Friday, 22nd November 2024

ಸನಾತನ ಧರ್ಮ, ಭಾರತ ಎಂಬ ರಾಜಕೀಯ ಅಸ್ತ್ರ

ಕಳೆದ ನಾಲ್ಕೈದು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಚಾರಗಳೆಂದರೆ ಸನಾತನ ಧರ್ಮ ಮತ್ತು ರಿಪಬ್ಲಿಕ್ ಆಫ್  ಭಾರತ. ಸನಾತನ ಧರ್ಮವನ್ನು ವಿರೋಧಿಸುವವರು, ಭಾರತಕ್ಕೂ ಆಕ್ಷೇಪಿಸುತ್ತಿದ್ದಾರೆ. ಸನಾತನ ಧರ್ಮ ಪ್ರತಿಪಾದಿಸುವವರು ಭಾರತವನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಈ ವಿಚಾರ ರಾಷ್ಟ್ರೀಯತೆಯ ಪರ ಮತ್ತು ವಿರುದ್ಧ ಎನ್ನುವಂತಾಗಿದೆ.

ಕ್ರಿಸ್ತಪೂರ್ವ ೩೭೨ರಲ್ಲಿ ಗ್ರೀಕ್ ಚಕ್ರವರ್ತಿ ಭಾರತವನ್ನು ಆಕ್ರಮಣ ಮಾಡಿ ನಮ್ಮ ಅರಸರನ್ನು ಸೋಲಿಸುತ್ತಾ ಮುಂದವರಿದ ನಾದರೂ ನಮ್ಮವರ ಮಾನವೀಯತೆಗೆ ಮೆಚ್ಚಿ ಸಾಮ್ರಾಜ್ಯ ವಿಸ್ತರಣೆಯಿಂದ ಹಿಂದೆ ಸರಿದ. ಆದರೆ, ಯಾವಾಗ ಮುಸ್ಲಿಮ್ ದೊರೆಗಳ ಆಕ್ರಮಣವಾಯಿತೋ ಅವರು ಮೊದಲು ಕಂಡುಕೊಂಡದ್ದು, ಭಾರತೀಯರಲ್ಲಿ ಒಗ್ಗಟ್ಟು ಇಲ್ಲ. ಹೀಗಾಗಿ ಭಾರತವನ್ನು ವಶಪಡಿಸಿಕೊಂಡು ಆಳುವುದು ಅತ್ಯಂತ ಸುಲಭ ಎಂಬುದನ್ನು. ೧೯೪೭ರಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವವರೆಗೆ ಆ ಮಾತು ಹಾಗೆಯೇ ಮುಂದುವರಿಯಿತು. ಸ್ವಾತಂತ್ರ್ಯಾ ನಂತರ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಅಷ್ಟರಲ್ಲಿ ದೇಶಗಳನ್ನು ವಶಪಡಿಸಿಕೊಳ್ಳುವ ಸಂಪ್ರದಾಯಕ್ಕೂ ತೆರೆ ಬಿತ್ತು. ಅರಬ್ಬರ ದಾಳಿಯ ನಂತರ ಭಾರತೀಯರಲ್ಲಿ ಒಗ್ಗಟ್ಟಿಲ್ಲ ಎಂಬ ಮಾತು ಸುಳ್ಳಾಗಿದ್ದು, ಮಹಾತ್ಮಾ ಗಾಂಧಿಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಕಾಲದಲ್ಲಿ. ಅವರಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ದೇಶದ ವಿಚಾರ ಬಂದಾಗ ಒಗ್ಗಟ್ಟಿನಿಂದಿರುತ್ತಿದ್ದರು. ಇದರ ಪರಿಣಾಮವೇ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಕಾರಣವಾಯಿತು ಎಂಬುದು ಈಗ ಇತಿಹಾಸ. ಸ್ವಾತಂತ್ರ್ಯಾನಂತರ
ಅಂತಹ ಒಗ್ಗಟ್ಟು ಮತ್ತೆ ಕಾಣಸಿದ್ದು ೧೯೭೫ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ. ಆದರೆ, ರಾಜಕೀಯ ಪಕ್ಷಗಳ ಕಚ್ಚಾಟದಿಂದ ಆ ಒಗ್ಗಟ್ಟು ಹೆಚ್ಚು ದಿನ ಉಳಿಯಲಿಲ್ಲ. ಬಳಿಕ
೨೦೧೩ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೆ ರಾಜಕೀಯ ಒಗ್ಗಟ್ಟು ಮೂಡಿತು. ಇಷ್ಟೆಲ್ಲಾ ಹೇಳಲು ಕಾರಣ, ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಸನಾತನ ಧರ್ಮ ಮತ್ತು ರಿಪಬ್ಲಿಕ್ ಆಫ್- ಭಾರತ ಕುರಿತಾದ ಚರ್ಚೆ.

ಸನಾತನ ಧರ್ಮದ ಮೂಲವನ್ನು ತಿಳಿದುಕೊಳ್ಳದೆ ನಂತರದಲ್ಲಿ ಬದಲಾದ ಆಚರಣೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಚರ್ಚೆಯಲ್ಲಿ ಸನಾತನ ಧರ್ಮವನ್ನು ಮಾನವ ವಿರೋಧಿ ಎಂಬಂತೆ ಬಿಂಬಿ
ಸುವ ಪ್ರಯತ್ನ ನಡೆಯುತ್ತಿದೆ. ಕೆಲವು ರೋಗಗ್ರಸ್ಥ ಮನಸ್ಸುಗಳು ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸುತ್ತಿದೆ. ಜಾತಿಯ ಹೆಸರಿನಲ್ಲಿ ಧರ್ಮವನ್ನು ನಿಂದಿಸಲಾಗುತ್ತಿದೆ. ಮತ್ತೊಂದೆಡೆ ಸನಾತನ ಧರ್ಮ
ವನ್ನು ಪ್ರತಿಪಾದಿಸುತ್ತಾ ಅದನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ನಿಜವಾಗಿಯೂ ಸನಾತನ ಧರ್ಮ ಎಂಬುದು ಸಮರ್ಥಿಸಿಕೊಳ್ಳುವಂತಹದ್ದೆ. ಸರ್ವೇ ಸನಾಃ ಸುಖಿನೋ ಭವಂತು ಎಂಬ ಸಂದೇಶ ಸಾರುವ ಈ ಧರ್ಮದಲ್ಲಿ ಜಾತಿಯ ವ್ಯವಸ್ಥೆ ಇರಲಿಲ್ಲ. ಆಯಾ ವ್ಯಕ್ತಿಗಳು ಮಾಡುವ ವೃತ್ತಿ ಆಧರಿಸಿ ಅವರ ಜಾತಿಯನ್ನು ಹೇಳಲಾಗುತ್ತಿತ್ತು. ವೇದಗಳ ಕಾಲದಲ್ಲೂ ಇದು ಗೋಚರವಾಗುತ್ತದೆ. ಆದರೆ, ನಂತರದಲ್ಲಿ ವೃತ್ತಿಯ ಆಧಾರದ ಮೇಲೆ ಜಾತಿ ಗುರುತಿಸುವ ಬದಲು ಆಯಾ ವೃತ್ತಿ ಮಾಡುವವರು ಅದನ್ನೇ ಮುಂದುವರಿಸುತ್ತಾ ಜಾತಿಯೇ ವೃತ್ತಿಯಾಯಿತು. ಅಂದರೆ, ಸನಾತನ ಧರ್ಮದಲ್ಲಿ ಬದಲಾವಣೆ ತಂದವರು ಜನರೇ ಹೊರತು ಧರ್ಮವಲ್ಲ. ಇದನ್ನು ಸನಾತನ ಧರ್ಮದಲ್ಲಿ ಹುಟ್ಟಿದವೇ ಅರ್ಥ ಮಾಡಿಕೊಳ್ಳುತ್ತಿಲ್ಲ. ಖಂಡಿತವಾಗಿಯೂ ಸನಾತನ ಧರ್ಮದಲ್ಲಿ ಜಾತಿಯ ಹೆಸರಿನಲ್ಲಿ ಮೇಲು-ಕೀಳುಗಳ ಭಾವನೆ ಸರಿಯಲ್ಲ. ಆದರೆ, ಸ್ವಾತಂತ್ರ್ಯಾನಂತರ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾದ ಬಳಿಕ ಈ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ, ಯಾರು ಜಾತಿಯ ಹೆಸರಿನಲ್ಲಿ ಅಧಿಕಾರ ಹಿಡಿಯುತ್ತಾರೋ, ಅಧಿಕಾರಕ್ಕಾಗಿ ಪ್ರಯತ್ನಿಸುತ್ತಾರೋ ಅವರೇ ಉಳಿದ ಜಾತಿಗಳನ್ನು ಟೀಕಿಸುತ್ತಾ, ಸನಾತನ ಧರ್ಮವನ್ನು ಆರೋಪಿಸುತ್ತಾ ತಮ್ಮ ಅಧಿಕಾರ ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇನ್ನು ರಿಪಬ್ಲಿಕ್ ಆಫ್ ಭಾರತದ ವಿಚಾರವನ್ನು ತೆಗೆದುಕೊಳ್ಳುವುದಾದರೆ, ಚಕ್ರವರ್ತಿ ಭರತನ ಕಾರಣದಿಂದ ಹಿಮಾಲಯದಿಂದ ದಕ್ಷಿಣಕ್ಕೆ, ಸಮುದ್ರಕ್ಕಿಂತ ಉತ್ತರಕ್ಕಿರುವ ಭೂಭಾಗವನ್ನು ಭಾರತ ಎಂದು ಕರೆಯಲಾ
ಗುತ್ತದೆ ಎಂದು ಹೇಳಲಾ ಗುತ್ತಿದೆ. ಮಹಾಭಾರತದಲ್ಲೂ ಭಾರತವಿದೆ. ವಿಷ್ಣು ಪುರಾಣದಲ್ಲೂ ಭಾರತದ ಬಗ್ಗೆ ವಿವರಣೆ ಇದೆ. ಕ್ರಮೇಣ ಭಾರತದ ಮೇಲೆ ಮುಸ್ಲಿಮರ ದಾಳಿಯ ಬಳಿಕ ಈ ಪ್ರದೇಶವನ್ನು ಸಿಂಧೂ (ಹಿಂದೂ), ಇಂಡಸ್ ಆಯಿತು. ಬ್ರಿಟೀಷರ ದಾಳಿಯ ನಂತರ ಅದಕ್ಕೆ ಇಂಡಿಯಾ ಎಂಬ ಹೆಸರು ಬಂತು. ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಳಿಕ ದೇಶಕ್ಕೆ ಭಾರತದ ಜತೆ ಇಂಡಿಯಾ ಎಂಬ ಹೆಸರೂ ಬಂದು. ರಿಪಬ್ಲಿಕ್ ಆಫ್ ಭಾರತ ಅಥವಾ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಕರೆಯಲಾ ಯಿತು. ಇದೀಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಇಂಡಿಯಾ ಎಂಬ ಹೆಸರನ್ನು ಕೈಬಿಟ್ಟು ರಿಪಬ್ಲಿಕ್ ಆಫ್ ಭಾರತ ಎಂದು ಮರು ನಾವರಣ ಮಾಡಲು ಮುಂದಾಗಿದೆ ಎಂಬ ಊಹಾ ಪೋಹ ಕೇಳಿಬರುತ್ತಿದೆ. ಇದನ್ನು ಕೇಂದ್ರ ಸರಕಾರವೇ ಅಲ್ಲಗಳೆಯುತ್ತದೆಯಾದರೂ ಭವಿಷ್ಯದಲ್ಲಿ ಆ ಪ್ರಯತ್ನವನ್ನು ನಿರಾಕರಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯಾ ನಂತರ ದೇಶದ ನಾನಾ ಪ್ರದೇಶಗಳಿಗೆ ನೀಡಿರುವ ಹೆಸರನ್ನು ಬದಲಿಸಿರುವಾಗ ಭಾರತಕ್ಕೆ ಬ್ರಿಟೀಷರು ಇಟ್ಟ ಹೆಸರು ತೆಗೆದು ಹಳೆಯ ಹೆಸರನ್ನೇ ಇಟ್ಟರೆ ತರ್ರ‍ೇನು ಎನ್ನುವುದು ಹಲವರ ವಾದ
ವಾದರೆ, ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾಗಿರುವ ಇಂಡಿಯಾ ಹೆಸರೇಕೆ ಬದಲಿಸಬೇಕು ಎಂಬುದು ಇನ್ನು ಕೆಲವರ ವಾದ. ಎರಡೂ ವಾದದಲ್ಲಿ ಅರ್ಥವಿದೆ. ಹಾಗೆಂದು ಇಂಡಿಯಾ ಹೆಸರು ತೆಗೆದು ಭಾರತ ಎನ್ನುವ ಅಗತ್ಯವೂ ಇಲ್ಲ, ಎರಡೂ ಹೆಸರುಗಳಿದ್ದರೆ ಸಮಸ್ಯೆಯಾಗುವುದಿಲ್ಲ.

ರಿಪಬ್ಲಿಕ್ ಆಫ್ ಇಂಡಿಯಾ ಬದಲು ರಿಪಬ್ಲಿಕ್ ಆಫ್ -ಭಾರತ ಎಂದು ಹೇಳುವುದರಲ್ಲಿ ತಪ್ಪೂ ಇಲ್ಲ. ಆದರೆ, ಅಧಿಕಾರ ರಾಜಕಾರಣವೇ ಮುಖ್ಯವಾಗಿರುವಾಗ, ಚುನಾವಣೆ ಸಮೀಪಿಸುತ್ತಿರುವಾಗ ಈ ಎರಡೂ ವಿಚಾರಗಳು ರಾಜಕೀಯ ಪಕ್ಷಗಳಿಗೆ ಮತಬ್ಯಾಂಕ್ ಕ್ರೋಢೀಕರಣದ ಅಸವಾಗಿವೆ. ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ರೋಗಕ್ಕೆ ಹೋಲಿಸಿದ್ದನ್ನೇ ಮುಂದಿಟ್ಟುಕೊಂಡು ರಾಜಕೀಯ ವಾಕ್ಸಮರಗಳು ನಡೆಯುತ್ತಿವೆ. ಅದೇ ರೀತಿ ಜಿ ೨೦ ಶೃಂಗಸಭೆಗೆ ಸಂಬಂಧಿಸಿದಂತೆ ರಿಪಬ್ಲಿಕ್ ಆಫ್ ಭಾರತ ಎಂದು ಹೇಳಿದ್ದನ್ನು ಮುಂದಿಟ್ಟು ಕೊಂಡು ಭಾರತ-ಇಂಡಿಯಾ ಸಮರ ನಡೆಯುತ್ತಿದೆ. ಈ ಎರಡೂ ಜಗಳದ ಹಿಂದೆ ಇರುವುದು ಮತಗಳಿಕೆ ರಾಜಕಾರಣವೇ ಹೊರತು ಬೇರೇನೂ ಅಲ್ಲ. ಅತ್ತ ಸನಾತನ ಧರ್ಮವನ್ನು ಟೀಕಿಸುತ್ತಾ ಹಿಂದೂ ಏತರ ಮತಗಳನ್ನು ಸೆಳೆಯಲು ಪ್ರಯತ್ನ ನಡೆಯುತ್ತಿದ್ದರೆ, ಇತ್ತ ಸನಾತನ ಧರ್ಮವನ್ನು ಸಮರ್ಥಿಸಿ ಕೊಂಡು ಹಿಂದೂಗಳ ಮತಗಳ ಮೇಲೆ ಕಣ್ಣು ಹಾಕಲಾಗುತ್ತಿದೆ. ಅದೇ ರೀತಿ ಭಾರತ-ಇಂಡಿಯಾ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ಸನಾತನ ಧರ್ಮವನ್ನು ರೋಗಕ್ಕೆ ಹೋಲಿಸಿದ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಪ್ರಧಾನಿಯೇ ಇದರ ವಿರುದ್ಧ ಸಮರ ಸಾರಿದ್ದು, ಸನಾತನ ಧರ್ಮದ ಅವಹೇಳನಕ್ಕೆ ಪ್ರತ್ಯುತ್ತರ ನೀಡಿ ಎಂದು ಸಚಿವ ಸಂಪುಟ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಇದೇ ಉದಯನಿಧಿ ಸ್ಟಾಲಿನ್ ಇತರೆ ಧರ್ಮದ ಬಗ್ಗೆ ಈ ರೀತಿಯ ಮಾತುಗಳನ್ನು ಹೇಳಿದ್ದರೆ ಪರಿಣಾಮವೇನಾಗುತ್ತಿತ್ತು? ದಂಗೆ, ಹಿಂಸಾಚಾರ ನಡೆದು ದೇಶ ಹೊತ್ತಿ ಉರಿಯುತ್ತಿತ್ತು. ಯಾರೋ ಒಬ್ಬ ಸಂತ ಉದಯನಿಧಿ ಸ್ಟಾಲಿನ್ ತಲೆ ಕಡಿದವರಿಗೆ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ್ದನ್ನು ಬಿಟ್ಟರೆ ಬೇರಾವುದೇ ಅನಾಹುತ ನಡೆದಿಲ್ಲ. ಏಕೆಂದರೆ, ಸನಾತನ ಧರ್ಮದ ಸೌಂದರ್ಯವೇ ಅಂತಹದ್ದು. ಇಲ್ಲಿ ಟೀಕೆ, ಚರ್ಚೆ, ವಿರೋಧಕ್ಕೆ ಅವಕಾಶವಿದೆ. ಅದೆಲ್ಲವನ್ನೂ ಜೀರ್ಣಿಸಿಕೊಂಡೇ ಅದು ಬಂದಿದೆ. ಎಲ್ಲರನ್ನು ಸಮಾನವಾಗಿ ಕಾಣಬೇಕು ಎಂದು ಹೇಳುವ ಧರ್ಮದಲ್ಲಿ ಜಾತಿ ವ್ಯವಸ್ಥೆ, ಮೇಲು-ಕೀಳು ಭಾವನೆ ಇದ್ದರೂ ಅದನ್ನೂ ಸಹಿಸಿ
ಕೊಂಡು ಬಂದಿದೆ. ಆದರೆ, ಉದಯನಿಧಿ ಸ್ಟಾಲಿನ್‌ನ ರೋಗಗ್ರಸ್ಥ ಮನಸ್ಸಿನ ಹೇಳಿಕೆ ರಾಜಕೀಯ ಪಕ್ಷಗಳಿಗೆ ಮತಗಳಿಕೆಯ ಅಸವಾಗಿದೆ. ಸನಾತನ ಧರ್ಮದ ಹೆಸರಿನಲ್ಲಿ ಜಾತಿಗಳನ್ನು ಪರಸ್ಪರ ಎತ್ತಿಕಟ್ಟಿದರೆ ಶೋಷಿತರ ಮತಗಳು ತಮಗೆ ಗ್ಯಾರಂಟಿ ಎಂಬ ಕಾರಣಕ್ಕೆ ಆತನ ಹೇಳಿಕೆಯನ್ನು ಅನೇಕ ರಾಜಕೀಯ ಪಕ್ಷಗಳು ಬೆಂಬಲಿಸುತ್ತಿವೆ. ವಿಶೇಷ ವೆಂದರೆ, ಉದಯನಿಧಿ ಸ್ಟಾಲಿನ್ ಹೇಳಿಕೆ ಬೆಂಬಲಿಸುತ್ತಿರುವ ಎಲ್ಲಾ ಪಕ್ಷಗಳು ಕಾಂಗ್ರೆಸ್ ನೇತೃತ್ವದ ಇಂಡಿಯ ಮೈತ್ರಿಕೂಟದ ಭಾಗವಾಗಿವೆ.

ಅಂದರೆ ಇದು ಹಿಂದೂಗಳನ್ನು ಜಾತಿಯ ಆಧಾರದಲ್ಲಿ ವಿಭಜಿಸಿ ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ತಂತ್ರ ಎಂಬುದು ಸ್ಪಷ್ಟವಾಗುತ್ತದೆ. ಮತ್ತೊಂದೆಡೆ ಸನಾತನ ಧರ್ಮವನ್ನು ಬೆಂಬಲಿಸುತ್ತಾ, ಅದನ್ನು ಸಮರ್ಥಿಸಿ ಕೊಳ್ಳಲಾಗುತ್ತಿದೆ. ಇದರಲ್ಲಿ ರಾಜಕೀಯ ಪಕ್ಷಗಳು ಪಾಲ್ಗೊಳ್ಳುತ್ತಿರುವುದು ವೋಟ್‌ಬ್ಯಾಂಕ್‌ನ ಒಂದು ಭಾಗವೇ ಹೌದಾದರೂ ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯೇ ಹೊರತು ಬೇರೇನೂ ಅಲ್ಲ. ಸನಾತನ ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವುದು ಎಷ್ಟು ದೊಡ್ಡ ಅಪರಾಧವೋ, ಶೋಷಣೆ ಹೆಸರಿನಲ್ಲಿ ಸನಾತನ ಧರ್ಮವನ್ನು ದೂರುವುದೂ ಅಷ್ಟೇ ದೊಡ್ಡ ಅಪರಾಧ. ಮತ್ತೂ ಮಹತ್ವದ ಸಂಗತಿ ಎಂದರೆ, ಸನಾತನ ಧರ್ಮವನ್ನು ಟೀಕಿಸುವರಾರೂ ಶೋಷಣೆಯಿಂದ ಮುಕ್ತರಾಗುವ ಬಗ್ಗೆ ಗಮನಹರಿಸುತ್ತಿಲ್ಲ. ಶೋಷಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಆ ಅಧಿಕಾರವನ್ನು ಅವರಷ್ಟೇ ಅನುಭವಿಸಿ ನಿಜವಾಗಿಯೂ ಶೋಷಣೆಗೆ ಒಳಗಾಗುತ್ತಿರುವರ ಬಗ್ಗೆ ಕನಿಕರ ತೋರಿಸಿ ಅದರಿಂದ ರಾಜಕೀಯ ಲಾಭ ಪಡೆದು ಕೊಳ್ಳುತ್ತಿದ್ದಾರೆಯೇ ಹೊರತು ಅದನ್ನು ತಡೆಯಲು ಗಂಭೀರ ಪ್ರಯತ್ನ ಮಾಡುವುದೇ ಇಲ್ಲ. ಅಧಿಕಾರದಲ್ಲಿದ್ದಾಗಲೂ ಅದನ್ನೇ ಅಸವಾಗಿಸಿಕೊಳ್ಳುತ್ತಾರೆಯೇ ಹೊರತು ಸಿಕ್ಕಿದ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಸಮಾಜವನ್ನು ಶೋಷಣೆಮುಕ್ತ ಗೊಳಿಸಲು ಕ್ರಮ ಕೈಗೊಳ್ಳುತ್ತಿಲ್ಲ.

ಶೋಷಿತ ವರ್ಗವನ್ನು ಶೋಷಣೆಯಿಂದ ಮುಕ್ತಗೊಳಿಸಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಸಂವಿಧಾನದಲ್ಲಿ ಮೀಸಲು ಸೌಲಭ್ಯ ಕಲ್ಪಿಸಿ, ಅದಕ್ಕೆ ೧೦ ವರ್ಷದ ಸಮಯ ನೀಡಲಾಗಿತ್ತು. ಆದರೆ, ಏಳು ದಶಕ ಕಳೆದರೂ ಶೋಷಿತ ವರ್ಗ ಸುಧಾರಿಸಿಲ್ಲ. ಆದರೆ, ಅದರ ಲಾಭ ಪಡೆದ ಕೆಲವೇ ಮಂದಿ ತಾವು ಮೇಲೆ ಬಂದರೇ ಹೊರತು ಇತರರನ್ನೂ ಮೇಲೆತ್ತಲಿಲ್ಲ. ಇಂದಿಗೂ ಮೀಸಲು ಸೌಲಭ್ಯ ಮುಂದುವರಿದಿರುವುದೇ ಇದಕ್ಕೆ ಸಾಕ್ಷಿ. ಆದರೆ, ಶೋಷಿತರ ಹೆಸರಿನಲ್ಲಿ ವಂಶಪಾರಂಪರ್ಯ ವಾಗಿ ಅಧಿಕಾರ ಅನುಭವಿಸು ತ್ತಿರುವವರು ಸನಾತನ ಧರ್ಮವನ್ನು ಟೀಕಿಸುತ್ತಾ ಪರಸ್ಪರ ಜಾತಿಯ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಿ ಅದರಿಂತ ತಾವು
ಲಾಭ ಪಡೆದು ಮತ್ತೆ ವಂಶ ಪಾರಂಪರ್ಯದ ಆಡಳಿತವನ್ನು ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ. ರಾಜಕಾರಣಿಗಳ ಈ ಕುತಂತ್ರದಿಂದಾಗಿಯೇ ಸಂವಿಧಾನದಲ್ಲಿ ಅವಕಾಶ ಗಳಿದ್ದರೂ ಶೋಷಣೆ ಮುಂದುವರಿಯುವುದನ್ನು ತಪ್ಪಿಸುತ್ತಿಲ್ಲ. ಅವರ ಕುತಂತ್ರಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ.

ಲಾಸ್ಟ್ ಸಿಪ್: ಕಾಮಾಲೆ ಕಣ್ಣಿನರಿಗೆ ಕಾಣೋದೆಲ್ಲಾ ಹಳದಿಯಾದರೆ, ರಾಜಕೀಯ ರೋಗಗ್ರಸ್ಥ ಮನಸ್ಸುಗಳಿಗೆ ವೋಟ್‌ಬ್ಯಾಂಕ್ ಹೊರತಾದವೆಲ್ಲವೂ ರೋಗದಂತೆ.