Friday, 20th September 2024

ಸನ್ಯಾಸ: ಕತ್ತಿಯಲಗಿನ ಮೇಲಿನ ನಡೆ !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಘಟಕವಾದ ಸನ್ಯಾಸ ಜೀವನವನ್ನು ಲೋಕವಿರೋಧಿಯೆಂದೂ, ಅಧ್ಯಾತ್ಮವು ಸಮಾಜೋದ್ಧಾರಕ್ಕೆ ಮಾರಕವೆಂದೂ ಚಿತ್ರಿಸುವ ಕೊಳಕು ಪ್ರವೃತ್ತಿ ಮೊದಲಿಂದಲೂ ನಮ್ಮಲ್ಲಿದೆ. ಯಾಕೆಂದರೆ ಈ ದೇಶದಲ್ಲಿ ನಾಸ್ತಿಕರಿಗೇನೂ ಕೊರತೆಯಿಲ್ಲ. ಹಿಂದೆ ಚಾರ್ವಾಕ ರಿದ್ದರು, ಈಗ ಕಮ್ಯುನಿಷ್ಠರಿದ್ದಾರೆ. ಇನ್ನು ಬೇರೆ ಬೇರೆ ರೂಪದಲ್ಲಿ ಹಲವರು ಗೋಚರವಾಗುತ್ತಿರುತ್ತಾರೆ. ಗೋವಿನ ಮಾಂಸವನ್ನು ನಡುರಸ್ತೆಯಲ್ಲಿ ತಿಂದ ಔದ್ಧಟ್ಯದ ಅನಾಗರಿಕ ಮಹನೀಯರನ್ನೂ ನೋಡಿದ್ದೇವೆ.

ಆದರೆ ಒಂದು ಸತ್ಯವಿದೆ: ಇವರ್ಯಾರೂ ದೈಹಿಕ ಕಶ್ಮಲವನ್ನು ವಿಸರ್ಜಿಸಲಾರರು. ಇದರರ್ಥ ದೈವತ್ವದ ಅಸ್ತಿತ್ವದ ಬಗ್ಗೆ ಅವರಲ್ಲಿ ಭಯವಿತ್ತೆಂದು ಹೇಳಲಾಗದು. ದೇವಸ್ಥಾನಕ್ಕೆ ಹೋಗದ, ದೇವರನ್ನು ಆರಾಧಿಸದ, ಪೂಜಿಸದ, ಕೈಮುಗಿಯದ ಅನೇಕರು ಹಿಂದೂಗಳಲ್ಲೂ ಇದ್ದಾರೆ. ಆದರೆ, ಅಂಥವರೆಂದೂ ಬದುಕಿನಲ್ಲಿ ಅನಾ ಗರಿಕರಂತೆ, ಅಸಂಸ್ಕೃತರಂತೆ ವರ್ತಿಸಲಾರರು. ನಾಗರಿಕ ಪ್ರಪಂಚ ದೊಳಗಿದ್ದೂ ನಾಗರಿಕತೆಯ ಘನತೆಯನ್ನು ಕಾಪಾಡುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ. ತಾನು ಆಯ್ದುಕೊಂಡ ಬದುಕಿನಲ್ಲಿ ಸಮಸ್ತರ ಭಾಗಿತ್ವವೂ ಇರುತ್ತದೆಂಬಲ್ಲಿಗೆ ಯಾರನ್ನೂ ಉಪೇಕ್ಷೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಸಾಮಾಜಿಕ ಜೀವನದಲ್ಲಿರುವವರಿಗೆ ಮೈಮನವೆಲ್ಲಾ ಸದಾ ಜಾಗೃತವಾಗಿರೆಬೇಕು.

ಭಾರತದಲ್ಲಿ ಖಾವಿ ಧರಿಸಿದವರಿಗೆ ಸಮಾಜದ ಗೌರವಾದರ ಬಹು ಹೆಚ್ಚಾಗಿಯೇ ಇದೆ. ಕೇಸರಿ ತ್ಯಾಗದ ಪ್ರತೀಕ. ತ್ಯಾಗಿಯಾದವನು ಎಲ್ಲರೊಂದಿಗಿದ್ದೂ ನಿಸ್ಸಂಗತ್ತ್ವದಲ್ಲೇ ಬದುಕಬೇಕಾಗುತ್ತದೆಯೇ ವಿನಾ ಎಲ್ಲ ರಿಂದಲೂ ಮುಕ್ತನಾಗಿ ಬದುಕಲು ಸಾಧ್ಯವಿಲ್ಲ. ಹಾಗೇ ಬದುಕುವಾಗ ಎಲ್ಲ ಇದ್ದೂ ಇಲ್ಲದವರಂತೆ ಎಲ್ಲದ ರಿಂದಲೂ ಮುಕ್ತನಾಗಿ ಬದುಕಬೇಕಾಗುತ್ತದೆ. Of course ಅಂಥದ್ದೊಂದು ಪರಿಪೂರ್ಣ ಪರಿಶುದ್ಧವಾದ, ಬದುಕನ್ನು ಊಹಿಸುವುದೂ ಸರಿಹೊತ್ತಿನಲ್ಲಿ ಸಂಪೂರ್ಣವಾಗಿ ಸಾಧ್ಯವಿಲ್ಲವೆಂಬುದು ನನ್ನ ಸ್ಪಷ್ಟ ನಿಲುವು.

ಸನಾತನ ಪರಂಪರೆಯಲ್ಲಿ ಸನ್ಯಾಸತ್ವದ ಘನತೆಯನ್ನು ಉತ್ಕರ್ಷಕ್ಕೆ ಒಯ್ದವರ ನೇಕರನ್ನೂ ಈ ದೇಶ ನೋಡಿದೆ. ಅಲೌಕಿಕವನ್ನು ಬಿಟ್ಟು ಲೌಕಿಕ ವಿಷಯ
ಸುಖಕ್ಕೊಳಗಾಗಿ ಅಂಥ ಗೌರವವನ್ನು ಕಳೆದವರನ್ನೂ, ಕಳಕೊಂಡವರನ್ನೂ ಈ ದೇಶ ನೋಡಿದೆ. ಸಂಸಾರಿಯಾಗಿದ್ದುಕೊಂಡು ಸನ್ಯಾಸಿಯಾಗಿ ಬದುಕಿದವರೂ ಇದ್ದಾರೆ. ಸನ್ಯಾಸಿಯ ವೇಷಧರಿಸಿ ಸಂಸಾರಿಯಂತೆ ಬದುಕನ್ನು ಸವೆಸಿದವರೂ, ಸವೆಸುತ್ತಿರುವವರೂ ಇದ್ದಾರೆ. ಆಚಾರ್ಯ ಚಾಣಕ್ಯ, ವಿದ್ಯಾರಣ್ಯರು, ಆಚಾರ್ಯ ತ್ರಯರು, ಗುರು ಸಾರ್ವಭೌಮ ರಾಘವೇಂದ್ರ ತೀರ್ಥರು, ವಾದಿರಾಜ ತೀರ್ಥರು, ಪರಮಹಂಸರು, ಸ್ವಾಮಿ ವಿವೇಕಾನಂದರಂತೆ ಖಾವಿಧಾರಿಯಾಗಿ ಶ್ರೇಷ್ಠ ಬದುಕನ್ನು ಬಾಳಿ, ಪರಮ ಔನ್ನತ್ಯವನ್ನು ಸಾಧಿಸಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮಂಗಲಮಯಗೊಳಿಸಿ ಆಗಿಹೋಗಿದ್ದಾರೆ.

ಇವರುಗಳು ಹಾಕಿಕೊಟ್ಟ ಶ್ರೇಷ್ಠ ಆದರ್ಶದ ಪಥದಲ್ಲಿ ಬದುಕುತ್ತಿರುವವರು ನಮ್ಮ ನಡುವೆ ಇದ್ದಾರೆ. ಆದರೆ, ಖಾವಿ ಧರಿಸಿ ರಾಜಕೀಯ ಮಾಡಿದವರು, ಬೂದಿ ಕೊಟ್ಟವರು, ಪವಾಡ ಮಾಡಿ ಮೋಸ ಮಾಡಿದವರು, ಅಂಗನೆಯರಲ್ಲಿ ಸಂಗಿಯಾಗಿದ್ದವರೂ ಇದ್ದಾರೆ. ಬೌದ್ಧಿಕವಾಗಿ ಅಂಧರಾದ ತನ್ನ ಭಕ್ತರೆದುರು ಪುಂಗಿಯೂದಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ, ಎಲ್ಲೆಲ್ಲೂ ಪ್ರಚಾರಗಿಟ್ಟಿಸಿಕೊಳ್ಳುವ ಪ್ರಚಾರಪ್ರಿಯ ಅಕರ್ಮಠ ಸನ್ಯಾಸಿಗಳನ್ನೂ ನಾವು ನೋಡಿಲ್ಲವೆ? ಯಾಕೆ ಹೀಗೆ? ವಿಷಯ ಲೋಲು ಪತೆಯೆಂಬುದು ದೇಹಧರ್ಮದ ಸ್ವಭಾವ. ಅದಕ್ಕೆ ಹೊರಗೆ ತೊಟ್ಟ ಬಟ್ಟೆಯ ಅರಿವಿರುವುದಿಲ್ಲ. ಇದು ಸಂಸಾರಿಗಾದರೂ ಸರಿ, ಸನ್ಯಾಸಿಗಾದರೂ ಸರಿ. ಯಾರಿಗೇ ಆದರೂ ಈ ಪ್ರಜ್ಞೆ ಹುಟ್ಟುವುದು ಅಷ್ಟು ಸುಲಭಸಾಧ್ಯವಲ್ಲ.

ಸ್ಥಾನಮಹಿಮೆಯಿಂದಲೇ ತನ್ನ ಮಹಿಮೆಯನ್ನೂ ಪ್ರದರ್ಶಿಸಿ ಕೊಳ್ಳುವುದಕ್ಕೆ ಸನ್ಯಾಸತ್ವ ಉತ್ತಮ ಮಾರ್ಗವೆಂದು ಛೇಡಿಸುವವರಿದ್ದಾರೆ. ಯಾರಿಗೇ ಆದರೂ ಸಾಮಾನ್ಯನಂತೆ ಬದುಕು ವಾಗಲೂ ತನ್ನ ದೇಹಧರ್ಮಕ್ಕೆ ವಿರುದ್ಧವಾಗಿ ಬದುಕಲು ಸಾಧ್ಯವಿಲ್ಲ. ತನ್ನ ದೇಹಕ್ಕೆ ಮೊಳೆಗಳಿಂದ ಚುಚ್ಚಿ ಸಾಯಿಸುವವರನ್ನು  ಕುರಿತು, ಅವರೇನೂ ಅರಿಯರು, ಅವರನ್ನು ಕಾಪಾಡು ಎಂದು ಒಳಿತನ್ನೇ ಬಯಸಿದ ಏಸು ಆ ಹೊತ್ತಲ್ಲೂ ದೇಹ ಯಾತನೆಯನ್ನು ಅನುಭವಿಸಲಿಲ್ಲವೆಂದು ಹೇಗೆ
ಹೇಳಲು ಸಾಧ್ಯ? ದೇಹವನ್ನು ಧರಿಸಿದ ಜೀವಕ್ಕೆ ದೇಹಧರ್ಮವು ಘಾಸಿಗೊಳಿಸಲಾರದೆ? ಒಪ್ಪುವುದೂ ಕಷ್ಟ.

ದೇವರದೇವ ಶ್ರೀಕೃಷ್ಣನಿಗೂ ಗಾಂಧಾರಿಯ ಶಾಪ ತಟ್ಟಿ ಬೇಡನ ಬಾಣದ ಘಾತಕ್ಕೆ ತುತ್ತಾಗಲಿಲ್ಲವೇ? ಸಾರ್ವಜನಿಕರೆದುರು ತನ್ನನ್ನು ವಾಚಾಮಗೋಚರವಾಗಿ
ಅವಾಚ್ಯ ಶಬ್ದಗಳಿಂದ ನಿಂದಿಸುವಾಗ ಒಳಗಿನ ಪ್ರಜ್ಞೆಗೆ ದೇಹಧರ್ಮದ ಗುಣವನ್ನು ನಿಯಂತ್ರಿಸಲು ಸಾಧ್ಯವೆ? ಧನ, ದ್ರವ್ಯ, ಸಂಪತ್ತು, ಕನಕಗಳು ಮುಂದೆ ಇದ್ದಾಗಲೂ ಅವುಗಳೊಂದಿಗೆ ಯಾವ ತಾದಾತ್ಮ್ಯವನ್ನೂ ಇರಿಸಿಕೊಳ್ಳದೆ ಬದುಕಲು ಸರಿಹೊತ್ತಲ್ಲೂ ಹೇಗೆ ಸಾಧ್ಯ? ಸರಳ ಜೀವನಕ್ಕಾಗಿ ಹಾತೊರೆದ ಗಾಂಧಿ ತಾನೂ ಇಂಥ ವಿಷಯಗಳಲ್ಲಿ ತಪ್ಪಿದ್ದಿದೆಯೆಂದು ಹೇಳಿಕೊಂಡಿದ್ದಾರೆ.

ಎಲ್ಲ ಬಗೆಯ ಐಹಿಕ ಆಕರ್ಷಣೆಗಳನ್ನು ತ್ಯಜಿಸುವುದು ಕಷ್ಟಸಾಧ್ಯವೇ ಹೌದು. ಅದರಲ್ಲೂ ಸನ್ಯಾಸಿಯಾದವನಿಗೆ ಇವುಗಳಿಂದ ಮುಕ್ತಿಯೇ ಇಲ್ಲವೇನೋ ಎನಿಸು ತ್ತದೆ. ತಾನೊಬ್ಬನಾದರೆ ಹೇಗೂ ಬದುಕಬಹುದು. ತನ್ನ ಪರಿವಾರವನ್ನೂ ತನ್ನಂತೆಯೇ ಬದುಕಿಸಿಕೊಂಡು ಹೋಗುವಾಗ ಅವನು ಪರಿವಾರದ ಬೇಕು
ಬೇಡಗಳಿಗೆ ಬಗ್ಗಲೇಬೇಕಾಗುತ್ತದೆ. ಬಾಗಲೇಬೇಕಾಗುತ್ತದೆ. ಒಗ್ಗಲೇಬೇಕಾಗುತ್ತದೆ. ಪ್ರಾಪಂಚಿಕತೆಗೆ ಸ್ವಲ್ಪಮಟ್ಟಿಗಾದರೂ ಜಗ್ಗಲೇಬೇಕಾಗುತ್ತದೆ. ಒಗ್ಗಿಕೊಂಡೇ ಪರಿವಾರದೊಂದಿಗೆ ಸಾಗಬೇಕಾಗುತ್ತದೆ. ಇದರಲ್ಲಿ ತಪ್ಪೇನೂ ಕಾಣುವುದಿಲ್ಲ. ಇಂಥ ಸಂದರ್ಭ ಸನ್ನಿವೇಶಗಳಲ್ಲಿ ಸನ್ಯಾಸಿಯಾಗಿದ್ದುಕೊಂಡೇ ಅವನು ಪೂರ್ಣ ಪ್ರಮಾಣದಲ್ಲಿ ಯಾವ ಶೈಥಿಲ್ಯವನ್ನೂ ಕಾಣದೆ ಬದುಕಲಾರ ಎಂಬುದು ನಮ್ಮ ಕಾಲದ ಸತ್ಯ.

ಪರಿವಾರದ ಬಡಿವಾರತನವನ್ನು ತಳ್ಳಿಬಿಡಲು ಅಷ್ಟು ಸುಲಭವಾಗಿ ಮನಸ್ಸು ಒಪ್ಪಲಾರದು. ಯಾಕೆಂದರೆ ಅದು ಮನಸ್ಸು. ಅದಕ್ಕೂ ಮನುಷ್ಯ ಸಹಜ ಸ್ವಭಾವದ ನಿಯಂತ್ರಣದ ಕಡಿವಾಣ ಇದ್ದೇ ಇದೆ. ಸ್ವಭಾವಕ್ಕೂ ಮನಸೇ ಮೂಲ ತಾನೆ? ಅಯೋಧ್ಯೆಯ ಸಕಲ ಸೌಭಾಗ್ಯಗಳನ್ನು ಗರ್ಭಾವಸ್ಥೆಯಲ್ಲೇ ಪಡೆದ ಶ್ರೀರಾಮ ಎಲ್ಲವನ್ನೂ ತ್ಯಜಿಸಿ ಕಾಡುಮೇಡುಗಳಲ್ಲಿ ಅಲೆಯುತ್ತ ಸಂಸಾರಿಯಾಗಿದ್ದೂ ಸನ್ಯಾಸಿಯಂತೆ ಬದುಕಲಿಲ್ಲವೆ? ಭೀಷ್ಮರಿಗೆ ಸಂಸಾರವಿರಲಿಲ್ಲ.

ಕೊನೆಯವರೆಗೂ ಒಂದು ತರದ ದ್ವಂಧ್ವದಲ್ಲೇ ಬದುಕಿದ ಹಸ್ತಿನೆಯ ಆ ಹಿರಿಯ ಜೀವಕ್ಕೆ ಯಾವುದೂ ಆಕರ್ಷಣೆಯಾಗಲಿಲ್ಲ. ಅಥವಾ ಎಲ್ಲ ಬಗೆಯ ಆಕರ್ಷಣೆ ಗಳನ್ನು ಜಯಿಸಲು ಪ್ರಯತ್ನಿಸುತ್ತಲೇ ಬದುಕಿದರೆ? ಯುದ್ಧದ ಸಂದರ್ಭದಲ್ಲಿ ಪಾಂಡವರ ವಿರುದ್ಧ ನಿಂತಾಗಲೂ ಭೀಷ್ಮರ ಮನಸ್ಸು ಕೌರವ ವಿದ್ವೇಷಿಯಾಗಿತ್ತು ಎಂಬುದನ್ನು ಅಲ್ಲಗಳೆಯಲಾದೀತೆ? ಅದಷ್ಟು ಸುಲಭವಲ್ಲ! ಆದರೆ, ಅಂಬೆಯ ವಿಷಯದಲ್ಲಿ ಮಾತ್ರ ಭೀಷ್ಮರು ತಾವು ಹಿಡಿದ ಹಠದಲ್ಲಿ ಸೋತಂತೆ ಕಾಣುತ್ತದೆ. ಬಾಗಿದಂತೆ ಕಾಣುತ್ತದೆ.

ಹಸ್ತಿನೆಯ ರಾಜ ವೈಭೋಗದ ವೈಭವದಲ್ಲಿ ಬದುಕಿದ್ದರೂ ವಿದುರನಂತೆ ವೈರಾಗ್ಯದ ಬದುಕನ್ನು ಬಾಳಲು ಭೀಷ್ಮ – ದ್ರೋಣರಿಗೂ, ಸಂಜಯ – ದುರ್ಯೋಧನಾ ದಿಗಳಿಗೂ ಸಾಧ್ಯವಾಗಲಿಲ್ಲ. ವಿದುರನಿಂದಲೇ ಉಪದೇಶ ಪಡೆದ ಕುರುಡು ಧೃತರಾಷ್ಟ್ರಗೂ ಸಾಧ್ಯವಾಗಲಿಲ್ಲ. ಹಾಗೆ ನೋಡಿದರೆ ಕೃಷ್ಣನಿಗೂ ಸನ್ಯಾಸತ್ವಕ್ಕೂ ನಂಟಿದೆ. ಯಾವ ಐಹಿಕ ಸುಖಭೋಗಗಳಿಲ್ಲದೆಯೂ ನಂದಗೋಕುಲದಲ್ಲಿ ಬದುಕಿ ಬಾಳಿದ ಅವನು ದ್ವಾರಕೆಯಲ್ಲಿ ಸಕಲ ವೈಭೋಗದೊಂದಿಗೆ ಬದುಕುತ್ತಾನೆ. ಕೊನೆಯಲ್ಲಿ ಎಲ್ಲವನ್ನೂ ತ್ಯಾಗಮಾಡಿ ಶ್ರೇಷ್ಠ ಸಂತನಾಗಿ ಬಿಡುತ್ತಾನೆ.

ಅಗಲಿ ಬದುಕುವ ಶಕ್ತಿ ಕೃಷ್ಣನಿಗಿದ್ದಷ್ಟೂ ಮಹಾಭಾರತದಲ್ಲಿ ಯಾರಿಗೂ ಇಲ್ಲವೆಂದೇ ಹೇಳಬಹುದು! ನಮ್ಮ ಕಾಲದಲ್ಲೇ ಅಚ್ಚರಿಪಡುವಂಥದ್ದು ಎಂದರೆ,
ಶಂಕರಾಚಾರ್ಯರಿಗೂ ತಾಯಿಯ ಋಣದಿಂದ ಮುಕ್ತರಾಗಲು ಸಾಧ್ಯವಾಗಲಿಲ್ಲವೆಂಬುದು. ಕನಕ – ಪುರಂದರರಂಥ ದಾಸವರೇಣ್ಯರು, ಅಲ್ಲಮ, ಬಸವಣ್ಣ, ಅಕ್ಕ,
ಮಾರಯ್ಯನಂಥ ಅಸಂಖ್ಯ ಶಿವಶರಣರು ಐಹಿಕದ ಬದುಕನ್ನು ಗೆದ್ದಿದ್ದರು. ವಿಷಯ ಲೋಲುಪತೆಯಿಂದ ದೂರವಿದ್ದು ಬದುಕಿದರು. ಪರಮಹಂಸರಂಥ ಪರಮಹಂಸರಿಗೇ ಲೌಕಿಕದ ನಂಟಿಂದ ಮುಕ್ತಿ ಸಿಗಲಿಲ್ಲವಂತೆ!

ಸಂಸಾರಿಯಾಗಿದ್ದೂ ಗಾಂಽ ಸನ್ಯಾಸಿಯ ಬದುಕನ್ನು ಬಾಳಿ ಬ್ರಿಟಿಷರನ್ನು ಮಾನಸಿಕವಾಗಿ ಗೆದ್ದರೂ ಅವರ ಬದುಕಿನ ಒಟ್ಟೂ ಸ್ವಭಾವದ ಅಭಿವ್ಯಕ್ತಿಯಲ್ಲಿ ವೈಪರೀತ್ಯಗಳು ವೈರುದ್ಧ್ಯಗಳು ಕಾಣುತ್ತವೆ. ಅವೆಲ್ಲ ಭಾರತದ ರಾಜಕಾರಣ ದೊಂದಿಗೆ ತಳುಕು ಹಾಕಿಕೊಂಡಿರುವುದು ಮಾತ್ರ ದುರಂತ! ದೊಡ್ಡವರೆನಿಸಿ ಕೊಂಡವರ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ದ್ವಂದ್ವ ಆಕೃತಿಗಳು ಹೇರಳವಾಗಿ ಕಾಣಸಿಗುತ್ತವೆ. ಅಷ್ಟಕ್ಕೂ ಬದುಕು ಮೂಲತಃ ದ್ವಂದ್ವವೇ
ಆಗಿದೆಯಲ್ಲವೆ? ಕರ್ಮ ಬಂಧನ ಯಾರನ್ನು ಬಿಟ್ಟಿದೆ ಹೇಳಿ? ಬಯಕೆ, ಸಿಟ್ಟು ಇರದ ಸನ್ಯಾಸಿಗೆ ಬದುಕಿದ್ದಾಗಲೂ, ಸತ್ತ ಅನಂತರವೂ ಮೋಕ್ಷವಿದೆ. ಭ್ರೂಮಧ್ಯದಲ್ಲಿ ಮನಸ್ಸನ್ನು ನಿಲ್ಲಿಸಿ, ಪರಮಾತ್ಮನಲಿ ಮನಸ್ಸನ್ನು ನಿಲ್ಲಿಸಿರುವ ಇವರು ಯಾವಾಗಲೂ ಮುಕ್ತರೇ.

ಎಲ್ಲಾ ಕರ್ಮ(ಯಜ್ಞ,ತಪಸ್ಸು) ಫಲವನ್ನು ಉಣ್ಣುವ ಭಗವಂತನಾದ ನನ್ನನ್ನು ಎಲ್ಲಾ ಪ್ರಾಣಿಗಳ ಗೆಳೆಯನೆಂದು ತಿಳಿದವನು ಶಾಂತಿ (ಆತ್ಮ ಜ್ಞಾನ) ಯನ್ನು ಪಡೆಯುತ್ತಾನೆ. ವಿದ್ವತ್, ವಿವಿದಿಶಾ, ಮರ್ಕಟ ಮತ್ತು ಆತುರ ಎಂಬುದು ನಾಲ್ಕು ಬಗೆಯ ಸನ್ಯಾಸಗಳು. ಜೀವನಾನುಭವದಿಂದ ಪಕ್ವನಾದ ಜೀವಿಯಲ್ಲಿ ಉಂಟಾಗುವ ಸಹಜ-ವೈರಾಗ್ಯವು ಸಂಸಾರತ್ಯಾಗಕ್ಕೆ ಕಾರಣವಾದಾಗ ಅದು ವಿದ್ವತ್ ಸನ್ಯಾಸ. ಜಡಭರತ, ವೃಷಭದೇವ, ಬುದ್ಧ, ಶಂಕರಾಚಾರ್ಯ, ರಮಣ ಮಹರ್ಷಿ, ರಾಮಕೃಷ್ಣ, ಅಕ್ಕಮಹಾದೇವಿ, ಅಲ್ಲಮರು, ಮಹಾವೀರ ಮುಂತಾದವರು ಉದಾಹರಣೆಗಳು.

ವಿದ್ವತ್ ಸನ್ಯಾಸದಲ್ಲಿ ಆಂತರಿಕ ಪಕ್ವತೆ, ವಿರಕ್ತಿಗಳು ಸಹಜವಾಗಿರುವುದರಿಂದ ಇವರು ಪತನವಾಗುವುದಿಲ್ಲ. ವಿದ್ವತ್-ಸನ್ಯಾಸವು ಒಂದು ಆಂತರಿಕ ಸಿದ್ಧಿಯಾ
ದ್ದರಿಂದ ಇದಕ್ಕೆ ಏಕೈಕ ಯೋಗ್ಯತೆ ಪ್ರಖರ ವೈರಾಗ್ಯವೊಂದೇ. ಇದರಲ್ಲಿ ಲಿಂಗ, ಜಾತಿ, ವರ್ಣ, ವಯಸ್ಸು ಮುಂತಾದ ಯಾವುದೂ ಗಣನೆಗೆ ಬಾರದು. ಇಲ್ಲಿ ಕಾವಿ ತೊಡುವುದೂ ಅನಿವಾರ್ಯವಲ್ಲ. ಇಂತಹವರು ಸರ್ವತಂತ್ರ ಸ್ವತಂತ್ರರು. ಕಾವಿ ಧರಿಸಿದವರೆಲ್ಲ ಸನ್ಯಾಸಿಗಳಾಗಲು ಸಾಧ್ಯವಿಲ್ಲ. ಮನಸ್ಸು ಮಾಗಬೇಕು. ಮಾಗಿ ಬಲಿಯಬೇಕು. ಅದಕ್ಕೆ ಬೇಕಾದ ಮಾನಸಿಕ ಮತ್ತು ಬೌದ್ಧಿಕ ಸ್ವರೂಪದ ರಚನೆ ಆಂತರ್ಯದಲ್ಲಿ ಸಿದ್ಧಗೊಳ್ಳಬೇಕು. ಪ್ರಜ್ಞೆ ಆ ದಿಸೆಯತ್ತ ಮಾಗುತ್ತ ಬಲಿಯಬೇಕು. ಸನ್ಯಾಸತ್ವಕ್ಕೂ ಮನಸ್ಸು ಮತ್ತು ದೇಹದೊಪ್ಪಿಗೆ ಬೇಕಾಗುತ್ತದೆ.

ಅಂದರೆ ಮನೋಧರ್ಮ, ದೇಹಧರ್ಮ ಅಂತ ಹೇಳುತ್ತೇವಲ್ಲ, ಅದು. ಮನಸ್ಸು ಮತ್ತು ದೇಹಧರ್ಮವನ್ನು ನಿಯಂತ್ರಿಸಬಲ್ಲ ಸ್ವಸ್ಥ ದೃಢ ಮಾನಸಿಕತೆ ಅಲ್ಲಿ ಮುಖ್ಯವಾಗುತ್ತದೆ. ಹತ್ತು ಬಗೆಯ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ವರ್ತಮಾನದ ಜಗತ್ತಿನೊಂದಿಗೆ ಸನ್ಯಾಸಿಯಾಗಿ ಬದುಕುವುದು ಅಷ್ಟು ಸುಲಭ ವಲ್ಲ. ಮನಸ್ಸು ಕೂಡ ಇಂದ್ರಿಯವೇ. ಅದನ್ನು ನಿಯಂತ್ರಿಸುವುದು ಬಹು ಕಷ್ಟಸಾಧ್ಯ. ಅದರಲ್ಲೂ ಬಾಲಸನ್ಯಾಸತ್ವವೆಂಬುದು ದೂರದ ಮಾತು. ಪರಮ ಕಠಿಣ ತಮದ್ದು. ತಂದೆ-ತಾಯಿಯರ ಆರೋಗ್ಯವನ್ನು ಕಾಪಿಟ್ಟುಕೊಂಡು ಅವರ ಆಗುಹೋಗುಗಳಿಗೆ ಸ್ಪಂದಿಸುತ್ತಾ ಇದೇ ಜೀವ, ಇದುವೇ ಜೀವನವೆಂದು ತಾನೇ
ರಚಿಸಿಕೊಂಡ ಜೀವನ ವಿಧಾನ-ಸಂವಿಧಾನಕ್ಕೆ, ಅದರೊಳಗಿನ ಸಂಹಿತೆಗಳಿಗೆ ಕಟಿಬದ್ಧರಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಬದುಕುವವರ ಮುಂದೆ ಸನ್ಯಾಸತ್ವವೂ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ.

ಸ್ವಬದ್ಧತೆಯಿಂದ ದೇಶಕ್ಕಾಗಿ ಬದುಕುವವರಿದ್ದಾರೆ. ಅದಕ್ಕಾಗಿಯೇ ಸತ್ತವರಿದ್ದಾರೆ. ಅಂಥ ಸ್ವಬದ್ಧತೆಯಿಂದ ಬದುಕುವ ನಮ್ಮ ಕಾಲದ ಯೋಗಿಯಾಗಿ ನಮ್ಮ
ಪ್ರಧಾನಿಯೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿ ಕಾಣುತ್ತಾರೆ. ಸನ್ಯಾಸದ ಜೀವನಕ್ಕೆ ಕಾವಿ ಅನಿವಾರ್ಯವೇನಲ್ಲ. ಸನ್ಯಾಸಕ್ಕೆ ಬೇಕಿರುವುದು ಎಲ್ಲ ಬಗೆಯ ದೈಹಿಕ ಮಾನಸಿಕ ಬೌದ್ಧಿಕ ಸಿದ್ಧತೆಯೇ ಹೊರತು ಅನ್ಯವಿಷಯಗಳ ಅನುರಕ್ತಿಯಲ್ಲ. ಶಾಸ್ತ್ರ ಪ್ರಕಾರ ವಿಧಿವಿಧಾನಗಳೊಂದಿಗೆ ಸನ್ಯಾತ್ವ ಸ್ವೀಕರಿಸಿದ ಮೇಲೆ ಆ ಬದುಕಿಗೆ ಬೇಕಾದ ಎಲ್ಲವನ್ನೂ ಸಿದ್ಧತೆಮಾಡಿಕೊಳ್ಳುವುದು ವ್ಯಕ್ತಿಗೆ ಅನಿವಾರ್ಯವಾಗಿ ಬಿಡುತ್ತದೆ. ಅಂಥ ಬದುಕಿನ ಹಳಿಯೇ ಬೇರೆ. ಗತಿಯೇ ಬೇರೆ. ಪಥವೇ ಬೇರೆ.
ಆಂತರಂಗಿಕವಾಗಿಯೂ ಬಹಿರಂಗವಾಗಿಯೂ ಒಂದು ಐಡೆಂಟಿಟಿಯನ್ನು ಹೊಂದಲು ಅಂಥವರಿಗೆ ಧರಿಸಿದ ಕಾವಿಯೇ ಒಂದು ಪೂರ್ಣ ಪ್ರಮಾಣವಾಗಿ ಬಿಡುತ್ತದೆ. ಆಗ ಇದಕ್ಕೊಂದು ಪೂಜ್ಯತೆಯ ಗೌರವದ ಭಾವ ಜನರಲ್ಲಿ ಮೂಡಿಬಿಡುತ್ತದೆ.

ಜನತೆಯ ಈ ಪೂಜ್ಯಭಾವವನ್ನೇ ತನಗೆ ಬೇಕಾದಂತೆ ಎನ್ ಕ್ಯಾಶ್ ಮಾಡಿಕೊಳ್ಳುವುದು ಜನತೆಯ ಕಣ್ಣಲ್ಲಿ ದೋಷವಾಗಿ ಪರಿಣಮಿಸುವುದರಿಂದ ವರ್ತಮಾನ
ದಲ್ಲಿ ಸನ್ಯಾಸ ಸ್ವೀಕರಿಸಿ ಸ್ವಾಮೀಜಿಗಳಾಗಿ ಪೀಠಧರ್ಮದ ಮೂಲಕ ಸಮಾಜೋದ್ಧಾರದ ಕೈಂಕರ್ಯದಲ್ಲಿ ತೊಡಗಿದವರ ಮೇಲೆ ಜನತೆ ಗೌರವಭಾವವನ್ನೂ, ಅದೇ ಸಮಯದಲ್ಲಿ ನಿರ್ಲಕ್ಷ್ಯ ಭಾವವನ್ನೂ, ತಿರಸ್ಕಾರ ಭಾವವನ್ನೂ, ಅಸಡ್ಧೆಯನ್ನೂ ಪ್ರಕಟಿಸುತ್ತಾ ಮತ್ತೆ ಮತ್ತೆ ತನ್ನ ನಂಬಿಕೆಗಳನ್ನು ಪರಿಷ್ಕರಿಸಿಕೊಳ್ಳುತ್ತಲೇ ಇರುತ್ತದೆ. ಕೇವಲ ಸಮಾಜಕ್ಕಷ್ಟೇ ಅಲ್ಲ, ಅಂಥ ಸನ್ಯಾಸಿಗಳಿಗೂ ಈ ಪರಿಷ್ಕಾರದ ಭಾವ ಮುಖ್ಯ! ಅನಿವಾರ್ಯವೂ ಕೂಡ.

ಒಬ್ಬ ಯತಿ ತನ್ನ ಯತಿ ಧರ್ಮದ ಆಚರಣೆಗಳಲ್ಲಿ ಕೆಟ್ಟರೆ ಸಮಸ್ತ ಯತಿಕುಲವನ್ನೇ ನಿಂದಿಸುವುದು, ಅಪಹಾಸ್ಯ ಮಾಡುವುದು ಎಷ್ಟು ದೊಡ್ಡ ತಪ್ಪೋ ಅಂತೆಯೇ ತನ್ನ ಯತಿ ಧರ್ಮದ ಆಚರಣೆಗಳಲ್ಲಿ ನಿಷ್ಠೆ-ಬದ್ಧತೆಯಿಂದ ಬದುಕುವ ಒಬ್ಬ ಒಳ್ಳೆಯ ಯತಿಯಂತೆ ಎಲ್ಲ ಯತಿಗಳೂ ಒಳ್ಳೆಯವರೆಂದು ಕಣ್ಮುಚ್ಚಿ ಒಪ್ಪುವುದೂ ಅಷ್ಟೇ ದೊಡ್ಡ ತಪ್ಪು. ಈ ನ್ಯಾಯ ಕೇವಲ ಯತಿಗಳಿಗೆ ಮಾತ್ರವಲ್ಲ ಸಮಗ್ರ ಮನುಜ ಕುಲಕ್ಕೂ ಅನ್ವಯಿಸುವಂತದ್ದು. ಯಾರಿಗೇ ಆದರೂ ದೇಹಧರ್ಮ-ಮನೋಧರ್ಮ ವನ್ನೂ ಮೀರಿ ಬದುಕುವುದು ಸಾಧ್ಯವಿಲ್ಲ. ಹಾಗೆ ಬದುಕಲು ಸಾಧ್ಯವಾಗುತ್ತದೆಂದಾದರೆ ಅವನು ಸಂಸಾರಿಯಾಗಿದ್ದರೂ ಸನ್ಯಾಸಿಯೇ.

ಯಾರಿಗೆ ಹಾಗೆ ಬದುಕಲು ಸಾಧ್ಯವಿಲ್ಲವೋ ಅವನು ಸನ್ಯಾಸಿಯಾಗಿದ್ದರೂ ಸಂಸಾರಿಯೇ. ಅಗ್ನಿಸಾಕ್ಷಿಯಾಗಿ ಕೈಹಿಡಿದ ಧರ್ಮಪತ್ನಿಯೊಂದಿಗೆ ಮಕ್ಕಳನ್ನು ಪಡೆದು ಯಾವ ದುಷ್ಟ ಆಸೆ-ಆಕಾಂಕ್ಷೆಗಳಿಗೂ ಒಳಗಾಗದೆ ಇದ್ದುದರಲ್ಲಿಯೇ ಸುಖದಿಂದ ಗೃಹಸ್ಥಧರ್ಮವನ್ನು ಪಾಲಿಸುತ್ತಾ ಕಾಯಾ-ವಾಚಾ-ಮನಸಾ ಶುಚಿತ್ವದೊಂದಿಗೆ
ಬದುಕುವವರನ್ನು ಸನ್ಯಾಸ ಧರ್ಮವನ್ನು ಪಾಲಿಸುವ ಸನ್ಯಾಸಿಗಳಂತೆಯೇ ಭಾವಿಸಬೇಕಾಗುತ್ತದೆ. ಧರ್ಮಮಾರ್ಗದಿಂದ ಅರ್ಥ ವನ್ನು ಗಳಿಸಿ, ಅದೇ ಪಥದಲ್ಲಿ
ತನ್ನ ಮನುಷ್ಯ ಸಹಜ ಕಾಮನೆಗಳನ್ನು ನೀಗಿಸಿಕೊಂಡು ತನ್ನವರೊಂದಿಗೆ ಮೋಕ್ಷವನ್ನು ಕಂಡುಕೊಳ್ಳಲು ಬಯಸುವ ಸದ್ಗ್ರಹಸ್ಥನೂ ಸನ್ಯಾಸಿಯೇ!

ಆಶ್ರಮಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಇವು ಗೃಹಸ್ಥಾಶ್ರಮದಿಂದಲೇ ಹುಟ್ಟಿದ ಪ್ರತ್ಯೇಕ ಅಶ್ರಮಗಳೆಂದು ಮನುಸ್ಮೃತಿ ಹೇಳುತ್ತದೆ.
ಈ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಶ್ರೇಷ್ಠವೆಂದು ಅದು ಹೇಳುತ್ತದೆ. ಯಾಕೆಂದರೆ ಗೃಹಸ್ಥನು ವೇದಸ್ಮೃತಿಗಳ ಉಪದೇಶದಂತೆ ನಡೆದುಕೊಂಡು ಈ ಮೂರೂ ಉಳಿದ ಅಶ್ರಮಗಳನ್ನು ಪೋಷಣೆ ಮಾಡುತ್ತಾನೆ ಎನ್ನುತ್ತದೆ ಮನುಸ್ಮೃತಿ. ಎಲ್ಲ ನದಿ-ನದಗಳೂ ಸಮುದ್ರವನ್ನೇ ಆಶ್ರಯಿಸುವಂತೆ ಬ್ರಹ್ಮಚಾರಿ, ವಾನಪ್ರಸ್ಥಿ, ಸನ್ಯಾಸಿ ಈ ಮೂವರೂ ಗೃಹಸ್ಥನನ್ನೇ ಆಶ್ರಯಿಸುತ್ತಾರೆ ಎಂದು ಮನುಸ್ಮೃತಿ ಉಲ್ಲೇಖಿಸುತ್ತದೆ.

ಕೊನೆಯ ಮಾತು: ತನ್ನ ಮನೆಯೊಳಗಿರುವ ದೇವರಕೋಣೆಯಲ್ಲಿ ಎಂಥಾ ಸಂದರ್ಭದಲ್ಲೂ ಹೊಲಸನ್ನು ವಿಸರ್ಜಿಸಬಾರದೆಂಬ ಎಚ್ಚರವನ್ನೂ ಹೊಂದಿರುವ ಜನರ ಮಧ್ಯೆ ಸನ್ಯಾಸಿಗಳು ತಮ್ಮ ನಿತ್ಯಾಚರಣೆಯಲ್ಲಿ ಯಾವ ಎತ್ತರವನ್ನು ಕಾಯ್ದುಕೊಳ್ಳಬೇಕೆಂಬುದು ಕತ್ತಿಯಲಗಿನ ಮೇಲಿನ ನಡಿಗೆಯೇ ಸರಿ!

ನಿತ್ಯದ ಬದುಕಿನಲ್ಲಿ ಗೃಹಸ್ಥಧರ್ಮದ ಆಚರಣೆಗಳನ್ನು ನಿಷ್ಠೆಯಿಂದ ಪಾಲಿಸುವ ಸತ್ ಗೃಹಸ್ಥನಿಗೂ, ಸನ್ಯಾಸ ಧರ್ಮದ ಆಚರಣೆಗಳನ್ನು ನಿತ್ಯವೂ ನಿಷ್ಠೆಯಿಂದ ಪಾಲಿಸುವ ಸನ್ಯಾಸಿಗೂ ಸತ್ಯ ಮತ್ತು ಸತ್ತ್ವದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲವೆಂದೇ ನನ್ನ ಭಾವನೆ. ಜೀವನ ಸಂಹಿತೆಗಳನ್ನು ಯಾರು ಉಲ್ಲಂಘಿಸು ತ್ತಾರೋ ಅವರನ್ನು ಬಹಿರಂಗದಲ್ಲಿ ಅವರಿರುವಂತೆ ಈ ಸಮಾಜ ಸ್ವೀಕರಿಸುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಮನುಷ್ಯನ ನಿಯತ್ತು ಕರಗುವುದು ಹಣ ಮತ್ತು ಹೆಣ್ಣಿನ ವಿಷಯಗಳಲ್ಲಿ! ಇದು ಲೋಕಸತ್ಯ.