಿಲ್.‌ ಇದನ್ನು ಕಲಿಸುವುದರ ಹಿಂದೆ ಸಾಕಷ್ಟು ಉದಾತ್ತ
ಉದ್ದೇಶಗಳಿವೆ. ವಿದ್ಯಾರ್ಥಿಗಳಲ್ಲಿ ಒಂದು ಹೊಸ ಮನೋಭೂಮಿಕೆಯ (ಮೈಂಡ್‌ಸೆಟ್) ನಿರ್ಮಾಣ ಈ ಪೈಕಿ
ಮೊದಲನೆಯದು. ಅಂದರೆ, ಅವರಲ್ಲಿ ಆತ್ಮವಿಶ್ವಾಸ, ತಾಳ್ಮೆ, ಚೈತನ್ಯ, ಲವಲವಿಕೆ, ಉತ್ಸಾಹ, ಸಂವಹನಾ ಕೌಶಲ
(ಮಾತನಾಡದಂತೆ ಅವರ ತುಟಿಗಳನ್ನು ನಾವು ಹೊಲಿದುಬಿಟ್ಟಿದ್ದೇವೆ!), ಸಕಾರಾತ್ಮಕ ಚಿಂತನೆ, ಗೆಲುವಿನ ಮನೋಭಾವ ಮತ್ತು ಆತ್ಮಸಂತೋಷದ ಭಾವನೆಗಳನ್ನು ತುಂಬುವುದು. ಹಾಗೆಯೇ, ಮುನ್ನುಗ್ಗುವಿಕೆ, ರಿಸ್ಕ್
ತೆಗೆದುಕೊಳ್ಳುವ ಮನೋಗುಣ, ಅವಕಾಶಗಳನ್ನು ಹುಡುಕುವಿಕೆ ಮತ್ತು ಪಡೆಯುವಿಕೆ ಇಂಥ ಮಾನಸಿಕ ಕೌಶಲಗಳನ್ನು ಕಲಿಸುವುದೂ ಇದರಲ್ಲಿ ಸೇರಿದೆ.

ಜತೆಗೆ, ದೊರೆತ ಮಾಹಿತಿಯನ್ನು ಕೌಶಲವಾಗಿ ಪರಿವರ್ತನೆ ಮಾಡಿಕೊಳ್ಳುವುದು ಹೇಗೆ? ವಿಭಿನ್ನವಾಗಿ ಆಲೋಚಿ ಸುವ ಕ್ರಮಗಳು ಯಾವುವು? ಓದಿದ್ದನ್ನು ಅರ್ಥೈಸಿಕೊಳ್ಳುವುದು, ಮಾನಸಿಕ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು ಮತ್ತು ವ್ಯವಸ್ಥಿತವಾಗಿ ಹೇಳುವುದು ಹೇಗೆ? ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ, ವ್ಯಕ್ತಿತ್ವದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಬಗೆ ಯಾವುದು?- ಹೀಗೆ ಶಾಲೆಯಲ್ಲಿ ಕಲಿಸದೇ ಉಳಿದುಹೋದ ಮತ್ತು ಮಕ್ಕಳಿಗೆ ಸಿಗದೇ ಹೋದ, ವಾಸ್ತವಿಕ ಜಗತ್ತಿನ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ‘ಸಾಫ್ಟ್ ಸ್ಕಿಲ್’ ಹಣೆಪಟ್ಟಿಯಡಿ ಕಲಿಸಲಾಗುತ್ತದೆ.‌

‘ಸಾಫ್ಟ್ ಸ್ಕಿಲ್’ ಅಡಿಯಲ್ಲಿ ಏನನ್ನು ಕಲಿಸಬೇಕು ಮತ್ತು‌ ಹೇಗೆ ಕಲಿಸಬೇಕು ಎಂಬುದರ ಕುರಿತು ಈಗಾಗಲೇ ಬಹಳ
ಸಂಶೋಧನೆಗಳು ನಡೆದಿದ್ದು, ಒಂದು ‘ಚೌಕಟ್ಟು’ ಸಿದ್ಧವಾಗಿದೆ. ಈ ವಲಯಕ್ಕೆ ಸಂಬಂಧಿಸಿದಂತೆ ಐಐಟಿ ಕಾನ್ಪುರ ವತಿಯಿಂದ ‘ಸಾಫ್ಟ್ ಸ್ಕಿಲ್ ಪ್ರೈಮರಿ’ ಮತ್ತು ‘ಸಾಫ್ಟ್ ಸ್ಕಿಲ್ ಅಡ್ವಾನ್ಸ್‌ಡ್’ ಎಂಬ ಎರಡು ಹಂತದ ಆನ್ ಲೈನ್ ಕೋರ್ಸ್‌ಗಳು ನಡೆಯುತ್ತಿವೆ. ಮಿಕ್ಕಂತೆ ನೂರಾರು‌ ವೇದಿಕೆಗಳೂ ಸಾಫ್ಟ್ ಸ್ಕಿಲ್ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿವೆ. ಸಾಫ್ಟ್ ಸ್ಕಿಲ್ ಕುರಿತು ಆಸಕ್ತಿ ಮತ್ತು ಅನುಮಾನ ಎರಡೂ ಇರುವವರು, ಐಐಟಿ ಕಾನ್ಪುರದ ಪ್ರೊ.ರವಿ ಚಂದ್ರನ್ ಅವರು ವಿಶೇಷವಾಗಿ ವಿನ್ಯಾಸಗೊಳಿಸಿರುವ ಶ್ರವ್ಯರೂಪದ ಕೋರ್ಸ್ ಅನ್ನು ಆಲಿಸಬಹುದು.

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ ಸಮಾಲೋಚಕರು)