Monday, 13th January 2025

ಬದಲಾಗಬೇಕಿದೆ ರಿಯಾಲಿಟಿ ಶೋಗಳ ಸ್ವರೂಪ

ಅಭಿಪ್ರಾಯ

ದಿಲೀಪ್ ಕುಮಾರ‍್ ಸಂಪಡ್ಕ

ಪ್ರಪಂಚದಲ್ಲಿ ಬದಲಾವಣೆ ಎನ್ನುವುದು ಒಂದು ಸಹಜ ಪ್ರಕ್ರಿಯೆ. ಸುದ್ದಿ ವಾಹಿನಿಗಳ ವಿಚಾರದಲ್ಲಿ ಕೂಡ ಇದು ಹೊಸದಲ್ಲ. ಆಧುನಿಕ ಜಗತ್ತಿನ ಜನರ ಮನಸ್ಥಿತಿಗೆ
ಹೊಂದಾಣಿಕಯಾಗುವಂತೆ ಸುದ್ದಿವಾಹಿನಿಗಳು ಸಹ ಹೊಸತನದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ.

ವೀಕ್ಷಕರನ್ನು ತನ್ನತ್ತ ಸೆಳೆದು ತಮ್ಮ ಚಾನೆಲ್‌ನ ಜನಪ್ರಿಯತೆಯನ್ನು ಹೆಚ್ಚಿಸಿ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಚಾನೆಲ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಹಜವಾಗಿ ಚಾನೆಲ್‌ಗಳ ಮಧ್ಯ ಪೈಪೋಟಿ ಹೆಚ್ಚಿದೆ. ಹಿಂದೆಲ್ಲಾ ಒಂದೇ ಚಾನೆಲ್‌ನಲ್ಲಿ ಎಲ್ಲಾ ತರಹದ ಕಾರ್ಯಕ್ರಮಗಳು ಮೂಡಿ ಬರುತ್ತಿದ್ದವು. ಆದರೆ ಈಗ ಬದಲಾದ ಸನ್ನಿವೇಶ ದಲ್ಲಿ ಸಂಗೀತ, ನ್ಯೂಸ್, ಭಕ್ತಿ, ಸಾಹಸ, ಇತಿಹಾಸ, ರಾಜಕೀಯ ಹೀಗೆ ಪ್ರತ್ಯೇಕ ಚಾನೆಲ್‌ಗಳು ಒಂದೇ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.

ಇಲ್ಲಿ ಪ್ರೇಕ್ಷಕ ತನ್ನ ಅಭಿರುಚಿಗಳಿಗೆ ತಕ್ಕಂತೆ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡು ತನಗೆ ಬೇಕಾದ ಕಾರ್ಯ ಕ್ರಮವನ್ನು ವೀಕ್ಷಣೆ ಮಾಡುತ್ತಾನೆ. ಇದನ್ನು ಹೊರತುಪಡಿಸಿ ಸಾಮಾನ್ಯ ಮನೋರಂಜನಾ ಚಾನೆಲ್‌ಗಳು ವಿಭಿನ್ನ ಧಾರಾವಾಹಿಗಳನ್ನು ಪ್ರಸಾರ ಮಾಡುವುದರ ಮೂಲಕ ಜನರನ್ನು ಆಕರ್ಷಿಸುತ್ತಿವೆ. ಈಗ ಏನಿದ್ದರೂ ರಿಯಾಲಿಟಿ ಶೋಗಳ ಅಬ್ಬರ. ಕಿರುತೆರೆ ಲೋಕದಲ್ಲಿ ರಿಯಾಲಿಟಿ ಶೋಗಳು ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಿವೆ.

ಒಂದು ಅರ್ಥದಲ್ಲಿ ರಿಯಾಲಿಟಿ ಶೋ ಎಂದರೆ ತೆರೆ ಮೇಲೆ ರಿಯಲ್ ಆಗಿರುವುದನ್ನು ತೋರಿಸುವ ಕಾರ್ಯಕ್ರಮ ವಾಗಿರುತ್ತದೆ. ಕಾಮಿಡಿ, ಅಡುಗೆ, ಡಾನ್ಸಿಂಗ್, ಸಿಂಗಿಂಗ್ ಹೀಗೆ ವಿವಿಧ ಪ್ರಕಾರಗಳಲ್ಲಿ ರಿಯಾಲಿಟಿ ಶೋಗಳು ತಮ್ಮ ತಮ್ಮ ಛಾಪು ಮೂಡಿಸಿ ಪ್ರೇಕ್ಷಕರ ಮನ ಗೆದ್ದಿದೆ. ಪೇಕ್ಷಕರಿಗೆ ರಿಯಾಲಿಟಿ ಶೋಗಳೆಂದರೆ ಯಾಕಿಷ್ಟು ಆಸಕ್ತಿ? ಎಂಬುದನ್ನು ಅವಲೋಕಿಸಿದರೆ, ಇದಕ್ಕೆ ಬಲವಾದ ಕಾರಣಗಳು ಸಹ ಇದೆ. ಸಾಮಾನ್ಯವಾಗಿ ಈ ರಿಯಾಲಿಟಿ ಶೋಗಳು ಮೊದಲ ಹಂತದಲ್ಲಿ ವಿಜ್ರಂಭಿಸುವ ಪ್ರೋಮೊಗಳನ್ನು ಬಿಡುಗಡೆ ಮಾಡಿ ವೀಕ್ಷಕರ ಮನಸ್ಸಿನಲ್ಲಿ ಶೋ ಮೇಲೆ ಕುತೂಹಲವನ್ನು ಸೃಷ್ಟಿಸುತ್ತದೆ. ಈ ಕುತೂಹಲ ವೀಕ್ಷಕರನ್ನು ಇಂಥಹ ಕಾರ್ಯಕ್ರಮಗಳನ್ನು ಇಣುಕಿ ನೋಡುವಂತೆ ಮಾಡಿ ಆಸಕ್ತಿಯನ್ನು ಉಂಟು ಮಾಡುತ್ತದೆ.

ಮುಂದುವರಿದು ಪ್ರತಿ ಶೋದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಕನಿಷ್ಠ ಒಬ್ಬ ಸ್ಪರ್ಧಿಯನ್ನು ಈ ಶೋಗಳಿಗೆ ಸಂಬಂಧಿಸದೇ ಇರುವ ಹಾಗೂ ಉಳಿದ ಬಲಿಷ್ಠ ಸ್ಪರ್ಧಿಗಳಿಂದ ವಿಭಿನ್ನವಾಗಿರುವವರನ್ನು ಆಯ್ಕೆ ಮಾಡಿ ಸಾಮಾನ್ಯ ವ್ಯಕ್ತಿಯೊಬ್ಬರಿಗೆ ದೊಡ್ಡ ಅವಕಾಶವನ್ನು ನೀಡಿದ್ದಾರೆ ಎನ್ನುವ ಅಂಶವನ್ನು ಬಲವಾಗಿ ಪ್ರೇಕ್ಷಕರ ಮೇಲೆ ಆಯೋಜಕರು ಪರೋಕ್ಷವಾಗಿ ಹೇರುತ್ತಾರೆ. ಇವುಗಳಿಗಿಂತ ಇನ್ನೂ ಭಿನ್ನ ಎಂದರೆ ಈ ಶೋಗಳ ನಿರೂಪಣೆಕಾರರ ನಿರೂಪಣಾ ಶೈಲಿ, ಅವರು ತೊಡುವ ಉಡುಗೆ ತೊಡುಗೆಗಳು, ಝಗಮಗಿಸುವ ವೇದಿಕೆ, ಲಘು ತಮಾಷೆಯ ನಿರೂಪಣೆ ಕೂಡ ಜನರಿಗೆ ಇಷ್ಟವಾಗುತ್ತದೆ.

ರಿಯಾಲಿಟಿ ಶೋಗಳು ಎಲ್ಲ ವ್ಯಕ್ತಿಗಳ ವಿವಿಧ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಸೂಕ್ತ ವೇದಿಕೆ ನಿರ್ಮಾಣ ಮಾಡಿ ಅವರಿಗೆ ಸೂಕ್ತ ಸ್ಥಾನಮಾನ, ಗೌರವ ಮತ್ತು ಅದರಲ್ಲೇ ಅವರಿಗೆ ಜೀವನ ಕಟ್ಟಿಕೊಡಲು ಸುವರ್ಣಾವಕಾಶ ನೀಡಿದಂತಾಗುತ್ತದೆ. ಈ ಎಲ್ಲ ಅಂಶಗಳು ಎಷ್ಟೋ ಪ್ರೇಕ್ಷಕರು ಧಾರಾವಾಹಿ ನೋಡುವುದನ್ನು ಬಿಟ್ಟು ರಿಯಾಲಿಟಿ ಶೋಗಳತ್ತ ಮುಖ ಮಾಡುವಂತೆ ಮಾಡಿದೆ. ಪ್ರಸ್ತುತದಲ್ಲಿ ಖಾಸಗಿ ಚಾನೆಲ್‌ಗಳು ನಾ ಮುಂದು ತಾ ಮುಂದು ಎಂಬಂತೆ ವಿಭಿನ್ನತೆಯ
ರಿಯಾಲಿಟಿ ಶೋಗಳನ್ನು ಪ್ರಾರಂಭಿಸುತ್ತಿವೆ. ಅದರಲ್ಲಿ ಬಹುತೇಕ ಶೋಗಳು ಜನಪ್ರಿಯತೆಗಳನ್ನು ಗಳಿಸಿ ಟಿ.ಆರ್.ಪಿಗಳನ್ನು ಹೆಚ್ಚಿಸಿಕೊಳ್ಳತ್ತಿವೆ.

ಆದರೆ ಇತ್ತೀಚಿನ ರಿಯಾಲಿಟಿ ಶೋಗಳನ್ನು ಗಮನಿಸಿದಾಗ ಕೆಲವೊಂದು ಶೋಗಳು ನಿಜವಾಗಿಯೂ ಅವಶ್ಯಕತೆ ಇದೆಯಾ? ಇದರಿಂದ ಸಮಾಜಕ್ಕೆ ಸಿಗುವ ಕೊಡುಗೆಯಾದರೂ ಏನು? ಕುಂಟುಂಬ ಸದಸ್ಯರೆಲ್ಲ ಸೇರಿ ಈ ಶೋಗಳನ್ನು ನೋಡಬಹುದೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ. ತಮಾಷೆ ಮಾಡುವ ನೆಪದಲ್ಲಿ ನಿರೂಪಣೆಕಾರರು ಜಡ್ಜ್‌ಗಳನ್ನು ಕಾಲೆಳೆಯುವುದು. ಪ್ರೀತಿ ಪ್ರೇಮ ಎಂಬ ವಿಷಯ ಇಟ್ಟುಕೊಂಡು ಪ್ರೇಮ ನಿವೇದನೆ ಮಾಡುವುದು, ದ್ವಂಧ ಅರ್ಥವುಳ್ಳ ಪದ ಬಳಕೆ ಮಾಡುವುದು ಎಷ್ಟೋ ಸಲ ಸಭ್ಯ ಪ್ರೇಕ್ಷಕರನ್ನು ಮುಜುಗರಕ್ಕೀಡು ಮಾಡುತ್ತದೆ.

ಎಷ್ಟೋ ಸಲ ಇವರ ಸಂಭಾಷಣೆಗಳು ಮದುವೆ ಮತ್ತು ಖಾಸಗಿ ಜೀವನಕ್ಕೆ ಬೆಲೆಯೇ ಇಲ್ಲವೇ ಭಾವನೆಯನ್ನು ಮೂಡಿಸುತ್ತದೆ ಎಂದರೆ ತಪ್ಪಾಗಲಾರದು. ಇನ್ನೂ ಹಲವು ರಿಯಾಲಿಟಿ ಶೋಗಳಲ್ಲಿ ಈ ಕಾರ್ಯಕ್ರಮದ ವಿಷಯದಲ್ಲಿ ಪರಿಣತಿಯನ್ನು ಹೊಂದಿರದ ವ್ಯಕ್ತಿಗಳನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡುತ್ತಿರುವುದು ವಿಚಿತ್ರವೇ ಸರಿ. ಈ ಜಡ್ಜ್‌ಗಳು ಸ್ಪರ್ಧಿಗಳನ್ನು ಹುರಿದುಂಬಿಸುವಂತೆ ಓವರ್ ಆಕ್ಟಿಂಗ್ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇತೀಚಿಗೆ ಇಂತ ಡ್ರಾಮಾಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಹಲವು ಜಡ್ಜ್‌ಗಳು ಹುಸಿ ಕಣ್ಣೀರು ಹಾಕಿ ಜನರನ್ನು ಮಂಕು ಮಾಡುತ್ತಿರುವುದು ಸಹ ನಡೆಯುತ್ತಿರುತ್ತದೆ.

ಹಲವು ಶೋಗಳು ವಿವಾದಗಳನ್ನು ಹುಟ್ಟು ಹಾಕಿ ಕುತೂಹಲ ಸೃಷ್ಟಿ ಮಾಡುತ್ತದೆ. ಸಿಂಪಲ್ ವಿಚಾರಗಳನ್ನು ಅತಿಯಾಗಿ ಬಿಂಬಿಸಿ ಜನರು ಕಾರ್ಯಕ್ರಮವನ್ನು ಪ್ರತಿ ದಿನ ನೋಡುವಂತೆ ಮಾಡುತ್ತವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ಪರ್ಧಿಗಳ ವೈಯಕ್ತಿಕ ಬದುಕನ್ನು ತೆರೆ ಮೇಲೆ ತೋರಿಸಿ ಸ್ಪರ್ಧಿಗಳ ಬಗ್ಗೆ ಅನುಕಂಪ ವನ್ನು ಗಳಿಸುತ್ತದೆ. ಕಾಮಿಡಿ ಶೋಗಳ ವಿಷಯ ವಸ್ತುಗಳು  ಎರಡು ಮಡದಿ, ಎರಡನೆಯ ಸಂಬಂಧಗಳು, ಡಬ್ಬಲ್ ಮಿನಿಂಗ್, ಮೋಹ, ಸೆಟ್‌ಅಪ್ ಇಂಥ
ಕಂಟೆಂಟ್‌ಗಳ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ.

ಇಂತಹ ಶೋಗಳಿಂದ ಸಮಾಜಕ್ಕೆ ಏನು ಪ್ರಯೋಜನ ಎಂಬ ಪ್ರಶ್ನೆ ಏಳುತ್ತದೆ. ಇಲ್ಲಿ ನಡೆಯುವ ತಮಾಷೆ, ತರಲೆಗಳು ವೀಕ್ಷಕರಲ್ಲಿ ಅಸಹ್ಯ ಮೂಡಿಸುತ್ತದೆ.
ನಾವು ರಿಯಾಲಿಟಿ ಶೋಗಳಲ್ಲಿ ಬಳಸುವ ಸಂಭಾಷಣೆಗಳು ಸ್ವಾಭಾವಿಕವಾಗಿ ಇರುತ್ತವೆ ಎಂದು ಭಾವಿಸುತ್ತೇವೆ. ಆದರೆ ಇತ್ತೀಚಿನ ಶೋಗಳು ಸ್ಕ್ರೀಪ್ಟೆಡ್
ಎನ್ನುವುದು ಮೆಲ್ನೋಟಕ್ಕೆ ಎದ್ದು ಕಾಣುತ್ತದೆ. ಕೆಲವೊಮ್ಮೆ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಸ್ಪಽಗಳನ್ನು ಹಿರೋಗಳಂತೆ ಬಿಂಬಿಸಿ ಅವರನ್ನು ಸೂಪರ್ ಹಿರೋಗಳಾಗಿ ಸೃಷ್ಟಿಸಲಾಗುತ್ತದೆ.

ಇದರಿಂದ ಹಲವು ಸ್ಪರ್ಧಿಗಳು ಪುನಃ ತಾವು ಸಾಮಾನ್ಯ ವ್ಯಕ್ತಿಯಂತೆ ಬದುಕಲು ಆಸಾಧ್ಯವಾಗದೆ ಇತ್ತ ಹಿರೋಗಳಂತೆ ಬದುಕಲು ಆಗದೇ ಹಣ ಮತ್ತು ಹೆಸರಿನ ಗುಂಗಲ್ಲಿ ಡಿಪ್ರೆಶನ್‌ಗೆ ಒಳಗಾಗಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇನ್ನೂ ಹಲವು ಸಲ ಪ್ರೀತಿ ಪ್ರೇಮ ಎಂಬ ಭ್ರಮೆಯನ್ನು ಸ್ಪರ್ಧಿಗಳ ನಡುವೆ ಸೃಷ್ಟಿಸಿ ಶೋಗಳು ಕೇವಲ ಕಾಲ್ಪನಿಕ ಹಾಗೂ ಇದಕ್ಕೂ ನಿಜ ಜೀವನಕ್ಕೆ ವ್ಯತ್ಯಾಸವಿದೆ ಎಂಬುದನ್ನು ಸ್ಪಽಗಳು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿ ಹೋಗಿರು ತ್ತದೆ. ಹಲವು ರಿಯಾಲಿಟಿ ಶೋಗಳ ಬಳಸುವ ಸಂಭಾಷಣೆಗಳು ಮದುವೆ, ಪ್ರೀತಿ-ಪ್ರೇಮ, ಸಂಬಂಧಗಳ ಬೆಲೆ ಕಡಿಮೆಯಾಗುತ್ತಿದೆ.

ಎಲ್ಲ ಶೋಗಳಲ್ಲಿನ ಅಂತಿಮ ಸುತ್ತಿನಲ್ಲಿ ವಿಜೇತರಾಗುವ ಸ್ಪಽಗಳಿಗೆ ದೊಡ್ಡ ಮೊತ್ತದ ನಗದು ಹಣವನ್ನು ನೀಡಲಾಗುತ್ತದೆ. ಆದರೆ, ಹೀಗೆ ಘೋಷಿಸಿರುವ ಮೊತ್ತವನ್ನು ವಿಜೇತರಿಗೆ ಶೋ ಮುಗಿದ ನಂತರ ನೀಡಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಇಂಥ ಶೋಗಳಲ್ಲಿ ಅತಿ ಕಳಪೆ ಗುಣಮಟ್ಟವನ್ನು
ಹೊಂದಿರುವ ಶೋ ಎಂದರೆ ಬಿಗ್‌ಬಾಸ್ ಕಾರ್ಯ ಕ್ರಮ ಇದು ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈ ಶೋದಲ್ಲಿ ಸ್ಪರ್ಧಿಗಳಾಗಿ ಹೈ ಪ್ರೊಫೈಲ್ ಇರುವ
ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ ಕಾಂಟ್ರವರ್ಸಿ ಹಿನ್ನೆಲೆ ಇರುವವರಿಗೆ ಕಡ್ಡಾಯವಾಗಿ ಮೀಸಲಾತಿ ಇರುತ್ತದೆ. ಅಂದರೆ ಚಾನೆಲ್‌ಗಳ
ಮುಖ್ಯ ಉದ್ದೇಶ ಶೋಗಳಲ್ಲಿ ಕಾಂಟ್ರವರ್ಸಿ, ಗಾಸಿಪ್‌ಗಳನ್ನು ಹುಟ್ಟು ಹಾಕಿ ಅಲ್ಲಿ ನಡೆಯುತ್ತಿರುವುದು ನಿಜ ಎಂದು ನಂಬಿಸುವುದು ಆಗಿರುತ್ತದೆ.

ಸ್ಪರ್ಧಿಗಳ ನಡುವಿನ ಸಂಬಂಧಗಳು ಮತ್ತು ಒಡನಾಟಗಳನ್ನು ಬಹಳ ಕೆಟ್ಟದಾಗಿ ತೋರಿಸಲಾಗುತ್ತದೆ. ಹಲವು ಸ್ಪರ್ಧಿಗಳು ಶೋಗಳಲ್ಲಿ ಹೀಗೆ ನಡೆದುಕೊಳ್ಳ ಬೇಕು ಎನ್ನುವ ಆಗ್ರಿಮೆಂಟ್ ಗಳನ್ನು ಮೊದಲೇ ಮಾಡಲಾಗಿರುತ್ತದೆ ಎಂದು ಪತ್ರಿಕೆ ಹೇಳಿಕೆಗಳನ್ನು ನೀಡಿರುವುದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿದೆ. ಇಲ್ಲಿ ನಡೆಸುವ ಹಲವು ಟಾಸ್ಕ್‌ಗಳು ಹಣವನ್ನು ಪೋಲು ಮಾಡುವ ರೀತಿಯಲ್ಲಿ ಇವೆ. ಇತ್ತೀಚಿಗೆ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಮೊಟ್ಟೆಯನ್ನು ತಲೆಯಲ್ಲಿ ಒಡೆಯುವ ಟಾಸ್ಕ್ ನೀಡಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರಿ ವಿರೋಧವಾಗಿತ್ತು.

ಇಂಥ ಹಲವು ಅವೈಜ್ಞಾನಿಕ ಪದ್ಧತಿಗಳಿಗೆ ರಿಯಾಲಿಟಿ ಶೋಗಳು ವೇದಿಕೆಯಾಗುತ್ತಿರುವುದು ವಿಷಾದನೀಯ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು
ರಿಯಾಲಿಟಿ ಶೋಗಳ ವಿನ್ಯಾಸ, ಸ್ವರೂಪ ಮತ್ತು ವ್ಯಾಪ್ತಿಗಳಲ್ಲಿ ಮಹತ್ತರವಾದ ಬದಲಾವಣೆಯಾಗಬೇಕಾಗಿದೆ. ಚಾನೆಲ್‌ಗಳು ಒಂದು ರಿಯಾಲಿಟಿ ಶೋಗಳನ್ನು ಪ್ರಾರಂಭಿಸುವ ಮೊದಲು ಅದಕ್ಕೆ ಸೂಕ್ತವಾದ ಉದ್ದೇಶವನ್ನು ರೂಪಿಸಬೇಕು. ಈ ಕಾರ್ಯಕ್ರಮ ಪೂರ್ತಿ ಮುಗಿಯುವವರೆಗೆ ಅದರ ಉದ್ದೇಶಕ್ಕೆ ಬದ್ಧವಾಗಿರ ಬೇಕು. ಸ್ಪರ್ಧಿಗಳ ಆಯ್ಕೆಯನ್ನು ಉತ್ತಮ ಹಿನ್ನೆಲೆ ಮತ್ತು ಸಾಮಾನ್ಯ ವ್ಯೆಕ್ತಿಗಳಿಗೂ ಅವಕಾಶ ನೀಡುವಂತಿರಬೇಕು. ಸ್ಪರ್ಧಿಗಳ ಮುಗ್ಧತೆಯನ್ನು, ಅವರ ಸಾಮಾಜೀಕ ಹಿನ್ನಲೆಯನ್ನು ಬಂಡವಾಳ ಮಾಡಿಕೊಂಡು ಪ್ರಚಾರ ಪಡೆಯುವ ಗೋಜಿಗೆ ಹೋಗಬಾರದು.

ಶೋಗಳಲ್ಲಿ ಭಾಗವಹಿಸುವ ಸಽಗಳಿಗೆ ಶೋದಲ್ಲಿ ಅವರು ಪಾಲಿಸಬೇಕಾದ ನೀತಿ ಸಂಹಿತೆಗಳನ್ನು ಮೊದಲೇ ತಿಳಿಸಬೇಕು. ಸ್ಪರ್ಧಿಗಳ ಮಧ್ಯ ಕೃತಕ ಪ್ರೀತಿ-ಪ್ರೇಮ ಎಂಬ ಅಮಲಿಗೆ ಒಳಗಾಗುವ ಟಾಸ್ಕ್‌ಗಳನ್ನು ನೀಡುವುದನ್ನು ಕಡ್ಡಾಯವಾಗಿ ನಿಷೇಽಸಬೇಕು. ನಿರೂಪಣೆಕಾರರ ಮಾತು ನಮ್ಮ ಭಾಷೆ, ಸಂಸ್ಕೃತಿಯನ್ನು ಒಂದು ಹೆಜ್ಜೆ ಮುಂದೆ ಕೊಂಡ್ಯೊಯುವ ರೀತಿಯಲ್ಲಿ ಇರಬೇಕು. ಡಬ್ಬಲ್ ಮೀನಿಂಗ್ ಕಂಟೆಂಟ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಒಂದು ಟಿ.ವಿ ಶೋ ಎಂದರೆ ಎಲ್ಲಾ ವಯಸ್ಸಿನ ವೀಕ್ಷಕರು ಒಟ್ಟಿಗೆ ಸೇರಿ ನೋಡುತ್ತಿರುತ್ತಾರೆ ಎನ್ನುವ ಅಂಶವನ್ನು ಇಟ್ಟುಕೊಂಡು ರಿಯಾಲಿಟಿ ಶೋಗಳನ್ನು ರೂಪಿಸಬೇಕು.

ಪ್ರತಿ ರಿಯಾಲಿಟಿ ಶೋಗಳಿಂದ ಕನಿಷ್ಠ ಮಟ್ಟದಲ್ಲಿ ಸಮಾಜಕ್ಕೆ ಲಾಭವಾಗುವ ರೀತಿಯಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಚಾನೆಲ್‌ನವರು ಯೋಚಿಸಬೇಕು.

Leave a Reply

Your email address will not be published. Required fields are marked *