Sunday, 22nd December 2024

ಸಾಪೇಕ್ಷತಾವಾದ – ವ್ಯಾಖ್ಯೆ ಹೀಗೂ ಇರಬಾರದೇಕೆ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್ 

journocate@gmail.com

ಸೌಂದರ್ಯವನ್ನು ಕಂಡಾಗ ಬುದ್ಧಿ ನಮ್ಮ ಕೈಯಲ್ಲಿರುವುದಿಲ್ಲ. ಕಣ್ಣು ಕೋರೈಸುತ್ತದೆ. ದಂಗಾಗುತ್ತೇವೆ. ಬುದ್ಧಿ ಕೈ ಕೊಟ್ಟು ತೊಂದರೆಗೆ ಸಿಲುಕುತ್ತೇವೆ. ಪ್ರತ್ಯಕ್ಷ ನಾದ ದೇವರ ಮುಂದೆ ತಬ್ಬಿಬ್ಬಾಗುವುದು ಹಾಗೇನೇ. ಏನು ಮಾತನಾಡಬೇಕೆಂದು ತಿಳಿಯುವುದಿಲ್ಲ. ಯಾವ ವರ ಬೇಡಬೇಕೆಂದು ಜಪತಪಗಳಲ್ಲಿ ನಿರತರಾಗಿ ದ್ದೆವೋ, ಆ ವರವನ್ನು ನೀಡಬಲ್ಲವನು ಎದುರು ನಿಂತಾಗ ಬೆ ಬ್ಬೆ ಬ್ಬೇ!

ಮಾತು ಹೊರಟರೂ, ಮಾತಿನ ಮೇಲೆ ನಿಗಾ ಇರುವುದಿಲ್ಲ. ಸಾಧಕ-ಬಾಧಕಗಳನ್ನು ಯೋಚಿಸಿ ವರ ಬೇಡ ಬೇಕು, ಅದೂ, ಅರೆಕ್ಷಣದಲ್ಲಿ ಅವನು ಅಂತರ್ಧಾನ ನಾಗುವ ಮೊದಲೇ. ಆದರೆ, ಅನಿರೀಕ್ಷಿತವಾಗಿ ಎದುರಾಗಿ ತಬ್ಬಿಬ್ಬುಗೊಳಿಸಿದವನ ಮುಂದೆ ಯೋಚನೆಗಾದರೂ ಅವಕಾಶವೆಲ್ಲಿ? ಭಕ್ತಿಯಿಂದ ಬೇಡಿದ ವರವನ್ನು
ಅವನೆಂದೂ ಕರುಣಿಸದಿರಲಾರ. ಆದರೆ, ನಾವು ಕೇಳುವ ವರವೇ ನಮಗೆ ಮುಳುವಾಗದಂತೆ ಎಚ್ಚರದಿಂದಿರ ಬೇಕು. ಹಿರಣ್ಯಕಶ್ಯಪುವಿನ ಗತಿ ನಮಗೂ ಒದಗ ದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಬೇಡಿಕೆ ಯಲ್ಲಿನ ಸಣ್ಣ ನ್ಯೂನತೆಯಲ್ಲೇ ಕುತ್ತಿಗೆಗೆ ಕುಣಿಕೆ ಹಾಕುತ್ತಾನೆ.

ದೇವನೊಬ್ಬ ಪಾಕಡಾ ವಕೀಲ. ಎಷ್ಟೇ ಜಾಗರೂಕವಾಗಿ ಹೆಣೆದ ಒಪ್ಪಂದದಲ್ಲೂ ಪಾಮರರಾರಿಗೂ ಕಾಣದ ಒಂದು ಸಣ್ಣ ಹುಳುಕನ್ನು ಹುಡುಕಿ ಒಪ್ಪಂದವನ್ನೇ ಢಮಾರ್ ಎನ್ನಿಸಬಲ್ಲ ಚಾಣಾಕ್ಷ ಲಾಯರ್. ದೊಡ್ಡ ವಾಹನ ವೊಂದಿರಬೇಕು, ಸುಂದರ ಮಹಿಳೆಯರು ನನ್ನನ್ನು ಸುತ್ತುವರೆದಿರಬೇಕು ಎಂದು ಬೇಡುತ್ತಿದ್ದ ಭಕ್ತನ ಮೊರೆ ಯನ್ನು ದೇವರು ಸಾಕಾರ ಗೊಳಿಸಿದ. ಅವನಿಗೆ ಬೆಂಗಳೂರು ನಗರದ ಸಾರಿಗೆ ಬಸ್ ಚಾಲಕನಾಗಿ ನೌಕರಿ ಅನುಗ್ರಹಿಸಿದ. ಇದು ಎಂದೋ ಓದಿದ ಜೋಕೇ ಆದರೂ, ದೇವರೊಂದಿಗೆ ವ್ಯವಹರಿಸುವುದು ಹೇಗೆಂದು ಕಲಿಸಬಲ್ಲ ನೀತಿ ಅದರಲ್ಲಿದೆ.

ಅಸಾಧಾರಣ ಸೌಂದರ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನುವ ಬಯಕೆಗೆ ಕಾರಣ ನಾವು ಆ ಸೌಂದರ್ಯವನ್ನು ಆಸ್ವಾದಿಸಲಿಕ್ಕೆ ಬೇಕಾದ ಸಾಮರ್ಥ್ಯದ
ಕೊರತೆ. ಎದುರಿಗಿನ ಸೌಂದರ್ಯದ ಅಗಾಧತೆಗೂ, ಅತಿ ಸೀಮಿತ ಅವಧಿಯಲ್ಲಿ ಅದನ್ನು ಗ್ರಹಿಸಲು ಬೇಕಾದ ಸಾಮರ್ಥ್ಯಕ್ಕೂ ಎಂದೂ ತಾಳೆಯಾಗುವುದಿಲ್ಲ. ಹಾಗಾಗಿ, ಸೌಂದರ್ಯವನ್ನು ಆಸ್ವಾದಿಸುವುದಿರಲಿ, ಗ್ರಹಿಸುವುದರಲ್ಲೇ ಸೋಲುತ್ತೇವೆ. ನಮ್ಮನ್ನು ಮೊದಲು ಸೋಲಿಸುವುದು ನಮ್ಮ ನಯನದ್ವಯ. ಸೌಂದ ರ್ಯಕ್ಕೂ, ಮನಸ್ಸಿಗೂ ಸೇತುವೆ ಬೆಸೆಯಬೇಕಾದ ಕಣ್ಣುಗಳೇ ಕೈ ಕೊಟ್ಟರೆ ಅದಾವ ನೋಟ-ಬಾಣಗಳ ಸೇತುವೆಯನ್ನು ನಿರ್ಮಿಸಲಾದೀತು. ಮನ ಸೋಲುವು ದೆಂದರೆ, ಸೌಂದರ್ಯದ ಪ್ರತಿರೂಪವನ್ನು ಸ್ಮೃತಿ ಪಟಲದ ಮೇಲೆ ಛಾಪಿಸುವುದರಲ್ಲಿ ಕಣ್ಣುಗಳು ವಿಫಲವಾಗುವುದು.

ಹೀಗೆ ಸೋತು ದುರ್ಬಲವಾದ ಮನಸ್ಸು ಮತ್ತಷ್ಟು ಎಡವಟ್ಟುಗಳಿಗೆ ದಾರಿ ಮಾಡಿ ಕೊಡುತ್ತದೆ. ಯಾವುದಕ್ಕೂ ಇರಲಿ, ರಿಸ್ಕ್ ಬೇಡವೆಂದು ಮತ್ತೊಮ್ಮೆ ವಧು ಪರೀಕ್ಷೆಯನ್ನ ಅಪೇಕ್ಷಿಸುತ್ತಾರೆ. ಪ್ರತಿ ಬಾರಿ, ಪ್ರಥಮ ಹಂತದಲ್ಲೇ ಎಡವುವ RCB ಯಂತೆ ತಪ್ಪುಗಳು ಸಂಭವಿಸುತ್ತಲೇ ಹೋಗುತ್ತವೆ. ಜೆರಾಕ್ಸ್ ಕಾಪಿ
ದುರ್ಬಲ (ಕ್ಷೀಣ)ವಾಯಿತೆಂದು ಅದನ್ನು ಮತ್ತೊಮ್ಮೆ ನಿರುಕಿಸಿದಾಗ ಅಲೈನ್ಮೆಂಟ್ ಸಮಸ್ಯೆ ತಲೆದೋರುತ್ತಲ್ಲಾ, ಹಾಗೆ. ಅದನ್ನು Love is blind ಎಂದು ಹೇಳುತ್ತಾ ಕುರುಡರು ನಾವೊಬ್ಬರೇ ಅಲ್ಲ ಎಂದುಕೊಂಡು ಜರ್ಜರಿತ ಮನಸ್ಸನ್ನು ಸಾಂತ್ವನಗೊಳಿಸುತ್ತೇವೆ.

ಹೀಗೆ ಆರಂಭವಾಗುವ ಸೋಲಿನ ಸರಪಳಿ (ಮನ) ಸೋತವರನ್ನು ಕಟ್ಟಿ ಹಾಕುತ್ತದೆ. ಅದರಿಂದ ಬಿಡಿಸಿಕೊಳ್ಳಲು ’’I need my space’  ಎಂಬ ವರಾತ ಶುರು ವಾಗುತ್ತದೆ. ಸ್ಪೇಸ್ ಬೇಕು ಅಂದರೆ, ಟೈಮ್ ಬೇಕು. ಈಗಿರುವ ಜಾಗದಿಂದ ಹೊರಬರಬೇಕು. ಬೇರೊಂದು ಜಾಗದಲ್ಲಿ ಸಮಯ ಕಳೆಯಬೇಕು. ಬೇರೊಂದು ಸ್ಥಳದಲ್ಲಿ ಸಮಯ ಕಳೆದದ್ದೇ ತಿಳಿಯುವುದಿಲ್ಲ. (ಹಾಗೆ ಸಮಯ ಕಳೆಯುವಾಗ ಎಲ್ಲಿದ್ದೆನೆಂದೇ ಅರಿವಿಗೆ ಬರುವುದಿಲ್ಲ.) ದಾಂಪತ್ಯದ ಕಟ್ಟುಪಾಡಿನಿಂದ ಸದಾ ಬಿಡಿಸಿಕೊಳ್ಳಲು ಹಾತೊರೆದ ಐನ್ ಸ್ಟೀನ್ ಕಾಲ-ವ್ಯೋಮಗಳು ಒಂದೇ ಎಂದು ಪ್ರತಿಪಾದಿಸಿದ್ದು ಸಹಜವೇ!

ಕಾಲ-ವ್ಯೋಮಗಳ ಹೊದಿಕೆಯಡಿಯಲ್ಲಿ ಪವಡಿಸಿದ್ದ ಐನ್‌ಸ್ಟೀನ್‌ನಿಗೆ ರಿಲೇಟಿವಿಟಿ ಎಂಬ ಜ್ಞಾನದ ಬೆಳಕು ಮುಸುಕನ್ನು ತೂರಿಕೊಂಡು ಹೊಕ್ಕಿರಬೇಕು. ತನ್ನದೇ ಸ್ಪೇಸ್ ಬಯಸಿ ಆ ಸ್ಪೇಸ್‌ನಲ್ಲಿ ಸಾಕಷ್ಟು ಸಮಯ ಕಳೆದ ಐನ್‌ಸ್ಟೀನ್ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ. ದಾಂಪತ್ಯದ ಸಂಕೋಲೆಯ ಕೊಂಡಿ ಗಳನ್ನು ಪ್ರೇಮಜ್ವಾಲೆಯ ಬಿಸಿಯಿಂದ ಆಗಾಗ್ಗೆ ಕರಗಿಸುತ್ತಾ ಬಿಡುಗಡೆ ಪಡೆಯುತ್ತಲೇ ಇದ್ದ. (ಆತ ಬದುಕಿದ್ದಿದ್ದರೆ ಬಹುಶಃ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಕವಾಗುತ್ತಿದ್ದನೇನೋ!) ಕಾಲ ಕಳೆದದ್ದೇ ತಿಳಿಯಲಿಲ್ಲ.

ಸ್ಪೇಸ್ ಮತ್ತು ಟೈಮ್‌ಗಳೆರಡರ ಸಮೀಕರಣದಲ್ಲೂ ಸೌಂದರ್ಯವಿದೆ. ಹಾಗಾಗಿಯೇ, ಅವನ ಥಿಯರಿಗಳ ಗ್ರಹಿಕೆಯಲ್ಲೂ ಉತ್ಸಾಹಿಗಳು ಎಡವುದುಂಟು.
ಸರಳವಾದ ಉದಾಹರಣೆಗಳೊಂದಿಗೆ ಗ್ರಹಿಸುವ ಪ್ರಯತ್ನಕ್ಕೆ ಅಡ್ಡಿಯಿಲ್ಲ. ಬೆಂಗಳೂರು ಮೈಸೂರಿನಿಂದ ಮೂರು ಗಂಟೆ ದೂರ ಎಂದು ವಿವರಿಸುವಾಗ ಅಲ್ಲಿ
ದೂರವನ್ನು ಕಿಲೋಮೀಟರ್ ಅಥವಾ ಮೈಲಿಯಲ್ಲಿ ಸೂಚಿಸದೇ ಪ್ರಯಾಣದ ಅವಽಯನ್ನು ಸೂಚಿಸುವ ಕ್ರಮ. ಇಂತಹ ವಿವರಣೆಯಲ್ಲಿ ತಕರಾರಿಗೆ ಆಸ್ಪದವಿದೆ, ಆ
ವಿಚಾರ ಬೇರೆ.

ವೀಟ್ಟುಕು ವೀಡು ವಾಸಪ್ಪಡಿ ಎಂಬ ತಮಿಳು ಚಿತ್ರದಲ್ಲಿನ ಒಂದು ಪ್ರಸಂಗ: ಕಾಲ್ನಡಿಗೆಯ ಯಾತ್ರಾರ್ಥಿ, ಕಂಡ ಅಪರಿಚಿತನನ್ನು ತಾನು ತಲುಪಬೇಕಾದ ಯಾತ್ರಾ ಸ್ಥಳ ಇನ್ನೂ ಎಷ್ಟು ದೂರವಿದೆ ಎಂದು ವಿಚಾರಿಸುತ್ತಾನೆ. ಅರ್ಧ ಗಂಟೆ ಎಂಬ ಉತ್ತರ ಬರುತ್ತದೆ. ಬಸವಳಿದ ದಾರಿಹೋಕ ನಡಿಗೆ ಮುಂದುವರೆಸುತ್ತಾನೆ. ಮಾಹಿತಿ ನೀಡಿದೋನು ಒಂದುನಿಮಿಷ, ನೀವು ಈ ಥರಾ ನಡೆದರೆ, (ಅರ್ಧ ಗಂಟೆ ಅಲ್ಲ) ಎರಡು ದಿನ ಬೇಕು ಎನ್ನುತ್ತಾನೆ.

ವಿದೇಶಿ ಜಮೀನ್ದಾರನೊಬ್ಬ ತನ್ನ ಸ್ವಾಮ್ಯದ ತೋಟದ ವಿಸ್ತೀರ್ಣವನ್ನು ಹೆಮ್ಮೆಯಿಂದ ಒಬ್ಬನಿಗೆ ಹೀಗೆ ವಿವರಿಸುತ್ತಾನೆ: ಕಾರಿನಲ್ಲಿ ಕುಳಿತು ಏಳುಗಂಟೆಗೆ ಹೊರಟರೆ, ಸೂರ್ಯ ನೆತ್ತಿಯ ಮೇಲೇರುವ ಹೊತ್ತಿಗೆ ನನ್ನ ತೋಟದ ಅರ್ಧದಷ್ಟನ್ನೂ ಕ್ರಮಿಸಿರುವುದಿಲ್ಲ. ಅದನ್ನು ಕೇಳಿದವನು ನನ್ನ ಬಳಿಯೂ ಒಮ್ಮೆ ಅಂತಹ ಕಾರಿತ್ತು! (ರೀಡರ್ಸ್ ಡೈಜೆಸ್ಟ್ ಜೋಕ್). 50 ಅಡಿ ಅಗಲ, 80 ಅಡಿ ಉದ್ದದ ಸೈಟನ್ನು ಕಾಲದಲ್ಲಿ ಅಳೆದು 15 ಸೆಕೆಂಡ್ ಅಗಲ 23 ಅಡಿ ಉದ್ದವೆಂದು ಹೇಳಿ
ಗೊಂದಲ ಸೃಷ್ಟಿಸುವ ದಿನಗಳು ಯಾವ ಐನ್‌ಸ್ಟೀನ್ ನಿಷ್ಠನಿಗೂ ಬಾರದಿರಲಿ.

ವಿಶೇಷ ಸಾಪೇಕ್ಷತಾವಾದವು ಶಕ್ತಿ ಮತ್ತು ದ್ರವ್ಯರಾಶಿಗಳನ್ನು ಸಮೀಕರಿಸುತ್ತದೆ. 36 X 24 X 36 ಪ್ರಮಾಣದಲ್ಲಿ ಸೌಷ್ಠವವನ್ನು ಹೊಂದುವ ಗುರಿಯನ್ನು
ಹೊಂದಿ ದೇಹದ ದ್ರವ್ಯರಾಶಿಯನ್ನು ಸವೆಸುವುದರಲ್ಲೇ ಜನುಮವನ್ನೂ ಸವೆಸುವ ಅನೇಕ ರೂಪದರ್ಶಿಗಳು ಅನೊರೆಕ್ಸಿಯಾದಿಂದ ನರಳುತ್ತಾರೆ. ಉಪವಾಸ ದಿಂದ ನರಳಿ ಕೃಶವಾಗಿ, ಮುಖದಲ್ಲಿನ ಕಾಂತಿಯನ್ನೂ ಕಳೆದು ಕೊಳ್ಳುತ್ತಾರೆ. ಪೇಲವವಾಗಿ, ತೂಕವುಳ್ಳ ಲಲನೆಯರು ನಿಂತರೆ ಕೂರಲಾರರು, ಕೂತರೆ ನಿಲ್ಲಲಾರರು, ದ್ರವ್ಯರಾಶಿಗೂ, ಶಕ್ತಿಗೂ (ಚೈತನ್ಯಕ್ಕೂ) ಎತ್ತಲಿಂದೆತ್ತ ಸಂಬಂಧ? ಒಂದು ಹಂತದವರೆಗೂ, ತೆಳ್ಳಗಿದ್ದರೆ ಚಟುವಟಿಕೆಯಿಂದಿರಬಹುದು, ಆದರೆ, ಐನ್‌ಸ್ಟೀನ್ ಪ್ರಕಾರ ಚುರುಕಾಗಿ ಓಡಾಡಿಕೊಂಡಿರಲು ದೇಹದ ದ್ರವ್ಯರಾಶಿ ಹೆಚ್ಚಾಗಿರಬೇಕು!

ಕಾಲನಾದ ಆಚಾರವಂತ ಬ್ರಾಹ್ಮಣನ ದೇಹವನ್ನು ಚಿತೆಯ ಮೇಲಿರಿಸಿದಾಗ ಪೇರಿಸಿದ ಕಟ್ಟಿಗೆಗಳಿಂದ ಅವನ ಕೈ-ಕಾಲುಗಳನ್ನು ಗುರುತಿಸಲಾಗದಷ್ಟು ಸಣ್ಣಗಿರ ಬೇಕೆಂಬ ಒಂದು ಆದರ್ಶವಿದೆ. ಆ ಆದರ್ಶ ಕೈಗೂಡಲು ಬ್ರಾಹ್ಮಣ ಬ್ರಹ್ಮಜ್ಞಾನಿಯಾಗಿರಬೇಕು. ಅಂದರೆ, ಜ್ಞಾನದ ಬೆಳಕು ಹರಿಯಲು ದ್ರವ್ಯರಾಶಿ ಕಡಿಮೆ ಯಾಗಿರಬೇಕು. ದ್ರವ್ಯರಾಶಿ ಕಡಿಮೆಯಾಗುತ್ತಾ ಹೋಗಿ ತಾನೇ ಬೆಳಕಾಗಬೇಕು. ತಪಸ್ಸಿನಲ್ಲಿ ತನ್ನನ್ನು ತೊಡಗಿಸಿಕೊಂಡು ವ್ಯೋಮ-ಕಾಲಗಳ ಅರಿವನ್ನು ಇಲ್ಲವಾಗಿಸಿದಾಗ ಒಳಗಿನಿಂದ ಹತ್ತಿಕೊಳ್ಳುವ ಜ್ಞಾನದೀವಿಗೆ.

ಆ ಜ್ಞಾನದೀವಿಗೆಯಡಿಯಲ್ಲಿ ಲಭಿಸುವ ಅಂತರಂಗದ ಸೌಂದರ್ಯವವನ್ನೆದುರಿಸಲು ಅಂತಃಚಕ್ಷುಗಳು ಸಾಕು, ಕಣ್ಣು ಬಿಟ್ಟು ಮೋಸಹೋಗುವ ಬಾಬತ್ತಿಲ್ಲ.
ತಪೋಭಂಗಿಯಲ್ಲೇ ತ್ರಿಲೋಕಗಳಲ್ಲೂ ಸಂಚರಿಸಬಹುದು. ಸೈಕಿಕ್ ಎನರ್ಜಿ ಎಂಬ ಬರಿದಾಗದ ಬ್ಯಾಟರಿ ಇದ್ದರೆ ಸಾಕು. ಸಂಚಾರಕ್ಕೆ ವೇಗದ ಮಿತಿಯೂ ಇಲ್ಲ. ಬೆಳಕಿನ ವೇಗವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಅನ್ನುತ್ತಾನೆ ಐನ್‌ಸ್ಟೀನ್. ಇತ್ತೀಚಿನ ಸಂಶೋಧನೆಯ ಪ್ರಕಾರ, ಮುದಿತನ ಗಗನಯಾತ್ರಿಕರನ್ನು ಹೆಚ್ಚು ವೇಗ ವಾಗಿ ಅಡರಿಕೊಳ್ಳುತ್ತದೆ.

ಗಗನಯಾನ ಜೀವಕೋಶದ ಶಕ್ತಿಕೇಂದ್ರವಾದ ಮೈಟೊ ಕಾಂಡ್ರಿಯಾ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದಲ್ಲದೆ, ಜೀವಕೋಶದ ರಾಸಾಯನಿಕ
ಸಮತೋಲನವನ್ನು ಹಾಳುಗೆಡುವುತ್ತದೆ. ಬಾಹ್ಯಾಕಾಶದ ಪಯಣಿಗನ ಹೃದಯ, ರಕ್ತನಾಳ, ಎಲುಬು ಮತ್ತು ಸ್ನಾಯುಗಳು ಭೂಮಿಯಲ್ಲೇ ವಾಸಿಸುವರ ಈ ಅಂಗಾಂಗಳಿಗಿಂತ ಹತ್ತುಪಟ್ಟು ಹೆಚ್ಚು ದುರ್ಬಲಗೊಳ್ಳುತ್ತವೆ. ಅಂತರಿಕ್ಷದಲ್ಲಿ ಚಲಿಸುವುದಕ್ಕಿಂತ ಬೆಂಗಳೂರಿನ ಆಟೋರಿಕ್ಷಾದಲ್ಲಿ ಅಡ್ಡಾಡುವುದೇ ಹೆಚ್ಚು ಕ್ಷೇಮ ವೇನೊ! ನೂತನ ಸಂಶೋಧನೆಯಿಂದ ವಿಚಲಿತರಾದ ಬಿಲಿಯನ್ ದೊರೆಗಳು ಮಂಗಳ ಗ್ರಹದಲ್ಲಿ ಸೈಟ್ ಬುಕ್ ಮಾಡಲು ನಿಂತ ಕ್ಯೂನಿಂದ ದೂರ ನಡೆಯು ತ್ತಾರೋ ನೋಡಬೇಕಿದೆ.

ತ್ರಿಲೋಕ ಸಂಚಾರಕ್ಕೆ ಬೇಕಾದ ಸಂಸ್ಕಾರವೆಂಬ ಇಂಧನ ನನ್ನಲ್ಲಿಲ್ಲ. ಮಂಗಳಗ್ರಹಕ್ಕೆ ಲಗ್ಗೆಹಾಕುವ ಮಾತೇ ಇಲ್ಲ. ನನ್ನ ಸಂಚಾರವೇನಿದ್ದರೂ ಭೂಲೋಕದಲ್ಲೇ. ಅಮೆರಿಕಗೆ ಪಶ್ಚಿಮಾಭಿಮುಖವಾಗಿ ಹೋದರೆ ಕೆಲವು ಗಂಟೆಗಳು ನನ್ನ ಆಯುಸ್ಸಿಗೆ ಸಂದಾಯವಾಗುತ್ತದೆಯೋ, ಸಿಂಗಾಪೂರ್ ಮೂಲಕ ಹೋದರೆ ಒಂದು ನಾಲ್ಕು ಗಂಟೆ ಡೆಬಿಟ್ ಆಗುತ್ತದೆಯೋ, ಎಲ್ಲೂ ಹೋಗದೆ ತೆಪ್ಪಗೆ ಕೋವಿಡ್ ನಿಯಮಗಳನ್ನು ಅನುಸರಿಸಿದರೆ ಅದೇ ಬೆಸ್ಟ್ ಎನ್ನುವ ಲೆಕ್ಕಾಚಾರದಲ್ಲಿ ನಿರತ ರಾಗಿದ್ದೇನೆ.

ಹೇಗಿದ್ದರೂ, ಕೋವಿಡ್ ಮನೆಯಲ್ಲೇ ಜೈಲನ್ನಾಗಿಸಿದೆ. ನಿಜ ಹೇಳಬೇಕೆಂದರೆ, ನನ್ನದು ಜವಹರ್‌ಲಾಲ್ ನೆಹರೂಗೆ ವಿಧಿಸಿದ ಕಾರಾಗೃಹ ಶಿಕ್ಷೆಯಿದ್ದಂತೆ. ಯಾವುದೇ ಸೌಕರ್ಯಕ್ಕೆ ಅಡ್ಡಿಯಿಲ್ಲ. ವೀರ ಸಾವರ್ಕರ್‌ಗೆ ವಿಧಿಸಿದ ಘೋರ ಶಿಕ್ಷೆಯಂತಲ್ಲ. ಕಾಲಾಪಾನಿಯ ಘನಘೋರ ಶಿಕ್ಷೆಗೆ ಗುರಿಯಾದ ಅವರ ಕಾಲ ವ್ಯೋಮಗಳೆರಡೂ ಅಪ್ಪಚ್ಚಿಯಾಗಿ ಅವರಂತೆಯೇ ಮುದುಡಿಕೊಂಡಿದ್ದವು. ಬದುಕಲು ಸ್ಪೇಸ್ ಬೇಕಿದ್ದುದು ಅವರಿಗೆ. ಬಿಡುಗಡೆಯಾಗಿ ಹೊರಬಂದು ತಮ್ಮ ಟೈಮನ್ನು ಹೇಗೆ ವಿನಿಯೋಗಿಸಬೇಕೆಂಬ ನಿರ್ದಿಷ್ಠ ಅರಿವು ಅವರಿಗಿತ್ತು. ವಿದ್ಯಾರ್ಥಿಗಳಿಗೆ ಸಾಪೇಕ್ಷತಾ ವಾದವನ್ನು ಸುಲಭವಾಗಿ ಅರ್ಥಮಾಡಿಸುವ ನಿಟ್ಟಿನಲ್ಲಿ ಈ ಉದಾಹರಣೆಯನ್ನೂ ನೀಡಬಹುದೇನೊ.

ತನ್ಮೂಲಕ, ವಿಜ್ಞಾನವನ್ನು ಬೋಧಿಸುತ್ತಲೇ, ವಿಜ್ಞಾನದ ವಿದ್ಯಾರ್ಥಿಗಳಿಗೆ ಇತಿಹಾಸದಲ್ಲೂ ಆಸಕ್ತಿಯನ್ನು ಹುಟ್ಟಿಸಬಹುದು. ಇಬ್ಬರು ನಾಯಕರಿಗೆ ವಿಧಿಸಿದ ಶಿಕ್ಷೆಯ ಅವಧಿಯೂ ಬೇರೆ ಬೇರೆ; ಅವರಿದ್ದ ಬಂಧಿಖಾನೆಯ ವಾತಾವರಣವೂ ವಿಭಿನ್ನ. ಅದು ಒಬ್ಬರಿಂದ ಸಾಹಿತ್ಯವನ್ನು ಬರೆಸಿತು, ಮತ್ತೊಬ್ಬರಿಂದ ಮುಚ್ಚಳಿಕೆ ಬರೆಸಿತು. ಕೊನೆಯದಾಗಿ, ನಾನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗಳಲ್ಲಿ ಸೋದರ ಪತ್ರಿಕೆಯಾದ ಕನ್ನಡ ಪ್ರಭ ನನ್ನ ಸಾಪೇಕ್ಷತಾ ವಾದ ಎಂಬ ಶೀರ್ಷಿಕೆ ಹೊತ್ತ ಕವನವನ್ನು ಪ್ರಕಟಿಸಿತ್ತು. ಅದಕ್ಕೆ ಸಂಭಾವನೆಯಾಗಿ ಇಪ್ಪತ್ತು ರು.ಗಳನ್ನು ನನಗೆ ಮನಿ ಆರ್ಡರ್ ಮಾಡಿತ್ತು. ನಮ್ಮೆರಡೂ ಕಚೇರಿ ಗಳೂ ಒಂದೇ ಮಹಡಿಯಲ್ಲಿದ್ದವು. ಅಂಚೆ ಮೂಲಕ ಪಾವತಿಸುವ ನಿಯಮವೇನಾದರೂ ಇದ್ದೀತೇನೊ.

ಅಲ್ಲೇ ಕರೆದು ಕೊಟ್ಟಿದ್ದರೆ, ಆ ಮೊಬಲಗಿನ ಮೌಲ್ಯ ನನ್ನನ್ನು ತಲುಪುವುದಕ್ಕೆ ತೆಗೆದುಕೊಂಡ ಎರಡು ದಿನಗಳಲ್ಲಿ ಸವಕಳಿಯಾಗುವುದು ತಪ್ಪುತ್ತಿತ್ತೇನೊ!