Thursday, 28th November 2024

ರಾಹುಲ್ ಜವಾಬ್ದಾರಿ ಮೆರೆಯಲಿ

ಗೆಲುವಿಗಾಗಿ ಮಾಡುವ ಯಾವುದೇ ರೀತಿಯ ಧನಾತ್ಮಕ ಹೋರಾಟ ಸ್ವಾಗತಾರ್ಹ. ಆದರೆ, ಸೋತ ಭರದಲ್ಲಿ ಸಮಾಜದಲ್ಲಿ ದ್ವೇಷವನ್ನೇ ಹರಡುತ್ತಾ, ಭಯವನ್ನೇ ಹೆಚ್ಚಿಸುತ್ತಾ ಮಾಡುವ ರಾಜಕಾರಣ ಇದೆಯಲ್ಲಾ ಅದನ್ನು ಜೀರ್ಣಿಸಿಕೊಳ್ಳಲಾಗದು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಂಥ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿಯವರು ಇತ್ತೀಚೆಗೆ ವರ್ತಿಸಿದ ಪರಿ ಇದಕ್ಕೊಂದು ಉದಾಹರಣೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಅವರು ಒಂದು ಫೋಟೋವನ್ನು ತೋರಿಸಿದರು. ಅದು ಎಲ್ಲಾ ಪಕ್ಷಗಳ ಎಲ್ಲಾ ಸರಕಾರಗಳ ಬಜೆಟ್
ಮಂಡನೆಯ ಸಮಯದಲ್ಲಿ ಮಾಡುವ ಹಲ್ವಾ ಸಮಾರಂಭದ ಫೋಟೋ. ಅದನ್ನು ರಿಸುತ್ತಾ ಅವರು, ‘ಈ ಫೋಟೋದಲ್ಲಿ ಒಂದಷ್ಟು ಜಾತಿಯ ಜನರ ಮುಖ ಇಲ್ಲ.
ಅವರನ್ನೆಲ್ಲ ನಿರ್ಲಕ್ಷಿಸಲಾಗಿದೆ. ಆಡಳಿತಾರೂಢ ಎನ್‌ಡಿಎ ಒಕ್ಕೂಟ ಈ ಜಾತಿಗಳ ವಿರೋಧಿ’ ಎಂದೆಲ್ಲಾ ಹೇಳುವ ಮೂಲಕ ಜನರ ಮನಸ್ಸಿನಲ್ಲಿ ಜಾತಿಯ ವಿಷಬೀಜವನ್ನು ಬಿತ್ತುವ ಪ್ರಯತ್ನ ಮಾಡಿದರು.

ಇತ್ತೀಚೆಗೆ ರಾಹುಲ್ ಮಾತೆತ್ತಿದರೆ ಭಯ ಮತ್ತು ದ್ವೇಷದ ಬಗ್ಗೆಯೇ ಮಾತಾಡುತ್ತಾರೆ. ಆದರೆ ನಿಜವಾಗಿಯೂ ಅಂಥ ಪರಿಕಲ್ಪನೆಗಳನ್ನು ಸಮಾಜದಲ್ಲಿ
ಬಿತ್ತುತ್ತಿರುವುದು ಅವರ ಪಕ್ಷವೇ! ಸೋಲಿನ ಹತಾಶೆಗೆ ಸಿಲುಕಿರುವ ಕಾಂಗ್ರೆಸ್, ಹೀಗೆ ಎನ್‌ಡಿಎ ಬಗ್ಗೆ ಜನರಲ್ಲಿ ಭಯ ಮತ್ತು ದ್ವೇಷವನ್ನು ಹೆಚ್ಚಿಸಲು ಸಾಧ್ಯವಾದೆಡೆಯೆಲ್ಲಾ ಯತ್ನಿಸುತ್ತಿದೆ. ಜನರಲ್ಲಿರುವ ಬಿಜೆಪಿ ಬೆಂಬಲದ ಮನಸ್ಥಿತಿಯನ್ನು ತೊಳೆಯಲು ಈ ನಕಾರಾತ್ಮಕ ತಂತ್ರವನ್ನು ಬಳಸುವಲ್ಲಿ ರಾಹುಲ್ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಅದಿಲ್ಲದಿದ್ದಲ್ಲಿ ಬಜೆಟ್‌ನ ಹಲ್ವಾ ಸಮಾರಂಭದ ಫೋಟೋದಲ್ಲಿ ಕೂಡ ತೀರಾ ಬಾಲಿಶವಾದ ಜಾತಿವಾದವನ್ನು ಎತ್ತುವ ಧೋರಣೆ ಅವರಿಂದ ಹೊಮ್ಮುತ್ತಿರಲಿಲ್ಲ.

ಅದೆಷ್ಟು ಕುಟಿಲಬುದ್ಧಿ ನೋಡಿ. ಭಾರತದಲ್ಲಿ ನೂರಾರು ಜಾತಿಗಳಿವೆ. ಆ ಎಲ್ಲಾ ಜಾತಿಗಳ ಜನರನ್ನೂ ಆ ಪೋಟೋದಲ್ಲಿ ತರಬೇಕಿತ್ತೇ? ಅಥವಾ ಆ ರೀತಿಯಲ್ಲಿ
ತಂದಾಗ ಮಾತ್ರವೇ ಎಲ್ಲರನ್ನೂ ಒಗ್ಗೂಡಿಸಿದಂತೆ ಆಯಿತೇ? ಅಷ್ಟಕ್ಕೂ, ಭಾರತದ ಮೂಲಬೇರು ಇರುವುದು ಇದೇ ಕಾಂಗ್ರೆಸ್ ಕೆತ್ತಿದ ‘ಜಾತ್ಯತೀತ’ ಅನ್ನುವ ಶಬ್ದದ ಮೇಲೆ. ಆದರೆ ಕಾಂಗ್ರೆಸ್ ಯಾವತ್ತೂ ಜಾತ್ಯತೀತತೆಯ ನಿಜವಾದ ಅರ್ಥದ ಮೇಲೂ, ಆಶಯದ ಮೇಲೂ ಕೆಲಸ ಮಾಡಿದ ನಿದರ್ಶನ ಒಂದಾದರೂ ಇದೆಯಾ? ಜಾತ್ಯತೀತ ಅಂದರೆ ಕೇವಲ ಒಂದು ಕೋಮನ್ನು ಓಲೈಸಿಕೊಂಡು ತನ್ನ ಮತಬ್ಯಾಂಕ್ ಅನ್ನು ಹೆಚ್ಚಿಸಿಕೊಳ್ಳುವುದು ಎಂಬುದು ಕಾಂಗ್ರೆಸ್ ಸದಾ ಜಪಿಸಿಕೊಂಡು ಬಂದಿರುವ ಮೂಲಮಂತ್ರ. ಈ ವರ್ಷದ ಚುನಾವಣೆಯಲ್ಲಿ ಸ್ವಲ್ಪ ಚೇತರಿಸಿಕೊಳ್ಳಲು ಕಾರಣವಾಗಿದ್ದು ಈ ಜಾತಿವಾರು ಒಡೆಯುವ ತಂತ್ರ.

ಇದನ್ನು ಪ್ರಜ್ಞಾವಂತ ಜನರು ಅರ್ಥಮಾಡಿಕೊಳ್ಳಬೇಕು. ಜಾತಿಗಳ ನಡುವೆ ಇಲ್ಲದ ತಾರತಮ್ಯವನ್ನು ಎತ್ತಿ ತೋರಿಸಿ, ಹೇಗಾದರೂ ಮಾಡಿ ಹೆಚ್ಚು ಮತಗಳನ್ನು
ಗಿಟ್ಟಿಸಿಕೊಳ್ಳುವ ಕಾಂಗ್ರೆಸ್‌ನ ಇಂಥ ತಂತ್ರಗಳಿಂದ ಜನರು ದೂರ ಇರಬೇಕಿದೆ. ಕಾಂಗ್ರೆಸ್ ಒಂದು ಸಮರ್ಥ ವಿರೋಧ ಪಕ್ಷವಾಗಿ ನಡೆದುಕೊಳ್ಳಬೇಕಿದೆ.
ಜನೋಪಯೋಗಿ ಕೆಲಸಗಳನ್ನು ಆಡಳಿತ ಪಕ್ಷದಿಂದ ಮಾಡಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ತನ್ಮೂಲಕ ತಾನು ನಿಜವಾದ ಜನಾನುರಾಗಿ ಪಕ್ಷ ಎಂದು
ಗುರುತಿಸಿಕೊಳ್ಳಬೇಕಿದೆ. ಅದಿಲ್ಲದಿದ್ದಲ್ಲಿ ಭವಿಷ್ಯದಲ್ಲಿ ಆಡಳಿತ ಪಕ್ಷವಾಗುವುದು ಕಾಂಗ್ರೆಸ್ ಪಾಲಿಗೆ ಕನಸೇ ಆಗಿ ಉಳಿದೀತು.

(ಲೇಖಕರು ಹವ್ಯಾಸಿ ಬರಹಗಾರರು)