Friday, 20th September 2024

ಸೌದಿ ಅರೇಬಿಯಾ; ಮರುಭೂಮಿಯಿಂದ ಮಾಯಾನಗರಿಯೆಡೆಗೆ…

ವಿದೇಶವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಸೌದಿ ಅರೇಬಿಯಾ; ಮರುಭೂಮಿಯಿಂದ ಮಾಯಾನಗರಿಯೆಡೆಗೆ… ವ ರ್ಷದ ಆರಂಭದಲ್ಲಿ ಕರೋನಾ ಕೊಟ್ಟ ಆಘಾತಕ್ಕೆ ಲೋಕವೇ ಥರಗುಟ್ಟಿತ್ತು. ವಾರದಲ್ಲಿ ನಾಲ್ಕರಿಂದ ಐದು ದಿನ ಬಹ್ರೈನ್‌ನಿಂದ ಸೌದಿ ಅರೇಬಿಯಾಕ್ಕೆ ಕಾರ್ಯ ನಿಮಿತ್ತ ಹೋಗಿ ಬರುತ್ತಿದ್ದ ನನಗೆ ಕಳೆದ ಮಾರ್ಚ್ ತಿಂಗಳ ಮೊದಲ ವಾರದಿಂದಲೂ ಕ್ಯಾಲೆಂಡರಿನಲ್ಲಿ ಮಾತ್ರ ದಿನ ಮುಂದಕ್ಕೆ ಹೋಗುತ್ತಿತ್ತು, ಉಳಿದಂತೆ ವ್ಯವಹಾರಿಕ ವಾಗಿ, ಸಾಮಾಜಿಕವಾಗಿ ಎಲ್ಲವೂ ಸ್ತಬ್ಧವಾಗಿತ್ತು.

ನನ್ನಂತೆ ಬಹ್ರೈನ್‌ನಲ್ಲಿ ನೆಲೆಸಿ, ಸೌದಿ ಅರೇಬಿಯಾಕ್ಕೆ ಕೆಲಸಕ್ಕೆಂದು ಹೋಗುವವರ ಒಂದು ದೊಡ್ಡ ದಂಡೇ ಇದೆ. ಎಲ್ಲರದ್ದೂ ಇದೇ ಪಾಡು. ಕಾರಣ, ಸೌದಿ ಅರೇಬಿಯಾ ಮತ್ತು ಬಹ್ರೈನ್ ನಡುವೆ ಭೂಸಂಪರ್ಕ ಕಲ್ಪಿಸುವ ಕಿಂಗ್ ಫಹಾದ್ ಸೇತುವೆಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೋಗಲಿ, ವಾರಕ್ಕೊಮ್ಮೆ ಯೋ, ತಿಂಗಳಿಗೊಮ್ಮೆಯೋ ವಿಮಾನದಲ್ಲಾದರೂ ಹೋಗಿ ಬರೋಣವೆಂದರೆ ಸೌದಿ ಅರೇಬಿಯಾದ ಎಲ್ಲಾ ವಿಮಾನ ನಿಲ್ದಾಣಗಳೂ ಮುಚ್ಚಲ್ಪಟ್ಟಿದ್ದವು. ಈ ಅತಂತ್ರ ಸ್ಥಿತಿ ಇನ್ನೂ ಎಷ್ಟು ದಿನ ಮುಂದುವರಿಯುವುದೋ ಎಂದು ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಿರುವಾಗಲೇ ಮೊನ್ನೆ ಕೆಲವು ನಿರ್ಬಂಧಗಳೊಂದಿಗೆ ಸೇತುವೆಯನ್ನು ಸಂಚಾರಕ್ಕೆ ತೆರವುಗೊಳಿಸಲಾಯಿತು. ಬರೊಬ್ಬರಿ 200 ದಿನಗಳ ನಂತರ ನನ್ನ ರಥ ಸೇತುವೆ ದಾಟಿ ಸೌದಿ ಅರೇಬಿಯಾದ ಮಣ್ಣನ್ನು ಸ್ಪರ್ಶಿಸಿತು.

ದಾರಿಯುದ್ದಕ್ಕೂ ರಾಷ್ಟ್ರಧ್ವಜ, ಹಸಿರು ಮತ್ತು ಬಿಳಿ ಬಣ್ಣದ ಅಲಂಕಾರಿಕ ವಿದ್ಯುದ್ದೀಪಗಳು ಹಬ್ಬದ ವಾತಾವರಣ ಸೃಷ್ಟಿಸಿ ದ್ದವು. ಮಾಲ್‌ಗಳು, ದೊಡ್ಡ ಕಟ್ಟಡಗಳು ಶೃಂಗರಿಸಲ್ಪಟ್ಟಿದ್ದವು. ಕಡಲ ಕಿನಾರೆಯ ಅಲ್ಲಲ್ಲಿ ಸಂಭ್ರಮದ, ಸಡಗರದ ವಾತಾವರಣ. ಕಾರಣ ಸೆಪ್ಟೆಂಬರ್‌ 23ರಂದು ಆಚರಿಸಲ್ಪಡುವ Saudi National Day ಈ, ಸೌದಿ ಅರೇಬಿಯಾದ ರಾಷ್ಟ್ರೀಯ ದಿವಸ. ಸೌದಿ ಅರೇಬಿಯಾದಲ್ಲಿ ಸಡಗರದ ವಾತಾವರಣ ಏನಿದ್ದರೂ ಈದ್ – ಅಲ್ – ಫಿತ್ರ‍್‌ ಮತ್ತು ಈದ್ – ಅಲ್ – ಅಧಾ ಹಬ್ಬದ ಸಂದರ್ಭದಲ್ಲಿ ಮಾತ್ರ. ಸರಕಾರಿ ರಜೆಗಳೂ ಅಷ್ಟೇ, ವಾರಾಂತ್ಯವನ್ನು ಬಿಟ್ಟರೆ ಈ ಎರಡು ಹಬ್ಬಕ್ಕ ಮಾತ್ರ ಸೀಮಿತ. ಎರಡೂ ಹಬ್ಬಕ್ಕೆ ತಲಾ ಮೂರರಿಂದ ಐದು ದಿನ ರಜೆ ಬಿಟ್ಟರೆ ಜನವರಿ ಒಂದರಂದು ಹೊಸ ವರ್ಷಕ್ಕಾಗಲೀ, ಮೇ ಒಂದರಂದು ಕಾರ್ಮಿಕ ದಿನಕ್ಕಾಗಲೀ, ಪ್ರವಾದಿ ಮೊಹಮ್ಮದರ ಜನ್ಮದಿನಕ್ಕಾಗಲೀ ರಜೆ ಎಂಬುದಿಲ್ಲ. 2005ರಿಂದ ರಾಷ್ಟ್ರೀಯ ದಿನಕ್ಕೆ ಒಂದು ದಿನದ ರಜೆ ಘೋಷಿಸಲಾಯಿತು. 1932ರ ಸೆಪ್ಟೆೆಂಬರ್ 23ರಂದು ಅಂದಿನ ದೊರೆ ಅಬ್ದುಲ್ ಅಜೀಜ್ ಅಲ್ ಸೌದ್ ಆಡಳಿತ ನಡೆಸುತ್ತಿದ್ದ ಪ್ರದೇಶಕ್ಕೆ ತಮ್ಮ ಮನೆತನದ ಹೆಸರಿನಿಂದ ಸೌದಿ ಅರೇಬಿಯಾ ಎಂದು ಮರುನಾಮಕರಣ ಮಾಡಿದ್ದರು. 1902ರಲ್ಲಿ ರಶೀದಿ ಯವರ ಆಡಳಿತದಲ್ಲಿದ್ದ, ತಮ್ಮ ಪೂರ್ವಜರ ತವರೂರಾದ ರಿಯಾದ್ (ಸೌದಿ ಅರೇಬಿಯಾದ ರಾಜಧಾನಿ) ಪ್ರಾಂತ್ಯದಿಂದ ಆರಂಭಿಸಿ 1925ರ ವರೆಗೆ, ಅಲ್ ನಜ್‌ದ್‌ ಮತ್ತು ಅಲ್ ಹೆಜಾಜ್ ಆಳ್ವಿಕೆಯಲ್ಲಿದ್ದ ಪ್ರದೇಶಗಳನ್ನೂ ವಶಪಡಿಸಿಕೊಂಡರು.

1932ರವರೆಗೆ ಮೂರು ದಶಕಗಳ ಸತತ ಹೋರಾಟದಿಂದ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ, ಇಂದಿನ ಅಖಂಡ ಸೌದಿ ಅರೇಬಿಯಾ ವನ್ನು 1953ರವರೆಗೆ ಅತಿ ಹೆಚ್ಚು ವರ್ಷಗಳ ಕಾಲ ಆಳಿದ ದೊರೆಯ ಪೂರ್ಣ ನಾಮ ಅಬ್ದುಲ್ ಅಜಿಜ್ ಬಿನ್ ಅಬ್ದುಲ್ ರೆಹಮಾನ್ ಬಿನ್ ಫೈಸಲ್ ಬಿನ್ ತುರ್ಕಿ ಬಿನ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಸೌದ್. ಬಹ್ರೈನ್ ಮತ್ತು ಸೌದಿ ಅರೇಬಿಯಾದ ಅಂತಾರಾಷ್ಟ್ರೀಯ ಗಡಿ ದಾಟಿ ಸಾಗಿ ಬರುತ್ತಿದ್ದಂತೆ ಹಳೆಯ ನೆನಪಿನ ಬುತ್ತಿ ಬಿಚ್ಚಿಕೊಳ್ಳಲಾರಂಭಿಸಿತ್ತು. ಸೌದಿ ಅರೇಬಿಯಾ ನಾನು ಮೊದಲು ಕಂಡದ್ದಕ್ಕೂ, ಇಂದಿಗೂ ಎಷ್ಟೊಂದು ಬದಲಾಗಿದೆ. ಒಂದು ಕಾಲದಲ್ಲಿ ಸೌದಿ ಅರೇಬಿಯಾ ಎಂದರೆ ಮೂಗು ಮುರಿಯುತ್ತಿದ್ದವರೇ ಹೆಚ್ಚು. ಕಟ್ಟಾ ಮುಸ್ಲಿಂ ರಾಷ್ಟ್ರ, ಆಧುನಿಕ ತಂತ್ರಜ್ಞಾನದ ಕೊರತೆ, ಶರಿಯಾ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ, ಸ್ತ್ರೀಯರಿಗೆ ಲವ ಮಾತ್ರದ ಸ್ವಾತಂತ್ರ್ಯವೂ ಇಲ್ಲದ, ಭೌಗೋಳಿಕವಾಗಿ ನೀರಿಲ್ಲದ ರಣ ಮರುಭೂಮಿಯ, ಒಣ ಹವೆಯ, ಸುಡು ಬಿಸಿಲಿನ ದೇಶದಲ್ಲಿ ಜನರು ಹೇಗೆ ಬದುಕುತ್ತಾರೋ ಎಂದು ಜನ ಹುಬ್ಬೇರಿಸುತ್ತಿದ್ದರು.

ಆದರೆ ಸೌದಿ ಅರೇಬಿಯಾ ತನ್ನ ಮಣ್ಣಿನ ಘಮಲನ್ನು ಉಳಿಸಿ ಕೊಂಡೇ ಬದಲಾವಣೆಯ ಬೆಳಕು ಕಾಣಲು ಮೈ ಮುರಿದು ಎದ್ದು ನಿಂತದ್ದು ಒಂದು ವಿಸ್ಮಯವೇ ಸರಿ. ಸುಮಾರು 25 ವರ್ಷಗಳ ಹಿಂದೆ, ನಮ್ಮ ರಾಜ್ಯದಿಂದ ನೇರ ವಿಮಾನ ಸಂಪರ್ಕ ಇಲ್ಲದಿದ್ದ ಕಾರಣ ಮುಂಬೈನಿಂದ ಹೊರಟು ಸೌದಿ ಅರೇಬಿಯಾ ದ ಪೂರ್ವ ಭಾಗದಲ್ಲಿರುವ ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಿದ್ದೆ. ಆ ದಿನಗಳಲ್ಲಿ ನಮ್ಮ ಹುಬ್ಬಳ್ಳಿಯ ಬಸ್ ನಿಲ್ದಾಣವನ್ನು ಹೋಲುತ್ತಿದ್ದ ವಿಮಾನ ನಿಲ್ದಾಾಣ ಅದಾಗಿತ್ತು. ವಿಮಾನ ನಿಲ್ದಾಣದಿಂದ ಹೊರಡುವ ವಿಶಾಲ ರಸ್ತೆಗಳನ್ನು ಕಂಡು ಸಂತಸ ಪಟ್ಟರೂ ಅದು ಕ್ಷಣಿಕವಾಗಿತ್ತು. ವಿಶಾಲವಾದ ರಸ್ತೆಯಿಂದ ನಾನು ಉಳಿಯಬೇಕಾದ ಮನೆಯ ಕಡೆ ಕಾರು ತಿರುಗಿದಾಗ ರಸ್ತೆ ಕಿರಿದಾದುದಷ್ಟೇ ಅಲ್ಲ, ಹಳೆಯ ಕಟ್ಟಡಗಳು ಎದುರಾದವು.

ವಿದೇಶದ ಕನಸು ಹೊತ್ತು ಬಂದ ನನಗೆ, ನಾನು ಬಂದದ್ದು ಕೊಲ್ಲಿ ರಾಷ್ಟ್ರಗಳಲ್ಲೇ ಅತ್ಯಂತ ಹೆಚ್ಚು ತೈಲ ನಿಕ್ಷೇಪ ಹೊಂದಿದ ಸೌದಿ ಅರೇಬಿಯಾಕ್ಕಾ ಅಥವಾ ಚಂದ್ರಗುಪ್ತ ಮೌರ್ಯರ ಕಾಲದ ಬೀದಿಗಾ ಎಂಬ ಅನುಮಾನ ಉಂಟಾಗಿತ್ತು. ಅದೂ ಸಾಲದೆಂಬಂತೆ ಕಂಪನಿಯವರು ಕೆಲವು ದಿನಗಳ ನಂತರ ನನ್ನನ್ನು ಘನ ಘೋರ ಮರುಭೂಮಿಗೆ ತಳ್ಳಿದ್ದರು. ತೈಲದ ಬಾವಿ ತೋಡುವ ಯಂತ್ರಗಳ ಸಾಗಾಟಕ್ಕೆ ರಸ್ತೆ ನಿರ್ಮಿಸಿ ಕೊಡುವ ಕೆಲಸ ನಮ್ಮದಾಗಿತ್ತು. ಅಂದಿಗೆ, ಸೌದಿ ಅರೇಬಿಯಾದಲ್ಲಿ ಎಲ್ಲಿ ಅಗೆದರೂ ನೀರಿನ ಬದಲು ಪೆಟ್ರೋಲ್, ಡಿಸೆಲ್ ಹೊರ ಚಿಮ್ಮುತ್ತದೆ, ನಮ್ಮ ಜಮೀನಿನಲ್ಲಿ ಗಿಡ ನೆಟ್ಟಂತೆ ಅರಬರು ತಮ್ಮ ಜಮೀನಿನಲ್ಲಿ ತೈಲದ ಬಾವಿ ತೋಡುತ್ತಾರೆ, ಅದಕ್ಕೇ ಅವರೆಲ್ಲ ಶ್ರೀಮಂತರು ಎಂಬ ತಪ್ಪು ಕಲ್ಪನೆ ದೂರಾಗಿತ್ತು. ಅಂದಿನ ದಿನಮಾನದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ 35 ಹಲಾಲಾ (ನಮ್ಮಲ್ಲಿ ಪೈಸೆ ಇದ್ದಂತೆ) ಅಂದರೆ ಭಾರತದ ನಾಲ್ಕು ರುಪಾಯಿಗಳು.

ಒಂದು ಲೀಟರ್ ನೀರಿನ ಬಾಟಲಿಗೆ ಒಂದು ರಿಯಾಲ್ (ನಮ್ಮಲ್ಲಿ ರುಪಾಯಿ ಇದ್ದಂತೆ) ಅಂದರೆ ಭಾರತದ 12 ರುಪಾಯಿಗಳು (100 ಹಲಾಲಾಕ್ಕೆ ಒಂದು ರಿಯಾಲ್) ಅಂದರೆ ಪೆಟ್ರೋಲ್‌ಗಿಂತ ಕುಡಿಯುವ ನೀರು ದುಬಾರಿ! ಇಂದು ಪೆಟ್ರೋಲ್ ಮತ್ತು ನೀರು ಎರಡೂ ಸಮಾನವಾಗಿದ್ದು, ಲೀಟರ್ ಒಂದಕ್ಕೆ ಸುಮಾರು ಮೂವತ್ತೆರಡು ರುಪಾಯಿಯಷ್ಟಾಗಿದೆ. ಆದರೆ ಇಂದು ಮಹಾನಗರ ಗಳ ಹೆಚ್ಚಿನ ಪ್ರದೇಶಗಳಲ್ಲಿ ಕುಡಿಯುವ ನೀರು ಮನೆಯೊಳಗಿನ ನಳದಲ್ಲಿ ಹರಿಯುತ್ತಿದೆ. ಮೂಲಭೂತ ಸೌಕರ್ಯದ ಲೆಕ್ಕದಲ್ಲಿ ಇದು ಮಹತ್ತರವಾದ ಸಾಧನೆಯೇ. 1938ರಲ್ಲೇ ತೈಲ ನಿಕ್ಷೇಪ ದೊರೆತು, ಅಮೆರಿಕದ ಕೆಲವು ಕಂಪನಿಗಳು, ಜನರು ಸೌದಿ ಅರೇಬಿಯಾಕ್ಕೆ ಬಂದರೂ ದೇಶದಲ್ಲಿ ಬದಲಾವಣೆ ನಿಧಾನ ಗತಿಯಲ್ಲಿಯೇ ಸಾಗಿತ್ತು.

ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಸೌಲಭ್ಯವೇ ಇರಲಿಲ್ಲ. ಸಾಕಷ್ಟು ಸಾಮಾಜಿಕ ಆಕ್ರೋೋಶದ ನಡುವೆ 1955ರಲ್ಲಿ ಅಂದಿನ ರಾಜಕುಮಾರಿ ಎಫಾತ್ ಮೊದಲ ಖಾಸಗಿ ಶಾಲೆ ಆರಂಭಿಸಿ, ಐದು ವರ್ಷದ ನಂತರ ಹೆಣ್ಣು ಮಕ್ಕಳು ಸಾರ್ವಜನಿಕ ಶಿಕ್ಷಣ ಪಡೆಯುವುದಕ್ಕೆ ಕಾರಣಳಾದಳು. ಸಂಪ್ರದಾಯವಾದಿಗಳ ಪ್ರತಿಭಟನೆಯ ನಡುವೆ ಅಂದಿನ ದೊರೆ ಕಿಂಗ್ ಫೈಸಲ್, ಧರ್ಮ ಗ್ರಂಥ ಕುರಾನ್ ಪಠಣೆಗಷ್ಟೇ ಸೀಮಿತವಾಗಿ ದೂರದರ್ಶನ ಪ್ರಸಾರಕ್ಕೆ ಅನುಮೋದನೆ ನೀಡಿದ್ದರು. ದೇಶದ ಮೊದಲ ಉನ್ನತ ಶಿಕ್ಷಣ ಹೊಂದಿದ ವಿಶ್ವವಿದ್ಯಾಲಯ ಸ್ಥಾಪಿಸಲ್ಪಟ್ಟಿದ್ದು 1957ರಲ್ಲಿ. ನಾನು ಬಂದಾಗ ದೂರದರ್ಶನದಲ್ಲಿ ಮನರಂಜನೆಗೆ ಎಂದು ಇದ್ದದ್ದು ಫುಟ್ಬಾಲ್ ಮತ್ತು ರೆಸ್ಲಿಂಗ್‌ ಪಂದ್ಯಗಳು.

ವಾರಕ್ಕೊಂದು ಹಿಂದಿ ಚಲನಚಿತ್ರ ಪ್ರಸಾರ ಆಗುತ್ತಿತ್ತಾದರೂ, ಕಡಿಮೆ ಬಟ್ಟೆ ತೊಟ್ಟ ದೃಶ್ಯಗಳು, ಧಾರ್ಮಿಕ ದೃಶ್ಯಗಳು, ಹಾಡುಗಳನ್ನೆಲ್ಲ ಕತ್ತರಿಸಿ, ಎರಡೂವರೆ ಗಂಟೆಯ ಸಿನಿಮಾ ಒಂದು ಕಾಲು ಒಂದೂವರೆ ಗಂಟೆಗೇ ಮುಗಿದು ಹೋಗುತ್ತಿತ್ತು. ಎಷ್ಟೋ ಬಾರಿ ಸಿನಿಮಾ ಮುಗಿದರೂ ಕತೆ ಅರ್ಥವಾಗುತ್ತಿರಲಿಲ್ಲ. ಆ ದಿನಗಳಲ್ಲಿ ಮಹಿಳೆಯರು ಆಸ್ಪತ್ರೆಯಲ್ಲಿ ಮತ್ತು ಶಾಲೆ – ಕಾಲೇಜುಗಳಲ್ಲಿ, ವೈದ್ಯರು, ದಾದಿಯರು, ಶಿಕ್ಷಕರು, ಸ್ವಚ್ಛತಾ ಕೆಲಸಗಳನ್ನು ಬಿಟ್ಟು ಉಳಿದೆಡೆ, ಬೇರೆ ಕೆಲಸ ಮಾಡುವಂತಿರಲಿಲ್ಲ, ಕ್ರೀಡೆಗಳಲ್ಲಿ ಭಾಗವಹಿಸುವಂತಿರಲಿಲ್ಲ.

2016ರಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದ ಮಹಿಳೆಯೊಬ್ಬಳು ಬ್ರಾಜಿಲ್‌ನಲ್ಲಿ ನಡೆದ ಬೇಸಿಗೆಯ ಓಲಂಪಿಕ್ ಪಂದ್ಯದಲ್ಲಿ ಭಾಗವಹಿಸಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದಳು. ಇಂದು ಮಹಿಳೆಯರು ಎಂಜಿನಿಯರ್, ಡಾಕ್ಟರ್ ವೃತ್ತಿಯನ್ನೂ ಕೈಗೊಳ್ಳು ತ್ತಿದ್ದಾರೆ. ಸೌದಿ ಸ್ಟಾಕ್ ಎಕ್ಸ್ಚೇಂಜ್‌ನ ಅಧ್ಯಕ್ಷ ಸ್ಥಾನದಿಂದ ಹಿಡಿದು ರಾಯಭಾರಿಯವರೆಗಿನ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತದ್ದಾರೆ. ಒಂದು ಕಾಲದಲ್ಲಿ ವಿದೇಶೀ ಮಹಿಳೆಯರೂ ಸೇರಿದಂತೆ ಸ್ತ್ರೀಯರು ಬುಕಾರ್ ಧರಿಸುವುದು ಕಡ್ಡಾಯ ವಾಗಿತ್ತು. ಈಗ ಇದು ಸೌದಿ ಅರೇಬಿಯಾದ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿದ್ದು ವಿದೇಶೀ ಮಹಿಳೆಯರಿಗೆ ಕಡ್ಡಾಯವಾಗಿ ಉಳಿದಿಲ್ಲ. ಹಾಗಂತ ಅಸಭ್ಯ ವಸ್ತ್ರಧಾರಣೆಗೆ, ಅಸಹ್ಯಕರವಾದ ಅಲಂಕಾರಕ್ಕೆೆ ಈಗಲೂ ನಿರ್ಬಂಧ ವಿದೆ. ಮುಂಚೆ ಕೆಲಸಕ್ಕಾಗಿ ಬರುವವರನ್ನು ಹೊರತುಪಡಿಸಿದರೆ, ಹಜ್ ಮತ್ತು ಉಮ್ರಾದಂಥ ಧಾರ್ಮಿಕ ಯಾತ್ರೆ ಮತ್ತು ವ್ಯಾಪಾರಕ್ಕಾಗಿ ಬರುವವ ರಿಗೆ ಮಾತ್ರ ದೇಶದ ಒಳಗೆ ಬರಲು ಅವಕಾಶವಿತ್ತು. ಈಗ ಪ್ರವಾಸೋದ್ಯಮವನ್ನು ಬೆಳೆಸಲು ಸುಮಾರು 50 ದೇಶದ ಪ್ರಜೆಗಳಿಗೆ ಆನ್ ಲೈನ್ ವಿಸಾ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಸ್ಥಳೀಯರ ಸಹಾಯವಿಲ್ಲದೇ ಬಂಡವಾಳ ಹೂಡಿಕೆಗೆ, ಆಸ್ತಿ ಖರೀದಿಗೆ ಅವಕಾಶ ಒದಗಿಸಿ ಕೊಡಲಾಗಿದೆ.

ಇದರ ಬಹುತೇಕ ಶ್ರೇಯ ಸಲ್ಲಬೇಕಾದದ್ದು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ಗೆೆ. ‘ಆಧುನಿಕತೆಯೆಡೆಗೆ ನಮ್ಮ ದೇಶ ಗಮನ ಹರಿಸಬೇಕಾಗಿದೆ, ಇನ್ನು ಮುಂದೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳನ್ನೇ ಅವಲಂಬಿಸಿ ರಲು ಸಾಧ್ಯವಿಲ್ಲ’ ಎಂದು ಕರೆನೀಡಿ ಸಾಕಷ್ಟು ಪರ್ಯಾಯ ವ್ಯವಸ್ಥೆಗೆ ನಾಂದಿ ಹಾಡಿದವರು ಮೊಹಮ್ಮದ್. ವಿದೇಶಿ ಕಾರ್ಮಿಕರಿಗೆ, ಸ್ಥಳೀಯರಿಗೆ ಸ್ವಲ್ಪ ಭಾರವೆನಿಸಿ ದರೂ ದೇಶ ಒಳಿತನ್ನು ಲಕ್ಷ್ದದಲ್ಲಿಟ್ಟು ಕೊಂಡು ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು (VAT) ಜಾರಿಗೆ ತರಲಾಗಿದೆ. ಸ್ವತಃ ಸೇನಾ ಪಡೆಯ ಮುಖ್ಯಸ್ಥರಾದ ಅವರು ಯಾವ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೂ ಸೈ ಎಂದವರು. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ನಿಂತ ಅವರು, ಪಕ್ಕದ ಯೆಮನ್ ದೇಶ ದೊಂದಿಗೆ ಯುದ್ಧ ಮಾಡುವುದಕ್ಕಾಗಲೀ, ಕತಾರ್ ದೇಶವನ್ನು ಬಹಿಷ್ಕರಿಸುವುದಕ್ಕಾಗಲೀ ಹಿಂಜರಿದವರಲ್ಲ. ದೊರೆ ಸಲ್ಮಾನ್ ಮತ್ತು ಯುವರಾಜ ಮೊಹಮ್ಮದ್ ಅವರ ಛತ್ರದಡಿ ಸೌದಿ ಅರೇಬಿಯಾದ ಭವಿತವ್ಯದ ನೀಲನಕ್ಷೆ ‘ವಿಷನ್ 2030’ ಸಿದ್ಧಪಡಿಸಲಾಗಿದ್ದು, ಶಿಕ್ಷಣ, ತಂತ್ರಜ್ಞಾನ, ಮಹಿಳಾ ಸಬಲೀಕರಣವೂ ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಒಂದು ಕಾಲವಿತ್ತು, ಮಾಲ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಂಡಸರು ಮೊಣಕಾಲುದ್ದದ ಚಡ್ಡಿ ಧರಿಸಿ ಓಡಾಡುತ್ತಿದ್ದರೆ ಧರ್ಮಗುರು ಗಳು ಕಾಲಿಗೆ ಛಡಿ ಏಟು ಕೊಡುತ್ತಿದ್ದರು. ಗಂಡಸರು ತಲೆ ಕೂದಲು ಉದ್ದ ಬೆಳೆಸಿದರೆ ಕರೆದುಕೊಂಡು ಹೋಗಿ ಕ್ಷೌರ ಮಾಡಿಸು ತ್ತಿದ್ದರು.

ಗಂಡಸರು ಬಂಗಾರದ ಚೈನು, ಉಂಗುರ ಧರಿಸಿದ್ದು ಕಂಡರೆ ಆಕ್ಷೇಪಿಸಿ, ತೆಗೆಸುತ್ತಿದ್ದರು. ಜತೆಗೆ ದಂಡ ವಸೂಲಿ ಯೂ ಇತ್ತು ಬಿಡಿ. ಮನೆಯ ಮೇಲೆ ಡಿಶ್ ಅಂಟೇನಾ ಕಂಡರೆ ಎಲ್ಎನ್‌ಬಿಗೆ ಗುಂಡು ಹಾರಿಸುತ್ತಿದ್ದರು. ಇಂದು ಇವಕ್ಕೆಲ್ಲ ಕಡಿವಾಣ ಬಿದ್ದಿದೆ. ಧರ್ಮ ಗುರುಗಳ ಈ ಅಧಿಕಾರವನ್ನು ಈಗ ಪೊಲೀಸರಿಗೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಹಾಗಂತ ಪ್ರತಿಯೊಂದಕ್ಕೂ ಮಿತಿಯಿದೆ. ಮಿತಿ ಮೀರಿದರೆ ಶೀಕ್ಷೆಗೆ ಯಾವ ಕಡಿವಾಣವೂ ಇಲ್ಲ. ಮರಣದಂಡನೆಯಂಥ ಶಿಕ್ಷೆಗಳು ಈಗಲೂ ಇವೆ. ಪ್ರತಿ ವರ್ಷವೂ 150ಕ್ಕೂ ಹೆಚ್ಚು ಜನ ಗಲ್ಲು ಶಿಕ್ಷೆಗೆ ಗುರಿಯಾಗುತ್ತಾರೆ. ಅಷ್ಟು ಕಟ್ಟುನಿಟ್ಟಾದ ಕಾನೂನು ಇರುವುದರಿಂದಲೇ ಜನರಲ್ಲಿ ದೇಶದ ಕಾನೂನಿನ ವಿಷಯದಲ್ಲಿ ಗೌರವವೂ, ಭಯವೂ ಇದೆ. 1957ರಿಂದಲೂ ದೇಶದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡಲು ನಿಷೇಧವಿತ್ತು.

ಆರು ದಶಕಗಳ ನಂತರ 2017ರಲ್ಲಿ ಮಹಿಳೆಯರಿಗ ವಾಹನ ಚಲಾಯಿಸಲು ಪುನಃ ಪರವಾನಗಿ ನೀಡಲಾ ಯಿತು. ಮೂರೂವರೆ ದಶಕದ ನಂತರ ಚಿತ್ರಮಂದಿರಗಳನ್ನು ಪುನಃ ಆರಂಭಿಸಿ ಚಲನಚಿತ್ರ ಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಯಿತು. ಇಂದು ಪುರುಷರ ರೆಸ್ಲಿಂಗ್ ಜತೆಗೆ ಪೂರ್ಣ ಪ್ರಮಾಣದಲ್ಲಿ ಉಡುಗೆ ತೊಟ್ಟು ಮಹಿಳೆಯರ ರೆಸ್ಲಿಂಗ್ ಪಂದ್ಯಾಟಗಳು ನಡೆಯುತ್ತವೆ. ಜನಪ್ರಿಯ ಫುಟ್ಬಾಲ್ ಕ್ರೀಡೆಯೊಂದಿಗೆ, ಬಾಸ್ಕೆೆಟ್ ಬಾಲ್, ಅಥ್ಲೆಟಿಕ್ಸ್‌, ಕಾರ್ ರೇಸ್‌ಗಳು ನಡೆಯುತ್ತವೆ. ಸಾರ್ವಜನಿಕರಿಗಾಗಿ ಹೆಸರುವಾಸಿ ಅರೆಬಿಕ್ ಮತ್ತು ಪಾಶ್ಚಾತ್ಯ ತಾರೆಯರ ಸಂಗೀತ ಕಚೇರಿಗಳನ್ನು ಆಯೋಜಿಸಲಾಗುತ್ತಿದೆ. ಇಂದು ಸೌದಿ ಅರೇಬಿಯಾ ಅತ್ಯಂತ ತ್ವರಿತಗತಿಯಲ್ಲಿ ಬದಲಾಗುತ್ತಿದೆ. ಖಗೋಳ ಶಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ಹೊರತುಪಡಿಸಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಹೊಸತು ಏನಾದರೂ ಕಂಡರೆ ಅದು ಕೆಲವೇ ದಿನಗಳಲ್ಲಿ ಸೌದಿ ಅರೇಬಿಯಾ ತಲುಪುತ್ತದೆ. ಅದಿರನ್ನು ಆಮದು ಮಾಡಿಕೊಂಡರೂ, ತನಗೆ ಬೇಕಾದ ಕಬ್ಬಿಣವನ್ನು ತಯಾರಿಸಿಕೊಳ್ಳುವು ದಲ್ಲದೇ ನೆರೆಯ ದೇಶಗಳಿಗೆ ರಫ್ತು ಮಾಡುವ ಪ್ರಮಾಣದಲ್ಲಿ ಸ್ಟೀಲ್ ಪ್ಲಾಂಟ್‌ ಗಳು, ಸಿಮೆಂಟ್ ಉತ್ಪಾದನಾ ಘಟಕಗಳು ತಲೆಯೆತ್ತಿ ನಿಂತಿವೆ. ಪೆಟ್ರೋಲಿಯಂ ಉಪ ಉತ್ಪನ್ನಗಳಿಂದ ತಯಾರಿಸ ಬಹುದಾದ ಬಹುತೇಕ ವಸ್ತುಗಳನ್ನು ಇಂದು ಸೌದಿ ಅರೇಬಿಯಾ ತಯಾರಿಸಿಕೊಳ್ಳುತ್ತಿದೆ.

ವಾಹನಗಳು, ಕಂಪ್ಯೂೂಟರ್, ವೈದ್ಯಕೀಯ ಉಪಕರಣಗಳು ಇತ್ಯಾದಿ ನಿರ್ಮಾಣದ ಕಾರ್ಖಾನೆಗಳು ಇನ್ನೂ ಆಗಬೇಕಿದೆ ಯಾದರೂ, ಇವನ್ನೆಲ್ಲ ಕೊಂಡುಕೊಳ್ಳು ವುದರಲ್ಲಿ ಹಿಂದೆ ಬೀಳುತ್ತಿಲ್ಲ. ದೇಶದ ಜನಸಂಖ್ಯೆಗೆ ಬೇಕಾದ ಹಾಲು, ಮಜ್ಜಿಗೆ ಮುಂತಾದ ಹೈನು ಉತ್ಪನ್ನಗಳನ್ನು ತನಗಷ್ಟೇ ಅಲ್ಲದೆ, ಪಕ್ಕದ ಬಹ್ರೈನ್ ದೇಶದ ಅವಶ್ಯಕತೆಯ ಶೇಕಡಾ 90 ರಷ್ಟನ್ನು ಪೂರೈಸುತ್ತಿದೆ. ಅದಿರಲಿ, ವರ್ಷದಿಂದ ವರ್ಷಕ್ಕೆ ಕೃಷಿ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೃತಕ ಹವಾ ನಿಯಂತ್ರಿತ ಸ್ಥಳಗಳಲ್ಲಿ ಆಲೂಗಡ್ಡೆ, ಕೋಸು, ಪಾಲಕ್ ಸೊಪ್ಪುು, ದೊಣ್ಣ ಮೆಣಸು, ಟೊಮ್ಯಾಟೋ, ಸೌತೇಕಾಯಿ, ಕಲ್ಲಂಗಡಿಯಂಥ ಹಣ್ಣು ಮತ್ತು ತರಕಾರಿ ಬೆಳೆಯು ವವರ ಕೃಷಿಕ ವರ್ಗ ದಿನದಿಂದ ದಿನಕ್ಕೆ ವೃದ್ಧಿಿಸುತ್ತಿದೆ. ಜತೆಗೆ, ಕುಲದೇವರಂತಿರುವ ಖರ್ಜೂರ ವಂತೂ ಇದ್ದೇ ಇದೆಯಲ್ಲ! ಎಲ್ಲವೂ ಎಣಿಸಿದಂತೆ ನಡೆದರೆ, ಯುವರಾಜ ಮೊಹಮ್ಮದ್ ಬಿನ್ ಸುಲ್ತಾನ್ ಅಲ್ ಸೌದ್ರ ಕನಸಾದ, 26,500 ಚದರ ಕಿಲೋ ಮೀಟರ್ ವಿಸ್ತೀರ್ಣದ ನಿಯೊಮ್ (NEOM) ಎಂಬ ಮಾಯಾ ನಗರಿಯ ಮೊದಲ ಹಂತ 2025ರ ವೇಳೆಗೆ ನಿರ್ಮಾಣಗೊಳ್ಳಲಿದೆ.

ಅಮೆರಿಕದ ನ್ಯೂ ಯಾರ್ಕ್ ಶಹರಕ್ಕಿಂತ ಸುಮಾರು 30 ಪಟ್ಟು ದೊಡ್ಡದಾದ, 500 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಸ್ಮಾರ್ಟ್ ಸಿಟಿಯಲ್ಲಿ ಮಾನವರಿಗಿಂತ ಹೆಚ್ಚು ರೊಬೋಟ್‌ಗಳು ಇರಲಿವೆ. ದೇಶದ ವಾಯುವ್ಯ ಭಾಗದಲ್ಲಿ ಜೊರ್ಡಾನ್ ಗಡಿಗೆ ಹೊಂದಿಕೊಂಡು ಸೌದಿ ಅರೇಬಿಯಾ ಮತ್ತು ಈಜಿಪ್ತ್‌ ನಡುವೆ ಇರುವ ಕೆಂಪು ಸಮುದ್ರದ ತೀರದಲ್ಲಿ ಸುಮಾರು ಐವತ್ತು ದ್ವೀಪಗಳೂ ಸೇರಿದಂತೆ 460 ಕಿಲೋಮೀಟರ್ ಉದ್ದಕ್ಕೆ ಪ್ರವಾಸಿ ತಾಣವಾಗಿ ಮೈದಳೆದು ನಿಲ್ಲಲಿದೆ. ಈ ಯೋಜನೆಯನ್ನು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ (Renewable energy) ಮೂಲಗಳಿಂದ ನಡೆಸಲು ಚಿಂತಿಸಲಾಗಿದೆ. ಸೌದಿ ಅರೇಬಿಯಾದ ಉಳಿದೆಡೆಗಿಂತ ವಿಭಿನ್ನವಾದ ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 2500 ಮೀಟರ್ ಎತ್ತರದ ಪರ್ವತಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ಸಮುದ್ರದ ತಂಗಾಳಿ ಮತ್ತು ಚಳಿಗಾಲದಲ್ಲಿ ಹಿಮಪಾತವನ್ನು ಕಾಣ ಬಹುದಾದ ಸ್ಥಳ ಇದಾಗಿದೆ.

ಜಲ ಕ್ರೀಡೆ ಮತ್ತು ಜಲ ಮನರಂಜನೆಯ ಕಾರ್ಯಕ್ರಮಗಳಿಗೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ. ‘ಹೊಸ ಭವಿಷ್ಯ’ (New Future) ಎಂದು ಅರ್ಥ ಕೊಡುವ ನಿಯೋಮ್‌ನಲ್ಲಿ ಸ್ವಯಂ ಚಾಲಿತ ಕಾರುಗಳು, ಹಾರುವ ಕಾರುಗಳು, ಡೈನೊಸೋರ್ ರೋಬೋಟ್‌ಗಳೊಂದಿಗೆ ಕೃತಕ ಚಂದ್ರನನ್ನೂ ಕಾಣಬಹುದಾಗಿದೆ. ಆಫ್ರಿಕಾ, ಯುರೋಪ್ ಮತ್ತು ಏಷ್ಯಾ ಖಂಡದ ಕೇಂದ್ರವಾಗಿರುವ ಈ ನಗರಿಗೆ ಪ್ರಪಂಚದ 70 ಪ್ರತಿಶತ ಭಾಗದಿಂದ ಪ್ರಯಾಣದ ಸಮಯ ಎಂಟು ಗಂಟೆಗಿಂತಲೂ ಕಮ್ಮಿ ಎಂದರೆ ಆಶ್ಚರ್ಯ ಪಡಬೇಡಿ. ನೀರು, ಆಹಾರ, ಮಾಧ್ಯಮ, ಮನರಂಜನೆಯೊಂದಿಗೆ ಬಯೋಟೆಕ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಡಿಜಿಟಲ್ ಟೆಕ್ನಾಲಜಿಗೆ ಇಲ್ಲಿ ಹೆಚ್ಚಿನ ಅವಕಾಶ ಒದಗಿಸಿ ಕೊಡಲಾಗಿದೆ. ಈ ಯೋಜನೆ ಒಮ್ಮೆ ಕಾರ್ಯ ನಿರ್ವಹಿಸಲು ಆರಂಭಿಸಿ ತೆಂದರೆ ಮಾಯಾನಗರಿಯಂತೆ ಕಾಣುವುದರಲ್ಲಿ ಎರಡು ಮಾತಿಲ್ಲ. ಬದಲಾವಣೆ ಜಗದ ನಿಯಮ, ಸೌದಿ ಅರೇಬಿಯವೂ ಅದಕ್ಕೆ ಹೊರತಲ್ಲ