Friday, 29th November 2024

ಆರೆಸ್ಸೆಸ್‌ ನಿರ್ಬಂಧಿಸಬಹುದಾದ ಸಂಘಟನೆಯೇ ?

rss

ವಿಶ್ಲೇಷಣೆ

ಡಾ.ಸುಧಾಕರ ಹೊಸಳ್ಳಿ

ಅಂದು ನವೆಂಬರ್ ೩೦ ,೧೯೬೬ ರಲ್ಲಿ ಅಂದಿನ ಕೇಂದ್ರ ಸರಕಾರ ಅಧಿಕೃತ ಜ್ಞಾಪನ ಆದೇಶದಲ್ಲಿ ಸರಕಾರಿ ನೌಕರರು/ ಅಧಿಕಾರಿಗಳು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧ ಮಾಡಿತ್ತು. ಜುಲೈ ೯, ೨೦೨೪ರ ಅಧಿಕೃತ ಜ್ಞಾಪನ ಆದೇಶದಲ್ಲಿ ಇಂದಿನ ಕೇಂದ್ರ ಸರಕಾರ ಸದರಿ ಆದೇಶವನ್ನು ರದ್ದುಪಡಿಸಿ, ಸರಕಾರಿ ನೌಕರರು ಆರ್ ಎಸ್‌ಎಸ್‌ನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಸಾಂವಿಧಾನಿಕವಾಗಿ, ಕಾನೂನಿನ ಅನ್ವಯ ಅಪರಾಧವಲ್ಲ ಎಂದು ತಿಳಿಸಿದೆ.

ಹಾಗಾದರೆ, ೧೯೬೬ ರಿಂದ ಸರಕಾರಿ ನೌಕರರು ಆರ್‌ಎಸ್ ಎಸ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ, ಜಗತ್ತಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯಾದ ಆರ್‌ಎಸ್‌ಎಸ್‌ನಲ್ಲಿ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದವರೂ ಸರಕಾರಿ ವ್ಯವಸ್ಥೆಯಲ್ಲಿ ಉನ್ನತ ಶ್ರೇಣಿಯನ್ನು ಹೊಂದಿದ್ದರು ಎಂಬುದು ಸಾಂಖ್ಯಿಕ ಸತ್ಯ.

ಅಂದು ನಿರ್ಬಂಧ ಹೇರಿದ ಮೇಲೂ- ನಿರ್ಬಂಧ ರದ್ದಾಗುವವರೆಗೂ ನೌಕರಶಾಹಿಗಳು ಈ ಸಂಘಟನೆಯ ಜೊತೆ ಸಮರ್ಪಣಾ ಮನೋಭಾವದಿಂದ ತೊಡಗಿಕೊಂಡಿದ್ದಾರೆ ಎಂದಾದ ಮೇಲೆ, ಇಂಥದ್ದೊಂದು ಸಂಘಟನೆ ನಿರ್ಬಂಧಕ್ಕೆ ಒಳಪಟ್ಟದ್ದು ಸ್ವೀಕೃತವೇ? ಮತ್ತೆ, ಪ್ರಶ್ನೆ ಮುಖ ಮಾಡುತ್ತದೆ.
೨೦೨೫ಕ್ಕೆ ೧೦೦ ವರ್ಷ ಪೂರೈಸುತ್ತಿರುವ ಈ ಸಂಘಟನೆ, ವಿಘಟನೆ ಕಡೆಗೆ ಒಮ್ಮೆಯೂ ಮುಖ ಮಾಡಿಲ್ಲ, ದೇಶದಲ್ಲಿ ಸರ್ವ ವ್ಯಾಪಿಯಾಗಿರುವ ಇದು, ೭೩, ೧೧೭ ನಿತ್ಯ ಶಾಖೆಯನ್ನು, ೬೫೯೭ ಖಂಡಗಳನ್ನು, ೨೭,೭೨೦ ಮಂಡಲ ಶಾಖೆ, ೨೭,೭೧೭ ಸಂಪರ್ಕ ಮಿಲನ್ ೧೦,೫೬೭ ಸಂಗಮಂಡಳಿಗಳನ್ನು ನಡೆಸುತ್ತಾ ಬರುತ್ತಿದೆ.

ದೇಶ ಯುದ್ಧ ಸಂದರ್ಭದ ಅಪಾಯ, ನೈಸರ್ಗಿಕ ವಿಕೋಪ, ಕೋವಿಡ್‌ನಂತಹ ಮೆಡಿಕಲ್ ಎಮರ್ಜೆನ್ಸಿ ಎಲ್ಲ ಸಂದರ್ಭಗಳಲ್ಲೂ ಸಮಾಜದ ಜತೆ ನಿಂತು ಸಾರ್ವಜನಿಕವಾಗಿ ಶ್ಲಾಘನೆಗೆ ಒಳಪಟ್ಟಿದೆ. ಸದಾ ವ್ಯಕ್ತಿ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿರುವ, ರಾಷ್ಟ್ರಪ್ರೇಮದ ವೃದ್ಧಿ ಹಾಗೂ ರಾಷ್ಟ್ರದ ಪರಮಾಧಿಕಾರದ ಸ್ಥಿರತೆಗೆ ಪಣತೊಟ್ಟ ಸಂಘಟನೆ ನಿರ್ಬಂಧಕ್ಕೊಳಪಡುವುದು ಸಮಂಜಸವೇ? ಭಾರತೀಯ ಸಮಾಜದಲ್ಲಿ ಆರ್‌ಎಸ್‌ಎಸ್ ಕುರಿತು
ಆಗಾಗ ಬಹುಕೋನ ಆಯಾಮಗಳಲ್ಲಿ ಚರ್ಚೆಯಾಗುತ್ತಿರುತ್ತದೆ. ಬಹಳಷ್ಟು ಸಾರಿ ಸಂಘಟನೆಯ ಸಾಮಾಜಿಕ ಕಾರ್ಯಗಳು, ಶೈಕ್ಷಣಿಕ ಕಾರ್ಯಗಳು, ಸಾಮರಸ್ಯದ ನಡಾವಳಿಗಳು ಗಂಭೀರವಾಗಿ ಚರ್ಚೆಯಾಗುತ್ತವೆ.

ಅದರೊಟ್ಟಿಗೆ, ಕೆಲವೇ ಕೆಲವು ವ್ಯಕ್ತಿಗಳು, ಸಂಘಟನೆಗಳು ಆರ್‌ಎಸ್‌ಎಸ್ ಕುರಿತು ನಕಾರಾತ್ಮಕ ಅಭಿಪ್ರಾಯ ರೂಪಿಸುವಲ್ಲಿ ಮಗ್ನವಾಗಿರುತ್ತವೆ. ಜಗತ್ತಿನ ಅತಿ ದೊಡ್ಡ ಸಾಮಾಜಿಕ ಸಂಘಟನೆಯ ಬಗೆಗೆ ಭಿನ್ನ ದ್ವನಿ ಮೂಡುವಂತೆ ಸ್ವಘೋಷಿತ ಬುದ್ಧಿಜೀವಿಗಳು ಸಂಶೋಧನೆಯಲ್ಲಿ ತೊಡಗಿಕೊಂಡದ್ದು ಕಾಣಸಿಗುವ ಶೋಧಿತ ಸಂಗತಿ. ಪ್ರಸ್ತುತ ನಿರ್ಬಂಧ ತೆರುವಿನ ನೆಲೆಯಲ್ಲಿ ಆರ್‌ಎಸ್‌ಎಸ್ ನ ಕುರಿತಾಗಿ ಸಂವಿಧಾನ ಶಿಲ್ಪಿ ಅಂಬೇಡ್ಕರರು ಹೊಂದಿದ್ದ
ಸಂಬಂಧ ಅನುಭವ ಮತ್ತು ಅಭಿಪ್ರಾಯವನ್ನು ಅವಲೋಕಿಸುವ ಅನಿವಾರ್ಯತೆ ಉಗಮಿಸಿದೆ.

ಅಂದು ಡಾ. ಅಂಬೇಡ್ಕರ್ ಅವರು ದಿನಾಂಕ ೧೨-೦೫-೧೯೩೯ ರಂದು ಪುಣೆ ನಗರದ ಭಾವೆ ಶಾಲಾ ಆವರಣದಲ್ಲಿ ನಡೆದ ಆರ್‌ಎಸ್‌ಎಸ್ ಒಟಿಸಿ ಶಿಬಿರಕ್ಕೆ
ವಕೀಲರಾದ ಬಾವೂ ಸಾಹೇಬ್ ಘಡ್ಕರಿ, ದಲಿತ ನಾಯಕರೂ ಹಾಗೂ ಕಾರ್ಮಿಕ ನಾಯಕರೂ ಆದ ಬಾಳಾಸಾಹೇಬ್ ಸಾಲುಂಕೆ ಮುಂತಾದವರೊಂದಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಸೈನಿಕರಂತಿದ್ದ ಶಿಬಿರಾರ್ಥಿಗಳ ಶಿಸ್ತು, ಸಮಾನತೆ ಮತ್ತು ಸಂಯಮಗಳನ್ನು ಕಂಡು ಉತ್ತೇಜಿತರಾದ ಅವರು, ಸೈನ್ಯದ ಬಗ್ಗೆ, ಸಂಘಟನೆಯನ್ನು ಸದೃಢವಾಗಿ ಕಟ್ಟಿ ಬೆಳೆಸುವ ಬಗ್ಗೆ, ವಿಸ್ತಾರವಾಗಿ ಮಾತನಾಡಿದ್ದರು.

ಅವರ ತಂದೆಯವರು ಸೈನಿಕ ಸೇವೆಯಲ್ಲಿ ಇದ್ದುದರಿಂದ ಮತ್ತು ಬಾಬಾ ಸಾಹೇಬರೇ ಸ್ವತಃ ಸೇನಾ ಸಂಬಂಧಿತ ಸೇವೆಗಳ ಬಗ್ಗೆ ಅತ್ಯಂತ ಆಸಕ್ತಿ ಹೊಂದಿ ದ್ದರಿಂದ, ಸೈನಿಕರನ್ನುದ್ದೇಶಿಸಿ ಮಾತನಾಡುವಂತೆಯೇ ಮಾತನಾಡಿದರು ಮತ್ತು ಪ್ರತಿಯೊಬ್ಬ ಶಿಬಿರಾರ್ಥಿಗೂ ಸ್ವತಃ ಮಾರ್ಗದರ್ಶನ ಮಾಡಿದರು. ಅಂಬೇಡ್ಕರರೇ ಸ್ಥಾಪಿಸಿದ್ದ ಎಸ್ಸಿ ಫೆಡರೇಶನ್ ಎಂಬ ರಾಜಕೀಯ ಪಕ್ಷದಿಂದ ಸಂಸದರಾಗಿದ್ದ ಕಾರ್ಮಿಕ ನಾಯಕ ಬಾಳಾ ಸಾಹೇಬ್ ಸಾಳುಂಕೆ ಅವರ ದಿನಚರಿಯಲ್ಲಿನ ಮಾಹಿತಿಗಳನ್ನು ಉಖಿಸಿ ಅವರ ಭಾಷಣವನ್ನು ನಾವು ಈ ಕೆಳಕಂಡಂತೆ ವಿಸ್ತರಿಸಬಹುದಾಗಿದೆ: ಆರ್‌ಎಸ್‌ಎಸ್ ಶಿಬಿರದಲ್ಲಿ ಡಾ. ಅಂಬೇಡ್ಕರ್ ಅವರ ಭಾಷಣದ ಭಾವಾನುವಾದ ಈ ದೇಶದ ತರುಣ ಶಕ್ತಿಗೆ ನನ್ನ ಪ್ರಣಾಮಗಳು.

ಈ ಶಿಬಿರದೊಳಗೆ ನಾನು ಬಂದಾಗ ಅಬ್ಬ ಶಿಬಿರಾರ್ಥಿಯ ಬಳಿ ಇಲ್ಲಿ ಪರಿಶಿಷ್ಟ ಜಾತಿಯವರೂ ಶಿಬಿರಾರ್ಥಿಗಳಾಗಿ ಇzರೆಯೇ? ಎಂದು ನಾನು ಕೇಳಿದೆ.
ಅದಕ್ಕೆ ಅವರು ಇಲ್ಲಿ ಪರಿಶಿಷ್ಟ ಜಾತಿಯ ಯಾರೊಬ್ಬರೂ ಇಲ್ಲ. ಕೇವಲ ಭಾರತೀಯರು ಮಾತ್ರ ಇಲ್ಲಿದ್ದೇವೆ ಎಂದರು! ಆದರೂ ನನ್ನೊಳಗಿನ ಸಹಜ ಕುತೂಹಲದಿಂದ ಸೂಕ್ಷ್ಮವಾಗಿ ಅವಲೋಕಿಸಿದಾಗ ಇಲ್ಲಿ ಎಲ್ಲ ಜಾತಿಯ ಯುವಕರೂ ಒಂದಾಗಿ ಕಲೆತಿರುವುದು ನನ್ನ ಗಮನಕ್ಕೆ ಬಂತು. ಜಾತಿ, ಮತಗಳನ್ನು ಮೀರಿ ಸ್ವಚ್ಛ ಮನಸ್ಸಿನಿಂದ ಕೆಲಸ ಮಾಡುವ ಈ ಸಂಘದ ದೃಷ್ಟಿಕೋನವನ್ನು ಆ ಶಿಬಿರಾರ್ಥಿ ಎಷ್ಟು ಸರಳವಾಗಿ ನನಗೆ ತಿಳಿಸಿದರು!
ಈ ಶಿಬಿರದಲ್ಲಿ ನನಗೆ ಎದ್ದು ಕಂಡ ಅಂಶವೆಂದರೆ ಅದು ಶಿಸ್ತು. ಇಲ್ಲಿನ ನಡೆ, ನುಡಿ, ಸಮವಸ, ಕೆಲಸ, ಕಾರ್ಯ, ಸಮಯಪಾಲನೆ ಎಲ್ಲವೂ ಎಷ್ಟೊಂದು ಅಚ್ಚುಕಟ್ಟಾಗಿ ದೆಯೆಂದರೆ, ನಿಮ್ಮನ್ನೆಲ್ಲ ನೋಡಿದಾಗ ನನಗೆ ಸೈನಿಕರೇ ನೆನಪಾಗುತ್ತಾರೆ. ಸೈನ್ಯದಲ್ಲಿಯೂ ಇದೇ ಶಿಸ್ತು, ಇದೇ ಸಮಯಪಾಲನೆ, ಇದೇ ದೇಶಪ್ರೇಮ ಇವೆಲ್ಲವನ್ನೂ ನಾನು ಕಂಡು ಬೆಳೆದವನಾಗಿದ್ದೇನೆ.

ಪೂಜ್ಯ ಡಾಕ್ಟರ್ ಜೀ ಅವರೊಂದಿಗೆ ಭಾರತದ ವ್ಯವಸ್ಥೆಯ ಬಗ್ಗೆ, ಸಮಾನತೆಯ ಬಗ್ಗೆ ಸಾಕಷ್ಟು ಸುದೀರ್ಘವಾದ ಚರ್ಚೆಗಳನ್ನು ನಡೆಸಿz. ಅದರ ಕುರಿತಂತೆ ಅವರ ಕಾರ್ಯಗಳನ್ನೂ ಅರಿತಿz. ಆದರೆ ಅವರ ಕಾರ್ಯ ಯೋಜನೆಯು ಎಷ್ಟೊಂದು ಶಿಸ್ತುಬದ್ಧ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಮಾತ್ರ ಇದೀಗ ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ.

ನಿಜಕ್ಕೂ ನನ್ನ ಕನಸಿನ ಭಾರತವು ನಿಜವಾಗಿ ಇಲ್ಲಿ ಸಾಕಾರಗೊಳ್ಳುತ್ತಿದೆ. ಖಂಡಿತವಾಗಿಯೂ ಈ ಸಂಘಟನೆಯು ಭಾರತದ ಮೂಲೆ ಮೂಲೆಗಳನ್ನೂ ತಲುಪುತ್ತದೆ, ಹಳ್ಳಿ ಹಳ್ಳಿಗಳಲ್ಲೂ ಪಸರಿಸುತ್ತದೆ, ಭಾರತದ ಭವಿಷ್ಯವನ್ನು ಬೆಳಗಿಸುತ್ತದೆ ಎನ್ನುವ ವಿಶ್ವಾಸ ನನಗೀಗ ಬಂದಿದೆ. ಭಾರತದ ಭವಿಷ್ಯತ್ತಿನ ಈ ಮಹತ್ವಪೂರ್ಣ ಕಾರ್ಯಕ್ಕಾಗಿ ಡಾಕ್ಟರ್ ಜೀ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಹಾಗೆಯೇ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ತಿಳಿಸು ತ್ತಿದ್ದೇನೆ.

ಭಾರತ ಮಾತಾ ಕೀ ಜೈ ಹೀಗೆ ಕೊನೆಗೊಳ್ಳುತ್ತದೆ. ಬಾಬಾ ಸಾಹೇಬರ ಷೆಡ್ಯೂಲ್ಡ ಕಾಸ್ಟ್ ಫೆಡರೇಶನ್‌ನಿಂದ ಸ್ಪರ್ಧಿಸಿ ಈ ದೇಶದ ಸಂಸದರಾಗಿದ್ದ ಮತ್ತು ಬಾಬಾ ಸಾಹೇಬರ ಆ ಭೇಟಿಯ ಸಂದರ್ಭದಲ್ಲಿ ಅವರೊಂದಿಗಿದ್ದ ಸ್ವತಃ ಬಾಳಾಸಾಹೇಬ್ ಸಾಳುಂಕೆ ಅವರೇ ಇವೆಲ್ಲವನ್ನೂ ತಮ್ಮ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಅವರ ದಿನಚರಿಯ ಎಲ್ಲ ಸಂಗತಿಗಳನ್ನೂ ಮುದ್ರಿಸಿ ಹೊರತಂದ ಅವರ ಪುತ್ರ ಕಶ್ಯಪ್ ಸಾಳುಂಕೆ ಅವರ ‘ಹಮಾರೆ ಸಾಹಬ’
ಪುಸ್ತಕದಲ್ಲಿ ಈ ಸಂಗತಿಗಳನ್ನು ಯಥಾವತ್ತಾಗಿ ನಮೂದಿಸಲಾಗಿದೆ. ಈ ಕೃತಿ ಅಕ್ಷರ ಮಾರಿಕೊಳ್ಳುವವರನ್ನು ಬೆತ್ತಲು ಮಾಡುವುದು ವಾಸ್ತವ.

ಭಾರತ ಕಂಡ ಶ್ರೇಷ್ಠ ಸಂಶೋಧಕರಲ್ಲಿ ಅಗ್ರಗಣ್ಯರಾದ ಡಾ.ಅಂಬೇಡ್ಕರ್ ಅವರಂತಹ ನಿಷ್ಟುರ ವಿಮರ್ಶಕರು ಆರ್ ಎಸ್‌ಎಸ್‌ನ ಕಾರ್ಯದ ಬಗ್ಗೆ ಅತೀವವಾದ ಅಭಿಮಾನ ಮತ್ತು ಹೆಮ್ಮೆಯ ನಿಲುವು ಹೊಂದಿರುವಾಗ, ಸುಖಾ ಸುಮ್ಮನೆ ಆರ್‌ಎಸ್‌ಎಸ್‌ನಂತ ಸಾಮಾಜಿಕ ಸಂಘಟನೆಯನ್ನು ಟೀಕಿಸು ವುದು, ನಕಾರಾತ್ಮಕವಾಗಿ ಬಿಂಬಿಸುವುದು ವ್ಯರ್ಥ ಪ್ರಯತ್ನವೇ ಸರಿ.

(ಲೇಖಕರು: ಸಂವಿಧಾನ ತಜ್ಞ)