Thursday, 26th December 2024

ತಾಯ್ನುಡಿಯ ಸಂಸ್ಕಾರ ಬಾಲ್ಯದಲ್ಲೇ ಸಿಗಬೇಕು

ದಾಸ್ ಕ್ಯಾಪಿಟಲ್

dascapital1205@gmail.com

ಆಧುನಿಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಕ್ಷೀಣಿಸುತ್ತಿದೆ. ಆಧುನಿಕತೆಯ ಗುಂಗಿನ ಜೀವನದಲ್ಲಿ ಮಕ್ಕಳ ಜತೆ ದಿನದಲ್ಲಿ ಒಂದಿಷ್ಟು ಸಮಯ
ಕಳೆಯುವುದಕ್ಕೆ ಪೋಷಕರಿಗೆ ಅಸಾಧ್ಯವಾಗಿ ಕಂಪ್ಯೂಟರ್, ಮೊಬೈಲನ್ನು ಕೊಟ್ಟು ಅವರ ಪಾಡಿಗೆ ಅವರನ್ನು ಬಿಡುವುದರಿಂದ ಮಕ್ಕಳಿಗೆ ಪುಸ್ತಕ ಲೋಕದ ಅರಿವು ಮತ್ತು ಬೆರಗು ಬಾಲ್ಯದಲ್ಲೇ ಸಿಗದಂತಾಗಿದೆ.

ದಿನಪತ್ರಿಕೆಯೊಂದರ ಹೆಸರು ಕೂಡ ಗೊತ್ತಿಲ್ಲದ ಸ್ಥಿತಿಯಲ್ಲಿ ನಮ್ಮ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಇನ್ನು ಕೆಲವು ಮಕ್ಕಳಿಗೆ ಕನ್ನಡ ದಿನಪತ್ರಿಕೆ ಯನ್ನು ಓದುವುದೇ ಕೀಳರಿಮೆಯಾಗಿ ಕಾಣುತ್ತಿದೆ. ಕನ್ನಡದ ಮೇಲಿನ ಸಿನಿಕತನದಿಂದ ಹುಟ್ಟಿದ ಅಂಗ್ಲಪತ್ರಿಕೆಯ ಷೋಕಿ ಮಕ್ಕಳಲ್ಲೂ ಬೆಳೆಯುತ್ತಿದೆ. ಹಿಂದೆಲ್ಲಾ ರಾಮಾಯಣ, ಮಹಾಭಾರತ ಮತ್ತು ಪುರಾಣ, ಜನಪದೀಯ ಕತೆಗಳನ್ನು ಹಾಡುಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದರು. ಈಗ ಆ ಪರಿಪಾಠ ನಗರಗಳಲ್ಲಿ ಬಿಡಿ ಹಳ್ಳಿಯಲ್ಲೇ ಇಲ್ಲ.

ಟಿವಿ ಧಾರಾವಾಹಿಗಳಲ್ಲಿ ಮುಳುಗಿರುವ ದೊಡ್ಡವರ ಅವಗಣನೆಗೊಳಗಾದ ಮಕ್ಕಳ ಬುದ್ಧಿ ಮತ್ತು ಭಾವಲೋಕ ಬಡವಾಗುತ್ತಿದೆ. ಶಾಲೆಯಿಂದ ಬಂದ ಮಕ್ಕಳ ಜತೆ ಹೆತ್ತವರು ಬೆರೆಯುವುದು ಕಡಿಮೆಯಾಗಿದೆ. ಮಾನಸಿಕವಾಗಿ, ಭಾವನಾತ್ಮಕವಾಗಿ ಮಕ್ಕಳಲ್ಲಿ ಸ್ಥೈರ್ಯ ಮತ್ತು ಧೈರ್ಯ ಹೆಚ್ಚುವುದು ಮನೆಯಿಂದಲೇ ವಿನಾ ಶಾಲೆಯಿಂದಲ್ಲ. ಮಕ್ಕಳಲ್ಲಿ ಮನೆಯಿಂದಲೇ ಒಂದು ಬಗೆಯ ಅಮೂರ್ತ ಭದ್ರತೆಯ ಭಾವ ಹುಟ್ಟಿಕೊಳ್ಳುತ್ತದೆ. ಈ ಭಾವ ದಿಂದಾಗಿ ಜೀವನಮೌಲ್ಯಗಳನ್ನು ಬಾಲ್ಯದಲ್ಲೇ ಪಡೆಯಲು ಸಾಧ್ಯವಾಗುತ್ತದೆ.

ಹಿರಿಯರಲ್ಲಿ ಗೌರವ, ಗೆಳೆಯರಲ್ಲಿ ಆತ್ಮೀಯತೆ, ನೆರೆಹೊರೆಯವರಲ್ಲಿ ಸಾಮರಸ್ಯ, ಗುಂಪಿನಲ್ಲಿ ಹೊಂದಾಣಿಕೆ, ಸಂಸ್ಕಾರಯುತ ಭಾಷೆ, ತಂದೆತಾಯಿ ಯರನ್ನು ಅಗಲಿ ಬದುಕುವ ಸಾಮರ್ಥ್ಯ, ನಿಸ್ಪೃಹತೆ, ಪ್ರಾಮಾಣಿಕತೆ, ಸ್ವನಿರ್ಧಾರದ ಸಾಮರ್ಥ್ಯ, ಸೋಲುಗೆಲುವನ್ನು ಸಮನಾಗಿ ಸ್ವೀಕರಿಸುವ ಭಾವ, ದುಡ್ಡೇ ಎಲ್ಲವೂ ಅಲ್ಲೆಂಬ ಅರಿವು, ಅನ್ಯರ ಅಸ್ತಿತ್ವವನ್ನು ಮತ್ಸರಿಸದ ಗುಣ, ಮಾನವೀಯತೆ ಅಂಶಗಳು ಇವೆಲ್ಲಾ ಮಕ್ಕಳನ್ನು ಸರಿಯಾಗಿ-ಸಹಜವಾಗಿ ಬೆಳೆಸುವುದರಿಂದ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆ ಅನುವು ಮಾಡಿ ಕೊಡುತ್ತದೆ.

ಮನೆ, ಶಾಲೆ ಮತ್ತು ಸಮಾಜದ ಪರಿಸರ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ವಿನ್ಯಾಸದಲ್ಲಿ ಬಹುಪ್ರಧಾನವಾದುದು. ಒಟ್ಟಾಗಿ ಕೂಡಿ ಆಡುವುದನ್ನು ಉಣ್ಣುವು ದನ್ನು ಓದುವುದನ್ನು ಕಲಿಸುವಲ್ಲಿ ಹೆತ್ತವರ, ಬಂಧುಗಳ, ಶಿಕ್ಷಕರ, ಸಹಪಾಠಿಗಳ, ಸಮಾಜದ ಪಾತ್ರವೇ ಮುಖ್ಯವಾಗಿರುತ್ತದೆ. ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಉಳಿಸಿಕೊಂಡೇ ಸಮಷ್ಟಿಯ ಚಿಂತನೆಯಲ್ಲಿ ಬದುಕಿದವರು ನಮ್ಮ ಹಿರಿಯರು. ಈಗಲೂ ಹಳ್ಳಿಗರಲ್ಲಿ ‘ಮಾನವಕುಲ ತಾನೊಂದೇ ವಲಂ’ ಎಂಬ ವಿಶಾಲಪ್ರಜ್ಞೆಯಿದೆ.

ಬದುಕಿನ ಯಾವ ಸಂದರ್ಭ ದಲ್ಲೂ ಒಬ್ಬರಿಗೊಬ್ಬರು ನೆರವಾಗಲು ಸಾಧ್ಯವಾಗುವುದು ಇಂಥ ಪ್ರeಯಿಂದಲೇ. ಜಾತಿ- ಕುಲ-ಧರ್ಮ-ಪಂಗಡಗಳ ಭೇದವಿದ್ದರೂ ಅವನ್ನು ತಮ್ಮೊಳಗಿನ ವ್ಯವಸ್ಥೆಗಷ್ಟೇ ಸೀಮಿತವಾಗಿಸಿಕೊಂಡು ಪರಸ್ಪರ ಬೆರೆಯುವ ಶಕ್ತಿಯನ್ನು ಹೊಂದಿದವರು ಹಳ್ಳಿಯವರು ಮಾತ್ರ. ಅಕ್ಷರಸ್ಥರಿಗೆ ಸಾಧ್ಯವಿಲ್ಲದ ಸಮಷ್ಟಿಯ ಬದುಕು ಅನಕ್ಷರಸ್ಥರಲ್ಲಿ ಸಾಧ್ಯವಾಗುವುದು ಪಡೆದ ಶಿಕ್ಷಣದಿಂದಲ್ಲ, ಮನೆಯು ನೀಡಿದ ಸಂಸ್ಕಾರದಿಂದ, ಹಿರಿಯರಿಂದ ಕಲಿತ ಜೀವನಮೌಲ್ಯಗಳಿಂದ. ಅನಕ್ಷರಸ್ಥ ತಂದೆತಾಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಲು ಮರೆಯುವುದಿಲ್ಲ.

ಬದುಕಿನಲ್ಲಿ ಶೂನ್ಯತೆಯು ಕಾಡಲು ಬಿಡುವುದಿಲ್ಲ. ಕೃತಜ್ಞತೆ, ಮನುಷ್ಯತ್ವ, ಸಜ್ಜನಿಕೆ, ಸೌಶೀಲ್ಯಗಳು ಹುಟ್ಟುವುದು ಮನೆಯ ಪರಿಸರದಿಂದಲೇ. ಅದೂ ಕೂಡು ಕುಟುಂಬದ ರಚನೆಯಿರುವಲ್ಲಿ. ಶಾಲೆಯಲ್ಲಿ ನೈತಿಕ ಶಿಕ್ಷಣ, ಸಾಹಿತ್ಯದ ಅಭಿರುಚಿ ಬೆಳೆಸುವ ಪರಿಪಾಠ ಹೆಚ್ಚಬೇಕಿದೆ. ಕೆಲವೆಡೆ ಇದು ಚೆನ್ನಾಗಿ ನಡೆಯುತ್ತಿದೆ. ಮಕ್ಕಳು ರಚಿಸಿದ ಕತೆ-ಕವನಗಳ ವಾಚನ, ಪಠ್ಯಗಳಲ್ಲಿ ರುವ ಜೀವನಮೌಲ್ಯಗಳ ಗುರುತಿಸುವಿಕೆ, ಪ್ರಾತ್ಯಕ್ಷಿಕೆಯ ಮೂಲಕ ಅಭಿನಯದ ಅಭಿರುಚಿ, ದಿನಪತ್ರಿಕೆಗಳ ವಾಚನ, ಕಗ್ಗದ ಸಾಲುಗಳ ವ್ಯಾಖ್ಯಾನ, ಧಾರ್ಮಿಕ ಗ್ರಂಥಗಳ ಪಠಣ, ವಚನ, ಕೀರ್ತನೆ ಹಾಗೂ ತ್ರಿಪದಿಗಳ ವಾಚನ, ಜನಪದೀಯ ಹಾಡುಗಳ ಗುಂಪುಗಾಯನ, ಕಲಾಪ್ರಕಾರಗಳ ಪರಿಚಯ, ರಸಪ್ರಶ್ನೆ, ಚಿತ್ರಕಲೆ, ಆಟೋಟ, ಅನುವಾದ, ಮಕ್ಕಳ ಸಾಹಿ ದ ಬಗ್ಗೆ ಕಿರು ಉಪನ್ಯಾಸಗಳನ್ನು ಮಕ್ಕಳಿಂದಲೇ ಆಯೋಜಿಸುವಿಕೆ, ಸಾಹಿತ್ಯ ಸಮ್ಮೇಳನ, ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವಿಕೆ ಮಾತ್ರವಲ್ಲದೆ, ಅವರವರ ಅಭಿರುಚಿಗೆ ತಕ್ಕ ವಾತಾವರಣವನ್ನು ಮನೆ ಮತ್ತು ಶಾಲೆಗಳು ನಿರ್ಮಿಸಿಕೊಟ್ಟರೆ ಪ್ರತಿಭೆಯನ್ನು ಬೆಳೆಸುವುದಕ್ಕೆ ಸಾಧ್ಯವಿದೆ.

ಪ್ರತಿಶಾಲೆಗೂ ಸರಕಾರವೇ ಅನುದಾನ ನೀಡಿ ವಾರ್ಷಿಕ ಸಂಚಿಕೆಗಳನ್ನು ಹೊರತರುವಂತೆ ಮಾಡಬೇಕು. ಸ್ಪರ್ಧಾತ್ಮಕವಾಗಿ ನಡೆಸಿ ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಬಹುಮಾನವನ್ನು ಆಯ್ಕೆಯಾದ ಸಂಚಿಕೆಗಳಿಗೆ ನೀಡಿ, ಅವನ್ನು ಪ್ರಕಟಿಸಿ ಮಾಧ್ಯಮಗಳಲ್ಲಿ ಬಿತ್ತರಿಸಿ, ಅದಕ್ಕೆ ಶ್ರಮಿಸಿ ದವರನ್ನು ಸಂಮಾನಿಸಬೇಕು. ಶಾಲಾ ವಾರ್ಷಿಕೋತ್ಸವದಂದು ಇಂಥ ಸಂಚಿಕೆಗಳನ್ನು ಸ್ಥಳೀಯ ಮಹನೀಯರೊಬ್ಬರಿಂದ ಬಿಡುಗಡೆ ಮಾಡಿಸಿ ಅದರ ರಚನೆಯಲ್ಲಿ ಭಾಗಿಯಾದ ಮಕ್ಕಳನ್ನು ಎಲ್ಲರ ಸಮ್ಮುಖದಲ್ಲಿ ಗೌರವಿಸಬೇಕು. ಈ ಬಗೆಯ ಕಾರ್ಯಗಳು ಭಾಷೆಯ ಉಳಿವು ಮತ್ತು ಸಾಹಿತ್ಯದ ವಿಕಾಸದ ದೃಷ್ಟಿಯಿಂದ ಬಹುಪರಿಣಾಮಕಾರಿಯಾದುದು.

೨ ವರ್ಷಕ್ಕೊಮ್ಮೆ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾಮಟ್ಟದಲ್ಲಿ ನಡೆಸುವಂತೆ ಸರಕಾರ ನೀತಿ ರಚಿಸಬೇಕು. ಪ್ರತಿಭಾವಂತರನ್ನು ಗುರುತಿಸಲು
ಇದು ದೊಡ್ಡಮಟ್ಟದಲ್ಲಿ ಸಹಾಯವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಂಘ ಸಂಸ್ಥೆಗಳು ಈ ಕಾರ್ಯ ವನ್ನು ಮಾಧ್ಯಮಗಳ ಜತೆಗೂಡಿ ನಿರ್ವಹಿಸುವಂತಾದರೆ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸಬಹುದು. ಇದರಿಂದ ಮಕ್ಕಳ ಸಾಮರ್ಥ್ಯಾಧಾರಿತ ಮತ್ತು ಕೌಶಲಾಧಾರಿತ ಕಲಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿದಂತಾಗುತ್ತದೆ. ಪುಸ್ತಕಪ್ರೀತಿಯೂ ಬೆಳೆಯುತ್ತದೆ.

ಸಾಹಿತ್ಯವು ಹಿತವನ್ನು ಬೆಳೆಸುತ್ತದೆಂಬಲ್ಲಿ ಮಕ್ಕಳನ್ನು ಸಹೃದಯರನ್ನಾಗಿ ಮಾಡುವುದಕ್ಕೆ ಬೇಕಾದ ವಾತಾವರಣವನ್ನು ಈ ಬಗೆಯಲ್ಲಿ ಸೃಷ್ಟಿಸ ಬೇಕಾಗುತ್ತದೆ. ಮಕ್ಕಳ ಚಿಂತನೆ ಗಳಿಗೆ ಸ್ಪಷ್ಟರೂಪ ಕೊಡುವ ಕಾರ್ಯ ಈ ಮೂಲಕವಾದರೂ ಸಾಧ್ಯವಾದರೆ ಭವಿಷ್ಯದಲ್ಲಿ ಒಂದು ಸೃಜನಾತ್ಮಕ ಸಾಹಿತ್ಯ
ಪರಂಪರೆ ಕನ್ನಡ ಸಾಹಿತ್ಯಲೋಕದಲ್ಲಿ ಬೆಳೆದೀತು. ದಿನಪತ್ರಿಕೆ ಗಳು ಈ ಕಾರ್ಯವನ್ನು ಮಾಡುತ್ತಿವೆ. ದೃಶ್ಯಮಾಧ್ಯಮಗಳು ಪ್ರಾದೇಶಿಕವಾಗಿ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವಿಪುಲ ಅವಕಾಶ ನೀಡುತ್ತಿವೆ. ಮಕ್ಕಳಿಗೆ ಇವುಗಳ ಕಡೆಗೆ ಗಮನ ಹರಿಸುವಂತೆ ಮಾಡುವುದು ಮನೆ, ಶಾಲೆ, ಕಾಲೇಜುಗಳ
ಕರ್ತವ್ಯವಾಗಬೇಕು. ಆದರೆ ಲಕ್ಷಗಟ್ಟಲೆ ಹಣ ಸುರಿದು, ಸೀಟು ಗಿಟ್ಟಿಸಿಕೊಂಡು, ಆಧುನಿಕತೆಯ ಗುಂಗಿನಲ್ಲಿ, ಏನೂ ಅರ್ಥವಾಗದೇ ಇದ್ದರೂ ಅಕೆಡೆಮಿಕ್ ಪಾಠಾಂಶಗಳನ್ನು ಮಕ್ಕಳ ತಲೆಯಲ್ಲಿ ಬಲವಂತವಾಗಿ ತುರುಕಿಸಿ, ಉರುಹೊಡೆಸಿ, ಅಂಕ ತೆಗೆಸಿ, ‘ನೀನು ಡಾಕ್ಟರೋ ಎಂಜಿನಿಯರೋ ಆಗಲೇ ಬೇಕು’ ಎಂದು ಹೆತ್ತವರು ತಮ್ಮ ದುರಾಸೆಯನ್ನು ಹೇರಿ, ಮಕ್ಕಳು ಮಾನಸಿಕವಾಗಿ ತಾಳಲಾರದ ಒತ್ತಡವನ್ನು ಸಹಿಸಿ ಕೊಂಡು ಯಂತ್ರಗಳಂತೆ ವರ್ತಿಸುವ ಹಾಗೆ ಮಾಡುತ್ತಿದೆ ಶಿಕ್ಷಣವ್ಯವಸ್ಥೆ.

ಮನೆಯ ಪರಿಸರದಿಂದ ಬಾಲ್ಯವು ಹುಟ್ಟಿಸುವ ಬೆರಗಿನ ಅರಿವನ್ನು ಕಳೆದುಕೊಂಡು ಮಕ್ಕಳು ಯಾವುದರಲ್ಲೂ ಆಸಕ್ತಿಯಿಲ್ಲದೆ ನಿಸ್ತೇಜರಾಗುತ್ತಿದ್ದಾರೆ. ಬಾಲ್ಯವೆಂಬುದು ನಿಸ್ಸಾರವಾಗಿ ಸತ್ವಹೀನವಾಗುತ್ತಿದೆ. ಸಾಹಿತ್ಯದ ಅಭಿರುಚಿ ಬದುಕನ್ನು ಢಾಳಾಗಿ ಅನುಭವಿಸುವುದಕ್ಕೆ ಕಲಿಸುತ್ತದೆ ಮಾತ್ರವಲ್ಲ ಸಂಸ್ಕರಿಸುತ್ತದೆ. ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತನ್ನು ನೀಡುತ್ತದೆ. ಕಲ್ಪನಾಲೋಕವನ್ನು ಅನನ್ಯಗೊಳಿಸುತ್ತದೆ. ಭಾವಲೋಕವನ್ನು ಶುದ್ಧ ಗೊಳಿಸುತ್ತದೆ.

ಎಲ್ಲ ಬಗೆಯ ಚಿಂತನೆಗಳನ್ನು ಸ್ವೀಕರಿಸುವಂತೆ ಮಾಡುತ್ತದೆ. ಸಮೂಹವೊಂದು ಸ್ವೀಕರಿಸುವ ಸಂವೇದನೆಯ ಮನಸ್ಸನ್ನು ಬೆಳೆಸುತ್ತದೆ. ಸಂವೇದನೆಯು ವಿಸ್ತಾರವಾದ ಮನುಷ್ಯ ಪ್ರಪಂಚದ ಅನನ್ಯತೆಯ ಮುಖಗಳನ್ನು ಪರಿಚಯಿಸುತ್ತದೆ. ಪುಸ್ತಕ ಲೋಕದ ಸಾಂಗತ್ಯವನ್ನು ಬೆಳೆಸುತ್ತದೆ. ಇವೆಲ್ಲವೂ
ಆಗೋದು ಮನೆಯಲ್ಲಿಯ ವಾತಾವರಣ ಹುಟ್ಟಿಸುವ ಸನ್ನಿವೇಶಗಳಿಂದ. ಮನೆಯೇ ಮೊದಲ ಪಾಠಶಾಲೆ ಎನ್ನುವುದು ಈ ಕಾರಣದಿಂದ. ಮನೆಯಲ್ಲಿದ್ದ ವರ ಮಾತು, ವರ್ತನೆ ಸರಿಯಾಗಿರುವುದರ ಜತೆಯಲ್ಲಿ ಸಹಜತೆಗೆ ಪ್ರಾಮುಖ್ಯ ನೀಡಬೇಕು.

ಪ್ರತಿ ಮನೆಯೂ ದಿನಪತ್ರಿಕೆ, ವಿಶೇಷಾಂಕ, ಸಾಹಿತ್ಯದ ಪುಸ್ತಕಗಳನ್ನು ತರುವಂತಾದರೆ ಮಕ್ಕಳ ಅಭಿವ್ಯಕ್ತಿಯ ವಿಕಾಸದ ಅವಕಾಶಗಳನ್ನು ಬಳಸಿ
ಕೊಳ್ಳಲು ಸಾಧ್ಯವಾಗುತ್ತದೆ. ಸಂಗೀತದ, ನಾಟ್ಯಪ್ರಕಾರದ ಡಿವಿಡಿಗಳನ್ನು ತಂದುಕೊಟ್ಟರೆ ಮನರಂಜನೆಯ ಜತೆಗೆ ಉತ್ತಮ ಹವ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಬಹುದು. ಪ್ರತಿ ಮಗುವೂ ತನ್ನ ಹುಟ್ಟುಹಬ್ಬಕ್ಕೆ ಒಂದಾದರೂ ಕನ್ನಡ ಪುಸ್ತಕವನ್ನು ಓದಿದರೆ ಕನ್ನಡದ ಏಳ್ಗೆಗೆ ಶ್ರಮಿಸಿದಂತೆ. ಒಂದು ಭಾಷೆ ಯನ್ನು ಜೀವಂತವಾಗಿ ಉಳಿಸಿಕೊಳ್ಳುವುದರಲ್ಲೇ ಅದರ ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿದೆ.

ಭಾಷೆಯನ್ನು ಸಾಯಲು ಬಿಟ್ಟು ಸಾಹಿತ್ಯದ ವಿಕಾಸವೆಂಬುದು ವಾಸ್ತವ ಮತ್ತು ಅನುಭವವೇ ಇಲ್ಲದ ಪ್ರಪಂಚದಲ್ಲಿ ಕನಸಿನ ವಿನ್ಯಾಸಗಳನ್ನು ಕಲ್ಪಿಸಿ ಕೊಂಡಂತೆ. ಮಕ್ಕಳಲ್ಲಿ ಭಾಷಾಪ್ರಭುತ್ವ ವನ್ನು ಮನೆಯಿಂದಲೇ ರೂಢಿಗೊಳಿಸಿದರೆ ಶಾಲೆಯಲ್ಲಿ ಅದು ವಿಸ್ತೃತರೂಪವನ್ನು ಪಡೆದುಕೊಳ್ಳುತ್ತದೆ. ಮುಂದೆ ಅದು ಸೃಜನಶೀಲವಾಗಿ ಮೈದುಂಬಿಕೊಳ್ಳುತ್ತದೆ. ಹಿರಿಯರು ಬೆಳೆಸಿ ಉಳಿಸಿದ ಶ್ರೀಮಂತ ಕನ್ನಡಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬಾಳಿಸು ವಂತಾಗಲು ಅದರ ಸಂಸ್ಕಾರವನ್ನು ಬಾಲ್ಯದಲ್ಲೇ ಶ್ರೀಮಂತವಾಗಿ ಎರೆಯಬೇಕಾಗಿದೆ.