Monday, 13th January 2025

R T Vittalmurthy Column: ಸೋನಿಯಾ ಹೆಗಲಿಗೆ ಡಿಕೆಶಿ ಗಂಟು

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕಳೆದ ವಾರ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಪಡೆಯು ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಪಕ್ಷದಲ್ಲಿ ಭುಗಿಲೆದ್ದಿರುವ ಬಣ ಸಂಘರ್ಷದ ಬಗ್ಗೆ ಈ ಸಂದರ್ಭ ದಲ್ಲಿ ಅದು ಆತಂಕ ವ್ಯಕ್ತಪಡಿಸಿದೆ. ಅಂದ ಹಾಗೆ, ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ, ಡಾ.ಎಲ್.ಹನುಮಂತಯ್ಯ, ಪ್ರಕಾಶ್ ರಾಥೋಡ್, ಕೊಂಡಜ್ಜಿ ಮೋಹನ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಲ ಹಿರಿಯರು ಸೇರಿ ಒಂದು ‘ವಾರ್‌ಗ್ರೂಪ್’ ರಚಿಸಿಕೊಂಡಿದ್ದಾರೆ. ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಉದ್ಭವಿಸಿದರೂ ತಕ್ಷಣ ಅದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವುದು ಈ ವಾರ್‌ಗ್ರೂಪಿನ ಉದ್ದೇಶ.

ಹೀಗೆ ಪಕ್ಷದಲ್ಲಿ ಕಾಣಿಸಿಕೊಳ್ಳುವ ಬಿಕ್ಕಟ್ಟುಗಳ ಬಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕಾಲಕಾಲಕ್ಕೆ
ಸಭೆ ಸೇರಿ ಚರ್ಚಿಸುವ ಈ ವಾರ್‌ಗ್ರೂಪು ಮೊನ್ನೆ ಕೂಡಾ ಫೀಲ್ಡಿಗಿಳಿದಿದೆ. ಸಿಎಂ ಹುದ್ದೆಯ ಅಧಿಕಾರ ಹಂಚಿಕೆಗೆ
ಸಂಬಂಧಿಸಿದ ಮಾತು ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ಬಣ ಸಂಘರ್ಷ ಈ ವಾರ್‌ಗ್ರೂಪಿನ ಆತಂಕಕ್ಕೆ ಕಾರಣ. ಹೀಗಾಗಿಯೇ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಹೋದ ವಾರ್‌ಗ್ರೂಪಿನ ಈ ಸದಸ್ಯರು ಬಣ ಸಂಘರ್ಷದ ಬಗ್ಗೆ ಸಹಜವಾಗಿಯೇ ಆತಂಕ ವ್ಯಕ್ತಪಡಿಸಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, 40 ನಿಮಿಷಕ್ಕೂ ಹೆಚ್ಚು ಕಾಲ ತಮ್ಮ ಮನದಿಂಗಿತವನ್ನು ತೋಡಿಕೊಂಡ ರಂತೆ. ’‘ನೋಡ್ರೀ, ಪಕ್ಷದ ರಾಜ್ಯಾಧ್ಯಕ್ಷನಾಗಿ ಬಣ ರಾಜಕೀಯದ ಬಗ್ಗೆ ನಾನೇ ಮಾತನಾಡಿದರೆ ಏನು ಮೆಸೇಜು ಹೋಗುತ್ತದೆ? ಹೀಗಾಗಿ ಯಾರ‍್ಯಾರು ಡಿನ್ನರ್ ಮೀಟಿಂಗು ಮಾಡುತ್ತಾರೆ? ಏನು ಚರ್ಚಿಸುತ್ತಾರೆ? ಅನ್ನುವುದರ ಬಗ್ಗೆ ನಾನು ಮಾತನಾಡುವುದೇನಿಲ್ಲ. ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ. ಆದರೆ ನನ್ನ ಕೆಲಸ ಏನು, ಪಕ್ಷ ಕಟ್ಟುವುದು ತಾನೇ? ಈ ಹಿಂದೆ ನಾನು ತಿಹಾರ್ ಜೈಲು ಸೇರಿದೆ.

ಯಾವ ಕಾರಣಕ್ಕಾಗಿ ನಾನು ಜೈಲು ಸೇರಬೇಕಾಯಿತು ಅನ್ನುವುದು ಮೇಡಂ ಸೋನಿಯಾ ಗಾಂಧಿಯವರಿಗೆ, ರಾಹುಲ್ ಗಾಂಧಿ ಅವರಿಗೆ ಗೊತ್ತು. ಹೀಗಾಗಿ ಅವತ್ತು ನನ್ನನ್ನು ನೋಡಲು ತಿಹಾರ್ ಜೈಲಿಗೆ ಬಂದ ಸೋನಿಯಾ ಗಾಂಧಿ ಯವರು, ‘ಇರಲಿ ಇವೆಲ್ಲ ನಡೆಯುತ್ತದೆ. ನೀವು ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಿ. 2023ರ ವಿಧಾನಸಭಾ ಚುನಾವಣೆ ಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಮುಂದಿನದನ್ನು ನಮಗೆ ಬಿಡಿ’ ಅಂತ ಸೂಚನೆ ಕೊಟ್ಟರು. ಅದನ್ನೇ ನಾನು ಪಾಲಿಸಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನೇನು ಮಾಡಿದ್ದೇನೆ ಅಂತ ವರಿಷ್ಠರಿಗೆ ಗೊತ್ತು. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ಎಂದರೆ ಸಣ್ಣ ಮಾತಲ್ಲ, ಅದಕ್ಕೆ ತಂತ್ರಗಾರಿಕೆ ಬೇಕು. ಚುನಾವಣಾ ರಣಾಂಗಣದಲ್ಲಿ ಹೋರಾಡುವ ಯೋಧರಿಗೆ ದೊಡ್ಡಮಟ್ಟದಲ್ಲಿ ಶಸ್ತ್ರಾಸ್ತ್ರ ಪೂರೈಸಬೇಕು.

ಇದನ್ನೆಲ್ಲ ಮಾಡದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲವಲ್ಲ? ಮೇಡಂ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ‌ ಯವರಿಗೆ ಇದೆಲ್ಲ ಗೊತ್ತು. ಆದ್ದರಿಂದ, ಮುಂದೇನು ಮಾಡಬೇಕು ಅಂತ ಅವರೇ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಹೀಗಾಗಿ ರಾಜ್ಯದಲ್ಲಿ ಬಣ ರಾಜಕೀಯ ಶುರುವಾದರೆ ನಾನೇನು ಹೇಳಲಿ. ವರಿಷ್ಠರು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟು ಪಕ್ಷ ಕಟ್ಟಲು ಹೇಳಿದ್ದಾರೆ. ಅದರ ಪ್ರಕಾರ ಪಕ್ಷ ಕಟ್ಟುವುದು ನನ್ನ ಕೆಲಸ. ಕೆಪಿಸಿಸಿ ಅಧ್ಯಕ್ಷನಾದ ಮೇಲೆ ರಾಜ್ಯದ 75 ಕಡೆ ಪಕ್ಷಕ್ಕೆ ಸ್ವಂತ ಕಚೇರಿಗಳು ತಲೆ ಎತ್ತಿವೆ. ಮುಂದಿನ ದಿನಗಳಲ್ಲಿ ಇದು ನೂರರ ಗಡಿ ದಾಟುವಂತೆ ಮಾಡುವುದು ನನ್ನಾಸೆ. ‘ಬೇಡ, ಇನ್ನು ನಿಮ್ಮ ಕೆಲಸ ಸಾಕು’ ಅಂತ ಪಕ್ಷದ ವರಿಷ್ಠರು ಹೇಳಿದರೆ ಅದನ್ನು ಗೌರವಿಸು ತ್ತೇನೆ. ಅದೇ ರೀತಿ ನನಗೆ ಕೊಟ್ಟಿರುವ ಡಿಸಿಎಂ ಹುದ್ದೆಯಿಂದ ಕೆಳಗಿಳಿಯಲು ಹೇಳಿದರೆ ಇಳಿಯುತ್ತೇನೆ. ಫೈನಲಿ ನನ್ನ ಕೆಲಸ ಏನು? ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುವುದಷ್ಟೇ. ಹೀಗಾಗಿ ನಾನು ಮುಂದೇನಾಗಬೇಕೋ ಅದನ್ನು ಪಕ್ಷ ನಿರ್ಧರಿಸುತ್ತದೆ.

ಅಂದ ಹಾಗೆ, ಈ ಕ್ಷಣಕ್ಕೂ ಹೇಳುತ್ತೇನೆ. ನನಗೆ ಯಾವ ಶಾಸಕರ ಬೆಂಬಲವೂ ಬೇಕಿಲ್ಲ. ಗುಂಪುಗಾರಿಕೆಯ ಅಗತ್ಯವೂ ಇಲ್ಲ. ಪಕ್ಷವೇ ಎಲ್ಲ ಅಂದ ಮೇಲೆ ಈ ಬಣ ರಾಜಕಾರಣದ ಬಗ್ಗೆ ಹೇಳಲು ನನಗೇನೂ ಇಲ್ಲ” ಅಂತ ಡಿಕೆಶಿ ವಿವರಿಸಿ ದ್ದಾರೆ. ಹೀಗೆ ತಮ್ಮನ್ನು ಭೇಟಿ ಮಾಡಿದ ವಾರ್ ಗ್ರೂಪಿಗೆ ಹೇಳಿದ್ದನ್ನೇ ಮರುದಿನ ಶೃಂಗೇರಿ ಪ್ರವಾಸದ ಸಂದರ್ಭದಲ್ಲಿ ಸೂಚ್ಯವಾಗಿ ಹೇಳಿದ ಶಿವಕುಮಾರ್, ಅಧಿಕಾರ ಹಸ್ತಾಂತರ ಪ್ರಕ್ರಿಯೆಯ ಜವಾಬ್ದಾರಿಯನ್ನು ಹೈಕಮಾಂಡ್ ಹೆಗಲ ಮೇಲೆ ಹೊರಿಸುವಲ್ಲಿ ಯಶಸ್ವಿಯಾಗಿzರೆ. ಅರ್ಥಾತ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿರ್ದಿಷ್ಟ ಕಾಲದ ನಂತರ ಕೆಳಗಿಳಿಸಿ, ತಮಗೆ ಪಟ್ಟ ಕಟ್ಟುವ ರಿಸ್ಕನ್ನು ವರಿಷ್ಠರಿಗೆ ಬಿಟ್ಟಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಶಿವಕುಮಾರ್ ಅವರ ಈ ನಡೆ ಕುಶಲ ತಂತ್ರಗಾರಿಕೆ ಎಂದರೆ ಅಸಹಜವೇನಲ್ಲ.

ಇತಿಹಾಸ ಮರುಕಳಿಸಿದರೆ ಡಿಕೆಶಿಗೆ ಪಟ್ಟ

ಅಂದ ಹಾಗೆ, ಅಧಿಕಾರ ಹಂಚಿಕೆಯ ಜವಾಬ್ದಾರಿಯನ್ನು ವರಿಷ್ಠರ ಹೆಗಲಿಗೆ ಹಾಕಿರುವ ಡಿಕೆಶಿ ನಡೆ, ಇತಿಹಾಸದ ಆ ಎರಡು ಘಟನೆಗಳನ್ನು ನೆನಪಿಸುತ್ತಿದೆ. ಮೊದಲನೆಯ ಘಟನೆ ನಡೆದಿದ್ದು 1990ರಲ್ಲಿ. ಆ ಸಂದರ್ಭದಲ್ಲಿ ಮುಖ್ಯ ಮಂತ್ರಿ ವೀರೇಂದ್ರ ಪಾಟೀಲರನ್ನು ಪದಚ್ಯುತಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಪರ್ಯಾಯ ನಾಯಕನ ಆಯ್ಕೆಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ನಾಯಕನ ಆಯ್ಕೆಗೆ ಶಾಸಕಾಂಗ ಸಭೆಯಲ್ಲಿ ಚುನಾವಣೆ ನಡೆದಿದ್ದರೆ ನಿಸ್ಸಂಶ ಯವಾಗಿ ಹಿರಿಯ ನಾಯಕ, ‘ಹುಲಕೋಟಿಯ ಹುಲಿ’ ಕೆ.ಎಚ್.ಪಾಟೀಲರು ಆಯ್ಕೆಯಾಗುತ್ತಿದ್ದರು. ಯಾವಾಗ ಈ ವಿಷಯ ಸ್ಪಷ್ಟವಾಯಿತೋ, ಆಗ ದಿಲ್ಲಿಯ ಕಾಂಗ್ರೆಸ್ ಥಿಂಕ್‌ಟ್ಯಾಂಕಿನ ಪ್ರಮುಖರು ಚಿಂತೆಗೊಳಗಾದರು.

ಕಾರಣ? ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ
ಪಾರ್ಟಿ ಫಂಡು ತರಬಲ್ಲವರು ಬೇಕಾಗಿದ್ದರು. ಹೀಗಾಗಿ ಕರ್ನಾಟಕದಲ್ಲಿ ಕೆ.ಎಚ್.ಪಾಟೀಲರ ಬದಲು ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದ್ದರಿಂದಲೇ ರಾಜೀವ್ ಗಾಂಧಿಯವರಿಗೆ ಈ ವಿಷಯ ತಿಳಿಸಿದ ಥಿಂಕ್‌ಟ್ಯಾಂಕ್ ಪ್ರಮುಖರು, ಈ ವಿಷಯದಲ್ಲಿ ಪಾಟೀಲರ ಮನವೊಲಿಸುವ ಜವಾಬ್ದಾರಿಯನ್ನು ಅವರಿಗೇ ಬಿಟ್ಟರು.

ಹೀಗಾಗಿ, ಖುದ್ದಾಗಿ ಕೆ.ಎಚ್.ಪಾಟೀಲರಿಗೆ ಫೋನು ಮಾಡಿದ ರಾಜೀವ್ ಗಾಂಧಿ ಅವರು, “ಪಾಟೀಲ್ ಜೀ, ನಿಮ್ಮಿಂದ ನನಗೊಂದು ಸಹಾಯವಾಗಬೇಕು. ನೀವು ನಮ್ಮ ತಾಯಿಯವರ ಕಾಲದಿಂದಲೂ ಪಕ್ಷದ ನಿಷ್ಠಾವಂತರು. ನಮ್ಮ ತಾಯಿಯವರೂ ಇದನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಹೀಗಾಗಿ, ಈ ಸಂದರ್ಭದಲ್ಲಿ ನಿಮ್ಮಿಂದ ಒಂದು ಸಹಕಾರ ಕೋರುತ್ತಿದ್ದೇನೆ’ ಎಂದರು.

ಈ ಮಾತಿಗೆ ಪಾಟೀಲರು, “ಸರ್, ನೀವು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ನೀವು ನನ್ನ ಬಳಿ ಕೋರಿಕೊಳ್ಳ ಬೇಕಿಲ್ಲ, ಆದೇಶ ನೀಡಿ ಸಾಕು. ನಾನದನ್ನು ಪಾಲಿಸುತ್ತೇನೆ” ಎಂದರು. ಅದಕ್ಕುತ್ತರಿಸಿದ ರಾಜೀವ್ ಗಾಂಧಿಯವರು, “ಕೆಲ ಉದ್ದೇಶಗಳಿಂದಾಗಿ ನಾವು ಕರ್ನಾಟಕದಲ್ಲಿ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದೇವೆ. ನೀವು ಸಹಕರಿಸಬೇಕು” ಎಂದರು. ಈ ಮಾತಿಗೆ ಪಾಟೀಲರು ತಲೆಬಾಗಿದ್ದಷ್ಟೇ ಅಲ್ಲ, ಶಾಸಕಾಂಗ ಸಭೆಯಲ್ಲಿ ತಾವೇ ಮುಂದಾಗಿ ನಿಂತು ಬಂಗಾರಪ್ಪ ಅವರ ಆಯ್ಕೆಗೆ ದಾರಿ ಮಾಡಿಕೊಟ್ಟರು.

ಇದಾದ ನಂತರದ ಮತ್ತೊಂದು ಘಟನೆ 1992ರಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಬಂಗಾರಪ್ಪ ಪದಚ್ಯುತರಾಗಿ ಪರ್ಯಾಯ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿತ್ತು. ಅವತ್ತು ಈ ಆಯ್ಕೆಗೆ ಶಾಸಕಾಂಗ ಸಭೆಯಲ್ಲಿ ಚುನಾವಣೆ ನಡೆದಿದ್ದಿದ್ದರೆ ಒಕ್ಕಲಿಗ ಸಮುದಾಯದ ನಾಯಕ ಎಸ್.ಎಂ.ಕೃಷ್ಣ ಆಯ್ಕೆ ಯಾಗುವುದು ನಿಶ್ಚಿತವಾಗಿತ್ತು. ಆದರೆ ಯಾವಾಗ ಇದು ಸ್ಪಷ್ಟವಾಯಿತೋ, ಕೇರಳದ ಕಾಂಗ್ರೆಸ್ ನಾಯಕ ಕೆ.
ಕರುಣಾಕರನ್ ಮತ್ತು ತಮಿಳುನಾಡಿನ ಮರಗತಂ ಚಂದ್ರಶೇಖರ್ ಅವರು ವೀರಪ್ಪ ಮೊಯ್ಲಿ ಅವರ ಪರವಾಗಿ
ಫೀಲ್ಡಿಗಿಳಿದರು ಮತ್ತು ದೇವಮಾನವ ಚಂದ್ರಾಸ್ವಾಮಿಯವರ ನೆರವು ಪಡೆದು ಪ್ರಧಾನಿ ಪಿ.ವಿ.ನರಸಿಂಹರಾಯರ ಮೇಲೆ ಒತ್ತಡ ಹೇರಿದರು.

‘ಎಷ್ಟೇ ಆದರೂ ಈಗ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಬಂಗಾರಪ್ಪ ಅವರು ಹಿಂದುಳಿದ ವರ್ಗದಿಂದ ಬಂದವರು. ಹೀಗಾಗಿ ಅವರ ಜಾಗಕ್ಕೆ ಹಿಂದುಳಿದ ವರ್ಗದವರೇ ಆದ ವೀರಪ್ಪ ಮೊಯ್ಲಿಯವರನ್ನು ತಂದು
ಕೂರಿಸುವುದು ಬೆಟರ್ರು’ ಎಂಬ ಮಾತು ಯಾವಾಗ ನರಸಿಂಹರಾಯರ ಕಿವಿಗೆ ಬಿತ್ತೋ, ಆಗ ಅವರೂ ಹೆಚ್ಚು
ಮಾತನಾಡದೆ ಮೊಯ್ಲಿ ಹೆಸರಿಗೆ ಗ್ರೀನ್ ಸಿಗ್ನಲ್ ಕೊಟ್ಟರು. ಇವತ್ತೂ ಅಷ್ಟೇ. ಇತಿಹಾಸದ ಈ ಘಟನೆಗಳು
ಮರುಕಳಿಸಿದರೆ ಡಿಕೆಶಿ ಪಟ್ಟಾಭಿಷೇಕ ಅಸಂಭವವೇನಲ್ಲ.

ಕೆಳಗಿಳಿಯಲು ಸಿದ್ದು ಒಪ್ಪುತ್ತಾರಾ?
ಒಂದು ವೇಳೆ, ಅಽಕಾರ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದರೆ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರಿಗೆ ಇದೇ ರೀತಿ ಸೂಚನೆ ಕೊಡಬೇಕು. ಒಂದೊಮ್ಮೆ ಒಪ್ಪಂದ ಆಗದೆ ಇದ್ದರೂ ಪರ್ಯಾಯ
ನಾಯಕನ ಆಯ್ಕೆಗೆ ಅದು ಮನಸ್ಸು ಮಾಡಿದರೆ ಹೀಗೆಯೇ ಸೂಚನೆ ನೀಡಿ “ಸಹಕಾರ ಕೊಡಿ” ಅನ್ನಬೇಕು. ಆದರೆ
ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ವರಿಷ್ಠರು ಅಧಿಕಾರ ತ್ಯಾಗಕ್ಕೆ ಸೂಚನೆ ನೀಡಿದರೆ ಅದನ್ನು ಸಿದ್ದರಾಮಯ್ಯ ಒಪ್ಪುವುದು ಅನುಮಾನ.

ಇದೇ ರೀತಿ, ಅಧಿಕಾರ ಹಂಚಿಕೆ ಒಪ್ಪಂದದ ಹೆಸರಿನಲ್ಲಿ ಇಲ್ಲವೇ ತಮ್ಮ ತೀರ್ಮಾನದ ಹಿನ್ನೆಲೆಯಲ್ಲಿ ಅಧಿಕಾರ ತ್ಯಾಗ ಮಾಡುವಂತೆ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಲು ತುಂಬ ಯೋಚಿಸುತ್ತಾರೆ ಎಂಬುದೂ
ಅಸಹಜವಲ್ಲ. ಯಾಕೆಂದರೆ ಜನನಾಯಕರಾಗಿ ಬೆಳೆದು ನಿಂತಿರುವ ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗಗಳ
ಸಾಲಿಡ್ಡು ಬೆಂಬಲವಿದೆ. ಹೀಗಾಗಿ ಒಬ್ಬ ಜನನಾಯಕನನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಕಷ್ಟ ಅಂತ ವರಿಷ್ಠರಿಗೂ ಗೊತ್ತು.

1980ರಲ್ಲಿ ದೇವರಾಜ ಅರಸರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬಲವಂತವಾಗಿ ಕೆಳಗಿಳಿಸಿದ ಕಾಂಗ್ರೆಸ್
1983ರಲ್ಲಿ ಮೊದಲ ಬಾರಿ ಅಧಿಕಾರ ಕಳೆದುಕೊಂಡಿತು. 1992ರಲ್ಲಿ ಬಂಗಾರಪ್ಪ ಅವರನ್ನು ಬಲವಂತವಾಗಿ
ಕೆಳಗಿಳಿಸಿದ ಕಾರಣಕ್ಕಾಗಿ 1994ರ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತು. ಈಗ ಸಿದ್ದರಾಮಯ್ಯ ಅವರ ವಿಷಯದಲ್ಲೂ ಅಷ್ಟೇ. ಅವರನ್ನು ಬಲವಂತವಾಗಿ ಇಳಿಸಲು ಪ್ರಯತ್ನಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೋರಲು ಮಲಗುವುದು ಗ್ಯಾರಂಟಿ. ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಅಸ್ತಿತ್ವದಲ್ಲಿರುವ ಹಾಲಿ ಸರಕಾರವೇ ಉರುಳುವಂಥ ಸನ್ನಿವೇಶ ಸೃಷ್ಟಿಯಾಗಬಹುದು.

‘ಇಲ್ಲ, ಶಾಸಕಾಂಗ ಪಕ್ಷದ ಬಲವನ್ನು ಬಳಸಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸೋಣ’ ಎಂದರೆ ಅದು ಕೂಡಾ ‘ಬೂಮರಾಂಗ್’ ಆಗುವ ಸಾಧ್ಯತೆ ಜಾಸ್ತಿ. ಯಾಕೆಂದರೆ ರಾಜ್ಯದ 130ರಿಂದ 150 ಕ್ಷೇತ್ರಗಳಲ್ಲಿ ಕುರುಬ ಮತದಾರರ ಸಂಖ್ಯೆ ಗಣನೀಯವಾಗಿದೆ. ಈ ಕ್ಷೇತ್ರಗಳಲ್ಲಿ ಹತ್ತು ಸಾವಿರದಿಂದ ನಲವತ್ತು ಸಾವಿರದಷ್ಟಿರುವ ಕುರುಬ ಮತದಾರ ರನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಡಿಕೆಶಿ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಡಿಮೆ. ಹೀಗಾಗಿ ಸನ್ನಿವೇಶವನ್ನು ಆಳವಾಗಿ ಗಮನಿಸಿರುವ ಡಿಕೆಶಿ, ಬಣ ರಾಜಕೀಯದ ಗೊಡವೆಗೆ ಹೋಗದೆ ಅಧಿಕಾರ ಹಸ್ತಾಂತರದ ಜವಾಬ್ದಾರಿಯನ್ನು ಸೋನಿಯಾ ಗಾಂಧಿಯವರ ಹೆಗಲಿಗೆ ವರ್ಗಾಯಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಜಾಣ ನಡೆಯೂ ಹೌದು.

ಇದನ್ನೂ ಓದಿ: R T Vittalmurthy Column: ಸಿದ್ದು ಗೂಢಚಾರರ ರಹಸ್ಯ ಸಂದೇಶ

Leave a Reply

Your email address will not be published. Required fields are marked *