Monday, 30th December 2024

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ…

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್‌

dhyapaa@gmail.com

ನನ್ನಲ್ಲಿ ಆಸೆಗಳಿಲ್ಲ.
ನನ್ನಲ್ಲಿ ಆಸೆಗಳು ಇಲ್ಲವಾದದ್ದರಿಂದ
ನಾನು ಮಹತ್ವಾಕಾಂಕ್ಷಿಯಲ್ಲ.
ನನ್ನಲ್ಲಿ ಮಹತ್ವಾಕಾಂಕ್ಷೆ ಇಲ್ಲವಾದದ್ದರಿಂದ
ನಾನು ಶ್ರಮಪಡುವುದಿಲ್ಲ.
ನಾನು ಶ್ರಮಪಡುವುದಿಲ್ಲವಾದದ್ದರಿಂದ
ನಾನು ಸ್ಪರ್ಧಿಸುವುದಿಲ್ಲ.
ನಾನು ಸ್ಪರ್ಧಿಸುವುದಿಲ್ಲವಾದದ್ದರಿಂದ
ನಾನು ಸೋಲುವುದಿಲ್ಲ. ನಾನು ಸೋಲುವುದಿಲ್ಲವಾದದ್ದರಿಂದ ನಾನು ಯಾವಾಗಲೂ ಗೆಲ್ಲುತ್ತೇನೆ. ಇವು ನನ್ನ ಮಾತುಗಳು ಎಂಬ ತಪ್ಪು ಗ್ರಹಿಕೆ ಬೇಡ.
ಇದನ್ನು ಹೇಳಿದ್ದು ಲಾವೊ ತ್ಸು. ಲಾವೊ ತ್ಸು ಹೆಸರು ಕೇಳದವರು ಕಡಿಮೆ. ಫಿಲಾಸಫಿ ಅಥವಾ ತತ್ವಜ್ಞಾದಲ್ಲಿ ಬಹು ದೊಡ್ಡ ಹೆಸರು ಅದು. ಕ್ರಿ. ಪೂ. 500 ರ ಸಮಯದಲ್ಲಿ ಬದುಕಿ ಬಾಳಿದ ಲಾವೊ ತ್ಸು, ಚೀನಾದ ಐತಿಹಾಸಿಕ ವ್ಯಕ್ತಿ.

ಪ್ರಪಂಚದಲ್ಲಿ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂಬುದನ್ನು ’ತಾವೊ’ ತತ್ವಶಾಸ್ತ್ರದ ಮೂಲಕ ಬೋಧಿಸಿದ ಗುರು ಆತ. ಇರಲಿ, ನಾವೆಲ್ಲ ’ಅತಿ ಆಸೆ ಗತಿ ಕೆಡಿಸಿತು’ ಎಂಬ ಗಾದೆ ಮಾತು ಕೇಳಿದ್ದೇವೆ. ’ಆಸೆಯೇ ದುಃಖಕ್ಕೆ ಮೂಲ ಕಾರಣ’ ಎಂದು ಗೌತಮ ಬುದ್ಧ ಹೇಳಿದ್ದನ್ನೂ ತಿಳಿದಿದ್ದೇವೆ. ಅತಿ ಆಸೆಯಿಂದ ಆಗುವ ಪರಿಣಾಮಗಳ ಕುರಿತು ಸಾಕಷ್ಟು ಕಥೆ ಕೇಳಿದ್ದೇವೆ. ರೈತನೊಬ್ಬ ಪ್ರತಿನಿತ್ಯ ಚಿನ್ನದ ಮೊಟ್ಟೆ ಇಡುತ್ತಿದ್ದ ತನ್ನ ಕೋಳಿಯ ಹೊಟ್ಟೆ ಕೊಯ್ದ ಕಥೆಯಾಗಲಿ; ತಾನು ಮುಟ್ಟಿದ್ದೆಲ್ಲ ಚಿನ್ನವಾಗಬೇಕು ಎಂದು ವರ ಪಡೆದ ಮೈದಾಸ ತನ್ನ ಮಗಳನ್ನು ಮುಟ್ಟಿದಾಗ ಆಕೆ ಗೊಂಬೆಯಾದ ಕಥೆಯಾಗಲಿ; ಮರ ಕಡಿಯಲು ಹೋದ ತನ್ನ ಪಕ್ಕದ ಮನೆಯವನ ಕೊಡಲಿ ನೀರಿನಲ್ಲಿ ಬಿದ್ದಾಗ ದೇವರು ಪ್ರತ್ಯಕ್ಷನಾಗಿ ಬಂಗಾರದ ಕೊಡಲಿ ನೀಡಿದ ಎಂಬ ದೃಷ್ಟಾಂತ ಕೇಳಿ, ತಾನೂ ಬಂಗಾರದ ಕೊಡಲಿ ಪಡೆಯಬೇಕೆಂದು ಇದ್ದ ಕಬ್ಬಿಣದ ಕೊಡಲಿಯನ್ನೂ ಕಳೆದು ಕೊಂಡವನ ಕಥೆಯಾಗಲಿ; ಇವೆಲ್ಲ ಅತಿ ಆಸೆಯಿಂದ ಆಗುವ ಪರಿಣಾಮಗಳ ಕುರಿತು ಇರುವ ಕಥೆಗಳು.

ಆದರೆ ಈಗ ನಾನು ಹೇಳಲು ಹೊರಟಿರುವುದು ಅತಿ ಆಸೆಯ ಕುರಿತಾಗಿ ಅಲ್ಲ. ಲಾವುತ್ಸು ಅಥವಾ ಬುದ್ಧ ನಂತಹ ಸಾಧಕರು ಹೇಳಿರುವ ಸಾಮಾನ್ಯ ಆಸೆಯ ವಿಷಯ. ಅತಿ ಆಸೆ ಎನ್ನುವುದು ಹುಟ್ಟಬೇಕಾದರೆ ಮೊದಲು ಆಸೆ ಎನ್ನುವುದು ಇರಬೇಕಲ್ಲ! ಆಸೆ ಎಂಬ ಬೀಜ ಮೊಳಕೆ ಒಡೆಯದೇ ಇರುವುದು ಕಷ್ಟ. ಆಸೆಯ ಬೀಜವೇ ಮುಂದೊಂದು ದಿನ ಅತಿ ಆಸೆಯ ವೃಕ್ಷವಾಗಿ ಬೆಳೆದು ನಿಲ್ಲುತ್ತದೆ. ಹಾಗಾಗಿ, ಅತಿ ಆಸೆಗೆ ಮೂಲ ಕಾರಣ ಸಣ್ಣ ಆಸೆ. ಮನುಷ್ಯ ತನ್ನ ಜೀವನದಲ್ಲಿ ಅದೆಷ್ಟೋ ತಪ್ಪುಗಳನ್ನು ಮಾಡಿ ಪಶ್ಚಾತ್ತಾಪಪಡುತ್ತಾನೆ. ಒಂದು ಚಿಕ್ಕ ಮಗುವನ್ನೇ ನೋಡಿ, ತಾನು ಆಡಲು ಬಯಸಿದ ಆಟಿಕೆ ವಸ್ತುವನ್ನೋ, ಗೊಂಬೆಯನ್ನೋ ಪಡೆಯಲು ಅದು ಏನೆಲ್ಲ ಕಸರತ್ತು ಮಾಡುತ್ತದೆ.

ಶಾಪಿಂಗ್ ಮಾಲ್‌ನಲ್ಲಿ ಅಥವಾ ಸುಪರ್ ಮಾರ್ಕೆಟ್‌ನಲ್ಲಿ ಮಕ್ಕಳು ಆಟಿಕೆ ಕೊಡಿಸುವಂತೆ ಅಳುವುದು, ರಚ್ಚೆ ಹಿಡಿಯುವುದು, ಅಷ್ಟೇ ಏಕೆ, ನೆಲದಲ್ಲಿ ಬಿದ್ದು
ಹೊರಳಾಡುವುದನ್ನೂ ನಾವು ನೋಡುತ್ತೇವೆ. ಒಮ್ಮೆ ಆ ಆಟಿಕೆ ಕೊಡಿಸಿದರೆನ್ನಿ, ಮಗು ಇನ್ನೊಂದು ಆಟಿಕೆಯ ಕಡೆಗೆ ಆಕರ್ಷಿತವಾಗುತ್ತದೆ. ಮೊದಲಿನ ಆಟಿಕೆಯ ವಸ್ತು ತನ್ನ ಬಳಿ ಇದ್ದರೂ, ಅಥವಾ ಅದನ್ನು ಬಿಟ್ಟಾದರೂ ಇನ್ನೊಂದು ವಸ್ತುವಿನ ಕಡೆಗೆ ಅದರ ಅಗಮನ ಹರಿಯುತ್ತದೆ. ಒಂದೇ ಕ್ಷಣದಲ್ಲಿ ಬಯಕೆ ಬದಲಾಗುತ್ತದೆ. ತಾನು ಕಂಡ ಇನ್ನೊಂದು ವಸ್ತುವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದರ ಕುರಿತು ಅಲ್ಲಿಯೇ ಯೋಚನೆ ಆರಂಭವಾಗುತ್ತದೆ. ಮೊದಲು ಕೊಂಡ ವಸ್ತುವಿ ನೊಂದಿಗೆ ಸರಿಯಾಗಿ ಐದು ನಿಮಿಷವೂ ಆಟ ಆಡಿರುವುದಿಲ್ಲ, ಸಮಯ ಕಳೆದಿರುವುದಿಲ್ಲ.

ಅದು ಕೈಯಲ್ಲಿ ಇರುವಾಗಲೇ ಮಗು ಇನ್ನೊಂದು ವಸ್ತುವಿನ ಹಿಂದೆ ಓಡುತ್ತದೆ. ಕ್ರಮೇಣ ಮಗು ಬೆಳೆದು ದೊಡ್ಡದಾಗುತ್ತದೆ. ದೊಡ್ದದಾದಂತೆ ಅದರ ಮನಃಸ್ಥಿತಿ ಬದಲಾಗುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ, ಬದಲಾದ ಮನಃ ಸ್ಥಿತಿಯಲ್ಲಿ ಆಟಿಕೆ ವಸ್ತುಗಳ ಸ್ಥಾನವನ್ನು ನಿಜವಾದ ವಸ್ತುಗಳು ಆಕ್ರಮಿಸಿಕೊಳ್ಳುತ್ತವೆ. ಸಣ್ಣ ಪೀಪಿ ಅಥವಾ ತುತ್ತೂರಿಯ ಜಾಗದಲ್ಲಿ ನಿಜವಾದ ಸ್ಯಾಕ್ಸೊಫೋನ್, ಪಿಯಾನೊ, ಗಿಟಾರ್ ಬಂದು ಕುಳಿತುಕೊಳ್ಳುತ್ತದೆ. ಸಣ್ಣ ಬ್ಲಾಕ್‌ನಿಂದ ಕಟ್ಟುವ ಮನೆಯ ಬದಲು ಇಟ್ಟಿಗೆ, ಸಿಮೆಂಟ್‌ನಿಂದ ಕಟ್ಟಿದ ಮನೆ, ಜತೆಗೆ, ಇಂಟೀರಿಯರ‍್ಸ್, ಪೀಠೋಪಕರಣಗಳು.

ಪುಟ್ಟ ಪುಟ್ಟ ಅಡುಗೆ ಮನೆಯ ಆಟಿಕೆಯ ಬದಲು ವಿದ್ಯುತ್ ಅಥವಾ ಗ್ಯಾಸ್ ಒಲೆ, ಫ್ರಿಜ್, ಮೈಕ್ರೊವೇವ್, ದೊಡ್ಡ ಕಟ್ಟೆ ಇರುವ ಅಡುಗೆ ಮನೆ. ಸಣ್ಣ ಬೈಸಿಕಲ್ ಬದಲು ನಿಜವಾದ ಬೈಸಿಕಲ್ ಅಥವಾ ಮೋಟರ್ ಸೈಕಲ್, ಪ್ಲಾಸ್ಟಿಕ್ ಕಾರಿನ ಬದಲು ಝೆನ್, ಸ್ವಿಫ್ಟ್, ಐ ಟೆನ್, ಇನ್ನೊವಾ ಕಾರುಗಳು, ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಮರ್ಸಿಡಿಸ್, ಬಿಎಂಡ್ಲ್ಯು, ರೇಂಜ್ ರೋವೆರ್, ಫೆರಾರಿ ಇತ್ಯಾದಿ. ಅದೂ ಸಾಲದಿದ್ದಾಗ ಖಾಸಗಿ ವಿಮಾನ, ಪುಟ್ಟ ಹಡಗು. ಈ ಆಸೆಯ ಪಯಣ ನಿರಂತರ ಸಾಗುತ್ತಲೇ ಇರುತ್ತದೆ.

ಅದು ಅಲ್ಲಿಗೇ ನಿಲ್ಲುವುದಿಲ್ಲ. ಹಳ್ಳಿಯಲ್ಲಿರುವವನಿಗೆ ಪಟ್ಟಣದಲ್ಲಿ, ನಂತರ ಪಟ್ಟಣದಿಂದ ನಗರ, ನಗರದಿಂದ ಮಹಾನಗರ, ನಂತರ ವಿದೇಶದಲ್ಲಿ ನಮ್ಮದೊಂದು ಮನೆ ಇರಬೇಕು ಎಂಬ ಬಯಕೆ ಆರಂಭವಾಗುತ್ತದೆ. ನಾಳೆ ಚಂದ್ರ ಅಥವಾ ಮಂಗಳ ಗ್ರಹಗಳು ಮನುಷ್ಯ ಉಳಿಯಲು ಯೋಗ್ಯ ಎಂದು ತಿಳಿದರೆ ಅಲ್ಲಿಯೂ ಒಂದು ಮನೆ ಕಟ್ಟಲು ಮನುಷ್ಯ ತುದಿಗಾಲಲ್ಲಿ ನಿಂತಿದ್ದಾನೆ. ಒಂದು ವೇಳೆ ಅದನ್ನೆಲ್ಲ ಪಡೆದರೂ ಮನುಷ್ಯ ಸಂತೋಷದಿಂದ ಇರುತ್ತಾನೆ ಎಂಬ ಯಾವ
ಭರವಸೆಯೂ ಇಲ್ಲ. ತಾನು ಎಷ್ಟೆಲ್ಲ ಕಷ್ಟ ಪಟ್ಟು, ಹಣ ಖರ್ಚು ಮಾಡಿ, ಸಮಯ ವ್ಯಯಿಸಿ ಸಂತೋಷದಿಂದ ಇರುತ್ತೇನೆ ಅಂದುಕೊಂಡಿದ್ದವನ ನೆಮ್ಮದಿ ಹಾಳು
ಮಾಡಲು ಪಕ್ಕದ ಮನೆಯವರೊಂದಿಗಿನ ಜಗಳ, ಪಕ್ಕದ ಮನೆಯಿಂದ ಬರುವ ವಾಸನೆ, ಮಗುವಿನ ಅಳು, ಬಾಲಕರ ಪೋಕರಿತನ ಏನಾದರೂ ಒಂದು
ಸಾಕು. ಆತನ ನಿzಗೆಡಿಸಲು ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದೇ ಸಾಕು.

ವಿಪರ್ಯಾಸ ಎಂದರೆ ಮನುಷ್ಯ ತನ್ನ ಆಸೆಯನ್ನು ಪೂರೈಸಿಕೊಂಡರೆ ತಾನು ಸಂತುಷ್ಟನಾಗಿರುತ್ತೇನೆ ಎಂಬ ಭ್ರಮೆಯಲ್ಲಿಯೇ ಇರುತ್ತಾನೆ. ಅದು ಸತ್ಯಕ್ಕೆ ಬಹಳ ದೂರ. ಮನುಷ್ಯನ ಮನಸ್ಸು ಬಹಳ ಚಂಚಲ. ಅದು ನಿಂತಲ್ಲಿ ನಿಲ್ಲುವುದೇ ಇಲ್ಲ. ಎಲ್ಲಾ ಕಡೆ ಸುತ್ತಾಡಿ, ಬೇಕಾದ, ಬೇಡಾದ ಕಡೆಗೆಲ್ಲ ತಿರುಗಾಡುತ್ತಿರುತ್ತದೆ. ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಅಲೆದಾಡುತ್ತಿರುತ್ತದೆ. ಒಂದು ಕಡೆ ಸ್ಥಿರವಾಗಿ ನಿಲ್ಲದ ವಸ್ತುವಿಗೆ ಹೆಸರು ಏನೆಂದು ಕೇಳಿದರೆ, ಬಹುಶಃ ಮನಸ್ಸು ಎಂಬ ಉತ್ತರವೇ ಸರಿಹೋಗ ಬಹುದು. ಮನಸ್ಸು ಮನುಷ್ಯನ ಸ್ವಾಽನದಲ್ಲಿರು ವುದು ತೀರಾ ಎಂದರೆ ತೀರಾ ಕಮ್ಮಿ.

ಎಲ್ಲಾ ಲಕ್ಷಕ್ಕೆ, ಕೋಟಿಗೆ ಒಂದೋ ಎರಡೋ ಸಿಕ್ಕಿದರೆ ದೊಡ್ದದು. ಮನಸ್ಸಿನ ವಿಶೇಷತೆ ಎಂದರೆ, ಅದು ಪೂರ್ವಾಗ್ರಹ ಪೀಡಿತವಾಗಿ ಅಲೆದಾಡುತ್ತಿರುತ್ತದೆ. ತನಗೆ ಬೇಕಾದದ್ದು ಸಿಕ್ಕಿದ ಕೂಡಲೆ ಬೇರೆ ಏನನ್ನೋ ಆಶಿಸುತ್ತದೆ. ಪುನಃ ಆ ಆಸೆಯ ಬೆನ್ನು ಹತ್ತಿ ಓಡಲಾರಂಭಿಸುತ್ತದೆ. ಬಯಸಿದ್ದನ್ನು ಪಡೆದ ಮರು ಕ್ಷಣದಿಂದಲೇ ಸುಪ್ತ ವಾಗಿ ಅಡಗಿ ಕುಳಿತಿದ್ದ ಇತರ ಆಸೆಗಳು ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಪರಿಣಾಮವಾಗಿ, ಮನುಷ್ಯ ತಾನು ಗಳಿಸಿದ್ದನ್ನು ಅನುಭವಿಸದೇ, ಸುಖ ಪಡದೆ, ಇನ್ನುಳಿದ ಬೇಕುಗಳ ಬೆನ್ನು ಹತ್ತುತ್ತಾನೆ.

ಒಟ್ಟಿನಲ್ಲಿ ಮನಸ್ಸು ತಾನೇ ಕಷ್ಟಪಟ್ಟು ಗಳಿಸಿದ್ದನ್ನು ಸಂಪೂರ್ಣ ಅನುಭವಿಸುವುದೂ ಇಲ್ಲ, ಇನ್ನೂ ಬೇಕೆಂಬ ಆಸೆಯಿಂದ ಹೊರಗೆ ಬರುವುದೂ ಇಲ್ಲ. ಮನುಷ್ಯ ತನ್ನ ಬಯಕೆ ಪೂರ್ಣಗೊಳ್ಳದಿದ್ದಾಗ ಅಥವಾ ತಾನು ಬಯಸಿದ್ದನ್ನು ಪಡೆಯಬೇಕೆಂದು ಹಾತೊರೆಯುತ್ತಿರುವಾಗ, ಸುತ್ತ ಮುತ್ತ ನಡೆಯುವ ವರ್ತಮಾನದ ಕಡೆ ಗಮನ ಹರಿಸುವುದಿಲ್ಲ, ಅಕ್ಕ ಪಕ್ಕದ ಆಗು ಹೋಗುಗಳ ಕಡೆಗೆ ಲಕ್ಷ್ಯ ಕೊಡುವುದಿಲ್ಲ. ತನ್ನ ಅಪೂರ್ಣವಾದ ಬಯಕೆಯ ಕುರಿತೇ ಯೋಚಿಸುತ್ತಿರುತ್ತಾನೆ. ಅನೇಕ ಬಾರಿ ಸಂಪೂರ್ಣ ಲಕ್ಷ್ಯ ಮುಂದೆ ಗಳಿಸಬೇಕಾದುದರ ಕಡೆಗೇ ಇರುವುದ ರಿಂದ, ಹಿಂದೆ ಗಳಿಸಿದ್ದರ ಕಡೆ ಗಮನವಿಲ್ಲದೇ ಅರ್ಥಹೀನವಾಗುತ್ತದೆ.

ಪೂರ್ಣಗೊಳ್ಳದ ಆಸೆಗಳು ದೇಹದಲ್ಲಿ ಆದ ಒಂದು ಸಣ್ಣ ಗಾಯದಂತೆ. ಆ ಸಣ್ಣ ಗಾಯದ ಕಡೆಗೇ ಹೆಚ್ಚಿನ ಗಮನ ಇರುತ್ತದೆಯೇ ವಿನಃ ಆರೋಗ್ಯದಿಂದ ಇರುವ ದೇಹದ ಉಳಿದ ಭಾಗದ ಕಡೆಗಲ್ಲ. ನೀವು ಗಮನಿಸಿ, ಒಂದು ಹಲ್ಲು ನೋವಾದರೆ ಇಡೀ ದಿನ ನಮ್ಮ ಲಕ್ಷ್ಯವೆಲ್ಲ ಹಲ್ಲಿನ ಕಡೆಗೆ, ತಲೆ ನೋವಾದರೆ ಗಮನ ಎಲ್ಲ ತಲೆಯ ಕಡೆಗೆ ಇರುತ್ತದೆಯೇ ವಿನಃ ಆರೋಗ್ಯದಿಂದ ಇರುವ, ಸಧೃಢವಾಗಿರುವ ಇತರ ಭಾಗಗಳ ಕಡೆ ಗಮನ ಇರುವುದಿಲ್ಲ. ಇದನ್ನೇ ಭೌತಿಕ ಜಗತ್ತಿಗೆ ಹೋಲಿಸಿದರೆ, ಮನುಷ್ಯ ಈಡೇರದ ಬಯಕೆಯ ಬೆನ್ನು ಹತ್ತಿ, ಅದುವರೆಗೆ ಗಳಿಸಿದ್ದರೆಡೆಗೆ ಸಂಪೂರ್ಣ ಗಮನ ಹರಿಸುವುದಿಲ್ಲ.

ಅದುವರೆಗೆ ಗಳಿಸಿದ ಯಾವುದೇ ರೀತಿಯ ಶ್ರೀಮಂತಿಕೆಯನ್ನು ಪರಿಪೂರ್ಣ ಅನುಭವಿಸುವುದಿಲ್ಲ. ಪ್ರತಿಯೊಬ್ಬನೂ ತಾನು ಹೆಚ್ಚಿನದ್ದು ಏನನ್ನಾದರೂ ಸಾಧಿಸ ಬೇಕು ಎಂಬ ಆಸೆಯ ಬೆನ್ನೇರಿ ಹೋಗುತ್ತಾನೆ. ಬಹುತೇಕ ಬಾರಿ ಅದು ಈಡೇರದೇ ನಿರಾಶನೂ ಆಗುತ್ತಾನೆ. ನಿರಂತರವಾಗಿ ಈಡೇರದ ಆಸೆಯಲ್ಲಿ ಬಂಧಿ ಯಾಗಿರುವುದರಿಂದ ವರ್ತಮಾನವನ್ನು ಆಸ್ವಾದಿಸದೆಯೇ ಕಳೆಯುತ್ತಾನೆ. ಆಸೆಯ ಉಪಶಮನವೆಂಬ ತಂಗುದಾಣ ತಲುಪಲು ಇರುವುದು ಎರಡೇ ದಾರಿ. ಒಂದು, ಆಸೆಯನ್ನು ಈಡೇರಿಸಿಕೊಳ್ಳುವುದು. ಇನ್ನೊಂದು ಆಸೆಯನ್ನೇ ಕಿತ್ತು ಹಾಕುವುದು. ಆಸೆಯ ಪ್ರಾಮುಖ್ಯತೆ, ಪರಿಣಾಮಗಳನ್ನು ಮನಗಂಡು ಅದರಿಂದ ದೂರವಿರುವುದು ಆಸೆಯನ್ನು ಈಡೇರಿಸಿಕೊಳ್ಳುವುದಕ್ಕಿಂತ ಸುಲಭ.

ತನ್ನಲ್ಲಿ ಇಲ್ಲವಾದದ್ದೆಲ್ಲ ಬೇಕು ಎಂದು ಬಯಸುವುದರ ಬದಲಾಗಿ ಯಾವುದು ಅತಿ ಅವಶ್ಯವೋ ಅದನ್ನು ಪಡೆಯುವುದಕ್ಕೆ ಪ್ರಯತ್ನಿಸಬೇಕು. ಬಹಳಷ್ಟು ಸಲ
ಮನುಷ್ಯನಿಗೆ’ ಬೇಕು ಎಂದು ಅನಿಸುವ ವಸ್ತುವಿನ ‘ಅವಶ್ಯಕತೆ’ಯೇ ಇರುವುದಿಲ್ಲ. ಉದಾಹರಣೆಗೆ, ಗುಡ್ಡಗಾಡು ಪ್ರದೇಶದ, ರಸ್ತೆ ಸರಿ ಇಲ್ಲದ ಹಳ್ಳಿಯಲ್ಲಿರುವ ಒಬ್ಬನಿಗೆ ತಿರುಗಾಟಕ್ಕೆ ಒಂದು ವಾಹನ ಬೇಕು. ಅಂತಹ ರಸ್ತೆಯಲ್ಲಿ ಓಡಾಡಲು ಮಾರುತಿ ಒಮ್ನಿ ಸಾಕಾದರೂ, ಗುಣಮಟ್ಟದಲ್ಲಿ ಇನ್ನೂ ಚೆನ್ನಾಗಿರುವ, ಸ್ವಲ್ಪ ದೊಡ್ಡ ಜೀಪ್ ಬೇಕು ಎಂದರೆ ಅದೂ ಸಾಧುವೇ. ಆದರೆ ಮನೆಯಲ್ಲಿರುವ ಎಲ್ಲಾ ಐಷಾರಾಮಿ ವಸ್ತುಗಳು, ವ್ಯವಸ್ಥೆಗಳನ್ನು ಹೊಂದಿದ ಹಡಗಿನಂತಹ ರೋಲ್ಸ್‌ ರಾಯ್ಸ್ ಲೆಮೋಸಿನ್ ಬೇಕು ಎಂದರೆ? ಅದು ಅತಿಯಾಯಿತು ಎಂದೆನಿಸುವುದಿಲ್ಲವೇ? ಅಷ್ಟಕ್ಕೂ ಗುಡ್ಡ ಹತ್ತಲು ಜೀಪ್ ಒಳ್ಳೆಯದೇ ವಿನಃ ಲಿಮೋ ಅಲ್ಲವಲ್ಲ.

ಮನುಷ್ಯನಲ್ಲಿ ಇಂತಹ ಅದೆಷ್ಟೋ ಶೋಕಿಗಳು ಮೂಡುವುದುಂಟು. ಇದು ಒಂದು ಉದಾಹರಣೆ ಮಾತ್ರ. ಮನೆಗೆ ಬರುವ ನೀರು ಪುರಸಭೆಯ ಜಂಗು ಹಿಡಿದ ತೊಟ್ಟಿಯಿಂದ ಎಂದಾದರೆ, ಮನೆಯ ನಳ ಹಿತ್ತಾಳಿಯದ್ದಾದರೇನು, ಚಿನ್ನದ್ದಾದರೇನು ಹಾಗಾದರೆ ಬಯಕೆಗಳೇ ಇಲ್ಲದೆ ಬದುಕಲು ಸಾಧ್ಯವೇ? ಮನುಷ್ಯ ಎಂದ ಮೇಲೆ ಬಯಕೆಗಳು ಸಹಜ. ಆದರೆ ಅದೇ ಬಯಕೆ ದುಃಖಕ್ಕೂ ಕಾರಣವಾಗಬಹುದು. ಆದ್ದರಿಂದ ಬೇಕು-ಬೇಡಗಳನ್ನು ನಿರ್ಣಯಿಸಿ, ಆಸೆ-ಅಗತ್ಯತೆಯನ್ನು ತೂಗಿ ನಡೆಯಬೇಕು.

ಅನೇಕರು ಆಸೆಯ ಗಿರಿಯ ತುದಿ ತಲುಪುವುದೇ ಪ್ರಮುಖವೆಂದು ಭಾವಿಸುತ್ತಾರೆ. ಬಯಕೆಯ ಪರ್ವತದ ತುದಿ ತಲುಪುವ ತವಕದಲ್ಲಿ, ಆರಂಭ ಮತ್ತು ಅಂತ್ಯದ ನಡುವಿನ ಪ್ರಯಾಣದ ಹಾದಿಯ ಸುಖವನ್ನೇ ಅನುಭವಿಸುವುದಿಲ್ಲ. ಉಳಿದವರಿಗಿಂತ ಮೊದಲು ತಾನು ಶಿಖರದ ತುದಿ ತಲುಪಬೇಕು ಎಂಬುದೇ ಲಕ್ಷ್ಯವಾಗಿ ರುತ್ತದೆ. ದಾರಿಯುದ್ದಕ್ಕೂ ಸಿಗುವ ಹಣ್ಣಿನ ಸಿಹಿ, ಹೂವಿನ ಸಿರಿಯನ್ನು ಅನುಭವಿಸದೇ ಶಿಖರದ ತುದಿ ತಲುಪಿದರೂ ಪ್ರಯೋಜನವಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಮ್ಮ ಪ್ರಯಾಣ ನಮ್ಮದಾಗಿರಬೇಕು. ನಮ್ಮ ಅವಶ್ಯಕತೆ ಪೂರೈಸಿಕೊಳ್ಳಬೇಕೆಂಬುದು ಸರಿ. ಪಕ್ಕದಲ್ಲಿರುವವನನ್ನು ನೋಡಿ ನಾನು ಅವನಂತೆ ಆಗಬೇಕೆನ್ನುವ ಆಸೆ ಎಷ್ಟು ಸರಿ? ನಾನೂ ಒಳ್ಳೆಯ ಉದ್ಯಮಿಯಾಗಬೇಕು, ನಟನಾಗಬೇಕು, ಆಟಗಾರನಾಗಬೇಕು ಎನ್ನುವುದು ಸರಿ. ಆದರೆ
ಇನ್ನೊಬ್ಬನಂತೆ ಆಗಬೇಕು ಎನ್ನುವ ಆಸೆ ಎಷ್ಟು ಸರಿ? ನಮ್ಮ ಸ್ಪರ್ಧೆ ಏನಿದ್ದರೂ ನಮ್ಮಲ್ಲಿ ಇರಬೇಕು.

ಇತರರೊಂದಿಗೆ ಸ್ಪಽಸಿದರೆ ಸೋಲಬಹುದು. (ಇತರ ಎಂದರೆ ಆಸೆ ಎಂದು ಬೇರೆ ಹೇಳಬೇಕಿಲ್ಲ ತಾನೆ?) ಆದರೆ ತನ್ನೊಂದಿಗಿನ ಸ್ಪರ್ಧೆಯಲ್ಲಿ ನಾವು ಸೋಲುವು ದಿಲ್ಲ. ಒಂದು ವೇಳೆ ಸೋತರೂ ಗೆಲುವು ನಮ್ಮದೇ ಆಗಿರುತ್ತದೆ. ಬೇರೆಯವರಂತೆ ಆಗಬೇಕು ಎನ್ನುವ ಆಸೆಯ ಬಿಸಿಲುಕುದುರೆ ನಮಗೆ ಏಕೆ ಬೇಕು? ನಮ್ಮ ಅವಶ್ಯಕತೆಯನ್ನು ಪೂರೈಸುವ ವಾಸ್ತವದ ಕುದುರೆ ಸಾಕಲ್ಲವೇ? ಈಗ ಮೇಲಿನ ಸಾಲುಗಳನ್ನು ಮತ್ತೊಮ್ಮೆ ಓದಿ. ಲಾವೊ ತ್ಸು ಹೇಳಿದ್ದು ಸರಿ ಅಲ್ಲವೇ?