Tuesday, 7th January 2025

R T Vittalmurthy Column: ಕೊತ ಕೊತ ಕುದಿಯುತ್ತಿದ್ದಾರೆ ಜಾರಕಿಹೊಳಿ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಕಳೆದ ವಾರ ಭೋಜನಕೂಟ ನಡೆಯಿತು. ಅಲ್ಲಿ ಮಹತ್ವದ ಚರ್ಚೆ ನಡೆಯಲಿಲ್ಲವಾದರೂ ಅದರ ಉದ್ದೇಶ ಮಾತ್ರ ಸ್ಪಷ್ಟವಾಗಿತ್ತು. ಯಾಕೆಂದರೆ ಈ ಭೋಜನಕೂಟದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಜಾರಕಿಹೊಳಿ ಮನದಿಂಗಿತ ಗೊತ್ತಿತ್ತು. ಹೀಗಾಗಿ ಅದರ ಬಗ್ಗೆ ಚರ್ಚೆ ಮಾಡುವುದೇನೂ ಇರಲಿಲ್ಲ; ಬದಲಿಗೆ, ಇಂಥ ಸಭೆಯ ಮೂಲಕ, ಮುಂದಿನ ದಿನಗಳಲ್ಲಿ ‘ಅಹಿಂದ ಬ್ರಿಗೇಡ್’ ಮೇಲೆದ್ದು ನಿಲ್ಲಲಿದೆ ಎಂಬ ಸಂದೇಶವನ್ನು ರವಾನಿಸುವುದೇ ಜಾರಕಿಹೊಳಿ ಉದ್ದೇಶವಾಗಿತ್ತು.

ಅಂದ ಹಾಗೆ, ಸತೀಶ್ ಜಾರಕಿಹೊಳಿಯವರ ಲೇಟೆಸ್ಟು ಸಿಟ್ಟಿಗೆ ಅವರ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರಣ. ಈ ಸಮಾರಂಭ ನಡೆಸುವಾಗ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮನ್ನು ನಿರ್ಲಕ್ಷಿಸಿ ಅವಮಾನಿಸಿದ್ದಾರೆ
ಎಂಬುದು ಜಾರಕಿಹೊಳಿ ಅವರ ಸಿಟ್ಟು. ಈ ಶತಮಾನೋತ್ಸವ ಕಾರ್ಯಕ್ರಮ ನಡೆಸುವ ವಿಷಯದಲ್ಲಿ ಬೆಳಗಾವಿ, ಚಿಕ್ಕೋಡಿಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ತಮ್ಮ ಟ್ರೂಪಿನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಡಿಕೆಶಿ, ಶತಮಾನೋತ್ಸವದ ಪ್ರತಿಯೊಂದು ಕೆಲಸವನ್ನೂ ತಮಗೆ ಬೇಕಾದವರಿಂದ ನಿರ್ವಹಿಸಿದರು. ಅಷ್ಟೇ ಅಲ್ಲ, ಅಲ್ಲಿನ ಲೈಟಿಂಗ್ ವ್ಯವಸ್ಥೆಯ ಹೊಣೆಯನ್ನೂ ಹೊರಜಿಯ ಸಚಿವರೊಬ್ಬರಿಗೆ ವಹಿಸಿದರು. ಹೀಗೆ ತಮ್ಮ ಜಿಯಲ್ಲೇ ತಮ್ಮನ್ನು ಸೈಡ್‌ಲೈನ್ ಮಾಡಿದ ಡಿಕೆಶಿ ಅವರ ವಿರುದ್ಧ ತಿರುಗಿ ಬೀಳುವುದೇ ಸತೀಶ್ ಜಾರಕಿಹೊಳಿ ಅವರ ಲೇಟೆಸ್ಟು
ಅಜೆಂಡಾ. ಅರ್ಥಾತ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅವರನ್ನು ಕೆಳಗಿಳಿಸಿ ಆ ಜಾಗದಲ್ಲಿ ತಾವು ಕೂರಬೇಕು ಎಂಬುದು ಅವರ ಡಿಮಾಂಡು.
ಅಂದ ಹಾಗೆ, ಈ ಹಿಂದೆ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ‘ಒಬ್ಬ ವ್ಯಕ್ತಿ ಒಂದೇ ಹುದ್ದೆ’ ಎಂಬ ಠರಾವು ಪಾಸ್ ಮಾಡಿತ್ತು. ಅದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ೨ ವರ್ಷಗಳಾಗುತ್ತಾ ಬಂದರೂ ಡಿ.ಕೆ.ಶಿವಕುಮಾರ್ ಎರಡು ಹುದ್ದೆಗಳಲ್ಲಿ ಮುಂದುವರಿ ದಿದ್ದಾರೆ. ಹೀಗಾಗಿ ತಕ್ಷಣವೇ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ದಿಂದ ಇಳಿಸಿ ತಮಗೆ ಆ ಪಟ್ಟ ಕೊಡಬೇಕು ಎಂಬುದು ಜಾರಕಿಹೊಳಿ ವಾದ.

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯ ಬಂದಾಗ ಪಕ್ಷದ ವರಿಷ್ಠರು, “ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯು ವವರೆಗೆ ಡಿ.ಕೆ.ಶಿವಕುಮಾರ್ ಅವರೇ ಅಧ್ಯಕ್ಷರಾಗಿರಲಿ” ಎಂದಿದ್ದರಂತೆ. ಆದರೆ ‘ಒನ್ ಮ್ಯಾನ್, ಒನ್ ಪೋಸ್ಟ್’ ಠರಾವನ್ನು ವರಿಷ್ಠರಿಗೆ ನೆನಪಿಸು ತ್ತಿರುವ ಜಾರಕಿಹೊಳಿ, ಅಹಿಂದ ವರ್ಗದ ಮತಗಳನ್ನು ಕ್ರೋಡೀಕರಿಸಬೇಕೆಂದರೆ ಈ ವರ್ಗದವರಿಗೆ ಕೆಪಿಸಿಸಿ ಪಟ್ಟ ಸಿಗಲೇಬೇಕು ಅಂತ ಸಂದೇಶ ರವಾನಿಸಿzರೆ. ಅಷ್ಟೇ ಅಲ್ಲ, ಪಕ್ಷ ಅಧಿಕಾರದಲ್ಲಿದ್ದಾಗ ಎದುರಾಗುವ ಎಲ್ಲ ಚುನಾವಣೆಗಳನ್ನು ಸರಕಾರವೇ ಮುಂಚೂಣಿಯಲ್ಲಿದ್ದು ನಿಭಾಯಿಸುತ್ತದೆ.

ಹೀಗಾಗಿ ಇವತ್ತು ನಮಗೆ ಮುಖ್ಯವಾಗಿರುವುದು ಅಹಿಂದ ವರ್ಗಗಳ ಕನ್‌ಸಾಲಿಡೇಷನ್ನೇ ಹೊರತು ಒಬ್ಬ ವ್ಯಕ್ತಿಯಲ್ಲ ಎಂಬುದು ಜಾರಕಿಹೊಳಿ ಮೆಸೇಜು. ಇನ್ನು, ಇತ್ತೀಚಿನ ಬೈ ಎಲೆಕ್ಷನ್ ಗೆಲುವಿನ ಕ್ರೆಡಿಟ್ಟನ್ನು ಪಕ್ಷದ ಅಧ್ಯಕ್ಷರಿಗಷ್ಟೇ ಕೊಡದ ಸಿಎಂ ಸಿದ್ದರಾಮಯ್ಯ ಅವರು ಸಂಡೂರಿನ ಗೆಲುವಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಿಗ್ಗಾವಿಯ ಗೆಲುವಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚನ್ನಪಟ್ಟಣದ ಗೆಲುವಿಗೆ ಡಿ.ಕೆ.ಶಿವಕುಮಾರ್ ಕಾರಣ ಅಂತ ಕ್ರೆಡಿಟ್ಟನ್ನು ಹಂಚಿದ್ದರು. ಇದರ ಮಧ್ಯೆಯೇ ಮೇಲೆದ್ದು ನಿಂತಿರುವ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅಷ್ಟೇ ಸಾಲದಲ್ಲ? ಹೀಗಾಗಿ ಭೋಜನಕೂಟ ನಡೆಸುವ ಮೂಲಕ ತಮ್ಮ ಹಿಂದೆ ಶಾಸಕರ ದಂಡಿದೆ ಎಂಬ ಸಂದೇಶ ರವಾನಿಸಿದ್ದಾರೆ.

ಪೋರ್‌ಮ್ಯಾನ್ ಆರ್ಮಿ ರೆಡಿ
ಅಂದ ಹಾಗೆ, ಡಿ.ಕೆ.ಶಿವಕುಮಾರ್ ವಿಷಯದಲ್ಲಿ ಸತೀಶ್ ಜಾರಕಿಹೊಳಿ ಕೋಲ್ಡ್ ವಾರ್ ಶುರುಮಾಡಿ ಹಲವು ಕಾಲವೇ ಕಳೆದಿದೆ. ತಾವು ಉಸ್ತುವಾರಿ ಸಚಿವರಾದರೂ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಕೈ ಮೇಲಾಗದಂತೆ ಡಿಕೆಶಿ ತಡೆದಿದ್ದಾರೆ ಎಂಬುದು ಇದಕ್ಕೊಂದು ಕಾರಣವಾದರೆ, ಇನ್ನೂ ಹಲವು ಎಪಿಸೋಡುಗಳು ಸೇರಿ ಡಿಕೆಶಿ ವಿರುದ್ಧದ ಕೋಲ್ಡ್ ವಾರ್ ಮತ್ತಷ್ಟು ತೀವ್ರವಾಗಿದೆ. ಇದರ ಭಾಗವಾಗಿಯೇ ಮೇಲಿಂದ ಮೇಲೆ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಮತ್ತು ಸಹಕಾರ ಸಚಿವ ರಾಜಣ್ಣ ಅವರ ಜತೆ ರಹಸ್ಯ ಸಭೆಗಳನ್ನು ಮಾಡುತ್ತಿರುವ ಜಾರಕಿಹೊಳಿ, ಯಾವ ಕಾರಣಕ್ಕೂ ಡಿಕೆಶಿ ಸಿಎಂ ಆಗದಂತೆ ನೋಡಿಕೊಳ್ಳಬೇಕು ಎಂಬ ಅಜೆಂಡಾಗೆ ಶಕ್ತಿ
ನೀಡುತ್ತಿzರೆ. ಇದರ ಭಾಗವಾಗಿ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತಿರುವ ಈ ಫೈರ್‌ಮ್ಯಾನ್ ಆರ್ಮಿ, “2028ರ ತನಕ ಯಾವ ಕಾರಣಕ್ಕೂ ನೀವು ಸಿಎಂ ಹುದ್ದೆಯಿಂದ ಕೆಳಗಿಳಿಯಬಾರದು. ಹಾಗೊಂದು ವೇಳೆ ಒಪ್ಪಂದ- ಗಿಪ್ಪಂದ ಅಂತ ನೀವು ಕೆಳಗಿಳಿದರೆ ನಾವು ಹೇಳುವವರು ಸಿಎಂ ಆಗಬೇಕು. ಬೇಕಿದ್ದರೆ ಮುಂದಿನ ನಾಯಕ ಯಾರು ಅಂತ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿ.

ಫೈಟು ಮಾಡಲು ನಾವು ರೆಡಿ” ಅಂತ ಹೇಳುತ್ತಿದೆ. ಆದರೆ ಅವರು ಮಾತನಾಡಿದಾಗಲೆಲ್ಲ ಸ್ಪಷ್ಟವಾಗಿ ಉತ್ತರಿಸುತ್ತಿರುವ ಸಿದ್ದರಾಮಯ್ಯ, “ಅಧಿಕಾರ ಹಂಚಿಕೆ ವಿಷಯದಲ್ಲಿ ಒಪ್ಪಂದವೇನೂ ಆಗಿಲ್ಲ. ಆದರೆ ಪಕ್ಷ ಅಧಿಕಾರಕ್ಕೆ ಬಂದ ವೇಳೆ ವರಿಷ್ಠರು, ‘ಮುಂದಿನ ದಿನಗಳಲ್ಲಿ ನಾವು ಕೊಡುವ ಡೈರೆಕ್ಷನ್ ಅನ್ನು ಪಾಲಿಸಿ’ ಎಂದಿದ್ದಾರೆ. ಆದರೆ ಅದೇನು ಡೈರೆಕ್ಷನ್ನು ಅಂತ ಇದುವರೆಗೆ ಹೇಳಿಲ್ಲ. ಅದೇನು ಅನ್ನುವುದು ಗೊತ್ತಾಗುವ ತನಕ ನಾವು ಮಾತನಾಡಲು ಸಾಧ್ಯವಿಲ್ಲ.

ಹಾಗೊಂದು ವೇಳೆ ನೀವು ಹೇಳಿದ್ದೇ ಡೈರೆಕ್ಷನ್ ಆಗಿ ಬಂದರೆ ಆ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳೋಣ” ಅಂದಿದ್ದಾರೆ. ಆದರೆ, ‘ಸದ್ಯದ ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿರುವುದೇನೋ ಸರಿ, ಹಾಗಂತ ನಾವು ಸುಮ್ಮನಿರುವುದು ಸರಿಯಲ್ಲವಲ್ಲ? ಕರ್ನಾಟಕದಲ್ಲಿ
ಪಕ್ಷ ಕಟ್ಟಲು ನಾವೂ ದುಡಿದಿದ್ದೇವೆ. ಹೀಗಾಗಿ ಪರ್ಯಾಯ ನಾಯಕನ ಆಯ್ಕೆ ವಿಷಯ ಬಂದರೆ ನಾವು ಒಟ್ಟಾಗಿ ನಮ್ಮ ಬಲ ತೋರಿಸಬೇಕು’ ಅಂತ ಫೈರ್‌ಮ್ಯಾನ್ ಆರ್ಮಿ ನಿರ್ಧರಿಸಿದೆ ವಿಜಯೇಂದ್ರ ಸೇಫ್ಟಿಗೆ ಎಲೆಕ್ಷನ್ ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸೇಫ್ಟಿಗೆ ಎಲೆಕ್ಷನ್ ನಡೆಸಲು ವರಿಷ್ಠರು ಸೂಚಿಸಿದ್ದಾರೆ.

ವಿಜಯೇಂದ್ರರು ದಿಲ್ಲಿಗೆ ಬರುವುದು, ಯತ್ನಾಳ್ ಆಂಡ್ ಗ್ಯಾಂಗಿನ ವಿರುದ್ಧ ದೂರು ನೀಡುವುದು, ಇದಕ್ಕೆ ಪ್ರತಿಯಾಗಿ ಮೌನವಾಗಿರುವಂತೆ ಯತ್ನಾಳ್ ಮತ್ತಿತರರಿಗೆ ಹೇಳುವುದು ನಡೆದೇ ಇದೆ. ಅರ್ಥಾತ್, ರಾಜ್ಯ ಬಿಜೆಪಿಯಲ್ಲಿ ಹಾವು ಸಾಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ ಎಂಬ ಸ್ಥಿತಿ
ಮುಂದುವರಿದೇ ಇದೆ. ಇದಕ್ಕೆ ಮುಖ್ಯ ಕಾರಣವೇನು? ವಿಜಯೇಂದ್ರ ಚುನಾಯಿತ ಅಧ್ಯಕ್ಷರಲ್ಲ, ಬದಲಿಗೆ ನೇಮಕಗೊಂಡವರು. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಿದರೆ ಸದ್ಯಕ್ಕೆ ಸಮಸ್ಯೆ ಬಗೆಹರಿಯುತ್ತದೆ.

ನಾಳೆ ಜಿಧ್ಯಕ್ಷರು, ಮಂಡಲ ಅಧ್ಯಕ್ಷರು ಸೇರಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕು. ಈ ವೇಳೆ ವಿಜಯೇಂದ್ರ ಮತ್ತು ಅವರ ವಿರೋಧಿಗಳ ನಡುವೆ ಫೈಟು ನಡೆಯುತ್ತದೆ. ಅಲ್ಲಿ ಹೆಚ್ಚು ಮತ ಪಡೆಯುವವರು ಸಹಜವಾಗಿ ಅಧ್ಯಕ್ಷರಾಗುತ್ತಾರೆ. ಇವತ್ತಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ
ಯಾರ ಬಲ ಹೆಚ್ಚು? ಸಹಜವಾಗಿ ವಿಜಯೇಂದ್ರರ ಬಲವೇ ಹೆಚ್ಚು. ಹೀಗೆ ಚುನಾವಣೆಯಲ್ಲಿ ಗೆದ್ದು ಅವರು ಅಧ್ಯಕ್ಷರಾದರೆ ‘ವಿಜಯೇಂದ್ರರನ್ನು ಇಳಿಸಿ’ ಎನ್ನುವವರ ಧ್ವನಿ ಕುಗ್ಗುತ್ತದೆ. ಹಾಗಾಗಲಿ ಎಂಬುದು ವರಿಷ್ಠರ ಬಯಕೆ. ಹಾಗಂತಲೇ, ಇತ್ತೀಚೆಗೆ ವಿಜಯೇಂದ್ರ ದಿಲ್ಲಿಗೆ ಹೋದ
ಸಂದರ್ಭವೊಂದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಕುರಿತು ಗೀತೋಪದೇಶ ಮಾಡಿದ್ದರಂತೆ. ಅದರ ಪ್ರಕಾರ ನೋಡಿದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲುವ ‘ಹಾಟ್ ಫೇವರಿಟ್’ ಅಂದರೆ ವಿಜಯೇಂದ್ರರೇ.

ಹೀಗಾಗಿ ಚುನಾವಣೆಗೆ ಅಣಿಯಾಗುತ್ತಿರುವ ವಿಜಯೇಂದ್ರರು ಮಂಡಲ ಮಟ್ಟದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಫೋರ್ಸ್ ಕೊಡಲು ಹೊರಟಿದ್ದಾರೆ. ಆದರೆ ಇದೊಂದು ಕೆಲಸದಿಂದ ವಿಜಯೇಂದ್ರರ ಕುರ್ಚಿ ಗಟ್ಟಿಯಾಗಬಹುದೇ ವಿನಾ, ರಾಜ್ಯ ಬಿಜೆಪಿಯ ಬೇಗುದಿಯೇನೂ ಕಡಿಮೆ ಯಾಗುವುದಿಲ್ಲ. ಕಾರಣ? ಇವತ್ತು ವಿಜಯೇಂದ್ರರ ವಿರುದ್ಧ ತಿರುಗಿ ಬಿದ್ದಿರುವ ಪಕ್ಷದ ಹಿರಿಯರೇನಿದ್ದಾರೆ, ಅವರಿಗೆ ವಿಜಯೇಂದ್ರರ ಜತೆ ಹೊಂದಿಕೊಂಡು ಹೋಗುವ ಇಚ್ಛೆಯಿಲ್ಲ. ಹೀಗಾಗಿ ವಿಜಯೇಂದ್ರರನ್ನು ಸೇಫ್ ಮಾಡಿ, ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಪಟ್ಟಿಗೆ ಸರ್ಜರಿ‌ ಮಾಡಿದರೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ.

ಪ್ರಿಯಾಂಕ್ ವಿರುದ್ಧ ಸಿಟ್ಟೇಕೆ?
ಈ ಮಧ್ಯೆ, ಗುತ್ತಿಗೆದಾರರೊಬ್ಬರ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟಕ್ಕಿಳಿದಿದೆಯಲ್ಲ, ಈ ಹೋರಾಟಕ್ಕೆ ಅದು ಹೊಸ ಟ್ವಿಸ್ಟು ಕೊಡುತ್ತಲೇ ಇದೆ. ಆದರೆ ಈ ಮಟ್ಟದಕೆ ಅದು ಪ್ರಿಯಾಂಕ್ ವಿರುದ್ಧ
ಹೋರಾಡುತ್ತಿದೆ ಎಂಬುದಕ್ಕೆ ಹೊಸತೊಂದು ವ್ಯಾಖ್ಯಾನ ಶುರುವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ಸಿಗರ ಅಂಬೇಡ್ಕರ್ ವ್ಯಸನದ ಬಗ್ಗೆ ಕೆಲದಿನಗಳ ಹಿಂದೆ ಮಾತನಾಡಿದರಲ್ಲ? ಇದರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಆಕ್ರೋಶ ಶುರುವಾಯಿತು. ಕರ್ನಾಟಕದಲ್ಲಂತೂ ಆ ಹೇಳಿಕೆಯ ವಿರುದ್ಧ ಒಂದರ ಹಿಂದೊಂದರಂತೆ ಜಿಲ್ಲಾ ಮಟ್ಟ
ದಲ್ಲಿ ಬಂದ್‌ಗಳು ನಡೆಯುತ್ತಿವೆ. ಹೀಗೆ ಶುರುವಾಗಿರುವ ಆಕ್ರೋಶ ಸಹಜವಾಗಿಯೇ ಬಿಜೆಪಿಯ ತಳಮಳಕ್ಕೆ ಕಾರಣವಾಗಿದೆ. ಆದ್ದರಿಂದಲೇ ಈ ಸಮಯದಲ್ಲಿ ಕೈಗೆ ಸಿಕ್ಕ ಅಸ್ತ್ರ ಹಿಡಿದು ಬೀದಿಗಿಳಿದಿರುವ ಬಿಜೆಪಿ, ಪ್ರಿಯಾಂಕ್ ವಿರುದ್ಧ ಹೊಸ ಹೊಸ ಹೋರಾಟಗಳನ್ನು ಸಂಘಟಿಸುತ್ತಿದೆ. ಅಂದ ಹಾಗೆ, ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಸಂಘ ಪರಿವಾರಕ್ಕೆ ಅಸಮಾಧಾನವಿರುವುದು ರಹಸ್ಯವೇನಲ್ಲ. ಸೆಕ್ಯುಲರಿಸಂ ವಿಷಯ ಬಂದಾಗ ಸಿಎಂ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನಂತರ ಕಾಂಕ್ರೀಟ್ ಆಗಿ ಮಾತನಾಡುವವರು ಪ್ರಿಯಾಂಕ್ ಖರ್ಗೆ.

ಈ ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಡೆದ ಪೊಲೀಸ್ ನೇಮಕಾತಿಗಳ ಅವ್ಯವಹಾರವನ್ನು ಎತ್ತಿ ತೋರಿಸಿದ್ದೂ ಪ್ರಿಯಾಂಕ್ ಖರ್ಗೆಯವರೇ. ಹೀಗಾಗಿ ಏಕಕಾಲಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಹಿಟ್ ಲಿಸ್ಟ್‌ ನಲ್ಲಿರುವ ಅವರ ವಿರುದ್ಧ ಹೋರಾಟ ನಡೆಸಿದರೆ, ಅದು
ಅಮಿತ್ ಶಾ ಎಪಿಸೋಡನ್ನೂ ಮಂಕು ಮಾಡುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ. ಆದರೆ ಈ ಹೋರಾಟ ಯಶಸ್ವಿಯಾಗುತ್ತದೋ ಅಥವಾ ಕರ್ನಾಟಕದ ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಗಟ್ಟಿ ನೆಲೆಯ ಸೆಕ್ಯುಲರ್ ನಾಯಕ ಅಂತ ಎಮರ್ಜ್ ಮಾಡುತ್ತದೋ ಕಾದರ
ನೋಡಬೇಕು.

ಇದನ್ನೂ ಓದಿ: R T VittalMurthy Column: ಮೂರು ಕ್ಷೇತ್ರಗಳ ಎಫ್‌ಐಆರ್‌ ಕಾಪಿ

Leave a Reply

Your email address will not be published. Required fields are marked *