Wednesday, 27th November 2024

Ranjith H Ashwath Column: ನೀರಾವರಿ ಯೋಜನೆಗಳ ಸುತ್ತಮುತ್ತ

ರಂಜಿತ್ ಎಚ್.ಅಶ್ವತ್ಥ

ಅಶ್ವತ್ಥಕಟ್ಟೆ

ಯಾವುದೇ ರಾಜ್ಯದ ಅಭಿವೃದ್ಧಿಯಲ್ಲಿ ನೀರಾವರಿ ಇಲಾಖೆಯ ಪಾತ್ರ ಮಹತ್ವದ್ದಾಗಿರುತ್ತದೆ. ಅದರಲ್ಲಿಯೂ ಬಯಲುಸೀಮೆಯ ಭಾಗದಲ್ಲಿ ಹನಿ ನೀರಿಗೂ ಹಪಹಪಿಸುವ ಜನರಿಗೆ ಈ ಯೋಜನೆಗಳು ‘ಅಮೃತ’ದ ರೀತಿಯಲ್ಲಿ ರುತ್ತವೆ. ಅಂಥ ಬಯಲುಸೀಮೆಯ ಏಳು ಜಿಲ್ಲೆಗಳಿಗೆ ‘ಭಗೀರಥ’ನ ರೀತಿಯಲ್ಲಿ ನೀರು ತರುವಲ್ಲಿ ಕೊನೆಗೂ ಕರ್ನಾಟಕ ಸರಕಾರ ಯಶಸ್ವಿಯಾಗಿದೆ.

ಗೌರಿ ಹಬ್ಬದಂದು ಗಂಗೆಯನ್ನು ಹರಿಸುವ ಮೂಲಕ, ದಶಕದ ನಿರೀಕ್ಷೆಯಾಗಿದ್ದ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಅದು ಚಾಲನೆ ನೀಡಿದೆ. ಮುಂದಿನ 2-3 ವರ್ಷದಲ್ಲಿ ಈ ನೀರಾವರಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಮುಗಿಸುವ ಮೂಲಕ ಸುಮಾರು 75 ಲಕ್ಷ ಜನರಿಗೆ ನೀರುಣಿಸುವ ಮಹತ್ವದ ಉಪಕ್ರಮವನ್ನು ಕಾರ್ಯರೂಪಕ್ಕೆ ತರುವ ಭರವಸೆಯನ್ನು ಸರಕಾರ ನೀಡಿದೆ.

ಎತ್ತಿನಹೊಳೆ ಯೋಜನೆಯ ಮೊದಲ ಹಂತ ಯಶಸ್ವಿಯಾದ ಸಮಯದಲ್ಲಿ ಇಡೀ ರಾಜ್ಯ ಖುಷಿಪಟ್ಟರೆ, ಬಯಲು ಸೀಮೆಯ ಏಳು ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎತ್ತಿನಹೊಳೆಯ ಆರಂಭದಲ್ಲಿ ‘ಎತ್ತು ನೀರು ಕುಡಿಯುವಷ್ಟು ಇರುವ ತೊರೆಯಿಂದ ಏಳು ಜಿಲ್ಲೆಗೆ ನೀರು ಕೊಡಲು ಸಾಧ್ಯವೇ?’ ಎಂದು ಬಹುತೇಕರು ಮೂಗು ಮುರಿದಿದ್ದರು. ಆದರೀಗ ಮೊದಲ ಹಂತ ಮುಕ್ತಾಯವಾಗಿದ್ದು, 2027ಕ್ಕೆ ಇಡೀ ಕಾಮಗಾರಿ ಯನ್ನು ಪೂರ್ಣಗೊಳಿ ಸುವುದಾಗಿ ಸರಕಾರ ಹೇಳಿಕೊಂಡಿದೆ. ಹಾಗೆ ನೋಡಿದರೆ, ಈ ಯೋಜನೆಯಲ್ಲಿ 24.01 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದರಿಂದ ಸುಮಾರು 29 ತಾಲೂಕುಗಳ 6657 ಗ್ರಾಮಗಳ 75.59 ಲಕ್ಷ ಜನರ ಬಯಕೆ ಈಡೇರಲಿದೆ. ಈ ಎಲ್ಲ ಅಂಕಿ-ಅಂಶಗಳನ್ನು ನೋಡುವಾಗ ಎತ್ತಿನಹೊಳೆ ಯೋಜನೆಯ ಬಗ್ಗೆ ಅಭಿಮಾನ ಮೂಡದೇ ಇರುವುದಿಲ್ಲ.

ಆದರೆ ಈ ಯೋಜನೆ ಆರಂಭಗೊಂಡ ಸಮಯದಲ್ಲಿನ ಅಂದಾಜು ವೆಚ್ಚ ಹಾಗೂ ಈಗ ಖರ್ಚಾಗಿರುವ ಹಣವನ್ನು ಗಮನಿಸಿದರೆ, ‘ಬೆಚ್ಚಿಬೀಳು ವುದು’ ಖಚಿತ. 2011ರಲ್ಲಿ ಡಿಪಿಆರ್ ಆಗುವ ಸಮಯದಲ್ಲಿ ಈ ಯೋಜನೆಯ ಒಟ್ಟು ಅಂದಾಜುವೆಚ್ಚ ಇದ್ದದ್ದು ಎಂಟು ಸಾವಿರ ಚಿಲ್ಲರೆ ಕೋಟಿ ರುಪಾಯಿ. 2014ರಲ್ಲಿ ಆರಂಭಗೊಂಡಾಗ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಕ್ಕೆ 12 ಸಾವಿರ ಕೋಟಿಗೆ ಅದು ಏರಿತ್ತು. ಆದರೆ ಇಡೀ ಯೋಜನೆ ಪೂರ್ಣ ಗೊಳ್ಳುವ ವೇಳೆಗೆ ಇದರ ಮೊತ್ತ 23 ಸಾವಿರ ಕೋಟಿ ರು. ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಮೂಲ ವೆಚ್ಚಕ್ಕೆ ಹೋಲಿಸಿದರೆ ಬರೋಬ್ಬರಿ ಮೂರು ಪಟ್ಟು ಹೆಚ್ಚು ಖರ್ಚಾಗಲಿದೆ!

ಹಾಗೆ ನೋಡಿದರೆ, ಕರ್ನಾಟಕದಲ್ಲಿರುವ ಬಹುತೇಕ ನೀರಾವರಿ ಯೋಜನೆಗಳ ಹಣೆಬರಹ ಇದೇ ಆಗಿದೆ. ಮೈಸೂರು ಅರಸರ ಕಾಲದಲ್ಲಿ ಸಿದ್ಧಪಡಿಸಿದ ಕಾವೇರಿ ನೀರಾವರಿ ಯೋಜನೆಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ಯೋಜನೆ ಗಳ ಪಾಡು ‘ಒಂದಕ್ಕೆ ಮೂರರಷ್ಟು’ ಎಂದರೆ ತಪ್ಪಾಗುವುದಿಲ್ಲ. ನೀರಾವರಿ ಯೋಜನೆಗಳನ್ನು ಘೋಷಿಸುವಾಗ ಇರುವ ಉತ್ಸಾಹ, ಹುಮ್ಮಸ್ಸು ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಬಹುತೇಕ ಸರಕಾರಗಳಿಗೆ ಇರುವುದಿಲ್ಲ. ಆರಂಭಗೊಂಡ ಯೋಜನೆಗಳು ‘ಟೇಕಾಫ್’ ಆಗದೇ ಇರುವುದಕ್ಕೆ ಬಹುತೇಕ ಸಮಯದಲ್ಲಿ ಭೂಸ್ವಾಽನ ಪ್ರಕ್ರಿಯೆಯಲ್ಲಿನ ವಿಳಂಬ, ಕಾನೂನಾತ್ಮಕವಾಗಿ ಎದುರಾಗುವ ಸಮಸ್ಯೆಗಳು ಕಾರಣ.

ಇದರೊಂದಿಗೆ ಅರಣ್ಯ ಭೂಮಿ ವಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಯೋಜನೆ ಹಾದುಹೋದರೂ, ಅದಕ್ಕೆ ಅನುಮತಿ ಪಡೆಯಲು ನಡೆಸಬೇಕಾದ ಕಸರತ್ತುಗಳು, ಅನುಭವಿಸಬೇಕಾದ ಪೀಕಲಾಟ ಒಂದೆರಡಲ್ಲ. ಈ ಎಲ್ಲವನ್ನೂ ಇತ್ಯರ್ಥಪಡಿಸಿಕೊಂಡು ಮುಂದೆ ಸಾಗುವ ವೇಳೆಗೆ ನಾಲ್ಕು ವರ್ಷದ ಯೋಜನೆ ದಶಕಕ್ಕೆ ಬಂದು ಕೂತಿರುತ್ತದೆ ಎಂದರೆ ತಪ್ಪಾಗುವುದಿಲ್ಲ.

ಈ ವಿಷಯದಲ್ಲಿ, ರಾಜ್ಯದ ಇತರೆ ನೀರಾವರಿ ಯೋಜನೆಗಳಿಗೆ ಹೋಲಿಸಿದರೆ ಎತ್ತಿನಹೊಳೆ ಯೋಜನೆ ಕೊಂಚ ‘ವೇಗ’ವಾಗಿಯೇ ನಡೆದಿದೆ ಎನ್ನಬಹುದು. ಅದರಲ್ಲಿಯೂ ಕಳೆದೊಂದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ವಿಶೇಷ ಕಾಳಜಿ’ಯ ಫಲವಾಗಿ ಈ ಯೋಜನೆಗೆ ವೇಗ ಸಿಕ್ಕಿತ್ತು. ಹಾಗೆ ನೋಡಿದರೆ, 2014ರಲ್ಲಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ ಬಳಿಕ ಬಂದ ಸಮ್ಮಿಶ್ರ ಸರಕಾರವಾಗಲಿ, ಬಿಜೆಪಿ ಸರಕಾರವಾಗಲಿ ‘ಆಸಕ್ತಿ’ ತೋರಿದ್ದಕ್ಕಿಂತ ಈ ಯೋಜನೆ ಕಾರ್ಯಸಾಧುವಲ್ಲವೆಂದು ಹೇಳಿದ್ದೇ ಹೆಚ್ಚು. ಆದರೆ ಹಳೇ ಮೈಸೂರು ಭಾಗದಲ್ಲಿ ಮೈಲೇಜ್ ದಕ್ಕಿಸಿಕೊಳ್ಳಲೆಂದೋ ಅಥವಾ ಬಯಲುಸೀಮೆಗೆ ನೀರು ಹರಿಸಲೇಬೇಕು ಎನ್ನುವ ಸದುದ್ದೇಶದಿಂದಲೋ, ಕಾಂಗ್ರೆಸ್ ಸರಕಾರ ನೀಡಿದ ವೇಗದಿಂದ ಎತ್ತಿನಹೊಳೆಯ ಮೊದಲ ಹಂತವಂತೂ ಮುಗಿದಿದೆ. ಮೂಲವೆಚ್ಚಕ್ಕೆ ಮೂರು ಪಟ್ಟು ಹೆಚ್ಚಾದರೂ, ನೀರಾದರೂ ಸಿಕ್ಕಿದೆಯಲ್ಲ ಎನ್ನುವುದೇ ನೆಮ್ಮದಿ!

ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಸೇರಿದಂತೆ ಕರ್ನಾಟಕದ ಸಾಕಷ್ಟು ನೀರಾವರಿ ಯೋಜನೆಗಳು ಆರಂಭ ಗೊಂಡು 2-3 ದಶಕ ಕಳೆದರೂ, ಮುಗಿಯುವುದು ಯಾವಾಗ ಎಂದು ಈಗಲೂ ನೋಡುವ ಪರಿಸ್ಥಿತಿಯಿದೆ. ಈ ಯೋಜನೆಗಳ ಆರಂಭದಲ್ಲಿ ‘ತರಬೇತಿ’ಗೆಂದು ಕೆಲಸಕ್ಕೆ ಸೇರಿದ ಅದೆಷ್ಟೋ ಎಂಜಿನಿಯರ್‌ಗಳು ಅಲ್ಲಿಯೇ ನಿವೃತ್ತಿ ಪಡೆದು, ಅವರ ಮಕ್ಕಳನ್ನು ಕೆಲಸಕ್ಕೆ ಸೇರಿಸಲು ಓಡಾಡುತ್ತಿದ್ದಾರೆ. ಇನ್ನು ಮಹಾದಾಯಿ, ಕಳಸ ಬಂಡೂರಿಯಂಥ ಯೋಜನೆಗಳಿಗೆ ಕೇಂದ್ರ ಸರಕಾರದ ‘ಅನುಮತಿ’ಗಾಗಿಯೇ ಕಾದು ಕೂರುವಂತಾಗಿದೆ.

ಯಾವುದೇ ನೀರಾವರಿ ಯೋಜನೆಗಳು, ಕೇವಲ ಯಾವುದೇ ಒಂದು ಇಲಾಖೆ, ಅನುದಾನ ಅಥವಾ ಯೋಜನೆಗಳ ರೀತಿಯಲ್ಲಿರುವುದರಿಂದ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಶಕ್ತಿ ಅವಕ್ಕೆ ಇರುತ್ತದೆ. ನೀರಾವರಿ ಯೋಜನೆಗಳಿಂದ ಆ ಭಾಗದ ಜನರ ಜೀವನಕ್ರಮವೇ ಬದಲಾಗಿರುವ ಹತ್ತಾರು ಉದಾಹರಣೆಗಳು ನಮ್ಮ ಮುಂದಿವೆ. ಇಷ್ಟಾದರೂ, ನಮ್ಮ ರಾಜ್ಯದಲ್ಲಿ ಬಹುತೇಕ ನೀರಾವರಿ ಯೋಜನೆಗಳು ಆಮೆಗತಿ ಯಲ್ಲಿ ಸಾಗುವುದೇಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಬಹುತೇಕ ಯೋಜನೆಗಳು ಮೊದಲಿಗೆ ಹೇಳಿದಂತೆ ಕಾನೂನಾತ್ಮಕ, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ಇಲಾಖೆಯ ಕಾರಣಗಳಿಂದ ತಡವಾಗುತ್ತವೆ. ಇವುಗಳೊಂದಿಗೆ ಪ್ರಮುಖವಾಗಿ ಕಾಡುವ ಮತ್ತೊಂದು ಸಮಸ್ಯೆ ಯೆಂದರೆ, ಅನುದಾನ ಹಂಚಿಕೆ ಎನ್ನುವುದು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯ.

ಅನುದಾನ ಹಂಚಿಕೆಯಲ್ಲಿ ಸರಿಯಾದ ‘ಪ್ಲಾನ್’ ಇಲ್ಲದೆ ಯೋಜನೆಗಳನ್ನು ಘೋಷಿಸುವುದೇ ಕರ್ನಾಟಕದಲ್ಲಿ ಬಹುತೇಕ ನೀರಾವರಿ ಯೋಜನೆ ಗಳು ಹಿನ್ನಡೆ ಅನುಭವಿಸುವುದಕ್ಕಿರುವ ಪ್ರಮುಖ ಕಾರಣ. ಉದಾಹರಣೆಗೆ ಈ ಹಿಂದಿನ ಬಿಜೆಪಿ ಸರಕಾರದ ಅವಽಯಲ್ಲಿ ನೀರಾವರಿ ಇಲಾಖೆಗೆ 20 ಸಾವಿರ ಕೋಟಿ ರು. ಅನುದಾನ ನೀಡಿ, 40 ಸಾವಿರ ಕೋಟಿ ರು. ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಪ್ರತಿವರ್ಷ ಈ ರೀತಿ ಮಾಡಿದರೆ, ಐದು ವರ್ಷಕ್ಕೆ ಹೆಚ್ಚುವರಿ 40 ಸಾವಿರ ಕೋಟಿ ರು. ಹೊರೆ ಸರಕಾರದ ಮೇಲೆ ಬೀಳುತ್ತದೆ. ಇದು ಕೇವಲ ಬಿಜೆಪಿ ಸರಕಾರದ ಅವಽಯಲ್ಲಿ ಆಗಿರುವ ಕಾರ್ಯವಲ್ಲ, ಬಹುತೇಕ ಸರಕಾರಗಳು ನೀರಾವರಿ ಇಲಾಖೆಗೆ ಮೀಸಲಿಡುವ ಮೊತ್ತದ ಮೂರು ಪಟ್ಟು ಯೋಜನೆಗಳನ್ನು ಘೋಷಿಸುತ್ತವೆ.

ಘೋಷಿಸಿದ ಎಲ್ಲ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡುವ ಉದ್ದೇಶದಿಂದ ಎಲ್ಲವಕ್ಕೂ ಸಾವಿರ, ಎರಡು ಸಾವಿರ ಕೋಟಿ ರು. ಅನುದಾನ ಹಂಚಿಕೆ ಮಾಡುತ್ತಾ ಸಾಗುತ್ತವೆ. ಇದರಿಂದಾಗಿ ಯಾವುದೇ ಯೋಜನೆ ಪೂರ್ಣಗೊಳ್ಳುವು ದಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಪರಿಷ್ಕೃತ ಮೊತ್ತ ಹೆಚ್ಚಾಗುತ್ತಾ ಸಾಗುವುದರೊಂದಿಗೆ, ಯೋಜನೆಯೂ ಮುಗಿಯುವುದಿಲ್ಲ. ಸರಕಾರದ ಮೇಲಿನ ಹೊರೆಯೂ ಕಡಿಮೆಯಾಗುವುದಿಲ್ಲ. ಈ ರೀತಿ ಪ್ರತಿವರ್ಷ ಒಂದೊಂದು ಯೋಜನೆ ಜೋಡಿಸುತ್ತಾ ಸಾಗಿರುವುದರಿಂದ ಕರ್ನಾಟಕದಲ್ಲಿ ಮೂರು ಲಕ್ಷ ಕೋಟಿ ರು. ಗೂ ಹೆಚ್ಚಿನ ನೀರಾವರಿ ಯೋಜನೆಗಳು ಬಾಕಿ ಉಳಿದಿವೆ.

ಈ ಸಮಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಬಗ್ಗೆ ಪ್ರಸ್ತಾಪಿಸಲೇಬೇಕು. ಲಾಲ್ ಬಹಾದುರ್ ಶಾಸ್ತ್ರಿ ಅವರ ಕಾಲದಲ್ಲಿ ಆರಂಭ ಗೊಂಡ ‘ಯುಕೆಪಿ’ ಆಗಿನ ಕಾಲಕ್ಕೆ ಕೆಲ ಸಾವಿರದ ಲೆಕ್ಕದಲ್ಲಿತ್ತು. ಆದರೀಗ ಈ ಯೋಜನೆ ಗೆಂದು ಲಕ್ಷಾಂತರ ಕೋಟಿ ರು. ಖರ್ಚು ಮಾಡಲಾಗಿದೆ. ಆದರೂ, ಯೋಜನೆ ಮಾತ್ರ ಮುಗಿದಿಲ್ಲ. ಇದೇ ರೀತಿ ತುಂಗಭದ್ರಾ ಜಲಾಶಯಕ್ಕೆ ಸಮನಾಂತರವಾಗಿ ನವಲಿ ಜಲಾಶಯ ನಿರ್ಮಿಸಬೇಕು ಎನ್ನುವುದು ಆರೇಳು ವರ್ಷದ ಕನಸು. ಪ್ರತಿವರ್ಷ ಈ ಯೋಜನೆಯ ಡಿಪಿಆರ್ ಅಥವಾ ಇನ್ನಿತರೆ ಕಾರಣಕ್ಕೆ ಸಾವಿರಾರು ಕೋಟಿ ನೀಡಲಾಗು ತ್ತಿದೆಯೇ ಹೊರತು, ಇನ್ಯಾವುದೇ ಪ್ರಗತಿಯಂತೂ ಕಂಡಿಲ್ಲ.

ರಾಜ್ಯ ಸರಕಾರಗಳು ಇನ್ನಾದರೂ ಈ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. ನೀರಾವರಿ ಇಲಾಖೆಗೆ ಸಂಬಂಧಿಸಿದ ಹೊಸ ಯೋಜನೆ ಗಳನ್ನು ಘೋಷಿಸುವ ಮೊದಲು, ಈಗಿರುವ ಯೋಜನೆಗಳನ್ನು ಮುಗಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಹಳೇ ಯೋಜನೆ ಮುಗಿಯುವ ಮೊದಲೇ, ಹೊಸ ಯೋಜನೆಗಳನ್ನು ಘೋಷಿಸಿ ಕೊಂಡು ಹೋದರೆ, ಅತ್ತ ಆ ಯೋಜನೆಗಳಿಗೂ ಮುಕ್ತಿ ಸಿಗದೇ, ಇತ್ತ ಈ ಯೋಜನೆಗಳೂ ಟೇಕಾಫ್ ಆಗದೇ ಕೇವಲ ರಾಜಕೀಯ ಕಾರಣಕ್ಕಾಗಿ ನೀರಾವರಿ ಯೋಜನೆಗಳನ್ನು ಆರಂಭಿಸಿದಂತಾಗುತ್ತದೆ.

ಒಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನೀರಾವರಿ ಯೋಜನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಕುಡಿಯುವ ನೀರು, ಕೈಗಾರಿಕೆ, ಕೃಷಿ ಸೇರಿದಂತೆ ಹಲವು ಕಾರಣಗಳಿಗೆ ನೀರಾವರಿ ಯೋಜನೆಗಳು ಅತ್ಯಗತ್ಯ ವಾಗಿರುತ್ತವೆ. ಬಹುತೇಕ ಸಮಯದಲ್ಲಿ ಸರಕಾರಗಳು ಯಾವುದೋ ‘ಒತ್ತಡ’, ಚುನಾವಣಾ ಕಾರಣಗಳಿಗೆ ಯೋಜನೆಗಳನ್ನು ಆರಂಭಿಸುತ್ತವೆ. ಆದರೆ ಬಳಿಕ ಆ ಯೋಜನೆಗಳಿಗೆ ನೀಡಬೇಕಾದ ಅನುದಾನದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೇ ಬಹುತೇಕ ಯೋಜನೆಗಳ ಇಂಥ ಪರಿಸ್ಥಿತಿಗೆ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ಇನ್ನಾದರೂ, ಯಾವುದೇ ಯೋಜನೆಗಳನ್ನು ಘೋಷಣೆ ಮಾಡುವ ಮೊದಲು ಅನುದಾನದ ಮೂಲದ ಬಗ್ಗೆ ಯೋಚಿಸಬೇಕಿದೆ. ಇಲ್ಲವಾದರೆ ಈಗಿರುವ ಮೂರು ಲಕ್ಷ ಕೋಟಿ ರು. ಮೊತ್ತದ ಬಾಕಿ ಕಾಮಗಾರಿಗೆ ಇನ್ನಷ್ಟು ಸೇರುತ್ತಾ ಹೋಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.