ಬಸವ ಮಂಟಪ
ರವಿ ಹಂಜ್
ನಾಡಿನ ಒಂದು ಬುದ್ಧಿಜೀವಿ ವಲಯದವರು ವ್ಯವಸ್ಥಿತವಾಗಿ ವಚನ ಚಳವಳಿಯನ್ನು ಹೇಗೆ ಸಂಶೋಧನಾ ನೆಲೆ ಯಲ್ಲಿ ಮಾರ್ಪಡಿಸಿ, ತಮ್ಮ ಸಮಾಜವಾದಿ ಸಿದ್ಧಾಂತಕ್ಕೆ ತಕ್ಕಂತೆ ಬಿತ್ತಿ ಬೆಳೆಸಿ, ಸಮಗ್ರ ವೀರಶೈವವನ್ನು ವಿಭಜಿಸಿ, ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವ ಘಟ್ಟಕ್ಕೆ ತಂದರು ಎಂಬುದನ್ನು ಹಿಂದಿನ ಲೇಖನಗಳಲ್ಲಿ ಮಾನ್ಯ ಪ್ರೊ. ಎಂ.ಎಂ.ಕಲಬುರ್ಗಿಯವರ ಲೋಕಮಾನ್ಯ ಸಂಶೋಧನೆಗಳ ತಪ್ಪುಗಳ ಮೂಲಕ ತೋರಿಸಿದ್ದಾನಷ್ಟೇ!
ಕಮ್ಯುನಿಸ್ಟ್ ಪ್ರಣೀತರು ಸಾಮಾಜಿಕ ಸೃಜನಾತ್ಮಕ ಲೇಖನಗಳ ಮೂಲಕ ವಚನ ಚಳವಳಿಯನ್ನು ಹೇಗೆ ತಮ್ಮ
ಸಿದ್ಧಾಂತಕ್ಕೆ ನೇರವಾಗಿ ಹೊಸೆದು ಬೆಸೆಯುತ್ತಾರೆ ಎಂಬುದಕ್ಕೆ ಈಗ ಒಂದು ನೇರ ಉದಾಹರಣೆಯನ್ನು ನೋಡೋಣ.
ಜೂನ್ 7, 2015ರ ‘ಪ್ರಜಾವಾಣಿ’ ಪತ್ರಿಕೆಯ ‘ಅಮೃತ ವಾಕ್ಕು’ ಅಂಕಣದಲ್ಲಿ ಎಸ್.ಜಿ.ಸಿದ್ದರಾಮಯ್ಯ ಅವರ
‘ಪುಣ್ಯ ಸ್ತ್ರೀ’ ಎಂಬ ಲೇಖನವಿದೆ. ಇದರಲ್ಲಿ ಅವರು, “…..ಕ್ಯೂಬಾಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಅದು ಅಮೆರಿಕದ
ವಸಾಹತು ಆಗಿತ್ತು. ಅಮೆರಿಕ ಅದನ್ನು ಜೂಜಿನ ಅಡ್ಡೆಯಾಗಿ, ವೇಶ್ಯಾವಾಟಿಕೆಯ ಮಾರುಕಟ್ಟೆಯಾಗಿ, ಕ್ಯಾಸಿ ನೋವಾ ಆಗಿ ಬೆಳೆಸಿತ್ತು. ಅಮೆರಿಕದ ಈ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಕ್ಯಾಸ್ಟ್ರೋಗೆ ತನ್ನ ನಾಡು ಸ್ವಾತಂತ್ರ್ಯ ಪಡೆದ ಮೇಲೆ ಪರಿಹರಿಸಬೇಕಾದ ಭೀಕರ ಸಮಸ್ಯೆಗಳು ಎದುರಿಗಿದ್ದವು.
ಅದರಲ್ಲಿ ಬಹಳ ಪ್ರಮುಖವಾದುದು ವೇಶ್ಯಾವೃತ್ತಿಯಿಂದ ಬದುಕು ಕಳೆದುಕೊಂಡಿದ್ದ ಅಪಾರ ಸಂಖ್ಯೆಯ
ಹೆಣ್ಣುಮಕ್ಕಳ ಸಮಸ್ಯೆ. ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡ ತಕ್ಷಣ ತನ್ನ ಜತೆ ಹೋರಾಟದಲ್ಲಿ ತೊಡಗಿದ್ದ ಯುವಕರಿಗೆ, ‘ನಾಡಿನ ಈ ಬಗೆಯ ಹೆಣ್ಣುಮಕ್ಕಳನ್ನು ಮದುವೆಯಾಗಿ ನಾಡಿನಲ್ಲಿ ಕೌಟುಂಬಿಕ ಜೀವನವು
ಸುಖಸಂತೋಷದಲ್ಲಿ ಬೆಳೆಯುವಂತಾಗಬೇಕು, ಅದಕ್ಕೆ ಸಹಕರಿಸಿ’ ಎಂದು ಕರೆ ನೀಡಿದ.
ಕ್ಯಾಸ್ಟ್ರೋನ ಮಾತುಗಳಿಗೆ ಬೆಲೆಕೊಟ್ಟ ಹೋರಾಟಗಾರ ಯುವಕರು ವೇಶ್ಯಾವಾಟಿಕೆಯ ಹೆಣ್ಣುಮಕ್ಕಳಿಗೆ ಬಾಳುಕೊಟ್ಟರು. ಅಲ್ಲಿಂದ ಮೊದಲಾದಂತೆ ಕ್ಯೂಬಾದಲ್ಲಿ ಆದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬದಲಾವಣೆಗಳ ಬೆಳವಣಿಗೆ ಜಗತ್ತಿನ ಅಚ್ಚರಿಗೆ ಕಾರಣವಾದ ಬಹುದೊಡ್ಡ ಕ್ರಿಯೆ. ಈಗ ಕ್ಯೂಬಾ ಸ್ವಾಭಿಮಾನದಿಂದ ತಲೆ ಎತ್ತಿ ಬೆಳೆದು ಅಮೆರಿಕೆಗೆ ಸವಾಲು ಹಾಕುತ್ತಿರುವ ಒಂದು ಧೀಮಂತ ರಾಷ್ಟ್ರ. ಈ ಚಾರಿತ್ರಿಕ ಘಟನೆ ಓದಿದಾಗ ನನಗೆ ಥಟ್ಟನೆ ‘ಪಣ್ಯಸೀ’ಯರಿಗೆ ಕೊಂಬು ಬಂದು ‘ಪುಣ್ಯಸ್ತ್ರೀ’ಯರಾಗಿರುವ ೧೨ನೇ ಶತಮಾನದ ಚಾರಿತ್ರಿಕ ಸಂಗತಿ ಮಿಂಚಿನಂತೆ ಭಾಸವಾಗಿ ಚಿಂತನೆಗೆ ಹಚ್ಚಿತು.
ಹನ್ನೆರಡನೇ ಶತಮಾನದ ಚಳವಳಿ ಜಗತ್ತಿನ ಯಾವುದೇ ಮೂಲೆಯಲ್ಲೂ ನಡೆದಿರುವ ಪರಿಯ ಒಂದು
ಸಾಮಾಜಿಕ ಕ್ರಾಂತಿ. ಈ ಕ್ರಾಂತಿಯಲ್ಲಿ ಎಲ್ಲ ಕಾಯಕ ಮೂಲದವರು ಭಾಗವಹಿಸಿದ್ದರು. ವೇಶ್ಯಾವೃತ್ತಿಯ ಹೆಣ್ಣು
ಮಕ್ಕಳೂ ಭಾಗವಹಿಸಿದ್ದರು. ಅದಕ್ಕೆ ಅಕ್ಕಮ್ಮ, ಸೂಳೆ ಸಂಕವ್ವ ಮೊದಲಾದವರು ಉದಾಹರಣೆಗೆ ಸಿಗುತ್ತಾರೆ. ಇಂಥ
ಮೂಲದ ಹೆಣ್ಣುಮಕ್ಕಳಿಗೆ ಸಂಸಾರದ ಹೊಸಜೀವನ ಕೊಟ್ಟ ಸಾಮಾಜಿಕ ಕ್ರಾಂತಿ ಅಲ್ಲಿ ಜರುಗಿದೆ. ಪಣ್ಯದ ಮಹಿಳೆಯನ್ನು ತಮ್ಮ ಬಾಳಿನ ಪುಣ್ಯದ ಮಡದಿಯನ್ನಾಗಿ ಮಾಡಿಕೊಂಡ ಮಹಾಂತರು ಆ ಶರಣಮಹನೀ ಯರು……” ಎನ್ನುತ್ತಾರೆ.
ಬಸವಣ್ಣನ ಕಾಲದ ಮೂವರನ್ನು ಹೊರತುಪಡಿಸಿ ಶರಣರೆಲ್ಲರೂ ಸಂಸಾರಿಗಳು. ಈ ಮೂವರಲ್ಲಿ ಅಲ್ಪಕಾಲ ವಿವಾಹಿತ ರೆನಿಸಿದ್ದ ಅಲ್ಲಮ, ಮಹಾದೇವಿಯರು ನಂತರ ಬ್ರಹ್ಮಚರ್ಯವನ್ನು ಅಪ್ಪಿಕೊಂಡರು. ಚೆನ್ನಬಸವಣ್ಣ ಮೊದಲಿನಿಂದಲೂ ಬ್ರಹ್ಮಚಾರಿಯೇ ಆಗಿದ್ದ. ಇವರ ಬ್ರಹ್ಮಚರ್ಯಕ್ಕೆ ಕಾರಣ ಈ ಮೂವರೂ ಕಾಳಾಮುಖ ಪರಂಪರೆಯ ವೀರಶೈವದ ಪರಮಸಾಧಕರಾಗಿದ್ದುದು. ಉಳಿದೆ ಶರಣರು ವಿವಾಹಿತರಾಗಿದ್ದು ಅವರಲ್ಲಿ ಕೆಲವರು ಪುಣ್ಯಸೀಯರನ್ನೂ ಹೊಂದಿದ್ದರು. ಇಲ್ಲಿ ಪಣ್ಯಸ್ತ್ರೀ ಎಂಬುದು ಪುಣ್ಯಸ್ತ್ರೀ ಎಂದಾಗಿದೆ. ಪಣ್ಯ ಎಂದರೆ ಹಣಕ್ಕೆ ಕೊಳ್ಳಲ್ಪಟ್ಟ ವಸ್ತು.
ಅಂದಿನ ಸಾಮಾಜಿಕ ಸನ್ನಿವೇಶದಲ್ಲಿ ವೇಶ್ಯಾವೃತ್ತಿ ಕೀಳು ಎಂಬ ಇಂದಿನ ಅಭಿಪ್ರಾಯದಂತೆ ಅಭಿಪ್ರಾಯವೇನೂ ಇರಲಿಲ್ಲವೆಂದು ಭಾರತೀಯ ಇತಿಹಾಸವನ್ನು ಸಮಗ್ರವಾಗಿ ಅವಲೋಕಿಸಿದಾಗ ಕಂಡುಬರುತ್ತದೆ. ಕ್ರಿ.ಪೂ. 5ನೇ ಶತಮಾನದ ನಗರವಧು (ದೇವದಾಸಿ ಪರಂಪರೆ) ಅಮ್ರಪಾಲಿ ಭಾರತದ ಸರ್ವಶ್ರೇಷ್ಠ ಅಗ್ರಗಣ್ಯ ನರ್ತಕಿಯಷ್ಟೇ ಅಲ್ಲದೆ ಬೌದ್ಧಧರ್ಮದ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ನಿರ್ವಾಣವನ್ನು ಹೊಂದಿದ ಮಹಿಳೆಯಾಗಿ
ಚಿರಸ್ಥಾಯಿಯಾಗಿದ್ದಾಳೆ.
ಬಿಂಬಸಾರ ಮತ್ತು ಅಮ್ರಪಾಲಿಯ ಪ್ರೇಮಕಥೆಯೂ ಅಷ್ಟೇ ಚಿರಸ್ಥಾಯಿಯಾಗಿದೆ. ಈಕೆಯ ಕುರಿತು ಶತಶತಮಾನ ಗಳಿಂದ ಸಾಕಷ್ಟು ಸಾಹಿತ್ಯ ಸೃಷ್ಟಿಯಾಗಿರುವುದಲ್ಲದೆ ಈಗಲೂ ಸೃಷ್ಟಿಯಾಗುತ್ತಿದೆ. ‘ಅಮ್ರಪಾಲಿ’ ಸಿನಿಮಾವನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಖ್ಯಾತ ಸಂಸ್ಕೃತ ಕಾವ್ಯ ‘ಮೃಚ್ಛಕಟಿಕಾ’ದ ನಾಯಕಿ ಕ್ರಿ.ಪೂ. 2ನೇ ಶತಮಾನದಲ್ಲಿದ್ದ ವಸಂತಸೇನಾ ಮತ್ತು ಕ್ರಿ.ಶ. 5ನೇ ಶತಮಾನದ ಇಳಂಗೋ ಅಡಿಗಳ್ ರಚಿಸಿರುವ ತಮಿಳಿನ ಖ್ಯಾತ ಕಾವ್ಯ ‘ಸಿಲಪ್ಪಧಿಕಾರಮ್’ನ ಮಾಧವಿ ಸಹ ಅಮ್ರಪಾಲಿಯಷ್ಟೇ ಖ್ಯಾತ ನಗರವಧುಗಳು.
ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ, ಈರೋಡುಗಳಲ್ಲದೆ ಆಂಧ್ರ, ತೆಲಂಗಾಣ, ಕರ್ನಾಟಕದ ರೇಷ್ಮೆ ನೇಯ್ಗೆಯು ಪ್ರವರ್ಧಮಾನಕ್ಕೆ ಬಂದದ್ದೇ ಅಲ್ಲಿನ ದೇವದಾಸಿಯರ ಅಂಗವಸ, ಸೀರೆಗಳನ್ನು ನೇಯುವುದರೊಂದಿಗೆ! ಅದೇ ರೀತಿ ಮಧ್ಯಪ್ರದೇಶದ ಚಂದೇರಿ ನೇಕಾರರು ಸಹ ಇದೇ ರೀತಿ ಪ್ರವರ್ಧಮಾನಕ್ಕೆ ಬಂದವರೆಂದು ಸಂಶೋಧನೆ ಗಳು ತಿಳಿಸುತ್ತವೆ. ಹೀಗೆ ವೇಶ್ಯೆಯರೆನ್ನುವ ಎಲ್ಲಾ ಜಾತಿಯ ಕಲಾವಿದೆಯರನ್ನೊಳಗೊಂಡ ಪರಂಪರೆಯು ಸಾಂಸ್ಕೃತಿಕವಾಗಿಯಷ್ಟೇ ಅಲ್ಲದೆ ಅಂದಿನ ಆರ್ಥಿಕತೆಗೂ ಪರೋಕ್ಷವಾಗಿ ನೆಲೆಯೊದಗಿಸಿದ್ದಿತು. ಈ ಪದ್ಧತಿಯಲ್ಲಿ ಎಲ್ಲಾ ಜನಾಂಗದ ಜಾತಿಯ ಮಹಿಳೆಯರಿದ್ದು ಇದೊಂದು ಜಾತ್ಯತೀತ ವ್ಯವಸ್ಥೆಯಾಗಿತ್ತು ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ರಾಜನಾದವನ ಪಟ್ಟದ ರಾಣಿಯಾಗಲು ಕ್ಷತ್ರಿಯಳೇ ಆಗಿರಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಹೊಯ್ಸಳರ ವಿಷ್ಣುವರ್ಧನನ ರಾಣಿಯಾದ ನಾಟ್ಯರಾಣಿ ಶಾಂತಲೆ, ಕರ್ನಾಟಕ ಸಾಮ್ರಾಜ್ಯದ ವಿಜಯನಗರದ ಕೃಷ್ಣದೇವರಾಯನ ಪತ್ನಿ ನೃತ್ಯಗಾತಿ ಚೆನ್ನಾದೇವಿಯರ ಉದಾಹರಣೆಗಳೂ ಇವೆಯೆಂದರೆ ನೃತ್ಯಗಾತಿಯರ ಗೌರವಾದರಗಳು ಹೇಗಿದ್ದವು ಎಂದು ಊಹಿಸಿಕೊಳ್ಳಬಹುದು.
ಕ್ರಿ.ಶ. 6ರಿಂದ 13ನೇ ಶತಮಾನದವರೆಗೂ ದೇವದಾಸಿಯರು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನಮಾನಗಳನ್ನು
ಹೊಂದಿ ಘನತೆ ಗೌರವಗಳಿಗೆ ಪಾತ್ರರಾಗಿದ್ದರು. ನೃತ್ಯ, ಸಂಗೀತ, ಅಭಿನಯ ಮುಂತಾದ ಲಲಿತಕಲೆಗಳ ರಕ್ಷಕರೆನಿಸಿ
ರಾಜಾಶ್ರಯ ಹೊಂದಿ ದಾನದತ್ತಿಗಳನ್ನು ಪಡೆಯುವುದರೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಸಹ
ಕೈಗೊಂಡಿದ್ದರು. ಈ ಕಾರ್ಯಗಳಲ್ಲಿ ನೀರಿಗೆ ಸಂಬಂಧಿಸಿದ ಕಾರ್ಯಗಳು ಇಂದಿಗೂ ಅಲ್ಲಲ್ಲಿ ಸಾಕಷ್ಟು ಕಾಣುತ್ತವೆ. ದಾವಣಗೆರೆ ಸಮೀಪದ ‘ಸೂಳೆಕೆರೆ’ಯಿರಬಹುದು, ಕರ್ನಾಟಕದಾದ್ಯಂತ ಅಲ್ಲಲ್ಲಿ ಕೇಳಿಬರುವ ‘ಸೂಳೆಬಾವಿ’ಗಳು, ‘ಸೂಳೆಕಟ್ಟೆ’ಗಳು, ‘ಸೂಳೆಹೊಂಡ’ಗಳು… ಹೀಗೆ ಅನೇಕ ದೇವದಾಸಿಯರ ಸಮಾಜಮುಖಿ ಕಾರ್ಯಗಳ ನಿದರ್ಶನ ಗಳಿವೆ.
ಇದೇ ರೀತಿಯ ಐತಿಹ್ಯಗಳು ಇಡೀ ಭಾರತದಾದ್ಯಂತ ಇವೆ. ಕ್ರಿ.ಶ. 1520-21ರಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದ
ಪೋರ್ಚುಗಲ್ ಯಾತ್ರಿಕ ಡೊಮಿಂಗೋ ಪಾಯಿಸ್, “… ಇಲ್ಲಿ ದೇವಸ್ಥಾನಗಳಿಗೆ ಸೇರಿದ ಹೆಂಗಸರಿರುತ್ತಾರೆ. ಚೆಲ್ಲು
ಸ್ವಭಾವದ, ಸ್ವಚ್ಛಂದವಾಗಿರುವ ಇವರು ನಗರದ ಪ್ರಮುಖ ಮತ್ತು ಅತ್ಯುತ್ತಮವಾದ ಸಾಲಿನಲ್ಲಿರುವ ಮನೆಗಳಲ್ಲಿ ನೆಲೆಸಿರುತ್ತಾರೆ. ಈ ಮಹಿಳೆಯರು ಅತ್ಯಂತ ಗೌರವಾನ್ವಿತರಾಗಿದ್ದು ಅವರಲ್ಲಿ ಹಲವರು ಸೈನ್ಯದ ಸರದಾರರ ಉಪಪತ್ನಿಯರಾಗಿರುವರು.
ಇವರಲ್ಲಿಗೆ ಯಾವುದೇ ಕುಲೀನ ಮನೆತನದ ವ್ಯಕ್ತಿ ಯಾವುದೇ ಪಾಪಪ್ರಜ್ಞೆ ಇಲ್ಲದೇ, ಅಪಹಾಸ್ಯಕ್ಕೀಡಾಗದೆ ಹೋಗಿ ಬರಬಹುದು. ಈ ಹೆಂಗಸರು ಕೂಡಾ ರಾಜನ ಆಸ್ಥಾನಕ್ಕೆ ರಾಣಿಯರ ಉಪಸ್ಥಿತಿಯಲ್ಲಿ ಕೂಡ ಯಾವಾಗ ಬೇಕಾದರೂ ಹೋಗಿಬರುತ್ತಾರೆ. ಇವರನ್ನು ಯಾರೂ ತಡೆಯುವುದಿಲ್ಲ. ರಾಜನೊಂದಿಗೆ ಕುಳಿತು ತಾಂಬೂಲವನ್ನು ಹಾಕಿ ಕೊಂಡು ಬರುತ್ತಾರೆ. ಯಾವುದೇ ಶ್ರೇಣಿಯ ಇತರೆ ವ್ಯಕ್ತಿ ಈ ರೀತಿ ರಾಜನೊಂದಿಗೆ ಕುಳಿತು ತಾಂಬೂಲವನ್ನು
ಹಾಕಿಕೊಳ್ಳುವಷ್ಟು ಅಧಿಕಾರ ಅಥವಾ ಧೈರ್ಯವನ್ನಾಗಲೀ ಹೊಂದಿರುವುದಿಲ್ಲ” ಎಂದು ದಾಖಲಿಸಿದ್ದಾನೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)