Wednesday, 30th October 2024

Raghu Bharadwaj Column: ಏಕತೆಯ ‘ಸರದಾರ’

ತನ್ನಿಮಿತ್ತ

ರಘು ಭಾರದ್ವಾಜ

ಸ್ವತಂತ್ರ ಭಾರತದ ಮೊದಲ ಉಪಪ್ರಧಾನ ಮಂತ್ರಿ ಮತ್ತು ಮೊದಲ ಗೃಹಮಂತ್ರಿ ಎಂಬ ಖ್ಯಾತಿ ಹೊತ್ತವರು, ‘ಉಕ್ಕಿನ ಮನುಷ್ಯ’ ಎಂದೇ ಕರೆಸಿಕೊಂಡವರು ಸರ್ದಾರ್ ವಲ್ಲಭಭಾಯಿ ಪಟೇಲರು. ಇವರು ಜನಿಸಿದ್ದು 1875ರ ಅಕ್ಟೋಬರ್ ೩೧ರಂದು. ಗುಜರಾತ್‌ನ ನಡಿಯಾದ್ ಇವರ ಜನ್ಮಸ್ಥಳ. ವಸಾಹತುಶಾಹಿ ಬ್ರಿಟಿಷರ ದಾಸ್ಯದ ಸಂಕೋಲೆಯಲ್ಲಿ ಸಿಲುಕಿ ನಲುಗಿದ್ದ ಭಾರತವು ಸ್ವತಂತ್ರವಾಗುವುದಕ್ಕೆ ಮತ್ತು ತರುವಾಯದಲ್ಲಿ ಏಕೀಕರಣ
ಗೊಳ್ಳುವುದಕ್ಕೆ ಪಟೇಲರು ನೀಡಿದ ಕೊಡುಗೆ ಅನನ್ಯ.

ಇದರ ಸ್ಮರಣಾರ್ಥವಾಗಿ, ಅವರ ಜನ್ಮದಿನವಾದ ಅಕ್ಟೋಬರ್ 31ನ್ನು ಪ್ರತಿವರ್ಷ ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸಲಾಗುತ್ತದೆ. ಭಾರತ ಸರಕಾರವು 2014ರಲ್ಲಿ ಈ ದಿನಾಚರಣೆಗೆ ಚಾಲನೆ ನೀಡಿತು. ಪ್ರಧಾನಿ ನರೇಂದ್ರ ಮೋದಿಯವರು ‘ಏಕತೆಗಾಗಿ ಓಟ’ ಎಂಬ ಧ್ಯೇಯದ ವಿಶಿಷ್ಟ ಉಪಕ್ರಮದೊಂದಿಗೆ ಮೊದಲ ರಾಷ್ಟ್ರೀಯ
ಏಕತಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಗಮನಾರ್ಹ. ಭಾರತವು ಮೊದಲಿನಿಂದಲೂ ವಿವಿಧ ಸಂಪ್ರದಾಯ- ಸಂಸ್ಕೃತಿಗಳು, ಭಾಷೆ-ಧರ್ಮಗಳ ಒಂದು ಅನನ್ಯ ಸಂಯೋಜನೆಯಾಗೇ ಉಳಿದುಕೊಂಡು ಬೆಳೆದುಕೊಂಡು ಬಂದಿದೆ.

ಆದರೆ, ಹತ್ತು ಹಲವು ರಾಜಪ್ರಭುತ್ವಗಳು ಹಾಗೂ ತರುವಾಯದ ಬ್ರಿಟಿಷರ ಆಳ್ವಿಕೆಯಿಂದಾಗಿ ಸಾಮಾಜಿಕವಾಗಿ, ಭಾವನಾತ್ಮಕವಾಗಿ, ಆಡಳಿತಾತ್ಮಕವಾಗಿ ಭಾರತವು ಹರಿದು ಹಂಚಿಹೋಗಿತ್ತು. ಸ್ವಾತಂತ್ರ್ಯಾ ನಂತರದ ಭಾರತ ದಲ್ಲಿ ಏಕತೆ, ಸಮಗ್ರತೆ ಮತ್ತು ಭದ್ರತೆಯ ಭಾವನೆಯನ್ನು ಗಟ್ಟಿಗೊಳಿಸಬೇಕಿರುವ ಅಗತ್ಯವನ್ನು ಮನಗಂಡ ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲರು ‘ಭಾರತೀಯ ಸ್ವಾತಂತ್ರ್ಯ ಕಾಯ್ದೆ- 1947’ರ ನೆರವಿನಿಂದ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು ಭಾರತ ಒಕ್ಕೂಟದೊಳಗೆ ಸಂಯೋಜಿಸುವಲ್ಲಿ ಹಾಗೂ ಈ ನಿಟ್ಟಿನಲ್ಲಿ ಆಯಾ ರಾಜ-ಮಹಾರಾಜರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.

ಇದು 1947ರಿಂದ 1949ರವರೆಗಿನ ಸುದೀರ್ಘ ಅವಧಿಯಲ್ಲಿ ನೆರವೇರಿದ ತಪಸ್ಸು. ಈ ಕಾರ್ಯಸಾಧನೆಗಾಗಿ
ಪಟೇಲ ರನ್ನು ‘ಭಾರತದ ಬಿಸ್ಮಾರ್ಕ್’ ಎಂದೂ ಕರೆಯುವುದುಂಟು. ‘ಏಕತೆಗಾಗಿ ಓಟ’, ಪ್ರತಿಜ್ಞಾ ಸ್ವೀಕಾರ ಸಮಾರಂಭ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರೀಯ ಏಕತೆ-ಸಮಗ್ರತೆಯನ್ನು ಬಿಂಬಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ವರ್ಷದ ಅಕ್ಟೋಬರ್ 31ರಂದು ರಾಷ್ಟ್ರಾದ್ಯಂತ
‘ರಾಷ್ಟ್ರೀಯ ಏಕತಾ ದಿನ’ವನ್ನು ಆಚರಿಸಲಾಗುತ್ತದೆ ಎಂಬುದು ಗಮನಾರ್ಹ.

ಈ ದಿನದಂದು ಬೆಳಗ್ಗೆ, ನವದೆಹಲಿಯ ಪಟೇಲ್ ಚೌಕ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಗುತ್ತದೆ. ನಂತರ ವಿಜಯ್ ಚೌಕ್‌ನಿಂದ ರಾಜ್‌ಪಥದಲ್ಲಿರುವ ಇಂಡಿಯಾ ಗೇಟ್‌ವರೆಗೆ ಹಮ್ಮಿಕೊಳ್ಳಲಾಗುವ ‘ಏಕತೆಗಾಗಿ ಓಟ’ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ಸ್ತರದ ಹಾಗೂ ಕಾರ್ಯಕ್ಷೇತ್ರಗಳ ಜನರು ಪಾಲ್ಗೊಳ್ಳುತ್ತಾರೆ ಎಂಬುದು ವಿಶೇಷ.

ದೇಶಾದ್ಯಂತದ ಸರಕಾರಿ ಕಚೇರಿಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳು/ಕಂಪನಿಗಳು, ಸ್ಥಳೀಯ ಪೌರಾಡಳಿತ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ರಾಷ್ಟ್ರೀಯ ಏಕತಾ ದಿನದಂದು ಹಮ್ಮಿ ಕೊಳ್ಳಲಾಗುವ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದಾಶಯದ ಸಂಕಲ್ಪವನ್ನು ಮಾಡುತ್ತಾರೆ. ಅದರ ಸಾಲುಗಳು ಹೀಗಿರುತ್ತವೆ: “ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನನ್ನನ್ನು ಸಮರ್ಪಿಸಿಕೊಳ್ಳುವೆ ಮತ್ತು ಈ ಸಂದೇಶವನ್ನು ನನ್ನ ಒಡನಾಡಿಗಳ ನಡುವೆ ಪಸರಿಸಲು ಶ್ರಮಿಸುವೆ ಎಂದು ಪ್ರಾಮಾಣಿಕವಾಗಿ ಪ್ರತಿಜ್ಞೆ ಮಾಡುತ್ತೇನೆ.

ಸರ್ದಾರ್ ವಲ್ಲಭಭಾಯಿ ಪಟೇಲರ ದೂರದೃಷ್ಟಿ ಹಾಗೂ ಪರಿಶ್ರಮದ ಕಾರ್ಯಚಟುವಟಿಕೆಗಳಿಂದಾಗಿ ನನ್ನ ದೇಶದ
ಏಕೀಕರಣವು ಸಾಕಾರಗೊಂಡಿದ್ದರ ಉತ್ಸಾಹದಲ್ಲಿ ಈ ಪ್ರತಿಜ್ಞೆಯನ್ನು ನಾನು ಸ್ವೀಕರಿಸುತ್ತಿದ್ದೇನೆ. ರಾಷ್ಟ್ರದ ಭದ್ರತೆ ಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನನ್ನದೇ ಆದ ಕೊಡುಗೆಯನ್ನು ನೀಡಲು ಗಂಭೀರವಾಗಿ ಸಂಕಲ್ಪವನ್ನು ಮಾಡುತ್ತೇನೆ”.

ದೇಶಕ್ಕೆ ವಲ್ಲಭಭಾಯಿ ಪಟೇಲರು ನೀಡಿದ ವೈವಿಧ್ಯಮಯ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತ ಸರಕಾರವು ಗುಜರಾತ್‌ನಲ್ಲಿ ಪಟೇಲರ ಪ್ರತಿಮೆಯನ್ನು ಸ್ಥಾಪಿಸಿದೆ. ಅಲ್ಲಿನ ನರ್ಮದಾ ಜಿಲ್ಲೆಯ ಕೇವಡಿಯಾ ಎಂಬಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿಗೆ ಅಭಿಮುಖವಾಗಿ ಸ್ಥಾಪಿಸ ಲಾಗಿರುವ ಈ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆ (182 ಮೀಟರ್) ಮತ್ತು 8ನೇ ಅದ್ಭುತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ‘ಏಕತೆಯ ಪ್ರತಿಮೆ’ ಎಂದೇ ಕರೆಯಲ್ಪಡುತ್ತದೆ.

ಇದನ್ನೂ ಓದಿ: S Jaishankar: ಪಾಕ್‌ ಜತೆ ಯಾವುದೇ ದ್ವಿಪಕ್ಷೀಯ ಮಾತುಕತೆ ಇಲ್ಲ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ