Thursday, 19th September 2024

ಆಶಿಸುವ ಮೊದಲು ಅರ್ಹತೆ ಇರಲಿ !

ಅಭಿಪ್ರಾಯ

ಕೆ.ಪಿ.ಪುತ್ತೂರಾಯ

ಪ್ರೀತಿ-ವಿಶ್ವಾಸ-ಗೌರವಗಳನ್ನು, ಬರೇ ಹಣಬಲದಿಂದಾಗಲೀ, ಹಕ್ಕು ಬಾಧ್ಯತೆಗಳ ಮುಖೇನವಾಗಲೀ, ಒತ್ತಾಯ-ಒತ್ತಡಗಳಿಂದಾಗಲೀ, ಇಲ್ಲವೇ ಕಾಡಿ ಬೇಡುವುದರಿಂದಾಗಲೀ ಗಳಿಸಲಾಗದು, ಗಳಿಸಬಾರದು. ಇವುಗಳೆಲ್ಲವನ್ನೂ ಗಳಿಸುವ ಏಕೈಕ ರಾಜಮಾರ್ಗವೆಂದರೆ, ಇವುಗಳಿಗೆ ಪಾತ್ರರಾಗುವ ಅರ್ಹತೆ ಯನ್ನೂ, ಯೋಗ್ಯತೆಯನ್ನೂ ಗಳಿಸಿಕೊಳ್ಳೋದು. ಆಗ ಎಲ್ಲವೂ ತಾನಾಗಿಯೇ ಇವರ ಹಿಂದೆ ಬರುತ್ತಿರುತ್ತದೆ.

ಆಸೆ-ಆಕಾಂಕ್ಷೆಗಳು, ಅಪೇಕ್ಷೆ-ಅಭಿಲಾಷೆಗಳು ಯಾರಿಗೆ ಇಲ್ಲ? ಇದು ಮನುಷ್ಯ ಸಹಜವಾದ ಸ್ವಾಭಾವಿಕ ಗುಣ. ಹಾಗೆ ನೋಡಿದರೆ, ಯಾವುದಕ್ಕೆ ಆಸೆ ಇಲ್ಲ? ಹೂವಿನ ಮೊಗ್ಗಿಗೆ ಅರಳುವ ಆಸೆ, ಅರಳಿದ ಹೂವಿಗೆ ಪರಿಮಳವ ಬೀರುವ ಆಸೆ, ಬೀರಿದ ಪರಿಮಳಕ್ಕೆ ಪಸರಿಸಿ, ಎಲ್ಲರ ಮೂಗಿನೊಳಗೆ ತೂರುವ ಆಸೆ, ತೂರಿದ
ಪರಿಮಳಕೆ ಮನದೊಳಕೆ ಏರುವ ಆಸೆ, ಏರಿದ ಪರಿಮಳಕೆ ಮುಖದಲ್ಲಿ ತೋರುವ ಆಸೆ.

ಒಟ್ಟಿನಲ್ಲಿ ಎಲ್ಲದಕ್ಕೂ ಎಲ್ಲರಿಗೂ ಏನೋ ಒಂದು ಆಸೆ-ಆಶಯ ಇರುತ್ತದೆ. ಆಶಿಸೋದು ತಪ್ಪಲ್ಲ. ಆದರೆ ಆಶಿಸೋದಕ್ಕೆ ಮೊದಲು, ನಾವು ಅದಕ್ಕೆ ಎಷ್ಟು ಅರ್ಹರಾಗಿದ್ದೇವೆ ಎಂಬುದನ್ನು ಅರಿತುಕೊಂಡಿರಬೇಕು. ಈ ವಿಚಾರದಲ್ಲಿ ಜಗತ್ತಿನಲ್ಲಿ 3 ವರ್ಗದ ಜನರಿರುತ್ತಾರೆ. ಮೊದಲನೆಯ ವರ್ಗದವರು ತಮ್ಮಲ್ಲಿ ಸಾಕಷ್ಟು ಅರ್ಹತೆ-ಯೋಗ್ಯತೆ ಇದ್ದರೂ, ತಮ್ಮ ಶಕ್ತಿ ಸಾಮರ್ಥ್ಯಗಳನ್ನೇ ಅರಿತುಕೊಳ್ಳದವರು; ಅರಿತುಕೊಂಡರೂ ಅದನ್ನು ಕಾರ್ಯಗತಗೊಳಿಸದ ನಿರುತ್ಸಾಹಿಗಳು. ಆದುದರಿಂದ ಏನನ್ನೂ ಆಶಿಸದವರು, ಈ ಕಾರಣ ಜೀವನದಲ್ಲಿ ಏನನ್ನೂ ಸಾಧಿಸದವರು.

ಅವರೊಳಗಿದ್ದ ಪ್ರತಿಭೆಯು ಅವರೊಂದಿಗೇ ಅವಸಾನಗೊಳ್ಳುತ್ತದೆ. ಎರಡನೆಯ ವರ್ಗದವರು, ತಮ್ಮಲ್ಲಿರುವ ಅರ್ಹತೆ ಏನು ಎಂಬುದನ್ನು ತಿಳಿದುಕೊಂಡಿದ್ದು ಅದಕ್ಕೆ ತಕ್ಕುದಾದುದನ್ನು ಮಾತ್ರ ಆಶಿಸುವವರು. ಇಂತಹವರು ವಾಸ್ತವಿಕತೆಯನ್ನು ಅರಿತ practical ಮನುಷ್ಯರಾಗಿರುವ ಕಾರಣ, ಯಾವ ನಿರಾಸೆಯನ್ನೂ ಅನುಭವಿಸೋ ದಿಲ್ಲ. ಮೂರನೆಯ ವರ್ಗದವರು, ತಮ್ಮಲ್ಲಿರುವ ಅರ್ಹತೆ- ಯೋಗ್ಯತೆಗಿಂತ ಮಿಗಿಲಾದುದನ್ನು ಆಶಿಸುವವರು. ಇಂತಹವರು ದುಃಖ, ನಿರಾಸೆಗಳಿಗೆ ಒಳಗಾಗೋದು ಖಚಿತ.

ಇವರುಗಳು ತಮ್ಮ ಅರ್ಹತೆಯನ್ನು ಸರಿಯಾಗಿ ಅರಿತು ಕೊಂಡಿರೋದಿಲ್ಲ; ಅರಿತುಕೊಂಡರೂ, ಕೊಂಚ ಅತಿಯಾಗಿಯೇ ಅರಿತು ಕೊಂಡಿರುತ್ತಾರೆ. ಮೊದಲು ಅರ್ಹತೆಯನ್ನು ಗಳಿಸಿಕೊಳ್ಳಬೇಕು; ನಂತರ, ಅದಕ್ಕೆ ತಕ್ಕುದಾದುದನ್ನು ಮಾತ್ರ ಆಶಿಸಬೇಕು. ಇದು ನ್ಯಾಯ ಸಮ್ಮತ ಹಾಗೂ ಸುರಕ್ಷಿತವಲ್ಲವೇ ! ತನ್ನ ಪತ್ನಿ ಸೀತಾಮಾತೆಯಂತಿರಬೇಕೆಂದು ಆಶಿಸುವ ಗಂಡ, ಮೊದಲು ತಾನು ಶ್ರೀ ರಾಮಚಂದ್ರನಂತಿರಬೇಕಲ್ಲ! ಅತ್ತೆ, ತನ್ನನ್ನು ತನ್ನ ಮಗಳಂತೆ ನೋಡಿ ಕೊಳ್ಳಬೇಕು ಎಂದು ಸೊಸೆಯಾದವಳು ಆಶಿಸುವ ಮೊದಲು, ಆಕೆಯೂ ಅತ್ತೆ ಯನ್ನು ತನ್ನ ತಾಯಿಯಂತೆ ಪ್ರೀತಿಸ ಬೇಕಲ್ಲ! ಅಂತೆಯೇ, ಸೊಸೆ ತನ್ನನ್ನು ತನ್ನ ತಾಯಿಯಂತೆ ಪ್ರೀತಿಸಲಿ ಎಂದು ಬಯಸುವ ಅತ್ತೆ, ತಾನೂ ಆಕೆಯನ್ನು, ಸ್ವಂತ ಮಗಳಂತೆ ಕಾಣಬೇಕಲ್ಲವೇ? ಇದೇ ರೀತಿ ಒಬ್ಬರನ್ನೊಬ್ಬರನ್ನು ಪ್ರೀತಿ ಮಾಡದ ಗಂಡ ಹೆಂಡತಿ, ಒಬ್ಬರಿನ್ನೊಬ್ಬರಿಂದ ಪ್ರೀತಿಯನ್ನು ಆಶಿಸೋದು ಸರಿ ಎನಿಸದು.

ಮಕ್ಕಳು ವೃದ್ದಾಪ್ಯದಲ್ಲಿ ತಮ್ಮ ಸೇವೆ ಮಾಡಬೇಕೆಂದು ಆಶಿಸುವ ಹೆತ್ತವರು, ತಾವೂ ತಮ್ಮ ಹೆತ್ತವರ ಸೇವೆಯನ್ನು ಮಾಡಿ, ಆ ಅರ್ಹತೆಯನ್ನು ಪಡೆದಿರಬೇಕಲ್ಲ! ಇಲ್ಲವಾದರೆ, ತಾವು ತಮ್ಮ ಹೆತ್ತವರಿಗೆ ಮಾಡಿದ್ದನ್ನೇ ಅವರ ಮಕ್ಕಳು ಅವರಿಗೆ ಮಾಡುತ್ತಾರೆ. ಈ ಸತ್ಯವನ್ನು ಸಾರುವ ಒಂದು ಸಣ್ಣ ಕತೆ ಹೀಗಿದೆ. ಒಂದು ಮನೆ ಯಲ್ಲಿ ಓರ್ವ ಗಂಡಸು, ಅವನ ಹೆಂಡತಿ ಮತ್ತು ಅವರ ಪುಟ್ಟ ಮಗು ವಾಸವಾಗಿದ್ದರು. ಇವರ ಜತೆ, ಆ ಗಂಡಸಿನ ಮುದಿ ಅಪ್ಪನೂ ವಾಸವಾಗಿದ್ದ. ಈ ಗಂಡ,
ಹೆಂಡತಿ ಮತ್ತು ಮಗನಿಗೆ ನಿತ್ಯ ಬೆಳ್ಳಿತಟ್ಟೆಯಲ್ಲಿ ರುಚಿರುಚಿಯಾದ ಊಟ. ಆದರೆ, ಆ ಮುದುಕ ಅಪ್ಪನಿಗೆ ಮಾತ್ರ ಅಲ್ಯುಮಿನಿಯಂ ತಟ್ಟೆಯಲ್ಲಿ ಒಂದಿಷ್ಟು ಅನ್ನ, ತಿಳಿಸಾರನ್ನು ನೀಡಲಾಗುತ್ತಿತ್ತು.

ವರುಷಗಳ ನಂತರ, ಆ ಮುದುಕ ತೀರಿಕೊಳ್ಳುತ್ತಾನೆ. ಅವನ ಅಂತ್ಯಸಂಸ್ಕಾರಗಳನ್ನು ಪೂರೈಸಿದ ಮಗ, ಅಪ್ಪ ಊಟಮಾಡಿದ ಹಳೇ ಅಲ್ಯುಮಿನಿಯಂ ತಟ್ಟೆ ಯನ್ನು ಬಿಸಾಕಲು ಹೊರಡುತ್ತಾನೆ. ಅಷ್ಟರಲ್ಲಿ ಅವನ ಮಗ ಬಂದು ಹೇಳಿದ ‘ಬಿಸಾಕದಿರು ಆ ತಟ್ಟೆಯನು, ಅದು ನನಗೆ ಬೇಕು’, ‘ಯಾಕೆ ಬೇಕು ನಿನಗೆ? ನಿನಗೆ ಊಟ ಮಾಡಲು ಬೆಳ್ಳಿ ತಟ್ಟೆ ಇದೆಯಲ್ಲ !’ ಎಂದು ಅಪ್ಪ ಹೇಳಲಾಗಿ, ಆ ಮುಗ್ಧ ಬಾಲಕ ಹೇಳುತ್ತಾನೆ ‘ಆ ತಟ್ಟೆ ನನಗೆ ಬೇಕಿಲ್ಲ: ಆದರೆ ನೀನು ಮುದುಕ ಆದಮೇಲೆ, ನಿನಗೆ ಊಟಮಾಡಲು ಬೇಕಲ್ಲ! ಇಟ್ಟಿರು!’ ಮಗುವಿನ ಮಾತಿನಿಂದ ಅಪ್ಪ ಎಚ್ಚೆತ್ತುಕೊಂಡ.

ಅಂತೆಯೇ ಮಕ್ಕಳ ಬಗ್ಗೆ ಕಾಳಜಿ ವಹಿಸದ, ಅವರಿಗೆ ತಮ್ಮ ಪ್ರೀತಿ ಸಮಯವನ್ನು ನೀಡದ ಹೆತ್ತವರು, ಅವರಿಂದ ಪ್ರೀತ್ಯಾದರಗಳನ್ನು ಆಶಿಸುವುದಾದರೂ
ಹೇಗೆ? ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ To be loved, be lovable ಎಂಬುದಾಗಿ. ಅರ್ಥಾತ್ ಪ್ರೀತಿಸಲ್ಪಡಬೇಕಾದರೆ, ನಾವೂ ಪ್ರೀತಿಸಲ್ಪಡುವ
ವ್ಯಕ್ತಿಗಳಾಗಿರಬೇಕು. ‘ನನ್ನನ್ನು ಯಾರೂ ಪ್ರೀತಿಸುತ್ತಿಲ್ಲಾ’ ಎನ್ನುವವರು, ತಾವೂ ಇತರರನ್ನೂ ಪ್ರೀತಿಸುತ್ತಿದ್ದೇವೆಯೇ ಎಂಬ ಪ್ರಶ್ನೆಗೆ ಉತ್ತರಿಸಬೇಕು. ಪ್ರೀತಿ- ವಿಶ್ವಾಸ-ಗೌರವಗಳನ್ನು, ಬರೇ ಹಣಬಲದಿಂದಾಗಲೀ, ಹಕ್ಕು ಭಾದ್ಯತೆಗಳ ಮುಖೇನವಾಗಲೀ, ಒತ್ತಾಯ-ಒತ್ತಡಗಳಿಂದಾಗಲೀ, ಇಲ್ಲವೇ ಕಾಡಿ ಬೇಡುವು ದರಿಂದಾಗಲೀ ಗಳಿಸಲಾಗದು, ಗಳಿಸಬಾರದು.

ಇವುಗಳೆಲ್ಲವನ್ನೂ ಗಳಿಸುವ ಏಕೈಕ ರಾಜಮಾರ್ಗ ವೆಂದರೆ, ಇವುಗಳಿಗೆ ಪಾತ್ರರಾಗುವ ಅರ್ಹತೆಯನ್ನೂ, ಯೋಗ್ಯತೆಯನ್ನೂ ಗಳಿಸಿಕೊಳ್ಳೋದು. ಆಗ ಎಲ್ಲವೂ
ತಾನಾಗಿಯೇ ಇವರ ಹಿಂದೆ ಬರುತ್ತಿರುತ್ತದೆ. ನಮಗೆ, ಒಳ್ಳೆಯ ಮಿತ್ರರು ದೊರಕಬೇಕಾದರೆ, ಮೊದಲು ನಾವೂ ಒಳ್ಳೆಯ ಮಿತ್ರರಾಗಬೇಕಾಗುತ್ತದೆ. ಆದುದರಿಂದ ಮೊದಲು ಅರ್ಹರಾಗೋಣ; ತದನಂತರ ಆಶಿಸೋಣ “Deserve first, expect later.

ಇದು ಸ್ಥಾನ, ಮಾನ, ಸನ್ಮಾನಗಳ ವಿಚಾರ ಇಲ್ಲವೇ ಪ್ರೀತಿ-ಗೌರವವನ್ನು ಗಳಿಸುವ ವಿಚಾರವೇ ಇರಬಹುದು ಎಲ್ಲದಕ್ಕೂ ಮಾನ್ಯ. ಕೆಲವೊಮ್ಮೆ, ಕೆಲವರಿಗೆ,
ಅವರ ಅರ್ಹತೆಗೂ ಮೀರಿ ಸ್ಥಾನಮಾನಗಳು, ಅಧಿಕಾರ ಅವಕಾಶಗಳು, ಪದವಿ ಪ್ರಶಸ್ತಿಗಳು ಪ್ರಾಪ್ತವಾಗೋದು ಉಂಟು. ಹೀಗಾಗಲು, ಹಲವಾರು ಕಾರಣ ಗಳಿರುತ್ತವೆ; ಅದು ಜಾತಿ ಬಲ, ಹಣ ಬಲ, ಸಂಪರ್ಕ ಬಲಗಳಿರಬಹುದು. ಇವೆಲ್ಲಾ ನಮ್ಮ ದೇಶದಲ್ಲಿ ಸರ್ವೇ ಸಾಮಾನ್ಯ. ಎಷ್ಟೋ ಕಡೆ, ಎಷ್ಟೋ ಸಂದರ್ಭಗಳಲ್ಲಿ ಅವಕಾಶವಿದ್ದವರಿಗೆ ಪ್ರತಿಭೆ ಇರೋದಿಲ್ಲ; ಪ್ರತಿಭೆ ಅರ್ಹತೆ ಇದ್ದವರಿಗೆ ಅವಕಾಶವಿರೋದಿಲ್ಲ; ಯೋಗ್ಯತೆ ಇದ್ದವರಿಗೆ ಯೋಗ ಇರೋದಿಲ್ಲ; ಯೋಗ ಇದ್ದವರಿಗೆ ಯೋಗ್ಯತೆ ಇರೋದಿಲ್ಲ.

ಪರಿಣಾಮವಾಗಿ ಯಾರ‍್ಯಾರು ಎಲ್ಲೆಲ್ಲಿ ಇರಬೇಕೋ ಅವರುಗಳು ಅಲ್ಲಲ್ಲಿ ಇಲ್ಲ; ಯಾರ‍್ಯಾರು ಎಲ್ಲೆಲ್ಲಿ ಇರಬಾರದೋ ಅವರುಗಳು ಅಲ್ಲಲ್ಲಿ ಸೇರಿಕೊಳ್ಳುತ್ತಾರೆ;
ತೂರಿಕೊಳ್ಳುತ್ತಾರೆ. ಪಿ.ಯು.ಸಿ. ಫೇಲಾದವರು, ಉನ್ನತ ಶಿಕ್ಷಣ ಸಚಿವರಾಗ ಬಯಸುತ್ತಾರೆ. ಕ್ರಿಮಿನಲ್ ಕೇಸ್‌ಗಳ ಹಿನ್ನೆಲೆಯಿದ್ದವರು, ಗೃಹಮಂತ್ರಿಗಳಾಗ ಬಯಸುತ್ತಾರೆ. ಫಲಶ್ರುತಿಯಾಗಿ ಕಾರ್ಯದಕ್ಷತೆ ಕೆಳಮುಖಿಯಾಗಿ, ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಏನಾದರೂ, ಎಲ್ಲಾ ಕ್ಷೇತ್ರಗಳಲ್ಲಿ, ಜಾತಿ, ಮತ, ನಮ್ಮವರು, ಇಲ್ಲವೇ ಲಾಭ, ನಷ್ಟಗಳ ಲೆಖ್ಖಾಚಾರವನ್ನೂ ಮೀರಿ, ವ್ಯಕ್ತಿಯ ಪ್ರತಿಭೆ, ಅರ್ಹತೆ, ಯೋಗ್ಯತೆಗನುಸಾರವಾಗಿ, ಆಯಾಯ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಿಸಿದ್ದೇ ಆದಲ್ಲಿ ಈ ನಮ್ಮ ದೇಶ ಅಭಿವೃದ್ಧಿಯ ಉತ್ತುಂಗವನ್ನೇ ಏರುತ್ತಿತ್ತು.

If you put the right person for the right job, success is total and the country will progress faster. ಹೀಗಾಗದಿರೋದು ದೇಶದ ದುರಂತವೇ ಸರಿ. ಅದೇನೇ ಇರಲಿ, ತಮ್ಮ ಯೋಗ್ಯತೆಗಿಂತ ಮಿಗಿಲಾದ ಯೋಗದಿಂದ, ಅದೃಷ್ಟದಿಂದ ಮೇಲೆ ಬಂದವರು ‘ಅಪ್ರಾಪ್ತಸ್ಯ ಪ್ರಾಪ್ತಿಃ ಯೋಗಃ ; ಪ್ರಾಪ್ತಸ್ಯ ಪರಿರಕ್ಷಾಣಂಕ್ಷೇಮಃ’ ಅರ್ಥಾತ್ “ತನಗೆ ಪ್ರಾಪ್ತವಲ್ಲದ್ದು ಪ್ರಾಪ್ತಿಯಾದರೆ, ಅದು ನನ್ನ ಯೋಗ; ಪ್ರಾಪ್ತಿಯಾದುದನ್ನು ಸಂರಕ್ಷಿಸಿ ಅನುಭವಿಸೋದು ಕ್ಷೇಮ” ಎಂಬ ಧೋರಣೆಯಿಂದ ಮುಂದುವರಿಯುತ್ತಾರೆ. ಅರ್ಹತೆ ಇದ್ದೂ ಅವಕಾಶ ವಂಚಿತರಾದವರು “It is better to deserve an honour and not have it, rather than have it and not deserve it ಎಂಬ ಸಿದ್ಧಾಂತವನ್ನು ತಮ್ಮದಾಗಿಸಿ ಪಾಲಿಗೆ ಬಂದುದು ಪಂಚಾಮೃತವೆಂದು ತಿಳಿದು ಸುಮ್ಮ ನಾಗಬೇಕು.

ಸಾಮಾನ್ಯವಾಗಿ, ತಮ್ಮ ಅರ್ಹತೆಗಿಂತ ಮಿಗಿಲಾಗಿ ಆಶಿಸುವವರೇ ಹೆಚ್ಚು. ಇವರಿಗೆ, ತಮಗಿಂತಲೂ ಅರ್ಹರು ಪಾಳಿಯಲ್ಲಿ ನಿಂತು ಕಾಯುತ್ತಿದ್ದಾರೆ ಎಂಬ
ಕಲ್ಪನೆಯೇ ಇರೋದಿಲ್ಲ. ತಾನು ಇದಕ್ಕೆ ಅರ್ಹನೋ, ಅನರ್ಹನೋ ಎನ್ನುವುದನ್ನು ಪ್ರಾಂಜಲ ಮನಸ್ಸಿನಿಂದ ತಿಳಿದುಕೊಳ್ಳುವ ಮುಕ್ತ ಮನಸಿದ್ದಲ್ಲಿ ನಿರಾಸೆಗಳೇ
ಇರೋದಿಲ್ಲ. ಒಟ್ಟಿನಲ್ಲಿ ಅರ್ಹತೆಯನ್ನು ಮೊದಲು ಗಳಿಸಿಕೊಳ್ಳಬೇಕು; ಅವಕಾಶಕ್ಕಾಗಿ ಕಾಯಬೇಕು. ನಮ್ಮಲ್ಲಿ ಅರ್ಹತೆ, ಯೋಗ್ಯತೆ, ಪ್ರತಿಭೆಗಳಿದ್ದಲ್ಲಿ ಅವು
ಒಂದಲ್ಲ ಒಂದು ದಿನ ಪ್ರಕಟಗೊಳ್ಳೋದು ಖಂಡಿತ. ಈ ಸತ್ಯವನ್ನು ಈ ಸುಂದರ ಸುಭಾಷಿತದಲ್ಲಿ ಹೀಗೆ ಹೇಳಲಾಗಿದೆ.

“ಕಾಕಃ ಕೃಷ್ಣಃ ಪಿಕ ಕೃಷ್ಣಃ ಕೋಬೇಧೊ ಪಿಕ ಕಾಕ”? ಎಂಬ ಪ್ರಶ್ನೆಗೆ ಉತ್ತರ “ವಸಂತ ಸಮಯ ಸಂಪ್ರಾಪ್ತೇ; ಕಾಕ ಕಾಕ: ಪಿಕ ಪಿಕ”. ಅರ್ಥಾತ್ “ಕಾಗೆ ಕಪ್ಪು, ಕೋಗಿಲೆಯೂ ಕಪ್ಪು. ಇವೆರಡರ ನಡುವೆ ಏನು ವ್ಯತ್ಯಾಸ?” ಎಂಬ ಪ್ರಶ್ನೆಗೆ ಸಿಕ್ಕಿದ ಉತ್ತರ “ವಸಂತ ಸಮಯ ಬಂದಾಗ, ಕಾಗೆ ಕಾಗೆನೇ, ಕೋಗಿಲೆ ಕೋಗಿಲೆಯೆ.” ಹೀಗೆ ಹೂವಿನಲ್ಲಿ ಮಕರಂದವಿದ್ದರೆ ಮಾತ್ರ ಅದನ್ನರಸುತ್ತಾ ದುಂಬಿಗಳು ಬರುವಂತೆ, ತಮ್ಮಲ್ಲಿ ಅರ್ಹತೆ ಇದ್ದಲ್ಲಿ ಜನ ಅವರಾಗಿಯೇ ನಮ್ಮ ಬಳಿ ಬರುತ್ತಾರೆ; ನಾವೇನೂ ಅವರ ಬಳಿ ಹೋಗಬೇಕಾಗಿಲ್ಲ.

ಸಮುದ್ರ ಎಂದೂ ನೀರಿಗಾಗಿ ಚಿಂತೆ ಮಾಡೋದಿಲ್ಲ; ಕಾರಣ ತಾವಾಗಿಯೇ ನದಿಗಳು ಅದರತ್ತ ಧಾವಿಸಿ ಬರುತ್ತಿರುತ್ತವೆ. ಅಂತೆಯೇ ನಮ್ಮಲ್ಲಿ ಯೋಗ್ಯತೆ ಪ್ರತಿಭೆ ಇದ್ದಲ್ಲಿ, ಯಶಸ್ಸು ಕೀರ್ತಿಗಳು ನಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತಿರುತ್ತವೆ. ಆದು ದರಿಂದ ಏನನ್ನಾದರೂ ಆಶಿಸುವ ಮೊದಲು, ಅದಕ್ಕೆ ತಕ್ಕುದಾದ ಅರ್ಹತೆ ನಮ್ಮ ಬಳಿ ಇರಲಿ; ಇಲ್ಲವಾದರೆ ಅರ್ಹತೆಯನ್ನು ಮೊದಲು ಗಳಿಸಿಕೊಂಡು ನಂತರ ಆಶಿಸೋಣ. ಇದು ಎಲ್ಲರಿಗೂ ಕ್ಷೇಮ.