Friday, 20th September 2024

ಬಟಾಣಿಗಳ ನಾಡಿನ ಪುಟಾಣಿ ದಿಬ್ಬದ ಮೇಲೆ

ಅಲೆಮಾರಿ ಡೈರಿ

ಸಂತೋಷ್ ಮೆಹಂದಳೆ

shmehandale@npcil.co.in

ಸಾಲು ಸಾಲು ಮಿನಿ ಲಾರಿಗಳು ಮೈ ತುಂಬಿಕೊಂಡ ಬಸುರಿಯರಂತೆ ಕ್ಯಾರಿಯೇಜು ಮೀರಿ ಲಗೇಜು ಹೇರಿಕೊಂಡು ನಿಂತಿದ್ದರೆ ಮೊದಲೇ ಕಿರಿದಾದ ರಸ್ತೆಗಳು ಇನ್ನೂ ಕಿರಿದಾಗಿ ಬಿಡುತ್ತವೆ. ಅದಕ್ಕೂ ಮುಂದೆ ಒಂದು ಪೆಟ್ರೋಲ್ ಬಂಕು. ಅದರಾಚೆಗೆ ಒಮ್ಮೆಲೆ ಇಳಿಜಾರು ಅಲ್ಲಿಗೆ ಊರು ಮುಗಿಯಿತು.

ಸರಿಯಾಗಿ ನಡೆದು ಬಂದರೆ ಹನ್ನೆರಡನೇ ನಿಮಿಷಕ್ಕೆ ತುದಿ ತಲುಪಿ ಬಿಡುವ ಊರಿನ ದಿಬ್ಬದ ನೆತ್ತಿಗೆ ಇರುವ ದೊಡ್ಡ ಕೊಳ ಎಲ್ಲಿಂದ ನೋಡಿದರೂ ಕಾಣ ಸಿಗುತ್ತದೆ. ಪೆಟ್ರೋಲ್ ಬಂಕ್ ಪಕ್ಕದಲ್ಲಿ ನೆಲಕ್ಕೆ ಹೂಡಿದ್ದ ತೂಕದಲ್ಲಿ ಚೀಲ ಗಟ್ಟಲೇ ತುಂಬಿದ ಹಸಿರು ಗಮನಿಸುತ್ತಾ, ‘ನನಗೊಂದು ಸ್ವಲ್ಪ ಬೇಕಿತ್ತು’ ಎಂದೆ. ಅವರು ಹೇಗೆ ಒಯ್ಯುತ್ತಾನೆ ಎನ್ನುವಂತೆ ನೋಡಿದರು. ನಾನು ಸ್ವಲ್ಪ ಎನ್ನುತ್ತಾ ‘ಒಂದು ಅರ್ಧ ಕೆ.ಜಿ’ ಎಂದೆ ಪರ್ಸ್ ತೆಗೆಯುತ್ತಾ, ಅದಕ್ಕಿಂತ ಹೆಚ್ಚಿಗೆ ಬೇಕೂ ಇರಲಿಲ್ಲ.

ಕಾಟದ ಆಚೆಗೆ ನಿಂತು ತೂಗುತ್ತಿದವ ನಗುತ್ತಾ, ‘ಇದು ಹೋಲ್ ಸೇಲ್ ಮಾರಾಯ. ನಿನ್ನ ಕೂತು ತಿನ್ನೋ ಹುಕಿಗೆ ಇದೆಲ್ಲ ಲೆಕ್ಕಾಚಾರ ಬೇಕಾ..?’ ಎನ್ನುತ್ತ ಒಂದು ಸಣ ಕವರ್ ತೆಗೆದುಕೊಂಡು ಅದರ ತುಂಬ ತುಂಬಿಕೊಟ್ಟ. ನಾನು ದುಡ್ಡು ಎನ್ನುತ್ತಿದ್ದರೆ ಈ ನಾಕೋದಲ್ಲಿ ಕಾಲಿಟ್ಟಲ್ಲ ನಾವು ಬೆಳೆಯೋದೆ ಇದು. ಏನಿದ್ದರೂ ಲೆಕ್ಕಾಚಾರ ಕನಿಷ್ಟ ಇಪ್ಪತೈದು ಕೆ.ಜಿ ಮೇಲಕ್ಕೆ. ನಿನ್ನ ಈ ಅರ್ಧ ಕೆ.ಜಿ. ಒಂದು ಲೆಕ್ಕಾನೆ..’ ಎನ್ನುವಂತೆ ನೋಡಿದ.

ನಾನು ಥ್ಯಾಂಕ್ಯೂ ಎನ್ನುತ್ತ ಬ್ಯಾಗೆತ್ತಿಕೊಂಡು ಇತ್ತ ನೋಡಿದರೆ ಸಾಲು ಸಾಲು ಮಿನಿಲಾರಿಗಳು ಭರ್ರ‍್‌ಎಂದು ಶಬ್ದಿಸುತ್ತ ಏರು ಏರಲು ಇದ್ದವಾಗುತ್ತಿದ್ದವು. ಒಮ್ಮೆ ವೀಕೆಂಡಿಗೆ ಹೀಗೆ ಮಾಲು ಕಳುಹಿಸಿದರೆ ಮತ್ತೆ ಮುಂದಿನ ಬುಧವಾರವೇ. ಅಲ್ಲಿಯವರೆಗೆ ಉಳಿದ ಉತ್ಪನ್ನ ಕಟಾವು. ಹಸಿರು ಬಟಾಣಿ ಇವರ ದಿಬ್ಬದ ಮೇಲಿನ ಬದುಕನ್ನು ಬದಲಿಸಿದೆ. ಭೂಮಿಯ ಮೇಲ್ಭಾಗದಲ್ಲಿ ಬಟಾಣಿ ಬೆಳೆದರೆ ಒಳಗೆ ಆಲೂ ಬೆಳೆಯುತ್ತಾರೆ. ಎರಡೂ ಇದ್ದರೆ ಅದಕ್ಕಿಷ್ಟು ಕಾಳು ಮೆಣಸು ಹುಡಿ, ಉಪ್ಪು ಹಾಕಿ ಹುರಿದು, ಮೇಲೆ ಒಂಚೂರು ಹುಳಿ ಬಿದ್ದರೆ ಆ ನೆಲ ನಾಕೋ.. ಅಂದರೆ ನಿಜಕ್ಕೂ ಸ್ವರ್ಗವೇ.

ದಿಬ್ಬದ ಮೇಲಿನ ಪುಟಾಣಿ ಊರಿನಲ್ಲಿ ಇಂಥಾ ಬಟಾಣಿಗಳ ಹಸಿರು ಕಾಳಿನದ್ದೇ ಸಾಮ್ರಾಜ್ಯ. ಕಣಿವೆ ಊರುಗಳ ಏರು ನೆತ್ತಿಯ ಮೇಲೆ ಅರವತ್ತು ಮನೆಗಳ
ನಾಕೋ ಸ್ಪಿಟಿ ವ್ಯಾಲಿಯ ವಿಭಿನ್ನ ಪ್ರದೇಶ. ಸಾಲು ಸಾಲು ಸಂದಿ ರಸ್ತೆಗಳ ಕಲ್ಲಿನ ಮನೆಗಳ ಚೆಂದದ ಊರು. ಹೆಚ್ಚಿನ ಇಸ್ರೇಲಿ ಮತ್ತು ಬ್ರೇಜಿಲ್ ಜೋಡಿಗಳು ಅಲ್ಲಲ್ಲಿ ಪೇಯಿಂಗ್ ಗೆಸ್ಟ್‌ಗಳಾಗಿ ತೀರ ಅನಾಮಿಕವಾಗಿರುವ ಊರಿನಲ್ಲಿ ವಿಹಂಗಮಗೈಯುತ್ತಾರೆ. ಬಟಾಣಿಗಳ ತೋಟದಲ್ಲಿ ಅಡ್ಡಾಡುತ್ತಾರೆ.

ಕೆಲವೊಮ್ಮೆ ಅಲ್ಲೇ ಕಾಳು ಬಿಡಿಸಿಕೊಂಡು ಕೂತು ಹುರಿದು ತಿನ್ನುತ್ತಾರೆ. ನಾಕೋ ಸ್ವರ್ಗ ಎನ್ನಿಸುತ್ತದೆ. ಜತೆಗೆ ಇನ್ನಿಷ್ಟು ಎತ್ತರದ ಮೇಲಿದ್ದರೆ ಕೈಯೆತ್ತಿದರೆ ನೇರ ಸ್ವರ್ಗಕ್ಕೆ ತಾಗುತ್ತಿತ್ತೇನೋ ಎನ್ನಿಸುವುದೂ ಇದೆ. ನಾಕೋ… ಊರಿಗೆ ಕಾಲಿಡುತ್ತಲೇ ಜನ ಜೂಲೇ… ಜೂಲೇ…ಎನ್ನುತ್ತಾ ಸ್ವಾಗತಿಸುತ್ತಾರೆ. ಇದಕ್ಕೆ ಪರಿಚಯ
ಬೇಕೆಂದಿಲ್ಲ. ಅಪರಿಚತರೇ ಹೆಚ್ಚಿನಂಶ ಇಲ್ಲಿನ ಊರಿಗೆ ಕಾಲಿಡುವುದು. ಎದುರಿಗೆ ಸಿಕ್ಕವರಿಗೆ ಜೂಲೇಯೊಂದಿಗೆ ಕಿರು ನಗೆಯ ಸ್ವಾಗತ. ಅಂದರೆ ..ಪ್ರೀಯರೇ ನಮಸ್ತೆ..’ ಎಂದಂತೆ. ಇದೊಂದು ಶಬ್ದ ಹೆಚ್ಚಿನಂಶ ಲಡಾಕ್‌ನಿಂದ ಹಿಮಾಚಲದ ಪಾದದವರೆಗೂ ಸಂಬಂಧಗಳನ್ನು ಬೆಸೆಯುತ್ತಿದೆ.

ಚಾರಣ ಮತ್ತು ಪ್ರಕೃತಿ ಪ್ರಿಯರ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುವ ನಾಕೋದಲ್ಲಿ ಸ್ಥಳೀಯವಾಗಿರುವ ನೆತ್ತಿಯ ಮೇಲಿನ ಸರೋವರ ಮತ್ತು ಹಸಿರು ಹೊದ್ದ ಬಟಾಣಿ ಗದ್ದೆಗಳು ಸಂಪೂರ್ಣ ಊರನ್ನು ಆವರಿಸಿದೆ. ಚೆಂದದ ಕಾಲ್ನಡಿಗೆ ಮತ್ತು ಪರ್ವತಾರೋಹಣ ಇಲ್ಲಿಂದ ಸಾಧ್ಯ. ದೂರದ ಗ್ರಾಂಫು ಮತ್ತು ಕಿಲಾಂಗ್‌ನಿಂದ ಇಲ್ಲಿಗೆ ನಡೆದೇ ಬರುವವರೂ ಇದ್ದಾರೆ. ಸೈಕಲ್ ಮತ್ತು ಬೈಕ್ ಸವಾರಿಗರೂ ಪೆಯಿಂಗ್ ಗೆಸ್ಟ್‌ಗಳಾಗುವುದು ಇಲ್ಲಿ ಸಹಜ. ಸುತ್ತ ಕಣ್ಣೆತ್ತರಕ್ಕೆ ಅಕ್ಕಪಕ್ಕದ ಕೈಗೆ ತಾಕುವಂತಹ ಪರ್ವತದ ತುದಿಗಳು ಈ ಹಳ್ಳಿಯ ಪಕ್ಕೆಗಳಿಗೆ ತಗುಲಿ ನಿಂತಿದ್ದರೆ, ಸಂಪೂರ್ಣ ಸುತ್ತುವರೆದಿರುವ ಬೆಟ್ಟಗಳ ಸಮಾನವಾಗಿ ನೆತ್ತಿಯ ಮೇಲಿರುವ
ನಾಕೋ ಯಾವಾಗಲೂ ಚಳಿಯಿಂದ ತತ್ತರಿಸುತ್ತಿರುತ್ತದೆ.

ತೀರ ಹದಿಮೂರು ಸಾವಿರ ಅಡಿ ಎತ್ತರದಲ್ಲಿರುವ ಪರ್ವತ ತುದಿಯಲ್ಲಿ ಲಭ್ಯವಿರುವ ನಾಲ್ಕೈದು ಚ. ಕೀ. ಮೀ. ಪಾಸ್‌ನ ಮೇಲೆ ಹರಡಿಕೊಂಡ ಹಳ್ಳಿಯಲ್ಲಿ ಎಲ್ಲಿ
ನಿಂತರೂ ಅದ್ಭುತ ಫೋಟೊಗ್ರಾಫಿ ಚಿತ್ರಣದ ತಾಣ. ಇಲ್ಲಿಂದ ಎಡಕ್ಕೆ ಉಸುರುಗಟ್ಟಿ ಓಡಿದರೆ ಚೀನಾ ಬಾರ್ಡರು, ಬಲಕ್ಕೆ ತಿರುಗಿದರೆ ‘ಪದ್ಮಸಾಂಬಶಿವ’ ಧ್ಯಾನ ಮಾಡಿ ಗಿಡ ಮೂಲಿಕೆಗಳಿಂದ ಜನಜೀವನಕ್ಕೆ ಅಗತ್ಯದ ಔಷಧವನ್ನು ಅವಿಷ್ಕಾರ ಮಾಡಿದನ್ನೆನ್ನುವ ಇದುವರೆಗೂ ಯಾರೂ ಹತ್ತಿ ನೋಡದ ೨೨ ಸಾವಿರ ಅಡಿ ಎತ್ತರದ ಅಪರೂಪದ ಪವಿತ್ರ ಔಷಧ ಬೆಟ್ಟಕ್ಕೆ ನಾನು ಒಂದು ಟ್ರೆಕ್ ಮಾಡಿಬಿಡಲೇ ಎಂದುಕೊಂಡೆ.

ಆ ಮೇಲೆ ಸಾಂಬಸದಾಶಿವ ಪ್ರಯೋಗ ಮಾಡಿಬಿಟ್ಟರೆ ಉಸಾಬರಿಯೇ ಬೇಡ ಎಂದು ತೆಪ್ಪಗಾದೆ. ಉತ್ತರಕ್ಕೆ ಲಡಾಕ್ -ಲೇಹ್ ವ್ಯಾಲಿಯ ಸರಹದ್ದು ಅರ್ಧ ಆವರಿಸಿದ್ದರೆ ನಡೆಯುತ್ತಾ ದಕ್ಷಿಣಕ್ಕೆ ಬಂದರೆ ಹಿಮಾಚಲದ ಸೆರಗಿನಲ್ಲಿ ಕಾಲಿಡುತ್ತೀರಿ. ಇಂಥಾ ವಿಚಿತ್ರ ಭೌಗೋಳಿಕ ಪರಿಸರದಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಹೆಚ್ಚಿನಂಶ ತಣ್ಣಗೆ ಮಲಗಿದಂತಿರುವ, ಆದರೆ ವಿದೇಶಿಯರಿಗೆ ಹೇಳಿ ಮಾಡಿಸಿದ ತಾಣ ನಾಕೋ.. ಅಪ್ಪಟ ಸ್ವರ್ಗ ಸದೃಶ್ಯ ಇಲ್ಲಿನ ಸುತ್ತಲಿನ ಪ್ರದೇಶ.
ಹಿಮಾಚಲದ ಅತ್ಯಂತ ಎತ್ತರದ ಪರ್ವತ ಪ್ರದೇಶ ಇದರ ಬೆನ್ನಿಗಿದೆ. ಅದರ ಅರ್ಥವಾಗದ ಹೆಸರು ರಿಯೋ ಪುರೈಲ್’.

ಚಳಿಗಾಲದಲ್ಲಿ ಹಿಮವಾಗಿ ಬಾಕಿ ಹೊತ್ತಿನಲ್ಲಿ ನೀರಿನಿಂದ ತುಂಬಿಕೊಂಡು ಬಟ್ಟಲಿನಂತೆ ಆಕರ್ಷಿಸುವ ಇದರ ಸುತ್ತಮುತ್ತ ಗೆ ಹೌಸುಗಳು ಚೆಂದವಾಗಿ ತಲೆ ಎತ್ತಿವೆ.
1025ರ ಕಾಲದ ನಾಕೋ ಮಾನೆಸ್ಟ್ರಿ’ ಸಕ್ರೀಯವಾಗಿದ್ದು, ಬೌದ್ಧ ಸನ್ಯಾಸಿಗಳು ಇಲ್ಲಿಂದ ಹೊರಟು ದೇಶದುದ್ದಗಲಕ್ಕೂ ಸಂಚರಿಸಿ ವಾಪಸ್ಸು ಇಲ್ಲಿಗೇ ಬರುತ್ತಾರೆ. ಇದು ಟಾಬೋ ಮಾನೆಸ್ಟ್ರಿ’ ಎಂದೇ ಪ್ರಸಿದ್ಧಿಯಾಗಿದ್ದು 1975 ರ ಭೂಕಂಪಕ್ಕೆ ಸಿಲುಕಿ ಇದು ಧಾರಾಶಾಯಿಯಾಗಿತ್ತು. ಇದೇ ರೀತಿ ಈ ಮೊದಲೂ ಕೂಡಾ ಟಾಬೋ’ ನೆಲಕ್ಕುರುಳಿದ್ದರೂ ಅದರ ಮೂಲ ವಾಸ್ತು ಹಾಗೂ ಅದರ ಕಟ್ಟಡ ಸಾಮಗ್ರಿಗಳನ್ನು ಬಳಸಿಯೇ ನಿರ್ಮಿಸಲಾಗಿದೆ ಎನ್ನುವುದು ವಿಶೇಷ.

ಊರ ಮಧ್ಯದ ಪುಟ್ಟ ಸರೋವರ ನೀರು ಸೇರಿದಷ್ಟೆ ವೇಗವಾಗಿ ಇಂಗುವುದರಿಂದ ಬಾಕಿ ಅವಽಯಲ್ಲಿ ಅದರ ಇಕ್ಕೆಲಗಳಲ್ಲಿ ಕೃಷಿ ನಡೆಯುತ್ತದೆ. ಹೀಗೆ ನಾಕೋ ಹಲವು ಪ್ರದೇಶಗಳನ್ನು ಆವರಿಸಿಕೊಂಡು ಪರ್ವತದ ನೆತ್ತಿಗೆ ಇರುವ ಪುಟ್ಟಹಳ್ಳಿ. ಸಿಕ್ಕ ಸಣ್ಣಪುಟ್ಟ ನೆಲದ ಪಟ್ಟಿಗಳ ಮೇಲೆ ಬಟಾಣಿ ಬೆಳೆದು ಕಳುಹಿಸುತ್ತಾರೆ ಶಿಮ್ಲಾ ತಲುಪುವ ಬಟಾಣಿ ಇಲ್ಲಿನ ಆರ್ಥಿಕತೆಯ ದೊಡ್ಡ ವ್ಯವಹಾರ. ನಾಕೋ ನೆತ್ತಿಯಿಂದ ಮೂರೂವರೆ ಕಿ.ಮೀ. ದೂರದ ಚಾಂಗೊಗೊಂಪಾ’ ಇನ್ನೊಂದು ಪರ್ವತದ ಸೆರಗಿನಲ್ಲಿದ್ದು ಒಂದು ದಿನದ ಚಾರಣದಲ್ಲಿ ನಡೆದು ಪೂರೈಸಬಹುದಾದ ಕಾಲ್ದಾರಿ.

ಹೆಚ್ಚಿನಂಶ ನಾಕೋದ ಪ್ರವಾಸಿಗರು ಮರುದಿನದ ಬೆಳಗ್ಗೆ ಈ ದಾರಿಯನ್ನು ಚಾರಣಕ್ಕಾಗಿ ಉಳಿಸಿಕೊಳ್ಳುತ್ತಾರೆ. ಬೆಳಗಿನ ಮೋಡ ಇಲ್ಲಿ ನಮ್ಮನ್ನು ಸುತ್ತುವರೆದು ಉಸಿರುಗಟ್ಟಿಸುತ್ತವೆ. ಚಳಿಗಾಲದಲ್ಲಿ ಈ ಸರೋವರ ಸಂಪೂರ್ಣ ಗಟ್ಟಿಯಾಗಿ ಇದರ ಮೇಲೆ ಐಸ್‌ಸ್ಕೇಟಿಂಗ್ ಕ್ರೀಡೆಗಳಿಗೆ ಸಕಾಲ. ನವಂಬರ್‌ನಿಂದ ಫೆಬ್ರವರಿ ಯವರೆಗೆ ಹೊರ ಜಗತ್ತಿನಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳುವ ಹಳ್ಳಿಯ ಜನರು ಆ ಮುಲಾಜೇ ಇಲ್ಲದೇ ಬದುಕುವ ಪರಿ ಅನನ್ಯ. ಮಾರ್ಚ್ ಕೊನೆಯ ವಾರದಿಂದ ಸೆಪ್ಟಂಬರ್ ಕೊನೆಯವರೆಗೆ ಪ್ರವಾಸಿಗರಿಗೂ. ಚಾರಣಗಳಿಗೂ ಇದು ಸಕಾಲ. ಆದರೂ ಮಾರ್ಚ್ ಮತ್ತು ಏಪ್ರಿಲ್ ಮಧ್ಯ ಭಾಗದವರೆಗೂ ರಸ್ತೆಗಳು
ಸರಿಯಾಗಿ ಲಭ್ಯವಾಗುವ ಸಾಧ್ಯತೆ ಕಡಿಮೆ. ಕಾಝಾ ಮತ್ತು ಲೋಸರ್ ಮಾರ್ಗದ ಭೂ ಕುಸಿತ ಸಾಮಾನ್ಯ.

ಉಳಿದಂತೆ ಸರಿಯಾಗಿ ಒಂದು ಸಾವಿರವನ್ನೂ ದಾಟದ ಜನಸಂಖ್ಯೆಯ ಹೆಚ್ಚಿನವರ ಮನೆಗಳೆಲ್ಲ ಪೇಯಿಂಗ್ ಗೆ ಹೌಸುಗಳೇ. ಕಲ್ಲಿನ ಅಪ್ಪಟ ಸಾಂಪ್ರದಾಯಿಕ ಮನೆಗಳೆ ಇಲ್ಲಿ ಹೆಚ್ಚು. ಇಸ್ರೇಲ, ಬ್ರೆಜಿಲ್ ಮತ್ತು ಇಟಲಿ ಪ್ರವಾಸಿಗರಿಗೆ ಮನೆಗಳಲ್ಲಿ ಆಶ್ರಯ ಕಲ್ಪಿಸಿ ವೃತ್ತಿ ಮತ್ತು ಬದುಕು ಎರಡನ್ನೂ ನಡೆಸುತ್ತಿರುವ ನಾಕೋ ನಾಗರಿಕರಿಗೆ ಹಸಿರು ಬಟಾಣಿ ಮತ್ತು ಬಟಾಟೆ ಪ್ರಮುಖ ಜೀವನೋಪಾಯದ ದಾರಿ. ವರ್ಷದ ಹಿಂದೆ ಬಂದ ಮೊದಲ ಪೆಟ್ರೋಲ್ ಬಂಕ್ ಇಲ್ಲಿನ ಅತಿ ದೊಡ್ಡ ಸುಧಾರಣೆ. ಉಳಿದಂತೆ ದೂರದ ಕಾಝಾ ಪ್ರತಿಯೊಂದಕ್ಕೂ ಅವಲಂಬಿತ.

ಹಿಮಾಚಲದ ಕಾಝಾದಿಂದ ಸ್ವಂತ ವಾಹನದ ಬಲವಿಲ್ಲದಿದ್ದರೆ ತಲುಪಲೇ ದಿನಗಟ್ಟಲೇ ವ್ಯಯಿಸಬೇಕಾಗುತ್ತದೆ. ಆಗೀಗ ಮಾತ್ರ ಸಿಕ್ಕುವ ಹಿಮಾಚಲ
ಪರಿ ವಾಹನ ನಂಬಿಕೊಂಡರೆ ನಾಳೆನೂ ಮುಟ್ಟಬಹುದು ಇವತ್ತಿನ ಬದಲಿಗೆ. ಹುರಿದ ಬಿಸಿಬಿಸಿ ಬಟಾಣಿ ಸಂಜೆಗೆ ಸ್ಟಾಟರ್ರ‍್ ಆಗುತ್ತದೆ ಅನ್ನುವುದು ಅತಿ ಶಯೋಕ್ತಿಯಲ್ಲ. ಅತ್ಯಂತ ಶಾಂತ ಮತ್ತು ಚಿಕ್ಕ ಊರಿನ ನಾಕೋ.. ಒಂದು ದಿನ ಕಳೆಯಲು ನಿಜಕ್ಕೂ ನಾಕದಂತಿದೆ.