ಅಭಿಮತ
ಸಂದೀಪ್ ಶರ್ಮಾ ಮೂಟೇರಿ
ಅಭಿವ್ಯಕ್ತಿಯು ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು ನಮ್ಮ ಸಂವಿಧಾನವು 19(1) (ಎ) ವಿಧಿ ಅಡಿಯಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ನೀಡಿದೆ ಹಾಗೂ ಈ ವಿಧಿಗೆ 19(2)ರ ಅಡಿಯಲ್ಲಿ ಅದರ ಮಿತಿಗಳನ್ನೂ ತಿಳಿಸಿದೆ. ಪ್ರಜೆಯು ತನಗನಿಸಿದ್ದನ್ನು ನಿರ್ಭಿಡೆಯಿಂದ ವ್ಯಕ್ತಪಡಿಸುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ. ಮನೆಯಲ್ಲಿ ರಚ್ಚೆ ಹಿಡಿಯುವ ಮಗುವಿನಿಂದ ಮೊದಲ್ಗೊಂಡು, ರಾಷ್ಟ್ರದ ಮುಖ್ಯಸ್ಥರ ತನಕ ಪ್ರತಿಯೊಬ್ಬರೂ ತಮ್ಮದೇ ಆದ ರೀತಿ ಯಲ್ಲಿ ಅದನ್ನು ಅನುಭವಿಸುತ್ತಿರುವುದು ಈಗಿನ ವಾಸ್ತವ.
ಮನುಷ್ಯನ ಅಮೂರ್ತ ಯೋಚನೆಗಳು ಸಂವಹನ ಮಾಧ್ಯಮಗಳ ಮೂಲಕ ಮೂರ್ತರೂಪ ತಳೆಯುವುದೇ ಅಭಿವ್ಯಕ್ತಿ. ಮಾತು ಮತ್ತು ಅದರ ವಿವಿಧ ಪ್ರಕಾರಗಳಾದ ಬರಹ, ಅಭಿನಯ, ಸನ್ನೆ, ಸಂಕೇತ, ಚಿತ್ರ- ಚಲನಚಿತ್ರ, ಸಂಗೀತ, ಸಾಮಾಜಿಕ ಮಾಧ್ಯಮಗಳು ಇವೆಲ್ಲವೂ ಅಭಿವ್ಯಕ್ತಿಯ ವೈವಿಧ್ಯಗಳು. ಇವೆಲ್ಲಕ್ಕೂ ಸಂವಿಧಾನ ಅಸ್ತು ಎಂದಿದ್ದರೂ, ಪ್ರತಿಯೊಂದಕ್ಕೂ ಹೊಣೆಗಾರಿಕೆಯ ಭದ್ರಕೊಂಡಿಯನ್ನು ಬೆಸೆದು ನಿಯಂತ್ರಿಸಿದೆ. ಇಲ್ಲಿ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವಗಳು ಒಂದೇ ನಾಣ್ಯದ ಎರಡು ಮುಖಗಳು.
‘ಅಭಿವ್ಯಕ್ತಿ ಸ್ವಾತಂತ್ರ್ಯ’ವು ಸದ್ಯಕ್ಕೆ ಕರ್ನಾಟಕದಲ್ಲಿ ಗಮನ ಸೆಳೆಯುವಂತೆ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ರಾಗಿದ್ದು ‘ಗುರು’ ಸ್ಥಾನದಲ್ಲಿರುವ ಒಬ್ಬರು ಮಠಾಧಿಪತಿ ಹಾಗೂ ‘ಮಹಾಗುರು’ ಎಂದೇ ಕರೆಸಿಕೊಳ್ಳುವ ಒಬ್ಬ ಚಲನಚಿತ್ರ ಸಂಗೀತ ನಿರ್ದೇಶಕರು. ಇವರಿಬ್ಬರೂ ತಮ್ಮ ಅಸಂಬದ್ಧ ಹೇಳಿಕೆಗಳಿಂದಾಗಿ, ತಮ್ಮ ವಿವೇಚನೆಯು ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಜನರು ತಾವು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಾರೆ, ತಾವು ಹೇಳಿದಂತೆ ಪಾಲಿಸುತ್ತಾರೆ ಎಂದು ಇವರಿಬ್ಬರೂ ಭಾವಿಸಿದ್ದರೆ, ಇವರಂಥ ದಡ್ಡರು ಮತ್ತು ಸಂಕುಚಿತ ಸ್ವಭಾವದವರು ಎಲ್ಲಿಯೂ ಸಿಗಲಿಕ್ಕಿಲ್ಲ.
ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿ ಮಾಡಿ ತಲೆಮರೆಸಿಕೊಳ್ಳಲು ಇಂಥ ಬುದ್ಧಿಜೀವಿಗಳು/ಎಡ ಪಂಥೀಯರು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಅದರಲ್ಲೂ, ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ‘ಮಹಾಗುರು’ಗಳಿಂದ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ದುರುಪಯೋಗ ಜೋರಾಗಿಯೇ ನಡೆದಿದೆ!
ಈ ದೇಶದಲ್ಲಿ ನಡೆಯುವ ಎಷ್ಟೋ ಕೋಮುಪ್ರಚೋದನಾ ದಂಗೆಗಳಿಗೆ ಇಂಥ ಸೋಗಲಾಡಿ ಬುದ್ಧಿಜೀವಿಗಳೇ
ಕಾರಣರಾಗಿರುತ್ತಾರೆ. ಆದರೆ ಅವರೊಂದು ಚಂದದ ಮುಖವಾಡ ಧರಿಸಿರುತ್ತಾರೆ- ಅದರ ಹೆಸರೇ ‘ಅಭಿವ್ಯಕ್ತಿ ಸ್ವಾತಂತ್ರ್ಯ’. ಇದೊಂದು ವ್ಯವಸ್ಥಿತ ಜಾಲ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಅಭಿವ್ಯಕ್ತಿ
ಸ್ವಾತಂತ್ರ್ಯವನ್ನು ಬಳಸಿಕೊಳ್ಳುವ ಇವರು, ಸಂವಿಧಾನದ 19(1)(ಎ) ವಿಧಿಯ ಬಗ್ಗೆ ಮಾತ್ರ ಹೇಳಿ ಜನರನ್ನು
ಮೂರ್ಖರಾಗಿಸಲು ಹೊರಟಂತಿದೆ. ದೇಶದ ನೈಜ ಇತಿಹಾಸ ಮತ್ತು ಸಂಸ್ಕೃತಿಯ ಪರ ಮಾತನಾಡುವವರನ್ನು,
‘ದಾಳಿಕೋರರು’ ಅಥವಾ ‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವವರು’ ಎಂಬಂತೆ ಚಿತ್ರಿಸಲು ಇವರು ಯತ್ನಿಸು ತ್ತಾರೆ.
‘ಬ್ರಾಹ್ಮಣರು ಹಾಗೆ, ಹೀಗೆ…’, ‘ಹಿಂದುತ್ವದಿಂದ ಬಹಳಷ್ಟು ತೊಂದರೆಯಾಗುತ್ತಿದೆ’ ಎನ್ನುತ್ತಾ ಮೈ ಪರಚಿಕೊಂಡು, ತಮ್ಮ ಈ ಕೆಟ್ಟ ವಿಧಾನವನ್ನು ಮುಂದಿಟ್ಟುಕೊಂಡು ‘ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ’ ಎಂದು ಬೊಬ್ಬೆ ಹೊಡೆಯುವ ಇವರು, ಅದೇ ಸಂವಿಧಾನದಲ್ಲಿರುವ 19(2) ವಿಧಿಯ ಬಗ್ಗೆ ಏನೂ ಮಾತನಾಡುವುದಿಲ್ಲ. ಏಕೆಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಅಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸುಳ್ಳುಗಳನ್ನು ಹೇಳುವುದು ಅಥವಾ ಯಾವುದೋ ಧರ್ಮವನ್ನು ಹೀಯಾಳಿಸುವಂತೆ ವರ್ತಿಸುವುದು (ಅದು ಬರಹ ಅಥವಾ ಭಾಷಣ ಯಾವುದೇ ಆಗಿರಲಿ) ಸಾಧ್ಯವಿಲ್ಲ ಎಂದು ಅದು ಹೇಳುತ್ತದೆ.
ಭಾರತವನ್ನು ಹೀಯಾಳಿಸಿ ಘೋಷಣೆ ಕೂಗುವುದು, ‘ರಾಮ ಸುಳ್ಳು, ರಾಮಾಯಣ ಸುಳ್ಳು; ಭಗವದ್ಗೀತೆಯನ್ನು ಸುಡಬೇಕು’ ಎನ್ನುವುದು, ಮೂರ್ತಿಪೂಜೆಯನ್ನು ವಿರೋಧಿಸುವ ಭರದಲ್ಲಿ ವಿಗ್ರಹಗಳನ್ನು ಒಡೆದುಹಾಕುವುದು,
ಗೋವನ್ನು ಪೂಜಿಸುವವರೆದುರು ಗೋಮಾಂಸ ತಿನ್ನುವುದು ಇವೆಲ್ಲ ನಮ್ಮ ಬುದ್ಧಿಜೀವಿಗಳ ದೃಷ್ಟಿಯಲ್ಲಿ ‘ಅಭಿ ವ್ಯಕ್ತಿ ಸ್ವಾತಂತ್ರ್ಯ!’. ಬ್ರಾಹ್ಮಣರ ಹೀಯಾಳಿಕೆಯೊಂದೇ ಅಲ್ಲ, ಇನ್ನೂ ಅನೇಕ ಪ್ರಕರಣಗಳು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಚಿತ್ರಿತಗೊಂಡಿವೆ.
ಎಂ.ಎಫ್.ಹುಸೇನ್ ಎಂಬ ಚಿತ್ರಕಲಾವಿದ ಹಿಂದೂ ದೇವರುಗಳನ್ನು ನಗ್ನವಾಗಿ ಚಿತ್ರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಳ್ಳುತ್ತದೆ; ಆದರೆ ತಸ್ಲೀಮಾ ನಸ್ರೀನ್ ಎಂಬ ಹೆಣ್ಣು ಮಗಳು ಮುಸ್ಲಿಂ ಸಮುದಾಯದ ಹುಳುಕು ಗಳ ಬಗ್ಗೆ ಬರೆದರೆ ಅದು ‘ಧರ್ಮನಿಂದನೆ’ ಆಗುತ್ತದೆ ಮತ್ತು ಅದನ್ನು ಪ್ರಶ್ನಿಸಬೇಕಾದ ಇದೇ ಬುದ್ಧಿಜೀವಿಗಳು ಗಾಢಮೌನವನ್ನು ತಳೆಯುತ್ತಾರೆ. ಹಾಗಾದರೆ, ಇದ್ಯಾವ ಹೋರಾಟ? ಈ ಬುದ್ಧಿಜೀವಿಗಳಿಗೆ ಹಿಂದೂ ಧರ್ಮದಲ್ಲಿನ ಹುಳುಕು ತೋರಿಸುವಾಗ ಇರುವ ಆಸಕ್ತಿಯು ಅನ್ಯಧರ್ಮಗಳಲ್ಲಿನ ಮೂಢನಂಬಿಕೆಗಳನ್ನು ಹೊರ ಹಾಕುವಾಗ ಇರುವುದಿಲ್ಲವೇಕೆ? ನಮ್ಮ ಸಮಾಜ ವೈವಿಧ್ಯಮಯ, ಒಬ್ಬನಂತೆ ಇನ್ನೊಬ್ಬನಿಲ್ಲ.
ಅಭಿಪ್ರಾಯಭೇದ, ವೈರುಧ್ಯಗಳು, ಪ್ರತ್ಯೇಕ ಯೋಚನೆ-ಯೋಜನೆ-ಪರಿಕಲ್ಪನೆಗಳ ಮಧ್ಯದಲ್ಲಿ ಎಲ್ಲ ಗೊಂದಲಗ
ಳನ್ನು ಸರಿದೂಗಿಸಿಕೊಂಡು ಬಾಳಬಲ್ಲವನೇ ಜಾಣ; ತಪ್ಪಿದರೆ ಅಪಾಯ ಶತಸ್ಸಿದ್ಧ. ಆದ್ದರಿಂದ, ಅಭಿವ್ಯಕ್ತಿಗೂ ಮೊದಲು ಅದರ ಪರಿಣಾಮವನ್ನು ಊಹಿಸುವ ಪ್ರೌಢಿಮೆಯನ್ನು ಕರ್ತೃವು ಬೆಳೆಸಿಕೊಳ್ಳಲೇಬೇಕು. ಮತ್ತೆ, ಹೊಣೆ ಯಿಂದ ನುಣುಚಿಕೊಳ್ಳುವುದು ಸುಲಭವಲ್ಲ. ತಪ್ಪಿದರೆ, ನಿಂದನೆ, ಟೀಕೆ, ಮುಜುಗರಕ್ಕೆ ಒಳಗಾಗುವು ದರೊಂದಿಗೆ, ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯಾಗುವ ಗಂಭೀರ ಸನ್ನಿವೇಶಗಳೂ ಸೃಷ್ಟಿಯಾಗಬಹುದು. ಇದನ್ನು ಸೃಷ್ಟಿಸಲು ಒಂದು ಹೇಳಿಕೆ/ ಕಿರುಬರಹ/ಟ್ವೀಟ್ ಸಾಕು. ಪೈಂಟಿಂಗ್, ಚಲನಚಿತ್ರ, ಕಾದಂಬರಿ, ಕಾವ್ಯವಿಮರ್ಶೆ ಮುಂತಾದವು ತಮ್ಮ ಚೌಕಟ್ಟು ಮೀರಿದರೆ ಅಶಾಂತಿಗೆ ಆಹ್ವಾನ ನೀಡಬಲ್ಲವು. ಕೆಲವೊಮ್ಮೆ ಇದಕ್ಕೆಂದೇ ಬಹಳಷ್ಟು ಸಮಯ ಸಾಧಕರು ಕಾಯುತ್ತಲೂ ಇರುತ್ತಾರೆ. ‘ತಣ್ಣೀರಾದರೂ ತಣಿಸಿ ಕುಡಿಯಬೇಕು; ಸತ್ಯವನ್ನೇ ಹೇಳು, ಪ್ರಿಯವಾದುದನ್ನೇ ಹೇಳು, ಅಪ್ರಿಯ ಸತ್ಯವನ್ನು ಹೇಳದಿರು, ಪ್ರಿಯವೆಂದು ಸುಳ್ಳು ಹೇಳದಿರು’- ಇದುವೇ ಸನಾತನ ಧರ್ಮ.
ಅಭಿವ್ಯಕ್ತಿಯ ಹಪಹಪಿಗೆ ಬಿದ್ದು, ಇತರರೆಡೆಗಿನ ಅವಜ್ಞೆಯಿಂದ ಅಥವಾ ತನ್ನದೇ ಸರಿಯೆಂಬ ಪೂರ್ವಗ್ರಹದಿಂದ
ಹೇಳಹೊರಟರೂ, ಸಮಾಜದ ಒರೆಗಲ್ಲಿನಲ್ಲಿ ಸರಿಯೆನ್ನಿಸಿಕೊಂಡೇ ಬರಬೇಕು. ಇಲ್ಲವಾದರೆ ಅನರ್ಥ ಕಾದಿದೆ
ಎಂದರ್ಥ. ಒಂದೊಮ್ಮೆ ತಾವು ಹೇಳಹೊರಟಿರುವುದು ಕಠೋರಸತ್ಯವಾಗಿದ್ದರೆ, ಸಾಕ್ರೆಟಿಸ್, ಟಾಲ್‌ಸ್ಟಾಯ್‌ರಂತೆ
ಎದುರಿಸುವ ಎದೆಗಾರಿಕೆ ಅಂಥವರಿಗೆ ಇರಬೇಕು. ವ್ಯಕ್ತಿ ಮತ್ತು ಇತರ ಘಟಕಗಳಿಗೆ (ಕುಟುಂಬ, ಸಮಾಜ, ದೇಶ)
ನೋವಾಗದಂತೆ ಸಂವಹಿಸಲು ಸಮಾಧಾನ ಬೇಕು.
ಚಿಂತನಶಕ್ತಿ, ವಿಚಾರವನ್ನು ವಿವಿಧ ಕೋನಗಳಿಂದ ಅವಲೋಕಿಸುವ ಜಾಣ್ಮೆ ಬೇಕು. ಯಾವುದೇ ಧರ್ಮವನ್ನು
ಹೀಯಾಳಿಸುವ ಕೆಲಸ ಸಲ್ಲ; ಏಕೆಂದರೆ ಅದು ನಂಬಿಕೆಯ ವಿಷಯ, ಭಾವನೆಯ ಬಾಬತ್ತು. ಗಣಪತಿ, ರಾಮ ಮತ್ತು
ಕೃಷ್ಣರ ಬಗ್ಗೆ ನಮಗೆ ಗೌರವ-ವಿಶ್ವಾಸ ಇಲ್ಲದಿದ್ದರೆ ನಷ್ಟವೇ ನಿಲ್ಲ; ಆದರೆ ಅವರನ್ನು ದೇವರು/ಮಹಾತ್ಮರು ಎಂದು
ನಂಬಿ ಆರಾಧಿಸುವ ಕೋಟ್ಯಂತರ ಜನ ಈ ಭೂಮಿಯಲ್ಲಿದ್ದಾರೆ ಎಂಬ ಸತ್ಯವನ್ನು ನಾವು ಮರೆಯಬಾರದು. ಅವರ
ನಂಬಿಕೆಗಳನ್ನು ಘಾಸಿಗೊಳಿಸುವುದಕ್ಕೆ ಮುಂದಾಗಬಾರದು.
ಅವರ ಭಾವನೆಗಳನ್ನು ಕೆರಳಿಸುವಂಥದ್ದನ್ನು ನಾವು ಬರೆಯಬಾರದು, ಆಡಬಾರದು, ಚಿತ್ರಿಸಬಾರದು. ಕಲೆ ಅಥವಾ
ಸಾಹಿತ್ಯವು ಅಂಥ ಅಧಿಕಾರವನ್ನು ನಮಗೆ ಕೊಡುವುದಿಲ್ಲ ಎಂಬ ಪ್ರಜ್ಞೆ ನಮಗಿರಬೇಕು. ಇನ್ನೊಬ್ಬರ ಭಾವನೆ ಗಳನ್ನು ನೋಯಿಸದೆಯೇ ಮಠಾಧಿಪತಿ, ‘ಮಹಾಗುರು’, ಮಹಾನ್ ಸಾಹಿತಿ, ಚಿತ್ರಕಾರರಾಗುವ ಹೇರಳ ಅವಕಾಶಗಳು
ನಮಗಿವೆ. ಹೀಗೆ ಬದುಕಬಾರದೇಕೆ? ಇತಿಹಾಸವನ್ನು ತಿರುಚಿ ತಮ್ಮ ಕಲ್ಪನೆಗೆ ಬಂದಂತೆ ಹೇಳಿಕೆ ಕೊಟ್ಟು, ಅದರಿಂದ
ವ್ಯತಿರಿಕ್ತ ಪರಿಣಾಮಗಳಾದರೆ ಅಥವಾ ಟೀಕೆಗಳು ಹೊಮ್ಮಿದರೆ, ‘ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯಿತು’
ಎನ್ನುವ ಬದಲು, ನೈಜ ಇತಿಹಾಸವನ್ನು ಓದಿಕೊಂಡು ಅದನ್ನೇ ನಮ್ಮ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ
ಮಾಡಬೇಕು.
ಜನನಾಯಕರೆನಿಸಿಕೊಂಡವರು ಈಗೀಗ ಕೊಡುತ್ತಿರುವ ಹೇಳಿಕೆಗಳು, ಎದುರಾಳಿಗೆ ಪ್ರಯೋಗಿಸುವ ಏಕವಚನ, ಪ್ರಜಾಪ್ರಭುತ್ವದ ದೇಗುಲದಲ್ಲಿ ವಿಷಯವನ್ನು ಮಂಡಿಸುವ-ಖಂಡಿಸುವ ಪರಿ ಇವುಗಳು ಮೌಲ್ಯಗಳನ್ನೂ ಪ್ರಶ್ನಾ ರ್ಹವಾಗಿಸುತ್ತಿವೆ. ಇದು ಸಾಲದೆಂಬಂತೆ, ದೃಶ್ಯಮಾಧ್ಯಮಗಳೂ ಈ ವಿಷಯಗಳನ್ನು ಇನ್ನಷ್ಟು ‘ಹೈಪ್’ ಮಾಡಿ ಕ್ಲೀಷೆಯುಂಟುಮಾಡುತ್ತಿವೆ. ಇವೆಲ್ಲವೂ ಸಾಮಾಜಿಕರಲ್ಲಿ ಪ್ರತಿಫಲನಗೊಂಡಾಗ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಳಿ ತಪ್ಪುತ್ತಿರುವಿಕೆ ಅನುಭವವಾಗದೇ ಇರದು.
ಯಾವುದೇ ಪ್ರಕಾರದಿಂದ ಯಾರಿಗಾದರೂ ಸರಿ ಸಂತೋಷವನ್ನುಂಟು ಮಾಡುವುದು ಪ್ರಾಜ್ಞನ ಲಕ್ಷಣ. ಅದುವೇ ದೇವಪೂಜೆ. ರಕ್ಷಣೆಗಾಗಿ ಇರುವ ಬಂದೂಕು ದುಷ್ಟನ ಕೈಗೆ ಸಿಕ್ಕಿ ಅಮಾಯಕರ ಸಾವಿಗೆ ಕಾರಣವಾಗಬಾರದಲ್ಲವೇ? ಅದೇ ರೀತಿಯಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವು ಮನುಷ್ಯನ ಸ್ವಾತಂತ್ರ್ಯದ, ನಾಗರಿಕತೆಯ ವಿಕಸನಕ್ಕೆ ಕಾರಣವಾಗ ಬೇಕೇ ಹೊರತು ಅವನ ವಿನಾಶಕ್ಕೆ ಆಯುಧವಾಗಬಾರದು.
(ಲೇಖಕರು ಸಿವಿಲ್ ಎಂಜಿನಿಯರ್)