Tuesday, 26th November 2024

S G Hegde Column: ಕಂಪನಿಗಳಲ್ಲಿ ಅತಿಯಾದ ಕೆಲಸದ ಒತ್ತಡವೇಕೆ ? ಪರಿಹಾರವೇನು ?

ವಿಶ್ಲೇಷಣೆ

ಎಸ್‌.ಜಿ.ಹೆಗಡೆ

ಕಾರ್ಪೊರೇಟ್ ಕೆಲಸದ ಒತ್ತಡದ ವಿಚಾರದಲ್ಲಿ ಅನೇಕ ಸಂಗತಿಗಳು ಆಗಾಗ ಪ್ರಕಟವಾಗುತ್ತಲೇ ಇವೆ. ಆನ್ನಾ ಪ್ರಕರಣವು ಮೊದಲನೆಯದೇನೂ ಅಲ್ಲ. ಆರು ತಿಂಗಳ ಈಚೆಗಷ್ಟೇ, ಕಾರ್ಯದೊತ್ತಡದಿಂದ ಮೃತನಾದ ಎನ್ನಲಾದ ಹೈ ಪ್ರೊಫೈಲ್ ಗ್ಲೋಬಲ್ ಕನ್ಸಲ್ಟಿಂಗ್ ಕಂಪನಿಯೊಂದರ 25ರ ಹರೆಯದ ಉದ್ಯೋಗಿಯೊಬ್ಬನ ನಿದರ್ಶನವನ್ನೂ ಈ ಸಂದರ್ಭದಲ್ಲಿ ಕೆಲವರು ಪ್ರಸ್ತಾಪಿಸಿದ್ದಾರೆ. ಇನ್ನೂ ಅನೇಕ ಸೂಕ್ಷ್ಮ ಅನುಭವಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಆನ್ನಾ ಸೆಬಾಸ್ಟಿಯನ್ ಪೆರಿಯಾಲ್ ಎಂಬ 26 ವರ್ಷದ ಯುವತಿ ಇತ್ತೀಚೆಗೆ ನಿಧನಳಾದ ಸಂಗತಿ ವ್ಯಾಪಕವಾಗಿ ಸುದ್ದಿಯಾಗಿದೆ. ಈಕೆ ಪುಣೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ತನ್ನ ಮೊದಲ ಉದ್ಯೋಗ ಪಡೆದು 4 ತಿಂಗಳಾಗಿ ತ್ತಷ್ಟೇ. ಈಕೆ ಚಾರ್ಟರ‍್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಇತ್ತೀಚೆಗಷ್ಟೇ ವೃತ್ತಿ ಜೀವನಕ್ಕೆ ಪದಾರ್ಪಣ ಮಾಡಿದವಳು, ಕಳೆದ ಜುಲೈನಲ್ಲಿ ತನ್ನ ಸಿಎ ಘಟಿಕೋತ್ಸವದಲ್ಲಿ ಭಾಗಿಯಾದವಳು. ಕಠಿಣವೂ ಸ್ಪರ್ಧಾತ್ಮಕವೂ ಆದ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣಳಾಗಿದ್ದ ಆನ್ನಾ ಪ್ರತಿಭಾವಂತೆ ಯೆನ್ನುವುದು ಸ್ಪಷ್ಟ. ಶಾಲಾ ದಿನಗಳಿಂದಲೂ ಹೆಚ್ಚಿನ ಅಂಕ ಪಡೆದು ಮೇಲಿನ ಕ್ರಮಾಂಕದಲ್ಲಿದ್ದ ಈಕೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧಕಿಯಾಗಿದ್ದಳು.

ಇಂಥ ಅದ್ಭುತ ಹಿನ್ನೆಲೆಯಿಂದ ಬಂದು ಕೆಲಸಕ್ಕೆ ಸೇರಿದ್ದ ಆನ್ನಾಳ ಬದುಕು ಇಷ್ಟು ಬೇಗನೆ ಮೊಟಕಾಗಿದ್ದು ವಿಷಾದ ನೀಯ. ಆನ್ನಾ ಸಾವಿನ ವಿಷಯ ವ್ಯಾಪಕ ಸಾಮಾಜಿಕ ಗಮನ ಸೆಳೆದಿದ್ದು ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರಿಗೆ ಆಕೆಯ ತಾಯಿ ಅನಿತಾ ಅಗಸ್ಟಿನ್ ಬರೆದ ಪತ್ರದಿಂದ ಅನ್ನಬಹುದು. ಆ ಪತ್ರದ ಸಾರಾಂಶ ಹೀಗಿದೆ: “ಓದು ಮುಗಿಸಿ ಪ್ರತಿಷ್ಠಿತ ಕಂಪನಿಗೆ ಕೆಲಸಕ್ಕೆ ಸೇರುವಾಗ ಮಗಳು ಉತ್ಸಾಹಿತಳಾಗಿದ್ದಳು, ಕನಸು ಹೊಂದಿ ದ್ದಳು. ಆದರೆ ಸೇರಿದ 4 ತಿಂಗಳಲ್ಲಿಯೇ ಇಲ್ಲವಾದಳು. ಉದ್ಯೋಗಕ್ಕೆ ಸೇರಿದ ಹೊಸತರಲ್ಲಿ ‘ಕಠಿಣ ಪರಿಶ್ರಮವೇ ಯಶಸ್ಸಿನ ಕೀಲಿಕೈ’ ಎಂದು ನಂಬುತ್ತಾ ಹೆಚ್ಚು ಹೆಚ್ಚು ಕೆಲಸದಲ್ಲಿ ತೊಡಗಿಕೊಂಡವಳು, ತಡರಾತ್ರಿಯ ತನಕ, ವಾರಾಂತ್ಯ ದಲ್ಲೂ ಎಡೆಬಿಡದೇ ಕೆಲಸದಲ್ಲಿ ನಿರತಳಾದಳು. ಅವಳ ಘಟಿಕೋತ್ಸವಕ್ಕೆಂದು ನಾವು ಪುಣೆ ತಲುಪಿ ದಾಗಲೂ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು. ಅಸಹನೀಯ ಕಾರ್ಯದೊತ್ತಡವು ಆರೋಗ್ಯದ ಮೇಲೆ ಬೀರಿದ ಋಣಾತ್ಮಕ ಪರಿಣಾಮದಿಂದಾಗಿ ಅವಳು ಅಳಿಯುವಂತಾಯಿತು. ಅವಳನ್ನು ಬದುಕಿಸಿಕೊಳ್ಳುವ ಕುರಿತು ಅರಿವಾಗುವ ಮೊದಲೇ ಇನ್ನಿಲ್ಲವಾದಳು”.

ತಮ್ಮ ಮಗಳ ಸಾವು ಒಂದು ಎಚ್ಚರಿಕೆಯ ಗಂಟೆಯಾಗಿದ್ದು ಎಲ್ಲ ನೌಕರರ ಹಿತದೃಷ್ಟಿಯಿಂದ ಸಂಸ್ಥೆಯು ಕಾರ್ಯಸಂಸ್ಕೃತಿಯನ್ನು ಸರಿಪಡಿಸಿಕೊಳ್ಳಬೇಕೆಂದು ಕೂಡ ತಾಯಿ ಅನಿತಾ ಅಗಸ್ಟಿನ್ ಪತ್ರದಲ್ಲಿ ಮನವಿ ಮಾಡಿದ್ದಾರೆ. ಆ ಪತ್ರದಲ್ಲಿ ಹೇಳಿದ ವಿಚಾರವು ವ್ಯಾಪಕ ಪ್ರಚಾರ ಪಡೆದಿದ್ದು ಸಾರ್ವಜನಿಕ ಚರ್ಚೆಗೆ ಆಸ್ಪದ ನೀಡಿದೆ.

ಕಾರ್ಪೊರೇಟ್ ಕೆಲಸದ ಒತ್ತಡದ ವಿಚಾರದಲ್ಲಿ ಅನೇಕ ಸಂಗತಿಗಳು ಆಗಾಗ ಪ್ರಕಟವಾಗುತ್ತಲೇ ಇವೆ. ಆನ್ನಾ ಪ್ರಕರಣವು ಮೊದಲನೆಯದೇನೂ ಅಲ್ಲ. ಆರು ತಿಂಗಳ ಈಚೆಗಷ್ಟೇ, ಕಾರ್ಯ ದೊತ್ತಡದಿಂದ ಮೃತನಾದ ಎನ್ನಲಾದ ಹೈ ಪ್ರೊಫೈಲ್ ಗ್ಲೋಬಲ್ ಕನ್ಸಲ್ಟಿಂಗ್ ಕಂಪನಿಯೊಂದರ 25ರ ಹರೆಯದ ಉದ್ಯೋಗಿಯೊಬ್ಬನ ನಿದರ್ಶನವನ್ನೂ ಈ ಸಂದರ್ಭದಲ್ಲಿ ಕೆಲವರು ಪ್ರಸ್ತಾಪಿಸಿದ್ದಾರೆ. ಇನ್ನೂ ಅನೇಕ ಸೂಕ್ಷ್ಮ ಅನುಭವಗಳು ಜಾಲ ತಾಣದಲ್ಲಿ ಹರಿದಾಡುತ್ತಿವೆ. ಹಿಂದಿನ ಸಂಸ್ಥೆಯಲ್ಲಿನ ತನ್ನ ಉದ್ಯೋಗವನ್ನು ಬಿಡದಿದ್ದಿದ್ದರೆ ತನ್ನ ಗತಿಯೂ ಹೀಗೆಯೇ ಆಗುತ್ತಿತ್ತೇನೋ ಎಂಬುದಾಗಿ ಸ್ಟಾರ್ಟ್‌ಅಪ್ ಕಂಪನಿಯೊಂದರ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿರುವ ಚಾರ್ಟರ‍್ಡ್ ಅಕೌಂಟೆಂಟ್ ಒಬ್ಬಳು ಹೇಳಿದ್ದಾಗಿ ವರದಿಯಾಗಿದೆ.

ಮಾರ್ಕೆಟಿಂಗ್ ಕಂಪನಿಯೊಂದರ ಉದ್ಯೋಗಿಯೊಬ್ಬ ತನ್ನ ಪತ್ನಿ ಡೆಂಘೀ ಜ್ವರದಿಂದ ಬಳಲುತ್ತಿದ್ದಾಗ ಅವಳ ನಿಗಾ ನೋಡಲೆಂದು ತಾನು ರಜೆ ತೆಗೆದುಕೊಂಡಿದ್ದಾಗಲೂ ‘ಕೆಲಸವನ್ನು ಕೂಡಲೇ ಮುಗಿಸಬೇಕು’ ಎಂದು ಮ್ಯಾನೇಜರ್
ತನಗೆ ಒತ್ತಡ ಹೇರಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಮತ್ತೊಬ್ಬನು, ತನ್ನ ಹೆಂಡತಿ ಕೂಡ ಆನ್ನಾ ಇದ್ದ ಸಂಸ್ಥೆಯಲ್ಲೇ ಕೆಲಸ ಮಾಡಿದ್ದು, ಕಾರ್ಯದೊತ್ತಡವನ್ನು ತಾಳಲಾಗದೆ ಅದನ್ನು ತ್ಯಜಿಸಿದ ಕುರಿತು ‘ಲಿಂಕ್ಡ್-ಇನ್’ ಮಾಧ್ಯಮದಲ್ಲಿ ಹೇಳಿಕೊಂಡಿದ್ದು, ‘”18 HOURS WORK DAYS ARE OFTEN GLORIFIED AND NORMALISED AT MANY BIG COMPANIES IN INDIA ’ಎನ್ನುವ ಆತನ ಪೋಸ್ಟ್ ಗೆ 30000ಕ್ಕೂ ಹೆಚ್ಚು ಲೈಕಿಂಗ್ಸ್ ಬಂದಿವೆ. ಕಾರ್ಯಕ್ಷೇತ್ರದಲ್ಲಿನ ಕೆಲಸದ ಒತ್ತಡದ ಕುರಿತು ಹಲವಾರು ಸಂಗತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಬರುತ್ತಲೇ ಇವೆ. ಅವೆಲ್ಲ ವನ್ನೂ ಸರಿಯಾಗಿ ತಿಳಿದುಕೊಂಡು ಸೂಕ್ತವಾಗಿ ಪ್ರತಿಕ್ರಿಯಿಸುವುದು ಅಗತ್ಯ.

ಆನ್ನಾ ಘಟನೆ, ಜಾಲತಾಣಗಳಲ್ಲಿನ ಟಿಪ್ಪಣಿಗಳು ಮತ್ತು ಕಂಪನಿಗಳ ಸ್ಥಿತಿಯನ್ನು ಸಮಗ್ರವಾಗಿ ವೀಕ್ಷಿಸಬೇಕಾದ್ದು ಅತ್ಯಗತ್ಯ. ಖಾಸಗಿ ಸಂಸ್ಥೆಗಳ ವಿಚಾರ ಬಂದಾಗ, ಅವುಗಳನ್ನು ಸ್ಥೂಲವಾಗಿ 3 ಪ್ರಕಾರದಲ್ಲಿ ವಿಂಗಡಿಸಬಹುದು- ಆಗಷ್ಟೇ ಶುರುವಾಗಿರುವ ಸಂಸ್ಥೆಗಳು (ಸ್ಟಾರ್ಟ್ ಅಪ್), ಕೆಲ ವರ್ಷಗಳಿಂದ ವ್ಯವಹಾರದಲ್ಲಿ ತೊಡಗಿದ್ದು ಮಧ್ಯಮ ಗಾತ್ರದಲ್ಲಿ ಬೆಳೆದಿರುವ ಸಂಸ್ಥೆಗಳು ಮತ್ತು ದೊಡ್ಡದಾಗಿ ಬೆಳೆದು ನಿಂತ ಸಂಸ್ಥೆಗಳು.

ಎಲ್ಲ ಬಗೆಯ ಸಂಸ್ಥೆಗಳೂ ಬಹುತೇಕವಾಗಿ ಸ್ಟಾರ್ಟ್‌ಅಪ್ ರೂಪಿನಿಂದ ಮುನ್ನಡೆದಂಥವೇ. ಇಂದು ಬೃಹದಾಕಾರ ವಾಗಿ ಬೆಳೆದು ನಿಂತಿರುವ ರಿಲಯನ್ಸ್, ಟಾಟಾ, ಬಿರ್ಲಾ, ಇನೋಸಿಸ್ ಮುಂತಾದ ಸಂಸ್ಥೆಗಳೂ ಹಲವು ವರ್ಷಗಳ ಹಿಂದೆ ಶೈಶವಾವಸ್ಥೆಯಲ್ಲಿ ಇದ್ದಂಥವೇ ಎಂಬುದನ್ನು ಗಮನಿಸಬೇಕು. ಸಂಸ್ಥೆಗಳನ್ನು ಆರಂಭಿಸುವಾಗ ಸ್ಥಾಪಕರು ತಮ್ಮದೇ ಆದ ಕನಸುಗಳನ್ನು ಕಂಡಿರುತ್ತಾರೆ. ಜಮ್ಷೆಡ್‌ಜಿ ಟಾಟಾ, ಧೀರೂಭಾಯಿ ಅಂಬಾನಿ ಅಥವಾ ಎನ್.
ಆರ್.ನಾರಾಯಣಮೂರ್ತಿ ಹೀಗೆ ಎಲ್ಲ ಸಂಸ್ಥಾಪಕರೂ ಸಂಸ್ಥೆಯ ಸ್ಥಾಪನೆ, ಬೆಳವಣಿಗೆ ಮತ್ತು ಸ್ಥಿರತೆಯ ಕುರಿತು ಪಟ್ಟ/ ಪಡುವ ಶ್ರಮ ಅಂತಿಂಥದ್ದಲ್ಲ. ಇವರೆಲ್ಲ ಎಷ್ಟು ಒತ್ತಡಕ್ಕೊಳಗಾಗಿ, ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಿರ ಬಹುದೆಂಬ ಲೆಕ್ಕವಿಲ್ಲ. ಹೀಗೆ, ಅತಿಯಾದ ಕೆಲಸವು ಕಂಪನಿಗಳ ಹಿನ್ನೆಲೆಯಾಗಿರುತ್ತದೆ ಎಂದರೆ ತಪ್ಪಾಗಲಾರದು.

ಹೀಗೆ ಹೇಳಲು ಕಾರಣವೆಂದರೆ, ಸಂಸ್ಥೆಗಳೆಲ್ಲವೂ ಯಾರದೋ ಅತಿಯಾದ ಪರಿಶ್ರಮದಿಂದಲೇ ಹುಟ್ಟಿ ಬೆಳೆಯುತ್ತವೆ.
ಹೊಸದಾಗಿ ಹುಟ್ಟಿಕೊಂಡ ಸಂಸ್ಥೆಗಳಲ್ಲಿ ಸಾಕಷ್ಟು ಉತ್ಪನ್ನವಿಲ್ಲದೇ ಕೆಲವೇ ಕೆಲಸಗಾರರ ಮೂಲಕ ಉಳಿವಿನ ಹೋರಾಟ ನಡೆಸುವ ಪ್ರಸಂಗವಿರುತ್ತದೆ. ಮಧ್ಯಮ ಗಾತ್ರದ ಹಲವು ಸಂಸ್ಥೆಗಳು flourish or perish ಎನ್ನುವ ಸ್ಥಿತಿಯಲ್ಲೇ ನಡೆದಿರುತ್ತವೆ. ಬೆಳೆದು ನಿಂತ ದೊಡ್ಡ ಸಂಸ್ಥೆಗಳಿಗೂ ನಿಂತ ನೀರಾಗುವ ಅಪಾಯವು ಸದಾ ಕಾಡಿರು ತ್ತದೆ. ವ್ಯವಹಾರಕ್ಕೆಂದು ರೂಪುಗೊಂಡ ಎಲ್ಲ ಸಂಸ್ಥೆಗಳು ‘ಬೆಳೆಯುವ ಓಟವನ್ನು’ ಸದಾ ಓಡಲೇಬೇಕಾದ
ನಿರ್ಬಂಧದಲ್ಲಿ ಸಿಲುಕಿರುತ್ತವೆ. ಹಲವಾರು ಸಂಸ್ಥೆಗಳು ಸಾರ್ವಜನಿಕರಿಗೆ ಷೇರು ಹಂಚಿ ಹಣ ಪಡೆದಿರುತ್ತವೆ ಯಾದ್ದರಿಂದ, ತಮ್ಮ ಷೇರಿನ ಬೆಲೆಯನ್ನು ಸ್ಥಿರವಾಗಿ ಕಾಪಿಟ್ಟುಕೊಳ್ಳಲು, ಹೆಚ್ಚಿಸಿಕೊಳ್ಳಲೆಂದು ಹೆಚ್ಚೆಚ್ಚು ಆದಾಯವನ್ನು ಪಡೆಯುವ ನಿಟ್ಟಿನಲ್ಲಿ ತೊಡಗಿರುತ್ತವೆ.

ಸದಾ ಉಳಿಯುವ, ಸ್ಥಿರವಾಗುವ, ಬೆಳೆಯುವ ಚಕ್ರದಲ್ಲಿ ಸಿಲುಕಿರುವ ಸಂಸ್ಥೆಗಳಿಗೆ ತಮ್ಮದೇ ಆದ ದಾರಿ ಮತ್ತು
ಗುರಿಯನ್ನು ನಿಶ್ಚಯಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಸಂಸ್ಥೆಗಳಿಗೆ ತಂತಮ್ಮ ಧಾರಣಶಕ್ತಿಗೆ ಅನುಗುಣ ವಾದ ಮಾನವ ಸಂಪನ್ಮೂಲ ನಿರ್ವಹಣಾ ಪರಿಕ್ರಮಗಳಿರುತ್ತವೆ. ಬೆಳೆದು ನಿಂತ ದೊಡ್ಡ ಸಂಸ್ಥೆಗಳಲ್ಲಿ ಸಮರ್ಪಕ ರೀತಿಯಲ್ಲಿ ಯೋಗ್ಯ ಉದ್ಯೋಗಿಗಳ ಆಯ್ಕೆ ಮತ್ತು ಕಾರ್ಯಕ್ಷಮತೆಯ ವಿಮರ್ಶೆ, ಬೆಂಬಲ ವ್ಯವಸ್ಥೆ ಮತ್ತು ಉದ್ಯೋಗಿಗಳ ಕುಂದುಕೊರತೆ ಇತ್ಯಾದಿಗಳನ್ನು ಸಮರ್ಥವಾಗಿ ನಿರ್ವಹಿಸಲೆಂದೇ ಮಾನವ ಸಂಪನ್ಮೂಲ ತಜ್ಞ ರನ್ನೊಳಗೊಂಡ ಪ್ರತ್ಯೇಕ ವಿಭಾಗವೇ ಇರುತ್ತದೆ.

ಅಂಥ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಎಲ್ಲ ಸಂಸ್ಥೆಗಳಿಗೂ ಅಸಾಧ್ಯ; ಏಕೆಂದರೆ, ಅಂಥ ವಿಭಾಗ ಸ್ಥಾಪನೆಗೆ ಬೇಕಿರುವ ಖರ್ಚನ್ನು ಭರಿಸುವ ಶಕ್ತಿಯಿರುವುದಿಲ್ಲ. ಹಲವು ಸಂಸ್ಥೆಗಳು ಸಿಬ್ಬಂದಿ ಆಯ್ಕೆ ಮತ್ತು ನಿರ್ವಹಣೆಗಷ್ಟೇ ಸೀಮಿತವಾಗಿರುತ್ತವೆ. ಹೊಸದಾಗಿ ಸ್ಥಾಪಿತವಾಗಿರುವ ಅಥವಾ ಇನ್ನೂ ಸಣ್ಣ ಸ್ವರೂಪದಲ್ಲಿರುವ ಸಂಸ್ಥೆಗಳಲ್ಲಿ ಬಹುತೇಕವಾಗಿ ಸಂಸ್ಥೆಯ ಮಾಲೀಕ ಅಥವಾ ಆತನ ಪ್ರತಿನಿಽಯು ಉದ್ಯೋಗಿಗಳನ್ನು ನಿಭಾಯಿಸುವುದು ವಾಡಿಕೆ. ಹೀಗೆ ಸಂಸ್ಥೆಗಳು ತಮ್ಮ ಶಕ್ತಿಗೆ ತಕ್ಕಂಥ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುತ್ತವೆ.

ಎಲ್ಲ ಸಂಸ್ಥೆಗಳಿಗೂ ಉದ್ಯೋಗಿಗಳು ಜೀವಾಳ, ಸಂಸ್ಥೆಗಳ ಯಶಸ್ಸಿನಲ್ಲಿ ಅವರ ಕೊಡುಗೆ ಮಹತ್ವದ್ದು. ಹಾಗಾದರೆ
ಉದ್ಯೋಗಿಗಳ ಕಲ್ಯಾಣದ ವಿಷಯದಲ್ಲಿ ಚ್ಯುತಿಯಾಗುವುದೇಕೆ, ಅವರನ್ನು ಅತಿ ಕೆಲಸದ ಒತ್ತಡಕ್ಕೆ ನೂಕುವುದೇಕೆ? ಎಂಬ ಪ್ರಶ್ನೆ ಪ್ರಸ್ತುತವಾದದ್ದು. ಇದೊಂದು ಸಂಕೀರ್ಣ ವಿಚಾರ. ಸಂಸ್ಥೆಗಳ ಸ್ಥಿತಿ ಮತ್ತು ಮಾನವ ಸಂಪನ್ಮೂಲ ವನ್ನು ನಿಭಾಯಿಸುವ ಕುರಿತು ಈ ಮೊದಲು ವಿವರಿಸಿದ್ದು ಅದೇ ಕಾರಣದಿಂದ. ಎಲ್ಲ ಸಂಸ್ಥೆಗಳೂ ತಮ್ಮ ಕಾರ್ಯ ಕ್ಷೇತ್ರಕ್ಕೆ ತಕ್ಕಂತೆ ಸೀಮಿತ ಸಿಬ್ಬಂದಿಯನ್ನು ಹೊಂದಲು ಇಚ್ಛಿಸುತ್ತವೆ. ವ್ಯಾಪಾರಿ ಸಂಸ್ಥೆಗಳು ಸದಾ ಹೊಸ ವ್ಯವಹಾ ರದ ಅನ್ವೇಷಣೆಯಲ್ಲಿರುತ್ತವೆ. ಕೆಲವೊಮ್ಮೆ, ತನ್ನಲ್ಲಿನ ಮಾನವ ಶಕ್ತಿಗಿಂತ ಹೆಚ್ಚು ವ್ಯವಹಾರ ಸಿಕ್ಕಾಗ ಮತ್ತು ಕಾಲ ಮಿತಿಯೊಳಗೇ ಅದನ್ನು ನಿರ್ವಹಿಸುವ ಅನಿವಾರ್ಯತೆಯಿದ್ದಾಗ, ಉದ್ಯೋಗಿಗಳಿಗೆ ಅತಿಯಾದ ಕೆಲಸದೊತ್ತಡ ಬೀಳುವುದಿದೆ.

ಸಂಸ್ಥೆಗಳು ತಮಗೆ ಬರಬಹುದಾದ ವ್ಯವಹಾರ ಮತ್ತು ಅದಕ್ಕೆ ಅಗತ್ಯವಾಗುವ ಸಿಬ್ಬಂದಿಯ ಅಂದಾಜಿನ ಮೇರೆಗೆ ಮಾನವ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಂಡರೂ, ಆಗಾಗ ಅನುಭವಿಸುವ ಏರುಪೇರಿನ ಸ್ಥಿತಿಯನ್ನು ನಿರ್ವ ಹಿಸುವ ಅಂದಾಜಿನ ಕೊಂಡಿ ಕಳಚುವುದಿದೆ. ಅಂದರೆ, ಉದ್ಯೋಗಿಗಳ ಸಂಖ್ಯೆ ಸಾಕಾಗಾದ ಮತ್ತು ಹೆಚ್ಚಾದ ಎರಡೂ ಬಗೆಯ ಸನ್ನಿವೇಶ ಎದುರಾಗುವುದಿದೆ. ಅಂಥ ಸ್ಥಿತಿಯಲ್ಲಿ ಅತಿಕೆಲಸ ಮತ್ತು ಉದ್ಯೋಗಿಗಳ ‘ಹಂಗಾಮಿ ವಜಾ’ ಎರಡೂ ಕ್ರಮಗಳನ್ನು ಬಳಸಬೇಕಾಗುತ್ತದೆ. ಇದೊಂದು ಕ್ಲಿಷ್ಟ ಪ್ರಕ್ರಿಯೆ.

ಇತ್ತೀಚೆಗೆ ಯಾವ ವ್ಯಾಪಾರಿ ಸಂಸ್ಥೆಯೂ ಇಂಥ ಕ್ಲಿಷ್ಟ ಪ್ರಕ್ರಿಯೆಗೆ ಹೊರತಾಗಿಲ್ಲವೆಂದೇ ಹೇಳಬೇಕು. ಕೆಲ ವರ್ಷಗಳ
ಹಿಂದೆ ಹಲವು ಸರಕಾರಿ ಸಂಸ್ಥೆಗಳು, ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು ಮುಂತಾದವು ಕಾಲಮಿತಿಯೊಳಗಿನ ಮತ್ತು ಪೂರ್ವ ನಿರ್ಧಾರಿತ ಕೆಲಸವನ್ನಷ್ಟೇ ಮಾಡುವ ಕಾರ್ಯವಿಧಾನ ಹೊಂದಿದ್ದವು. ಈಚೀಚೆಗೆ ಅವೂ ಸ್ಪರ್ಧಾತ್ಮಕ ಕಾರ್ಯವಿಧಾನದಲ್ಲಿ ತೊಡಗಿಸಿಕೊಂಡಿದ್ದು, ಅಲ್ಲಿಯೂ ಅತಿಯಾದ ಕಾರ್ಯದೊತ್ತಡದ ದೂರು ಕೇಳಿ ಬರುತ್ತಿದೆ. ಬದಲಾದ ಜಗತ್ತಿಗನುಗುಣವಾಗಿ ಬಹುತೇಕ ಎಲ್ಲ ಕ್ಷೇತ್ರಗಳೂ ಸ್ಪರ್ಧಾತ್ಮಕ ಕಾರ್ಯವಿಧಾನವನ್ನು ಅನುಸರಿಸ ಬೇಕಾಗಿ ಬಂದಿದೆ.

ಕೆಲಸಗಾರರೂ ಇಂಥ ಸ್ಥಿತಿಗೆ ಒಗ್ಗಿಕೊಳ್ಳಬೇಕಾದ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸಂಸ್ಥೆಯು ತನ್ನ ಗುರಿಸಾಧನೆ ಮತ್ತು ಉದ್ಯೋಗಿಗಳ ಒಳಿತನ್ನು ಸಮಂಜಸವಾಗಿ ಸರಿದೂಗಿಸಬಲ್ಲ ವಿಧಾನವನ್ನು ನೆಚ್ಚಬೇಕಾಗುತ್ತದೆ, ಅನವಶ್ಯಕವಾಗಿ ಕಾರ್ಯದೊತ್ತಡ ನೀಡುವ ಮನಸ್ಥಿತಿಯ ಕಾರ್ಯ ನಿರ್ವಾಹಕರನ್ನು ಹದ್ದು ಬಸ್ತಿನಲ್ಲಿಡಬೇಕಾಗುತ್ತದೆ. ಕೆಲಸ ನೀಡುವ ಹಂತದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿಯ ಕುರಿತು ಯೋಗ್ಯ ಮಾರ್ಗ ದರ್ಶನ ಅವಶ್ಯಕ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಹೊಮ್ಮಿದ ಟೀಕೆ-ಟಿಪ್ಪಣಿ ಗಳನ್ನು ಯೋಗ್ಯನಿಷ್ಕರ್ಷೆಗೆ ಗುರಿಯಾಗಿಸುವುದೂ ಮಾನವ ಸಂಪನ್ಮೂಲ ನಿರ್ವಹಣೆಯ ಮಹತ್ವದ ಭಾಗ.
ಮೇಲೆ ಉಲ್ಲೇಖಿಸಲಾಗಿರುವ ಆನ್ನಾಳ ತಾಯಿಯ ಪತ್ರಕ್ಕೆ ಕಂಪನಿಯ ಮುಖ್ಯಸ್ಥರು ಉತ್ತರಿಸಿ, ಅತೀವ ಸಂತಾಪ ಸೂಚಿಸಿ, ಸಾಧ್ಯವಾದಷ್ಟು ನೆರವಾಗುವುದಾಗಿ ತಿಳಿಸಿ, ತಮ್ಮ ಕಾರ್ಯಸಂಸ್ಕೃತಿಯನ್ನು ಮತ್ತಷ್ಟು ಸುಧಾರಿಸಿ ಕೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಉದ್ಯೋಗಿಗಳ ಕಲ್ಯಾಣಕ್ರಮವು ಸಂಸ್ಥೆಗಳ ಕಾರ್ಯನಿರ್ವಹಣೆಯ ಅತಿಮುಖ್ಯ ಭಾಗ. ಅತಿಯಾದ ಕಾರ್ಯ ದೊತ್ತಡದಿಂದ ಉದ್ಯೋಗಿಗಳು ಅನಾರೋಗ್ಯಕ್ಕೆ, ದೈಹಿಕ-ಮಾನಸಿಕ ಒತ್ತಡಗಳಿಗೆ ಬಲಿಯಾಗದಂತೆ ಅದು ಕಾಳಜಿ
ವಹಿಸಬೇಕಾಗುತ್ತದೆ. ಸಂಸ್ಥೆಗಳು ತಮ್ಮ ವ್ಯವಹಾರ ಸಂಬಂಧಿತ ಗುರಿಯನ್ನು ಕಾಲಮಿತಿಯೊಳಗೆ ಸಾಧಿಸುವುದರ ಜತೆಜತೆಗೆ, ತಮ್ಮ ಕೆಲಸಗಾರರ ಹುರುಪು ಮತ್ತು ಸಾಮರ್ಥ್ಯವನ್ನೂ ಕಾಪಾಡಿಕೊಳ್ಳುವುದರಲ್ಲೇ ಅವುಗಳ ಯಶಸ್ಸಿದೆ. ಉದ್ಯೋಗಿಗಳೂ ತಮ್ಮ ಮೇಲಿನ ಕಾರ್ಯದೊತ್ತಡವು ಅಸಹನೀಯವಾದರೆ ಹೇಳಿಕೊಳ್ಳಲು ಹಿಂಜರಿಯಬಾರದು ಮತ್ತು ಸಂಸ್ಥೆಗಳು ಅಂಥ ಸ್ಥಿತಿಯನ್ನು ತೆರೆದ ಮನಸ್ಸಿನಿಂದ ಪರಿಶೀಲಿಸಿ ತಕ್ಕ ಬೆಂಬಲ ನೀಡಬೇಕು. ಆಗ ಸೂಕ್ತ ಪರಿಹಾರ ಸಿಕ್ಕೀತು. ಕಾರ್ಯ ದೊತ್ತಡವನ್ನು ಸಮತೂಕದಲ್ಲಿ-ಸಮರ್ಪಕವಾಗಿ ಎದುರಿಸಿ ನಿಭಾಯಿಸುವ ಕುರಿತು ನೌಕರರಿಗೆ ನಿಯತವಾಗಿ ತರಬೇತಿ ನೀಡಬೇಕಾದ್ದೂ ಮುಖ್ಯ.

(ಮುಂಬೈನ ಲಾಸಾ ಜೆನರಿಕ್ ಕಂಪನಿಯ ಪೂರ್ವ ನಿರ್ದೇಶಕರು)

ಇದನ್ನೂ ಓದಿ: Working Hours: ವಿಶ್ವದಲ್ಲೇ ಅತ್ಯಂತ ಕಡಿಮೆ ಕೆಲಸ, ಹೆಚ್ಚು ವಿಶ್ರಾಂತಿಗೆ ಅವಕಾಶ ಇರುವ ದೇಶಗಳ ಪಟ್ಟಿ ಇಲ್ಲಿದೆ!