Tuesday, 24th December 2024

Rangaswamy Mookanahally Column: ಕನ್ನಡಿ ಮುಂದೆ ನಿಂತು ಬಿಂಬ ಸರಿಯಿಲ್ಲ ಎಂದರೆ ಹೇಗೆ ?

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಸ್ಥಳ: ಅಬುಧಾಬಿ , ಫೆರಾರಿ ವರ್ಲ್ಡ್ .

ಫೆರಾರಿ ವರ್ಲ್ಡ್ ಬಗ್ಗೆ ಬರೆಯಲು ಶುರು ಮಾಡಿದರೆ‌ ಅದರ ಕುರಿತು ನಾಲ್ಕೈದು ಲೇಖನ ಬರೆಯಬಹುದು. ಆದರೆ ಇವತ್ತಿನ ಬರಹದ ಉದ್ದೇಶ ಅದಲ್ಲ. ಫೆರಾರಿ ವರ್ಲ್ಡ್ ನಲ್ಲಿ ಹತ್ತಾರು ಆಟಗಳಿವೆ. ಅಂತಹ ಒಂದು ಆಟ ಫ್ಲೈಯಿಂಗ್
ಏಸಸ್ ಎನ್ನುವುದು. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಮೇಲಕ್ಕೆ ಹೋಗಿ ಕೆಳಕ್ಕೆ, ಅಕ್ಕಪಕ್ಕಕ್ಕೆ ಸುತ್ತಾಡಿಸುವ ರೋಲರ್ ಕೋಸ್ಟರ್ ಅದು.

ಅದರಲ್ಲಿ ಕುಳಿತ ಸ್ವಲ್ಪ ವೇಳೆಯಲ್ಲಿ ಇದೊಂದು ಸರಿ ಬದುಕಿಸಿ ಬಿಡು ಭಗವಂತ ಮುಂದೆಂದೂ ಇಂತಹ
ಆಟದಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರಾರ್ಥನೆ ಮಾಡಿಕೊಂಡಿದೆ! ಇರಲಿ. ಹೀಗೆ ಈ ರೋಲರ್ ಕೋಸ್ಟರ್ ನಲ್ಲಿ ಕೂರುವಾಗ ಜೇಬಿನಲ್ಲಿರುವ ಪರ್ಸ್, ಮೊಬೈಲ್ ಮತ್ತು ಕನ್ನಡಕ ಹಾಕಿದ್ದವರು ಅದನ್ನು ಕೂಡ ತೆಗೆದು ಲಾಕರ್‌ ನಲ್ಲಿಟ್ಟು ಬರಬೇಕು.

ಇದು ನಿಯಮ. ನಾನು ಅದನ್ನು ಪಾಲಿಸದೆ ನೇರವಾಗಿ ಹೋಗಿ ಕೂರುವ ಸಮಯದಲ್ಲಿ ಅಲ್ಲಿನ ಕರ್ಮಚಾರಿ ಯೊಬ್ಬರು ದಯಮಾಡಿ ನಿಮ್ಮ ಮೊಬೈಲ್, ಪರ್ಸ್ ಮತ್ತು ಕನ್ನಡಕ ತೆಗೆದು ಇಲ್ಲಿಡಿ ಎಂದು ಒಂದು ಪ್ಲಾಸ್ಟಿಕ್ ಟ್ರೇ ಮುಂದಕ್ಕೆ ಇಟ್ಟರು. ಕನ್ನಡಕ ಮೊಬೈಲ್ ಓಕೆ, ಪರ್ಸ್? ಅದನ್ನು ಹೇಗೆ ಇಡುವುದು? ಅರೆಕ್ಷಣ ಅಷ್ಟೆ ಈ ಯೋಚನೆ
ಯಲ್ಲಿದ್ದೆ.

ನಾನಿನ್ನೂ ರಿಯಾಕ್ಟ್ ಮಾಡುವ ಮೊದಲೇ ಆ ಕರ್ಮಚಾರಿ ‘ಸಾರ್ ಇದು ಅಬುದಾಭಿ, ನಿಶ್ಚಿಂತೆಯಿಂದ ನಿಮ್ಮ ಪರ್ಸ್ ಇರಿಸಿ. ಅದರಲ್ಲಿ ಒಂದು ಮಿಲಿಯನ್ ಡಾಲರ್ ಇದ್ದರೂ ಕೂಡ ಅದೇನೂ ಆಗುವುದಿಲ್ಲ, ಐ ಪ್ರಾಮಿಸ್’ ಎಂದರು. ಅನೈಚ್ಚಿಕವಾಗಿ ಕೈ ಜೇಬಿ ನಿಂದ ಪರ್ಸ್ ತೆಗೆದು ಟ್ರೇಯಲ್ಲಿರಿಸಿತ್ತು!

ಸ್ಥಳ : ಕ್ಯೋಟೋ, ಜಪಾನ್.

ಕೈಲಿದ್ದ ಬ್ಯಾಗ್ ಅಲ್ಲಿನ ಬುಲೆಟ್ ಟ್ರೈನ್‌ನಲ್ಲಿ ನನ್ನ ಸಹ ಪ್ರಯಾಣಿಕರೊಬ್ಬರು ಮರೆತು ಇಳಿದು ಬಿಟ್ಟರು. ಪೊಲೀಸ್ ಸ್ಟೇಷನ್‌ಗೆ ಹೋಗುವ ಜಂಜಾಟವಿಲ್ಲ. ಬ್ಯಾಗ್ ಕಳೆದು ಹೋಯ್ತು ಎಂದು ರಿಪೋರ್ಟ್ ಮಾಡುವ ಮತ್ತು ಆ ಪ್ರಕ್ರಿಯೆ ಯಲ್ಲಿ ಆಗುವ ನೋವು, ಸಮಯ ಯಾವುದೂ ಇಲ್ಲ. ಅಲ್ಲಿನ ರೈಲ್ವೆ ಕರ್ಮಚಾರಿಗಳ ಬಳಿ ಹೋಗಿ ಇಂತಹ ಬೋಗಿ ಯಲ್ಲಿ ಕುಳಿತ್ತಿದ್ದೆ, ಸೀಟ್ ನಂಬರ್ ಇಂತಹುದು, ಈ ಬಣ್ಣದ ಬ್ಯಾಗ್, ಬ್ರಾಂಡೆಡ್ ಆಗಿದ್ದರೆ ಇಂತಹ ಬ್ರಾಂಡ್ ಎಂದು ಹೇಳಿದರೆ ಸಾಕು. ನೀವಿರುವ ಜಾಗಕ್ಕೆ ಅರ್ಧ ಗಂಟೆಯಲ್ಲಿ ಬ್ಯಾಗ್ ಬಂದು ತಲುಪುತ್ತದೆ. ಗಮನಿಸಿ ಇಷ್ಟೆಲ್ಲ ಇಂಗ್ಲಿಷ್ ಭಾಷೆ ಬಾರದ ಜಪಾನೀಯರು ಸಲೀಸಾಗಿ ಮಾಡುತ್ತಾರೆ.

ಪ್ರತಿಯೊಂದು ವಿಷಯಕ್ಕೂ ಹಾಯ್ ಎನ್ನುತ್ತಾರೆ. hai ಎಂದರೆ ಜಪಾನಿ ಭಾಷೆಯಲ್ಲಿ yes ಎಂದರ್ಥ. ತಮ್ಮದಲ್ಲದ ವಸ್ತುವನ್ನು ಇಲ್ಲಿನ ಜನ ವಿಷವೆನ್ನುವಂತೆ ಕಾಣುತ್ತಾರೆ.

ಸ್ಥಳ :ದುಬೈ

ದುಬೈ ಎನ್ನುವ ಈ ಪುಟಾಣಿ ಊರು, ದೇಶ ಎರಡೂ ಆಗಿರುವ ಈ ನಗರದಲ್ಲಿ ನಾನು 23 ರ ಹರಯದಲ್ಲಿ ಕೆಲಸ ಶುರು ಮಾಡಿದ್ದು. ಕಳೆದ 25 ವರ್ಷದಲ್ಲಿ ಕನಿಷ್ಠ 60 ಬಾರಿ ಈ ದೇಶಕ್ಕೆ ಬಂದಿದ್ದೇನೆ. ಪ್ರತಿ ಬಾರಿಯೂ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತ ಇರುವ ದೇಶವಿದು. ಒಂದೆರೆಡು ವರ್ಷ ನೀವು ಇಲ್ಲಿಗೆ ಬಂದಿಲ್ಲದಿದ್ದರೆ ಇಲ್ಲಿ ಹೊಸದಾಗಿ ನೋಡಲು ಬಹಳಷ್ಟು ಅಂಶಗಳಿರುತ್ತವೆ. ಹೀಗೆ ಸದಾ ಬದಲಾಗುವ ದುಬೈ ಒಂದು ಅಂಶದಲ್ಲಿ ಮಾತ್ರ ಅಂದಿಗೂ, ಇಂದಿಗೂ ಅದೇ ಇಮೇಜ್ ಕಾಯ್ದು ಕೊಂಡುಬಂದಿದೆ.

ಇಲ್ಲಿ ಜನ ಮನೆ ಬಾಗಿಲು ಹಾಕಿ ಹೋಗಬೇಕು ಎನ್ನುವ ಧಾವಂತವಿಲ್ಲ. ಸಾಮಾನ್ಯವಾಗಿ ಎಲ್ಲರೂ ಬೀಗ ಹಾಕಿ ಹೋಗುತ್ತಾರೆ ಅದು ಬೇರೆ ಮಾತು. ಆಗೊಮ್ಮೆ ಬೀಗ ಹಾಕಲು ಮರೆತು ಹೋದರೂ ಕೂಡ ಇಲ್ಲಿ ಕಳ್ಳತನದ ಭಯವಿಲ್ಲ. ನಿಮ್ಮ ಪರ್ಸ್ ಅಥವಾ ಲ್ಯಾಪ್‌ಟಾಪ್ ಅಥವಾ ಇನ್ನೇನೆ ಆಗಿರಲಿ ನೀವಿಟ್ಟ ಸ್ಥಳದ ಇರುತ್ತದೆ. ವಿಪರ್ಯಾಸ ಎಂದರೆ ಇಲ್ಲಿರುವ ಜನಸಂಖ್ಯೆಯ 50 ಪ್ರತಿಶತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವವರು ಭಾರತೀಯರು,
ಪಾಕಿಸ್ತಾನಿಗಳು, ಬಾಂಗ್ಲಾದೇಶಿಗಳು. ಸ್ಥಳ: ಬೆಂಗಳೂರು, ಕರ್ನಾಟಕ, ಭಾರತ.

ಈಗ ಹೇಳುವ ವಿಷಯ ಕಾಲ್ಪನಿಕವಲ್ಲ. ಒಂದು ಪ್ರಯೋಗದ ರೀತಿಯ ಸರ್ವೆಯಲ್ಲಿ ಕಂಡು, ಕೇಳಿ ಬಂದದ್ದು! ಇಲ್ಲಿ ಕಾಲೇಜಿನ ಮಕ್ಕಳನ್ನು ತಮ್ಮ ಪೋಷಕರಿಗೆ ಕರೆ ಮಾಡಿ ದಾರಿಯಲ್ಲಿ ಒಂದು ಪರ್ಸ್ ಸಿಕ್ಕಿದೆ. ಇದರ ತುಂಬಾ ಹಣವಿದೆ. ಇದನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದಾ? ಅಥವಾ ಏನು ಮಾಡುವುದು ಎನ್ನುವ ಪ್ರಶ್ನೆಯನ್ನು ಕೇಳುವಂತೆ ಹೇಳಲಾಗುತ್ತದೆ. ಉತ್ತರಗಳು ಬೆಚ್ಚಿ ಬೀಳಿಸುತ್ತವೆ. ಯಾರು ನೋಡಿಲ್ಲ ತಾನೇ? ಜೊತೆಯಲ್ಲಿ ಯಾರೂ ಇಲ್ಲ ತಾನೇ? ಸರಿ ಹಾಗಾದರೆ ಪರ್ಸ್ ತೆಗೆದುಕೊಂಡು ಸೀದಾ ಮನೆಗೆ ಬಂದು ಬಿಡು ಎನ್ನುವುದು ಸಹಜ ಉತ್ತರ! ಕರೋನ ಸಮಯದಲ್ಲಿ ಹೀಗೆ ಆಗಿತ್ತು ನೆನಪಿದೆಯಾ? ಎಲ್ಲ ಮಕ್ಕಳು 95 ಪ್ರತಿಶತ ಅಂಕ ಗಳಿಸುತ್ತಿದ್ದರು. ಬೇರೆ ಯವರು ಕಾಪಿ ಮಾಡುತ್ತಾರೆ ನಾವೇಕೆ ಸುಮ್ಮನಿರಬೇಕು? ಎನ್ನುವ ಧೋರಣೆಯಿಂದ ಪೋಷಕರೇ ಮಕ್ಕಳನ್ನು ಕಾಪಿ ಮಾಡಲು, ಮತ್ತು ಹೀಗೆ ಮಾಡುವುದು ಓಕೆ ಎನ್ನುವಂತೆ ಬೆಳೆಸಿದ್ದು ಅಲ್ಲವೇ? ಯಾರಾದರೂ ನೋಡಿದರೆ ಸುಭಗ ರಂತೆ ನಟಿಸಬೇಕು, ಯಾರೂ ಇಲ್ಲದಿದ್ದರೆ ಪರ್ಸ್ ಜೋಬಿಗೆ ಹಾಕಿಕೊಂಡು ಬರಬೇಕು ಎನ್ನುವುದನ್ನು ಮಕ್ಕಳಿಗೆ ಕಲಿಸುತ್ತಿರುವುದು ಯಾರು? ಬೇರೆ ದೇಶಗಳನ್ನು ನೋಡಿ, ನಮ್ಮ ದೇಶವನ್ನು, ಸರಕಾರವನ್ನು, ರಾಜಕಾರಣಿ ಗಳನ್ನು, ವ್ಯವಸ್ಥೆಯನ್ನು ಹಳಿಯುವ ನಾವು ಮಾತ್ರ ಬದಲಾಗುವುದಿಲ್ಲ. ನಾವು ಬಯಸುವ ಬದಲಾವಣೆ ನಮ್ಮಿಂದ ಶುರು ವಾದಾಗ ಮಾತ್ರ ಸಮಾಜ, ದೇಶ ಕೂಡ ಬದಲಾಗುತ್ತದೆ ಅಲ್ಲವೇ? ನಾವು ಸರಿಯಾಗಿರದೆ ಇನ್ನೊಬ್ಬರ ತಪ್ಪನ್ನು ಬೊಟ್ಟು ಮಾಡಿ ತೂರಿಸಲು ನಮಗ್ಯಾವ ನೈತಿಕತೆಯಿದೆ? ನಾವು ಭಾರತೀಯರು ಪುನರ್ಜನ್ಮದಲ್ಲಿ ನಂಬಿಕೆಯಿಟ್ಟ ವರು. ಆದರೆ ನಮಗೆ ಜನ್ಮಾಂತರದ ನೆನಪುಗಳು ಇರುವುದಿಲ್ಲ.

ಹೀಗಾಗಿ ಜನ್ಮಗಳ ಮಾತು ಬೇಡ. ಇಂದು ನಮ್ಮ ಕೈಲೇನಿದೆ ಅಷ್ಟೇ ನಮ್ಮದು. ಈ ನಿಟ್ಟಿನಲ್ಲಿ ನೋಡಿದಾಗ ಇರುವು ದೊಂದು ಬದುಕು, ಅದನ್ನು ನಿನ್ನೆಚ್ಛೆಯಂತೆ ಬದುಕು ಎನ್ನಲಡ್ಡಿಯಿಲ್ಲ. ನಮ್ಮಿಚ್ಚೆ ಎಂದ ತಕ್ಷಣ ಬಿಡುಬೀಸಾಗಿ, ಸಮಾಜ ಹಾಕಿದ ಎಲ್ಲ ಕಟ್ಟಳೆಗಳನ್ನು ಧಿಕ್ಕರಿಸುತ್ತ ಬದುಕುವುದಲ್ಲ.

ಬದುಕಿಗೊಂದು ಫ್ರೇಮ್ ವರ್ಕ್ ಬೇಕು. ಅದಿಲ್ಲದೆ ಬಿಡುಬೀಸು ಬದುಕು ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ. ಇಚ್ಛೆ
ಬಂದಂತೆ ಬದುಕು ಎಂದರೆ, ನಮಗೇನಿಷ್ಟ ಅದನ್ನು ಮಾಡುವುದು. ನಿಮ್ಮಿಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಳ್ಳು ವುದು. ನಾವು ಯಾವಾಗ ನಮಗಿಷ್ಟವಾದ ಕೆಲಸವನ್ನು ಆಯ್ದುಕೊಳ್ಳುತ್ತೇವೆ ಆಗ ಅದು ಕೆಲಸ ಎನ್ನಿಸುವುದಿಲ್ಲ. ಮಾಡುವ ಕೆಲಸ ಮನಸ್ಸಿಗೆ ಆಪ್ತವಾಗಿದ್ದರೆ ಆಗ ಗಡಿಯಾರ ನೋಡಿ ಕೆಲಸ ಮಾಡುವ ಅವಶ್ಯಕತೆ ಬರುವುದಿಲ್ಲ.

ಯಾವಾಗ ಆ ರೀತಿಯ ಸನ್ನಿವೇಶವನ್ನು ನಾವು ಸೃಷ್ಟಿಸಿಕೊಳ್ಳುತೇವೆ, ಆಗ ಫಲಿತಾಂಶಕ್ಕೂ ನಾವು ಹೆಚ್ಚು ಚಿಂತಿಸುವ ಅವಶ್ಯಕತೆ ಬರುವುದಿಲ್ಲ. ಇದರೊಂದಿಗೆ ಒಂದಷ್ಟು ನೈತಿಕತೆಯೂ ಜೊತೆಯಾದರೆ ನಾವು ದುಬೈ, ಜಪಾನ್, ಅಬುದಾಬಿಯನ್ನು ಮೀರಿಸಿ ಬೆಳೆಯಬಹುದು.

ಕಳೆದ ಎರಡು ದಶಕದಲ್ಲಿನ ಜನರ ಮನಸ್ಥಿತಿಗೂ ಇಂದಿನ ಜನರ ಮನಸ್ಥಿತಿಗೂ ಬಹಳಷ್ಟು ಬದಲಾವಣೆಯಾಗಿದೆ. ಹಿಂದೆ ಇಷ್ಟವಿರಲಿ ಬಿಡಲಿ ಸಿಕ್ಕ ಕೆಲಸವನ್ನು ಮಾಡಬೇಕಾಗಿತ್ತು. ಕೆಲಸ ಬಿಡುವುದು ಅಪರಾಧ ಎನ್ನುವಂತಾಗಿತ್ತು. ಇಂದಿಗೆ ಕಾಲ ಬದಲಾಗಿದೆ. ಚಿಕ್ಕ ವಯಸ್ಸಿನ ಹುಡುಗ / ಹುಡುಗಿಯರು ತಮ್ಮ ಪ್ಯಾಶನ್ ಹಿಂದೆ ಹೊರಟಿದ್ದಾರೆ.

ತಾವು ಮಾಡುವ ಕೆಲಸದಿಂದ ಆರು ತಿಂಗಳು, ವರ್ಷ ಬ್ರೇಕ್ ತೆಗೆದುಕೊಂಡು ತಮ್ಮ ಮನಸ್ಸಿನ ಕೂಗಿಗೆ ಕಿವಿ ಯಾಗುತ್ತಿದ್ದಾರೆ. ಗೆಲುವು -ಸೋಲು ನಂತರದ ಮಾತು. ಪ್ರಯತ್ನ ಅತ್ಯಂತ ಮುಖ್ಯವಾಗಿ ಆಗಬೇಕಾದದ್ದು. ಅದಾಗು ತ್ತಿದೆ. ಬದುಕು ಒಂದು ಆದ್ದರಿಂದ ಅದನ್ನು ಚನ್ನಾಗಿ ಅನುಭವಿಸಿ ಬಿಡಬೇಕು, ಮಜಾ ಮಾಡಬೇಕು ಎನ್ನುವ ಒಂದು ದೊಡ್ಡ ವರ್ಗವಿದೆ. ನಾಳೆ ಕಂಡವರಿಲ್ಲ, ಕಾಣದ ನಾಳೆಗಾಗಿ ನಮ್ಮ ಇಂದು ಅದೇಕೆ ಬಲಿ ಕೊಡಬೇಕು? ಎನ್ನುವುದು ಇವರ ವಾದ. ಬದುಕು ಒಂದು ಸರಿ, ಆದರೆ ಅದನ್ನು ಸರಿಯಾಗಿ ಬದುಕಿದರೆ ನಾವು ಸತ್ತ ಮೇಲೂ ಬದುಕಿರುತ್ತೇವೆ ಎನ್ನುವ ವರ್ಗವೂ ಉಂಟು.

ನಾಳೆಗಾಗಿ, ಭವಿಷ್ಯಕ್ಕಾಗಿ, ದೀರ್ಘಕಾಲದ ಸ್ವಸುಖ ಮತ್ತು ಲೋಕಕಲ್ಯಾಣಕ್ಕಾಗಿ ಒಂದಷ್ಟು ಸ್ಯಾಕ್ರಿಫೈಸ್
ಮಾಡುವುದು ತಪ್ಪೇನಿಲ್ಲ ಎನ್ನುವ ಸಿದ್ಧಾಂತವಾದಿಗಳು ಇದ್ದಾರೆ.

ಇವೆರಡರ ನಡುವೆ ಬ್ಯಾಲೆ ಮಾಡುತ್ತಾ ಬದುಕವರ ಸಂಖ್ಯೆಯೂ ಅಸಂಖ್ಯ. ಒಂದು ಬದುಕು ಎಂದು ಅತ್ಯಂತ ಸುರಕ್ಷಿತವಾಗಿ ಬದುಕನ್ನು ನಡೆಸಬೇಕು, ಯಾವುದೇ ಜಂಜಾಟ, ರಿಸ್ಕ್ ಬೇಡ ಎನ್ನವ ಜನರೂ ನಮ್ಮ ನಡುವೆ ಇದ್ದಾರೆ.

ನಾವೆಲ್ಲರೂ ಒಬ್ಬರಂತೆ ಒಬ್ಬರಿಲ್ಲ, ಒಬ್ಬರಂತೆ ಒಬ್ಬರು ಚಿಂತಿಸುವುದಿಲ್ಲ. ಬದುಕನ್ನು ನಾವು ನೋಡುವ ದೃಷ್ಟಿಕೋನ ಬದಲಾಗುತ್ತಲೆ ಇರುತ್ತದೆ. ಈ ಮಾತುಗಳನ್ನು ಅನೇಕ ಮಹನೀಯರು ಪುಷ್ಟಿಕರಿಸಿದ್ದಾರೆ.

You only live once, so you might as well get some pleasure out of life. & Leon C. Megginson. ಇರುವು ದೊಂದು ಜೀವನ , ಅದರಿಂದ ಸ್ವಲ್ಪ ಸುಖವನ್ನು ಪಡೋಣ ಎನ್ನುವ ಮಾತನ್ನು ಲಿಯಾನ್ ಹೇಳುತ್ತಾರೆ.

You only live once. You don’t want your tombstone to read: Played it Safe.’ & Rosario Dawson. ಸ್ವಲ್ಪ ರಿಸ್ಕ್ ತೆಗೆದುಕೊಳ್ಳಿ, ಬದುಕಿನ ಕೊನೆಯಲ್ಲಿ ಅಯ್ಯೋ ನಾನೇನೂ ರಿಸ್ಕ್ ತೆಗೆದುಕೊಳ್ಳದೆ ಕೇವಲ ಸುರಕ್ಷತೆಗೆ ಆದ್ಯತೆ ನೀಡಿದೆ‌ ಎನ್ನಿಸುವುದು ಬೇಡ ಎನ್ನುತ್ತಾರೆ ರೊಸಾರಿಯೋ.

You only live once, for a very‌ short time. So make every second divine. & Mitch Lucker, ಬದುಕಿನ ಪ್ರತಿ ಕ್ಷಣವೂ ಪವಿತ್ರವಾಗಿದೆ, ಏಕೆಂದರೆ ನಮ್ಮ ಬಳಿ ಬಹಳ ಕಡಿಮೆ ಸಮಯವಿದೆ ಎನ್ನುತ್ತಾರೆ ಲುರ್ಕೆ.

You only live once, so I try to say yes to everything.& Joshua Bell, ಬೇಡ, ಇಲ್ಲ ಎನ್ನುವ ಋಣಾತ್ಮಕ ಅಂಶ ಗಳು ಬೇಡ, ಇರುವುದೊಂದು ಬದುಕು, ಯೆಸ್ ಎಂದುಕೊಂಡು ಮುನ್ನುಗ್ಗಿ ಎನ್ನುತ್ತಾರೆ ಬೆಲ್. You only live once, therefore live for the right reason. & Ramparts, ಇರುವುದೊಂದು ಬದುಕು, ಹೀಗಾಗಿ ಸರಿಯಾದ ಕಾರಣಕ್ಕೆ ಬದುಕು ಎನ್ನುತ್ತಾರೆ ರಂಪರ್ಟ್ಸ್.

You only live once, and the way I live, once is enough. & Frank Sinatra, ಸರಿಯಾಗಿ ಬದುಕಿದರೆ ಒಂದು ಬದುಕು ಸಾಕು ಎನ್ನುತ್ತಾರೆ ಫ್ರಾಂಕ್. ನಮ್ಮ ಬದುಕಿನ ಗುರಿಯೇನು? ಈ ಜಗತ್ತು, ಜನ ನಮ್ಮನ್ನು ಹೇಗೆ ನೆನಪಿಟ್ಟು ಕೊಳ್ಳಬೇಕು? ಈ ಬದುಕಿನಿಂದ ನನ್ನ ನಿರೀಕ್ಷೆಗಳೇನು? ಬದುಕಿಗೆ ಏನಾದರೂ ಉದ್ದೇಶವಿದೆಯೇ? ನೆನಪಿರಲಿ, ಎಲ್ಲರೂ ಎಲ್ಲವನ್ನು ಸಾಧಿಸಲು ಬದುಕಬೇಕು ಎನ್ನುವ ನಿಯಮವಿಲ್ಲ. ಸಮಾಜ ಒಪ್ಪುವ, ನಮಗೆ ನಾವು ಮೋಸ ಮಾಡಿಕೊಳ್ಳದ ಪ್ರಜೆಗಳಾಗಿ ಬದುಕಿದರೆ ಅದು ಕೂಡ ಸಮಾಜಕ್ಕೆ ನೀಡಿದ ಕೊಡುಗೆ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಯೋಚಿಸಿದಾಗ ದೇಶ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.

ಇದನ್ನೂ ಓದಿ: Rangaswamy Mookanahalli Column