ಛಲ ಬಿಡದ ತ್ರಿವಿಕ್ರಮನಂತೆ. ಕೊನೆಗೂ ಇಸ್ರೋ ವಿಜ್ಞಾನಿಗಳು ಅಂದು ಕೊಂಡಂತೆಯೇ ಚಂದ್ರನ ಮೇಲೆ ಲ್ಯಾಂಡರ್ ‘ವಿಕ್ರಮ’ನನ್ನು ಇಳಿಸಿ ಆಚಂದ್ರಾರ್ಕ ಸಾಧನೆ. ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನಂಗಳದಲ್ಲಿ ಇಳಿದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ಈ ತ್ರಿವಿಕ್ರಮ ಹೆಜ್ಜೆ ಇಡೀ ಮಾನವಕುಲವನ್ನು ಇನ್ನೊಂದು ಹಂತಕ್ಕೆ ಏರಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಜಾಗತಿಕವಾಗಿ ಅತ್ಯಂತ ಮಹತ್ವ ಪಡೆದಿರುವ ಭಾರತದ ಚಂದ್ರ ಯಾನ-೩ ಗಗನ ನೌಕೆಯನ್ನು ಅಂದುಕೊಂಡಂತೆಯೇ, ಯಾವುದೇ ಲವಲೇಶ ಲೋಪಕ್ಕೆ ಅವಕಾಶವಿಲ್ಲದಂತೆ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಸಿದ್ದಾಕ್ಕಾಗಿ ಇಸ್ರೋದ ಹೆಮ್ಮೆಯ ವಿಜ್ಞಾನಿಗಳಿಗೆ ಅಭಿನಂದನೆಗಳು. ಜಗತ್ತಿನ ಕೇವಲ ಮೂರು ರಾಷ್ಟ್ರಗಳು ಈವರೆಗೆ ಈ ಸಾಧನೆ ಮಾಡಿದ್ದವು. ಅಂಥ ಸಾಧಕ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದ ಭಾರತೀಯ ವಿಜ್ಞಾನಿಗಳ ಶ್ರಮ, ಶ್ರದ್ಧೆ, ಬದ್ಧತೆ, ಛಲ, ಕಾಳಜಿ ಅನನ್ಯ.
ಇನ್ನೂ ವಿಶೇಷವೆಂದರೆ ಚಂದ್ರನ ದಕ್ಷಿಣ ಧ್ರುವವನ್ನು ಚುಂಬಿಸಿದ ಜಗತ್ತಿನ ಮೊಟ್ಟ ಮೊದಲ ದೇಶವಾಗಿ ಭಾರತ ಇತಿಹಾಸ ನಿರ್ಮಿಸಿದೆ. ಇವೆಲ್ಲದರ ನಡುವೆ, ಅತ್ಯಂತ ಕಡಿಮೆ ವೆಚ್ಚದಲ್ಲಿ, ದೇಸೀ ನಿರ್ಮಿತ ರಾಕೆಟ್ ತಂತ್ರಜ್ಞಾನ ಬಳಸಿ ಈ ಸಾಧನೆಯನ್ನು ಸಾಕಾರಗೊಳಿಸಿದ್ದು ಮಾತಿಗೆ ನಿಲುಕದ್ದು. ಅತ್ಯಾಧುನಿಕ ತಂತ್ರಜ್ಞಾನದಲ್ಲಿಯ ಭಾರತದ ಪ್ರಗತಿಗೆ ಅಮೆರಿಕ ಸೇರಿದಂತೆ ಇಡೀ ಜಗತ್ತಿನ ಮುಂದುವರಿದ ದೇಶಗಳೇ ನಿಬ್ಬರಗಾಗಿವೆ. ದೇಶದ ಅಭಿವೃದ್ಧಿಗೆ ನೆರವಾಗುತ್ತಿರುವ, ಜನಸಾಮಾನ್ಯರ ಬದುಕನ್ನು ಸುಲಭವಾಗಿಸುತ್ತಿರುವ, ನಿತ್ಯಜೀವನದ ಮಟ್ಟವನ್ನು ಹೆಚ್ಚಿಸುತ್ತಿರುವ ವಿಜ್ಞಾನಿಗಳಿಗೆ ಇಡೀ ದೇಶ ಚಿರಋಣಿ. ಆಧುನಿಕ ಸೌಲಭ್ಯಗಳಷ್ಟೇ ಅಲ್ಲ, ರಕ್ಷಣೆ, ಸಂವಹನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇಂದು ಭಾರತ ದಾಪುಗಾಲಿಡುತ್ತಿದೆ. ಇಂಥ ಯಾವುದೇ ಕ್ಷೇತ್ರದಲ್ಲೂ ನಾವಿಂದು ಬೇರೆ ಯಾವ ದೇಶವನ್ನೂ ಅವಲಂಬಿಸಬೇಕಾಗಿಲ್ಲ. ಆ ಪರಿಯ ಸ್ವಾವಲಂಬನೆಗೆ ನಮ್ಮನ್ನು ಕೊಂಡೊಯ್ದು ನಿಲ್ಲಿಸಿದ ದೇಶದ ನಾಯಕತ್ವವನ್ನೂ ನಾವು ಶ್ಲಾಸಲೇಬೇಕಿದೆ. ಇವೆಲ್ಲದರ ನಡುವೆ ವಿಜ್ಞಾನಿಗಳ ಇಂತಹ ಸಾಧನೆಗಳನ್ನೂ ಕುಹಕವಾಡುವವರಿದ್ದಾರೆ. ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ ಬಿಡಿ. ಇನ್ನಾದರೂ ಎಲ್ಲವನ್ನೂ ತಮ್ಮ ಕ್ಷುಲ್ಲಕ ರಾಜಕೀಯ ದೃಷ್ಟಿಕೋನದಲ್ಲಿ ನೋಡುವ ಪ್ರವೃತ್ತಿಯನ್ನು ಬದಲಿಸಿಕೊಳ್ಳುವ ಸದ್ಬುದ್ಧಿ ಬರಲಿ. ಅಭಿವೃದ್ಧಿಯ ವಿಚಾರದಲ್ಲಾದರು ಪಕ್ಷಾತೀತವಾಗಿ ವಿಚಾರ ಮಾಡಿ ರಚನಾತ್ಮಕ ಸಲಹೆ ನೀಡುವಂತಾಗಲಿ, ಅದು ಸಾಧ್ಯವಿಲ್ಲವೇ ಅನಗತ್ಯ, ಟೀಕೆ, ಗೊಂದಲ, ವಿವಾದಗಳನ್ನಾದರೂ ನಿಲ್ಲಿಸಲಿ. ಭಾರತ ಮಾತಾ ಕಿ ಜೈ