Friday, 3rd January 2025

Rajendra Bhat Column: ವಿದಾಯಕ್ಕೆ ಮುನ್ನ, 2024ರ ಟಾಪ್ 26 ಸುದ್ದಿಗಳು

ಸ್ಫೂರ್ತಿಪಥ ಅಂಕಣ: 2024ರ ಪ್ರಮುಖ ಸುದ್ದಿಗಳ ಮೆಲುಕಿನೊಂದಿಗೆ ಕ್ಯಾಲೆಂಡರ್ ವರ್ಷಕ್ಕೊಂದು ಶುಭ ವಿದಾಯ

rajendra bhat
  • ರಾಜೇಂದ್ರ ಭಟ್‌ ಕೆ.

Rajendra Bhat Column: (ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ)

14) ದೆಹಲಿ ಸಿ ಎಂ ಕೇಜ್ರಿವಾಲ್ ಅರೆಸ್ಟ್
ಭ್ರಷ್ಟಾಚಾರದ ಹಗರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ED ಮತ್ತು ಸಿಬಿಐ ಬಂಧಿಸಿ ವಿಚಾರಣೆ ಮಾಡಿ ಸೆರೆಮನೆಗೆ ಕಳುಹಿಸಿದ್ದು ಬಹು ದೊಡ್ಡ ಸುದ್ದಿ (ಮಾರ್ಚ್ 21). ಅವರು ಜೈಲಿನ ಒಳಗೆ ಕೂತು ಅಧಿಕಾರವನ್ನು ಚಲಾಯಿಸಿದ್ದು ಇನ್ನೂ ದೊಡ್ಡ ಸುದ್ದಿ.

15) ಇಸ್ರೇಲ್ ಕದನ ಕುತೂಹಲ

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಇನ್ನೂ ಮುಂದುವರೆಯುತ್ತಿದ್ದು ಮೂರನೇ ಮಹಾಯುದ್ಧದ ಭೀತಿಯನ್ನು ಮೂಡಿಸಿದೆ. ಎರಡೂ ಕಡೆ ಸಾವಿರಾರು ಸಾವು ನೋವುಗಳಾದರೂ ಉಗ್ರರನ್ನು ಮಟ್ಟ ಹಾಕದೆ ಬಿಡುವುದಿಲ್ಲ ಎಂದು ಇಸ್ರೇಲ್ ಅಧ್ಯಕ್ಷರು ಗುಡುಗಿದ್ದಾರೆ.

16) ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ

ಆಗಸ್ಟ್ 9ರಂದು ಕೋಲ್ಕತ್ತಾದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣವು ಇಡೀ ದೇಶದಾದ್ಯಂತ ಪ್ರತಿಭಟನೆಯ ಕಾವು ಪಡೆಯಿತು. ಒಂದು ಹಂತದಲ್ಲಿ ಮಮತಾ ಬ್ಯಾನರ್ಜಿ ಸರಕಾರವನ್ನು ನಡುಗಿಸಿದ ಘಟನೆ ಕೂಡ ಹೌದು.

17) ಪ್ಯಾರಿಸ್ ಒಲಿಂಪಿಕ್ಸ್ – ಭಾರತಕ್ಕೆ ನಿರಾಸೆ

ಜೂಲೈ 26ರಿಂದ ಆಗಸ್ಟ್ 11ರ ವರೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಈ ಬಾರಿ ಭಾರತಕ್ಕೆ ನಿರಾಸೆಯನ್ನು ತಂದಿತು. ಭಾರತಕ್ಕೆ ದೊರಕಿದ್ದು ಒಂದು ಬೆಳ್ಳಿ ಮತ್ತು 5 ಕಂಚಿನ ಪದಕಗಳು ಮಾತ್ರ. ಪುರುಷರ ಹಾಕ್ಕಿ ತಂಡವು ಕಂಚಿನ ಪದಕ ಗೆದ್ದದ್ದು ಒಂದಿಷ್ಟು ಸಮಾಧಾನ. ಮನು ಭಾಕರ್ ಶೂಟಿಂಗನಲ್ಲಿ ಎರಡು ಕಂಚು ಪಡೆದು ಭಾರತದ ಮಗಳಾದರು. ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದರು. ವೀಣೇಶ್ ಪೋಗಟ್ 100ಗ್ರಾಂ ದೇಹ ತೂಕದ ವ್ಯತ್ಯಾಸದಿಂದ ಸ್ಪರ್ಧೆಯಿಂದ ಅನರ್ಹಗೊಂಡದ್ದು ದೇಶದಾದ್ಯಂತ ಸಂಚಲನ ಮೂಡಿಸಿದ ಸುದ್ದಿ.

18) ತುಂಗಭದ್ರಾ ಜಲಾಶಯಕ್ಕೆ ತಡೆಗೇಟು

ಈ ಬಾರಿ ಭಾರೀ ಮಳೆಯಿಂದ ಭರ್ತಿಯಾಗಿದ್ದ ತುಂಗಭದ್ರಾ ಆಣೆಕಟ್ಟಿನ 9ನೇ ಕ್ರೆಸ್ಟ್ ಗೇಟು ಕಳಚಿ 100ಮೀಟರ್ ದೂರಕ್ಕೆ ಹಾರಿ ಹೋದದ್ದು ಭಾರೀ ಆತಂಕಕ್ಕೆ ಕಾರಣವಾಯಿತು. ಹತ್ತಾರು ಗ್ರಾಮಗಳು ಮುಳುಗಡೆಯ ಭೀತಿಯನ್ನು ಎದುರಿಸಿದವು. ಆದರೆ ಕರ್ನಾಟಕ ಸರಕಾರದ ಸಕಾಲಿಕ ಕ್ರಮ ಮತ್ತು ಕನ್ಹಯ್ಯ ನಾಯ್ದು ಎಂಬ ತಂತ್ರಜ್ಞರ ತಂಡದ ನೆರವಿನಿಂದ ಐದೇ ದಿನಗಳಲ್ಲಿ ತಡೆಗೇಟು ನಿರ್ಮಾಣವಾಗಿ ಅಪಾಯ ತಪ್ಪಿದ್ದು ಬಹಳ ದೊಡ್ಡ ಸುದ್ದಿ.

19) ಅಮೇರಿಕಾ ಮತ್ತೆ ಟ್ರಂಪ್ ಅಧ್ಯಕ್ಷ

ಅಮೇರಿಕಾದಲ್ಲಿ ಈ ವರ್ಷ ಚುನಾವಣೆ ನಡೆದು 78 ವರ್ಷ ಪ್ರಾಯದ ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾದರು. ಇದು ಯಾರೂ ನಿರೀಕ್ಷೆ ಮಾಡದ ಫಲಿತಾಂಶ ಎಂದು ರಾಜನೀತಿ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

20) ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ಸುನೀತಾ

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಹಾಕಿದ್ದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಅಂದಾಗ ಜಗತ್ತಿನಾದ್ಯಂತ ಆತಂಕದ ಅಲೆಗಳು ಎದ್ದಿದ್ದವು. ಸದ್ಯದ ಪರಿಸ್ಥಿಯಲ್ಲಿ ಅವರು ಸುರಕ್ಷಿತವಾಗಿದ್ದು ಮುಂದಿನ ವರ್ಷದ ಮೊದಲ ಭಾಗದಲ್ಲಿ ಭೂಮಿಗೆ ಹಿಂದಿರುಗುವ ಸಾಧ್ಯತೆ ಇದೆ.

21) ಡಾಕ್ಟರ್ ಮನಮೋಹನ್ ಸಿಂಗ್ ನಿಧನ

ಮಾಜಿ ಪ್ರಧಾನಿ ಮತ್ತು ಆರ್ಥಿಕ ಪರಿಣತರಾದ ಡಾಕ್ಟರ್ ಮನಮೋಹನ್ ಸಿಂಗ್ ಅವರು ತನ್ನ 92ನೆಯ ವಯಸ್ಸಿನಲ್ಲಿ ನಿಧನರಾದದ್ದು ಬಹಳ ದೊಡ್ಡ ನಷ್ಟ. ಮಹಾಮೌನಿ ಎಂದೇ ಕರೆಸಿಕೊಂಡಿದ್ದ ಅವರು ತಮ್ಮ ಅಭಿವೃದ್ಧಿಪರ ಆರ್ಥಿಕ ನೀತಿಯಿಂದಾಗಿ ಭಾರತದಲ್ಲಿ ಭಾರೀ ಬದಲಾವಣೆ ತಂದಿದ್ದರು.

22) ಮಂಡ್ಯದಲ್ಲಿ ಯಶಸ್ವಿಯಾದ ಸಾಹಿತ್ಯ ಸಮ್ಮೇಳನ

ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಹಲವು ಕೊರತೆಗಳ ನಡುವೆಯೂ ಯಶಸ್ಸು ಪಡೆಯಿತು. ಗೋ.ರು. ಚನ್ನಬಸಪ್ಪ ಅವರ ಸಭಾಧ್ಯಕ್ಷತೆ, ಅವರ ಶ್ರೇಷ್ಟವಾದ ಅಧ್ಯಕ್ಷೀಯ ಭಾಷಣ, ಉತ್ತಮ ಆತಿಥ್ಯ ಎಲ್ಲವೂ ಸಮ್ಮೇಳನದ ಯಶಸ್ಸಿಗೆ ಕಾರಣವಾದವು.

23) ಮೌನವಾದ ತಬಲಾ

ಭಾರತದ ಅತೀ ಶ್ರೇಷ್ಟ ತಬಲಾ ನುಡಿತಕ್ಕೆ ಹೆಸರಾಗಿದ್ದ ಉಸ್ತಾದ್ ಝಾಕೀರ್ ಹುಸೇನ್ ನಿಧನವು ಒಂದು ಬಹುದೊಡ್ಡ ಶೂನ್ಯವನ್ನು ಹುಟ್ಟುಹಾಕಿತು. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಈ ಭಾರತೀಯ ಸಂಗೀತದ ರಾಯಭಾರಿಯ ನಿರ್ಗಮನವು ಖಂಡಿತವಾಗಿಯೂ ಸಂಗೀತ ಕ್ಷೇತ್ರಕ್ಕೆ ಬಹಳ ದೊಡ್ಡ ನಷ್ಟ ಎಂದೇ ಬಿಂಬಿತವಾಗಿದೆ.

24) ಐಕಾನಗಳ ನಿರ್ಯಾಣ

ಕನ್ನಡದ ಶ್ರೇಷ್ಠ ನಿರೂಪಕಿ ಅಪರ್ಣಾ ವಸ್ತಾರೆ, ಸಂಗೀತದ ಮೇರು ರಾಜೀವ್ ತಾರಾನಾಥ್, ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಲೇಖಕ ಮತ್ತು ಸಿನೆಮಾ ನಿರ್ದೇಶಕ ಎಂ ಟಿ ವಾಸುದೇವ್ ನಾಯರ್, ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಶ್ಯಾಮ್ ಬೆನೆಗಲ್ ಈ ವರ್ಷ ನಮ್ಮನ್ನಗಲಿದರು. ಸಾಂಸ್ಕೃತಿಕ ಲೋಕಕ್ಕೆ ತುಂಬಾ ಹಿನ್ನಡೆಯಾದ ಘಟನೆಗಳು ಈ ವರ್ಷ ನಡೆದವು.

25) ಘರ್ಜಿಸಿದ ಪುಷ್ಪಾ 2, ಭೈರತಿ ರಣಗಲ್, ಮ್ಯಾಕ್ಸ್, ಆನಿಮಲ್

ಈ ವರ್ಷ ಭಾರತದಲ್ಲಿ ಬಿಡುಗಡೆಯಾದ ಸಿನೆಮಾಗಳ ಸಂಖ್ಯೆ ಹೆಚ್ಚು ಕಡಿಮೆ 1000! ಕನ್ನಡದಲ್ಲಿ ಬಿಡುಗಡೆಯ ಭಾಗ್ಯ ಪಡೆದದ್ದು ಬರೋಬ್ಬರಿ 200 ಸಿನೆಮಾಗಳು! ಸಕ್ಸೆಸ್ ರೇಟ್ 10% ಕೂಡ ಇಲ್ಲ ಅನ್ನೋದು ದುರಂತ. ನಿರ್ಮಾಪಕರು ಈ ಬಾರಿಯೂ ಕೋಟಿ ಕೋಟಿ ದುಡ್ಡು ಕಳೆದುಕೊಂಡರು. ಈ ವರ್ಷ ತೆಲುಗಿನಲ್ಲಿ ಬಿಡುಗಡೆಯಾದ ಪಾನ್ ಇಂಡಿಯಾ ಸಿನೆಮಾ ಪುಷ್ಪ 2 ಇನ್ನೂ ತನ್ನ ಘರ್ಜನೆ ನಿಲ್ಲಿಸಿಲ್ಲ ಎನ್ನುವಲ್ಲಿಗೆ ರಾಷ್ಟ್ರೀಯ ದಾಖಲೆ ಸಾಧಿಸಿದೆ. ಕನ್ನಡದಲ್ಲಿ ಭೈರತಿ ರಣಗಲ್, ಮ್ಯಾಕ್ಸ್, ಕೃಷ್ಣಂ ಪ್ರಣಯ ಸಖಿ ಗೆಲುವಿನ ನಗು ಬೀರಿದರೆ, ಹಿಂದಿಯಲ್ಲಿ
ಆನಿಮಲ್ ಮತ್ತು ಸ್ತ್ರೀ 2 ಸಿನೆಮಾಗಳು ಭಾರೀ ದುಡ್ಡು ಮಾಡಿದವು. ರಜನೀಕಾಂತ್ ಅಭಿನಯದ ಜೈಲರ್ ಭಾರೀ ಹಿಟ್ ಆಯಿತು. ತೆಲುಗಿನ ಅಲ್ಲೂ ಅರ್ಜುನ್ ಮತ್ತು ಕಾಂತಾರದ ರಿಶಭ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗಳು ದೊರೆತವು. ಕನ್ನಡದ ರಶ್ಮಿಕಾ ಮಂದಣ್ಣ ಪಾನ್ ಇಂಡಿಯಾ ಮಟ್ಟಕ್ಕೆ ಬೆಳೆದದ್ದು ನಿಜಕ್ಕೂ ಅಚ್ಚರಿಯ ಸಂಗತಿ.

26) ಬುಮ್ ಬುಮ್ ಬೂಮ್ರಾ

ದೇಶ ವಿದೇಶಗಳಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತು ಮಿಂಚುತ್ತಿರುವ ಜಸ್ಪ್ರೀತ್ ಬುಮ್ರಾ ಖಂಡಿತವಾಗಿ ಈ ವರ್ಷದ ಕ್ರಿಕೆಟರ್ ಅನ್ನಲು ಅಡ್ಡಿಯಿಲ್ಲ! ಭಾರತೀಯ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿ ಕೂಡ ಬೂಮ್ರಾ ಸಾಧನೆ ಅದ್ಭುತ! ಸೂರ್ಯಕುಮಾರ್ ಯಾದವ್ ಭಾರತದ T20 ಕ್ಯಾಪ್ಟನ್ ಆಗಿ ಉತ್ತಮ ಭರವಸೆಯ ಆರಂಭ ನೀಡಿದರು. ತನ್ನ ಕ್ರಿಕೆಟ್ ಫಾರ್ಮನ ತುತ್ತ ತುದಿಯಲ್ಲಿದ್ದಾಗಲೆ ರವಿಚಂದ್ರನ್ ಅಶ್ವಿನ್ ಕ್ರಿಕೆಟಿಗೆ ವಿದಾಯ ಹೇಳಿದ್ದು ಅಚ್ಚರಿಯ ಸಂಗತಿ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಫಾರ್ಮಿನ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದು ಅವರಿಬ್ಬರೂ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಹೇಳಲಿ ಎಂದು ಅವರದೇ ಅಭಿಮಾನಿಗಳು ಗಟ್ಟಿಯಾಗಿ ಹೇಳಲು ಆರಂಭ ಮಾಡಿದ್ದಾರೆ.

2024ರ ವಿವಾದಗಳ ವರ್ಷಕ್ಕೆ ವಿದಾಯ ಕೋರುತ್ತಾ 2025ನ್ನು ಹೆಚ್ಚು ಭರವಸೆಯೊಂದಿಗೆ ಸ್ವಾಗತ ಮಾಡೋಣ. ಏನಂತೀರಿ?