ಕಳಕಳಿ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ದೇಶದ ವಿವಿಧ ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಗೆ ಹಲವಾರು ಆಸ್ತಿಪಾಸ್ತಿ ನಷ್ಟ, ಜೀವಹಾನಿಗಳು ಸಂಭವಿಸಿವೆ. ಗುಡ್ಡಗಳು ಕುಸಿದು ಅವುಗಳ ಮಣ್ಣು ರಸ್ತೆಗಳ ಮೇಲೆ ಜಮೆಯಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಾಲಾ ಕಾಲೇಜುಗಳಿಗೆ ವಾರವಿಡೀ ರಜೆ ಘೋಷಿಸಲಾಗಿದೆ. ಇಂಥ ಘನಘೋರ ದುರಂತಕ್ಕೆ ಕೇರಳದ ವಯನಾಡು ಅಕ್ಷರಶಃ ತತ್ತರಿಸಿ ಹೋಗಿದೆ.
ಮೂರು ಬೃಹತ್ ಗುಡ್ಡಗಳು ಕುಸಿದ ಪರಿಣಾಮವಾಗಿ ಒಂದು ಗ್ರಾಮವೇ ನೆಲಸಮವಾಗಿ ಸಾವಿನ ಸಂಖ್ಯೆ ೩೭೫ರ ಗಡಿ ದಾಟಿದೆ. ಸಾವಿನ ಪ್ರಮಾಣ ಇನ್ನೂ
ಹೆಚ್ಚುವ ಸಾಧ್ಯತೆಗಳಿದ್ದು, ಶವಗಳಿಗಾಗಿ ಶೋಧಕಾರ್ಯ ಇನ್ನೂ ಮುಂದುವರಿದಿದೆ. ಹಲವಾರು ಮಂದಿ ತಮ್ಮ ಬಂಧು-ಬಳಗವನ್ನು ಕಳೆದುಕೊಂಡಿದ್ದಾರೆ,
ಬದುಕುಳಿದವರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೆಷ್ಟೋ ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಗಂಜಿ ಕೇಂದ್ರ, ಸೈನಿಕರ ಆಶ್ರಯದಲ್ಲಿ ದಿಕ್ಕೇ ತೋಚದಂತಾಗಿ ದಿನದೂಡಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ.
ಒಂದೆಡೆ ನಮ್ಮ ಕಾರ್ಯಪಡೆಯು ನಿರಂತರ ರಕ್ಷಣಾಕಾರ್ಯದಲ್ಲಿ ಮಗ್ನವಾಗಿದ್ದರೆ, ದುರಂತದ ಬಳಿಕ ಒಬ್ಬೊಬ್ಬ ಸಂತ್ರಸ್ತರ ಸ್ಥಿತಿಯೂ ಕಲ್ಲು ಹೃದಯದವರನ್ನೂ ಕರಗಿಸುವಂತಿದೆ.
ತಾಯಿ ಮತ್ತು ಮಗಳು, ಅಳಿಯ, ಮೊಮ್ಮಕ್ಕಳು ಇರುವ ಸಣ್ಣ ಕುಟುಂಬದ ಮನೆಗೆ ನೀರು ಅಪ್ಪಳಿಸಿದಾಗ ಹೇಗೋ ಅಲ್ಲಿಂದ ಪಾರಾಗಿ ಮಧ್ಯರಾತ್ರಿಯಲ್ಲಿ ಎತ್ತರದ ಜಾಗಕ್ಕೆ ತಲುಪಲು ಕಾಡಿನಲ್ಲಿ ಓಡುತ್ತಿದ್ದಾಗ, ಕಾಡಾನೆಯೊಂದು ಎದುರಾಯಿತಂತೆ. ಆ ಕುಟುಂಬವು ಕಾಡಾನೆಗೆ ಕೈ ಮುಗಿದು ಪ್ರಾರ್ಥಿಸುತ್ತಾ, ‘ಈಗಾಗಲೇ ಒಂದು ಸಂಕಷ್ಟದಿಂದ ಪಾರಾಗಿ ಬಂದಿದ್ದೇವೆ, ನಮಗೆ ಏನೂ ಮಾಡಬೇಡ’ ಎಂದು ಬೇಡಿ, ಬಳಿಕ ಆ ಕಾಡಾನೆಯ ಕಾಲಬುಡದಲ್ಲೇ ಬೆಳಗಿನವರೆಗೆ ಆಶ್ರಯ
ಪಡೆಯುವಂತಾದ ದುಸ್ಥಿತಿಯನ್ನು ಆ ಕುಟುಂಬದವರೊಬ್ಬರು ಮಾಧ್ಯಮದವರ ಮುಂದೆ ವಿವರಿಸಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಅದೆಷ್ಟೋ ಜನರ ಕೈ ಕಾಲು,
ದೇಹದ ಅರ್ಧಭಾಗ, ಮಣ್ಣಿನಲ್ಲಿ ಹೂತುಹೋದ ಪ್ರಾಣಿಗಳ ದೇಹ, ಮನುಷ್ಯರ ದೇಹಗಳು, ಸೈನಿಕರ ಕಂಕುಳಲ್ಲಿ ರಕ್ಷಿಸಲ್ಪಟ್ಟ ಪುಟ್ಟ ಮಗು ಇಂಥ ದೃಶ್ಯಗಳನ್ನು
ಕಾಣಬಹುದಾಗಿತ್ತು.
ಈ ಹಿಂದೆ ಇದೇ ಮಾದರಿಯಲ್ಲಿ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿತದ ದುರಂತವಾಗಿತ್ತು. ಇತ್ತೀಚೆಗೆ ಕಾರವಾರದ ಶಿರೂರು ಪ್ರದೇಶದಲ್ಲಿ ಸಂಭ
ವಿಸಿದ ದುರಂತಗಳು ನಮ್ಮ ಕಣ್ಣ ಮುಂದೆ ಜೀವಂತವಾಗಿವೆ. ಈಗಾಗಲೇ ವಯನಾಡಿನಲ್ಲಿ ಆರೆಸ್ಸೆಸ್‌ನ ಸೇವಾಭಾರತಿಯ ಮೂಲಕ ಹಾಗೂ ಇನ್ನಿತರ
ಸಂಘಟನೆಗಳ ನೆರವಿನಿಂದ ಸೇವಾಕಾರ್ಯಗಳು ಭರದಿಂದ ಸಾಗುತ್ತಿವೆ. ಹಲವಾರು ಉದ್ಯಮಿಗಳು, ಸಮಾಜದ ವಿವಿಧ ಗಣ್ಯರು ಬಟ್ಟೆ-ಬರೆ, ಅಗತ್ಯದ ಆಹಾರ ವಸ್ತುಗಳ ನೆರವನ್ನು ನೀಡುತ್ತಿರುವುದು ಗಮನಾರ್ಹ. ನಮ್ಮ ದೇಶದಲ್ಲಿ ಇಂಥ ಯಾವುದೇ ದುರ್ಘಟನೆಗಳು ಸಂಭವಿಸಿದಾಗ ಜನರು ಪರಸ್ಪರ ಮಾನವೀಯ ಕಳಕಳಿಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಬಂಧು-ಬಳಗವನ್ನು ಕಳೆದುಕೊಂಡ ಸಂತ್ರಸ್ತರಿಗೆ ಹೋದ ಜೀವವನ್ನು ಮತ್ತೆ ತಂದುಕೊಡುವುದು ಅಸಾಧ್ಯ; ಆದರೆ ಅವರ ಬದುಕನ್ನು ಮತ್ತೆ ಶೂನ್ಯದಿಂದ ಕಟ್ಟಿಕೊಡಬೇಕಾದದ್ದು ಸರಕಾರದ ಮತ್ತು ನಮ್ಮೆಲ್ಲರ ಆದ್ಯಕರ್ತವ್ಯವಾಗಬೇಕಿದೆ. ನೊಂದವರ ಕಣ್ಣೀರು ಒರೆಸಬೇಕಿದೆ. ‘ದೇವರ ಸ್ವಂತ ನಾಡು’ ಎಂದೇ ಕರೆಯಲ್ಪಡುವ ಕೇರಳದ ವಯನಾಡ್ ಪ್ರದೇಶವು ಮತ್ತೊಮ್ಮೆ ಎಂದಿನಂತೆ ಲವಲವಿಕೆಯಿಂದ, ಉತ್ಸಾಹದಿಂದ ಎದ್ದು ನಿಲ್ಲುವಂತಾಗಲು, ಹೊಸ ಬೆಳಕನ್ನು
ಕಾಣುವಂತಾಗಲು ನಮ್ಮೆಲ್ಲರ ಸಹಕಾರವು ಅತ್ಯಗತ್ಯವಾಗಿದೆ. ಮಾನವೀಯತೆಗಿಂತ ಮಿಗಿಲಾದ ಧರ್ಮ, ಸಂಘಟನೆ, ಪಕ್ಷ ಬೇರೆ ಯಾವುದಿದೆ ಹೇಳಿ?
(ಲೇಖಕರು ಹವ್ಯಾಸಿ ಬರಹಗಾರರು)