Tuesday, 22nd October 2024

ಸರ್ದಾರರ ಪ್ರತಿಮೆ ಮತ್ತು ಸರಕಾರದ ಹಣ

ವಿದೇಶವಾಸಿ

dhyapaa@gmail.com

ಇಂದಿನ ದಿನಗಳಲ್ಲಿ ಒಂದು ಪ್ರದೇಶಕ್ಕೆ ಜೀವಕಳೆ ತುಂಬಬೇಕು ಅಂದರೆ ಪ್ರವಾಸೋದ್ಯಮವನ್ನು ಬಿಟ್ಟು ಬೇರೆ ಯಾವ ಉದ್ಯಮದಿಂದಲೂ ಸಾಧ್ಯವಿಲ್ಲ. ಅದೇ ಪ್ರವಾಸಿ ತಾಣವನ್ನು ನಿರ್ಮಿಸಿದರೆ ಆರೋಗ್ಯವಂತರೆಲ್ಲರೂ ಬರುತ್ತಾರೆ. ಕೋವಿಡ್‌ನಂತರವಂತೂ ಹೆಚ್ಚು-ಕಮ್ಮಿ ಎಲ್ಲ ಪ್ರವಾಸಿ ತಾಣಗಳೂ ತುಂಬಿ ತುಳುಕುತ್ತಿವೆ. ಜನರಲ್ಲಿ ಪ್ರವಾಸದ ಕುರಿತಾಗಿ ಅರಿವು ಹೆಚ್ಚಿದೆ.

ಅಂದು ಭಾರತಕ್ಕೆ ಸ್ವಾತಂತ್ರ್ಯವೇನೋ ಸಿಗುತ್ತಿತ್ತು, ಅವರೊಬ್ಬರು ಇಲ್ಲದಿದ್ದರೆ ಸ್ವತಂತ್ರ ಭಾರತ ಇಂದು ಹೇಗಿದೆಯೋ ಹಾಗೆ ಇರುತ್ತಿರಲಿಲ್ಲ. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತ ಸುಮಾರು ಐದು ನೂರಕ್ಕೂ ಹೆಚ್ಚು ರಾಜರ, ಸಾಮಂತರ, ನಿಜಾಮರ ತುಕಡಿಯಾಗಿತ್ತು. ಅಂಥವರ ಜತೆ ಮಾತಾಡಿ, ಅವರನ್ನೆಲ್ಲ ಒಂದೇ ಛತ್ರಛಾಯೆಯ ಅಡಿಯಲ್ಲಿ ತರುವುದು ಎಂದರೆ ಸಾಮಾನ್ಯದ ವಿಷಯವಾಗಿರಲಿಲ್ಲ. ಆ ಕೆಲಸವನ್ನು ಮಾಡಿ ಐಕ್ಯತೆಯ ಸಾಕಾರಮೂರ್ತಿಯಾದವರು ಸರದಾರ ವಲ್ಲಭಭಾಯಿ ಪಟೇಲ್.

ಸರದಾರ ಪಟೇಲ್ ಎಂಬ ಉಕ್ಕಿನ ಮನುಷ್ಯನ ಶ್ರಮದಿಂದಾಗಿ ನಾವು ಇಂದು ಕಾಣುವ ಭಾರತ ಮೈದಳೆದು ನಿಂತಿದೆ. ಇದಾಗಿ ಸುಮಾರು ಏಳು ದಶಕದ ನಂತರ ಅವರ ಪ್ರತಿಮೆಯೊಂದನ್ನು ನಿರ್ಮಿಸಬೇಕು ಎಂದು ಭಾರತ ಸರಕಾರ ನಿರ್ಧರಿಸಿತು. ಮೂಲತಃ ಗುಜರಾತಿನವರಾದ ಉಕ್ಕಿನ ಮನುಷ್ಯನ ಪ್ರತಿಮೆಯೊಂದನ್ನು ಅವರದ್ದೇ ರಾಜ್ಯದಲ್ಲಿ ಸ್ಥಾಪಿಸಬೇಕು ಎಂಬ ಯೋಜನೆ ಸಿದ್ಧವಾದಾಗ, ಅದು ಸೀದಾ-ಸಾದಾ, ಹಳೆಯ ಹತ್ತರ ಜತೆ ಇನ್ನೊಂದಾಗಿ ಸೇರಿಕೊಳ್ಳದೇ, ವಿಶಿಷ್ಟವಾಗಿಯೂ, ವಿಭಿನ್ನವಾಗಿಯೂ ಇರಬೇಕು ಎನ್ನುವುದು ಕಲ್ಪನೆಯಾಗಿತ್ತು.

ಕನಸು ಕಾಣುವುದಾದರೆ ದೊಡ್ಡದನ್ನೇ ಕಾಣಬೇಕು. ಅದಕ್ಕೆ ಯಾವ ಮಿತಿಯೂ ಇಲ್ಲ, ತೆರಿಗೆಯೂ ಇಲ್ಲ ಎನ್ನುತ್ತಾರಲ್ಲ, ಹಾಗೆ. ಆದರೆ ಈ ನಿರ್ದಿಷ್ಟ ಮೂರ್ತಿ ಸ್ಥಾಪನೆಯ ವಿಷಯದಲ್ಲಿ ಹಾಗಾಗಲಿಲ್ಲ. ಏಕೆಂದರೆ ಇದು ಜನರ ತೆರಿಗೆಯ ದುಡ್ಡಿನಲ್ಲಿ ಸರಕಾರದ ಯೋಜನೆಯಾಗಿತ್ತು. ಸುಮಾರು ಐದು-ಆರು ವರ್ಷಗಳ ಹಿಂದಿನ ಮಾತು. ಧ್ರುವ್ ರಾಠಿ ಎಂಬ ಯೂಟ್ಯೂಬರ್ ಈ ಪ್ರತಿಮೆಯ ಅಸಲಿಯತ್ತು ಮತ್ತು ಭವಿಷ್ಯ ಏನಾಗಬಹುದು ಎನ್ನುವುದರ ಕುರಿತು ಮಾತಾಡಿದ ವಿಡಿಯೋ ನೋಡುತ್ತಿದ್ದೆ.

ಈ ಯೋಜನೆಗೆ ಸರಕಾರ ಮೂರು ಸಾವಿರ ಕೋಟಿ ರುಪಾಯಿ ಖರ್ಚು ಮಾಡುತ್ತಿದೆ, ಅದರಲ್ಲಿ ಮೂರ್ತಿಯ ನಿರ್ಮಾಣಕ್ಕೆಂದೇ ಸಾವಿರದ ಮುನ್ನೂರ ಐವತ್ತು ಕೋಟಿ ಖರ್ಚಾಗುತ್ತಿದೆ ಎಂದರೆ ಹೇಗೆ? ಆ ಹಣ ಹಿಂತಿರುಗಿ ಬರುವುದು ಹೇಗೆ? ವಿಶ್ವದ ಅದ್ಭುತಗಳಲ್ಲಿ ಒಂದು ಎಂದು ಕರೆಸಿಕೊಳ್ಳುವ ತಾಜ್ ಮಹಲ್‌ಗೆ ಪ್ರತಿ ವರ್ಷ ಎಂಬತ್ತು ಲಕ್ಷ ಪ್ರವಾಸಿಗರು ಭೇಟಿಕೊಡುತ್ತಾರೆ, ಅದರಿಂದ ಇಪ್ಪತ್ತೈದು ಕೋಟಿ ರುಪಾಯಿ ಬರುತ್ತಿದೆ. ಪಟೇಲರ ಪ್ರತಿಮೆ
ಅದರಷ್ಟೇ ಜನಪ್ರಿಯವಾದರೂ ಸರಕಾರ ವಿನಿಯೋಗಿಸಿದ ಹಣ ಹಿಂತಿರುಗಿ ಬರಲು ನೂರ ಇಪ್ಪತ್ತು ವರ್ಷ ಬೇಕು.

ಅದರೊಂದಿಗೆ ಅಲ್ಲಿ ಕೆಲಸ ಮಾಡುವವರ ಸಂಬಳ, ಅದಕ್ಕೆ ಬೇಕಾದ ವಿದ್ಯುತ್, ನೀರು ಇತ್ಯಾದಿ ವ್ಯವಸ್ಥೆಗಳನ್ನೆಲ್ಲ ಸೇರಿಸಿದರೆ ಎಷ್ಟಾಯಿತು? ಪ್ರತಿಮೆ
ನೋಡಲು ತಾಜ್ ಮಹಲ್‌ಗೆ ಬರುವ ಜನರ ಹತ್ತು ಪ್ರತಿಶತವೂ ಬರಲಿಕ್ಕಿಲ್ಲ, ಪ್ರವೇಶ ದರವನ್ನು ತಾಜ್ ಮಹಲ್‌ಗಿಂತ ಹೆಚ್ಚು ಇರಿಸಿದರೂ ಪೂರ್ತಿ ಹಣ ಬರಲು ಎಂಬತ್ತೈದು ವರ್ಷ ಬೇಕು. ಬದಲಾಗಿ ಆ ಸ್ಥಳದಲ್ಲಿ ಒಂದು ವಿಶ್ವವಿದ್ಯಾಲಯ ನಿರ್ಮಿಸುವುದು ಅಥವಾ ಕೌಶಲ್ಯ ಅಭಿವೃದ್ಧಿಯ ತರಬೇತಿ ನೀಡುವುದು ಒಳ್ಳೆಯದಲ್ಲವೇ? ಸರಕಾರ ಇದನ್ನೆಲ್ಲ ಏಕೆ ಯೋಚಿಸಲಿಲ್ಲ? ಪ್ರತಿಮೆಗೆ ಹಣ ವಿನಿಯೋಗಿಸುವುದು ಅನಾವಶ್ಯಕ, ದುಂದುವೆಚ್ಚ ಅಲ್ಲವೇ? ಅದಲ್ಲದೇ, ವಿಶ್ವದ ಯಾವುದೇ ದೊಡ್ಡ ಪ್ರತಿಮೆಗಳ ಉದಾಹರಣೆ ತೆಗೆದುಕೊಂಡರೂ, ಅವೆಲ್ಲ ನಗರದಲ್ಲಿ ಅಥವಾ ನಗರ ಪ್ರದೇಶಕ್ಕೆ ಹತ್ತಿರದಲ್ಲಿವೆ.

ಅಂಥದ್ದರಲ್ಲಿ ನಗರದಿಂದ ಒಂದೂವರೆ ಗಂಟೆ ದೂರ ಇರುವ, ಅಕರ್ಷಕವಲ್ಲದ ಒಂದು ಪ್ರತಿಮೆ ನೋಡಲು ಯಾರು ಬರುತ್ತಾರೆ? ಈ ಯೋಜನೆಯಿಂದ ಅಲ್ಲಿಯ ಜನರಿಗೆ, ಅದರಲ್ಲೂ ಆದಿವಾಸಿಗಳಿಗೆ ಅನಾನುಕೂಲವಾಗುತ್ತದೆ, ಅವರೆಲ್ಲ ಈಗಾಗಲೇ ತಕರಾರು ತೆಗೆದಿzರೆ ವಗೈರೆ, ವಗೈರೆ…ಯೂಟ್ಯೂಬರ್ ಈ ಯೋಜನೆಯ ಕುರಿತು ದೊಡ್ಡ ಋಣಾತ್ಮಕ ಪಟ್ಟಿಯನ್ನೇ ನೀಡಿದ್ದ. ನಿಜ ಹೇಳಬೇಕೆಂದರೆ, ಒಂದು ಹಂತದಲ್ಲಿ ನನ್ನ ಅಭಿಪ್ರಾಯವೂ ಅದೇ ಆಗಿತ್ತು. ಈ ನಡುವೆ, ಪ್ರತಿಮೆ ನಿರ್ಮಾಣಗೊಂಡು ಅನಾವರಣವೂ ಆಯಿತು.

ಈ ಮೂರ್ತಿಯ ವಿಶೇಷತೆಯನ್ನು ಚಿಕ್ಕದಾಗಿ ಹೇಳಿಬಿಡುತ್ತೇನೆ. ಗುಜರಾತ್‌ನ ನರ್ಮದಾ ನದಿ ಬರೀ ನದಿಯಲ್ಲ, ಅರ್ಧ ಗುಜರಾತಿನ ಜನರಿಗೆ ಜೀವಜಲ.
ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟಿನ ಎದುರಿನಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟು ಸರ್ದಾರ್ ಪಟೇಲರ ಕನಸಾಗಿತ್ತು, ಅದಕ್ಕಾಗಿ ಈ ಪ್ರತಿಮೆಯನ್ನು ಅಣೆಕಟ್ಟನ್ನೇ ನೋಡುತ್ತಿರುವ ರೀತಿಯಲ್ಲಿ ನಿರ್ಮಿಸಲಾಗಿದೆ. ಮೊದಲು ಇದನ್ನು ಪಕ್ಕದಗುಡ್ಡದ ಮೇಲೆ ನಿರ್ಮಿಸಬೇಕು ಎಂದು ಯೋಚಿಸಲಾಗಿತ್ತು. ನಂತರ ನದಿಯ ಮಧ್ಯದಲ್ಲಿರುವ ಸಾಧು ಬೇಟ್ ಹೆಸರಿನ ಸಣ್ಣ ದ್ವೀಪ ಅಥವಾ ಒಂದು ದೊಡ್ಡ ಬಂಡೆಯ ಮೇಲೆ ಇದನ್ನು ನಿರ್ಮಿಸಲಾಯಿತು. ವಿಶ್ವದ ಯಾವುದೇ ಎತ್ತರದ ಪ್ರತಿಮೆ ನೀವು ನೋಡಿದರೂ ನಿಮಗೆ ಕಾಲು ಕಾಣುವುದಿಲ್ಲ, ಬಟ್ಟೆ ಕಾಲನ್ನು ಮುಚ್ಚಿರುತ್ತದೆ.

ಮೇಲೆ ಹೋದಂತೆ ಪ್ರತಿಮೆ ಸ್ವಲ್ಪ ಕಿರಿದಾಗುತ್ತದೆ. ಬುಡ ಅಗಲವಾಗಿದ್ದಷ್ಟೂ ಪ್ರತಿಮೆ ಗಟ್ಟಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಅದನ್ನು ಹಾಗೆ ವಿನ್ಯಾಸಗೊಳಿಸಿರುತ್ತಾರೆ. ಇದು ತಂತ್ರeನದ ಅವಶ್ಯಕತೆ. ಆದರೆ ಪಟೇಲರ ಪ್ರತಿಮೆಯಲ್ಲಿ ಎರಡೂ ಕಾಲುಗಳು ಕಾಣುತ್ತವೆ. ಪಟೇಲರ ಪ್ರತಿಮೆ ಬುಡದಲ್ಲಿ ಕಿರಿದಾಗಿದ್ದು, ನೂರ ಎಂಬತ್ತು ಕಿಲೋಮೀಟರ್ ಪ್ರತಿ ಗಂಟೆಗೆ ಬೀಸುವ ಗಾಳಿಯನ್ನು ಎದುರಿಸಿ ನಿಲ್ಲುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ವಿಶ್ವದ ಅತ್ಯಂತ ಎತ್ತರದ ಈ ಪ್ರತಿಮೆ ನೂರ ಎಂಬತ್ತೆರಡು ಮೀಟರ್ ಇದೆ. ನೂರ ಎಂಬತ್ತೆರಡೇ ಏಕೆಂದರೆ, ಇದು ಗುಜರಾತ್ ವಿಧಾನಸಭೆಯಲ್ಲಿ ಇರುವ ಶಾಸಕರ ಬಲದ ಸಂಖ್ಯೆ. ಈ ಪ್ರತಿಮೆಯಲ್ಲಿ ಇಪ್ಪತ್ನಾಲ್ಕುವರೆ ಸಾವಿರ ಟನ್ ಟನ್ ಉಕ್ಕು, ಎಪ್ಪತ್ತು ಸಾವಿರ ಟನ್ ಸಿಮೆಂಟ್ ಮತ್ತು ಸಾವಿರದ ಏಳುನೂರು ಟನ್ ತಾಮ್ರವನ್ನು ಬಳಸಿದ್ದಾರೆ.

ಆದರೆ ಖಠಿZಠ್ಠಿಛಿ ಟ್ಛ ಖ್ಞಿಜಿಠಿqs ಅಥವಾ ‘ಏಕತೆಯ ಪ್ರತಿಮೆ’ ಬರೀ ಪ್ರತಿಮೆಯಲ್ಲ, ಅದೊಂದು ಪ್ರವಾಸಿ ತಾಣ. ಅಲ್ಲಿ ಹೋದವರು ಕೇವಲ ಒಂದು ಪ್ರತಿಮೆ ಯನ್ನು ನೋಡಿಕೊಂಡು ಹಿಂದಿರುಗಿ ಬರುವಂತಿಲ್ಲ. ಪ್ರತಿಮೆಯ ಅಕ್ಕಪಕ್ಕದಲ್ಲಿ ಪ್ರವಾಸಿಕರಿಗಾಗಿ Sಟ್ಠ್ಟಜಿoಠಿ ಇಜ್ಟ್ಚ್ಠಿಜಿಠಿ ನಿರ್ಮಿಸಲಾಗಿದೆ. ಅಂದರೆ ಅಲ್ಲಿ ಆಯುರ್ವೇದ ವನವಿದೆ, ಜಂಗಲ್ ಸಫಾರಿ ಇದೆ, ಹೂದೋಟವಿದೆ, ಆರೋಗ್ಯಧಾಮವಿದೆ, ಜತೆಗೆ ಅಣೆಕಟ್ಟಂತೂ ಇದ್ದೇ ಇದೆ. ಬೇರೆ ಪ್ರಾಂತ್ಯಗಳಿಂದ ಅಥವಾ ವಿದೇಶದಿಂದ ಬಂದಂತಹ ಗಣ್ಯರಿಗೆ, ಪ್ರವಾಸಿಗರಿಗೆ ಸಮ್ಮೇಳನ ನಡೆಸಲು ವ್ಯವಸ್ಥೆಗಳಿವೆ.

ಸುಮಾರು ಇನ್ನೂರು ಜನ ಸೇರಿ ನಡೆಸುವಂಥ ಸಭಾಂಗಣದಿಂದ ಹಿಡಿದು ಒಂದು ಸಾವಿರಕ್ಕೂ ಹೆಚ್ಚು ಜನ ಸೇರಿ ಸಭೆ ನಡೆಸಬಹುದಾದಂಥ ಬೇರೆ ಬೇರೆ
ಸಭಾಂಗಣಗಳಿವೆ. ಇದರಿಂದಾಗಿ ಸುತ್ತಮುತ್ತಲಿನ ಆದಿವಾಸಿಗಳಿಗೆ ಸುಮಾರು ಹದಿನೈದು ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ನೂರಾರು ಕಿಲೋಮೀಟರ್ ರಸ್ತೆ, ರಸ್ತೆಗೆ ಬೇಕಾದ ವಿದ್ಯುತ್ ದೀಪಗಳು, ನೀರಿನ ವ್ಯವಸ್ಥೆ, ಅಕ್ಕ-ಪಕ್ಕದಲ್ಲಿ ಹಸಿರು ಹಾಸು ನಿರ್ಮಾಣವಾಗಿದೆ. ಹತ್ತಿರದ ಇರುವ ‘ಏಕತಾ ನರ್ಸರಿ’ಯಲ್ಲಿ
ಮುನ್ನೂರು ಜನ ಆದಿವಾಸಿ ಮಹಿಳೆಯರು ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ಮನೆಯಿಂದ ಹೊರಗೆ ಹೆಜ್ಜೆಯನ್ನೂ ಇಡದ ಈ ಮಹಿಳೆಯರು ಇಂದು ಪ್ರತಿನಿತ್ಯ ಸ್ವತಃ ನೂರಾರು ರುಪಾಯಿ ದುಡಿದು ಮನೆಗೆ ತರುತ್ತಾರೆ.

‘ಏಕತಾ ಕೆಫೆ’ಯಲ್ಲಿ ಸುಮಾರು ನಲವತ್ತು ಆದಿವಾಸಿ ಮಹಿಳೆಯರು ಕೆಲಸ ಮಾಡುತ್ತಾರೆ. ಪ್ರತಿನಿತ್ಯ ನೂರ ಐವತ್ತರಿಂದ ಮುನ್ನೂರು ಜನರಿಗೆ ಆದಿವಾಸಿ ಪರಂಪರೆಯ ಊಟ ಬಡಿಸುತ್ತಾರೆ. ಸುತ್ತ-ಮುತ್ತ ಬೆಳೆಯುವ ತರಕಾರಿ, ಧಾನ್ಯ, ಸಾವಯವ ಪದಾರ್ಥಗಳನ್ನು ಮಾತ್ರ ಅಡುಗೆಗೆ ಬಳಸುತ್ತಾರೆ. ಪ್ರತಿಮೆಯ ಹತ್ತಿರದಲ್ಲಿರುವ ‘ಭಾರತ್ ಗಾರ್ಡನ್’ನಲ್ಲಿ ಸುಮಾರು ಮುನ್ನೂರು ಬಗೆಯ ಹೂವಿನ ಗಿಡಗಳಿವೆ. ಅಲ್ಲಿ ಬಿಟ್ಟ ಹೂವುಗಳನ್ನು ಸರ್ದಾರ್ ಪಟೇಲರ ಪಾದಕ್ಕೆ ಸಮರ್ಪಿಸಲು ಬಳಸುತ್ತಾರೆ. ಇಪ್ಪತ್ನಾಲ್ಕು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ ‘ವ್ಯಾಲ್ಯೂ ಆಫ್ ಪವರ್ಸ್’ ಅಥವಾ ‘ಭಾರತ ವನ’ವನ್ನು ನಿರ್ಮಿಸುವಾಗ, ಆರಂಭದಲ್ಲಿ ನೆಟ್ಟಿದ್ದ ನಲವತ್ತೆಂಟು ಸಾವಿರ ಗಿಡಗಳ ಸಂಖ್ಯೆ ಇಂದು ಲಕ್ಷವನ್ನು ಮೀರಿಸಿದೆ.

ಹದಿನೇಳು ಎಕರೆ ವ್ಯಾಪ್ತಿಯಲ್ಲಿರುವ ‘ಮಿಯಾವಾಕಿ -ರೆ’ ಹೆಸರಿನ ಆರೋಗ್ಯ ವನದಲ್ಲಿ ಎಂಬತ್ತು ಮೀಟರ್ ಉದ್ದದ ಮನುಷ್ಯನ ಆಕೃತಿ ನಿರ್ಮಿಸ ಲಾಗಿದ್ದು, ದೇಹದ ಆಯಾ ಭಾಗಕ್ಕೆ ಉಪಯುಕ್ತವಾದ ಔಷಧ, ಗಿಡಮೂಲಿಕೆಗಳನ್ನು ಆಯಾ ಭಾಗದಲ್ಲಿಯೇ ಬೆಳೆಯುತ್ತಿದ್ದಾರೆ. ಸುಮಾರು ಇನ್ನೂರ ಐವತ್ತು ಎಕರೆ ವಿಸ್ತೀರ್ಣದ ಜಂಗಲ್ ಸಫಾರಿ ಇಪ್ಪತ್ತೇಳು ಮೀಟರ್ ಎತ್ತರದಿಂದ ಆರಂಭವಾಗಿ ನೂರ ಎಂಬತ್ತು ಮೀಟರ್‌ವರೆಗೆ, ಏಳು ಹಂತದಲ್ಲಿ ಇದೆ. ಇಲ್ಲಿ ಹದಿನೇಳು ದೇಶದಿಂದ ತಂದ ಒಂದೂವರೆ ಸಾವಿರದಷ್ಟು ಪಶು ಪಕ್ಷಿಗಳಿವೆ. ಅದರೊಂದಿಗೆ ಮಕ್ಕಳಿಗಾಗಿ ಆಟದ ವ್ಯವಸ್ಥೆ, ಮಾಲ್, ರಿವರ್ ರಾಫ್ಟಿಂಗ್ ಇತ್ಯಾದಿಗಳೂ ಇವೆ. ಇವೆಲ್ಲದಕ್ಕೂ ತಿಲಕವಿಟ್ಟಂತೆ ಸಾಯಂಕಾಲ ನಡೆಯುವ ‘ಲೇಸರ್ ಶೋ’ ಮತ್ತು ‘ಪ್ರೊಜೆಕ್ಷನ್ ಮ್ಯಾಪಿಂಗ್’ ಅನ್ನು ಏಕಕಾಲದಲ್ಲಿ ಒಂದೂವರೆ ಸಾವಿರ ಜನ ಕುಳಿತು ನೋಡುವ ವ್ಯವಸ್ಥೆ ಮಾಡಿದ್ದಾರೆ. ಇದರೊಂದಿಗೆ ಸುತ್ತಮುತ್ತಲಿನ ಊರಿನಲ್ಲಿ ಸಾಕಷ್ಟು ಹೊಟೇಲ್, ಊಟದ ಮನೆ, ಇತ್ಯಾದಿ ತಲೆ ಎತ್ತಿ ನಿಂತಿವೆ.

ಅದರಿಂದ ಆದ ಉದ್ಯೋಗ ಸೃಷ್ಟಿ, ಅಲ್ಲಿಯ ವ್ಯಾಪಾರ, ಇದೆಲ್ಲ ಬೇರೆ. ಆದಿವಾಸಿಗಳ ಹಳೆಯ ‘ಕೇವಡಿಯಾ’ ಗ್ರಾಮ ಈಗ ‘ಏಕತಾ ನಗರ’ವಾಗಿ
ಪರಿವರ್ತನೆಗೊಂಡಿದೆ. ದಿನಕ್ಕೆ ಒಂದೋ ಎರಡೋ ಬಸ್ ಬರುತ್ತಿದ್ದಂತಹ ಊರಿಗೆ ಇಂದು ಸಾಕಷ್ಟು ಬಸ್ ಬಂದು ಹೋಗುತ್ತದೆ. ನಿತ್ಯವೂ ನಾಲ್ಕೈದು ರೈಲು ಬಂದು ಹೋಗುತ್ತದೆ. ಸಾಯಂಕಾಲ ನರ್ಮದಾ ಆರತಿಯಾಗುತ್ತದೆ. ೨೦೧೮ ರಲ್ಲಿ ಪ್ರತಿಮೆ ಅನಾವರಣಗೊಂಡಾಗಿನಿಂದ ಇದುವರೆಗೆ ಒಂದು ಕೋಟಿಗಿಂತ ಹೆಚ್ಚು ಜನ ಇಲ್ಲಿ ಭೇಟಿ ನೀಡಿದ್ದಾರೆ.

ಪ್ರತಿನಿತ್ಯ ಸರಾಸರಿ ಹತ್ತು ಸಾವಿರ, ವಾರಾಂತ್ಯದಲ್ಲಿ ಇಪ್ಪತ್ತು ಸಾವಿರ ಜನ ಈ ಪ್ರದೇಶಕ್ಕೆ ಬಂದು ಹೋಗುತ್ತಿzರೆ ಎಂದರೆ, ಕೇವಲ ಪ್ರತಿಮೆ ಅಥವಾ ಅಕ್ಕ-ಪಕ್ಕದ ಸ್ಥಳಗಳಷ್ಟೇ ಅಲ್ಲ, ಆ ಊರಿನಲ್ಲಿರುವ ಅಂಗಡಿ, ಹೊಟೇಲ್ ಮತ್ತು ಇತರ ಉದ್ಯೋಗಗಳಿಗೆ ಎಷ್ಟು ಮಹತ್ವ ದೊರೆಯುತ್ತಿದೆ ಎಂದು ಊಹಿಸ ಬಹುದು. ಈ ಒಂದು ಯೋಜನೆಯಿಂದಾಗಿ ಸುತ್ತಮುತ್ತಲಿನ ಗಂಡಸರಿಗೆ ಸೆಕ್ಯೂರಿಟಿ ಗಾರ್ಡ್, ವಾಹನ ಚಾಲಕರು, ಗೈಡ್, ಹೂತೋಟ-ಕೈತೋಟಗಳಲ್ಲಿ ಕೆಲಸ ಮಾಡುವ, ಸ್ವಚ್ಛತೆಯ ಕಾರ್ಯದಲ್ಲಿ ಕೆಲಸ ಇತ್ಯಾದಿ ಉದ್ಯೋಗ ಸೃಷ್ಟಿಯಾಗಿದೆ. ಅದರೊಂದಿಗೆ ಅಲ್ಲಿಯ ಮುನ್ನೂರು ಆದಿವಾಸಿ ಮಹಿಳೆಯರು ಗುಲಾಬಿ ಬಣ್ಣದ ಈ-ಆಟೋ (ಎಲೆಕ್ಟ್ರಿಕ್ ಆಟೊರಿಕ್ಷಾ) ನಡೆಸುತ್ತಿದ್ದಾರೆ.

ಅವರು ಪ್ರತಿನಿತ್ಯ ಏಳುನೂರು ರುಪಾಯಿ ಸರಕಾರಕ್ಕೆ ಕೊಟ್ಟರಾಯಿತು, ಮೇಲಿಂದ ಎಷ್ಟೇ ದುಡಿದರೂ ಅದು ಆ ಮಹಿಳೆಗೆ. ಒಬ್ಬೊಬ್ಬರೂ ಪ್ರತಿನಿತ್ಯ ಐದು-ಆರು ನೂರು ರುಪಾಯಿ ಉಳಿಸುತ್ತಿದ್ದಾರೆ. ಈಗ ‘ಏಕತೆಯ ಪ್ರತಿಮೆ’ಯ ಆಯವ್ಯಯಕ್ಕೆ ಬರೋಣ. ಒಂದು ಸತ್ಯ ಏನೆಂದರೆ, ಪ್ರವಾಸಿ ತಾಣದ
ಆದಾಯವನ್ನು ಪರಿಗಣಿಸುವಾಗ ಕೇವಲ ಪ್ರವೇಶ ದರದಿಂದ ಬರುವ ಆದಾಯವನ್ನು ಮಾತ್ರ ಆದಾಯ ಎಂದು ಪರಿಗಣಿಸಬಾರದು.

ಸುತ್ತ-ಮುತ್ತ ಆಗುವ ಬದಲಾವಣೆಗಳನ್ನೂ ಪರಿಗಣಿಸಬೇಕು. ಉದಾಹರಣೆಗೆ, ಜಾಹೀರಾತು ಫಲಕದಿಂದ ಅಲ್ಲಿಯ ಪಾಲಿಕೆಗೆ ಬರುವ ಆದಾಯ, ವಾಹನಗಳು ಬಳಸುವ ಇಂಧನಗಳಿಂದ ಬರುವ ಆದಾಯ, ಹೊಟೇಲ, ಅಂಗಡಿಗಳು ತುಂಬುವ ತೆರಿಗೆ ಇತ್ಯಾದಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಇವೆಲ್ಲವೂ ಸರಕಾರಕ್ಕೆ ಆದಾಯವೇ. ಕೇವಲ ಪ್ರವೇಶದರವನ್ನು ಮಾತ್ರ ಆದಾಯ ಎಂದು ಪರಿಗಣಿಸಬೇಕು ಎಂದು ಯಾರಾದರೂ ಹೇಳಿದರೆ ಅದು ಶತಮೂರ್ಖತನವಾದೀತು.

ಈ ಪ್ರತಿಮೆಯ ನಿರ್ಮಾಣಕ್ಕಾಗಿ, ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗಾಗಿ ಸರಕಾರದ ಹಣ ಅಥವಾ ಜನರ ತೆರಿಗೆಯ ಹಣವನ್ನು ಖರ್ಚು ಮಾಡ ಲಾಗಿದೆ. ಆದರೆ ಅಲ್ಲಿಯ ಅಧಿಕಾರಿಗಳು ಹೇಳುವಂತೆ, ಖರ್ಚು ಮಾಡಿದ ಹಣ ಈಗಾಗಲೇ ಹಿಂತಿರುಗಿ ಬಂದಿದೆ. ಒಂದು ವೇಳೆ ಅದನ್ನು ಒಪ್ಪದಿದ್ದರೂ, ಇಲ್ಲಿಯವರೆಗೆ ಒಂದು ಕೋಟಿ ಜನ ಇಲ್ಲಿ ಭೇಟಿ ನೀಡಿದ್ದಾರೆ ಎಂದಾದರೂ, ಪ್ರತಿಯೊಬ್ಬರು ಒಂದು ಸಾವಿರ ರುಪಾಯಿಯಷ್ಟೇ ಖರ್ಚು ಮಾಡಿದರೂ ಈಗಾಗಲೇ ಒಂದು ಸಾವಿರ ಕೋಟಿ ಹಣ ಹಿಂತಿರುಗಿದೆ. ಜತೆಗೆ ಒಂದಷ್ಟು ಉದ್ಯೋಗ ಸೃಷ್ಟಿಯಾಗಿದೆ. ಈಗ ಹೇಳಿ ದೇಶದ ಇತರ ಭಾಗಗಳಲ್ಲಿರುವ, ಬೀದಿಬದಿಯಲ್ಲಿರುವ ಪ್ರತಿಮೆಗೆ, ವೃತ್ತದಲ್ಲಿರುವ ಮೂರ್ತಿಗೆ, ಸರಕಾರ ಕೋಟಿ ಅಲ್ಲದಿದ್ದರೂ, ಲಕ್ಷಗಟ್ಟಲೆ ರುಪಾಯಿ ಸುರಿಯುತ್ತದೆ, ಅದರಿಂದ ಒಂದು ರುಪಾಯಿಯಾದರೂ ಸರಕಾರದ ಬೊಕ್ಕಸಕ್ಕೆ ಹಿಂತಿರುಗಿ ಬಂದಿದೆಯೇ? ಏನು ಗೊತ್ತೇ, ಯಾವುದೋ ಒಂದು ಮೂಲೆಯಲ್ಲಿರುವ ಸಣ್ಣ ಹಳ್ಳಿಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಅಥವಾ ಇನ್ಯಾವುದೋ ಶಿಕ್ಷಣ ಸಂಸ್ಥೆಯನ್ನು ನಿರ್ಮಾಣ ಮಾಡಿದ್ದರೆ ಒಂದು ಹಂತದವರೆಗೆ ಮಾತ್ರ ಉದ್ಯೋಗ ಸೃಷ್ಟಿ ಯಾಗುತಿತ್ತು.

ಒಂದು ಕಾಲೇಜಿನಿಂದ ಅಥವಾ ಒಂದು ಯೂನಿವರ್ಸಿಟಿಯಿಂದ ಖಂಡಿತವಾಗಿಯೂ ಹದಿನೈದು ಸಾವಿರ ಉದ್ಯೋಗ ಸೃಷ್ಟಿಯಾಗದು. ಇನ್ನು ಆಸ್ಪತ್ರೆ ನಿರ್ಮಿಸುವುದಂತೂ ದೂರದ ಮಾತು. ಗುಜರಾತ್‌ನ ಪ್ರಮುಖ ನಗರವಾದ ಸೂರತ್‌ನಿಂದ ಸುಮಾರು ಎರಡೂವರೆ ಗಂಟೆ ಅಥವಾ ಬರೋಡದಿಂದ ಒಂದುವರೆ ಗಂಟೆ ಪ್ರಯಾಣ ಮಾಡಿ ತಲುಪಬೇಕಾದ ಜಾಗದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದರೆ ಯಾವ ರೋಗಿ ಅಲ್ಲಿ ಹೋಗಿ ಚಿಕಿತ್ಸೆ  ಪಡೆದಾನು? ಅಥವಾ ಅನಿವಾರ್ಯ ಪರಿಸ್ಥಿತಿಯಲ್ಲಿ ಇಂತಹ ಹಳ್ಳಿಯಲ್ಲಿ ನಿರ್ಮಾಣವಾದ ಆಸ್ಪತ್ರೆಗೆ ಹೋಗಲು ಸಾಧ್ಯವೇ? ಪ್ರತಿಯೊಬ್ಬರೂ  ಪಟ್ಟಣ ದಲ್ಲಿರುವ ಅಥವಾ ತಮಗೆ ಸಮೀಪದಲ್ಲಿರುವ ಆಸ್ಪತ್ರೆಗೆ ಹೋಗಲು ಬಯಸುತ್ತಾರೆ ವಿನಃ ಯಾವುದೋ ಮೂಲೆಯಲ್ಲಿರುವ ಆಸ್ಪತ್ರೆಗಲ್ಲ.

ಒಂದು ವೇಳೆ ಆಸ್ಪತ್ರೆ ನಿರ್ಮಿಸಿದರು ಕೂಡ ಇಷ್ಟೊಂದು ಉದ್ಯೋಗ ಸೃಷ್ಟಿಯಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಅದರಿಂದ ಎಷ್ಟು ಜನ ಸ್ಥಳೀಯರಿಗೆ, ಅದರಲ್ಲೂ ಆದಿವಾಸಿ ಜನರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಆಸ್ಪತ್ರೆಯಲ್ಲಿ ನೌಕರಿ ದೊರಕುತ್ತಿತ್ತು? ಸಿಕ್ಕಿದರೂ, ಯಾವ ರೀತಿಯ ಉದ್ಯೋಗ ದೊರಕು ತ್ತಿತ್ತು? ಧ್ರುವ್ ರಾಠಿಯಂತಹ ಅರೇ ಬೆಂದ ಯೂಟ್ಯೂಬರ್‌ಗಳೇ ಉತ್ತರಿಸಬೇಕು. ಅಲ್ಲದಿದ್ದರೆ ತಾವು ನೀಡಿದ ಮಾಹಿತಿ ತಪ್ಪಾಗಿದೆ ಎಂದಾದರೂ ಒಪ್ಪಿಕೊಳ್ಳಬೇಕು

ಇಂದಿನ ದಿನಗಳಲ್ಲಿ ಒಂದು ಪ್ರದೇಶಕ್ಕೆ ಜೀವಕಳೆ ತುಂಬಬೇಕು ಅಂದರೆ ಪ್ರವಾಸೋದ್ಯಮವನ್ನು ಬಿಟ್ಟು ಬೇರೆ ಯಾವ ಉದ್ಯಮದಿಂದಲೂ ಸಾಧ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದಂತಹ ಲಾಭದಾಯಕ ಉದ್ಯಮ ಇನ್ನೊಂದಿಲ್ಲ. ಶಿಕ್ಷಣ ಸಂಸ್ಥೆ ನಿರ್ಮಿಸಿದರೆ ಬರೀ ವಿದ್ಯಾರ್ಥಿಗಳು, ಕಲಿಸು ವವರು ಮಾತ್ರ ಅಲ್ಲಿ ಬರಲು ಸಾಧ್ಯ. ಆಸ್ಪತ್ರೆ ನಿರ್ಮಿಸಿದರೆ ರೋಗಿಗಳು ಮಾತ್ರ ಆ ಊರಿಗೆ ಬಂದಾರು. ಅದೇ ಪ್ರವಾಸಿ ತಾಣವನ್ನು ನಿರ್ಮಿಸಿದರೆ ಆರೋಗ್ಯವಂತರೆಲ್ಲರೂ ಬರುತ್ತಾರೆ. ಕೋವಿಡ್‌ನಂತರವಂತೂ ಹೆಚ್ಚು- ಕಮ್ಮಿ ಎಲ್ಲ ಪ್ರವಾಸಿ ತಾಣಗಳೂ ತುಂಬಿ ತುಳುಕುತ್ತಿವೆ.

ಜನರಲ್ಲಿ ಪ್ರವಾಸದ ಕುರಿತಾಗಿ ಅರಿವು ಹೆಚ್ಚಿದೆ. ಆದ್ದರಿಂದ ಒಂದು ಹಳ್ಳಿಯನ್ನು ಪುಟ್ಟ ಪಟ್ಟಣವಾಗಿ ಅಥವಾ ಪುಟ್ಟ ಪಟ್ಟಣವನ್ನು ನಗರವಾಗಿ ಮಾರ್ಪಾಡುಗೊಳಿಸಬೇಕಾದರೆ ಇಂತಹ ಯೋಜನೆಗಳು ಪ್ರಯೋಜನಕಾರಿಯಾಗುತ್ತವೆ. ಕೊನೆಯದಾಗಿ, ಮೂರ್ತಿಯನ್ನೇ ನಿಲ್ಲಿಸುವುದಾದರೂ ವಿಶೇಷ ವಾದಂತಹ,  ವೈಶಿಷ್ಟವಾದಂತಹ, ವಿಭಿನ್ನವಾದಂತಹ ಮೂರ್ತಿಯನ್ನು ನಿರ್ಮಾಣ ಮಾಡಿ, ಸುತ್ತಮುತ್ತಲಿನ ಪರಿಸರವನ್ನೂ ಅಭಿವೃದ್ಧಿಗೊಳಿಸಿದರೆ ಮಾತ್ರ ಪ್ರಯೋಜನವಿದೆ. ಸುಮ್ಮನೆ ಗಲ್ಲಿಗೊಂದು, ತಿರುವಿಗೊಂದು, ನಾಲ್ಕು ರಸ್ತೆ ಸೇರುವಲ್ಲಿ ಒಂದು, ಎಂದು ಪುಟ್ಟ ಮೂರ್ತಿಯನ್ನು ನಿರ್ಮಿಸಿದರೆ ಯಾವುದೇ ಪ್ರಯೋಜನವಿಲ್ಲ.

ಅದು ಹಕ್ಕಿಗಳಿಗೆ ಹಿಕ್ಕೆ ಹಾಕಲು ಒಂದು ತಾಣ ಮಾಡಿಕೊಟ್ಟಂತೆ. ನಮ್ಮಲ್ಲಿ ಸ್ಥಾಪನೆಯಾದ ನಂತರ ದಶಕಗಳೇ ಕಳೆದರೂ ಸುಣ್ಣ-ಬಣ್ಣ ಕಾಣದೆ, ಹಕ್ಕಿಯ ಹಿಕ್ಕೆಯನ್ನು ತೊಳೆಯದೆ, ವರ್ಷಕ್ಕೊಮ್ಮೆಯಾದರೂ ಅವರ ನೆನಪಿನಲ್ಲಿ ಒಂದು ಹೂಗುಚ್ಛವನ್ನೋ, ಮಾಲೆಯನ್ನೋ ಅರ್ಪಿಸದ, ಕೊನೆ ಪಕ್ಷ ಒಂದು ಉದ್ದಿನಕಡ್ಡಿಯನ್ನೂ ಹಚ್ಚದ, ಅಬ್ಬೇಪಾರಿ ಪ್ರತಿಮೆಗಳ ಸಂಖ್ಯೆ ಎಷ್ಟಿಲ್ಲ? ಹಾಗೆ ನಿರ್ಮಿಸಿ ಅದಕ್ಕೆ ಸಂದಬೇಕಾದ ಗೌರವವನ್ನು ಸಲ್ಲಿಸದೆ
ಅವಮಾನ ಮಾಡುವುದಕ್ಕಿಂತ, ಪ್ರತಿಮೆಯನ್ನು ಸ್ಥಾಪಿಸದಿರುವುದೇ ಒಳಿತು.