ವಿಶ್ಲೇಷಣೆ
ರವೀ ಸಜಂಗದ್ದೆ
ಜೂನ್ 18, 2023. ಕೆನಡಾದ ವ್ಯಾಂಕೋವರ್‌ನ ಉಪನಗರ ಸರ್ರೆಯಲ್ಲಿರುವ ಸಿಖ್ ಮಂದಿರದ (ಗುರುದ್ವಾರ)
ಹೊರಗೆ, 45 ವರ್ಷ ವಯಸ್ಸಿನ ಹರ್‌ದೀಪ್ ಸಿಂಗ್ ನಿಜ್ಜರ್ ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದರು. ಈತ ಸ್ವತಂತ್ರ ಸಿಖ್ ದೇಶದ ರಚನೆಗಾಗಿನ ಖಲಿಸ್ತಾನ್ ಚಳವಳಿ ಅಥವಾ ಹೋರಾಟದ ಮುಂಚೂಣಿಯಲ್ಲಿದ್ದವನು. ಸಿಖ್ ಸಂಘಟನೆಗಳು ನಿಜ್ಜರ್‌ನನ್ನು ‘ಮಾನವ ಹಕ್ಕುಗಳ ಹೋರಾಟಗಾರ’, ‘ಸಿಖ್ ಸ್ವಾತಂತ್ರ್ಯದ ಹೋರಾಟದ ನಾಯಕ’ ಎಂದೆಲ್ಲ ಬಿಂಬಿಸಿದರೆ, ಭಾರತ ಸರಕಾರವು ಆತನನ್ನು ‘ಉಗ್ರಗಾಮಿ’ಯೆಂದೂ ಮತ್ತು ‘ಖಲಿಸ್ತಾನ್ ಟೈಗರ್ ಫೋರ್ಸ್’ ಎಂಬ ದೇಶವಿರೋಧಿ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವ ಅಪರಾಧಿಯೆಂದೂ ಆರೋಪಿಸಿ, ಆತನ ಬಂಧನಕ್ಕೆ ಕೆನಡಾ ದೇಶದ ಮೇಲೆ ನಿರಂತರ ಒತ್ತಡ ಹೇರುತ್ತಿತ್ತು.
ಕಳೆದ ವರ್ಷ ಈತನ ಹತ್ಯೆಯಿಂದಾಗಿ ಹಳಸುವುದಕ್ಕೆ ಶುರುವಾದ ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ವು ಕಳೆದೊಂದು ವರ್ಷದಿಂದ ಬಿಗಡಾಯಿಸುತ್ತಾ ಬಂದು, ಇದೀಗ ಸಂಪೂರ್ಣ ಕಳಚಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ನೇರಕಾರಣ, ಭಾರತದ ಮೇಲೆ ಕೆನಡಾ ಮಾಡುತ್ತಿರುವ ನಿರಾಧಾರ ಆರೋಪ ಹಾಗೂ ಭಾರತ ದ್ರೋಹಿ ಜನರಿಗೆ ಮತ್ತು ಸಂಘಟನೆಗಳಿಗೆ ಕೆನಡಾ ನೀಡುತ್ತಿರುವ ನೇರನೆರವು! ಇದೆಲ್ಲಾ ಯಾಕಾಯಿತು, ಹೇಗಾಯಿತು ಎಂಬುದನ್ನು ವಿವರವಾಗಿ ತಿಳಿಯೋಣ.
ನಿಜ್ಜರ್ ಹತ್ಯೆಯ ಬೆನ್ನಲ್ಲೇ, ಕೆನಡಾದ ಅನೇಕ ಕಡೆ ಮತ್ತು ಭಾರತದ ಪಂಜಾಬ್ ರಾಜ್ಯದಲ್ಲೂ ಒಂದಷ್ಟು
ಪ್ರತಿಭಟನೆಗಳು, ಗಲಾಟೆಗಳು ನಡೆದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಮಾತುಕತೆಗಳು ಮತ್ತು ಪರ-ವಿರೋಧ ಚರ್ಚೆಗಳು ನಡೆದವು. ಆದರೆ, ಯಾವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, “ಭಾರತ ಸರಕಾರ ಮತ್ತು ಭಾರತದ ಗುಪ್ತಚರ ಸಂಸ್ಥೆಗಳು ನಿಜ್ಜರ್‌ನ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿವೆ. ಭಾರತದ ಸಹಕಾರದಿಂದಲೇ ಈ ಬರ್ಬರ ಹತ್ಯೆ ಮಾಡಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುತ್ತೇವೆ” ಎಂದು ಆದೇಶ ಹೊರಡಿಸಿದರೋ, ಕೂಡಲೇ ಭಾರತವೂ ಈ ಹೇಳಿಕೆಯನ್ನು ನಿರಾಕರಿಸಿ, ಖಂಡನಾ ನಿರ್ಣಯ ಕೈಗೊಂಡು, ಪ್ರತೀಕಾರವಾಗಿ ಕೆನಡಾದ ಉನ್ನತ ರಾಜತಾಂತ್ರಿಕ ರನ್ನು ಈ ನೆಲದಿಂದ ಹೊರಹಾಕಿತು.
ಅಲ್ಲಿಗೆ, ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಲು ಆರಂಭವಾಯಿತು. 2023ರ ಸೆಪ್ಟೆಂಬರ್ 10ರಂದು ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಕೆನಡಾದಲ್ಲಿ ನಡೆಯುತ್ತಿರುವ ಸಿಖ್ ಪ್ರತ್ಯೇಕತಾವಾದಿ ಪ್ರತಿಭಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಟ್ರುಡೊ ಅವರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಬೇಕು ಎಂದು ಆಗ್ರಹಿಸಿದರು.
ಆದರೆ ಆರೋಪವನ್ನು ನಿರಾಕರಿಸಿದ ಕೆನಡಾ, ತನ್ನಲ್ಲಿದ್ದ ಭಾರತೀಯ ಉನ್ನತ ಗುಪ್ತಚರ ಅಧಿಕಾರಿಯನ್ನು ಭಾರತಕ್ಕೆ ವಾಪಸ್ ಕಳುಹಿಸಿತು, ಇದಕ್ಕೆ ಎದುರೇಟು ಎಂಬಂತೆ ಭಾರತವೂ ಅದನ್ನೇ ಮಾಡಿತು. 2023ರ ಅಕ್ಟೋಬರ್ 29ರಂದು, ನಿಜ್ಜರ್ ಹತ್ಯೆಯಾದ ಗುರುದ್ವಾರದ ಪರಿಸರದಲ್ಲಿ ಸಿಖ್ಖರು ಸಾವಿರಾರು ಸಂಖ್ಯೆಯಲ್ಲಿ
ಜಮಾಯಿಸಿ ಸ್ವತಂತ್ರ ಸಿಖ್ ದೇಶದ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿ ಮತ ಚಲಾಯಿಸಿದರು. ಈ
ಘಟನೆಯನ್ನು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರವಾಗಿ ಖಂಡಿಸಿತು. ನಂತರದ ದಿನಗಳಲ್ಲಿ, ಇನ್ನೊಬ್ಬ
ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುವನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಭಾರತದ ಪ್ರಯತ್ನ ವನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದರು ಎಂದು ಕೆನಡಾ ಆರೋಪಿಸಿತು. ಈ ಬಗ್ಗೆ ಸಾಕ್ಷ್ಯ ನೀಡಲು ಹೇಳಿದ ಭಾರತವು ಇವೆಲ್ಲವೂ ಅನೂರ್ಜಿತ ಮತ್ತು ಆಧಾರರಹಿತ ಆರೋಪಗಳು ಎಂದು ನಿರಾಕರಿಸಿತು.
ಹೀಗೆ ಖಲಿಸ್ತಾನಿಗಳ ವಿಚಾರವಾಗಿ ಶುರುವಾದ ‘ಕಿರಿಕ್’ ಇದೀಗ ಉಲ್ಬಣಗೊಂಡು ದೊಡ್ಡ ಸದ್ದು ಮಾಡುತ್ತಿದೆ. ಭಾರ
ತೀಯ ಹೈಕಮಿಷನರ್, ರಾಜತಾಂತ್ರಿಕರು ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭಾರತವು ಕೆನಡಾ
ದಿಂದ ವಾಪಸ್ ಕರೆಸಿಕೊಂಡಿದೆ. ಜತೆಗೆ ಭಾರತವನ್ನು ಬಿಟ್ಟು ತೊಲಗುವಂತೆ ಕೆನಡಾದ ರಾಜತಾಂತ್ರಿಕ ಅಧಿಕಾರಿ ಗಳಿಗೆ ಸೂಚನೆ ನೀಡಿದೆ. ಖಲಿಸ್ತಾನಿ ಉಗ್ರರ ಪರವಾಗಿ ಕೆನಡಾ ದೇಶದ ಸಹಾನುಭೂತಿ ಇರುವುದೇ ಭಾರತದ ಆಕ್ಷೇಪ ಮತ್ತು ಆಕ್ರೋಶಕ್ಕೆ ಕಾರಣ. ಇದೇ ಉಗ್ರಗಾಮಿಗಳ ಪಡೆಯು 1992ಲ್ಲಿ ಏರ್ ಇಂಡಿಯಾದ ‘ಕನಿಷ್ಕಾ’ ವಿಮಾನವನ್ನು ಸ್ಪೋಟಿಸಿ 329 ಪ್ರಯಾಣಿಕರ ಸಾವಿಗೆ ಕಾರಣವಾಗಿತ್ತು. ಹೀಗೆ ಹತ್ಯೆಗೀಡಾದವರಲ್ಲಿ ಹೆಚ್ಚಿನವರು ಕೆನಡಾದ ಪ್ರಜೆ ಗಳಾದರೂ, ಈ ವಿಧ್ವಂಸಕಾರಿ ಕೃತ್ಯವನ್ನು ಜಸ್ಟಿನ್ ಟ್ರುಡೊ ಸಮರ್ಥಿಸಿಕೊಂಡಿದ್ದು ದುರಂತ.
ಸ್ಪಷ್ಟವಾಗಿ ಹೇಳುವುದಾದರೆ, ಉಗ್ರವಾದದ ಮತ್ತು ಉಗ್ರಗಾಮಿಗಳ ಸಮರ್ಥನೆಯೇ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ತಿಕ್ಕಾಟಕ್ಕೆ ಮತ್ತು ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ. ಭಾರತದ ನಂತರ ಸಿಖ್ಖರು ಹೆಚ್ಚಿನ ಸಂಖ್ಯೆ ಯಲ್ಲಿರುವ ದೇಶ ಕೆನಡಾ. ಸುಮಾರು 4 ಕೋಟಿಯಷ್ಟಿರುವ ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 8 ಲಕ್ಷದಷ್ಟು ಸಿಖ್ ಸಮುದಾಯದವರು ಇದ್ದಾರೆ. ಈ ಗಮನಾರ್ಹ ಸಂಖ್ಯೆಯು ಕೆನಡಾದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸು ತ್ತದೆ. ಇದಕ್ಕೆ ಇಂಬು ಕೊಡುವಂತೆ ಖಲಿಸ್ತಾನಿ ಪ್ರತ್ಯೇಕತಾ ಹೋರಾಟದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಸಿಖ್ ಪ್ರತ್ಯೇಕತಾವಾದಿ ಜಗಮೀತ್ ಸಿಂಗ್ ನೇತೃತ್ವದ ‘ನ್ಯೂ ಡೆಮೊಕ್ರಾಟಿಕ್ ಪಕ್ಷ’ವು (ಎನ್‌ಡಿಪಿ) ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷಕ್ಕೆ ಬೆಂಬಲ ನೀಡುತ್ತಿದೆ.
ಹೀಗಾಗಿ, ಅಲ್ಲಿನ ಸಿಖ್ಖರ ಸಹಾನುಭೂತಿ ಗಿಟ್ಟಿಸಲು ಅನಿವಾರ್ಯವಾಗಿ ಅವರನ್ನು ನಿರಂತರ ಬೆಂಬಲಿಸುವ, ಅವರ ‘ಭಾರತ-ದ್ರೋಹಿ’ ಕೆಲಸಗಳೆಲ್ಲವನ್ನೂ ಪೊರೆಯುವ ಕೆಲಸ ನಡೆದುಕೊಂಡೇ ಬಂದಿದೆ. ಟ್ರುಡೊ ಅವರ ಅನಿಶ್ಚಿತ ರಾಜಕೀಯ ಸ್ಥಿತಿಯನ್ನು ಗಮನಿಸಿದಾಗ, ತೀವ್ರವಾಗುತ್ತಲೇ ಇರುವ ಅವರ ಸರಕಾರದ ‘ಭಾರತ-ವಿರೋಧಿ’ ನಿಲುವು, ಅಧಿಕಾರದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವ ಸಲುವಾಗಿ ಎನ್‌ಡಿಪಿಯ ಬೆಂಬಲವನ್ನು ಕಾಪಿಟ್ಟುಕೊಳ್ಳುವ ಗುರಿ ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆನಡಾದಲ್ಲಿ 2025ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷವು ಗೆದ್ದು ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿ ಗೋಚರಿಸುತ್ತಿವೆ.
ಹೀಗಾಗಿ ಲಿಬರಲ್ ಪಕ್ಷದ ಟ್ರುಡೊ ಅವರು ತಮ್ಮ ರಾಜಕೀಯ ಸ್ಥಾನಮಾನಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ, ಆ ನಿಟ್ಟಿನಲ್ಲಿ ತೀವ್ರ ಒತ್ತಡವನ್ನು ಎದುರಿಸುತ್ತಿದ್ದಾರೆ. ಶತಾಯಗತಾಯ ಮುಂದಿನ ಚುನಾವಣೆಯನ್ನು ಗೆಲ್ಲಲು ರಣತಂತ್ರವನ್ನು ರೂಪಿಸುತ್ತಿದ್ದಾರೆ. ತಮ್ಮ ಮನೆಯೊಳಗಿನ ಉಗ್ರರನ್ನು ಪೋಷಿಸುತ್ತಾ, ಭಾರತದ ಮೇಲೆ ವಿನಾಕಾರಣ ಆರೋಪ ಮಾಡುತ್ತಾ, ಅಂತಾರಾಷ್ಟ್ರೀಯ ವಿವಾದವನ್ನು ಹುಟ್ಟು ಹಾಕಿ ಆ ಮೂಲಕ ದೇಶೀಯ ಬಿಕ್ಕಟ್ಟುಗಳನ್ನು ಮರೆಮಾಚಿ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ಟ್ರುಡೊ ಮಾಡುತ್ತಿರುವ ಪ್ರಯತ್ನದ ಭಾಗವಿದು. ಇದೆಲ್ಲದರ ಪರಿಣಾಮವೇ ನಾವೀಗ ನೋಡುತ್ತಿರುವ ಬಿಕ್ಕಟ್ಟು.
ಭಾರತ ಮತ್ತು ಕೆನಡಾದ ನಡುವಿನ ಬಿಕ್ಕಟ್ಟಿನ ವಿಚಾರದಲ್ಲಿ ಸಾರ್ವಭೌಮತ್ವವು (sovereignty) ಕೇಂದ್ರ ಬಿಂದು ಎಂದೆನಿಸುತ್ತದೆ. ಏಕೆಂದರೆ, ಕಳೆದೊಂದು ದಶಕದಿಂದ ಭಾರತದಲ್ಲಿ ಅತ್ಯಂತ ಸ್ಥಿರ ರಾಜಕೀಯ ಸ್ಥಿತಿಯನ್ನು ನೋಡುತ್ತಿದ್ದೇವೆ. ಇದರ ಪರಿಣಾಮವಾಗಿ ಭಾರತವು ವಿಶ್ವವೇದಿಕೆಯಲ್ಲಿ ಅಗ್ರಗಣ್ಯನ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ವಿಶ್ವಗುರುವಾಗಿ, ತನ್ನನ್ನು ತಾನು ಎತ್ತರಕ್ಕೇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಜಾಗತಿಕ ಶಕ್ತಿಯಾಗಿ ಭಾರತ ಮುನ್ನಡೆಯುತ್ತಿದೆ.
ಹೀಗಿರುವಾಗ, ತನ್ನ ಆಂತರಿಕ ವ್ಯವಹಾರಗಳಲ್ಲಿ, ವಿಶೇಷವಾಗಿ ಖಲಿಸ್ತಾನ್ ಮುಂತಾದ ಪ್ರತ್ಯೇಕತೆಯ ಹೋರಾಟದ ವಿಷಯದಲ್ಲಿ ಯಾವುದೇ ದೇಶದ ಹಸ್ತಕ್ಷೇಪವನ್ನು ಕೇಂದ್ರ ಸರಕಾರ ಸಹಿಸಲಾರದು. ಅಂಥ ಪ್ರಯತ್ನವನ್ನು ಯಾರೇ ಮಾಡಿದರೂ ಮುಟ್ಟಿನೋಡಿಕೊಳ್ಳುವಂಥ ಹೊಡೆತವನ್ನು ಅವರಿಗೆ ನೀಡುವಷ್ಟು ಭಾರತವು ಸಶಕ್ತ ವಾಗಿದೆ, ಸದೃಢವಾಗಿದೆ. ಭಾರತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ದುರ್ಬಲಗೊಳಿಸಲು
ಪ್ರಯತ್ನಿಸುವ ದೇಶ ಯಾವುದೇ ಇರಲಿ, ಅದೆಷ್ಟೇ ದೂರದಲ್ಲಿರಲಿ, ದೇಶದ್ರೋಹಿಗಳಿಗೆ ಆಶ್ರಯ ನೀಡುವ ಅಂಥ ದೇಶದೊಂದಿಗೆ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಭಾರತ ರವಾನಿಸಿದೆ.
ಭಾರತದೊಂದಿಗಿನ ಹದಗೆಡುತ್ತಿರುವ ಸಂಬಂಧವು ಕೆನಡಾದ ಮೇಲೆ ಗಮನಾರ್ಹವಾದ, ದೀರ್ಘಕಾಲೀನ
ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಅಲ್ಲಿನ ರಾಜಕೀಯ ಸ್ಥಿರತೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಟ್ರುಡೊ ಅವರ ಅಸಂಬದ್ಧ ಕ್ರಮಗಳು ತೀವ್ರ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿವೆ. ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರಿ ಮಾತುಕತೆಗಳು, ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿವೆ. ಭವಿಷ್ಯದಲ್ಲಿ ಪರಸ್ಪರರ ಸಹಕಾರದ ಸಾಧ್ಯತೆಗಳು ಕಡಿಮೆ ಎಂದೇ ಹೇಳಬೇಕು. ಜಗತ್ತಿನ ದಕ್ಷಿಣ ಮತ್ತು ಇಂಡೋ-ಪೆಸಿಫಿಕ್ ಭಾಗದಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತವನ್ನು ದ್ವೇಷಿಸುವ ಮೂಲಕ ಕೆನಡಾ ತಪ್ಪು ಲೆಕ್ಕಾಚಾರ ಹಾಕಿದೆ. ಕೆನಡಾದ ಮೇಲಾಗಿರುವ ಸರಿಪಡಿಸ ಲಾಗದ ಹಾನಿಗೆ ಇದು ಕಾರಣವಾಗಿದೆ. ಚೀನಾದೊಂದಿಗಿನ ಕೆನಡಾದ ಸಂಬಂಧ ಈಗಾಗಲೇ ಕಡಿತಗೊಂಡಿದೆ, ಹಾಗಾಗಿ ಅದು ಏಷ್ಯಾದಾದ್ಯಂತದ ವ್ಯವಹಾರ-ನಿಮಿತ್ತದ ಸಂಬಂಧವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ.
ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಮತ್ತು ಎರಡನೇ ಅತಿದೊಡ್ಡ ಮಿಲಿಟರಿ ವ್ಯವಸ್ಥೆ ಹೊಂದಿ ರುವ ದೇಶವಾಗಿರುವ ಭಾರತವು ಕೆನಡಾ ಸೇರಿದಂತೆ ಆ ಭಾಗದ ದೇಶಗಳ ವಾಣಿಜ್ಯ, ಆರ್ಥಿಕ ಮತ್ತಿತರ ವ್ಯವಹಾರ ಗಳಲ್ಲಿ ಬಲುದೊಡ್ಡ ಪಾಲುದಾರನಾಗಿದೆ. ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳನ್ನು ಬಲಪಡಿಸಲು, ಹಿಂದಿದ್ದಂತೆ ಉತ್ತಮ ಸಹಾಯ-ಸಹಕಾರದ ಪರಿಸ್ಥಿತಿ ನಿರ್ಮಾಣವಾಗಲು ಎರಡೂ ಸರಕಾರಗಳಿಂದ ಬದ್ಧತೆ ಮತ್ತು ಸಂಘಟಿತ ಪ್ರಯತ್ನದ ಅಗತ್ಯವಿದೆ. ಪರಸ್ಪರ ಪ್ರಯೋಜನಕಾರಿ ಅಂಶಗಳನ್ನು ಮತ್ತು ಅವಕಾಶಗಳನ್ನು ಅನುಸರಿ ಸುವ ಮೂಲಕ ಎರಡೂ ದೇಶಗಳು ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಬಹುದು.
ಇದೆಲ್ಲ ಸಾಧ್ಯವಾಗಬೇಕು ಎಂದಾದರೆ, ಉಗ್ರರನ್ನು ಪೋಷಿಸುವ ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುವ ತನ್ನ ಚಾಳಿಯನ್ನು ಕೆನಡಾ ದೇಶವು ಸಂಪೂರ್ಣವಾಗಿ ಬಿಡಬೇಕಿದೆ. ಭಾರತವನ್ನು ವಿಘಟಿಸುವ
ಸಂಘಟನೆ ಮತ್ತು ಸಮೂಹಕ್ಕೆ ಬೆಂಬಲ ನೀಡುವ ಮೂಲಕ ಜೇನುಗೂಡಿಗೆ ಕೈಹಾಕಿರುವ ಕೆನಡಾ, ಈಗಾಗಲೇ ಅದರ ಪರಿಣಾಮಗಳನ್ನು ಎದುರಿಸುತ್ತಿದೆ. ಮಾತ್ರವಲ್ಲ, ಈ ಪರಿಣಾಮವು ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾಗಿ
ಮತ್ತು ಅನೇಕ ವಿಧಗಳಲ್ಲಿ ಕೆನಡಾವನ್ನು ಅಪ್ಪಳಿಸಲಿದೆ. ಈ ಸಂದಿಗ್ಧತೆಯಿಂದ ಭಾರತಕ್ಕೂ ಕೊಂಚ ಹಿನ್ನಡೆ ಆದೀತು. ಅದರ ಹಲವು ಪಟ್ಟು ಹಿನ್ನಡೆ ಮತ್ತು ತೊಂದರೆ ಕೆನಡಾಕ್ಕೆ ಆಗುವುದು ಖಂಡಿತ.
ಉಗ್ರವಾದದ ಮತ್ತು ಉಗ್ರವಾದಿಗಳ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರುವ ದೇಶ ಭಾರತ. ಹೀಗಿರುವಾಗ,
ಕೆನಡಾ ದೇಶವು ತನ್ನ ಅಸಂಬದ್ಧ ನಿಲುವುಗಳನ್ನು ಕೊನೆಗಾಣಿಸಿ ಉಗ್ರವಾದವನ್ನು ನಿರ್ಮೂಲನೆ ಮಾಡಿದರೆ ಮಾತ್ರವೇ ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧದ ಗತವೈಭವ ಮರುಸ್ಥಾಪನೆಯಾಗಲು ಸಾಧ್ಯ. ಆದರೆ, ಅರೆಹುಚ್ಚನಂತೆ ವರ್ತಿಸುತ್ತಿರುವ ಕೆನಡಾದ ಪ್ರಧಾನಿ ಟ್ರುಡೊಗೆ ಮತ್ತು ಅವರ ಆಡಳಿತ ಪಕ್ಷಕ್ಕೆ ಇದನ್ನು ಮನನ ಮಾಡಿಸುವವರು ಯಾರು? ಮಲಗಿದವರನ್ನು ಎಬ್ಬಿಸಬಹುದು, ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸು ವುದು ಹೇಗೆ?! ಟ್ರುಡೊ ಶೀಘ್ರವಾಗಿ ಗುಣಮುಖರಾಗಲಿ!
(ಲೇಖಕರು ಸಾಫ್ಟ್ ವೇರ್ ಉದ್ಯೋಗಿ)
ಇದನ್ನೂ ಓದಿ: Ravi Hunz Column: ಪ್ರತ್ಯೇಕ ಧರ್ಮ ಕೇಳುತ್ತೇವೆ ಎನ್ನುವುದು ಬಸವ ರಾಜಕಾರಣ !