Saturday, 23rd November 2024

ಮೈಂಡ್‌ಗೇಮಿಗೆ ಇಳಿದರು ಸಂತೋಷ್

ಇತ್ತೀಚೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಒಂದು ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ಇವತ್ತು ಬಿಜೆಪಿಯ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ತಿರುಗುತ್ತಿರುವಾಗ ನೀವೇಕೆ ಸುಮ್ಮನಿರುತ್ತೀರಿ? ಕಾಂಗ್ರೆಸ್‌ನ ೪೦-೪೫ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಅಂತ ನೀವೂ ಹೇಳಿ’ ಎಂದು ಸಿಗ್ನಲ್ ನೀಡಿದರು. ಅರ್ಥಾತ್, ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಒಂದು ಮೈಂಡ್‌ಗೇಮ್ ಶುರುವಾಗಿದೆ. ಅಂದ ಹಾಗೆ, ಈ ಹಿಂದೆ ಇಂಥ ಮೈಂಡ್‌ಗೇಮ್ ಶುರುಮಾಡಿದ್ದು ಬಿಜೆಪಿ ನಾಯಕರೇ ಆದರೂ ಈಗ
ಕಾಂಗ್ರೆಸ್ ನಾಯಕರು ಇದನ್ನು ಮತ್ತಷ್ಟು ಎತ್ತರಕ್ಕೆ ಒಯ್ದಿದ್ದಾರೆ. ಕೆಲ ಕಾಲದ ಹಿಂದೆ ಪ್ರತಿಭಟನಾ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು, ‘ಕರ್ನಾಟಕದ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಲಿದ್ದು, ತನ್ಮೂಲಕ ರಾಜ್ಯ ಸರಕಾರ ಪತನವಾಗಲಿದೆ’ ಎಂದಿದ್ದರು. ಕಾಂಗ್ರೆಸ್‌ನಲ್ಲಿ ಹುಟ್ಟಲಿರುವ ಈ ಅಜಿತ್ ಪವಾರ್ ಯಾರಿರಬಹುದು ಎಂಬ ಚರ್ಚೆ ಶುರುವಾದ ನಂತರ ಕಾಂಗ್ರೆಸ್ಸಿಗರೂ ಮೈಂಡ್‌ಗೇಮಿಗೆ ಇಳಿದರು. ಪರಿಣಾಮ? ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಅವರಿಂದ ಹಿಡಿದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರ ತನಕ ಹಲವರು ಡಿಸಿಎಂ ಡಿಕೆಶಿ
ಜತೆ ಸಂಪರ್ಕದಲ್ಲಿದ್ದಾರೆ ಎಂಬುದೂ ಬಹಿರಂಗವಾಯಿತು.

ಆದರೆ ಈಗ ಈ ಆಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ದಿಲ್ಲಿಯ ಕಾಂಗ್ರೆಸ್ ನಾಯಕರು ಸುತರಾಂ ಒಪ್ಪುತ್ತಿಲ್ಲ. ಪಕ್ಷದಲ್ಲಿ ಈಗಲೇ ೧೩೫ ಶಾಸಕರಿದ್ದಾರೆ. ಇವರ ಬೇಡಿಕೆಗಳನ್ನು ಈಡೇರಿಸಿ ಪರಿಸ್ಥಿತಿ ನಿಭಾಯಿಸುವುದೇ ಕಷ್ಟ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಬಿಜೆಪಿ ಶಾಸಕರನ್ನು ನಮ್ಮ ಪಕ್ಷಕ್ಕೆ ಸೆಳೆಯಬೇಕು? ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕರ್ನಾಟಕದಿಂದ ೨೦ ಸೀಟು ಗೆಲ್ಲುವ ಕಡೆ ಈಗ ನಮ್ಮ ಗಮನ ಕೇಂದ್ರೀಕೃತವಾಗಬೇಕೇ ಹೊರತು, ಬೇರೆ ಪಕ್ಷದ ಶಾಸಕರ ಕೈಲಿ ರಾಜೀನಾಮೆ ಕೊಡಿಸಿ ಮಧ್ಯಂತರ ಚುನಾವಣೆಗೆ ಅಣಿಯಾಗುವುದು ಪ್ರಾಕ್ಟಿಕಲ್ ಅಲ್ಲ ಎಂಬುದು ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರ ವಾದ. ಯಾವಾಗ ಅವರು ಈ ವಾದಕ್ಕಿಳಿದರೋ, ಕಾಂಗ್ರೆಸ್ ನಾಯಕರ ಮೈಂಡ್‌ಗೇಮಿನ ಸ್ವರೂಪ ಬದಲಾಗಿದೆ. ಹೀಗಾಗಿ ‘ನಮ್ಮ ಪಕ್ಷಕ್ಕೆ ಬನ್ನಿ’ ಅಂತ ಈ ಹಿಂದೆ ಹೇರುತ್ತಿದ್ದ ಒತ್ತಡವನ್ನು ಸಡಿಲಿಸಿರುವ ಈ ನಾಯಕರು, ‘ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಬರುವುದು ಬೇಡ. ಬದಲಿಗೆ ನಿಮ್ಮ ಬೆಂಬಲಿಗರನ್ನು ನಮ್ಮ ಕಡೆ ಕಳಿಸಿ, ಬಿಜೆಪಿಗೆ ಮುಜುಗರವಾಗುವಂತೆ ಮಾಡಿ. ಈ ಮುಜುಗರ ಸಹಿಸಲಾಗದೆ ಅವರು ನಿಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ಚಾನ್ಸು ಜಾಸ್ತಿ. ಹೀಗೆ ಅವರೇ ಉಚ್ಚಾಟಿಸಿದರೆ ನಿಮ್ಮ ಶಾಸಕ ಸ್ಥಾನವೂ ಉಳಿಯುತ್ತದೆ, ಮಧ್ಯಂತರ ಚುನಾವಣೆಯ ಅಪಾಯವೂ ಇಲ್ಲ’ ಅಂತ ಹೇಳತೊಡಗಿದ್ದಾರೆ.

ಅವರ ಪ್ರಕಾರ, ಬಿಜೆಪಿ ಶಾಸಕರ ಬೆಂಬಲಿಗರು ಕಾಂಗ್ರೆಸ್ ಸೇರತೊಡಗಿದರೆ, ಅದೇ ಕಾಲಕ್ಕೆ ಈ ಶಾಸಕರು ಬಿಜೆಪಿಯ ಬಗ್ಗೆ ಟೀಕಿಸತೊಡಗಿದರೆ ಕಾಂಗ್ರೆಸ್ ಪರವಾದ ಅಲೆ ದಟ್ಟವಾಗುತ್ತದೆ ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸೀಟು ಗೆಲ್ಲಲು ದಾರಿಯಾಗುತ್ತದೆ. ಯಾವಾಗ ಕಾಂಗ್ರೆಸ್ ನಾಯಕರ ಈ ಮೈಂಡ್‌ಗೇಮಿನ ಸ್ವರೂಪ ಸ್ಪಷ್ಟವಾಯಿತೋ, ಸಂತೋಷ್ ಕೂಡಾ ಮೈಂಡ್‌ಗೇಮಿಗೆ ಮುಂದಾಗಿದ್ದಾರೆ. ಈಗ ಹೇಗಿದ್ದರೂ ಆಡಳಿತಾರೂಢ ಕಾಂಗ್ರೆಸ್ಸಿನಲ್ಲಿ ಅಸಮಾಧಾನಿತ ಶಾಸಕರು ಇದ್ದಾರೆ. ಅಳಂದದ ಬಿ.ಆರ್.ಪಾಟೀಲ್, ಕಂಪ್ಲಿಯ ಗಣೇಶ್, ಯಶವಂತರಾವ್ ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಡಜನ್‌ಗೂ ಹೆಚ್ಚು ಶಾಸಕರು, ಸರಕಾರದ ಮಟ್ಟದಲ್ಲಿ ತಮ್ಮ ಕೆಲಸಗಳಾಗುತ್ತಿಲ್ಲ ಎಂಬ ಸಿಟ್ಟಿನಲ್ಲಿದ್ದಾರೆ. ಹಳೇ ಮೈಸೂರಿನ ಕಡೆ ಬಂದರೆ ಮಳವಳ್ಳಿಯ ನರೇಂದ್ರಸ್ವಾಮಿ ಅವರ ಜತೆ ಇಂಥ ಹತ್ತಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ. ಅವರು ಅತೃಪ್ತರು ಎಂದ ಮಾತ್ರಕ್ಕೆ ಕಾಂಗ್ರೆಸ್ ತೊರೆಯುತ್ತಾರೆ ಅಂತಲ್ಲ. ಆದರೆ ಇವತ್ತು ಬಿಜೆಪಿ ನಾಯಕರ ಜತೆ ಕಾಂಗ್ರೆಸ್ಸಿನ ೪೦-೪೫ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಹೊರಗೆ ಹೆಜ್ಜೆ ಇಡಲು ಬಯಸಬಹುದು ಎಂಬುದು ಸಂತೋಷ್ ಅವರ ಮೈಂಡ್ ಗೇಮು. ಇಂಥ ಮೈಂಡ್‌ಗೇಮುಗಳು ಸರಕಾರಗಳನ್ನು ಉರುಳಿಸಲು ನೆರವಾದ ಉದಾಹರಣೆಗಳಿವೆ. ೧೯೯೦ರಲ್ಲಿ
ಮುಖ್ಯಮಂತ್ರಿ ಹುದ್ದೆಗೇರಿದ ಎಸ್. ಬಂಗಾರಪ್ಪ ಅವರ ವಿರುದ್ದ ಅವರ ಪಕ್ಷದವರೇ ಆದ ಎಚ್.ವಿಶ್ವನಾಥ್, ಕೆ.ಎನ್ .ನಾಗೇಗೌಡ, ಪೆರಿಕಲ್ ಮಲ್ಲಪ್ಪರಂಥ ಶಾಸಕರು ಇಂಥದೇ ಮೈಂಡ್‌ಗೇಮ್ ಶುರುಮಾಡಿದ್ದರು. ತಮ್ಮನ್ನು ಮಂತ್ರಿ ಮಾಡಬೇಕೆಂಬ ಬೇಡಿಕೆಗೆ ಬಂಗಾರಪ್ಪ ಒಪ್ಪದೇ ಹೋದಾಗ ಸಿಟ್ಟಿಗೆದ್ದ ಈ ಶಾಸಕರು, ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಜಗದೀಶ್ ಎಂಬುವವರ ತೋಟದ ಮನೆಯಲ್ಲಿ ಸಭೆ ನಡೆಸತೊಡಗಿದರು.
ಅಷ್ಟೇ ಅಲ್ಲ, ಇಂಥ ಸಭೆ ನಡೆಯುತ್ತಿದೆ ಎಂಬ ವಿವರ ಇಂಟೆಲಿಜೆನ್ಸ್ ಅಧಿಕಾರಿಗಳ ಕಿವಿ ತಲುಪುವಂತೆ ಮಾಡುತ್ತಿದ್ದರು.

ಇದರ ಆಧಾರದ ಮೇಲೆ ಇಂಟೆಲಿಜೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೆ, ವಿಶ್ವನಾಥ್ ಇಲ್ಲವೇ ನಾಗೇ ಗೌಡರು ಸಭೆಯಿಂದ ಹೊರಗೆ ಬಂದವರಂತೆ ನಟಿಸಿ, ಇವತ್ತಿನ ಭಿನ್ನಮತೀಯರ ಸಭೆಯಲ್ಲಿ ೩೫ ಶಾಸಕರಿದ್ದರು, ೪೦
ಶಾಸಕರಿದ್ದರು ಎಂಬ ವಿವರವನ್ನು ಪಿಸುಗುಟ್ಟುತ್ತಿದ್ದರು. ಅಷ್ಟೇ ಅಲ್ಲ, ‘ಈ ಸುದ್ದಿ ನಾವು ಕೊಟ್ಟಿದ್ದೇವೆ ಅಂತ ಎಲ್ಲೂ ಬಾಯಿ ಬಿಡಬೇಡಿ. ಯಾಕೆಂದರೆ ಸಭೆಗೆ ಬಂದ ಶಾಸಕರು ಸಿಟ್ಟು ಮಾಡಿಕೊಳ್ಳಬಹುದು’ ಅಂತ ಮುಖದಲ್ಲಿ ಆತಂಕ ತೋರಿಸುತ್ತಿದ್ದರು. ಹೀಗೆ ಅವರು ಇಂಟೆಲಿಜೆನ್ಸ್ ಅಧಿಕಾರಿಗಳಿಗೆ ಕೊಟ್ಟ ಸುದ್ದಿ ಹಲವು ಪತ್ರಿಕೆಗಳಿಗೂ ತಲುಪಿ ಮರುದಿನ ದೊಡ್ಡ ಸುದ್ದಿಯಾಗುತ್ತಿತ್ತು. ಪರಿಣಾಮ? ಶುರುವಿನಲ್ಲಿ ೩-೪ರಷ್ಟಿದ್ದ ಭಿನ್ನಮತೀಯರ ಸಂಖ್ಯೆನೋಡನೋಡುತ್ತಿದ್ದಂತೆ ೧೫-೨೦ರ ಗಡಿ ತಲುಪಿದ್ದಲ್ಲದೆ ಕ್ರಮೇಣ ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ರಾಜಶೇಖರ ಮೂರ್ತಿ, ಹಾರನಹಳ್ಳಿ ರಾಮಸ್ವಾಮಿ ಅವರೆಲ್ಲ ಭಿನ್ನರ ಕೂಟವನ್ನು ಬೆಂಬಲಿಸುವಂತಾಯಿತು. ಮುಂದೆ ಈ ಕೂಟಕ್ಕೆ ಕೇರಳದ ಕರುಣಾಕರನ್ ಮತ್ತು ತಮಿಳುನಾಡಿನ ಮರಗತಂ ಚಂದ್ರಶೇಖರ್ ಒತ್ತಾಸೆ ನೀಡಿ ಬಂಗಾರಪ್ಪ ಅವರ ಪದಚ್ಯುತಿಗೆ ಕಾರಣರಾದರು.

ಹೀಗೆ ಮೈಂಡ್‌ಗೇಮ್ ಎಂಬುದು ಎಂಥ ವಾತಾವರಣವನ್ನಾದರೂ ಬದಲಿಸಬಹುದು ಎಂಬುದು ಗೊತ್ತಿರುವುದರಿಂದ ಈಗ ಕಾಂಗ್ರೆಸ್ ನಾಯಕರೂ ಆಟಕ್ಕಿಳಿದಿದ್ದಾರೆ. ಬಿಜೆಪಿ ನಾಯಕರೂ ಆಟಕ್ಕಿಳಿದಿದ್ದಾರೆ. ಇದರ ಪರಿಣಾಮವೇನು ಎಂಬುದು ತಕ್ಷಣಕ್ಕೆ ಗೊತ್ತಾಗದಿರಬಹುದು. ಆದರೆ ಅದು ಒಂದು ಹಂತಕ್ಕೆ ತಲುಪಿದಾಗ ಗೆದ್ದವರಾರು? ಸೋತವರಾರು? ಎಂಬುದು ಸ್ಪಷ್ಟವಾಗಿಬಿಡುತ್ತದೆ. ಹೊಸ ದಾಖಲೆ ಬರೆದ ಬಿಜೆಪಿ ಅಂದ ಹಾಗೆ, ಕರ್ನಾಟಕದ ರಾಜಕಾರಣದಲ್ಲಿ ಎರಡು ವಿಶಿಷ್ಟ ದಾಖಲೆಗಳು ನಿರ್ಮಾಣವಾಗಿವೆ. ಈ ಪೈಕಿ ಒಂದು ದಾಖಲೆಯನ್ನು ೧೯೫೮ರಲ್ಲಿ ಕಾಂಗ್ರೆಸ್ ನಿರ್ಮಿಸಿತ್ತು. ಅಂದರೆ ಯಾವುದೇ ಲಾಬಿಯಿಲ್ಲದೆ ಅವತ್ತು ಕಾಂಗ್ರೆಸ್ ತನ್ನ ಶಾಸಕಾಂಗ ನಾಯಕನನ್ನು ಆರಿಸಿಕೊಂಡಿತ್ತು. ಅವತ್ತು ಪಕ್ಷದಲ್ಲಿ ಬಂಡಾಯ ಶುರುವಾದಾಗ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಹೀಗೆ ಕೆಳಗಿಳಿಯುವ ಪರಿಸ್ಥಿತಿ ನಿರ್ಮಾಣವಾದಾಗ ತಮ್ಮ ಜಾಗಕ್ಕೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ತಂದು ಕೂರಿಸಲು ಅವರು ಬಯಸಿದರು.

ಪ್ರಧಾನಿ ಜವಾಹರಲಾಲ್ ನೆಹರು ಅವರ ಕೆಂಗಣ್ಣಿಗೆ ಗುರಿಯಾಗಿ ೧೯೫೬ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಕೆಂಗಲ್ ಹನುಮಂತಯ್ಯ ಅವರು ತಮ್ಮ ಉತ್ತರಾಧಿಕಾರಿಯಾಗಲಿ ಎಂಬುದು ನಿಜಲಿಂಗಪ್ಪನವರ ಇಚ್ಛೆಯಾಗಿತ್ತು. ಹಾಗಂತಲೇ ನಾಯಕನ ಆಯ್ಕೆಗಾಗಿ ಶಾಸಕಾಂಗ ಸಭೆ ಸೇರಿದಾಗ ಅವರ ಬಣ ಕೆಂಗಲ್ ಹನುಮಂತಯ್ಯ ಅವರ ಹೆಸರನ್ನು ಪ್ರಸ್ತಾಪಿಸಿತು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಇನ್ನು ಕೆಲವರು, ಬೇರೆ ಬೇರೆ ಹೆಸರುಗಳನ್ನು ಪ್ರಸ್ತಾಪಿಸಿ, ‘ಇವರು ನಾಯಕರಾದರೆ ಬೆಸ್ಟು’ ಅಂತ ಹೇಳತೊಡಗಿದರು. ಯಾವಾಗ ಶಾಸಕಾಂಗ ನಾಯಕನ ಸ್ಥಾನಕ್ಕೆ ಹಲವು ಹೆಸರುಗಳು ಪ್ರಸ್ತಾಪವಾಗತೊಡಗಿದವೋ, ಅಗ ತಿಕೋಟಾ (ಈಗಿನ
ಬಬಲೇಶ್ವರ) ಕ್ಷೇತ್ರದ ಶಾಸಕ ಚನ್ನಬಸಪ್ಪ ಅಂಬಲಿಯವರು ಮಾತನಾಡಿ, ‘ಶಾಸಕಾಂಗ ನಾಯಕನ ಸ್ಥಾನಕ್ಕೆ ಅವರಿವರ ಹೆಸರು ಏಕೆ ಪ್ರಸ್ತಾಪಿಸುತ್ತೀರಿ? ಇಲ್ಲೇ ನಮ್ಮ ಬಿ.ಡಿ.ಜತ್ತಿ ಇದ್ದಾರೆ. ಅವರು ನಾಯಕರಾದರೆ ಪಕ್ಷಕ್ಕೂ ಒಳ್ಳೆಯದು, ಸರಕಾರಕ್ಕೂ ಒಳ್ಳೆಯದು’ ಎಂದುಬಿಟ್ಟರು. ಅಂದ ಹಾಗೆ, ಅವತ್ತು ಪ್ರದೇಶ ಕಾಂಗ್ರೆಸ್ಸಿನ ನಾಯಕರಾಗಿದ್ದ ಚನ್ನಬಸಪ್ಪ ಅಂಬಲಿಯವರಿಗೆ ದೊಡ್ಡ ಹೆಸರಿತ್ತು. ಯಾವಾಗ ಅವರು ಬಿ.ಡಿ.ಜತ್ತಿಯವರ ಹೆಸರು ಪ್ರಸ್ತಾಪಿಸಿ ದರೋ, ಅಗ ನಿಜಲಿಂಗಪ್ಪ ಬಣದ ಶಾಸಕರೂ ತಕರಾರು ಮಾಡದೆ ಒಪ್ಪಿಕೊಂಡರು. ಹೀಗೆ ಚನ್ನಬಸಪ್ಪ ಅಂಬಲಿ ಅವರ ಪ್ರಸ್ತಾಪವನ್ನು ಸಭೆಯಲ್ಲಿದ್ದ ಬಹುತೇಕರು ಒಪ್ಪಲು ಕೆಲ ಕಾರಣಗಳೂ ಇದ್ದವು.

ಈ ಪೈಕಿ ಮುಖ್ಯವಾದುದು ಶಾಸಕಾಂಗ ಪಕ್ಷದಲ್ಲಿ ಲಿಂಗಾಯತ ಶಾಸಕರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಅವರು ಲಿಂಗಾಯತ ನಾಯಕ ನಿಜಲಿಂಗಪ್ಪನವರ ಜಾಗಕ್ಕೆ ಮತ್ತೊಬ್ಬ ಲಿಂಗಾಯತ ನಾಯಕ ಬರಲಿ ಅಂತ ಬಯಸಿದರು. ಎರಡನೆಯದಾಗಿ, ನಿಜಲಿಂಗಪ್ಪ ಅವರಿಗೆ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಲಿ ಎಂಬ ಆಸೆ ಇತ್ತಾದರೂ, ಈ ಹಿಂದೆ ನೆಹರು ಅವರ ಸಿಟ್ಟಿಗೆ ಬಲಿಯಾಗಿ ಅಽಕಾರ ಕಳೆದುಕೊಂಡಿದ್ದ ಅವರಿಗೆ ಮರು ಪಟ್ಟಾಭಿಷೇಕ ಮಾಡುವುದು ರಿಸ್ಕು ಎಂಬ ಭಾವನೆ ಶಾಸಕ ರಲ್ಲಿತ್ತು. ಇದೆಲ್ಲದರ ಪರಿಣಾಮವಾಗಿ ಬಸಪ್ಪ ದಾನಪ್ಪ ಜತ್ತಿ ಕಾಂಗ್ರೆಸ್ ಶಾಸಕಾಂಗ ನಾಯಕರಾದರೂ ಆ ಮೂಲಕ ಕಾಂಗ್ರೆಸ್ ಪಕ್ಷ ಒಂದು ದಾಖಲೆ ಬರೆಯಿತು. ಅದೆಂದರೆ, ಯಾವುದೇ ಲಾಬಿ ಇಲ್ಲದೆ ಅದರ ನಡುವೆ ಶಾಸಕಾಂಗ ನಾಯಕರು ಎದ್ದು ನಿಂತಿದ್ದರು. ಆದರೆ ಇವತ್ತು ರಾಜ್ಯ ಬಿಜೆಪಿ ಅದೇನೇ ಲಾಬಿ ಮಾಡಿದರೂ ಒಬ್ಬ ಶಾಸಕಾಂಗ ನಾಯಕ ಅದಕ್ಕೆ ಸಿಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ಅವರ ತನಕ ರಾಜ್ಯದ ಹಲ ನಾಯಕರು ದಿಲ್ಲಿಗೆ ಹೋಗಿ ಅಮಿತ್ ಶಾ, ನಡ್ಡಾ ಅವರ ಜತೆ ಸೆಲ್ಫಿ ತೆಗೆಸಿಕೊಂಡು ಬಂದಿದ್ದೇ ಬಂದಿದ್ದು. ಆದರೆ ಏನೇ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯ. ಆ ದೃಷ್ಟಿಯಿಂದ ಇದು ಕೂಡಾ ಒಂದು ದಾಖಲೆ.