Wednesday, 27th November 2024

Raghavendra Rayalpaadu Column: ಅತ್ಯಂತ ಖೇದಕರ ಸಂಗತಿ


ಪ್ರತಿಸ್ಪಂದನ

ರಾಘವೇಂದ್ರ ರಾಯಲಪಾಡು

ಸಂಸ್ಕೃತ ಕಲಿಕೆಗೆ ಒದಗಿರುವ ದಯನೀಯ ಸ್ಥಿತಿಯ ಬಗ್ಗೆ ಎಸ್.ಶ್ರೀನಿವಾಸ್ ಅವರು ‘ಅಭಿಮತ’ ವಿಭಾಗದಲ್ಲಿ (ವಿಶ್ವವಾಣಿ ಸೆ.9) ಹೇಳಿರುವುದು ಸರಿಯಾಗೇ ಇದೆ. ಸಂಸ್ಕೃತ ಭಾಷೆಯ ಕಲಿಕೆಗೆ ಸಂಬಂಧಿಸಿ ನಮ್ಮ ವಿವಿಧ ಶಾಲಾ-ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯನ್ನು ಅವರು ಮನಮುಟ್ಟುವಂತೆ ವಿವರಿಸಿದ್ದಾರೆ.

ಯಾವ ಭಾಷೆಯಲ್ಲಿ, ವಿಶ್ವದ ಬೇರಾವ ಭಾಷೆಯಲ್ಲಿಯೂ ಲಭ್ಯವಿರದಷ್ಟು ವೈವಿಧ್ಯಮಯ ಮತ್ತು ವಿಪುಲ
ಸಾಹಿತ್ಯ, ಅನನ್ಯ ಮಾಹಿತಿಗಳು ಲಭ್ಯವಿವೆಯೋ ಆ ಭಾಷೆಯ ಕಲಿಕೆಯನ್ನು, ಅದರಲ್ಲೂ ಆ ಭಾಷೆಯ ನೆಲೆವೀ ಡಾದ ಭಾರತದಲ್ಲೇ ಇಂಥದೊಂದು ದಯನೀಯ ಸ್ಥಿತಿಗೆ ತಂದಿರುವುದು ಅತ್ಯಂತ ಖೇದಕರ ಸಂಗತಿ. ಸಂಸ್ಕೃತ ಕ್ಷೇತ್ರಕ್ಕೆ ಸಂಬಂಧಪಟ್ಟ ಮಹನೀಯರು ಈ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಲಿ ಹಾಗೂ ಸಂಸ್ಕೃತ ಭಾಷಾ ಕಲಿಕೆಯು ವಿದ್ಯಾರ್ಥಿಗಳಲ್ಲಿ ಉಳಿದು ಬೆಳೆಯುವ ರೀತಿಯಲ್ಲಿ ಅದನ್ನು ರೂಪಿಸಲು ಮುಂದಾಗಲಿ. ಜ್ಞಾನ ಮತ್ತು ಪ್ರಾವೀಣ್ಯದ ಸಂಪಾದನೆಯ ಉದ್ದೇಶವನ್ನು ಬದಿಗೆ ಸರಿಸಿ, ಅಂಕಗಳಿಕೆಯ ಸಲುವಾಗಿ ಮಾತ್ರವೇ ಸಂಸ್ಕೃತ ಭಾಷೆಯನ್ನು ಕಲಿಯುವುದು ಸ್ವಾರ್ಥದ ಪರಮಾವಽ; ಆದ್ದರಿಂದ ಈ ಪರಿಪಾಠ ಅಂತ್ಯವಾಗಲಿ ಎಂದು ಹೇಳ ಬಯಸುತ್ತೇನೆ.

ಸಂಸ್ಕೃತ ಭಾಷೆಯು ಹಲವು ದೇಶೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕಲಿಕೆಯ ವಿಷಯವಾಗಿದೆ. ಈ
ವಿಶ್ವವಿದ್ಯಾಲಯಗಳಿಂದ ಪ್ರತಿವರ್ಷವೂ ಸಾವಿರಾರು ಪದವೀಧರರು/ವಿದ್ವಾಂಸರು ಹೊರಬರುತ್ತಿದ್ದಾರೆ. ಇಷ್ಟಾಗಿ ಯೂ ಸುಲಲಿತವಾಗಿ ಸಂಸ್ಕೃತ ಭಾಷೆಯಲ್ಲಿ ಮಾತನಾಡುವ ನಾಲಗೆಗಳ ಕೊರತೆಯಿದೆ, ಅದರಿಂದಾಗಿ ಭಾಷೆಯು ಸೊರಗುತ್ತಲೇ ಇದೆ ಎಂದರೆ, ಕಲಿಕಾ ಪದ್ಧತಿಯಲ್ಲಿರುವ ದೋಷವೇ ಅದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಸಂಸ್ಕೃತ ಭಾಷೆಯನ್ನು ವಿಶ್ವ ಸಮುದಾಯದ ಸಂವಹನ ಮಾಧ್ಯಮವನ್ನಾಗಿ ಮಾಡಬೇಕೆಂಬ ಸಂಕಲ್ಪದಿಂದಲೇ 1981ರಲ್ಲಿ ಜನ್ಮ ತಳೆದ ‘ಸಂಸ್ಕೃತ ಭಾರತೀ’ ಸಂಸ್ಥೆಯು ಈ ದಿಸೆಯಲ್ಲಿ ಮಹತ್ತರವಾದ ಕಾರ್ಯಸಾಧನೆಯನ್ನು ಮಾಡಿದೆ. ಸ್ವಯಂಸೇವಕರ ಕಾರ್ಯಪಡೆ ಮತ್ತು ಹಲವು ಆಯಾಮಗಳ ಚಟುವಟಿಕೆಯ ಮೂಲಕ ಈವರೆಗೆ 90 ಲಕ್ಷಕ್ಕೂ ಅಧಿಕ ಮಂದಿಗೆ ಸಂಸ್ಕೃತದಲ್ಲಿ ಮಾತನಾಡಲು ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗಿದೆ. ಇಲ್ಲಿ ಕಲಿಕೆಯು ಯಾವುದೇ ಮತ, ಸಂಪ್ರದಾಯ, ಲಿಂಗ ಮುಂತಾದ ಭೇದಗಳ ಹಂಗಿಲ್ಲದೆ ಎಲ್ಲರಿಗೂ ಮುಕ್ತವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

‘ಸಂಸ್ಕೃತ ಭಾಷೆಯಲ್ಲಿರುವ ಸುಭಾಷಿತಗಳು ಜೀವನದಲ್ಲಿ ಬಹಳ ಉಪಯುಕ್ತವಾಗಿವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಮ್ಮೆಯಿಂದ ಹೇಳಿದ್ದರೆ, ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬಹಳ ವರ್ಷಗಳ ಹಿಂದೆಯೇ, ‘ಸಂಸ್ಕೃತವು ದೇಶದ ರಾಷ್ಟ್ರಭಾಷೆಯಾಗಬೇಕು, ಅದರಲ್ಲಿ ದೇಶದ ಹಿತವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಾಗಾಗಿ ಆಸಕ್ತ ಜನರು ಸಂಸ್ಕೃತ ಭಾಷೆಯನ್ನು ಸರಿಯಾದ ರೀತಿಯಲ್ಲಿ ಕಲಿಯಲು ಮುಂದಾಗಲಿ ಹಾಗೂ ಸಂಸ್ಕೃತ ಭಾಷೆಯನ್ನು ಜನಮಾನಸದಲ್ಲಿ ಪ್ರತಿಷ್ಠಾಪನೆಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಕಟಿಬದ್ಧವಾಗಲಿ ಎಂದು ಆಶಿಸುತ್ತೇನೆ.

(ಲೇಖಕರು ಹವ್ಯಾಸಿ ಬರಹಗಾರರು)