Tuesday, 26th November 2024

R T Vittalmurthy Column: ಸಿದ್ದು ಗೂಢಚಾರರ ರಹಸ್ಯ ಸಂದೇಶ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕಳೆದ ಗುರುವಾರ ಬಿಜೆಪಿಯ ಹಿರಿಯ ನಾಯಕ ಕಟ್ಟಾ ಸುಬ್ರಮಣ್ಯನಾಯ್ಡು ಅವರ ಸದಾಶಿವನಗರ ನಿವಾಸದಲ್ಲಿ ಒಂದು ಸಭೆ ನಡೆದಿದೆ. ಅದರಲ್ಲಿ ಭಾಗವಹಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಪಕ್ಷದ ಭಿನ್ನಮತೀಯರ ವಿರುದ್ದ ಕಿಡಿ ಕಾರಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸುಬ್ರಮಣ್ಯ ನಾಯ್ಡು ಮತ್ತು ರೇಣುಕಾಚಾರ್ಯ, “ಅಲ್ರೀ ಇವತ್ತು ಯಾರೇ ಅಧ್ಯ?
ರಾಗಲಿ, ಅವರ ಜತೆ ನಿಲ್ಲುವುದು ನಮ್ಮ ಕರ್ತವ್ಯ. ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ
ಹಲವರು ವಿಜಯೇಂದ್ರರ ವಿರುದ್ಧ ನಿಂತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಅವರು ತಿರುಗಿ
ಬೀಳಲು ಏನೇ ಕಾರಣಗಳಿರಲಿ, ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗವಾಗಿ
ಟೀಕಿಸುವುದಲ್ಲ. ಅಂದ ಹಾಗೆ, ನಮಗೂ ಲೋಕಸಭಾ ಚುನಾವಣೆಯ ಟಿಕೆಟ್ ಪಡೆಯುವ ಇಚ್ಛೆಯಿತ್ತು, ಆದರೆ
ಸಿಗಲಿಲ್ಲ. ಹಾಗಂತ ನಮಗೆ ಟಿಕೆಟ್ ಸಿಗದಿರಲು ಯಡಿಯೂರಪ್ಪ, ವಿಜಯೇಂದ್ರ ಕಾರಣ ಅಂತ ಉಲ್ಟಾ ಮಾತ
ನಾಡಲು ಸಾಧ್ಯವೇ? ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ರಾಜ್ಯದಲ್ಲಿ ಪಕ್ಷ ಮೇಲೆದ್ದು ನಿಲ್ಲಲು ಪೂರಕ ವಾತಾವ
ರಣವಿದೆ. ಆಡಳಿತಾರೂಢ ಕಾಂಗ್ರೆಸ್ ಹಲವು ಸಮಸ್ಯೆಗಳಿಂದ ಬಳಲುತ್ತಿರುವಾಗ ಪರಿಸ್ಥಿತಿಯನ್ನು ಎನ್‌ಕ್ಯಾಶ್
ಮಾಡಿಕೊಳ್ಳಲು ನಾವು ತಯಾರಾಗಿರಬೇಕೇ ಹೊರತು ನಾಯಕತ್ವದ ವಿರುದ್ಧ ಮಾತನಾಡುತ್ತಾ ಕೂರುವುದಲ್ಲ.

ಇವತ್ತು ಯಡಿಯೂರಪ್ಪ ಮತ್ತು ವಿಜಯೇಂದ್ರರ ಮೇಲೆ ಆರೋಪ ಹೊರಿಸುತ್ತಿರುವ ನಾಯಕರ ಪೈಕಿ ಎಷ್ಚು ಜನ
ನೆಟ್ಟಗಿದ್ದಾರೆ. ಒಬ್ಬ ನಾಯಕರು ತಮ್ಮ ಹಿಡಿತದಲ್ಲಿದ್ದ ಶುಗರ್ ಫ್ಯಾಕ್ಟರಿಯನ್ನು ಹರಾಜು ಹಾಕಿ ನಕಲಿ ದಾಖಲೆಗಳ
ಮೂಲಕ ಆಟವಾಡುತ್ತಿದ್ದಾರೆ.

ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ಕೂಗಾಡುತ್ತಿರುವ ಬಹುತೇಕ ನಾಯಕರ ಕಥೆಯಿದು. ಹೋಗಲಿ, ಇವತ್ತು ವಿಜಯೇಂದ್ರ ಕೆಳಗಿಳಿಯಲಿ ಸಿ.ಟಿ.ರವಿ ಅಧ್ಯಕ್ಷರಾಗಲಿ ಎನ್ನುತ್ತಿರುವವ, ಅಶೋಕ್ ಕೆಳಗಿಳಿದು ಯತ್ನಾಳ್ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಲಿ ಎನ್ನುತ್ತಿರುವವರು ಹಿಂದೆಲ್ಲ ಏನು ಮಾಡುತ್ತಿದ್ದರು? ಯಡಿಯೂರಪ್ಪ ಅವರು 2013ರಲ್ಲಿ ಪಕ್ಷ ತೊರೆದಾಗ ಇಂಥವರೇ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿತ್ತು. ಆದರೆ ಇವರೆಲ್ಲ ಇದ್ದೂ ಆಗ ಬಿಜೆಪಿಯೇಕೆ ಮರಳಿ ಅಧಿಕಾರ ಹಿಡಿಯಲಿಲ್ಲ? ಯಡಿಯೂರಪ್ಪರನ್ನು ಹೊರತುಪಡಿಸಿ ಬೇರೊಬ್ಬರಿಗೆ ನಾಯಕತ್ವ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟ ಅಂತ ಹೈಕಮಾಂಡ್‌ಗೂ ಗೊತ್ತಿದ್ದ ಕಾರಣಕ್ಕೆ ತಾನೆ ಪುನಃ ಯಡಿಯೂರಪ್ಪರನ್ನು ಬಿಜೆಪಿಗೆ ಮರಳಿ ಕರೆತಂದಿದ್ದು? ಒಂದು ವೇಳೆ ಅವತ್ತು ಯಡಿಯೂರಪ್ಪ ಪಕ್ಷಕ್ಕೆ ಮರಳದಿದ್ದಿದ್ದರೆ 2019ರಲ್ಲಿ ನಾವು ಮರಳಿ ಅಧಿಕಾರ ಪಡೆಯುತ್ತಿರ ಲಿಲ್ಲ. ಇವತ್ತು ಯಡಿಯೂರಪ್ಪ ಅವರ ಬಗ್ಗೆ ಯಾರಿಗೇನೇ ಭಿನ್ನಾಭಿಪ್ರಾಯ ಇರಬಹುದು. ಆದರೆ ನಾವು ನೆನಪಿಡ ಬೇಕಾದ ಸಂಗತಿಯೆಂದರೆ ಅವರಿಂದಲೇ ನಾವು ಅಧಿಕಾರಕ್ಕೆ ಬಂದಿದ್ದು ಮತ್ತು ಸ್ಥಾನಮಾನಗಳನ್ನು ಪಡೆದಿದ್ದು. ಈಗಲೂ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಹೊರತುಪಡಿಸಿ ಬೇರೊಬ್ಬ ನಾಯಕರ ಕೈಗೆ ಪಕ್ಷ ಹೋದರೆ ವಿರೋಧ ಪಕ್ಷದ ಸ್ಥಾನ ಕಾಯಂ.

ಇವೆಲ್ಲ ಹೋಗಲಿ ಎಂದರೆ ಇತ್ತೀಚೆಗೆ ಪಕ್ಷದಿಂದ ಹೊರಗೆ ಹೋಗಿರುವ ನಾಯಕರ ಜತೆ ಸೇರಿ ಆರ್‌ಸಿಬಿ ಕಟ್ಟುತ್ತೇವೆ, ಎಸಿಬಿ ಕಟ್ಟುತ್ತೇವೆ ಅಂತ ಇವರು ಹೊರಟಿzರೆ. ನಾವು ಸುಮ್ಮನಿದ್ದಷ್ಟು ದಿನ ಇವರ ಆಟ ಮುಂದುವರಿಯುತ್ತದೆ. ಹೀಗಾಗಿ ನಾವು ಸುಮ್ಮನಿರುವುದು ಬೇಡ, ಮುಂದಿನ ವಾರ ದೊಡ್ಡ ಸಭೆ ನಡೆಸಿ ಭಿನ್ನಮತೀಯರನ್ನು ಪಕ್ಷದಿಂದ ಉಚ್ಚಾಟಿಸಲು ಬಿಜೆಪಿ ವರಿಷ್ಠರನ್ನು ಆಗ್ರಹಿಸೋಣ” ಎಂಬ ತೀರ್ಮಾನಕ್ಕೆ ಬರುವುದರೊಂದಿಗೆ ಈ ಸಭೆ ಮುಗಿದಿದೆ.

ಅರ್ಥಾತ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ವಿರುದ್ಧ ತಿರುಗಿಬಿದ್ದಿರುವ ಯತ್ನಾಳ್, ಸಿ.ಟಿ.ರವಿ, ರಮೇಶ್
ಜಾರಕಿಹೊಳಿ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಕುಮಾರ್ ಬಂಗಾರಪ್ಪ ಸೇರಿದಂತೆ ಪಕ್ಷದ ಭಿನ್ನಮತೀ ಯರ ಪಡೆಯ ವಿರುದ್ಧ ಅಧ್ಯಕ್ಷ ನಿಷ್ಠರ ಪಡೆ ವಿಧ್ಯುಕ್ತ ಹೋರಾಟಕ್ಕಿಳಿಯುವುದು ನಿಶ್ಚಿತವಾಗಿದೆ.

ಯಡಿಯೂರಪ್ಪ ಮೌನಕ್ಕೆ ಕಾರಣವೇನು?

ಅಂದ ಹಾಗೆ, ಯಡಿಯೂರಪ್ಪ ಮತ್ತು ವಿಜಯೇಂದ್ರರ ವಿರುದ್ಧ ದನಿಯೆತ್ತುತ್ತಿರುವ ಭಿನ್ನಮತೀಯರ ವಿರುದ್ಧ ಪಕ್ಷ
ನಿಷ್ಠರ ಹೆಸರಿನಲ್ಲಿ ಪ್ರತಿ ಹೋರಾಟಕ್ಕೆ ಸಿದ್ಧತೆ ನಡೆದಿರುವುದೇನೋ ಸರಿ. ಆದರೆ ತಮ್ಮ ವಿರುದ್ಧ ತಿರುಗಿ ಬಿದ್ದವರ
ಕುರಿತು ಯಡಿಯೂರಪ್ಪ ಅವರೇಕೆ ಮೌನವಾಗಿದ್ದಾರೆ ಎಂಬುದೇ ಹಲವರಿಗೆ ಅರ್ಥವಾಗುತ್ತಿಲ್ಲ. ಮೂಲಗಳ
ಪ್ರಕಾರ, ಇಂಥ ಭಿನ್ನಮತೀಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರಿಷ್ಠರ ಮೇಲೆ ಒತ್ತಡ ಹೇರಿ ಅಂತ ರೇಣುಕಾ ಚಾರ್ಯ ಸೇರಿದಂತೆ ಹಲ ನಾಯಕರು ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ. “ಇವತ್ತು ಯಾರು ವಿಜಯೇಂದ್ರ ಮತ್ತು ನಿಮ್ಮ ವಿರುದ್ಧ ದನಿಯೆತ್ತುತ್ತಿದ್ದಾರೋ, ಅವರಲ್ಲಿ ಬಹುತೇಕರು ನಿಮ್ಮಿಂದಲೇ ರಾಜಕೀಯವಾಗಿ ಬೆಳೆದ ವರು.

ಅಂಥವರು ಯಾವುದೋ ಅಸಮಾಧಾನ ಇಟ್ಟುಕೊಂಡು ನಿಮ್ಮ ವಿರುದ್ಧ ಕೂಗಾಡುತ್ತಿದ್ದರೆ ಅದನ್ನು ನೋಡಿ ಕೊಂಡು ಏಕೆ ಸುಮ್ಮನಿರುತ್ತೀರಿ? ನಾಳೆ ಇದೇ ಅಂಶ ಪಕ್ಷದ ಬೆಳವಣಿಗೆಗೆ ಮಾರಕವಾಗುವುದಿಲ್ಲವೇ?” ಅಂತ ಈ ನಾಯಕರು ಯಡಿಯೂರಪ್ಪರನ್ನು ಪ್ರಶ್ನಿಸಿದ್ದಾರೆ. ಆದರೆ ಯಾರೆಷ್ಟೇ ಹೇಳಿದರೂ ಯಡಿಯೂರಪ್ಪ ಮಾತ್ರ
ಮೌನಮುನಿಯಾಗಿಬಿಟ್ಟಿzರೆ. ಅಷ್ಟೇಕೆ? ಭಿನ್ನರ ವಿರುದ್ಧ ನಾವೇ ತಿರುಗಿ ಬೀಳುತ್ತೇವೆ ಎಂದರೂ ನಿರಾಸಕ್ತಿ ತೋರಿಸು
ತ್ತಿದ್ದಾರೆ.

ಇದ್ದುದರಲ್ಲಿ ವಿಜಯೇಂದ್ರ ಮಾತ್ರ ಭಿನ್ನರ ವಿರುದ್ಧ ವರಿಷ್ಠರಿಗೆ ದೂರು ಕೊಡುತ್ತಾ ಬಂದಿದ್ದಾರಾದರೂ ಯಡಿ ಯೂರಪ್ಪ ಮಾತ್ರ ಮೌನಿಯಾಗಿ ಉಳಿದಿದ್ದಾರೆ. ಇದಕ್ಕೇನು ಕಾರಣ ಎಂಬುದೇ ಅವರ ಆಪ್ತರಿಗೆ ಅರ್ಥವಾಗುತ್ತಿಲ್ಲ. ಯಡಿಯೂರಪ್ಪ ಎಷ್ಟು ದಿನ ಮೌನವಾಗಿರುತ್ತಾರೋ, ಅಲ್ಲಿಯ ತನಕ ಭಿನ್ನರ ಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದು ಈ ಆಪ್ತರ ಚಿಂತೆ. ಹೀಗಾಗಿ ಅವರೇ ಒಂದು ನಿರ್ಧಾರಕ್ಕೆ ಬಂದು ಭಿನ್ನರ ವಿರುದ್ಧ ಕಾಳಗಕ್ಕೆ ಸಜ್ಜಾಗಿದ್ದಾರೆ.

ಕೈ ವರಿಷ್ಠರ ಆತಂಕವೇನು?
ಇನ್ನು ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ಮೊಕದ್ದಮೆ
ದಾಖಲಿಸಿತಲ್ಲ? ಇದಾದ ನಂತರ ಕಾಂಗ್ರೆಸ್ ವರಿಷ್ಠರು ಮತ್ತಷ್ಟು ಗಟ್ಟಿಯಾಗಿ ಸಿದ್ದು ಬೆನ್ನಿಗೆ ನಿಲ್ಲಲು ನಿರ್ಧರಿಸಿ ದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೆಳಗಿಳಿದರೆ ರಾಜ್ಯ ಸರಕಾರ ತುಂಬ ಕಾಲ ಉಳಿಯುವುದಿಲ್ಲ ಎಂಬ ಎಚ್ಚರಿಕೆಯೇ ಇದಕ್ಕೆ ಕಾರಣ. ಅಂದ ಹಾಗೆ, ಸಿದ್ದರಾಮಯ್ಯ ಕೆಳಗಿಳಿದರೆ ತಾವು ಸಿಎಂ
ಆಗಬೇಕು ಅಂತ ಹಲ ನಾಯಕರು ಲೆಕ್ಕ ಹಾಕುತ್ತಿರುವುದೇನೋ ನಿಜ. ಆದರೆ ಅಂಥ ಸನ್ನಿವೇಶ ಸೃಷ್ಟಿಯಾದರೆ
ನಾಯಕತ್ವಕ್ಕಾಗಿ ಬಡಿದಾಟ ಆರಂಭವಾಗುತ್ತದೆ. ಈ ಬಡಿದಾಟದ ನಡುವೆ ಯಾರಿಗೇ ನಾಯಕತ್ವ ಸಿಕ್ಕರೂ
ಅದನ್ನೊಪ್ಪದ ಉಳಿದ ನಾಯಕರು ಬಂಡಾಯ ಏಳುತ್ತಾರೆ.

ಈ ಪೈಕಿ ಉತ್ತರ ಕರ್ನಾಟಕ ಭಾಗದ ಸಚಿವರೊಬ್ಬರು 40 ಶಾಸಕರ ‘ಸೂಸೈಡ್ ಸ್ಕ್ವ್ಯಾಡ್’ನೊಂದಿಗೆ ಸಜ್ಜಾಗಿದ್ದಾರೆ.
ಅವರ ಪ್ರಕಾರ, ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ ತಾವು ಆ ಜಾಗಕ್ಕೆ ಬರಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೆ ಪಕ್ಷ ತೊರೆಯುವುದು ಗ್ಯಾರಂಟಿ. ಹೀಗೆ ಸ್ಪಷ್ಟ ತೀರ್ಮಾನಕ್ಕೆ ಬಂದಿರುವ ಈ ನಾಯಕರು ಅದಾಗಲೇ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿzರೆ ಎಂಬುದು ಕೈ ಪಾಳಯದ ವರಿಷ್ಠರಿಗೆ ಗೊತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಯ ಕಡೆ ಮುಖ ಮಾಡಿರುವ ಈ ನಾಯಕರ ಬೆನ್ನ ಹಿಂದಿರುವ ಪಡೆ ಪರ್ಯಾಯ
ಸರಕಾರ ರಚನೆಯ ಬಗ್ಗೆ ಯೋಚಿಸುತ್ತಿಲ್ಲ. ಬದಲಿಗೆ ಸಿಕ್ಕರೆ ಅಧಿಕಾರ, ಇಲ್ಲದಿದ್ದರೆ ಬೀಳಲಿ ಸರಕಾರ ಎಂಬ
ಲೆಕ್ಕಾಚಾರದಲ್ಲಿದೆ. ಇದು ಗೊತ್ತಿರುವುದರಿಂದಲೇ ಕಾಂಗ್ರೆಸ್ ವರಿಷ್ಠರು ಸಿದ್ದು ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ.

ಅಷ್ಟೇ ಅಲ್ಲ, ಸರಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿ ಮಿತ್ರಕೂಟದ ವಿರುದ್ಧ ‘ಟಿಟ್ ಫಾರ್ ಟ್ಯಾಟ್’ ಮಾರ್ಗ
ಅನುಸರಿಸಲು ರಾಜ್ಯ ನಾಯಕರಿಗೆ ಸಿಗ್ನಲ್ಲು ನೀಡಿದ್ದಾರೆ. ಇದೇ ಕಾರಣಕ್ಕಾಗಿ ಬಿಜೆಪಿ ಮಿತ್ರಕೂಟದ ನಾಯಕರ ಮೇಲೆ ಒಂದಾದ ಮೇಲೆ ಒಂದರಂತೆ ಕೇಸು ಜಡಿಯಲಾಗುತ್ತಿದೆ. ಸೂಕ್ಷ್ಮವಾಗಿ ನೋಡಿದರೆ ಇವತ್ತು ಕರ್ನಾಟಕದಲ್ಲಿ
ನಡೆಯುತ್ತಿರುವುದು ಪಶ್ಚಿಮ ಬಂಗಾಳ ಮತ್ತು ಕೇರಳ ಮಾದರಿಯ ಯುದ್ಧ. ಪಶ್ಚಿಮ ಬಂಗಾಳದಲ್ಲಿ ಮಮತಾ
ಬ್ಯಾನರ್ಜಿ ಸರಕಾರ ಬಿಜೆಪಿ ವಿರುದ್ಧ ಬೀದಿ ಹೋರಾಟಕ್ಕೆ ಇಳಿಯುತ್ತಿದೆ. ಕೇರಳದಲ್ಲೂ ಬಿಜೆಪಿ ವಿರುದ್ಧ ಎಡರಂಗ
ಮತ್ತು ಕಾಂಗ್ರೆಸ್ ಮುಗಿಬೀಳುತ್ತಿವೆ. ಅರ್ಥಾತ್, ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಯಾವುದೇ ಬಗೆಯ
ಹೋರಾಟಕ್ಕೆ ಸಜ್ಜಾಗುತ್ತಿದೆ. ಚುನಾವಣಾ ಬಾಂಡ್ ವಿಷಯದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್,
ನಡ್ಡಾ ವಿರುದ್ಧ ಮುಗಿಬಿದ್ದಿರುವ ರೀತಿ ಇದಕ್ಕೆ ಸಾಕ್ಷಿ.

ಆಪ್ತರು ತಂದ ರಹಸ್ಯ ಸಂದೇಶ
ಇನ್ನು ಮುಡಾ ಪ್ರಕರಣವನ್ನು ತಾರಕಕ್ಕೇರಿಸಲು ನಡೆಯುತ್ತಿರುವ ಯತ್ನಗಳ ಬಗ್ಗೆ ಸಿಎಂ ಸಿದ್ದರಾಮಯ್ಯರ ಆಪ್ತರು
ರಹಸ್ಯ ಸಂದೇಶ ತಂದಿzರಂತೆ. ಅವರ ಪ್ರಕಾರ, ಈ ಪ್ರಕರಣ ದಿನದಿಂದ ದಿನಕ್ಕೆ ಬಿಗಿಯಾಗುತ್ತಿರುವುದಕ್ಕೆ ಕೇಂದ್ರ
ಸರಕಾರದಲ್ಲಿರುವ ರಾಜ್ಯದ ಬಿಜೆಪಿ ನಾಯಕರೊಬ್ಬರು ಕಾರಣ. ಮೇಲ್ನೋಟಕ್ಕೆ ಜೆಡಿಎಸ್‌ನ ಕುಮಾರಸ್ವಾಮಿ ಕಣ್ಣಿಗೆ
ಕಾಣುತ್ತಿದ್ದರೂ ಆಳದಲ್ಲಿ ಅವರಿಗಿಂತ ಪವರ್ ಫುಗಿ ಕೆಲಸ ಮಾಡುತ್ತಿರುವುದು ಈ ನಾಯಕ. ಇವತ್ತು ದಕ್ಷಿಣ
ಭಾರತದಲ್ಲಿ ಬಿಜೆಪಿಗೆ ಸವಾಲು ಅಂತಿದ್ದರೆ ಅದು ಸಿದ್ದರಾಮಯ್ಯ. ಅವರು ಕೆಳಗಿಳಿಯುವವರೆಗೆ ಕರ್ನಾಟಕದಲ್ಲಿ
ಕಾಂಗ್ರೆಸ್ ಸರಕಾರ ಅಲುಗಾಡುವುದಿಲ್ಲ.

ಹೀಗಾಗಿ ಶತಾಯಗತಾಯ ಹೋರಾಡಿ ಅವರನ್ನು ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಮಿತ್ರಕೂಟ ಕರ್ನಾಟಕದ ಅಧಿಕಾರ ಹಿಡಿಯುವುದು ನಿಶ್ಚಿತ. ಹೀಗಾಗಿ ಮುಡಾ ಪ್ರಕರಣ ಸಿಬಿಐ ತನಿಖೆಗೆ ಹೋಗುವಂತೆ ಮಾಡೋಣ ಅಂತ ಬಿಜೆಪಿಯ ಈ ಕೇಂದ್ರ ಸಚಿವರು ಆಪ್ತರಿಗೆ ಹೇಳಿದ್ದಾರೆಂಬುದು ಸಿದ್ದು ಗೂಢಚಾರರ ರಹಸ್ಯ ಸಂದೇಶ.

ಪರಿಣಾಮ? ಕುದಿಯುತ್ತಿರುವ ಸಿದ್ದರಾಮಯ್ಯ ಸರಕಾರ ಈಗ ಬಿಜೆಪಿಯ ಆ ನಾಯಕರನ್ನು ಟಾರ್ಗೆಟ್ ಮಾಡಲು ನಿರ್ಧರಿಸಿದೆ. ಈ ದಿಸೆಯಲ್ಲಿ ಅದರ ಕಣ್ಣಿಗೆ ಕಾಣುತ್ತಿರುವುದು ಭೂಹಗರಣ. ಇದನ್ನು ಬಳಸಿ ಆ ನಾಯಕರನ್ನು
ಚಕ್ರಸುಳಿಯಲ್ಲಿ ಸಿಲುಕಿಸುವುದು ಸಿದ್ದು ಟೀಮಿನ ಲೆಕ್ಕಾಚಾರ. ಅದರ ಪ್ರಕಾರ, ಮುಂದಿನ ಕೆಲವೇ ದಿನಗಳಲ್ಲಿ
ಕೇಂದ್ರ ಸಂಪುಟದಲ್ಲಿರುವ ಆ ಬಿಜೆಪಿ ನಾಯಕರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಲಿದೆ.

ಲಾಸ್ಟ್ ಸಿಪ್: ಅಂದ ಹಾಗೆ, ವಿವಿಧ ಆರೋಪಗಳಡಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ನಾಡಿನ ಹಿರಿಯ ಸ್ವಾಮೀಜಿಯೊಬ್ಬರಿಂದ ಸಂದೇಶ ರವಾನೆಯಾಗಿದೆಯಂತೆ. ಇವತ್ತು ನೀವು ಅನುಭವಿಸುತ್ತಿರುವ ಕಷ್ಟಗಳಿಂದ ಪಾರಾಗಲು ಒಂದು ಮಾರ್ಗವಿದೆ. ಅದೆಂದರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು. ಇವತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರಾಗಿರುವುದೇ ನಿಮ್ಮ ಸಮಸ್ಯೆಗಳ ಮೂಲ. ಹೀಗಾಗಿ ನೀವು ಈ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಜೈಲಿನಿಂದ ಹೊರಬರುತ್ತೀರಿ. ಅದೇ ರೀತಿ ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳೆಲ್ಲ ಶಕ್ತಿ ಕಳೆದುಕೊಂಡು ಮಂಕಾಗುತ್ತವೆ ಎಂಬುದು ಈ ಸ್ವಾಮೀಜಿಗಳ ಸಂದೇಶ. ಆದರೆ ಈ ಸಂದೇಶವನ್ನು ಮುನಿರತ್ನ ಅವರು ಒಪ್ಪಿಲ್ಲ ಎಂಬುದು ಲೇಟೆಸ್ಟು ಸುದ್ದಿ.

ಇದನ್ನೂ ಓದಿ: R T Vittalmurthy Column: ಸಿದ್ದು ಅಲ್ಲಾಡ್ತಿಲ್ಲ, ಗವರ್ನರ್‌ ಬಿಡ್ತಿಲ್ಲ