Tuesday, 26th November 2024

Ranjith H Ashwath Column: ಉಪಚುನಾವಣೆ: ಯಾರಿಗೆ ಯಾವ ಪಾಠ ?

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳೊಂದಿಗೆ ಕರ್ನಾಟಕದ ಉಪಸಮರಕ್ಕೂ ತೆರೆಬಿದ್ದಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದ್ದರೆ, ಕರ್ನಾಟಕದಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಉಪಚುನಾವಣೆಯಲ್ಲಿ ಭಾರಿ ಸೋಲಿನ ಮೂಲಕ ಮುಖಭಂಗವನ್ನು ಅನುಭವಿಸಿದೆ.

ಕರ್ನಾಟಕದ ಉಪಚುನಾವಣೆ ಫಲಿತಾಂಶವು ಮೇಲ್ನೋಟಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮೇಲೆ ಬಹುದೊಡ್ಡ ‘ಪ್ರಭಾವ’ ಬೀರದಿದ್ದರೂ, ರಾಜ್ಯದ ಮಟ್ಟಕ್ಕೆ ಪ್ರಮುಖ ಎನಿಸಿರುವುದು ಸುಳ್ಳಲ್ಲ. ಈ ಉಪಚುನಾವಣೆಯು ರಾಜ್ಯ ರಾಜಕೀಯದ ಸ್ಥಿತ್ಯಂತರ ಹಾಗೂ ಪಕ್ಷಗಳ ಹಿತಕ್ಕಿಂತ, ವೈಯಕ್ತಿಕ ವಾಗಿ ಕೆಲವರಿಗೆ ಪ್ರಮುಖ ಎನಿಸಿತ್ತು. ಅದರಲ್ಲಿಯೂ ತಮ್ಮ ಪುತ್ರರನ್ನು ರಾಜಕೀಯವಾಗಿ ‘ಲಾಂಚ್’ ಮಾಡಲು ಪ್ರಯತ್ನಿಸಿದ್ದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯಾಧ್ಯಕ್ಷನಾಗಿ ತಮ್ಮ ಪುತ್ರ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾನೆ ಎನ್ನುವ ಸಂದೇಶ ನೀಡಬೇಕಿದ್ದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಗಳಿಗೆ ಈ ಚುನಾವಣೆ ಪ್ರಮುಖ ಎನಿಸಿತ್ತು. ಆದರೆ ಈ ನಿರೀಕ್ಷೆಯೊಂದಿಗೆ ಹಗಲಿರುಳೂ ದುಡಿದ ಈ ಮೂರು ಮಾಜಿ ಮುಖ್ಯಮಂತ್ರಿಗಳಿಗೆ ಭ್ರಮನಿರಸನವಾಗಿದೆ ಎನ್ನುವುದು ಸ್ಪಷ್ಟ.

ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಇ. ತುಕಾರಾಂ ಗೆಲುವು ಸಾಧಿಸಿದ್ದರಿಂದ ಕ್ರಮವಾಗಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿಗೆ ಉಪಚುನಾವಣೆ ಎದುರಾಗಿತ್ತು. ಈ ಮೂರು ಕ್ಷೇತ್ರಗಳಲ್ಲಿಯೂ ರಾಜೀನಾಮೆ ನೀಡಿದ್ದ ನಾಯಕರ ಮಕ್ಕಳೇ ಅಭ್ಯರ್ಥಿಗಳೆಂದು ಹೇಳಲಾಗಿತ್ತು. ಸಂಡೂರು ಹೊರತುಪಡಿಸಿದರೆ ಚನ್ನಪಟ್ಟಣದಿಂದ ನಿರೀಕ್ಷೆಯಂತೆ ಕುಮಾರಸ್ವಾಮಿ ಪುತ್ರ ನಿಖಿಲ್, ಶಿಗ್ಗಾವಿಯಿಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸ್ಪರ್ಧಿಸಿದರೆ, ಸಂಡೂರಿನಿಂದ ತುಕಾರಾಂ ಪುತ್ರಿಯ ಬದಲು ಪತ್ನಿಯನ್ನು ನಿಲ್ಲಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಪುತ್ರರಿಗೆ ರಾಜಕೀಯ ಭವಿಷ್ಯ ರೂಪಿಸಲು ಈ ಚುನಾವಣೆ ಪ್ರಮುಖ ಎನಿಸಿತ್ತು. ಆ ಕಾರಣಕ್ಕಾಗಿಯೇ ಟಿಕೆಟ್ ಬೇಡ ಎನ್ನುತ್ತಲೇ ಈ ಇಬ್ಬರಿಗೂ ಟಿಕೆಟ್ ಕೊಡಿಸುವ ಮೂಲಕ ತಮ್ಮ ಕುಟುಂಬದ ಮೂರನೇ
ತಲೆಮಾರನ್ನು ಲಾಂಚ್ ಮಾಡಲು ಸಜ್ಜಾಗಿದ್ದರು. ಇದಕ್ಕಾಗಿ ಈ ಇಬ್ಬರು ನಾಯಕರು ಉಪಚುನಾವಣೆ ಆರಂಭದಿಂದ ಕೊನೆಯ ತನಕ ಪುತ್ರರು ನಿಂತಿದ್ದ ಕ್ಷೇತ್ರ ಬಿಟ್ಟು ಹೊರ ಬರಲಿಲ್ಲ. ಆದರೂ ಕೊನೆಗೆ ಎರಡೂ ಕ್ಷೇತ್ರದಲ್ಲಿ ಸೋಲನುಭವಿಸಬೇಕಾಯಿತು. ಆದರೆ ಈ ಸೋಲಿಗೆ ಕಾರಣವೇನು
ಎನ್ನುವುದನ್ನು ಗಮನಿಸಬೇಕಿದೆ.

ಉಪಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕುಟುಂಬ ರಾಜಕಾರಣದ ಕುಡಿಗಳೇ ಕಾಣಿಸಿಕೊಂ ಡಿದ್ದವು. ಚನ್ನಪಟ್ಟಣ ಹಾಗೂ ಶಿಗ್ಗಾವಿಯಲ್ಲಿ ಅಭ್ಯರ್ಥಿಗಳಿಗಿಂತ ಅವರ ತಂದೆಯರ ಪ್ರತಿಷ್ಠೆಯೇ ಪ್ರಶ್ನೆಯಾಗಿತ್ತು. ಚನ್ನಪಟ್ಟಣದಲ್ಲಿ ಕುಮಾರ ಸ್ವಾಮಿ ಪುತ್ರ ನಿಖಿಲ್‌ಗೆ ಟಿಕೆಟ್ ಖಚಿತವಾಗಿದ್ದರಿಂದ ಯೋಗೇಶ್ವರ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದು, ಟಿಕೆಟ್ ಪಡೆದಿದ್ದರು. ಇಷ್ಟೆಲ್ಲ ವಾದರೂ ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ ಅಂತರವು ಐದು ಸಾವಿರದಲ್ಲಿಯೇ ಇರಲಿದೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ
ನಿಖಿಲ್ ಮೂರನೇ ಬಾರಿಗೆ ಬಹುದೊಡ್ಡ ಅಂತರದಲ್ಲಿ ಸೋತಿರುವುದು ಬಿಜೆಪಿ-ಜೆಡಿಎಸ್‌ಗೆ ಬಹುದೊಡ್ಡ ನಷ್ಟವಾಗಿದೆ.

ಇನ್ನು ಬಸವರಾಜ ಬೊಮ್ಮಾಯಿ ಪುತ್ರ ಭರತ್ ಅವರು ಸ್ವಂತ ಬಲಕ್ಕಿಂತ ಹೊಂದಾಣಿಕೆ’ಯ ಕಾರಣಕ್ಕೆ ಗೆಲ್ಲಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಅಂತಿಮ ವಾಗಿ ಅದೂ ಸಾಧ್ಯವಾಗಿಲ್ಲ. ಈ ಎರಡು ಕ್ಷೇತ್ರದಲ್ಲಿ ಸೋಲಾ ಗಲು ಎದುರಾಳಿ ಪಕ್ಷದ ಸಂಘಟನೆಗಿಂತ ಹೆಚ್ಚಾಗಿ ಸ್ವಪಕ್ಷ ದಲ್ಲಿಯೇ ಈ ಆಯ್ಕೆಗಳಿಗಿದ್ದ ಕಣ್ಣಿಗೆ ಕಾಣದವಿರೋಧಿ’ ಅಲೆಯೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಇದರೊಂದಿಗೆ, ಈ ಚುನಾವಣೆಯಲ್ಲಿ ಮತದಾರರು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಸ್ವತಃ ದೇವೇಗೌಡರು ನಿಖಿಲ್ ಗೆಲುವಿಗೆ ಸುಮಾರು
೧೦ ದಿನ ಪ್ರಚಾರ ನಡೆಸಿದ್ದರು. ಕುಮಾರಸ್ವಾಮಿ ಅವರು ಬಿಡದಿ ತೋಟದ ಮನೆ-ಚನ್ನಪಟ್ಟಣ ಬಿಟ್ಟು ಎಲ್ಲಿಯೂ ಹೋಗಿರಲಿಲ್ಲ. ಇತ್ತ ಶಿಗ್ಗಾವಿಯಲ್ಲಿಯೂ ಭಿನ್ನ ಪರಿಸ್ಥಿತಿಯಿರಲಿಲ್ಲ.

ಆದರೂ ತಮ್ಮ ಕುಟುಂಬದ ಕುಡಿಗಳನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಿಲ್ಲ. ಹಾಗೆ ನೋಡಿದರೆ, ಚುನಾವಣೆ ಘೋಷಣೆಗೂ ಮೊದಲು ಈ ಇಬ್ಬರು ಸ್ಪಽಸಿದರೆ ಗೆಲುವಿಗೆ ಕಷ್ಟವಾಗುತ್ತದೆ ಎನ್ನುವ ಮಾತುಗಳು ಪಕ್ಷದೊಳಗೆ ಕೇಳಿಬಂದಿದ್ದವು. ಆದರೆ ಈ ಎಲ್ಲ ವನ್ನು ಮೀರಿ, ತಮ್ಮ ಪ್ರಭಾವ ಬಳಸಿಕೊಂಡು ಟಿಕೆಟ್ ತೆಗೆದು ಕೊಂಡು ಬಂದಿದ್ದರು. ಆದರೆ ಟಿಕೆಟ್ ಪಡೆದಷ್ಟು ಸುಲಭ ವಾಗಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ.

ವೈಯಕ್ತಿಕ ಹೊಡೆತದ ಹೊರತಾಗಿ ಈ ಉಪಚುನಾವಣೆ ಬಳಿಕ ಬಿಜೆಪಿ ತನ್ನ ಸಂಘಟನೆಯಲ್ಲಿ ಯಾವ ಮಟ್ಟಕ್ಕೆ ಹಿಂದೆ ಹೋಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆಡಳಿತ ಪಕ್ಷದ ವಿರುದ್ಧ ಹೋರಾಟಕ್ಕೆ ಸರಣಿ ವಿಷಯಗಳಿದ್ದರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ಬಿಟ್ಟುಕೊಟ್ಟಿದ್ದರಿಂದ ಕಾಂಗ್ರೆಸ್ ಮೇಲುಗೈ’ ಸಾಽಸಿದೆ. ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡದೇಯಡಿಯೂರಪ್ಪ’ ಹೆಸರಲ್ಲಿ ಚುನಾವಣೆ ನಡೆಸುವ ಅತಿಯಾದ ಆತ್ಮವಿಶ್ವಾಸ ಇಟ್ಟುಕೊಂಡಿದ್ದರು. ಅದಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ ಎಂದರೆ ತಪ್ಪಾಗುವುದಿಲ್ಲ.

ಹಾಗೆ ನೋಡಿದರೆ, ಉಪಚುನಾವಣೆ ಘೋಷಣೆಯಾದ ಸಮಯದಲ್ಲಿ ಮೂರು ಪಕ್ಷಗಳಿಗೂ ಅವುಗಳದ್ದೇ ಆದ ಸವಾಲು ಹಾಗೂ ಇತಿಮಿತಿಗಳಿ ದ್ದವು. ಗ್ಯಾರಂಟಿ ಯೋಜನೆಯ ಜಾರಿಯ ಬಳಿಕವೂ, ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌ಗೆ, ಉಪಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನ ಸ್ವೀಕರಿಸುವ ಬಗ್ಗೆ ಹಾಗೂ ಅದು ಮತ’ವಾಗಿ ಯಾವ ಪ್ರಮಾಣದಲ್ಲಿ ಬದಲಾಗುತ್ತದೆ ಎನ್ನುವ ಬಗ್ಗೆ ಕುತೂಹಲವಿತ್ತು. ಈ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನುಕಡಿಮೆ’ಗೊಳಿಸಲು ಬಿಜೆಪಿ-ಜೆಡಿಎಸ್ ನಾಯಕರು ಮಾಡಿದ್ದು ಒಂದೆರಡು ತಂತ್ರಗಳಲ್ಲ.

ಇದರೊಂದಿಗೆ ಉಪಚುನಾವಣೆ ಘೋಷಣೆಯಾಗುವ ಕೆಲ ತಿಂಗಳ ಮೊದಲು ಆರಂಭವಾದ ಮುಡಾ ಗಲಾಟೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಮತ್ತು ವಕ್ ನೋಟಿಸ್ ಗಲಾಟೆ ಸೇರಿದಂತೆ ಹತ್ತಾರು ಅಸಗಳನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಎನ್‌ಡಿಎ ನಾಯಕರು
ಹೋರಾಟ ನಡೆಸಿದ್ದರು. ಈ ಎಲ್ಲದರ ಹೊರತಾಗಿ, ಮೂರೂ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಕಾಂಗ್ರೆಸ್ ರಾಜ್ಯ ನಾಯಕತ್ವ ಯಶಸ್ವಿಯಾಗಿದೆ. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಯಿದ್ದರೂ, ಕರ್ನಾಟಕದ ಮಟ್ಟಿಗೆ ಈ ಸಮಸ್ಯೆಯಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಿದೆ.

ಉಪಚುನಾವಣೆಗಳಲ್ಲಿ ಸಹಜವಾಗಿ ಆಡಳಿತಾರೂಢ ಪಕ್ಷಗಳ ಮೇಲುಗೈ ಇರುತ್ತದೆ. ಈ ಬಾರಿಯೂ ಚುನಾವಣೆ ಘೋಷಣೆಯಾದ ಕ್ಷಣದಿಂದ ಕಾಂಗ್ರೆಸ್ ಪಾಲಿಗೆ ಆಡಳಿತಾರೂಢ ಪಕ್ಷ ಎನ್ನುವ ಫ್ಯಾಕ್ಟರ್’ ಇತ್ತು. ಇದರ ಹೊರತಾಗಿಯೂ ಕಾಂಗ್ರೆಸ್ ಒಂದು ಕ್ಷೇತ್ರವನ್ನು ಕಳೆದುಕೊಳ್ಳ ಬಹುದು ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿತ್ತು. ಅದರ ಲ್ಲಿಯೂ ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರನ ರಾಜಕೀಯ ವೃತ್ತಿ ಜೀವನವನ್ನುಉಡಾವಣೆ’ ಮಾಡಲು ರಾಜ್ಯ ನಾಯಕರಷ್ಟೇ ಅಲ್ಲದೇ, ಕಾಂಗ್ರೆಸ್‌ನ ದಿಲ್ಲಿ ನಾಯಕ ರೊಂದಿಗೂ ಹೊಂದಾ ಣಿಕೆ’ ಮಾಡಿಕೊಂಡ ಪರಿಣಾಮ ಯಾಸೀರ್ ಪಠಾಣ್‌ಗೆ ಟಿಕೆಟ್ ನೀಡಲಾಗಿತ್ತು ಎನ್ನುವ ಮಾತುಗಳಿದ್ದವು.

ಒಂದು ಹಂತಕ್ಕೆ ಈ ಮಾತನ್ನು ಕಾಂಗ್ರೆಸ್‌ನ ಆಯಕಟ್ಟಿನ ಜಾಗದಲ್ಲಿ ರುವ ಹಾಗೂ ಟಿಕೆಟ್ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದ ನಾಯಕರೂ ಒಪ್ಪಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಮೂರರಲ್ಲಿ ಎರಡನ್ನು ಗೆದ್ದರೂ, ಶಿಗ್ಗಾವಿಯಲ್ಲಿ ಸೋಲು ಖಚಿತ ಎನ್ನುವ ಮಾತಿತ್ತು. ಆದರೆ ಬಿಜೆಪಿಯಲ್ಲಿನ ಬಣ ಬಡಿದಾಟ ಹಾಗೂ ಸಂಘಟನೆಯ ಬಲ ಕ್ಷೀಣಿಸಿರುವ -ಲವಾಗಿ ಕಾಂಗ್ರೆಸ್‌ಗೆ ಅನಿರೀಕ್ಷಿತ ಕೊಡುಗೆಯೊಂದನ್ನು ಬಿಜೆಪಿಯೇ ಉಚಿತವಾಗಿ ಬಿಟ್ಟುಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ. ಈ ಹಿಂದೆಯೇ ಹೇಳಿದಂತೆ ಉಪಚುನಾವಣೆಯ ಫಲಿತಾಂಶದಿಂದ ರಾಜ್ಯ ರಾಜಕೀಯ ದಲ್ಲಿ ಬಹುದೊಡ್ಡ ಬದಲಾವಣೆಯ ಪರ್ವ ಶುರುವಾಗಲಿದೆ ಎಂದೇನಿಲ್ಲ.

ಆದರೆ ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಕ್ಲೀನ್ ಸ್ವೀಪ್ ಮಾಡಿ ಕೊಂಡು ಗೆಲುವಿನ ನಗೆ ಬೀರಿರುವ ಬಿಜೆಪಿಗೆ ಕರ್ನಾಟಕದಲ್ಲಿ ಈ ಪ್ರಮಾಣದ ಹಿನ್ನಡೆಯಾಗಲು ಕಾರಣವೇನು ಎನ್ನು ವುದನ್ನು ಈಗಲಾದರೂ ಹುಡುಕಲು ವರಿಷ್ಠರು ಯತ್ನಿಸ ಬೇಕಿದೆ. ಈಗಾಗಲೇ, ಬಿಜೆಪಿಯಲ್ಲಿರುವ ಬಣ ಬಡಿದಾಟವು ಪಕ್ಷದ ವರಿಷ್ಠರಿಗೆ ಹಾಗೂ ಸಂಘ ಪರಿವಾರದವರಿಗೆ ಗೊತ್ತಿಲ್ಲ ವೆಂದೇನಲ್ಲ. ಆದರೆ ಈ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಹೊರತಾಗಿ ಬೇರೆ ದಾರಿಯಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಬದಲಾವಣೆ ಮಾಡಿದರೆ ಲಿಂಗಾಯತ ಸಮುದಾಯವೆಲ್ಲಿ ತಿರುಗಿ ಬೀಳು ವುದೋ ಎನ್ನುವ ಆತಂಕ ಹಿಂದೆ ಇತ್ತು.

ಉಪಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಆತಂಕ ವೇನಿಲ್ಲ ಎನ್ನುವುದು ಸ್ಪಷ್ಟ. ಆದರೀಗ ಯಡಿಯೂರಪ್ಪ ಎನ್ನುವ -ಕ್ಟರ್ ಒಂದೇ ಬಿಜೆಪಿ ವರಿಷ್ಠರ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ವಿಜಯೇಂದ್ರ ರನ್ನು ಮುಂದುವರಿಸಿದರೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಸಂಘಟನೆಯಲ್ಲಿ ಬಹುದೊಡ್ಡ ಕಂದಕ ನಿರ್ಮಾಣವಾಗುತ್ತದೆ ಎನ್ನುವುದು ಸ್ಪಷ್ಟ. ಅಂತಿಮವಾಗಿ ಹೇಳುವುದಾದರೆ, ರಾಜ್ಯ ಬಿಜೆಪಿಯಲ್ಲಿನ ಗೊಂದಲ, ಗಲಾಟೆಯ ಬಗ್ಗೆ ರಾಷ್ಟ್ರ ನಾಯಕರಿಗೆ ತಿಳಿದಿಲ್ಲ ವೆಂದೇನಲ್ಲ. ಆದರೆ ಕರ್ನಾಟಕದಲ್ಲಿ ಕಮಲ ಅರಳಿದ ಕ್ಷಣದಿಂದಲೂ ಯಡಿಯೂರಪ್ಪ ಅವರ ಸುತ್ತಮುತ್ತಲೇ ಪಕ್ಷ ಬೆಳೆದಿದೆ. ಇದೀಗ ಯಡಿಯೂರಪ್ಪ ಅವರಪ್ರಭಾವಳಿ’ ಯನ್ನು ಮೀರಿ ಪಕ್ಷವನ್ನು ಬೆಳೆಸಬೇಕೆಂಬ ಮನಸ್ಥಿತಿಗೆ ಬಿಜೆಪಿ ವರಿಷ್ಠರು ಬಂದಿರುವುದು ಸ್ಪಷ್ಟ. ಈ ಪ್ರಭಾವಳಿಯಿಂದ ಹೊರಬಂದು ಯಾವ ರೀತಿ ಪಕ್ಷದ ಪುನರ್‌ಸಂಘಟನೆಯಾಗಲಿದೆ ಎನ್ನುವುದನ್ನು ಬಿಜೆಪಿ ವರಿಷ್ಠರು ಹಾಗೂ
ಕಾಲವೇ ಉತ್ತರಿಸಬೇಕಿದೆ.

ಇದನ್ನೂ ಓದಿ: Ranjith H Ashwath ok